Latestದೇಶಕಾಲ

ದೇಶಕಾಲ/ ಕರ್ನಾಟಕ ಚುನಾವಣೆ : ಎಲ್ಲಿದ್ದಾರೆ ಮಹಿಳೆಯರು? – ಸಿ ಜಿ.ಮಂಜುಳಾ

1983ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿ, ಅಬ್ದುಲ್ ನಜೀರ್ ಸಾಬ್ ಅವರು ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ 25ರಷ್ಟು ಸ್ಥಾನಗಳ ಮೀಸಲು ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ ಎಂದು ಹೆಸರಾಗಿತ್ತು. ಇದಾದ ಒಂದು ದಶಕದ ನಂತರ ಸಂವಿಧಾನಕ್ಕೆ ತರಲಾದ 73ನೇ ತಿದ್ದುಪಡಿಯು ರಾಷ್ಟ್ರದಾದ್ಯಂತ ಪಂಚಾಯತ್ ಆಡಳಿತದಲ್ಲಿ ಮಹಿಳೆಯರಿಗೆ ಮೂರನೇ ಒಂದು ಸ್ಥಾನಗಳ ಮೀಸಲಿಗೆ ಅವಕಾಶ ಕಲ್ಪಿಸಿತು. ಒಟ್ಟಾರೆ ಬಿಜೆಪಿ, ಕಾಂಗ್ರೆಸ್ , ಜೆಡಿಎಸ್ – ಈ ಮೂರೂ ಪ್ರಮುಖ ಪಕ್ಷಗಳು ಈ ಬಾರಿ ಮಹಿಳೆಯರಿಗೆ ನೀಡಿರುವ ಟಿಕೆಟ್ ಪ್ರಮಾಣ ಶೇಕಡ 5ನ್ನೂ ದಾಟುವುದಿಲ್ಲ. ಮಹಿಳಾ ಮೀಸಲು ಮಸೂದೆ ಜಾರಿಯಾಗದಿದ್ದಲ್ಲಿ ರಾಜಕೀಯ ಪ್ರಾತಿನಿಧ್ಯದಲ್ಲಿ ಮಹಿಳೆ ವಂಚಿತಳಾಗುವುದು ಮುಂದುವರಿಯುತ್ತದೆ. ‘ ಪ್ರಜಾಪ್ರಭುತ್ವದ ತಾಯಿ’ ಭಾರತ ಎಂಬಂಥ ಬಡಾಯಿ ಕೊಚ್ಚಿಕೊಳ್ಳುವ ಮಾತುಗಳು ಅರ್ಥಹೀನ ಎನಿಸಿಬಿಡುತ್ತವೆ.

ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಚುನಾವಣಾ ಕಣದಲ್ಲಿ ಉಳಿದಿರುವ ಒಟ್ಟು ಅಭ್ಯರ್ಥಿಗಳ ಸಂಖ್ಯೆ 2,613. ಈ ಪೈಕಿ 2427 ಮಂದಿ ಪುರುಷ ಅಭ್ಯರ್ಥಿಗಳು, 185 ಮಂದಿ ಮಹಿಳಾ ಅಭ್ಯರ್ಥಿಗಳು. ಇತರ ಲಿಂಗ ವರ್ಗದಲ್ಲಿ ಏಕೈಕ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು ಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇ 7.6. ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ಮಹಿಳೆ ಪಾಲ್ಗೊಳ್ಳುವಿಕೆ ಪ್ರಮಾಣ ನಗಣ್ಯವೆನಿಸುವಂತಹದ್ದು. 2018ರಲ್ಲಿ ನಡೆದ ಕಳೆದ ವಿಧಾನಸಭಾ ಚುನಾವಣೆಯಲ್ಲೂ ಮತದಾನ ನಡೆದ 222 ಕ್ಷೇತ್ರಗಳಲ್ಲಿ ಒಟ್ಟು 2,626 ಅಭ್ಯರ್ಥಿಗಳಲ್ಲಿ ಕೇವಲ 209 ಮಂದಿ ಮಾತ್ರ ಮಹಿಳೆಯರಿದ್ದರು. ಈ ಪೈಕಿ ಕೇವಲ ಏಳು ಮಹಿಳೆಯರು ಆರಿಸಿಬಂದಿದ್ದರು.

ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದು ಅಬ್ದುಲ್ ನಜೀರ್ ಸಾಬ್ ಅವರು ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ 25ರಷ್ಟು ಸ್ಥಾನಗಳ ಮೀಸಲು ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ ಎಂದು ಹೆಸರಾಗಿತ್ತು. ಆ ಕಾಲದಲ್ಲಿ ಈ ನೀತಿಯನ್ನು ರಾಜ್ಯ ಸರ್ಕಾರ ತಾನೇ ಸ್ವಯಂ ಪ್ರೇರಣೆಯಿಂದ ಆರಂಭಿಸಿತ್ತು. ಇದಕ್ಕಾಗಿ ಆಗ ಯಾವ ಮಹಿಳಾ ಸಂಘಟನೆಯೂ ಒತ್ತಡವನ್ನೇನೂ ಹಾಕಿರಲಿಲ್ಲ. ಇದಾದ ಒಂದು ದಶಕದ ನಂತರ ಸಂವಿಧಾನಕ್ಕೆ ತರಲಾದ 73ನೇ ತಿದ್ದುಪಡಿಯು ರಾಷ್ಟ್ರದಾದ್ಯಂತ ಪಂಚಾಯತ್ ಆಡಳಿತದಲ್ಲಿ ಮಹಿಳೆಯರಿಗೆ ಮೂರನೇ ಒಂದು ಸ್ಥಾನಗಳ ಮೀಸಲಿಗೆ ಅವಕಾಶ ಕಲ್ಪಿಸಿತು ಎಂಬುದನ್ನು ನೆನಪಿಸಿಕೊಳ್ಳಬಹುದು. ಪ್ರಗತಿಪರ ಹಾಗೂ ಅಭಿವೃದ್ಧಿ ಹೊಂದಿದ ರಾಜ್ಯವೆಂಬ ಹೆಗ್ಗಳಿಕೆ ಕರ್ನಾಟಕಕ್ಕೆ ಇದ್ದರೂ ಈವರೆಗೆ ರಾಜ್ಯವು ಮಹಿಳಾ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿಯನ್ನು ಕಂಡಿಲ್ಲ.

ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಭಾರತದಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಸ್ಪರ್ಧಿಸಿದ ಮೊದಲ ಮಹಿಳೆ. ಮದ್ರಾಸ್ ಲೆಜಿಸ್ಲೇಟಿವ್ ಅಸೆಂಬ್ಲಿಯ ಒಂದು ಸ್ಥಾನಕ್ಕಾಗಿ ಅವರು ಸ್ಪರ್ಧಿಸಿದ್ದರು ಆದರೆ ಕೇವಲ 55 ಮತಗಳಲ್ಲಿ ಸೋತರು. 1920ರಷ್ಟು ಹಿಂದೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎಂಬುದು ಇಲ್ಲಿ ಮುಖ್ಯ. ಶಾಸಕಾಂಗಗಳಲ್ಲಿ ಮಹಿಳಾ ಪ್ರಾತಿನಿಧ್ಯಕ್ಕಾಗಿ ವಿಮೆನ್ಸ್ ಇಂಡಿಯನ್ ಅಸೋಸಿಯೇಷನ್ ಆಗ್ರಹಿಸಿದ ಪರಿಣಾಮವಾಗಿ 1926ರಲ್ಲಿ ಮದ್ರಾಸ್ ಲೆಜಿಸ್ಲೇಟಿವ್ ಕೌನ್ಸಿಲ್ ಗೆ ಡಾ ಮುತ್ತುಲಕ್ಷ್ಮಿ ರೆಡ್ಡಿ ಅವರನ್ನು ನಾಮಕರಣ ಮಾಡಲಾಯಿತು. ಹೀಗಾಗಿ ಡಾ. ಮುತ್ತುಲಕ್ಷ್ಮಿ ರೆಡ್ಡಿ ಅವರು ಶಾಸಕಿಯಾದ ಮೊದಲ ಭಾರತೀಯ ಮಹಿಳೆ. ಎಂದರೆ, ರಾಷ್ಟ್ರದಲ್ಲಿ ಮಹಿಳಾ ರಾಜಕೀಯ ನಾಯಕತ್ವದ ಪಡಿಯಚ್ಚು ಮಾದರಿಗಳಿಗಾಗಲೀ ಪ್ರೇರಣೆ ನೀಡಿ ಸ್ಪೂರ್ತಿ ತುಂಬಬಹುದಾದಂತಹ ನಾಯಕಿಯರಿಗಾಗಲೀ ಕೊರತೆ ಇಲ್ಲ. ಮೂಲತಃ ಮಂಗಳೂರಿನವರಾದ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ನೀಡಿದ ನಾಯಕತ್ವದ ಮಾದರಿ ಇಂದಿಗೂ ಸ್ಮರಣೀಯ.

ಈ ಪರಂಪರೆಗೆ ಏನಾಯಿತು?

ಈ ಪರಂಪರೆಗೆ ಏನಾಯಿತು? ಪ್ರಜಾಪ್ರಭುತ್ವಕ್ಕೆ ಪ್ರಾತಿನಿಧ್ಯದ ರಾಜಕಾರಣವೇ ಮುಖ್ಯ. ಆದರೆ, ಇಂದಿಗೂ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಕಡಿಮೆಯೇ ಇದೆ. ರಾಜ್ಯದಲ್ಲಿ ರಾಜಕೀಯ ಪ್ರಚಾರದ ಭರಾಟೆ ಜೋರಾಗಿದ್ದರೂ ಮಹಿಳೆಯರ ದನಿಗಳು ಕ್ಷೀಣವಾಗಿವೆ. ಇಲ್ಲ ಎನ್ನಿಸುವಷ್ಟರ ಮಟ್ಟಿಗೆ ಇದೆ. 1950 ಹಾಗೂ 60 ರ ದಶಕದಲ್ಲಿ ಇದ್ದಿದ್ದಕ್ಕಿಂತಲೂ ಕರ್ನಾಟಕದಲ್ಲಿ ಮಹಿಳಾ ಶಾಸಕಿಯರ ಸಂಖ್ಯೆ ಕಡಿಮೆ ಇದೆ. ಈ ಬಗ್ಗೆ ರಾಜಕೀಯ ಪಕ್ಷಗಳದ್ದು ದಿವ್ಯ ನಿರ್ಲಕ್ಷ್ಯ. ಚುನಾವಣೆಗಳಲ್ಲಿ ಟಿಕೆಟ್ ನೀಡುವಾಗ ಮಹಿಳೆಯರ ಕಡೆಗಣನೆ ಮುಂದುವರಿದಿದೆ.

ಮಹಿಳೆಯರ ವಿರುದ್ಧ ನಿರಂತರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪೂರ್ವಗ್ರಹಗಳು ಇದೆಲ್ಲದಕ್ಕೂ ಮೂಲ ಕಾರಣ ಎಂಬುದು ಸ್ಪಷ್ಟ. ಸ್ವಾತಂತ್ರ್ಯದ 75ನೇ ಅಮೃತಮಹೋತ್ಸವವನ್ನು ಭಾರತ ಆಚರಿಸುತ್ತಿದ್ದರೂ ದೋಷಪೂರಿತ, ತಾರತಮ್ಯದ ಸಾಮಾಜಿಕ ಮೌಲ್ಯಗಳ ವಿರುದ್ಧದ ಹೋರಾಟ ಇನ್ನೂ ಮುಂದುವರಿದಿದೆ. ಇದಕ್ಕೆ ಸಾಕ್ಷಿ ಎಂದರೆ ರಾಜಕೀಯದಲ್ಲಿನ ಮಹಿಳಾ ಪ್ರಾತಿನಿಧ್ಯದ ಅನುಪಾತ.

ರಾಜ್ಯದಲ್ಲಿ 1952ರಲ್ಲಿ ಮೊದಲ ವಿಧಾನಸಭೆ ಅಸ್ತಿತ್ವಕ್ಕೆ ಬಂದಾಗಲಿಂದಲೂ ಕೇವಲ ಸುಮಾರು 30 ಅಥವಾ 31 ಮಹಿಳಾ ಸಚಿವೆಯರನ್ನು ರಾಜ್ಯ ಕಂಡಿದೆ. ಹೆಚ್ಚಿನವರು ನಿರ್ವಹಿಸಿರುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಮಹಿಳೆಯರೆಂದರೆ ಆರೈಕೆ ನೀಡುವವರು ಹಾಗೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವವರು ಎಂಬಂಥ ಪರಿಕಲ್ಪನೆಯನ್ನು ಪೋಷಿಸುವಂತಹದ್ದು. ಆದರೆ 2008ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಅಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ವಿದ್ಯುತ್ ಇಲಾಖೆಯಂತಹ ಖಾತೆಗಳನ್ನು ಸಚಿವೆಯಾಗಿ ನಿರ್ವಹಿಸಿದ ಶೋಭಾ ಕರಂದ್ಲಾಜೆ ಈ ಮಿಥ್ಯೆಯನ್ನು ಮುರಿದರು.

1999ರಲ್ಲಿ, ಆಗ ಕಾಂಗ್ರೆಸ್ ನಲ್ಲಿದ್ದ ಎಸ್ ಎಂ ಕೃಷ್ಣ ನೇತೃತ್ವದ ಸರ್ಕಾರದಲ್ಲಿ ನಾಲ್ಕು ಮಂದಿ ಗರಿಷ್ಠ ಸಂಖ್ಯೆಯ ಸಚಿವೆಯರಿದ್ದರು ಎಂಬುದು ಈಗಲೂ ದಾಖಲೆ. ಕೃಷ್ಣಅವರ ಸಂಪುಟದಲ್ಲಿದ್ದ ಈ ಸಚಿವೆಯರು ನಿರ್ವಹಿಸಿದ್ದ ಖಾತೆಗಳು ಹೀಗಿವೆ: ಮೋಟಮ್ಮ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ, ರಾಣಿ ಸತೀಶ್ – ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸುಮಾ ವಸಂತ್ – ಮುಜರಾಯಿ ಇಲಾಖೆ, ನಫೀಸ್ ಫಜಲ್ – ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ನಂತರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ. ಆ ನಂತರ ಯಾವ ಸರ್ಕಾರದಲ್ಲೂ ನಾಲ್ವರು ಸಚಿವೆಯರು ಒಟ್ಟಾಗಿ ಇದ್ದದ್ದು ಇಲ್ಲ.

ಕರ್ನಾಟಕದಲ್ಲಿ ಸಚಿವ ಹುದ್ದೆ ಪಡೆದುಕೊಂಡ ಮೊದಲ ಮಹಿಳೆ ಗ್ರೇಸ್ ಟಕ್ಕರ್ . 1957ರಲ್ಲಿ ಎಸ್. ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅವರು ಶಿಕ್ಷಣ ಉಪಸಚಿವೆಯಾಗಿದ್ದರು. ನಂತರ, 1958ರಲ್ಲಿ ಮುಖ್ಯಮಂತ್ರಿ ಬಿ.ಡಿ. ಜತ್ತಿ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ (ಐ ಎನ್ ಸಿ) ಲೀಲಾವತಿ ವೆಂಕಟೇಶ ಮಾಗಡಿ ಅವರು ಖಾದಿ ಗ್ರಾಮೋದ್ಯೋಗ, ಕೈಮಗ್ಗ ಹಾಗೂ ಸಣ್ಣ ಕೈಗಾರಿಕೆಗಳ ಉಪ ಸಚಿವೆಯಾಗಿದ್ದರು. 1962ರಲ್ಲಿ ಮುಖ್ಯಮಂತ್ರಿ ಎಸ್. ಆರ್. ಕಂಠಿ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಯಶೋಧರಾ ದಾಸಪ್ಪ ಅವರು ಸಮಾಜ ಕಲ್ಯಾಣ ಸಚಿವೆಯಾಗಿದ್ದರು.

1970ರ ದಶಕದಲ್ಲಿ ರಾಜ್ಯ ವಿಧಾನಸಭೆಯ ಸ್ಪೀಕರ್ ಆದ ಮೊದಲ ಮಹಿಳೆ ಕೆ.ಎಸ್. ನಾಗರತ್ನಮ್ಮ. 1979ರಲ್ಲಿ ಸುಮತಿ ಅವರು ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಆಗಿ ದಕ್ಷವಾಗಿ ಕಾರ್ಯ ನಿರ್ವಹಿಸಿದ್ದರು. 1980ರಲ್ಲಿ ಅವರು ತೀರಿಕೊಳ್ಳುವ ಕೆಲವು ತಿಂಗಳುಗಳಿಗೆ ಮುಂಚೆ, ವಿಧಾನಸಭೆಯ ಸ್ಪೀಕರ್ ಆಗಿಯೂ ಅವರು ಚುನಾಯಿತರಾಗಿದ್ದರು. ರಾಜ್ಯ ವಿಧಾನ್ ಪರಿಷತ್ ನ ಉಪ ಸಭಾಪತಿಗಳಾಗಿ ಎಂ. ಆರ್.ಲಕ್ಷ್ಮಮ್ಮ , ರಾಣಿ ಸತೀಶ್ ಹಾಗೂ ವಿಮಲಾ ಗೌಡ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿಧಾನ ಪರಿಷತ್ ನ ಮೊದಲ ಮಹಿಳಾ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಬಸವರಾಜೇಶ್ವರಿ ಜಹಗೀರ್ ದಾರ್ ಅವರದ್ದು. ಚಿತ್ರನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಅವರೂ 2018ರಲ್ಲಿ ವಿಧಾನ ಪರಿಷತ್ ಸಭಾನಾಯಕಿ ಹುದ್ದೆಗೆ ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ದಲಿತ ಸಮುದಾಯದ ಮೋಟಮ್ಮ ಅವರು 2010ರಲ್ಲಿ ವಿಧಾನ ಪರಿಷತ್ತಿನ ಪ್ರತಿ ಪಕ್ಷದ ನಾಯಕಿ ಪಟ್ಟಕ್ಕೇರಿದ ಮೊದಲ ಮಹಿಳೆ.

1970ರ ದಶಕದಲ್ಲಿ ರಾಜ್ಯ ವಿಧಾನಸಭೆಯ ಸ್ಪೀಕರ್ ಆದ ಮೊದಲ ಮಹಿಳೆ ಕೆ.ಎಸ್. ನಾಗರತ್ನಮ್ಮ. 1979ರಲ್ಲಿ ಸುಮತಿ ಮಡಿಮನ್ ಅವರು ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಆಗಿ ದಕ್ಷವಾಗಿ ಕಾರ್ಯ ನಿರ್ವಹಿಸಿದ್ದರು. 1980ರಲ್ಲಿ ಅವರು ತೀರಿಕೊಳ್ಳುವ ಕೆಲವು ತಿಂಗಳುಗಳಿಗೆ ಮುಂಚೆ, ವಿಧಾನಸಭೆಯ ಸ್ಪೀಕರ್ ಆಗಿಯೂ ಅವರು ಚುನಾಯಿತರಾಗಿದ್ದರು. ರಾಜ್ಯ ವಿಧಾನ್ ಪರಿಷತ್ ನ ಉಪ ಸಭಾಪತಿಗಳಾಗಿ ಎಂ. ಆರ್.ಲಕ್ಷ್ಮಮ್ಮ , ರಾಣಿ ಸತೀಶ್ ಹಾಗೂ ವಿಮಲಾ ಗೌಡ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿಧಾನ ಪರಿಷತ್ ನ ಮೊದಲ ಮಹಿಳಾ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಬಸವರಾಜೇಶ್ವರಿ ಜಹಗೀರ್ ದಾರ್ ಅವರದ್ದು. ಚಿತ್ರನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಅವರೂ 2018ರಲ್ಲಿ ವಿಧಾನ ಪರಿಷತ್ ಸಭಾನಾಯಕಿ ಹುದ್ದೆಗೆ ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ದಲಿತ ಸಮುದಾಯದ ಮೋಟಮ್ಮ ಅವರು 2010ರಲ್ಲಿ ವಿಧಾನ ಪರಿಷತ್ತಿನ ಪ್ರತಿ ಪಕ್ಷದ ನಾಯಕಿ ಪಟ್ಟಕ್ಕೇರಿದ ಮೊದಲ ಮಹಿಳೆ.

ವಿಮಲಾಬಾಯಿ ದೇಶಮುಖ್, ಲೀಲಾದೇವಿ ಆರ್. ಪ್ರಸಾದ್, ಮನೋರಮಾ ಮಧ್ವರಾಜ್, ಮಾರ್ಗರೆಟ್ ಆಳ್ವ, ಲಲಿತಾ ನಾಯಕ್, ಉಮಾಶ್ರೀ ಮೊದಲಾದವರು ಹಿಂದಿನ ಸರ್ಕಾರಗಳಲ್ಲಿ ಸಚಿವ ಸ್ಥಾನದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಈಗಿನ ಸರ್ಕಾರದಲ್ಲಿ ಶಶಿಕಲಾ ಜೊಲ್ಲೆ ಅವರು ಮಾತ್ರ ಇದ್ದರು.

1990ರ ದಶಕದಿಂದೀಚೆಗೆ ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿ ಅಭಿವೃದ್ಧಿ ಸಾಧಿಸಿರುವ ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. 2008ರಲ್ಲಿ ಯಶವಂತಪುರ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಗೆದ್ದರು. ಆದರೆ, ಆಗಿನಿಂದಲೂ ಕಳೆದ 15 ವರ್ಷಗಳಲ್ಲಿ ಈ ಕ್ಷೇತ್ರದಿಂದ ಯಾವ ಮಹಿಳೆಯೂ ಗೆದ್ದಿಲ್ಲ. 66 ವರ್ಷಗಳ ಹಿಂದೆ, 1957ರಲ್ಲಿ ಮೂವರು ಮಹಿಳಾ ಅಭ್ಯರ್ಥಿಗಳು ಬೆಂಗಳೂರಿನ ವಿವಿಧ ಕ್ಷೇತ್ರಗಳಿಂದ ಚುನಾವಣೆಗಳನ್ನು ಗೆದ್ದಿದ್ದರು. ಗ್ರೇಸ್ ಟಕ್ಕರ್, ನಾಗರತ್ನಮ್ಮ ಹಿರೇಮಠ ಹಾಗೂ ಲಕ್ಷ್ಮಿ ರಾಮಣ್ಣ ( ಮೂವರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು) ಅವರು ಕ್ರಮವಾಗಿ ಹಲಸೂರು, ಗಾಂಧಿನಗರ ಹಾಗೂ ಚಾಮರಾಜಪೇಟೆ ಕ್ಷೇತ್ರಗಳಿಂದ ಆಯ್ಕೆಯಾಗಿದ್ದರು. ಪ್ರಮೀಳಾ ನೇಸರ್ಗಿ ಅವರು ಚಾಮರಾಜಪೇಟೆಯಿಂದ ಎರಡು ಬಾರಿ ಆಯ್ಕೆಯಾಗಿದ್ದರು. ಮೊದಲಿಗೆ 1978ರಲ್ಲಿ ಜನತಾ ಪಕ್ಷದ ಟಿಕೆಟ್ ನಿಂದ ಹಾಗೂ ನಂತರ 1994ರಲ್ಲಿ ಬಿಜೆಪಿ ಟಿಕೆಟ್ ನಿಂದ ಪ್ರಮೀಳಾ ಅವರು ಆರಿಸಿ ಬಂದಿದ್ದರು. 2018ರ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಸೌಮ್ಯಾ ರೆಡ್ಡಿ ಆಯ್ಕೆಯಾಗಿದ್ದರು. ಆದರೆ ಕಳೆದ 66 ವರ್ಷಗಳಲ್ಲಿ ಕೇವಲ 7 ಮಹಿಳೆಯರು ಮಾತ್ರ ‘ವೇಗವಾಗಿ ಬೆಳೆಯುತ್ತಿರುವಂತಹ ಜಾಗತಿಕ ನಗರ’ ಎನಿಸಿದ ಬೆಂಗಳೂರಿನ ವಿವಿಧ ಕ್ಷೇತ್ರಗಳಿಂದ ವಿಧಾನಸಭೆಗೆ ಆಯ್ಲೆಯಾಗಿದ್ದಾರೆ ಎಂಬುದು ಕಾಳಜಿಯ ಸಂಗತಿಯಾಗಬೇಕಿದೆ.

ಮಹಿಳಾ ಅಭ್ಯರ್ಥಿಗಳಿಲ್ಲ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣವನ್ನು ಮಹಿಳೆಯರಿಗೆ ಸುರಕ್ಷಿತ ಕ್ಷೇತ್ರ ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. 1986 ರ ಉಪ ಚುನಾವಣೆಯ ನಂತರ ಸುಮಾರು ಎರಡು ದಶಕಗಳವರೆಗೆ ಕಾಂಗ್ರೆಸ್ ಹಾಗೂ ಜನತಾದಳದ ಮಹಿಳಾ ಶಾಸಕರೇ ಈ ಕ್ಷೇತ್ರ ಪ್ರತಿನಿಧಿಸಿಕೊಂಡು ಬಂದಿದ್ದರು. ಈ ಇತಿಹಾಸವಿದ್ದೂ 2018ರ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿ ಕಣಕ್ಕಿಳಿಸಲಿಲ್ಲ. ಈ ಬಾರಿಯೂ ಇಲ್ಲಿ ಮಹಿಳಾ ಅಭ್ಯರ್ಥಿಗಳಿಲ್ಲ.

ಅಭ್ಯರ್ಥಿಗಳ ಆಯ್ಕೆಯಲ್ಲಿ ಜಾತಿ ಧರ್ಮಗಳ ಲೆಕ್ಕಾಚಾರ ಗಣನೆಗೆ ಬರುತ್ತವೆ. ಆದರೆ ಮಹಿಳಾ ಮತದಾರರು ಶೇ 49ರಷ್ಟಿದ್ದರೂ ಮಹಿಳೆಗೆ ಹೆಚ್ಚಿನ ಮನ್ನಣೆ ಇಲ್ಲ. ಹೀಗಿದ್ದೂ ಮಹಿಳಾ ಮತದಾನದ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವುದರಿಂದ ಮಹಿಳೆಯನ್ನೂ ಮತದಾರರಾಗಿ ಓಲೈಸುವ ರಾಜಕೀಯ ಲೆಕ್ಕಾಚಾರಗಳು ಹೆಚ್ಚಾಗುತ್ತಿವೆ.

ಕಳೆದ ಬಾರಿ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ ಸಭೆಗಳಲ್ಲಿ ‘ ಬೇಟಾ ಬೇಟಿ ಏಕ್ ಸಮಾನ್ ‘ ( ಮಗ, ಮಗಳು ಸಮಾನರು) ಎಂಬ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದರು. ಆದರೆ 2018ರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಕಣಕ್ಕಿಳಿಸಿದ್ದು ಕೇವಲ 6 ಮಹಿಳಾ ಅಭ್ಯರ್ಥಿಗಳು. ಈ ಪೈಕಿ ಮೂವರು ಗೆದ್ದಿದ್ದರು. ಈ ಬಾರಿ ಬಿಜೆಪಿ 12 ಮಹಿಳೆಯರನ್ನು ಕಣಕ್ಕಿಳಿಸಿದೆ.

2018ರ ರಾಜ್ಯ ವಿಧಾನಸಭೆ ಚುನಾವಣೆಗಳಿಗೆ ಕೆಲವು ದಿನಗಳ ಮುಂಚೆ, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಪಕ್ಷದ ಆಗಿನ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮುಂದಿನ 10 ವರ್ಷಗಳಲ್ಲಿ ಕಾಂಗ್ರೆಸ್ ನಿಂದ ಕನಿಷ್ಠ 10 ಮಹಿಳಾ ಮುಖ್ಯಮಂತ್ರಿಗಳನ್ನು ತಾವು ಕಾಣಲು ಬಯಸುವುದಾಗಿ ಹೇಳಿದ್ದರು. ‘ ನನ್ನ ಈ ಹೇಳಿಕೆ ಇಲ್ಲಿರು ಕೆಲವು ಪುರುಷರಿಗೆ ಮುಖ್ಯವಾಗಿ ಹಿರಿಯ ನಾಯಕರಿಗೆ ಕಿರಿಕಿರಿ ಎನಿಸಬಹುದು. ಆದರೆ ಆ ಕಾರ್ಯಸೂಚಿಯನ್ನು ನಾನು ಮುಂದಿಡಲಿದ್ದೇನೆ ‘ ಎಂದಿದ್ದರು. ಜೊತೆಗೆ, ಕಾಂಗ್ರೆಸ್ ನ ಕರ್ನಾಟಕ ಘಟಕ ಮಹಿಳೆಯರಿಗೆ ನೀಡಿದ್ದ ಟಿಕೆ್ಟ್ ಪ್ರಮಾಣದ ಬಗ್ಗೆ ತಮಗೆ ಸಮಾಧಾನವಿಲ್ಲ ಎಂದೂ ಹೇಳಿದ್ದರು. ಆಗ ಕಾಂಗ್ರೆಸ್ 15 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆರು ಮಂದಿ ಗೆದ್ದಿದ್ದರು. ಈ ಬಾರಿ 11 ಮಹಿಳೆಯರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ಮಹಿಳಾ ಮೀಸಲು ಮಸೂದೆ ಕಾನೂನಾದರೆ ಕರ್ನಾಟಕದಲ್ಲಿ 84 ಶಾಸಕಿಯರಿರುತ್ತಾರೆ ಎಂದು 2017ರಲ್ಲಿ ನಡೆದ ಜೆಡಿಎಸ್ ಮಹಿಳಾ ಸಮಾವೇಶದಲ್ಲಿ ಜನತಾ ದಳ (ಸೆಕ್ಯುಲರ್) ಅಥವಾ ಜೆಡಿಎಸ್ ಪಕ್ಷದ ಮುಖಂಡ ಎಚ್ ಡಿ ದೇವೇಗೌಡ ಅವರು ಹೇಳಿದ್ದರು. ಮಸೂದೆ ಅಂಗೀಕಾರಕ್ಕೆ ಕ್ರಮ ಕೈಗೊಳ್ಳಲು ಪ್ರಧಾನಿಗೆ ಇತ್ತೀಚೆಗೆ ಪತ್ರವನ್ನೂ ದೇವೇಗೌಡ ಬರೆದಿದ್ದಾರೆ. 2017ರಲ್ಲೂ ಅವರು ಈ ಬಗೆಯ ಪತ್ರವನ್ನು ಪ್ರಧಾನಿಗೆ ಬರೆದಿದ್ದರು. ಆದರೆ 2018ರಲ್ಲಿ ಕೇವಲ ನಾಲ್ಕು ಮಹಿಳಾ ಅಭ್ಯರ್ಥಿಗಳನ್ನು ಜೆಡಿಎಸ್ ಕಣಕ್ಕಿಳಿಸಿತ್ತು. ಈ ಪೈಕಿ ಯಾರೂ ಗೆಲ್ಲಲಿಲ್ಲ ಈ ಬಾರಿ 13 ಮಹಿಳೆಯರಿಗೆ ಜೆಡಿಎಸ್ ಟಿಕೆಟ್ ಕೊಟ್ಟಿದೆ.

ಒಟ್ಟಾರೆ ಬಿಜೆಪಿ, ಕಾಂಗ್ರೆಸ್ , ಜೆಡಿಎಸ್ – ಈ ಮೂರೂ ಪ್ರಮುಖ ಪಕ್ಷಗಳು ಈ ಬಾರಿ ಮಹಿಳೆಯರಿಗೆ ನೀಡಿರುವ ಟಿಕೆಟ್ ಪ್ರಮಾಣ ಶೇಕಡ 5ನ್ನೂ ದಾಟುವುದಿಲ್ಲ. ಮಹಿಳಾ ಮೀಸಲು ಮಸೂದೆ ಜಾರಿಯಾಗದಿದ್ದಲ್ಲಿ ರಾಜಕೀಯ ಪ್ರಾತಿನಿಧ್ಯದಲ್ಲಿ ಮಹಿಳೆ ವಂಚಿತಳಾಗುವುದು ಮುಂದುವರಿಯುತ್ತದೆ. ‘ ಪ್ರಜಾಪ್ರಭುತ್ವದ ತಾಯಿ’ ಭಾರತ ಎಂಬಂಥ ಭಡಾಯಿ ಕೊಚ್ಚಿಕೊಳ್ಳುವ ಮಾತುಗಳು ಅರ್ಥಹೀನ ಎನಿಸಿಬಿಡುತ್ತವೆ.
( ಎನ್ ಡಬ್ಲ್ಯು ಎಂ ಐ ವೆಬ್ ಸೈಟ್ ನಲ್ಲಿ ಪ್ರಕಟವಾದ ಬರಹದ ಸಂಕ್ಷಿಪ್ತ ಅನುವಾದ )

ಸಿ ಜಿ.ಮಂಜುಳಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *