ಕವನ ಪವನ / ಕಾಲಗರ್ಭದ ನಡಿಗೆ – ಕಿರಸೂರ ಗಿರಿಯಪ್ಪ
ನಡಿಗೆ-೧
ಕಾಲಯಾನದ ಒರತೆಯಲಿ ಮೈಜಾಡಿಸಿ
ಬೆಟ್ಟದಂಚಿಗೆ ಸಿಲುಕಿದ ಬಿಸಿಲ ಬರೆಯೊಳಗೆ
ಕುರಿಹಿಕ್ಕೆಯ ಜೋಗುಳದೊಂದಿಗೆ ಸಾಗುವ ಹೆಜ್ಜೆಗಳು
ದನಕರುಗಳ ಕೂಗಿನೊಡನೆ ಮಿಳಿತಗೊಳ್ಳುವ ಕನಸುಗಳು
ಕಾದ ಬಂಡೆಗಳ ಒಡಲು ಬಳ್ಳಿಗಳಾಗಿ
ಬಯಲು ಅರಳಿಸುವ ತೊಂಡೆಹಣ್ಣಿನ ಗೊಂಚಲುಗಳು
ಕ್ವಾರಿ ಕಣಿವೆಯ ನವಿಲ ನಗುವಾಗಿ
ಮುಳ್ಳ ಮೌನದೊಂದಿಗೆ
ಸರೀಕರ ಬಾಯಿಯ ಧೂಪವಾಗಿ
ಹೊಗೆಯಾಡುವಳು ಕಾಮನಬಿಲ್ಲಿನ ಗರಿಯಂತೆ
ನಡಿಗೆ-೨
ಹಣ್ಣಾಗಿ ಮುದಿಗೊಂಡ ಅವಳ ನಡುಪಟ್ಟಿ
ಮರುಭೂಮಿಯ ನೆರಿಗೆಗಳಂತೆ..
ಅಲೆಮಾರಿಯ ಅಲೆಯೊಳಗೆ
ಹಸಿಗೊಂಡ ಎದೆಯ ಗಾಯಗಳ ಅದುಮಿ
ಹೊಕ್ಕಳ ತಳುಕಿನ ಬರೆಗಳ ಹೊತ್ತು
ಬಾಡಿ ಇಳಿ ಬಿದ್ದ ಗರಿಕೆಯಂತೆ
ಚಿಗುರು ಸಂತಾನದ ಬೇರುಗಳಾಗಿ
ಕರುಳ ಕಿಚ್ಚು ನಂದಿಸುವ ಓಯಸಿಸ್‍ನಂತೆ
ಲಾಠಿ ಬೂಟು ಬಂದೂಕಿನ ಮನಸುಗಳಿಗೆ ಹೂ ನಗೆಯ ಅಸ್ತ್ರವಾಗಿ
ವರ್ತಮಾನದ ಅಚ್ಚಾದಳು ಜೀವಜಲದ ಜಯಕಾರದ ಹೊಸ್ತಿಲಿಗೆ
ನಡಿಗೆ -೩
ಜಾಲಿಯ ಜಾಗದೊಳಗೆ ಕಪ್ಪುದೀಪದ ನದಿಯಾಗಿ
ವಸಂತದ ಅಮಲಿಗಾಗಿ
ಸುಲಿದು ಬಿದ್ದ ನೆನಪುಗಳ ಗೋರಿಗಳು
ಹೆಗಲ ರೆಕ್ಕೆಯ ಕುಣಿಸಿ ಮಣ್ಣ ರವಿಕೆ ತಣಿಸಿ
ಗೆದ್ದಲಗಳ ಅಂತಃಶಕ್ತಿ ಕುಗ್ಗಿಸಿ
ಮನಸು ಹದಗೊಳಿಸಿ ಮಮತೆ ತುಂಬುವಳು
ಕಾಲಗೆಜ್ಜೆಗಳಾಗಿ ಶತಮಾನಗಳ ನೆರಳುಗಳಂತೆ
ಬದುಕಿನ ನಡೆಯೊಳಗೆ ಸಾಗುವ ಕಾಲ ಧೂತನಿಗೆ ವಿಸ್ಮಯದ ಅಹವಾಲು…
ನಡಿಗೆ-೪
ಅವಳ ನೆತ್ತಿಯ ಕನಸ ಮಾಲೆಯಲಿ
ಜೋತುಬಿದ್ದ ರಾತ್ರಿ
ಅಸ್ಥಿಪಂಜರದ ಮಂಚೆಯ ಹುಡುಕಾಟ
ಮರಗಿನಲಿ ನೆಲಕ್ಕುರುಳುವ ನಕ್ಷತ್ರಗಳು
ನೆದರುಗೊಂಬೆಯ ಬೆರಗಿನಂತೆ ರೆಕ್ಕೆ ಕಿತ್ತ ಚಿಟ್ಟೆಯ ಹಾಗೆ
ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಾಪಪ್ರಜ್ಞೆಯೊಳಗೆ
ಮುದಿ ಎತ್ತಿನ ಗೊಣಗಾಟ…
ತಗಣಿಗಳ ತಿಕ್ಕಾಟ ಬಾವಲಿಗಳ ಹೊಯ್ದಾಟ
ಜೇಡನ ನಿಶ್ಶಬ್ದ ಜಾಡಿನೊಳಗೆ
ಹೊಗೆ ಜಂತಿಯ ಕಾವಿನಲಿ
ಒಲೆಮ್ಯಾಲೆ ಬೆಳಕು ಕುದಿಯುವ ಸದ್ದು
ಬಳೆ ಸದ್ದಿನ ರೊಟ್ಟಿ ಕಾಲ ಗರ್ಭದ ನಡಿಗೆಯಾಗಿ
ಸೆರಗ ಗಾಯಗಳ ಸೆಲೆಯಾಗಿದೆ
ಚಿಮಣಿಯ ಕಣ್ಣಳತೆಗೆ ನೇಯ್ಗೆ ತಿಂದ ನಾಡಿಗಳು
ಚಾಪೆಯ ಸುರುಳಿಯ ಒಳವುಗಳೊಳಗೆ ಬೆಸುಗೆಗೊಳ್ಳುವ ಕಾಲ.
– ಕಿರಸೂರ ಗಿರಿಯಪ್ಪ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.