FEATUREDಕವನ ಪವನಸಾಹಿತ್ಯ ಸಂಪದ

ಕವನ ಪವನ/ ಅವಳು ಹೇಳಲೇ ಇಲ್ಲ : ಅಮೃತಾ ಪ್ರೀತಂ

ಅವಳು ಹೇಳಲೇ ಇಲ್ಲ

ಅವನು ಹೇಳುತ್ತಿದ್ದ
ಅವಳು ಕೇಳುತ್ತಿದ್ದಳು
ಹೇಳುವ ಮತ್ತು ಕೇಳುವ
ಈ ಆಟ ನಡೆದೇ ಇತ್ತು.

ಆಟದಲ್ಲಿತ್ತು ಎರಡು ಚೀಟಿ
ಒಂದರಲ್ಲಿತ್ತು ‘ಹೇಳು’
ಇನ್ನೊಂದರಲ್ಲಿತ್ತು ‘ಕೇಳು’

ಈಗದು ಅವಳ ಅದೃಷ್ಟವೇ ಆಗಿಬಿಟ್ಟಿತ್ತು
ಅಥವಾ ಕೇವಲ ಯೋಗಾಯೋಗವೋ
ಅವಳಿಗೆ ಸಿಗುವ ಚೀಟಿಯಲ್ಲಿ
ಬರೆದಿರುತ್ತಿತ್ತು ಯಾವತ್ತೂ ‘ಕೇಳು’

ಅವಳು ಕೇಳುತ್ತಲೇ ಇದ್ದಳು
ಅವಳು ಕೇಳಿದ್ದು ಕೇವಲ ಅಪ್ಪಣೆ
ಅವಳು ಕೇಳಿದ್ದು ಬರೀ ಉಪದೇಶ
ಬಂಧನ ಅವಳ ಪಾಲಿಗಷ್ಟೇ ಇತ್ತು
ಅವಳಿಗಾಗಿಯೇ ಇದ್ದವು ನಿರ್ಬಂಧಗಳು

ಅವಳಿಗೂ ಗೊತ್ತಾಗುತ್ತಿತ್ತು
ಹೇಳುವುದು-ಕೇಳುವುದು
ಬರಿ ಕ್ರಿಯಾಪದಗಳಷ್ಟೇ ಅಲ್ಲ

ರಾಜ ಹೇಳಿದ-‘ವಿಷ ಕುಡಿ’
ಅವಳು ಮೀರಾ ಆದಳು
ಋಷಿ ಹೇಳಿದ -‘ಕಲ್ಲಾಗು’
ಅವಳು ಅಹಲ್ಯೆಯಾದಳು
ಪ್ರಭು ಶ್ರೀರಾಮ ಹೇಳಿದ-‘ಹೊರಟುಬಿಡು’
ಅವಳು ಸೀತೆಯಾದಳು
ಚಿತೆಯಿಂದ ಆರ್ತನಾದ ಹೊರಬಿತ್ತು
ಯಾರ ಕಿವಿಗೂ ಬಡಿಯಲಿಲ್ಲ
ಮೂರು ಬಾರಿ ತಲಾಕ್ ಹೇಳಿದರು
ಅವಳು ಪರಿತ್ಯಕ್ತೆಯಾದಳು

ಅವಳ ಮೊರೆಗೆ ಉಸಿರುಗಟ್ಟಿತ್ತು
ಶಬ್ದ ಸಿಕ್ಕಿಕೊಂಡಿತ್ತು
ತುಟಿ ಹೊಲಿದುಕೊಂಡಿತ್ತು
ಗಂಟಲು ಕಟ್ಟಿಬಂದಿತ್ತು

ಅವಳ ಕೈಗೆ ಎಂದೆಂದೂ ಸಿಗಲಿಲ್ಲ
‘ಹೇಳು’ ಎಂದು ಬರೆದಿಟ್ಟ ಚೀಟಿ.

ಹಿಂದಿ ಮೂಲ: ಅಮೃತಾ ಪ್ರೀತಂ
ಕನ್ನಡಕ್ಕೆ: ಡಾ.ಮಾಧವಿ.ಎಸ್.ಭಂಡಾರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *