ಕವನ ಪವನ / ಅವನಿಲ್ಲದ ರಾತ್ರಿಗಳಲ್ಲಿ – ಜಹಾನ್ ಆರಾ

ಎಂಟರ ದೀಪವ ನೋಯಿಸುತ್ತ
ಕತ್ತಲು ಕೋಣೆ ಹೊಕ್ಕಿ ಬರುತ್ತಿದೆ
ಬಯಲಗಲ ಮಂಚದ ಮೇಲೆ
ಹೊರಳಾಡಲು ಈಗ ವಿಸ್ತಾರ ಹೆಚ್ಚು

ನನ್ನ ಪಕ್ಷ ನಿನ್ನ ಪಕ್ಷ ಎಂದು
ನಿತ್ಯ ಕದನಕ್ಕೆ ಸೋಲುತ್ತಿದ್ದ ‘ಉಷಾ’
ಕೂಡ ಶರಣಾಗತಿ ಪಡೆದು
ನನ್ನ ಪಕ್ಷಕ್ಕೆ ನಿಂತಿದೆ

ನಿಜ ಹೇಳಬೇಕಾದರೆ
ಈಗ ಪದೇ ಪದೇ
ಬೆಡ್ ಶೀಟ್ ಬದಲಿಸುವ
ಗೊಡವೆ ಇಲ್ಲ

ಆಸೆಯಿಂದ ಬಿಗಿದಪ್ಪುಗೆಗೆ
ಪಾತ್ರವಾಗುತ್ತಿದ್ದ ‘ಟೆಡ್ಡಿ’ಗೋ
ವಿಜಯೋತ್ಸವದ ಸಂಭ್ರಮ

ಕನವರಿಕೆಯಲಿ ಮಾತಿಗೆ ನಿಂತಾಗ
ಗಲ್ಲದ ಮೇಲೆ ಸಿಹಿ ಪೆಟ್ಟು
ಈಗ ನಿತ್ಯ ಗೈರು

ಸ್ವಪ್ನದಲಿ ಕಾಡುವ ಹೆಡೆಯೆತ್ತಿದ ಹಾವಿಗೆ
ಪುಂಗಿ ಊದುವ ಕೆಲಸ ನಿಲ್ಲಿಸಿದ್ದೇನೆ
ಆದರೆ ಅದು ತಲೆಯಾಡಿಸೋದು ಬಿಟ್ಟಲ್ಲ

ಚಂದಿರನ ಮುಖದ ಮೇಲೆ
ಚಂದದ ಪರದೆ ಹಾಕಿದ್ದೇನೆ ಇಲ್ಲದಿದ್ದರೆ
ತಂಗಾಳಿಯಲ್ಲಿ ಸಂದೇಶ ಕಳುಹಿಸಲು
ಸಿದ್ದನಾಗಿ ಬಿಡುತ್ತಿದ್ದ ಪಾಪಿ ಖದೀಮ

ಇದ್ದ ಒಂದೇ ದಿಂಬಿಗೆ
ಮತ್ತೊಂದು ತಲೆಯ ನೆನಪಿನಲ್ಲಿ
ಆಗಾಗ ಒದ್ದೆಯಾಗುವುದು
ಅಭ್ಯಾಸವಾಗಿ ಹೋಗಿದೆ

ಹಾಸಿಗೆ ಮೇಲೆ ಮಲಗಿ
ನಿನ್ನ ಹಂಗೇಕೆಂದು ಹಂಗಿಸಿದರೂ
ನಿರಂತರ ಮಗ್ಗುಲು ಬದಲಾಯಿಸುತ್ತಿರುವುದು
ಸುಳ್ಳಲ್ಲ

ಈ ಹಾಳು ತಲೆ, ಹೊಟ್ಟೆ, ಕಾಲಿನ
ನೋವಿಗೆ ಮಾತ್ರ ಬುದ್ಧಿ ಬರದಂತಿದೆ
ಒತ್ತು ತಬ್ಬು ಚೂರು ಭಾರ ಹಾಕು
ಅಂತನೇ ಪೀಡಿಸುತಿರುತ್ತವೆ

ವ್ಯಥೆ ಪಡಬೇಡ ಎಲ್ಲರಿಗೂ
ಬುದ್ಧಿ ಹೇಳಿ ಮಲಗಿಸುತ್ತೇನೆ
ಆದರೆ ನನ್ನನ್ನು ಮಲಗಿಸಲು
ಒಮ್ಮೆ ಬಂದು ಬಿಡು

-ಜಹಾನ್ ಆರಾ, ಕುಷ್ಟಗಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *