ಕವನ ಪವನ / ಒಲೆಯಾರದಂತೆ ಕಾವಲಿರಿ – ಡಾ. ಪದ್ಮಿನಿ ನಾಗರಾಜು
ಒಲೆಯಾರದಂತೆ ಕಾವಲಿರಿ
ಮೂರು ಕಲ್ಲು
ಮೇಲೊಂದು ದೊಡ್ಡ ಹಂಡೆ
ಕಾಯಿಸಬೇಕಿದೆ ಎಸರು
ಒಲೆಗೆ ತುರುಕಲು
ಮರದ ತುಂಡುಗಳು ಬೇಕಿವೆ
ಕಾಡಹಾದಿ ನಾಡಹಾದಿ ಎಲ್ಲೆಂದರಲ್ಲಿ
ಚಂದದ ಅಂದದ ತುಂಡುಗಳು
ಕೈಗೆ ಸಲೀಸಾಗಿ ದಕ್ಕುತ್ತಿವೆ ಬಿಕ್ಕುತ್ತಿವೆ
ಕಡಿದು ತುಂಡರಸಿ
ಎಳೆದು ದಿಮ್ಮಿಗಳ ಒಲೆಗೆ ಹಾಕಿ
ಹಸಿ ಸಸಿಗಳೋ
ಬಲಿತ ತುಂಡುಗಳೋ
ಬಿಸಿಯಾಗಬೇಕು ನೀರು
ಹತ್ತಿಸಿದ್ದು ಉರಿಯಬೇಕು
ಅರೆಬೆಂದರೆ ದಾರಿಯಲಿ
ಕಂಡವರು ದಾರಿ ಕಾಣಿಸುವರು
ಇದ್ದಿಲುಗಳ ಒಟ್ಟು ಮಾಡಿ
ಅಯ್ಯೋ
ಹತ್ತುತ್ತಿಲ್ಲವೇ ಸೌದೆ
ಹಸಿಯಿರಬೇಕು
ಕಣ್ಣ ಮಳೆಯಲಿ
ನೆನೆದಿರಬೇಕು
ಸೀಮೆಯೆಣ್ಣೆಯ
ಕಾಲ ಮುಗಿದಿದೆ
ಪೆಟ್ರೋಲು ಸುರಿದು
ಬೆಂಕಿ ಹಾಕಿ
ಕಿಚ್ಚು ಧಗಧಗಿಸಲಿ
ಅಲ್ಲೊಂದು ಅರೆಬೆಂದ
ದಿಮ್ಮಿ ಮಿಸುಕುತ್ತಿದೆಯಾ
ಉಸಿರಿದೆಯಾ
ಎಚ್ಚರವಿರಲಿ
ಅರ್ಧಬೆಂದದ್ದು
ಸಾಕ್ಷಿಯಾಗಬಹುದು
ಸುಟ್ಟುಬಿಡಿ
ಉಸಿರು ನಿಲ್ಲುವತನಕ
ನೀರು ಕಾದಿದೆಯೇ
ಆಗಾಗ ಬೆರಳಾಡಿಸಿ
ಬೆಚ್ಚಗಿದ್ದರೆ ಮತ್ತಷ್ಟು
ದಿಮ್ಮಿಗಳ ತನ್ನಿ
ಮರಕೇನು ಸಾವೇ
ನಿತ್ಯ ದಕ್ಕುವ ಫಸಲು
ಮೂರು ಕಲ್ಲಿನ ಒಲೆಗೆ
ದಿನಕ್ಕೊಂದು ಹೊಸದಿಮ್ಮಿ
ಚಂದದ ಚಂದನವೋ
ಸಾಗುವಾನಿಯೋ ಬೇವೋ
ಮಾವೋ ಹಲಸೋ
ಬೀಟೆಯೋ ಚಿನಾರ್ ವೃಕ್ಷವೋ
ತುಂಡು ಯಾವುದಾದರೇನು
ಮನಸಿಜನ ಮೈಗೆ
ಹದವಾದ ನೀರು ಬೇಕು
ಒಲೆಯುರಿಯುತ್ತಲೇ ಇರಬೇಕು
ಬಿಸಿಯಾರದಂತೆ.
ಡಾ. ಪದ್ಮಿನಿ ನಾಗರಾಜು
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ನಿಮ್ಮ ಭಾಷಾಸಂಪತ್ತು ಹಾಗೂ ಯೋಚನಾ ಲಹರಿಯ ವಿಶೇಷತೆ ಸದಾ ನವೀನವಾದ್ದು ಗುರುಗಳೇ 🙏..
ವಂದನೆಗಳು. 💐
ಶಬ್ದಗಳ ರಚನೆ ವಾಚಿಸುವಾಗ ಒಂದು ಆದ್ರೆ ಅದರ ಭಾವನೆ ಹಲವು ….
ಒಲೆಯಾರದಂತೆ ಕಾವಲಿರಿ – ಮೇಲ್ನೋಟಕ್ಕೆ ಕವನ ಸರಳವಾಗಿ ಕಂಡರೂ ಬಹು ಸಂಕೀರ್ಣವಾಗಿದೆ. ಹಾಗಾಗಿ ಮತ್ತೊಮ್ಮೆ ಮಗದೊಮ್ಮೆ ಎಂದು ನಾಲ್ಕಾರು ಬಾರಿ ಓದಿದೆ. ಪೂರ್ತಿ ದಕ್ಕಲಿಲ್ಲ ಎನಿಸುತ್ತಿದೆ. ಒಲೆ, ಹಂಡೆಯಲ್ಲಿನ ನೀರು, ಕೊರಡು ಪ್ರತಿಮೆಗಳಾಗಿ ಹಲವು ಅರ್ಥಗಳನ್ನು ಹೊರಡಿಸಿ, ಅವರವರ ಭಾವಕ್ಕೆ ತಕ್ಕಂತೆ ದಕ್ಕಿಸಿಕೊಳ್ಳಬೇಕು ಅನಿಸುತ್ತದೆ. ಕವನ ಯಾವುದರ ಬಗ್ಗೆ ಮಾತಾಡುತ್ತಿದೆ…..ಮಹಿಳೆಯ ಶೋಷಣೆ, ಜಾತಿ, ವರ್ಗ, ವರ್ಣ ತಾರತಮ್ಯ ……ಎಲ್ಲಕ್ಕೂ ಸಲ್ಲುತ್ತದೆ ಎನಿಸುತ್ತದೆ. ತುಂಬಾ ಚೆನ್ನಾಗಿದೆ. ಚಿಂತಿಸುವ ಹಾಗೆ ಮಾಡುತ್ತದೆ. ಕವಯಿತ್ರಿಗೆ ಅಭಿನಂದನೆಗಳು….