ಕವನ ಪವನ / ಕಲ್ಲಿನಲೂ ಬೇರಿಳಿಸಿದವಳು – ಡಾ. ವಿದ್ಯಾ ಕುಂದರಗಿ

ಕಲ್ಲಿನಲೂ ಬೇರಿಳಿಸಿದವಳು

ಕಥೆಯ ಬರೆಯಲಾಗುತ್ತಿಲ್ಲ
ವ್ಯಥೆಯ ಬರೆಯಲಾಗುತ್ತಿಲ್ಲ
ಕವನವಾದವಳಿಗೆ
ಬಸವಳಿದ ಭಾವವಳಿದು
ಭ್ರಮನಿರಸನದ ಪ್ರಹಸನದಲ್ಲಿ

ಆಯದ ಮೂಲ ಹುಡುಕಿ
ಹುಲ್ಲನ್ನೇ ಮೇಯ್ದು
ದಾರಿಗುಂಟ ಕುದುರೆಯಾಗಬೇಕು
ಕೊತಕೊತನೆ ಕುದ್ದರೂ ಘಮಘಮಿಸಬೇಕು

ಬೆಂಕಿ ಬಿರುಗಾಳಿಗೂ
ಒಣಗಬಾರದು ಪ್ರಸನ್ನತೆ
ಇಲ್ಲವೆ ಮೂರು ದಿನಕ್ಕೊಮ್ಮೆ
ಸೋಡು ಕೇಳುವ ಸಾಂಗತ್ಯ

ಏನು? ಏನು ತಾಕತ್ತಿದೆಯೋ

ಆ ಕಷ್ಟಬೀಜ ಕುಲದವಳಿಗೆ
ಕಲ್ಲಲ್ಲೂ ಬೇರಿಳಿಸಿದವಳಿಗೆ
ಬರಬೇಸಿಗೆಯಲೂ ಚಿಗುರ ಬಲ್ಲವಳಿಗೆ

ಮಳೆ ಬೇಕಿಲ್ಲ ಅವಳಿಗೆ
ಮೊಳಕೆಯೊಡೆಯಲು
ಅಭಯಬೇಕಿಲ್ಲ ಅವಳಿಗೆ
ಕವಲೊಡೆಯಲು

ಕಡುಕಷ್ಟಗಳ ನುಂಗಿ
ತೆಗಳಿಕೆ ಅವಮಾನಗಳ ಹೀರಿ
ಪ್ರೀತಿ ಚಿಗುರಿಸುತ್ತಾಳೆ
ನಗುವಿನ ತೆರೆ ಉಕ್ಕಿಸುತ್ತಾಳೆ

ಆಗೊಮ್ಮೆ ಈಗೊಮ್ಮೆ
ಹೃದಯ ಬಿರುಕು ಬಿಟ್ಟಾಗ
ಕೆರಳಿ ಬಿರುಗಾಳಿಯಾಗುತ್ತಾಳೆ
ಚಿಮ್ಮಿ ಪ್ರಳಯವಾಗುತ್ತಾಳೆ.

ಡಾ. ವಿದ್ಯಾ ಕುಂದರಗಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *