ಕವನ ಪವನ/ ಅವಳ ದೀಪಾವಳಿ- ಡಾ. ಪ್ರೀತಿ ಕೆ.ಎ.
ಅವಳ ದೀಪಾವಳಿ
ಅವಳು ಹಚ್ಚಿದ ಒಂದೊಂದು ಹಣತೆಯೂ
ಹೇಳುತ್ತಿದೆ ಒಂದೊಂದು ಕತೆಯ
ಕೇಳಲು ಕಿವಿಯಿದ್ದರಷ್ಟೇ ಸಾಲದು
ಬೇಕಿದೆ ಆರ್ದ್ರ ಮನಸೂ
ಅವನೊಡನೆ ಕೂಡಿ ಕಳೆದ
ಆ ಮೊದಲ ದೀಪಾವಳಿ
ಕಣ್ಣಲ್ಲಿ ಕೋಲ್ಮಿಂಚು
ಮೊಗ ಹೊಳೆದ ನಕ್ಷತ್ರ ಕಡ್ಡಿ
ಮನ ಆಕಾಶ ಬುಟ್ಟಿ
ಬಾನೆತ್ತರ ಚಿಮ್ಮಿದ ಹೂಕುಂಡ
ಸ್ವರ್ಗವೇ ಧರೆಗಿಳಿದಂತಿತ್ತು
ಅವನೊಲವ ಎಣ್ಣೆ
ಸ್ನೇಹದಾ ಬತ್ತಿಯ
ಒಡಲಲ್ಲಿಟ್ಟ ಪುಟ್ಟ ಹಣತೆ
ನಗುತಿತ್ತು ಸುತ್ತಲೂ ಬೆಳಕು ಚೆಲ್ಲಿ
ಕಾಲ ಸರಿದಂತೆಲ್ಲಾ
ಹೆಚ್ಚಿದ ದೀಪದ ಪ್ರಖರತೆ
ಅದರೆಡೆಗೆ ಧಾವಿಸಿ
ರೆಕ್ಕೆ ಮುರಿದು ಬಿದ್ದ ಪತಂಗ
ಭರವಸೆಯ ಠುಸ್ ಪಟಾಕಿ
ಕುಂಡದಿಂದ ಬೇರ್ಪಟ್ಟ ಹೂವು
ಸುಟ್ಟು ಬೂದಿಯಾದ ಪಕಳೆಗಳು
ಕನಸು ಧರಾಶಾಹಿ
ಬೆಳಕು ಇನ್ನೆಲ್ಲಿ
ಕಣ್ಣ ಮಳೆಗೆ ಆರಿ ಹೋದ
ಅವಳೆದೆಯ ದೀಪ
ಉರಿಯಲೇ ಇಲ್ಲ
ಮತ್ತೆ ಬಂದರೂ ದೀಪಾವಳಿ

ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.