ಕವನ ಪವನ/ ಒಂದು ದಿನ – ಅನು: ಭಾಗ್ಯ ಸಿ.ಎಚ್.
ಪ್ರವಾಸಿನಿ ಮಹಾಕೂಡ್ ಅವರ ಒರಿಯಾ ಕವಿತೆ
ಒಂದು ದಿನ
ಕೆಲದಿನಗಳು, ತಿಂಗಳುಗಳು, ವರ್ಷಗಳ ನಂತರ
ಒಂದು ದಿನ,
ನೀವು ಒಂದು ಹೆಣ್ಣಿನ ಅಸ್ಥಿಪಂಜರಕ್ಕೆ ಎದುರಾಗುತ್ತೀರಿ.
ಅವಳ ಭಾವನೆ ಏನಾಗಿರಬಹುದು
ಅವಳು ನಗುತ್ತಿರಬಹುದೆ, ಇಲ್ಲ, ಅಳುತ್ತಿರಬಹುದೆ
ಅವಳು ಉತ್ಕಟ ಭಾವದಿಂದ ಅನಂತವನ್ನು ನಿಟ್ಟಿಸುತ್ತಿರಬಹುದೆ-
ಅವಳು ಇನ್ನೊಬ್ಬರ ನಿರೀಕ್ಷೆಯಂತೆಯೇ ಇರಬಹುದೆ?
ಅದು ಅಳು ಅಥವಾ ತುಸು ನಗುವಿನಿಂದ ಕೂಡಿರಬಹುದೆ?
ಈ ಹಂತದಲ್ಲಿ
ಈ ಅಜ್ಞಾತಳ ಜೊತೆ ಅವಳ ಅಸ್ಮಿತೆಯ ಬಗ್ಗೆ ಮಾತುಕತೆ ಅಸಾಧ್ಯ.
ಆದರೆ,
ಗಂಭೀರವಾಗಿ ಪರಶೀಲಿಸಿದಾಗ
ಯಾರಿಗಾದರೂ
ಒಂದಾನೊಂದು ಕಾಲದಲ್ಲಿ ಈ ಗೂಡಿನಲ್ಲಿ
ಹಕ್ಕಿ ರೆಕ್ಕೆ ಬಡಿಯುತಿತ್ತೆಂಬುದು ತಿಳಿಯುತ್ತದೆ.
ಹಾಗೂ ಬೆಳಕಿನ ಕೊನೆಯ ತುಂಡು ಆತ್ಮವನ್ನು ಆಕಾಶಕ್ಕೆ ಒಯ್ದು ಹಾರಿರಬಹುದೂ ಎಂದು.
ಹೌದು,ಈ ಅಸ್ಥಿಪಂಜರಕ್ಕೆ ಮನಸ್ಸಿತ್ತು,
ಮನಸ್ಸಿದ್ದಾಗ ಅದು,
ಸಂತಸದಿಂದಿದ್ದಿರಬೇಕು:
ಅದಕ್ಕೆ ದುಃಖವೂ ಆಗಿರಬೇಕು,
ಅದು ಕವಿತೆಯನ್ನೂ ಬರೆದಿರಬೇಕು;
ಅದು ಹೀಗೆ ಏನೇನೋ ಮಾಡಿರಬೇಕು,
ಒಂದು ವೇಳೆ
ಅದಕ್ಕೆ ಮನಸ್ಸಿದ್ದರೆ.
ಹೌದು, ಈ ಅಸ್ಥಿಪಂಜರದೊಳಗೊಂದು
ಉತ್ಕಟ ಮೋಹವಿತ್ತು,
ಕೆಲ ಅಸ್ಥಿಗಳಿಂದ ಕವಿತೆಕೂಡಾ ತೊದಲುತ್ತಿತ್ತು.
ಈಗಲೂ, ಸಾವಿರಾರು ವರ್ಷಗಳ ನಂತರವೂ,
ಪ್ರೀತಿಯು ಇಡೀ ಅಸ್ಥಿಪಂಜರವನ್ನು ಬೆಳಗಿಸುತ್ತದೆ:
ಈ ಅಸ್ಥಿಗಳು ಮೃದು,
ತುಂಬಾ ಮೃದು.
ಬೆಂಕಿಯಿಂದ ಇದು ಹೇಗೆ ಪಾರಾಯಿತೆಂದು,
ನದಿಯ ಪ್ರವಾಹವು ಹೇಗೆ ಕೊಚ್ಚಿಕೊಂಡು ಹೋಗಲಿಲ್ಲವೆಂದು
ಯಾರಿಗಾದರೂ ಅಚ್ಚರಿಯಾಗುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ,
ಕಾಲನ ಭಯಂಕರ ಬಿರುಗಾಳಿಯು ಎತ್ತಿ ಕುಕ್ಕಿ
ಹೇಗೆ ಪುಡಿಪುಡಿ ಮಾಡಲಿಲ್ಲವೋ?
ದುಃಖವೂ ಇದರ ಮಜ್ಜೆಯನ್ನು ಕರಗಿಸಲಿಲ್ಲ.
ಯಾವುದೋ ಅದೃಶ್ಯ ಪ್ರೀತಿಗೆ ಸಿಲುಕಿ
ಇದು ಇಲ್ಲಿ ಬಿದ್ದಿದೆ.
ಇದರ ಚೈತನ್ಯದಲ್ಲಿ ಕರಾಳಶಕ್ತಿಗಳು ಬಂಧಿಯಾಗಿವೆ,
ಶೋಕವು ಇದರ ಪ್ರಜ್ಞೆಯನ್ನು ಕಂಗೆಡಿಸಿಲ್ಲ
ಯಾವ ಋತುಮಾನವೂ ಇದರ
ದಿವ್ಯ ತಾಟಸ್ಥ್ಯವನ್ನು ಕುಗ್ಗಿಸಿಲ್ಲ,
ರೋಗ,ಬಯಕೆ,ಕಾಮ: ಯಾವುದೂ
ಈ ಎಲುಬಿನ ಹಂದರವನ್ನು ನುಚ್ಚುನೂರು ಮಾಡಿಲ್ಲ.
ಕಳೆದ ರಾತ್ರಿಯಿಡೀ ಈ ಅಸ್ಥಿಪಂಜರವು
ನನ್ನೊಡನೆ ಕುಳಿತಿತ್ತು;
ಬೆಳಗಾದಾಗ ನನ್ನ ಹಾಸಿಗೆ
ಮಂಜುಗಡ್ಡೆಗಿಂತ ಥಣ್ಣಗಿತ್ತು.
ಈಗ,
ಈ ಅಸ್ಥಿಪಂಜರವು ನನ್ನೊಳಗಿಂದ ಚಿಮ್ಮಿತೋ
ನಾನು,ಇದರೊಳಗಿಂದ ಹುಟ್ಟಿದೆನೋ
ಹೇಳುವುದು ಕಷ್ಟ.
ಕನ್ನಡಕ್ಕೆ: ಸಿ.ಎಚ್.ಭಾಗ್ಯ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.