ಕವನ ಪವನ/ ದೀಪಜ್ವಾಲೆ – ವಿನತೆ ಶರ್ಮ
ದೀಪಜ್ವಾಲೆ
ದೀಪ ಉರಿಯುತ್ತಿದೆ.
ಯಾರು ಹಚ್ಚಿದ್ದೋ ತಿಳಿಯೆ, ಹೇಳಿ ಹಚ್ಚಿಸಿದ್ದಂತೂ ಗೊತ್ತಿದೆ
ನಾನೇ ದೀಪ ಹಚ್ಚಿದ ದಿನವಲ್ಲವಿದು. ಎಲ್ಲವೂ ಮಂಕಾಗಿದೆಯೇಕೊ.
ಹಸುವಿನ ತುಪ್ಪದ ಘಮವಿಲ್ಲದ, ಅಂಕುಡೊಂಕಿಲ್ಲದ
ಜ್ವಾಲೆಯ ದಿಟ್ಟಿಸುತ ಕೂತಿದ್ದಾರೆ ನನ್ನವರು ನಿಧಾನವಾಗಿ,
ಎಂದಿನ ಅವಸರ ಕಾಣುತ್ತಿಲ್ಲವಿಂದು
ಕೋಣೆಯೊಳಗೆ ನುಸುಳುವ ಮಕ್ಕಳು ಅವರತ್ತ
ಕದ್ದು ಇಣುಕುವರು, ಅಜ್ಜನ ಮೌನ ಅಣಕಿಸುತಿದೆ ಅವರನ್ನು
ಮೂಲೆಯಲಿ ನನ್ನ ತಂಬೂರಿ. ಮತ್ತೊಂದು ಮೌನವಿದೆಯಲ್ಲಿ.
ನೆಲಕ್ಕೆ ಕಣ್ಣನಂಟಿಸಿ ತಂಬೂರಿ ಮೀಟುತ್ತಾ ಹಾಡಿದ ಹುಡುಗಿ ನಾನು,
ಮೌನ ಮುರಿದ ಕನ್ಯೆ ಅವರ ತುಂಬಿದ ಮನೆಯ ವಧುವಾದೆ,
ಗೃಹಸ್ಥೆ ಪಟ್ಟಕ್ಕೆ ಕುಂಕುಮ ಅರಿಶಿನ ಹೂ ಸ್ವಲ್ಪ ಹೆಚ್ಛೇ ಹಚ್ಚಿದೆ
ಬೀಗುತ್ತ ಅವರೂ ಗೃಹಸ್ಥರಾದರು.
ಭಯಭಕ್ತಿಯಿಂದ ಬೆಳ್ಳಂಬೆಳಗ್ಗೆ ನಾನು ರಂಗೋಲಿಯಿಡುವಾಗ
ರಗ್ಗಿನಡಿ ಮೈಚಾಚಿ ಒಂದಷ್ಟು ಹೆಚ್ಚು ವಿರಮಿಸುವರು.
ಬಚ್ಚಲು ಮನೆಯ ಒಲೆ ಹಚ್ಚಿ, ಅಡುಗೆಮನೆಯಲಿ
ಅಗ್ನಿದೇವ ಜ್ವಲಿಸಿದಾಗ ಬಿಸಿಕಾಫಿಗಾಗಿ ಕನವರಿಸುತ್ತಾ
ಏಳುವರು, ಕಾಫಿ ಜೊತೆ ಇನ್ನಷ್ಟು ವಿರಮಿಸುವರು ನನ್ನವರು
ಅಂಗಳದ ಸೂರ್ಯರಶ್ಮಿಯಲಿ ನಾನು ಅಕ್ಕಿಯಾಡಿಸುವಾಗ
ಉಪಹಾರ ಚಪ್ಪರಿಕೆಯ ಜೊತೆ ಕುರ್ಚಿಯಲಿ
ಮೈಚೆಲ್ಲಿ ಅವರು ಬಲು ಮಾತುಗಳ ಚೆಲ್ಲುವರು.
ದಿನಪತ್ರಿಕೆ ಓದುತ್ತಾ ದೇಶಕೋಶಗಳ ಚಿಂತೆ ಮಾಡುವ
ನನ್ನವರು, ಅಯ್ಯೋ ಅದ್ಯಾವುದೂ ನಿನ್ನ ಬಾಧಿಸುವುದಿಲ್ಲವೇ! ಅನ್ನುವರು
ಅಕ್ಕಿಯನ್ನು ಅನ್ನ ಮಾಡಲು ಹೊರಡುವ ತವಕದ ಅಬಾಧಿತೆ ನಾನು.
ಲಕಲಕ ಹೊಳೆಯುವ ಗರಿಗರಿ ಸಮವಸ್ತ್ರವ ಸಿದ್ಧವಾಗಿಡು,
ಎನುತ ಮೈಮುರಿಯುತ ಕಾರ್ಖಾನೆಗೆ ತೆರಳಲು ಸಜ್ಜಾಗುವರು
ಮನೆಯನು ಮನಸನು ಶುಭ್ರವಾಗಿಸಿ ಸಿದ್ಧಮಾಡುವಾಕೆ ನಾನು.
ಅರವತ್ತು ತುಂಬಿ ಹಾರ ಹಾಕಿಸಿಕೊಂಡು ದಿನವಿಡೀ ಪತ್ರಿಕೆ ಓದಿ
ಬಾಧಿತರಾಗಲು ಹರ್ಷಿಸುತ ಬಂದವರು
ಅಂಗಳದಲಿ ನಿಂತು ಕೇಳಿದರು, ಪಿಂಚಣಿಗೇನು ಮಾಡುತ್ತೀಯೇ?
ಪತಿ ಚರಣವಲ್ಲವೆ ನನ್ನ ಪಿಂಚಣಿ, ಎಂದಾಕೆಯ ದನಿ ನಡುಗಿತ್ತು
ಅವರ ಗಹಗಹಸುವಿಕೆಯ ಭರ್ರನೆ ಗಾಳಿ, ನನ್ನ ರಂಗೋಲಿ ಚೆದುರಿತ್ತು.
ಕುಂಕುಮ ಅರಿಶಿನ ಹೂ ಒಣಗಿದ್ದು ಕಂಡಿತ್ತು.
ದೀಪಜ್ವಾಲೆಯ ಆಚೆಕಡೆ ಕೂತಿದೆ ಮೌನವೇ ತಾನಾಗಿದ್ದ ತಂಬೂರಿ,
ನಾಚುತ್ತ ಹಾಡಿದ್ದ ಮುಗುದೆಯ ಪಟ. ಇಂದವರು ಸುಮ್ಮನಿರುವರು.
ಇಣುಕುವ ಮೊಮ್ಮಕ್ಕಳಿಂದ ಮುಖ ಮಾಚುವರು. ಸರಕ್ಕನೆ.
ವಿನತೆ ಶರ್ಮ
(ಆಸ್ಟ್ರೇಲಿಯಾ)
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.