Uncategorizedಕಥಾ ಕ್ಷಿತಿಜಸಾಹಿತ್ಯ ಸಂಪದ

ಕಥಾ ಕ್ಷಿತಿಜ / ಶ್ವೇತಾ – ಡಾ. ವಸುಂಧರಾ ಭೂಪತಿ

“ನಿಮ್ಮ ಸುಚಿತ್ರ ಯಾವಾಗಲೋ ಸತ್ತು ಹೋಗಿಯಾಯಿತು. ಇಲ್ಲಿರುವುದು ಶ್ವೇತಾದೇವಿ, ನೀವಿನ್ನು ಹೊರಡಬಹುದು” ಎಂದಳು. ಬಂದಾತನಿಗೆ ಏನೆನ್ನಿಸಿತೋ ಹಿಂದೆಮುಂದೆ ನೋಡದೇ ಅವಳ ಕಾಲಿಗೆ ಬಿದ್ದು “ನನ್ನಿಂದ ತಪ್ಪಾಗಿದೆ, ಕ್ಷಮಿಸು ಸುಚಿತ್ರ” ಎಂದ… ನಡೆದದ್ದೆಲ್ಲವೂ ನೆನಪಿನ ಪರದೆಯ ಮೇಲೆ ಹಾದು ಹೋಗುತ್ತಿದ್ದ ಹಾಗೆ ಶ್ವೇತಾ ಆಚೆ ಬಂದು ಹಿಂತಿರುಗಿ ನೋಡದೆ ಬಿರಬಿರನೆ ನಡೆಯತೊಡಗಿದಳು.

ಆಶ್ರಮದಲ್ಲಿ ಹೂಗಿಡಗಳಿಗೆ ನೀರುಣಿಸುತ್ತ ಸೂರ್ಯನ ಎಳೆಬಿಸಿಲಿನ ತಂಗಾಳಿಗೆ ತಲೆದೂಗುತ್ತಿರುವ ಹೂವುಗಳನ್ನು ಗಮನಿಸುತ್ತ ಪ್ರಕೃತಿಯ ರಮ್ಯತೆಗೆ ಒಂದು ಕ್ಷಣ ಮೈಮರೆತಳು ಶ್ವೇತಾ. ಹೆಸರಿಗೆ ತಕ್ಕಂತೆ ಶ್ವೇತ ವಸ್ತ್ರಧಾರಿಣಿಯಾಗಿ ಮಂದಹಾಸವನ್ನು ಮೊಗದಲ್ಲಿ ತುಂಬಿಕೊಂಡು ಜವಾಬ್ದಾರಿಯಿಂದ ತನಗೊಪ್ಪಿಸಿದ ಕೆಲಸಗಳನ್ನು ನಿರ್ವಹಿಸಿ ಉತ್ತಮ ಆಡಳಿತಾಧಿಕಾರಿಯೆಂದೂ ಹೆಸರು ಪಡೆದಿದ್ದಳು. ನಗರ ಪ್ರದೇಶದಿಂದ ದೂರ ಹೊರವಲಯದಲ್ಲಿದ್ದ ಆಶ್ರಮ ಹಲವಾರು ಮಕ್ಕಳಿಗೆ, ವೃದ್ಧರಿಗೆ ಆಶ್ರಯತಾಣವಾಗಿತ್ತು. ರಮಾದೇವಿಯವರು ಬ್ರಹ್ಮಚಾರಿಣಿಯಾಗಿಯೇ ಉಳಿದವರು. ಚಿಕ್ಕ ವಯಸ್ಸಿನಿಂದಲೇ ಆಧ್ಯಾತ್ಮದೆಡೆಗೆ ಮನಸ್ಸು ಕೊಟ್ಟು ಸಾಂಸಾರಿಕ ಜಂಜಾಟದಿಂದ ದೂರವಾಗುಳಿದವರು. ತನ್ನ ಅಪ್ಪ ಸಾಯುವಾಗ ಬರೆದಿಟ್ಟಂತೆ ಆಸ್ತಿಯನ್ನು ಮಾರಿ ಬಂದ ಹಣದಲ್ಲಿ ನಗರದ ಹೊರವಲಯದಲ್ಲಿ 25 ಎಕರೆ ಜಮೀನಿನಲ್ಲಿ ಕುಟೀರಗಳನ್ನು ನಿರ್ಮಿಸಿದರು. ಮಹಿಳೆಯರಿಂದಲೇ ಎಲ್ಲವೂ ನಡೆಯುತ್ತಿರುವ ಈ ಸುಶಾಂತಿಧಾಮ ಶಾಂತಿಯನ್ನರಸಿ ಬರುವವರ ಪಾಲಿಗೆ ಸಂಜೀವಿನಿಯಾಗಿದೆ. ಮಾತೆ ರಮಾದೇವಿ ದಿನದಲ್ಲಿ 12 ಗಂಟೆಗಳ ಕಾಲ ಧ್ಯಾನದಲ್ಲಿ ಕಳೆಯುವುದರಿಂದ ಎಲ್ಲವನ್ನೂ ಶ್ವೇತಾಳೇ ನಿರ್ವಹಿಸುತ್ತಾಳೆ. ಮಾತೆ ಶ್ವೇತಾ ಅಲ್ಲಿರುವ ಎಲ್ಲರಿಗೂ ಅಮ್ಮನೇ ಆಗಿದ್ದಾಳೆ. ಸದಾಕಾಲವೂ ಶಾಂತಿ ಸಮಾಧಾನ ತುಂಬಿದ ಆ ಆಶ್ರಮದಲ್ಲಿನ ವಾತಾವರಣ ಎಂತಹವರನ್ನೂ ತನ್ನೆಡೆಗೆ ಸೆಳೆದುಕೊಳ್ಳತ್ತದೆ. ಪ್ರಕೃತಿ ಮಾತೆಯ ಆರಾಧನೆಯಲ್ಲಿ ತಲ್ಲೀನಳಾಗಿದ ಶ್ವೇತಾಳನ್ನು ಬಾಲಕಿಯ ಮಾತು ಎಚ್ಚರಿಸಿತು. “ಅಮ್ಮ, ಆಶ್ರಮಕ್ಕೆ ಯಾರೋ ಹೊಸಬರು ಬಂದಿದ್ದಾರೆ. ನಿಮ್ಮನ್ನು ನೋಡಬೇಕಂತೆ”. ಪ್ರತಿದಿನ ಅನೇಕರು ಭೇಟಿಕೊಡುವುದು ಅತ್ಯಂತ ಸಾಮಾನ್ಯದ ಸಂಗತಿಯಾದ್ದರಿಂದ “ಆಯ್ತು ಬರ್ತೀನಿ” ಎಂದವಳೇ ಹೊರಟಳು.

ವಿಸಿಟರ್ಸ್ ರೂಮಿನ ಬಾಗಿಲನ್ನು ತಳ್ಳಿಕೊಂಡು ಒಳಗೆ ಅಡಿ ಇರಿಸುತ್ತಿದ್ದಂತೆಯೇ ಬಂದವರು ಎದ್ದು ನಿಂತು “ಸುಚಿತ್ರ, ಹೇಗಿದ್ದೀಯಾ?” ಎಂದರು. ಶ್ವೇತಾ “ನೀವೆಲ್ಲೋ ತಪ್ಪಿ ಬಂದಿದ್ದೀರೆಂದು ಕಾಣುತ್ತದೆ. ನನ್ನ ಹೆಸರು ಶ್ವೇತಾ. ಈ ಆಶ್ರಮದಲ್ಲಿ ಸುಚಿತ್ರಾ ಎನ್ನುವವರು ಯಾರೂ ಇಲ್ಲ” ಎಂದವಳೇ ಹೊರಡಲನುವಾದಾಗ ಬಂದವರು “ನಿಲ್ಲು ಸುಚಿತ್ರಾ, ಇಲ್ಲಿಗೆ ಬಂದ ಮೇಲೆ ನೀನು ಶ್ವೇತಾ ಎಂದು ಹೆಸರು ಬದಲಾಯಿಸಿಕೊಂಡಿರಬಹುದು. ನನಗೆ ನೀನು ಸುಚಿತ್ರಾನೇ, ಐದು ವರ್ಷದಲ್ಲಿ ಎಲ್ಲ ಮರೆತು ಬಿಟ್ಟೆಯಾ? ನಾನು ಹೋಗಲಿ, ಮಗ ಧನುಷ್‍ನನ್ನೂ ಮರೆತುಬಿಟ್ಟೆಯಾ?” ಎಂದರು. ಆ ಮಾತುಗಳಿಂದ ಸ್ವಲ್ಪ ವಿಚಲಿತಳಾದಂತೆ ಅನ್ನಿಸಿದರೂ ಮರುಕ್ಷಣವೇ ಸಾವರಿಸಿಕೊಂಡು “ನಾನೀಗ ಶ್ವೇತಾ, ನೀವೇ ದೂರಮಾಡಿದ ಹೆಣ್ಣು. ಈಗ ನಾನ್ಯಾಕೆ ಬೇಕು? ಸುಮ್ಮನೆ ಮಾತನಾಡುತ್ತ ಸಮಯ ವ್ಯರ್ಥ ಮಾಡಲು ನನಗಿಷ್ಟವಿಲ್ಲ. ಆಶ್ರಮದ ಕೆಲಸಗಳು ಸಾಕಷ್ಟಿವೆ. ತಾವು ಇನ್ನು ಹೊರಡಬಹುದು” ಎಂದು ಮೇಲೆದ್ದಳು. “ನೀನು ಇಷ್ಟು ನಿರ್ದಯಿಯಾಗಬೇಡ, ಇಲ್ಲಿ ನೀನಿಲ್ಲದಿದ್ದರೂ ನಡೆಯುತ್ತದೆ. ಆದರೆ ಆ ಮನೆ ನಿನಗಾಗಿ ಕಾಯುತ್ತಿದೆ. ಅಲ್ಲಿ ನಿನ್ನದೇ ಎಲ್ಲವೂ, ಮೃದು ಹೃದಯಿಯಾದ ನೀನು ಹೀಗೆ ಕಠಿಣಳಾಗಬೇಡ. ಕೈ ಮುಗಿದು ಬೇಡಿಕೊಳ್ಳುತ್ತೇನೆ. ದಯವಿಟ್ಟು ನಿನ್ನ ಮನೆಗೆ ನೀನು ಬಾ” ಎಂದರು ಅವರು.

“ಈಗ ನಿಮ್ಮ ಬಾಯಿಯಲ್ಲಿ ‘ದಯವಿಟ್ಟು’ ಎಂಬ ಶಬ್ದ ಬರುತ್ತಿದೆಯಲ್ಲವೆ? ಈಗ ನಾನು ನಿಮಗೆ ಬೇಕಾದೆನೆ? ಹೀಗೆ ಕೈಮುಗಿಯುವ ಕೈಗಳೇ ಕತ್ತು ಹಿಡಿದು ಆಚೆ ತಳ್ಳಿದ್ದು ಇಷ್ಟು ಬೇಗ ನೀವು ಮರೆತುಬಿಟ್ಟಿರಾ? ಉಟ್ಟ ಬಟ್ಟೆಯಲ್ಲಿ ನನ್ನ ಹೊರದೂಡಿದಿರಲ್ಲ. ಆಗ ನನಗೆ ಆತ್ಮಹತೆ ಬಿಟ್ಟು ದಾರಿಯಾದರೂ ಯಾವುದಿತ್ತು? ನಿಮ್ಮ ಪ್ರೇಯಸಿ ಸೀಮಾಳ ಸಹವಾಸ ಸಾಕಾಯಿತೇ? ಅಂದು ನನ್ನನ್ನು ಯಾವ ಕಾರಣದಿಂದ ಹೊರದೂಡಿದ್ದಿರೋ ಅದನ್ನು ನಾನು ಮರೆಯಬಾರದೆಂದು ನನ್ನ ಹೆಸರನ್ನೂ ಅದೇ ಅರ್ಥ ಬರುವಂತೆ ಬದಲಾಯಿಸಿಕೊಂಡಿದೇನೆ. ಹತ್ತು ವರ್ಷ ಸಂಸಾರ ನಡೆಸಿದ ನನ್ನನ್ನು ಹೀನಾಯವಾಗಿ ನಡೆಸಿಕೊಂಡಿರಲ್ಲ. ಮಗುವನ್ನು ಕರೆದುಕೊಂಡು ಹೋಗುತ್ತೇನೆಂದರೂ ನನ್ನೊಡನೆ ಕಳಿಸಲಿಲ್ಲ. ಈಗ ಕರೆಯಲು ಮನಸ್ಸಾದರೂ ಹೇಗೆ ಬಂತು? ಅಲ್ಲದೇ ನೀವು ಕರೆದೊಡನೆ ಬರಲು ನಾನೇನು ಕಾಯುತ್ತ ಕುಳಿತಿಲ್ಲ. ಅಲ್ಲಿಯಾದರೆ ಕೇವಲ ಗಂಡ ಮತ್ತು ಮಗು ಇದ್ದದ್ದಷ್ಟೇ, ಆದರೆ ಇಲ್ಲಿ 25 ಮಕ್ಕಳು, 15 ಜನ ವೃದ್ಧರು ನನ್ನೊಡನಿದ್ದಾರೆ. ಒಂದು ಕ್ಷಣ ನಾನಿಲ್ಲವೆಂದರೆ ಚಡಪಡಿಸುತ್ತಾರೆ. ನೀವು ಮುಟ್ಟಲು ಅಸಹ್ಯ ಪಟ್ಟುಕೊಂಡ ಈ ರೂಪವನ್ನು ಅವರೆಲ್ಲ ಅದೆಷ್ಟು ಪೂಜ್ಯಭಾವನೆಯಿಂದ ನೋಡುತ್ತಾರೆ ಗೊತ್ತೇ? ನಾನು ಇಲ್ಲಿ ತುಂಬ ಆನಂದದಿಂದ ಬದುಕುತ್ತಿದ್ದೇನೆ. ಮನಃಶಾಂತಿ ದೊರಕಿದೆ. ನಿಮ್ಮ ಸುಚಿತ್ರ ಯಾವಾಗಲೋ ಸತ್ತು ಹೋಗಿಯಾಯಿತು. ಇಲ್ಲಿರುವುದು ಶ್ವೇತಾದೇವಿ, ನೀವಿನ್ನು ಹೊರಡಬಹುದು” ಎಂದಳು.

ಬಂದಾತನಿಗೆ ಏನೆನ್ನಿಸಿತೋ ಹಿಂದೆಮುಂದೆ ನೋಡದೇ ಅವಳ ಕಾಲಿಗೆ ಬಿದ್ದು “ನನ್ನಿಂದ ತಪ್ಪಾಗಿದೆ, ಕ್ಷಮಿಸು ಸುಚಿತ್ರ, ಅಂತಹ ಸ್ಥಿತಿಯಲ್ಲಿ ಯಾವುದೇ ಗಂಡಸು ಮಾಡಬಹುದಾದುದನ್ನೇ ನಾನು ಮಾಡಿದೆ. ನಾನೀಗ ಸಕ್ಕರೆ ಕಾಯಿಲೆ ರಕ್ತದೊತ್ತಡದ ರೋಗಿ, ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲ. ಮಗನನ್ನು ಸರಿಯಾಗಿ ಗಮನಿಸದೇ ಅವನೂ ಓದಿನಲ್ಲಿ ಹಿಂದೆ ಬಿದ್ದು ಫೇಲ್ ಆಗಿದ್ದಾನೆ. ಯಮುನಳೂ ನನಗೆ ಕೈಕೊಟ್ಟು ಹೋದಳು. ಈಗ ನಾನು ಜೀವನದಲ್ಲಿ ಒಂಟಿಯಾಗಿದ್ದೇನೆ. ಜೊತೆಯಾಗಿ ಇರು ಬಾ” ಎಂದು ಅಂಗಲಾಚಿದ. ಶ್ವೇತಾಳ ಮನಸ್ಸಿನ ಮೇಲೆ ಅವನ ಮಾತುಗಳು ಸ್ವಲ್ಪಮಟ್ಟಿಗೆ ಪರಿಣಾಮ ಬೀರಿದರೂ ಮರುಕ್ಷಣ ಮನಸ್ಸನ್ನು ಗಟ್ಟಿಮಾಡಿಕೊಂಡು “ಮತ್ತೆ ಅದೇ ವಿಷಯ ಮಾತಾಡುವುದು ನನಗಿಷ್ಟವಿಲ್ಲ, ನನಗೆ ಬಹಳಷ್ಟು ಕೆಲಸವಿದೆ. ಆಶ್ರಮದ ಪ್ರಸಾದ ಸೇವಿಸಿ ನೀವು ಹೊರಡಬಹುದು” ಎಂದಳು.

“ಸುಚಿತ್ರ, ಅಂತಃಕರಣ ತುಂಬಿದ ನೀನು ಹೀಗೆ ಮಾತಾಡುತ್ತಿರುವುದು ನಂಬಲಿಕ್ಕೇ ಅಸಾಧ್ಯವಾಗಿದೆ.” “ಹೌದು ಮಿಸ್ಟರ್ ಜಗನ್ನಾಥ್ ಪರಿಸ್ಥಿತಿ, ಕಾಲ ಎಂತಹವರನ್ನೂ ಬದಲಾಯಿಸುತ್ತದೆ. ನೀವು ಹಾಗೆ ಮಾಡಿದ್ದು ನನ್ನ ಪಾಲಿಗೆ ಒಳಿತೇ ಆಗಿದೆ. ನಾನಿಂದು ನಿಸ್ವಾರ್ಥದಿಂದ ಕೆಲಸ ಮಾಡಲು ಸಾಧ್ಯವಾಗಿದೆ. ಇಲ್ಲದಿದ್ದರೆ ನಾನೂ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿ ಸ್ವಾರ್ಥಿಯಾಗುತ್ತಿದ್ದೆ. ಅದಕ್ಕಾಗಿ ನಿಮಗೆ ವಂದನೆ.”

ಒಂದು ಕ್ಷಣ ಇಬ್ಬರ ಮನಸ್ಸ್ಸೂ ಐದು ವರ್ಷ ಹಿಂದಕ್ಕೋಡಿತು. ಜಗನ್ನಾಥ ಮತ್ತು ಸುಚಿತ್ರರದು ಅನ್ಯೋನ್ಯ ದಾಂಪತ್ಯ. ಅವರ ಪ್ರೇಮದ ಫಲವಾಗಿ ಒಂದು ಹೂ ಕೂಡ ಅರಳಿತ್ತು. ಎತ್ತರ ಮೈಮಾಟದ ಎಣ್ಣೆಗೆಂಪು ಬಣ್ಣದ ಸುಚಿತ್ರ ನಾಲ್ಕು ಜನರಲ್ಲಿ ಎದ್ದು ಕಾಣುವಂತಹ ಸೌಂದರ್ಯವುಳ್ಳವಳು. ರೂಪಕ್ಕೆ ತಕ್ಕ ಸೌಜನ್ಯ, ವಿನಯಗಳೂ ಅವಳಲ್ಲಿ ಮನೆ ಮಾಡಿತ್ತು. ಎಲ್ಲ ಕಡೆಯೂ ಮೆಚ್ಚುಗೆ ಗಳಿಸಿದ್ದಳು. ಗಂಡನಿಗೆ ಬರುವ ಅಲ್ಪ ಸಂಬಳದಲ್ಲಿಯೇ ಸಂಸಾರ ಸಾಗಿಸಿಕೊಂಡು ತಾನೂ ಅಕ್ಕಪಕ್ಕದವರ ಬಟ್ಟೆ ಹೊಲಿದು ಆರ್ಥಿಕ ಪರಿಸ್ಥಿತಿ ಏರುಪೇರಾಗದಂತೆ ಎಚ್ಚರವಹಿಸಿದ್ದಳು. ಒಟ್ಟಿನಲ್ಲಿ ಸಾಲಸೋಲ ಮಾಡದಂತೆ ಸಂಸಾರ ಸಾಗಿಸಿಕೊಂಡು ಬರುತ್ತಿದ್ದಳು. ಸಂಸಾರದ ಬಂಡಿ ಹತ್ತು ವರುಷ ಹೀಗೆಯೇ ಉರುಳಿತ್ತು. ಹಣ ಉಳಿಸಿ ಸೈಟು ಕೊಳ್ಳುವ ಯೋಜನೆಯನ್ನೂ ಹಾಕಿಕೊಂಡಿದ್ದಳು. ಆದರೆ ಸುಚಿತ್ರಳ ಮುಖದಲ್ಲಿ ಬಿಳಿಚುಕ್ಕೆಯೊಂದು ಕಾಣಿಸಿಕೊಂಡಿತ್ತು. ಏನೋ ಗಾಯದ ಕಲೆಯಿರಬಹುದೆಂದು ಭಾವಿಸಿದವಳಿಗೆ ಅದು ದಿನದಿಂದ ದಿನಕ್ಕೆ ಅಗಲವಾಗುತ್ತ ಹೋದಾಗ ಯೋಚನೆಯಾಯಿತು. ತಲೆಯಲ್ಲಿಯೂ ಬಿಳಿಗೂದಲು ಕಾಣಿಸಿಕೊಂಡು ತಿಂಗಳು ಕಳೆಯುತ್ತಿದ್ದಂತೆಯೇ ಕೈಕಾಲು, ಹೊಟ್ಟೆಯ ಮೇಲೆ ಅಲ್ಲಲ್ಲಿ ಬಿಳಿಯ ಚುಕ್ಕೆಗಳು ಹುಟ್ಟಿಕೊಂಡವು. ಆಗ ನಿಜವಾಗಲೂ ಭಯ ಶುರುವಾಯಿತು.

ವೈದ್ಯರ ಬಳಿ ತೋರಿಸಿದಾಗ ಅದು ಲ್ಯುಕೋಡರ್ಮಾ ಅಥವಾ ತೊನ್ನು ಎಂದು ಹೇಳಿದರು. ಇದೇನೂ ಕಾಯಿಲೆಯಲ್ಲ, ಚರ್ಮದಲ್ಲಿ ಮೆಲನಿನ್ ಕಡಿಮೆಯಾದಾಗ ಹೀಗಾಗುತ್ತದೆ. ಚಿಕಿತ್ಸೆಗೆ ದೀರ್ಘಾವಧಿ ಬೇಕು ಎಂದರು. ಅವರೇನೋ ಹೇಳಬೇಕಾದುದನ್ನು ಹೇಳಿದರು. ಆದರೆ ಅದನ್ನು ಕೇಳಿದಂದಿನಿಂದ ಸುಚಿತ್ರಳ ಮನಃಸ್ಥಿತಿಯೇ ಬದಲಾಯಿತು. ಊಟ ಸೇರುತ್ತಿರಲಿಲ್ಲ, ನಿದ್ರೆ ಬರುತ್ತಿರಲಿಲ್ಲ. ಕನ್ನಡಿಯ ಮುಂದೆ ನಿಂತುಕೊಂಡು ಬದಲಾಗುತ್ತಿರುವ ತನ್ನ ರೂಪವನ್ನು ಕಂಡು ಬೇಸರ, ದುಃಖವಾಗುತ್ತಿತ್ತು. ಕನ್ನಡಿಯನ್ನೇ ಒಡೆದು ಹಾಕುವಷ್ಟು ಕೋಪ ಬರುತ್ತಿತ್ತು. ಪತ್ರಿಕೆಯಲ್ಲಿ ಬರುತ್ತಿದ್ದ ಜಾಹಿರಾತುಗಳಿಗೆ ಮರುಳಾಗಿ ವೈದ್ಯರಿಂದ ವೈದ್ಯರಲ್ಲಿಗೆ ಅಲೆದಾಡಲಾರಂಭಿಸಿದಳು. ಚಿಕಿತ್ಸೆ ತೆಗೆದುಕೊಳ್ಳುತ್ತಿರುವಾಗ ಕಡಿಮೆಯಾದಂತೆ ಅನ್ನಿಸಿದರೂ ಬೇರೆಡೆಗೆ ಆರಂಭವಾಗಿರುತ್ತಿತ್ತು. ಆರಂಭದ ದಿನಗಳಲ್ಲಿ ಜಗನ್ನಾಥ ಡಾಕ್ಟರುಗಳ ಬಳಿ ಹೋಗುವಾಗ ಜೊತೆಗೆ ಬರುತ್ತಿದ್ದರೂ ನಂತರದ ದಿನಗಳಲ್ಲಿ ಬರುವುದಿರಲಿ, ಚಿಕಿತ್ಸೆಗೆ ಹಣ ಕೂಡಲು ಹಿಂದೆಗೆಯುತ್ತಿದ್ದ. ಅಲ್ಲದೇ ಮಾತು ಕಡಿಮೆ ಮಾಡಿದ್ದ. ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದ. ಬರಬರುತ್ತ ಅವಳನ್ನು ಕಂಡರೇ ಅಸಹ್ಯ ಪಡುತ್ತಿದ್ದ. ಸುಚಿತ್ರ “ಯಾಕೆ ಹೀಗೆ ಮಾಡ್ತಿ” ಎಂದು ಕೇಳಿದರೆ “ಮನೆಗೆ ಯಾಕೆ ಬರಬೇಕು ಅನ್ಸುತ್ತೆ. ನಿನ್ನನ್ನು ನೋಡಿ ನನ್ನೆಲ್ಲ ಉತ್ಸಾಹವೂ ಸೋರಿಹೋದಂತಾಗುತ್ತದೆ” ಎನ್ನುತ್ತಿದ್ದ. ಹೀಗೇ ದಿನ ಕಳೆಯುತ್ತಿರಲು ಜನನ್ನಾಥನಿಗೆ ಇನ್ನೊಬ್ಬ ಹೆಂಗಸಿನೊಡನೆ ಸ್ನೇಹವಾಯಿತು. ಒಂದೊಂದು ರಾತ್ರಿ ಅಲ್ಲಿಯೇ ಉಳಿಯುತ್ತಿದ್ದ. ಮನೆ ಖರ್ಚಿಗೆ ಹಣಕೊಡದೇ ಸತಾಯಿಸುತ್ತಿದ್ದ. ಸುಚಿತ್ರಳಿಗಂತೂ ಅತ್ತೂ ಅತ್ತೂ ಕಣ್ಣೀರು ಬತ್ತಿಹೋಗಿತ್ತು. ತೊನ್ನು ಅಂಟುರೋಗವಲ್ಲ. ನವೆ, ಉರಿ ಏನೂ ಇರುವುದಿಲ್ಲವಾದರೂ ಕಾಣಲು ಮಾತ್ರ ವಿರೂಪ ಉಂಟುಮಾಡುತ್ತದೆ ಎಂದು ಸುಚಿತ್ರಳಿಗೆ ಗೊತ್ತಿದ್ದರೂ ಹೊರಗೆ ಹೋಗಲು ನಾಚಿಕೆ, ಸಂಕೋಚ ಕಾಡುತ್ತಿತ್ತು. ಮದುವೆ ಮುಂತಾದ ಸಮಾರಂಭಗಳಿಗೆ ಹೋಗಬೇಕಾದಲ್ಲಿ ಅವನು ಸುಚಿತ್ರಳನ್ನು ಕರೆಯುತ್ತಿರಲಿಲ್ಲ. ಸುಚಿತ್ರಳಿಗೆ ಅಸಹನೆ ಕಾಡುತ್ತಿತ್ತು. ಒಂದು ದಿನ ಬೆಳಗ್ಗೆ ಆಫೀಸಿಗೆ ಹೋಗುವಾಗಲೇ “ಸಂಜೆ ಅತಿಥಿಯನ್ನು ಕರೆದುಕೊಂಡು ಬರ್ತೀನಿ ಅಡುಗೆ ಮಾಡಿಡು” ಎಂದು ಹೇಳಿ ಹೋಗಿದ್ದ. ಯಾರೋ ಅವನ ಗೆಳೆಯರು ಬರಬಹುದೆಂದು ಪಾಯಸ, ಚಪಾತಿ, ಪಲ್ಯ, ಬಿಸಿಬೇಳೆ ಭಾತ್, ಮೊಸರನ್ನ ಎಲ್ಲವನ್ನು ತಯಾರಿಸಿಟ್ಟಳು. ತಾನೂ ರೇಶಿಮೆ ಸೀರೆಯುಟ್ಟು ಕನ್ನಡಿ ನೋಡಿಕೊಂಡಾಗ ನೋಡಲಾಗದೇ ಕನ್ನಡಿಯನ್ನೇ ಎತ್ತಿಟ್ಟಳು.

ಕರೆಗಂಟೆ ಸದ್ದಾದಾಗ ಬಾಗಿಲು ತೆರೆದಳು. ಜಗನ್ನಾಥ ಅತಿಥಿಯನ್ನೇನೋ ಕರೆತಂದಿದ್ದ. ಆದರೆ ಅವನ ಜೊತೆ ಇದ್ದ ಹೆಂಗಸನ್ನು ಕಂಡು ಒಂದು ಕ್ಷಣ ಏನೂ ತೋಚದಂತಾಯಿತು. “ಸುಚಿತ್ರ ಈಕೆಯ ಹೆಸರು ಯಮುನಾ, ಇವತ್ತು ನಮ್ಮ ಮನೆಯಲ್ಲಿಯೇ ಉಳಿಯುತ್ತಾರೆ, ಹಸಿವಾಗಿದೆ. ಊಟಬಡಿಸು” ಎಂದ. ಅವರು ನಗುನಗುತ್ತ ಊಟ ಮಾಡುತ್ತಿದ್ದರೆ ಸುಚಿತ್ರಳಿಗೆ ಸಂಕಟವಾಗುತ್ತಿತ್ತು. ಅವರಿಬ್ಬರ ಮಧ್ಯೆ ಇರುವ ಸಲಿಗೆ ನೋಡಿ ಇವಳಿಗೆ ವಾಂತಿ ಬರುವಂತಾಗಿ ಗಂಡನನ್ನು ಒಳಗೆ ಕರೆದು ತಡೆಯದೇ “ಯಾರ್ರೀ ಇವಳು, ಮನೆಗ್ಯಾಕೆ ಕರೆದುಕೊಂಡು ಬಂದ್ರಿ?” ಎಂದು ಕೇಳಿದಳು.

“ಒಂಟಿಯಾಗಿ ವಾಸ ಮಾಡುತ್ತಿದ್ದಾಳೆ. ಪಾಪ, ಬೇಸರ ಇರುತ್ತದೆ ಅಂತ ಮನೆಗೆ ಕರೆದುಕೊಂಡು ಬಂದೆ”.
“ಅವಳ ಬೇಸರ ಕಳೆಯೋಕೆ ನೀವೇ ಸಿಕ್ಕಿದ್ರಾ? ನನಗೆ ಬೇಸರ ಆದ್ರೆ, ನಿಮಗೆ ಏನು ಅನ್ನಿಸೋದಿಲ್ಲವಾ? ಯಾರೋ ಅಪರಿಚಿತ ಹೆಂಗಸಿಗೆ ಬೇಸರವಾದರೆ ಮನಸ್ಸು ಮರುಗತ್ತದಲ್ಲ?”
“ಹೌದು, ಇವತ್ತು ಯಮುನಾ ಇಲ್ಲೇ ಇರ್ತಾಳೆ. ನೀನು ನನ್ನ ಹತ್ತಿರ ಕೇಳಿದ ಹಾಗೆ ಅವಳ ಬಳಿ ಏನೂ ಕೇಳಬೇಡ.”
“ಯಾಕೆ ಕೇಳಬಾರದು? ನಮ್ಮನೇಲಿ ಯಾಕಿರಬೇಕು?, ಆಕೆಗೂ, ನಿಮಗೂ ಏನು ಸಂಬಂಧ?”
“ಹೇಳಲೇಬೇಕಾ?”
“ಹೌದು”
“ಹಾಗಾದ್ರೆ ಕೇಳು, ಅವಳು ನನ್ನ ಗೆಳತಿ” ಅವನ ಮಾತು ಕೇಳಿ ಸುಚಿತ್ರಳ ಕೋಪ ಭುಗಿಲೆದ್ದಿತು.
“ನಾನು ಸತ್ತು ಹೋಗಿದೀನಿ ಅಂದುಕೊಂಡ್ರಾ? ಗೆಳತಿಯಂತೆ ಗೆಳತಿ…”
“ನೀನೀಗ ಇದ್ದೂ ಏನು ಪ್ರಯೋಜನ? ಮೈಯೆಲ್ಲ ತೊನ್ನು ಹತ್ತಿ ಕುರೂಪಿ ಆಗಿದೀಯಾ, ನಿನ್ನ ಮೈಮುಟ್ಟಲು ಮನಸ್ಸೇ ಬರುವುದಿಲ್ಲ. ಇದೇನೂ ಇನ್ನು ವಾಸಿಯಾಗೋದಿಲ್ಲ. ತಾಳಿ ಕಟ್ಟಿದ ತಪ್ಪಿಗೆ ಎರಡು ಹೊತ್ತು ಊಟ ಹಾಕ್ತೀನಿ” ಎಂದವನೇ ಯಮುನಾಳನ್ನು ಅವಳೆದುರಿಗೇ ತಮ್ಮ ಬೆಡ್‍ರೂಂಗೆ ಕರೆದೊಯ್ದ. ಆ ರಾತ್ರಿಯೆಲ್ಲ ಒಳಗಿನಿಂದ ನಗು ಕೇಳಿಬರುತ್ತಿದ್ದರೆ ಸುಚಿತ್ರಳ ಮನ ಇನ್ನಿಲ್ಲದಂತೆ ರೋದಿಸುತ್ತಿತ್ತು. ಅಂದಿನಿಂದ ಅವಳ ಬದುಕು ಜೀವಚ್ಛವದಂತಾಗಿತ್ತು. ತನ್ನೆದುರಲ್ಲಿ ನಡೆಯುವ ಅವರ ಶೃಂಗಾರಲೀಲೆಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ತಾನು ಮನುಷ್ಯಳೇ ಅಲ್ಲವೇನೋ, ಭಾವನೆಗಳೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದರು. ಎಲ್ಲವನ್ನು ಸಹಿಸಿಕೊಂಡು ಮಗನಿಗೋಸ್ಕರ ಅಲ್ಲಿಯೇ ಇದ್ದಳು.

ಆದರೆ ಯಮುನಾಳಿಗೆ ಅದೂ ಸಹಿಸಲಾಗಲಿಲ್ಲ. ಸದಾ ಮನೆಗೆಲಸದಲ್ಲಿ ಏನಾದರೂ ತಪ್ಪು ಹುಡುಕಿ ಬಯ್ಯುವುದೋ, ಇಲ್ಲವೇ ಜಗನ್ನಾಥನಿಗೆ ಚಾಡಿ ಹೇಳಿ ಹೊಡೆಸುವುದನ್ನೋ ಮಾಡುತ್ತಿದ್ದಳು. ಸುಚಿತ್ರಳಿಗೋ ಇಡೀ ಮೈಯೆಲ್ಲ ಹರಡಿ ಶ್ವೇತ ವರ್ಣ ಆವರಿಸುತ್ತಿತ್ತು. ಒಂದೆಡೆ ತಾನು ಯಾವ ತಪ್ಪು ಮಾಡದಿದ್ದರೂ ತೊನ್ನು ಹರಡಿದ ಬಗ್ಗೆ ದುಃಖವೆನಿಸಿದರೆ ಇನ್ನೊಂದೆಡೆ ಪತಿಯ ನಿರ್ಲಕ್ಷ ಧೋರಣೆ, ಅಸಡ್ಡೆ, ಯಮುನಾಳ ದರ್ಪ ಎಲ್ಲವೂ ಅವಳನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದವು. ಒಂದೊಂದು ಸಾರಿ ಅವಳಿಗನಿಸುತ್ತಿತ್ತು. ಅಕಸ್ಮಾತ್ ತನಗೆ ಬಂದ ಈ ತೊನ್ನು ಗಂಡನಿಗೆ ಬಂದಿದ್ದರೆ ತಾನು ಹೀಗೆ ಮಾಡುತ್ತಿದ್ದಳೆ? ಮದುವೆಯ ಅನುಬಂಧವೆಂದರೆ ಇಷ್ಟೇನಾ? ದೈಹಿಕ ಆಕರ್ಷಣೆಯೇ ಹೆಚ್ಚಾಯಿತೇ? ಹಿರಿಯರ ಸಮ್ಮುಖದಲ್ಲಿ ಅಗ್ನಿ ಸಾಕ್ಷಿಯಾಗಿ ವಿವಾಹವಾಗುವಾಗ “ಕಾಯಾ, ವಾಚಾ, ಮನಸಾ ನಾತಿಚರಾಮಿ” ಎಂದವನ ಮಾತು ಎಲ್ಲಿ ಹೋಯಿತು? ಕೇವಲ ಎರಡು ಹೊತ್ತು ಕೂಳಿಗಾಗಿ ಮಾತ್ರ ಬದುಕೇ? ಹೀಗೇ ನಾನಾ ಯೋಚನೆಗಳು ಆಕೆಯನ್ನು ಕಾಡತೊಡಗಿದವು. ಬರಬರುತ್ತ ಯಮುನಾಳಿಗೆ ಇವಳ ಇರುವಿಕೆಯೇ ಇಷ್ಟವಾಗುತ್ತಿರಲಿಲ್ಲ. ತನ್ನಂತೆ ಆಕೆಯೂ ಒಂದು ಹೆಣ್ಣು ಎಂಬುದನ್ನು ಮರೆತು ನಿಂದಿಸುತ್ತಿದ್ದಳು. ಎಲ್ಲವನ್ನೂ ಕಂಡು ರೋಸಿಹೋಗಿದ್ದ ಸುಚಿತ್ರ ಒಂದು ದಿನ ತನ್ನ ಬದುಕನ್ನು ಕೊನೆಗಾಣಿಸಿ ಕೊಳ್ಳಬೇಕೆಂದು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಕಡ್ಡಿಗೀರಿಕೊಳ್ಳಬೇಕೆಂದಾಗ ಮಗು ಅಡ್ಡಬಂದು ಗಲಾಟೆ ಮಾಡಿದ. ಆಗ ಎಲ್ಲರೂ ಓಡೋಡಿ ಬಂದರು.

ಯಮುನಾ ಸುಚಿತ್ರಳ ಜುಟ್ಟು ಹಿಡಿದು “ನಿನ್ನನ್ನ ಹೀಗೇ ಬಿಟ್ರೇ ನನಗೇ ಕಳಂಕ ತರ್ತೀಯಾ, ನೀನೇನಾದರೂ ಆತ್ಮಹತ್ಯೆ ಮಾಡಿಕೊಂಡರೆ ನಮ್ಮ ಮೇಲೆ ಕೇಸು ಬರುತ್ತೆ. ಹೊರಗೆ ನಡೀ, ಏನ್ರೀ ನೋಡ್ತಿದೀರಿ. ಕತ್ತು ಹಿಡಿದು ಹೊರಗೆ ತಳ್ಳಬಾರದೆ?” ಎಂದು ದಬಾಯಿಸಿದಳು. ಜಗನ್ನಾಥನೂ ಅವಳ ಜೊತೆ ಕತ್ತುಹಿಡಿದು ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡ. ರಾತ್ರಿ 11 ಗಂಟೆಯ ಸಮಯ, ಕಗ್ಗತ್ತಲೆಯಲ್ಲಿ ಒಬ್ಬಳನ್ನೇ ರಸ್ತಗೆ ತಳ್ಳಿ ಬಿಟ್ಟರಲ್ಲ ಎಂದು ನಡೆಯುತ್ತಿದ್ದಾಗ ಎಲ್ಲಿಗೆ ಹೋಗುವುದೆಂದು ತಿಳಿಯದೇ ರೈಲ್ವೆ ಟ್ರ್ಯಾಕ್ ಕಡೆಗೆ ಹೋಗಿದ್ದಷ್ಟೆ ನೆನಪು.

ನಂತರ ಕಣ್ಣುತೆರೆದಾಗ ಆಶ್ರಮದಲ್ಲಿದ್ದಳು. ಮಾತೆ ದೇವಿ ಪಕ್ಕದಲ್ಲಿ ಕುಳಿತಿದ್ದರು. “ನಿನ್ನ ಹೆಸರು ಏನಮ್ಮ?” ಸುಚಿತ್ರಳ ಕಣ್ಣೀರು ಕೋಡಿಯಂತೆ ಹರಿಯಲಾರಂಭಿಸಿತು. ಹೆಸರು ಗೊತ್ತಿಲ್ಲವೆಂಬಂತೆ ತಲೆ ಆಡಿಸಿದಳು. ಆಗ ಮಾತೆ “ನೀನು ಎಲ್ಲರಿಗಿಂತ ಬೆಳ್ಳಗಿದ್ದೀಯಲ್ಲ, ಶ್ವೇತಾದೇವಿ ಎಂದು ಕರೆಯಲೇ?” ಎಂದರು. ಯಾವುದರ ಕಾರಣದಿಂದ ತಾನು ಈ ಸ್ಥಿತಿಗೆ ಬಂದಿದ್ದಳೋ ಈಗ ಅದೇ ತನ್ನ ಹೆಸರಾಯಿತಲ್ಲ. ನಂತರದ ಜೀವನವೇ ಬದಲಾಯಿತು. ಆಶ್ರಮದಲ್ಲಿ ಸುರೂಪ, ಕುರೂಪವೆಂಬುದು ಇಲ್ಲವೇ ಇಲ್ಲ. ಎಲ್ಲವೂ ಎಲ್ಲರೂ ಒಂದೇ.

ನಡೆದದ್ದೆಲ್ಲವೂ ನೆನಪಿನ ಪರದೆಯ ಮೇಲೆ ಹಾದು ಹೋಗುತ್ತಿದ್ದ ಹಾಗೆ ಶ್ವೇತಾ ವಿಸಿಟರ್ಸ್ ರೂಮಿನಿಂದ ಆಚೆ ಬಂದು ಹಿಂತಿರುಗಿ ನೋಡದೆ ಕಾರಿಡಾರ್ ನಲ್ಲಿ ಬಿರಬಿರನೆ ನಡೆಯತೊಡಗಿದಳು. ಮಾಡಬೇಕಾಗಿದ್ದ ರಾಶಿ ಕೆಲಸಗಳು ಅವಳನ್ನು ಕೈಬೀಸಿ ಕರೆಯುತ್ತಿದ್ದವು.

ಡಾ. ವಸುಂಧರಾ ಭೂಪತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *