ಕವನ ಪವನ/ ಕಾಯಕ – ಪ್ರತಿಭಾ ಕಲ್ಲಾಪುರ
ಕಾಯಕ
ಗುಡಿಸಬೇಕಿದೆ ಮನೆಯಂಗಳವ ಗುಡಿಸಬೇಕಿದೆ
ಅಂದವಾಗಿ ಬಿಡಿಸಿದ ರಂಗೋಲಿಯ ಕಳೆಗೆಡಿಸಿ
ಅನವರತ ಕೊಕ್ಕಿನಿಂದ ಕುಕ್ಕಿ ಕೆರೆದಾಡಿದ ಹಕ್ಕಿಗಳು
ಚೆಲ್ಲಾಡಿದ ಕಸಕಡ್ಡಿಯ ರಾಶಿಯನ್ನು ಗುಡಿಸಬೇಕಿದೆ
ಮನೆಯಂಗಳವ ಶುಭ್ರಗೊಳಿಸಬೇಕಿದೆ
ಮನೆಯ ಸೂರಿನ ಜಂತಿಯಲ್ಲಿ ಓಲಾಡುತ್ತ
ಬಲೆಯ ಹೆಣೆದು ಪಟ್ಟು ಬಿಡದೆ ಭದ್ರವಾಗಿ ತಳವೂರಿ
ಪಾರುಪತ್ಯ ನಡೆಸುವ ಜಾಡವ ಬುಡಸಮೇತ
ಕೀಳಬೇಕಿದೆ ಮಾಡಿನ ಮೂಲೆ ಮೂಲೆ
ಶುದ್ಧವಾಗಬೇಕಿದೆ
ಕದವ ತೆರೆಯೆ ಕಿರ್ ಗುಡುವ
ಮೊಂಡುತನದಿ ತೆರೆಯೆನೆನ್ನುವ
ಕಿಟಕಿ ಬಾಗಿಲದ ಕೀಲುಗಳನು
ಎಣ್ಣೆ ಹಾಕಿ ಸಡಿಲು ಮಾಡಿ ತುಕ್ಕು ಬಿಡಿಸಬೇಕಿದೆ
ಬಣ್ಣ ಹಾಕಿ ಒಪ್ಪು ಮಾಡಬೇಕಿದೆ
ಕಿಟಕಿ ಬಾಗಿಲುಗಳಿಗೆ ಜೀವ ತುಂಬಬೇಕಿದೆ
ಸುಟ್ಟು ಕರಕಲಾದ ಮನೆಯ ಒಲೆಯ
ಮಸಿಹಿಡಿದ ಪಾತ್ರೆ ಪರಡಿಯಲ್ಲಿ
ಬೆಂದ ಅನ್ನ ಅಪಥ್ಯವಾಗುವ ಮುನ್ನ
ಸಾರಿಸಿ ತಿಕ್ಕಿ ತೊಳೆದು ಓರಣವಾಗಿಸಬೇಕಿದೆ
ಅಡುಗೆ ಮನೆಯ ಪವಿತ್ರಗೊಳಿಸಬೇಕಿದೆ
ಗೊಂದಲದ ಗೂಡಾಗಿ ಗಿಜಿಗುಟ್ಟುವ ಮನಕೆ
ಮುದ ನೀಡುವ ಧ್ವನಿಗೆ ಕಿವಿಗೊಡಬೇಕಿದೆ
ಶರೀರದ ಕಣಕಣವು ಅದರ ನಾದದಲ್ಲಿ ಲೀನವಾಗಬೇಕಿದೆ
ನನ್ನಯ ದೇವರ ಮೆಚ್ಚಿಸಬೇಕಿದೆ
ನನ್ನ ಸ್ವಾರ್ಥವ ಸಾಧಿಸಬೇಕಿದೆ.
- ಪ್ರತಿಭಾ ಕಲ್ಲಾಪುರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.