ಕವನ ಪವನ / ಆಫ್ರಿಕದ ಅಜ್ಜಿಯರು… – ಅನು: ಶುಭದಾ ಎಚ್.ಎನ್.

ಬಂಟು ಭಾಷೆಯ ಕವಿ ನಗೋಡಿ ಅಡಿಚೆಯ ಕವನ

ಆಫ್ರಿಕದ ಅಜ್ಜಿಯರೆಂದರೆ ಲೆಕ್ಕಾಚಾರವರಿಯದ ಹೃದಯವಂತರು
ಮನೆಯ ಸೊಸೆ, ಮಗಳು ಬಸುರಾದರೆ ಬಡತನದಲ್ಲೇ ಹಿಗ್ಗಿ
ಹೂವಾಗುವರು, ಹೊಸಮಗುವಿನ ಕನಸ ಕಟ್ಟುವರು
ಬಸುರಿಗೆ ಕಾಡಹೂಗಳ ಕಿರೀಟತೆೊಡಿಸಿ, ಹಳದಿ ಲಂಗ ಉಡಿಸಿ
ಹೊಕ್ಕುಳಮೇಲೆ ಹಾಲೆರೆದು ನೆಂಟರ ಕರೆದು ಊಟಕ್ಕಿಡುವವರು
ಹೊಸಮಗುವಿನ ಸ್ವಾಗತಕ್ಕೆ ಹರೆಯದ ಹುಡುಗಿಯರಂತಾಡುವವರು

ಆಫ್ರಿಕದ ಅಜ್ಜಿಯರೆಂದರೆ ನಿಜಕ್ಕೂ ಗಟ್ಟಿಗಿತ್ತಿಯರು
ಹೆರಿಗೆಕೋಣೆಯ ಉಸ್ತುವಾರಿಗೆ ಹೇಳಿಮಾಡಿಸಿದಂತಹವರು
ನೋವಿನಿಂದ ತತ್ತರಿಸುತ್ತಿರುವ ಎಳೆಬಸುರಿಯರ ತಲೆಸವರಿ
ಕೈಹಿಡಿದು ಕ್ರಮವಾಗಿ ಉಸಿರೆಳಿದು ನೋವುಕೊಡಲು
ಹೇಳಿಕೊಡುವ ಸೂಲಗಿತ್ತಿಯರು, ಅಳದಿರು ಮಗಳೇ
ಇಗೋ, ಇನ್ನೇನು ಹೂಚೆಂಡಿನಂತಹ ಹಸುಮಗು ಹೊರಬರುವುದು
ನಿನ್ನೆಲ್ಲ ಶಕ್ತಿಬಿಟ್ಟು ಹೊರದೂಡು ನಿನ್ನ ಕಂದನನು ಎಂದೆನ್ನುವರು

ಆಫ್ರಿಕದ ಅಜ್ಜಿಯರು ಅನಕ್ಷರಸ್ಥರು, ಬದುಕೇ ಅವರ ಗುರು
ವೈದ್ಯಶಾಸ್ತ್ರ ಓದಿಲ್ಲ ನಿಜ, ಆದರವರು ಹೆತ್ತಿದ್ದಾರೆ ಹಲವು ಮಕ್ಕಳ
ಮೈಯಿಳಿದಿದೆ ಹಲವುಬಾರಿ, ಮಣ್ಣಿಗಿಟ್ಟಿದ್ದಾರೆ ಹಲವು ಕೂಸುಗಳ
ಕಂಡಿದ್ದಾರೆ ತಮ್ಮ ತಾಯಿ, ಅಕ್ಕ, ತಂಗಿಯರ ಬಸಿರ ಬವಣೆ
ರಕ್ತಸ್ತ್ರಾವ, ಗರ್ಭಪಾತ, ಹೆರಿಗೆ, ಸಾವು, ನೋವುಗಳನ್ನು
ಪಾರಂಪರಿಕ ತಿಳುವಳಿಕೆಯೇ ಅವರ ವಿದ್ಯೆ

ಆಫ್ರಿಕದ ಅಜ್ಜಿಯರೆಂದರೆ ಅನುಭವಿ ಕೈಗಳಿಂದ ಸುಸೂತ್ರವಾಗಿ
ಹೆರಿಗೆ ಮಾಡಿಸಿ, ಹೊಕ್ಕುಳುಬಳ್ಳಿ ಬೇರ್ಪಡಿಸಿ, ಹಸುಗೂಸನ್ನು
ಎಲೆಗಳಿಂದ ಸುತ್ತಿ,, ಜೇನು ನೆಕ್ಕಿಸಿ, ಸೂರ್ಯನನ್ನು ತೋರಿಸಿ
ಮಗುವಿನ ತಂದೆಯಿಂದ ಹಕ್ಕಿನ ಉಡುಗೊರೆ ಪಡೆವ ಹಿರಿಯರು
ಬಾಣಂತಿಗೆ ಹಾಲು ಹೆಚ್ಚಲು ತತ್ತಿಯ ಸಾರು ಮಾಡಿ ಉಣಿಸುವರು
ಹಸುಗೂಸಿಗೆ ದೃಷ್ಟಿ ತಾಗದಂತೆ ನೀಲಮಣಿಯ ಸರ ತೊಡಿಸುವರು
ಒಟ್ಟಿನಲ್ಲಿ ಅಜ್ಜಿಯರು ಮೊಮ್ಮಕ್ಕಳೊಡನಾಟದಲ್ಲಿ ಮತ್ತೊಮ್ಮೆ
ತಾವು ಕಳೆದುಕೊಂಡ ಬಾಲ್ಯಕ್ಕೆ ಜಾರುವರು ಹೊಸಮೋಹದಲಿ

ಆಫ್ರಿಕದ ಅಜ್ಜಿಯರು ಹೆಚ್ಚೇನೂ ಬಯಸುವುದಿಲ್ಲ,

ಮನೆತುಂಬಾ ಮೊಮ್ಮಕ್ಕಳನ್ನಷ್ಟೆ…
ಆಫ್ರಿಕದ ಅಜ್ಜಿಯರು ಕಪಟವರಿಯದ ದೇವತೆಯರು.

ಶುಭದಾ ಎಚ್.ಎನ್.


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *