ಕವನ ಪವನ / ಅಪ್ಪಾ! – ಅನು: ರೇಣುಕಾ ನಿಡಗುಂದಿ
ಅಪ್ಪಾ!
ಮೂಲ : ಸಂತಾಲಿ ಕವಯಿತ್ರಿ ನಿರ್ಮಲಾ ಪುತುಲ್
ನನ್ ನೋಡಬೇಕಂತ
ಮನ್ಯಾನ ಆಡುಕುರಿ ಮಾರಿಬಿಡುವಂಗ
ಭಾಳ ದೂರ
ಮದವೀ ಮಾಡಿಕೊಡಬ್ಯಾಡ ನನ್ನ
ಎಲ್ಲಿ ಮನಷ್ಯಾರಗಿಂತ
ದೇವರss ಹೆಚ್ಚದಾವೋ ಆ ದೇಶಕೂ
ಲಗ್ನಾ ಮಾಡಿಕೊಡಬ್ಯಾಡ
ಕಾಡು, ನದಿ, ಗುಡ್ಡ, ಬೆಟ್ಟ
ಇಲ್ಲದ ನಾಡಿಗೂ ನನ್ನ
ಮದವೀ ಮಾಡಿಕೊಡಬ್ಯಾಡ
ಎಲ್ಲೆ ರಸ್ತೆದಾಗ
ಮಾನಕ್ಕಿಂತ ಮೋಟರ್ ಗಾಡೀನ ಜೋರು ಓಡತಾವೋ
ಎತ್ತರೆತ್ತರ ಮನೀ, ದೊಡ್ಡ ದೊಡ್ ಅಂಗಡಿ ಅದಾವೋ
ಆ ಊರಿಗಂತೂ ಬಿಲ್ಕುಲ್ ಬ್ಯಾಡ.
ಯಾ ಮನ್ಯಾಗ ದೊಡ್ಡ ಅಂಗಳಿಲ್ಲಾ
ಕೋಳಿಕೂಗಿಗೆ ಬೆಳಕ ಹರಯಂಗಿಲ್ಲಾ
ಮತ್ ಸಂಜೀಕ ಹಿತ್ತಲಾಗ
ಗುಡ್ಡದ ಬೆನ್ನಿಂದ ಮುಳಗೂ ಸೂರ್ಯಾ ಕಾಣಸಂಗಿಲ್ಲಾ
ಅಂತಾ ಮನೀಗಂತೂ
ಯಾವ ನಂಟೂಬ್ಯಾಡ
ಯಾವಾಗಲೂ
ಶರಾಬಿನ ಬಟ್ಟಲಾಗ ಮುಳಗಿರೂ
ವರಾನ್ನ ಆರಿಸಬ್ಯಾಡಾ
ಜಾತ್ರ್ಯಾಗ ಹುಡಗ್ಯಾರನ ಹಾರಿಸ್ಕೊಂಡ ಹೋಗೂ
ಗಂವಾರ ಮೈಗಳ್ಳನ್ನೂ
ಆರಿಸ್ಬ್ಯಾಡಾ
ಚೊಲೋ ಇಲ್ಲ ಖೊಟ್ಟೇತಂತ
ಆಮ್ಯಾಲ ಬದಲಿಸಾಕ ಅದೇನು
ತಾಟು ಲೋಟಾ ಅಲ್ಲಲಾ .
ಮಾತ ಮಾತಿಗೆ
ಹೊಡಿ ಬಡಿ
ಬಿಲ್ಲು ಬಾಣ ಕೊಡಲಿ ಅನ್ನಾವ
ಚಿತ್ತ ಬಂದತ್ತ ಬಂಗಾಲ, ಕಾಶ್ಮೀರ, ಆಸ್ಸಾಮಿಗೆ ಹೊಂಟಬಿಡೂ
ವರಾ ನನಗ ಬ್ಯಾಡ
ಕೈಯಿಂದ ಭಾರವನ್ನೆಂದೂ ಹೊರದ
ನೊಂದವರ ಕೈ ಹಿಡಿದೆತ್ತದ
ಹೊಲದಾಗ ಒಂದ್ ಫಸಲೂ ಬಿತ್ತಿಲ್ಲದ
ಒಂದ ಗಿಡಾನೂ ನೆಟ್ಟಿಲ್ಲದ
ಕೈಯಾಗ
ನನ್ ಕೊಡಬ್ಯಾಡ
ಅದೂ ಹೋಗಲಿ
ಯಾವ ಕೈಗೆ ‘ಕ’ ದಿಂದ “ಕೈ” ಅಂತ ಬರಿಯಾಕ ಬರೂದಿಲ್ಲೋ
ಅಂತಾ ಕೈಗೆ ಎಂದೂ ನನ್ನ ಕೊಡಬ್ಯಾಡ
ನೀ ಮುಂಜಾನೆ ಹೋಗಿ
ಸಂಜೀಕ ನಡಕೊಂಡ ಬರೂವಂತಾ
ಕಡೆ ನನ್ ಲಗ್ನಾ ಮಾಡ್ಕೊಡಪ್ಪಾ
ನಾನ್ಯಾವತ್ತಾರ ನದಿದಂಡ್ಯಾಗ ಕುಂತು ದುಕ್ಕಿಸಿ ಅತ್ತರs
ನೀನದೇ ನದಿ ದಂಡ್ಯಾಗ ಜಳಕಾ ಮಾಡ್ತಿರ್ತಿ
ನನ್ ಅಳೂ ದನೀ ಕೇಳಿ ನೀ ಬರಬಲ್ಲೆ.
ನಿನಗಾಗಿ ಮಹುವಾದ ಮೇವಾ
ಖಜೂರಿನ ಬೆಲ್ಲ ಮಾಡಿ ಸುದ್ದಿ ಕಳಸಬಹುದು
ಆಕಡೆಗೆ ಬರುವವರಿಂದ
ಗೋಗಾನಿಗ ಕುಂಬಳ,ಅವರೆ ತರಹಾವರಿ ತರಕಾರಿ ಕಳಿಸಬಹುದು
ಜಾತ್ರಿಗೆ ಸಂತಿಗೆ ಹೋದಾಗ
ನನ್ನೂರವರು ಸಿಗುವಂತಿರಬೇಕು
ಮನೆ ಊರಿನ ಸುದ್ದಿ ಹೇಳೂವಂತಿರಬೇಕು
ಕಪಿಲೆ ಹಸು ಕರುಹಾಕಿದ ಸುದ್ದಿ
ಯಾರಾದ್ರೂ ಹಿಂಗಾಸಿ ಬಂದು
ಹೇಳಿ ಹೋಗುವ ಊರಿಗೆ ನನ್ನ
ಲಗ್ನಮಾಡಿಕೊಡು
ಎಲ್ಲಿ ದೇವರು ಕಡಿಮಿ ಮನಷ್ಯಾರು ಹೆಚ್ಚದಾರೋ ಆ ನಾಡಿಗೆ ಕೊಡು ನನ್ನ
ಎಲ್ಲಿ ಒಂದss ದಂಡ್ಯಾಗ ಆಡು ಮತ್ತ ಸಿಂಹ
ಕೂಡಿ ನೀರು ಕುಡಿತಾವೋ
ಆ ಊರಿಗೆ ಲಗ್ನ ಮಾಡಿಕೊಡು
ಯಾಂವ ಪಾರಿವಾಳ, ಜಕ್ಕವಕ್ಕಿ ಜೋಡಿಹಂಗ
ಒಳಹೊರಗ, ಹೊಲ ಗದ್ದೆ ಕೆಲಸದಿಂದ
ರಾತ್ರಿ ಆಸರಕಿ ಬ್ಯಾಸರಕೀ ಹಂಚ್ಕೊಳತಾ ಸದಾ
ನಂಜೊಡೀನ ಇರ್ತಾನೋ
ಅಂವಗs ಲಗ್ನ ಮಾಡಿಕೊಡು
ಸುಶ್ರಾವ್ಯವಾಗಿ ಕೊಳಲು ಬಾರಿಸಬಲ್ಲ
ಢೋಲು, ಮಂಜಿರಿ ನುಡಿಸೂದ್ರಾಗೂ
ಕುಶಲಗಾರ ವರನss ಹುಡುಕು..
ವಸಂತಮಾಸದಾಗ ದಿನಾ ನನ್ ತುರುಬಿಗೆ
ಪಲಾಶದ ಹೂ ತಂದು ಕೊಡಾಂವಗss
ನಾ ಹಸಗೊಂಡ್ರ
ಅಂವನ ಗಂಟಲಾಗ ಒಂದಗಳೂ
ಇಳಿಯದ ಹೆಂಗರುಳಿನಂವಗss
ನನ್ ಲಗ್ನಾಮಾಡಿಕೊಡು
ಅನು: ರೇಣುಕಾ ನಿಡಗುಂದಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.