ಕವನ ಪವನ / ಕಣ್ಣತುಂಬಿ ನಿಂತಾನ ಶ್ರಾವಣ – ಮಾಲತಿ ಪಟ್ಟಣಶೆಟ್ಟಿ

ಕಣ್ಣತುಂಬಿ ನಿಂತಾನ ಶ್ರಾವಣ

ಭೂಮಿಯ ತುಂಬಿ ನೀ ನಕ್ಕರ
ತುಂಬತಾವ ಕೆರಿಕಟ್ಟಿಗಕ್ಕರ;
ಹುಲ್ಲುಗರಿಕೆಗೆ ಗರಿ ನೆಲ ಸಿಕ್ಕರ
ಗುಡ್ಡದ ಎದಿತುಂಬ ರೋಮ,
ಹೊಲ ತುಂಬ ಕುಣಿತಾನ ನೋಡು ಕಾಮ;
ಎಲ್ಲೆಲ್ಯೂ ಹೊಳಿಹಳ್ಳಕೆಂಥ ಯವ್ವನ!
ಕೆರಿತುಂಬಿ ಕುಣೀತಾನ ಶ್ರಾವಣ;
ಇಲ್ಲಿ ಹೊಳೆ ನೀರಿಗೆ ಬಂದ ತರುಣಿ,
ಕುಡಿನೋಟದಾಗ, ತುಂಬುವಳು ಕನಸಿನ ಕೊಡ;
ಊರ ಓಣೀ ತುಂಬ ಹೋಳೀಗಿ ಘಮ ಘಮ,
ಕಟ್ಟೀನ ಸಾರೀಗೆ ಊರಾಗ ಅವ್ವಗಿಲ್ಲ ಸಮ;
ಇಗೋ ಬಾಗಲೀಗೆ ನಿಂತಾವ ಹಬ್ಬ,
ಓರಗಿತ್ತಿಯರು ಹಿಡಿದು ನಿಂತಂಗ ಬೆಳಕಿನಾರತಿ,
ಆದರ ನಿಲ್ಲುನಿಲ್ಲರೆವ್ವ ಇಲ್ಲಿ ಕೊರೋನಾ!!
ಚವತಿ, ದಸರೆ, ದೀಪಾವಳಿಗೇನು ಹೇಳೋಣ?
ಮಕ್ಕಳು, ಮರಿ ಹಿರಿಯರು ಊರಾಗ

ಹೋಗಿ ಬರ್ರೆವ್ವ ನಾಳಿಗೆ ನೋಡೋಣ…..

ಮಾಲತಿ ಪಟ್ಟಣಶೆಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *