ಕವನಪವನ/ ಅನಿಕೇತನದೆಡೆಗೆ ಪಯಣ – ಅನುಪಮಾ ಪ್ರಸಾದ್
ಹುಟ್ಟುವ ಮೊದಲೇ ಸಿದ್ಧವಾಗಿತ್ತು ಚೌಕಟ್ಟು
ಕೈಕಾಲು ಮುದುರಿ ಬೆನ್ನು ಬಾಗಿಸಿ
ಕುಳಿತುಕೊಳ್ಳುವುದೇ ಸಹಜಭಂಗಿ ಅಂದುಕೊಂಡಾಗ
ಸಂದುಗೊಂದುಗಳಲಿ ಪುಳುಪುಳು ನೋವು ನಿರಂತರ.
ಸಹಜವಾಗಿದ್ದರೆ ಅಂತ್ಯವಿಲ್ಲದ ಅಸಹ್ಯ ನೋವೇಕೆ…?
ಆಹ್! ಮರೆತೆ
ಅನ್ನುತ್ತೀರಿ ನೀವು
ಹೆರಿಗೆಯೆಂಬುದು ಸಹಜ
ನೋವಿಲ್ಲವೆ ಸಹಜ
ತಲೆದೂಗಿಸುತ್ತೀರಿ
ಅಹುದಹುದು!
ಔಚ್! ಮರೆತೆ ನೋಡಿ
ಕಟ್ಟಿದ ಮುಟ್ಟಿನ ಕೆಂಪು ಬುಳಕ್ಕನೆ ಇಳಿಯುವವರೆಗೂ ನೋವು
ಕೊನೆಯಲೊಂದು ಹಿತಾನುಭೂತಿ
ಸಹಜ ನೋವಿಗೆ ಸಹಜ ಕೊನೆ
ಪ್ರಶ್ನೆ ಅಸಹಜವೋ ನೋವು ಅಸಹಜವೋ
ಬಾಗಿದ ಬೆನ್ನು ಹುರಿ ಇನ್ನೇನು ಮುರಿಯುವ ಹೊತ್ತು
ಗೊಂದಲದ ಗೂಡೊಡೆದು
ಜೋಮು ಹಿಡಿದ ಕಾಲುಗಳು
ಟಕ್ಕನೆ ನೆಟಿಗೆ ಮುರಿದು ಚಾಚಿತು
ಬಾಹುಗಳು ತೆರೆÀದವು
ಎಡಕ್ಕೆ ಬಲಕ್ಕೆ ಹಿಂದೆ ಮುಂದೆ
ಮೇಲೆ ಕೆಳಗೆ ಬೀಸುತ್ತ ಆಕಾಶಕ್ಕೆ ಚಾಚಿದವು
ಮಂಡಿ ಬಿಡಿಸಿ ತೊಡೆ ಸಡಿಲಿಸಿ
ಊರಿದ ಪಾದಗಳು ನೆಲ ಬಾಗಿಲೊಳಗಿಳಿದು ಬೇರು ಬಿಡತೊಡಗಿದ್ದೇ
ಬಾಗಿದ ಬೆನ್ನು ಹುರಿಗಟ್ಟಿತು
ಪಟ್ಟು ಬಿಗಿದು ಕುಳಿತಿದ್ದ ಚೌಕಟ್ಟು ಪಟಕ್ಕನೆ ಮುರಿದು
ತಟ್ಟನೆ ಬಿರಿದ ಎದೆಗೂಡಲಿ
ತುಂತುಂಬಿ ಪ್ರಾಣವಾಯು
ಚಾಚಿದಷ್ಟೂ ವಿಸ್ತಾರ
ಎದೆಯಗಲ ಹರಡಿಕೊಂಡ ನೋವು
ಎದೆಯಿಂದ ಎದೆಗೆ ದಾಟಿ
ಸಹಜ ಅನಂತದಲಿ ಲೀನ
ಆಗಲೇ
ಅನಿಕೇತನದೆಡೆಗೆ ಪಯಣ
– ಅನುಪಮಾ ಪ್ರಸಾದ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.