ಅಡುಗೆಮನೆ ಸಾಹಿತ್ಯ – ನೀತಾ ರಾವ್
ಅಡುಗೆಮನೆ ಸಾಹಿತ್ಯ
ಹಸಿರು ತೊಟ್ಟ ಬಿಳಿಮೈಯ
ಬದನೆಕಾಯಿಗಳ ಚಕಚಕನೆ ಕತ್ತರಿಸಿ
ಕೆಂಪಿನೀರುಳ್ಳಿಗಳ ಕೊಯ್ವಾಗ ಇಳಿದ
ಕಣ್ಣೀರಲಿ ಹಳೆಯ ನೋವುಗಳ ತೇಲಿಬಿಡುತ್ತೇನೆ
ಚಿಟಿಕೆ ಸಾಸಿವೆ, ಜೀರಿಗೆ, ಅರಿಷಿಣಕ್ಕೆ
ಚೂರು ಹಿಂಗು ಮೇಲಿಂದ,
ನಾಲ್ಕು ಚಮಚ ಎಣ್ಣೆಗೆ ಸೇರಿಸಿ
ಒಳಗಿನ ಬೆಂಕಿಯ ನಂದಿಸಿ, ಒಲೆಯ ಹೊತ್ತಿಸಿ
ಚಟಪಟ ವಗ್ಗರಣೆ ಹಾಕುತ್ತೇನೆ
ತರಕಾರಿಗಳ ಜೊತೆಗೆರಡು
ಜೋಕುಗಳ ಹುರಿಯುತ್ತ ಹುಸಿನಗುತ್ತೇನೆ
ಕುದ್ದು ಆವಿಯಾಗಲು ತಟ್ಟೆಯೊಂದನು ಠಪ್ಪೆಂದು ಮುಚ್ಚಿ
ಮಧ್ಯೆ ಅಡುಗೆಕಟ್ಟೆಯನೊಮ್ಮೆ ಸ್ವಚ್ಛಗೊಳಿಸುವಾಗ
ನೆನಪುಗಳನ್ನೂ ಒರೆಸಿ ಹಿಂಡಿಬಿಡುತ್ತೇನೆ
ಒಗರು ತಗ್ಗಿ ಹಗುರವಾಗಲು ಬೊಟ್ಟು ಹುಣಸೆಹಣ್ಣು
ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮಸಾಲೆ
ಸಿಹಿಗಿಷ್ಟು ಬೆಲ್ಲವ ಬೆರೆಸಿ, ರುಚಿ ಹೆಚ್ಚಲೆಂದು
ಶೇಂಗ, ಎಳ್ಳು, ಕಾಯಿ, ಕೊತ್ತಂಬರಿಯ ಬೆರಿಸಿ
ಮೌಲ್ಯವರ್ಧನೆಗೆ ನಿಲ್ಲುತ್ತೇನೆ
ನೀರಿಗೆ ಬಿದ್ದಾಯಿತು, ಬೆಂಕಿಯಲಿ ಕುದ್ದಾಯಿತು
ರಸಗಳೆಲ್ಲವ ಹೀರಿ ಪಕ್ಕಾಯಿತು
ಕಣ್ಮುಚ್ಚಿ ಉಸಿರೆಳೆದು ಘಂ ಎನ್ನೋ
ಪರಿಮಳವ ಒಳಗೆಳೆದುಕೊಳ್ಳುತ್ತೇನೆ
ಅವರಿಗೂ ರುಚಿಸಬಹುದೆಂದು ಕನಸುತ್ತೇನೆ
ರುಚಿ ಹತ್ತಿ ತುಸು ಹೆಚ್ಚೇ ತಿಂದರೂ
ಕುದ್ದು ಕರಗಿದವರ ನೋವು ಮರೆತು
ನಿರ್ವಿಕಾರದಿಂದೆದ್ದು ಹೋಗಿ ಕದವಿಕ್ಕಿ ಕುಳಿತು
ಗಂಭೀರವಾಗಿ ಬರೆಯಲು ತೊಡಗಿದ
ಪುರುಷ ಪುಂಗವರೇ, ನೀವಿದನ್ನು
ಅಡುಗೆಮನೆ ಸಾಹಿತ್ಯವೆಂದು ಜರೆಯುವಿರಿ
ನಾವಿದನ್ನು ಕಲೆ ಎನ್ನುತ್ತೇವೆ!
– ನೀತಾ ರಾವ್
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ಬಹಳ ಸೊಗಸಾಗಿ ಮೂಡಿಬಂದಿದೆ.
ಅಭಿನಂದನೆಗಳು.