ಕವನ ಪವನ/ ಎರಡು ಕವಿತೆಗಳು – ಸೀಮಾ ಕುಲಕರ್ಣಿ

ಮಳಲು – ಮರುಳು

ಭಾವತೀರದಲ್ಲಿ ಅಂದು
ಮೂಡಿಸಿದ್ದೆ ಮುಗ್ಧ ಹೆಜ್ಜೆ
ತಿಳಿಯಲಿಲ್ಲ ದಂಡೆ ವಿಸ್ತಾರದ ಗುಂಟ
ಚಾಚಿದ್ದು ಮಳಲೇ ಮಳಲೆಂದು

ಅಳಿದರೂ ಆ ಹೆಜ್ಜೆ ಗುರುತು
ಅರಸಿದೆ ಅಸಂಖ್ಯ ಶಿಂಪುಗಳನು
ತಿಳಿಯಲಿಲ್ಲ ಬದಲಾದ ಪಾತ್ರ
ನದಿಯು ಸರಿದಿತ್ತಾಚೆ ಮಾತ್ರ

ಹಂಬಲದ ಸಮುದ್ರ ತೀರದಲ್ಲಿ
ಪ್ರೀತಿಯುಬ್ಬರದ ತೆರೆ ಬಯಸಿದ್ದೆ
ತಿಳಿಯಲಿಲ್ಲ ಇದು ತೆರೆಗಳೇಳದ ಸಾಗರವೆಂದು
ಕರೆಗಳಿಲ್ಲದ ಅಂಚಿನ ಮಳಲು ನಾ ಮರುಳು

***


ಹೊಸ ಬಾಗಿಲು

ಗೆಳೆಯ ಇರಬಹುದು ಈ ನಿನ್ನ ಮೌನ
ಕೈಗೆಟುಕದ ಅರ್ಥಾತೀತದ ಗಗನ

ಇನ್ನು ನನ್ನ ಮೌನದ ಕಾರಣ
ಮಾತಿನ ಗೂಢತೆಗಿಳಿಯದ ನಿನ್ನ ಮನ

ಬರೆಯುವೆ ಎಂದಾದರೊಂದು ದಿನ
ನನ್ನ ನಿನ್ನ ಮೌನದ ರಾಮಾಯಣ

ತೆಗೆದು ಬಿಡು ಈ ಮೌನದ ಮುಖವಾಡ
ಸಾಕು ನಾಟಕ ಪ್ರದರ್ಶನವಿನ್ನು ಬೇಡ

ಮಾತಿಲ್ಲದ ಬದುಕು ಅಪೂರ್ಣ
ಜೀವಿತವಿದ್ದರೂ ಮರಣ

ಇದೀಗ ಮುಕ್ತಳು ಈ ಅವಧಾರಣೆಯಿಂದ
ಕಾಲವೇ ಹೊಸ ಬಾಗಿಲು ತೆರೆದ ಕಾರಣ.

  • ಸೀಮಾ ಕುಲಕರ್ಣಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಕವನ ಪವನ/ ಎರಡು ಕವಿತೆಗಳು – ಸೀಮಾ ಕುಲಕರ್ಣಿ

  • May 31, 2020 at 9:46 am
    Permalink

    ಉತ್ತಮ ವೇದಿಕೆ, ಸಾಹಿತ್ಯಾಸಕ್ತರಿಗೆ ಒಳ್ಳೆಯ ಕತೆ, ಕವನಗಳನ್ನು ನೀಡುತ್ತಿದೆ

    Reply

Leave a Reply

Your email address will not be published. Required fields are marked *