ಕಪ್ಪುಚಿಟ್ಟೆಯ ಕಥೆ… ಜ್ಯೋತಿ ಇರ್ವತ್ತೂರು
ಆಕೆ ಬುಡಕಟ್ಟು ಜನಾಂಗದ ಹೆಣ್ಣುಮಗಳು. ಕಪ್ಪೆಂದು ಜರಿಯುವ ಸಮಾಜದೆದುರು ಕುಗ್ಗಿದರು ಸೋಲನ್ನು ಮನಸ್ಸು ಒಪ್ಪುತ್ತಲೇ ಇರಲಿಲ್ಲ, ಹೆಜ್ಜೆ ಹೆಜ್ಜೆಗೂ ಹೀಯಾಳಿಸಿದವರ ಮೆಟ್ಟಿ ನಿಲ್ಲಬೇಕೆಂದು ಮನಸ್ಸು ಬಯಸುತ್ತಿದ್ದರೆ ಮತ್ತೆ ಮತ್ತೆ ಅವಮಾನಿಸುವ ವಿಕೃತ ಮನಸ್ಸುಗಳು ಗಾಯ ಮಾಡುತ್ತಲೇ ಇದ್ದವು. ಆ ಗಾಯ ನಿಧಾನವಾಗಿ ವಾಸಿಯಾಗುತ್ತಿದೆ ಅನ್ನುವಾಗ ಮತ್ತೆ ಮತ್ತೆ ಗಾಯ ಮಾಡುವ ಮನಸ್ಸುಗಳು.
ಆ ಬಾಲಕಿ ಶಾಲೆಯಲ್ಲಿ ಓದುತ್ತಿದ್ದ ದಿನಗಳು. ಉಳಿದ ಮಕ್ಕಳು ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದನ್ನು ಕಂಡು ತಾನು ಕೂಡ ಸ್ಪರ್ಧಿಸಬೇಕೆಂದು ಆಸೆಪಟ್ಟಳು. ತುಂಬಾ ಯೋಚನೆ ಮಾಡಿ ಚಿಟ್ಟೆಯ ವೇಷ ತೊಟ್ಟಿದ್ದಳು. ಸ್ಪರ್ಧಿಯ ಹೆಸರು ಕೂಗಿದರು. ಹೆಸರು ಕೂಗುತ್ತಿದ್ದಂತೆಯೇ ಆ ಬಾಲಕಿ ವೇದಿಕೆ ಮೇಲೆ ಬಂದಾಗ ಇದೆಲ್ಲಿಂದ ಬಂತು ಕಪ್ಪು ಚಿಟ್ಟೆಯೆಂದು ನೋಡಿದವರು ಉಸುರಿದರು. ತನ್ನ ಕಪ್ಪು ಬಣ್ಣವನ್ನು ಲೇವಡಿ ಮಾಡಿದ್ದನ್ನು ಕಂಡ ಆ ಹುಡುಗಿಯ ಮನಸು ಮುದುಡಿಹೋಯಿತು. ಕಂಬನಿ ತುಂಬಿಕೊಂಡ ಹುಡುಗಿ ರೆಕ್ಕೆ ಕತ್ತರಿಸಿಕೊಂಡ ಚಿಟ್ಟೆಯಂತೆ, ಇನ್ನೆಂದು ಹಾರಲಾರನೆಂಬಂತೆ ಬಿಕ್ಕಿ ಬಿಕ್ಕಿ ಅಳುತ್ತಲೇ ವೇದಿಕೆಯಿಂದ ಓಡಿಹೋದಳು.
ಆ ಬಾಲಕಿಯ ಮನಸ್ಸಿಗೆ ತಾವು ಮಾಡಿದ ನೋವಿನ ಆಳ ಅಲ್ಲಿದ್ದವರಿಗೆ ಇರಲಿಲ್ಲ, ಯಾಕೆಂದರೆ ಆ ಜಾಗದಲ್ಲಿ ನಿಂತು ನೋಡಿದರೆ ನಾವೆಂದೂ ಇಂತಹ ಮಾತುಗಳನ್ನು ಆಡುವುದಿಲ್ಲ. ಇಂತಹ ಅದೆಷ್ಟೋ ಅವಮಾನಗಳನ್ನು ಹೆಜ್ಜೆ ಹೆಜ್ಜೆಗೂ ಅನುಭವಿಸುತ್ತಲೇ ಸಾಗಿದಳು ಆ ಹುಡುಗಿ. ಇಂತಹ ಅವಮಾನಗಳಿಂದ ಘಾಸಿಗೊಂಡು ಕತ್ತಲೆಯಲ್ಲಿ ಕೂತು ಹರಿಸಿದ ಕಂಬನಿ ಕತ್ತಲೆಯಲ್ಲೇ ಕರಗಿಹೋಗಿತ್ತು.ಆ ಕಂಬನಿಯಲ್ಲಿ ಬೆರೆತು ಹೋದ ನೋವಿನ ಆಳ ಯಾರಿಗೂ ತಿಳಿಯಲೇ ಇಲ್ಲ.
ಹೀಗೆ ಬೆಳೆದ ಆ ಹುಡುಗಿ ಇದ್ದಕ್ಕಿದ್ದ ಹಾಗೆ ಹೆತ್ತವರಿಗೆ ಹೇಳದೆ ಏನಾದರು ಸಾಧಿಸಬೇಕೆಂದು ಹೊರಟು ಹೋದಳು. ತಾನೇ ಕೆಲಸ ಮಾಡಿ ತನ್ನ ಕನಸನ್ನು ಈಡೇರಿಸಲು ಮುಂದಾದಳು. ಆಕೆ ಯಾರು ಅಲ್ಲ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹವಾ ಎಬ್ಬಿಸಿದ ಛತ್ತೀಸಗಡದ ರೂಪದರ್ಶಿ ರೆನೆ ಕುಜೂರ್.
ರೆನೆ ಕುಜೂರ್, ಅಪ್ರತಿಮ ಸುಂದರಿ ಮತ್ತು ಖ್ಯಾತ ಪಾಪ್ ಗಾಯಕಿ ರಿಹಾನಾ ಹೋಲಿಕೆಯನ್ನು ಹೊಂದಿದ್ದಾರೆ ಅನ್ನುವ ಕಾರಣಕ್ಕೆ ಸಾಕಷ್ಟು ಕುತೂಹಲ ಹುಟ್ಟಿಸಿದ್ದಾರೆ. ಆತ್ಮೀಯರಿಂದ ಹಿಡಿದು ಛಾಯಾಗ್ರಾಹಕರವರೆಗೆ ಎಲ್ಲರೂ ನಿಮಗೆ ರಿಹಾನಾ ಹೋಲಿಕೆ ಇದೆ ಎಂದಾಗ ತಲೆಕೆಡಿಸಿಕೊಳ್ಳದ ರೆನೆ ನಿಧಾನವಾಗಿ ರಿಹಾನಾ ಫೋಟೋಗಳನ್ನು ನೋಡುತ್ತಾ ಹೋದಂತೆ ಹೌದಲ್ಲ ಅಂದುಕೊಂಡಿದ್ದರು.
ರಿಹಾನಾ ಹೋಲಿಕೆಯ ಸುದ್ದಿಯ ನಂತರ ರೆನೆ ಬದುಕೇ ಬದಲಾಗಿದೆ. ಆಕೆಗೆ ಹೆಚ್ಚಿನ ಅವಕಾಶಗಳು ಬರತೊಡಗಿವೆ.ಮೊದಲೆಲ್ಲಾ ಮೇಕಪ್ ಹಚ್ಚುವವರು ಇಂತವರನ್ನು ಬಿಳುಪು ಮಾಡುವುದು ಕಷ್ಟವೆಂದು ಚುಚ್ಚಿನುಡಿದಿದ್ದರೆ, ಈಗ ಕಪ್ಪು ಬಣ್ಣವೇ ವರದಾನವೆಂಬಂತೆ ವರ್ತಿಸತೊಡಗಿದ್ದಾರೆ. ಜಗತ್ತೇ ಹೀಗೆ ಒಮ್ಮೆ ಸಫಲತೆಯೆನ್ನುವುದು ಬೆನ್ನು ಹತ್ತಿದ ಬಳಿಕ ಮಾಡಿದ್ದೆಲ್ಲಾ ಸರಿಯೆನಿಸತೊಡಗುತ್ತದೆ. ರಿಹಾನಾ ಸೌಂದರ್ಯವನ್ನು ಸಹಜವಾಗಿ ಒಪ್ಪಿಕೊಂಡವರು ಆಕೆಯೆನ್ನು ಹೋಲುತ್ತಿರುವ ಕಾರಣಕ್ಕೆ ಸಹಜವಾಗಿಯೇ ರೆನೆ ಕುಜೂರ್ ಗೆ ಹೆಚ್ಚಿನ ಮಹತ್ತ್ವ ಕೊಡಲಾರಂಭಿಸಿದ್ದಾರೆ.
ಛತ್ತೀಸಗಡದಿಂದ ಪ್ಯಾರೀಸ್ ನವರೆಗೆ ರೆನೆ ಕುಜೂರ್ ಎಂಬ ಬುಡಕಟ್ಟು ಜನಾಂಗದ ಹುಡುಗಿಯ ಪಯಣ ಅವಮಾನದಿಂದ ಸನ್ಮಾನದವರೆಗೆ ಸಾಗಿದೆ. ತಾರತಮ್ಯವೆನ್ನುವುದು ಮೈಬಣ್ಣದ ಆಧಾರದ ಮೇಲೆ ಹೇಗೆ ಇನ್ನೂ ಜೀವಂತವಾಗಿದೆ ಅನ್ನುವ ಉದಾಹರಣೆಗಳು ನಮ್ಮ ನಿಮ್ಮ ಮಧ್ಯೆ ಇರುವಾಗಲೇ ರೆನೆ ಕುಜೂರ್ ಜೀವನದ ಈಗಿನ ಬೆಳವಣಿಗೆ ಸದ್ಯಕ್ಕೆ ಖುಷಿಯ ಕಡೆಗೆ ಸಾಗಿದೆ.
ಕಪ್ಪು ಬಣ್ಣದ ಕುರಿತಂತೆ ಖ್ಯಾತ ನಟಿ ನಂದಿತಾ ದಾಸ್ ಕೈಗೊಂಡ ಅಭಿಯಾನ ನಮ್ಮ ಕಣ್ಣ ಮುಂದಿದೆ. ಸೌಂದರ್ಯವೆನ್ನುವುದು ಬಣ್ಣದ ಆಧಾರದ ಮೇಲೆ ವ್ಯಾಖ್ಯಾನಗೊಳ್ಳುವಂತದಲ್ಲ ಎಂಬುದರ ಮೇಲೆ ಇನ್ನೂ ಚರ್ಚೆ ಮುಂದುವರಿದಿದೆ. ಪ್ರಿಯಾಂಕಾ ಚೋಪ್ರಾ ಮೈಬಣ್ಣದ ಕುರಿತು ಆಕೆ ಮಿಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವ ಸಂದರ್ಭದಲ್ಲಿ ತೀರ್ಪುಗಾರರೊಬ್ಬರು ನಕಾರಾತ್ಮಕವಾಗಿ ತಮ್ಮದೇ ವಾದ ಮಂಡಿಸಿದ್ದರು ಎಂಬುದನ್ನು ಓದಿದ್ದೇನೆ.
ಒಟ್ಟಾರೆ ಮೈಬಣ್ಣದ ಆಧಾರದ ಮೇಲೆ ತಾರತಮ್ಯ ಮಾಡುವ ಮನಸ್ಥಿತಿಗಳು ಇನ್ನು ಜೀವಂತವಾಗಿವೆ ಅನ್ನುವುದು ವಾಸ್ತವ. ಮತ್ತು ಇದರಿಂದ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುತ್ತಿರುವ ಮುಗ್ಧಮನಸ್ಸುಗಳು ನಮ್ಮ ಮಧ್ಯೆ ಇವೆ ಅನ್ನುವುದು ಕೂಡ ಕಹಿ ಸತ್ಯ.
ಯಾಕಂದರೆ ನಾನು ಸೇರಿದಂತೆ ನನಗೆ ಗೊತ್ತಿರುವ ಅದೆಷ್ಟೋ ಮಂದಿ ಹಾಲುಬಿಳಿ ಬಣ್ಣ ಹೊಂದಿಲ್ಲ ಎಂಬ ಕಾರಣಕ್ಕೆ ಮಾನಸಿಕ ಸ್ಥೈರ್ಯ ಕುಂದಿಸುವ ಮಾತುಗಳನ್ನು ಕೇಳುತ್ತಲೇ ಬಂದಿದ್ದೇವೆ, ಹಾಗಾಗಿ ಇಂತಹ ಗಾಢ ಪರಿಣಾಮ ಬೀರಿದ ಮಾತುಗಳು ಎದೆಯ ಮೂಲೆಯಲ್ಲೆಲ್ಲೋ ಕಾಡುತ್ತಲೇ ಇರುತ್ತವೆ. ಇಂತಹ ಮಾತುಗಳನ್ನು ಮೆಟ್ಟಿ ಬಹಳ ದೂರ ಬಂದಿದ್ದರೂ ಬದಲಾಗದ ಕುಬ್ಜ ಮನಸ್ಥಿತಿಯಿಂದ ಬೇಸರದ ಎಳೆಯೊಂದು ನನ್ನ ಸುತ್ತಿಕೊಂಡಿರುವುದು ಮಾತ್ರ ಸತ್ಯ.ಮನುಷ್ಯ ಕಂಡುಹುಡುಕಿದ ಹೆಸರಿಟ್ಟ ಬಣ್ಣ ಮೀರಿದ ಬಣ್ಣಗಳಿರಬಹುದಾ? ನಾವಿನ್ನೂ ತಲುಪದ ಗ್ರಹದಲ್ಲಿ ಬೇರೆ ಬಣ್ಣ ಸಿಗಬಹುದೇ ? ಈ ಪ್ರಶ್ನೆಗಳನ್ನು ನನಗೆ ನಾನು ಹಾಕಿಕೊಳ್ಳುತ್ತಲೇ ಸಾಗುವಾಗ ಯಾರನ್ನೇ ಆಗಲಿ ಬಣ್ಣ, ದೇಶ, ಊರು ಕೇರಿ, ಧರ್ಮದ ಆಧಾರದ ಮೇಲೆ ಅಳೆಯುವ ಮನಸ್ಸುಗಳು ಕುಬ್ಜವಾಗುತ್ತಲೇ ಕಾಣುತ್ತವೆ.
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
Well written
ಇಂದಿನ ವಾಸ್ತವಿಕತೆಗೆ ಕನ್ನಡಿ ಹಿಡಿದ ಲೇಖನವಿದು…