ಕವನ ಪವನ/ ಗುರುತು ಕೇಳಿತು ಕವನ: ಬಾನು ಮುಷ್ತಾಕ್
ಗುರುತು ಕೇಳಿತು ಕವನ
ಕತ್ತಲು ಗವ್ವೆಂದಾಗ ನರಭಕ್ಷಕ
ಹುಲಿಯ ಅಡ್ಡಾದಿಡ್ಡಿ ಬೆಳೆದ
ಪಟ್ಟೆಗಳು ಮಿಂಚುತ್ತವೆ ಹಸಿ ರಕ್ತದ
ಬನಿ ವಾಸನೆಯಿಂದ. ಆಗ
ಡೋಲು ಬಡಿಯಿತೊಂದು ಕವನ
ಹುಲಿ ತಿಂದು ತೇಗಿದ್ದ ಸೂರ್ಯನ
ಕಿರಣವನ್ನು ಬಿಡುಗಡೆ ಮಾಡಿದ
ಎದೆಯ ಹಣತೆಯ ಬೆಳಕ ನೀಡಿ
ಮುಳ್ಳಿನ ಕಿರೀಟವ ತೊಟ್ಟವನ ಕಂಡು
ಹೊಸದಾರಿಗಳ ಹುಡುಕಾಟ ಎಂದಿತು ಕವನ
ಸತ್ಯದ ದೊಂದಿಯ ಬತ್ತಿಯೊಂದಿಗೆ ಎಣ್ಣೆ ಇತ್ತು.
ಹೊತ್ತಿಸುವ ಹಿಡಿಯುವ ಹಸ್ತವಿರಲಿಲ್ಲ ಬರೆದರೆ
ಕೈ ಸುಡುತ್ತೆ ಇಲ್ಲದಿರೆ ಎದೆ ಕರಕಲಾಗುತ್ತೆ
ಎಂದರೂ ಪಟ್ಟು ಹಿಡಿದು ಹೊಸಬೆಳಕು ಎಂದಿತು ಕವನ
ಮಯನ ಅರಮನೆಯ ರಾಜಸಭೆಯಲ್ಲಿ
ಅರಗು ಉಳಿಯುವುದಿಲ್ಲವೆಂದ ಅವನು.
ಮೌನವನೊಡೆಯುವ ಗೈರತ್ತು ಯಾರಲ್ಲಿತ್ತು?
ಮೂರು ಕಾಲಿನ ಕುರ್ಚಿಯ
ಗುರುತು ಕೇಳಿತು ಕವನ
ತಾನೊಬ್ಬ ಸನ್ಯಾಸಿ ಎಂದು ಕಪಟ
ಕಣ್ಣೀರು ಹರಿಸಿದವನ ಬಗಲ
ಮಾಯಾ ಜೋಳಿಗೆಯ ತೆರೆದು
ಕದ್ದಮಾಲು ಹೊರಗಿಟ್ಟು
ಬೀರಿತೊಂದು ವಕ್ರನಗೆ ಕವನ
ತಾನು ಮಾರಾಟಗಾರ ಎಂದು ಹೇಳಿದ
ಚತುರ ಚಾಲಾಕಿ ನಮ್ಮೆಲ್ಲರ ಬೆಲೆ
ಕಟ್ಟಿದಾಗ ಅವನು ಮುರಿದ ತಕ್ಕಡಿಗಾಗಿ
ಅವನ ಹೆಡಮುರಿ ಕಟ್ಟಿದಾಗ
ಕಣ್ಣು ಹೊಡೆಯಿತೊಂದು ಕವನ.
ಬೂಟುಗಾಲಿನ ಗೋಡೆ ಮತ್ತು ಬಾಗಿಲಿನೊಳಗೆ
ನಿಂತ ಮುದಿಯನ ತೆವಲು ನೋಡು ಎಂದ
ನಿಮಿರು ನೋಡು ಪೊಗರು ನೋಡು
ಭೋಪರಾಕ್ಎಂದು ಅಡ್ಡ ಬೀಳುವವರ
ಕಂಡು ಕಿಸಕ್ಕೆಂದಿತು ಕವನ
ಅದನ್ನು ಹಿಡಿಯಿರಿ ಬಡಿಯಿರಿ
ಕೊಚ್ಚಿ ಕೊಲ್ಲಿರೋ
ಎಂದು ಆವೇಶ ತೋರಿದ
ಹಿಟ್ಲರ್ ಮಾತ್ರ ಮರ್ತ್ಯ
ಅಕ್ಷೋಹಿಣಿ ಅಕ್ಷೋಹಿಣಿ ಅಮರ್ತ್ಯ
ಸಾಲುಗಳಲಿ ತಲೆ ಎತ್ತಿ
ಬಾವುಟವ ಹಾರಿಸಿತು ಕವನ.
- ಬಾನು ಮುಷ್ತಾಕ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.