ಕವನ ಪವನ/ ಆನ್ ಲೈನ್ ಕ್ಲಾಸಸ್- ಸಬೀಹಾ ಭೂಮಿಗೌಡ

ಆನ್ ಲೈನ್ ಕ್ಲಾಸಸ್ ಎಂದರೆ
ಬೆರಗೋ ಬೆರಗು.
ಎಲ್ಲ ಪರಿಮಿತಿಗಳ ಮೀರಿದ ಸಂಭ್ರಮ
ಪರ್ಯಾಯ ಹಾದಿಗಳ ದಕ್ಕಿಸಿಕೊಂಡ
ಗತ್ತು ದೌಲತ್ತುಗಳು
ಮಿನಿಟು ಸೆಕೆಂಡಿಗೂ ಬಂತು
ದಿಢೀರನೆ ಕಿಮ್ಮತ್ತು
ಧಡಬಡ ಮಾಡಿದರೇನಂತೆ
ನಾವೀಗ ಸಮಯವೀರರು!

ಆನ್ ಲೈನ್ ಕ್ಲಾಸಸ್ ಎಂದರೆ
ಇರ್ತಲೆ ಹಾವಂತೆ
ಆಟ, ಆರ್ಭಟ, ತುತ್ತೂರಿ, ಕಹಳೆ
ನಗಾರಿಗಳ ಭರಾಟೆ ಮೇಲಧಿಕಾರಿ ಮುಂದೆ
`ಅಯ್ಯೋ, ನಮ್ಮವರಿಗೆಲ್ಲ ಎಲ್ಲಿದೆ
ಕಂಪ್ಯೂಟರ್, ಲ್ಯಾಪ್ ಟಾಪು, ಸ್ಮಾರ್ಟ್ ಫೋನ್?
ಇದ್ದರೂ ಏನಂತೆ ಎಲ್ಲಿದೆ ಕರೆಂಟು?
ಗ್ರಾಮ ಕುಗ್ರಾಮಗಳ ಕುವರಿಯರಿಗೆ
ಎಲ್ಲಿಯ ಇಂಟರ್ನೆಟ್ ಪ್ಯಾಕೇಜು
ಬ್ರಾಡ್ ಬ್ಯಾಂಡ್ ಕನೆಕ್ಟಿವಿಟಿ?’
ಕೆಳೆಯರ ಮುಂದೆ ನೂರೆಂಟು ಗೋಳು.

ಆನ್ ಲೈನ್ ಕ್ಲಾಸಸ್ ಎಂದರೆ
ಅಧ್ಯಾಪಕರಿಗೂ ಹುರುಪು ವಿದ್ಯಾರ್ಥಿಗಳಂತೆ!
ಏನೋ ಹೊಸತನ, ತನ್ನ ತಾ
ಕಂಡುಕೊಳ್ಳುವ ತವಕ.
ಎಣ್ಣೆ ಮುಖವೇ? ಕೂದಲು ಸರಿಯಿದೆಯೇ?
ಈ ಸೀರೆ ಈ ಶರಟು ಸಾಕಲ್ಲ ಫೋಟೋಗೆ?
ದನಿಯ ಲಯ-ಗತಿಯ ಬಗೆಗೆ
ಮೊದಲ ಬಾರಿಗೆ ತಲೆಕೆಡಿಸಿಕೊಂಡು
ಗಂಟಲು ಸರಿ ಮಾಡಿದ್ದೇ ಮಾಡಿದ್ದು!
ಅರೆ ಇಷ್ಟು ಚೆನ್ನಾಗಿ ಇದ್ದಾರಾ
ನಮ್ಮ ಮೇಡಂ, ಮೇಸ್ಟ್ರು?
ದಿನಾ ಹೀಗೇ ಇವ್ರು ಬಂದಿದ್ರೆ
ಅಲ್ನೋಡು ಟೀಶರ್ಟಲ್ಲೇ ಇದ್ದಾರೆ
ಗಮನಿಸಲೇ ಇಲ್ಲವಲ್ಲಾ ಛೇ!

ಅರೆ ಅರೆ ಕ್ಲಾಸಲ್ಲೂ ಹೀಗೆ ಇವ್ರು
ಕ್ರಾಪು ತೀಡೋದು ಗಡ್ಡ ನೀವೋದು
ಓಕೆ ಓಕೆ ಅನ್ನೋದು ಎಲ್ಲ ಎಲ್ಲಾ ಹೀಗೇ!
ಅರೆ ಅರೆ ಏನೋ ಹೇಳಿದರಲ್ಲ
ವಿಷಯ ತಪ್ಪಿ ಹೋಯ್ತಲ್ಲ ಈಗೇನು ಗತಿ?
ಇಗೋ ಇಟ್ಟುಕೋ ಗುರುತಿಟ್ಟುಕೋ
ಮಾತು ಮುಗಿದಾಗ ಕೇಳೋಣವಂತೆ
ಕ್ಲಾಸಲ್ಲಿ ಆಗಿದ್ರೆ ಮರ್ಕಟನಂತೆ ಮನಸು
ಗದರಿ ದಾರಿಗೆ ತರ್ತಾ ಇದ್ರು ಈಗ?

ಆನ್ ಲೈನ್ ಕ್ಲಾಸಸ್ ಎಂದರೆ
ನಾಲ್ಕು ಗೋಡೆಗಳ ನೂಕಿ ಆಚೆ
ಕೈ ಎಟುಕಲ್ಲೇ ಪ್ರಪಂಚವ ಪಡೆದ
ಗತ್ತು ಗೈರತ್ತುಗಳು
ಹೊಸ ನೀರು ಬಂದು ಹಳೆ ನೀರು
ಕೊಚ್ಚಿ ಹೋದಂಥ ಪುಲಕ,ಸುಖ.

ಆನ್ ಲೈನ್ ಕ್ಲಾಸಸ್ ಎಂದರೆ
ಕನ್ನಡಿಯೊಳಗಿನ ಬಿಂಬದಂತೆ
ಸಂತೆಯೊಳಗೆ ನಿಂತ ಶಿಶುವಿನಂತೆ
ಹತ್ತಾರು ಕವಲುದಾರಿ ಮುಂದೆ ಕಂಗೆಟ್ಟ ಪಥಿಕನಂತೆ
ಅದು ಚೆನ್ನಾಗಿದೆ ಇದು ಹೇಗೆ?
ಅಗಗೋ ಆ ವಿಷಯ ಕೊಂಚ ನೋಡೋಣ
ಸಾಗರದಲಿ ಕೈಗೆತ್ತಿಕೊಳಲಿ ಏನನು?
ಬೇಕು ಅದಕೆ ಗುರಿ
ಅರಿವಿಗೇ ಬರದಂತೆ ಎಲ್ಲಿ ಕಳೆದುಹೋಯ್ತು.

ಆನ್ ಲೈನ್ ಕ್ಲಾಸಸ್ – ೨

ಆನ್ ಲೈನ್ ಕ್ಲಾಸಸ್ ಎಂದರೆ
ಉಟ್ಟವರಂತೆ ಪಟ್ಟೆಸೀರೆ
ಪ್ರತಿಷ್ಠೆ, ಅಭಿಮಾನ, ಗತ್ತು!
ಸಾದಾ ಸೀರೆ ಉಟ್ಟವರು
ಕಣ್ಣಿಗೇ ಬೀಳದ ನಿಕೃಷ್ಟರಂತೆ!

ಆನ್ ಲೈನ್ ಕ್ಲಾಸಸ್ ಎಂದರೆ
ಯೂ ಟೂಬ್ ನೋಡಿಕೊಂಡು
ಅಡುಗೆಗೆ ನಿಂತಂತೆ.
ಓದಲು ಸರಳಾತಿ ಸರಳ
ಎಲ್ಲವೂ ಮತಿಗೆ ದಕ್ಕಿದಂತೆ.
ಅಡುಗೆಗೆ ನಿಂತಾಗಲೇ ಅರಿವು
ಹತ್ತು ಹಲವು ಗೊಂದಲ ಗಡಿಬಿಡಿ!
ಮತ್ತೆ ಮತ್ತೆ ಕಾಪಿ ಹೊಡೆದು
ಉತ್ತರ ಬರೆದಂತೆ!

ಆನ್ ಲೈನ್ ಕ್ಲಾಸಸ್ ಎಂದರೆ
ಫಲಿತಾಂಶ ಬಗ್ಗೆ ಭಯವಿಲ್ಲ ಆದರೂ
ಪರೀಕ್ಷೆ ಹಾಲ್ ಗೆ ಹೋಗುವಾಗ
ಒಳಗೊಳಗೇ ಠಕಟುಳಿ
ನೂರಕ್ಕೆ ನೂರು ಬಂದೀತು
ಜೀವನಾಂಶವೂ ಸಿಕ್ಕೀತು
ಹೊಸ ಅಡುಗೆ ಹೊಸ ಉತ್ತರ ಎರಡೂ
ಸವಿವ ಪರೀಕ್ಷಕರ ಅವಲಂಬಿಸಿದ್ದು.

ಆನ್ ಲೈನ್ ಕ್ಲಾಸಸ್ ಎಂದರೆ
ಆಪತ್ಕಾಲದ ಬಂಧುವೇ ಹೊರತು
ನಿಕ್ಕಿಯಾದ ಗುರುವಿನಂತಲ್ಲ.
ಅಮ್ಮ ಅಕ್ಕಂದಿರ ಪಾಕ ಪರಿ ನೋಡಿ
ಮಾಡಹೋಗಿ ಅವರಿವರಿಂದ ಬೈಸಿಕೊಂಡು
ಚಿತ್ರ-ವಿಚಿತ್ರ ಆಕಾರ ರುಚಿ ಬಣ್ಣ
ಬಂದರೂ ಸರಿಯೇ ಪಾಕ ಕರಗತ
ಪ್ರಾಕ್ಟೀಸ್ ಮೇಕ್ಸ್ ಪರ್ಸನ್ ಪರ್ಫೆಕ್ಟ್
ಎಂದಿಗೂ ಎಂದೆಂದಿಗೂ.

  • ಸಬೀಹಾ ಭೂಮಿಗೌಡ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *