ಕವನ ಪವನ / ಗ್ರಹಣ ಯಾರಿಗೆ? ವೈ.ಕೆ. ಸಂಧ್ಯಾ ಶರ್ಮ
ಗ್ರಹಣ ಯಾರಿಗೆ?
ಜಗತ್ತಿನ ಜೀವರಾಶಿಯ ಕಿರಣ
ತಮಸ್ಸು ತೊಡೆಯುವ
ಜ್ಞಾನ ಸಂಪೂರ್ಣ
ಜಡ ಜೀವಿಗಳ ಚೇತನ
ಮುನಿಸಿಕೊಂಡರೆ ಜಗ ಸ್ತಬ್ಧ
ಕ್ರಮಿಸಲಾರದ ದೂರ
ಮುಟ್ಟಲಾಗದ ಮಾಯೆ
ಸುಡುಕೆಂಡ-ಕೆಂಡಾಮಂಡಲ
ಅಗ್ನಿ ದಿವ್ಯದ ಸಾಕ್ಷಾತ್ಕಾರ
ಸೂರ್ಯನಂಥಾ ಸೂರ್ಯನಿಗೆ
ನೆರಳ ಹೊದಿಕೆಯ ಅಣಕು
ಅವನಿಗಡ್ಡ ನಿಲುವುದು
ಎಂಟೆದೆಯ ಪ್ರಶ್ನೆ
ಗ್ರಹಣದ ಲೋಕನಂಬಿಕೆ
ಬೇರು ಪಾತಾಳದಾಳ
ಬೆಳಕ ಮುಷ್ಠಿಯಲ್ಹಿಡಿದು
ಕಾರ್ಗತ್ತಲ ಬಿತ್ತಿ
ಬೆಂಕಿಗೆ ಛತ್ರಿ ಹಿಡಿಯುವ
ಕ್ರೂರ ಗ್ರಹಣದ ಮೈಲಿಗೆ
ದೇವರಿಗೆ ತಟ್ಟದಿರಲೆಂದು
ವಿಜ್ಞಾನ ಯುಗದ ಜನರು
ಮಂದಾಸನದಿ ಮಡಿಯಲಿ
ಕೃಷ್ಣಾಜಿನದ ಸಂಪುಟದೊಳಗೆ
ಸೆರೆಯಿಟ್ಟ ಆ ಪವಿತ್ರಾತ್ಮನ
ವಿಗ್ರಹಗಳ ಉಜ್ಜುಜ್ಜಿ
ಶುಭ್ರ ತೊಳೆದು
ಹಸನುಗೊಳಿಸಿ
ಗ್ರಹಚಾರ ನಿವಾರಣೆಯ
ದರ್ಭೆಯಿರಿಸಿ
ನಿರ್ಲಿಂಪ ದೋಷಾತೀತನ
ದೋಷ ಪರಿಹಾರಕೆತ್ನಿಸುವ
ಈ ಮೌಢ್ಯ ಮನಸುಗಳ
ಕಿಲುಬುಗಟ್ಟಿದ ಜಡತೆಯ
ಉಜ್ಜುಜ್ಜಿ ತೊಳೆಯುವವರಾರು?
ವೈ.ಕೆ. ಸಂಧ್ಯಾ ಶರ್ಮ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.