ಕವನ ಪವನ/ ಹೌದೇನೇ ಕವಿತಾ ಹೌದೇನೇ?- ಆರ್. ಪೂರ್ಣಿಮಾ
ಹೌದೇನೇ ಕವಿತಾ ಹೌದೇನೇ?
ನಿನಗವರಂಜುವುದು ನಿಜವೇನೆ?
ನಿನ್ನ ಸಂಚಿಯಲ್ಲಿ ಇರುವುದೆಷ್ಟು
ನೂರಿನ್ನೂರು ಪದಗಳ ಪದಾತಿ ಸೇನೆ
ಅದಿಷ್ಟರಲ್ಲೆ ಹೆದರಿಸುತ್ತೀಯಂತೆ
ಅವರಂಥ ವೀರಾಧಿವೀರರನ್ನೆ!
ಏನೋ ಚೂರು ಚೂಪಾಗಿರಬಹುದು
ನಿನ್ನ ಕೈಯಲ್ಲಿರುವ ಚೂರಿಯ ಅಂಚು
ಅಷ್ಟಕ್ಕೆ ಬೆದರಿ ಬೆಚ್ಚುವರಂತೆ ಅವರು
ಕಂಡಂತೆ ಏನೋ ದೊಡ್ಡ ಸಂಚು?
ನಿನ್ನ ಆಟ ಗೊತ್ತಿದ್ದೇ ಹಾಕಿದ್ದಾರಂತೆ
ಅವರು ಆಕಾಶದ ಉದ್ದಗಲಕ್ಕೆ ಸಿಸಿಟಿವಿ
ಆದರೆ ನೀನೋ ಅದರ ಕಣ್ಣು ತಪ್ಪಿಸಿ
ಹೇಗೋ ಊದುವಿಯಂತೆ ಅವರಿವರ ಕಿವಿ?
ಅಲ್ಲವೇ ನೀನು ಹೀಗೆ ಬಳ್ಳಿಯಂತೆ
ಬಳುಕಿದರೂ ಅವರೆದೆಯಲ್ಲಿ ಏನೋ ಅಳುಕು
ನೀನು ಸಿಡಿಲಿನಂತೆ ಗುಡುಗದಿದ್ದರೂ
ಹುಟ್ಟುವುದೇಕಂತೆ ಅವರೆದೆಯಲ್ಲಿ ಛಳುಕು?
ನೀನು ಮಾತ್ರ ಹೀಗೆಯೇ ಇರು ಕವಿತಾ
ಇರಲಿ ಹೇಗಾದರೂ ಅವರೆಲ್ಲ ಅರಚುತ್ತ
ನೀನು ಹೀಗೆಯೇ ಮಾಡುತ್ತಿರು ಕವಿತಾ
ಅವರಂಥವರ ಮುಖಕ್ಕೆ ಕನ್ನಡಿ ಹಿಡಿಯುತ್ತ.
- ಆರ್. ಪೂರ್ಣಿಮಾ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.