ಕಲಾವಿದೆ ಎಸ್. ಮಾಲತಿಗೆ ಹಿತೈಷಿಣಿಯ ಶೋಕಪೂರ್ಣ ನುಡಿನಮನ

ರಂಗಕಲಾವಿದೆ, ಸಾಹಿತಿ ಮತ್ತು ಮಹಿಳಾ ಹೋರಾಟಗಾರ್ತಿ ಎಲ್ಲವೂ ಆಗಿದ್ದ ಎಸ್. ಮಾಲತಿ ಇಂದು ಬೆಳಗಿನ ೨ ಗಂಟೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಅಸ್ವಸ್ಥರಾಗಿ ಉಡುಪಿಯ ಮಣಿಪಾಲ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಲತಿಯವರ ಸಾವು ನಮ್ಮ ಸಾಂಸ್ಕೃತಿಕ ಲೋಕಕ್ಕೆ ಭಾರಿ ನಷ್ಟವುಂಟುಮಾಡಿದೆ.

ಮೇ೧, ೧೯೫೨ರಲ್ಲಿ ಶಿವಮೊಗ್ಗದ ಸಾಗರದಲ್ಲಿ ಜನಿಸಿದ ಮಾಲತಿ ಸಾಗರದ ಶೇಷಗಿರಿ ಪೈ ಮತ್ತು ಉಮಾ ಪೈ ಅವರ ಸುಪುತ್ರಿ. ಅವರ ಪದವಿ ಶಿಕ್ಷಣವನ್ನು ಸಾಗರದಲ್ಲಿ ಮುಗಿಸಿದ ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ ಪದವಿ ಪಡೆದು ರಂಗಭೂಮಿಯನ್ನು ತಮ್ಮ ಬದುಕಿನ ಆದ್ಯತೆಯಾಗಿ ಆಯ್ದುಕೊಂಡವರು. ಅಂದಿನ ರಂಗಚಳುವಳಿಯಲ್ಲಿ ಪ್ರಮುಖವಾಗಿ ಹೆಸರು ಮಾಡಿದ್ದ ಸಮುದಾಯ ರಂಗ ಸಂಘಟನೆಯಲ್ಲಿ ತೊಡಗಿಕೊಂಡು ನಟಿಯಾಗಿ ಅಭಿನಯಿಸಿದರು. ರಂಗಸಂಘಟಕಳಾಗಿ ಸಮುದಾಯ ಜಾತಾದಲ್ಲಿ ಭಾಗವಹಿಸಿದರು. ಹಾಗೆಯೇ ಸಮುದಾಯ ಹೊರತರುತ್ತಿದ್ದ ’ಸಮುದಾಯ ವಾರ್ತಾಪತ್ರ’ ದ ಸಂಪಾದಕಿಯಾಗಿ ಕೆಲವು ವರ್ಷ ಕಾರ್ಯನಿರ್ವಹಿಸಿದ್ದರು. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಕ್ಕೆ ಸೇರಿ ರಂಗ ತರಬೇತಿ ಪಡೆದು ಬಂದ ನಂತರ ಹಲವಾರು ನಾಟಕಗಳನ್ನು ನಿರ್ದೇಶಿಸಿದರು. ಐವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿರುವ ಮಾಲತಿಯವರು ಹಲವಾರು ನಾಟಕಗಳು, ಸಾಕ್ಷ್ಯ ಚಿತ್ರ, ಧಾರಾವಾಹಿ, ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯೆಯಾಗಿದ್ದ ಮಾಲತಿ ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಪಡೆದಿದ್ದರು.

ಕವಿ, ನಾಟಕಕಾರರೂ ಆಗಿದ್ದ ಮಾಲತಿ ತಮ್ಮ ಸಾಹಿತ್ಯಿಕ ಬರಹಗಳಿಂದ ಹೆಸರು ಮಾಡಿದ್ದರು. ’ಕ್ಷಣಿಕವಲ್ಲದ ಕ್ಷಣಗಳು’ ಹೇಳಬೇಕೆನಿಸಿದ್ದು, ನನ್ನ ಪ್ರಿಯತಮನೆ ಬಾಳು, ಆನು ಒಲಿದಂತೆ ಹಾಡುವೆ, ಭಾವಕೋಶ – ಮುಂತಾಗಿ ಐದು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ’ಹೊಸ ದಿಕ್ಕು’ ರಂಗಭೂಮಿ ಲೇಖನಗಳ ಸಂಗ್ರಹವಾಗಿದೆ. ’ಗೀತಾಂಜಲಿ’ ನೃತ್ಯರೂಪಕವನ್ನು ರಚಿಸಿದ್ದಾರೆ. ನವಕರ್ನಾಟಕ ಪ್ರಕಾಶನವು ಅವರ ಹತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಅವರ ಎರಡು ನಾಟಕಗಳು, ಭೀಮ ಕಥಾನಕ, ದಲಿತ ಲೋಕ, ಸ್ವಪ್ನ ಸಾರಸ್ವತ , ಮೂರು ಮಕ್ಕಳ ನಾಟಕಗಳು, ಬುದ್ಧ ಹೇಳಿದ ಕತೆ, ಬಲರಾಜ್ ಸಾಹ್ನಿ ಮತ್ತು ಭೀಷ್ಮ ಸಾಹನಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವತ್ತಷ್ಟೇ ಅವರ “ಗಾಂಧಿ – ಒಂದು ಬೆಳಕು” ನಾಟಕವು ನವಕರ್ನಾಟಕ ಪ್ರಕಾಶನದಿಂದ ಹೊರಬಂದಿದೆ.

ಮಾಲತಿಯವರ ಸಾಮಾಜಿಕ ಕ್ರಿಯಾಶೀಲತೆ ಕರ್ನಾಟಕದ ಮಹಿಳಾ ಚಳುವಳಿಗೂ ತನ್ನ ಕಾಣಿಕೆಯನ್ನು ನೀಡಿದೆ. ಎಪ್ಪತ್ತರ ದಶಕದ ಕೊನೆಯ ಭಾಗದಲ್ಲಿ ಕರ್ನಾಟಕ ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಸಂಚಾಲಕಿಯಾಗಿ ಮಂಗಳೂರಿನಲ್ಲಿ ಬೃಹತ್ ಮಹಿಳಾ ಸಮಾವೇಶವನ್ನು ಸಂಘಟಿಸುವುದರಲ್ಲಿ ಅವರು ಪ್ರಮುಖ ಪಾತ್ರವಹಿಸಿದರು. ಅದರ ಮುಂದುವರಿಕೆಯಾಗಿ ಕರ್ನಾಟಕದ ಜನವಾದಿ ಮಹಿಳಾ ಸಂಘಟನೆಯ ಸ್ಥಾಪನಾ ಸಮಾವೇಶದಲ್ಲೂ ಸಕ್ರಿಯವಾಗಿ ಭಾಗವಹಿಸಿದ ಮಾಲತಿ, ಆ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಸಂಪಾದಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿಸಿದ್ದರು. ಅವರೊಂದಿಗೆ ಚಳುವಳಿಯಲ್ಲಿ ಕೆಲಸ ಮಾಡಿದ್ದ, ಅವರು ಬೆಳೆಸಿದ ಹಲವಾರು ಮಹಿಳೆಯರು ಇಂದಿಗೂ ಮಹಿಳಾ ಚಳುವಳಿಯಲ್ಲಿ ಸಕ್ರಿಯವಾಗಿದ್ದಾಗಿದ್ದಾರೆ. ಇಂಥ ಬಹುಮುಖ ಪ್ರತಿಭೆಯ ಮಾಲತಿಗೆ ಹಿತೈಷಿಣಿಯ ಶೋಕಪೂರ್ಣ ನುಡಿ ನಮನ.

ಹಿತೈಷಿಣಿ ಬಳಗ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *