ಕಥಾ ಕ್ಷಿತಿಜ / ಯಾರ ನೋವು ಯಾರ ಮುಡಿಗೋ – ಅನು: ಎಂ.ಜಿ. ಶುಭಮಂಗಳ
ಇಷ್ಟು ದಿನ ಜೆಸ್ಸಿಯ ಮಗುವನ್ನೇ ಗರ್ಭದಲ್ಲಿ ಹೊರುತ್ತಿದ್ದೇನೆ ಅಂದುಕೊಂಡಿದ್ದಳು. ಈಗ ಅವನನ್ನು ನೋಡಿದ ಮೇಲೆ ಒಬ್ಬ ಪುರುಷನ ಮಗುವನ್ನು ಹೊರುತ್ತಿದ್ದೇನೆಂಬ ಭಾವನೆ ಅವಳಲ್ಲಿ ಅಸಹ್ಯ ಮೂಡಿಸುತ್ತಿದೆ. ಊಹಿಸದ ವಿಚಿತ್ರ ಆಲೋಚನೆಗಳು ಸುಳಿದಾಡುತ್ತಿವೆ. ಪಾಯಸ ತಿನ್ನಬೇಕೆಂಬ ಬಯಕೆಯಾಗಿ ಹಾಲು ತಂದುಕೊಂಡಿದ್ದಳು. ಅದು ಪಾತ್ರೆಯಲ್ಲಿ ಹಾಗೇ ಇದೆ. ಗೋಡೆಯ ಮೇಲೆ ಬಲೆಯಿಂದ ತಪ್ಪಿಸಿಕೊಂಡ ನೊಣವೊಂದು ಆಯ ತಪ್ಪಿ ಹಾಲಿನ ಬಟ್ಟಲಿಗೆ ಬಿದ್ದು ಪಟಪಟ ಹೊಡೆದುಕೊಳ್ಳುತ್ತಿದೆ.
ತೆಲುಗು ಮೂಲ: ಪೆದ್ದಿಂಟಿ ಅಶೋಕ್‍ಕುಮಾರ್
ನೀರ ಕೊಡ ಹಿಡಿದು ಬಾಗಿಲ ಬಳಿ ಬಂದ ವೆನ್ನೆಲ ಎದುರಿಗೆ ಬಂದ ವ್ಯಕ್ತಿಯನ್ನು ನೋಡಿ ಥಟ್ಟನೆ ನಿಂತಳು.
‘ಇಲ್ಲಿ ವೆನ್ನೆಲ ಯಾರು…?’ ಆ ವ್ಯಕ್ತಿ ಕೇಳಿದ.
‘ನೀವ್ಯಾರು…? ಆಯಾಸದಿಂದ ಕೇಳಿದಳು.
‘ನಾನು… ಸಲೀಂ.. ಫ್ರಂ ಜೆಡ್ಡಾ’ ಕತ್ತು ಕುಲುಕುತ್ತ ಹೇಳಿದ.
ಆ ಹೆಸರೂ ಯಾವತ್ತೂ ಕೇಳಿದಂತಿಲ್ಲ. ದಿಟ್ಟಿಸಿ ನೋಡುತ್ತ ‘ನಾನೇ.. ಏನು ಕೆಲಸ’ ಎಂದಳು ವೆನ್ನೆಲ.
‘ಅಯ್ಯೋ.. ನೀವಾ..!’ ಆತಂಕದಿಂದ ‘ಏನ್ರೀ ನೀವು.. ಹೀಗೆ ಭಾರ ಹೊರುವುದಾ’ ಎನ್ನುತ್ತಾ ಅವಳು ಹೊತ್ತಿದ್ದ ಕೊಡವನ್ನು ತೆಗೆದುಕೊಳ್ಳಲು ಹೋದ.
ವೆನ್ನೆಲ ದೂರ ಸರಿದರೂ ಹತ್ತಿರ ಬಂದು ಕೊಡವನ್ನು ತೆಗದುಕೊಂಡು ಕೆಳಗಿಡುತ್ತ ‘ನೀವು ತುಂಬು ಗರ್ಭಿಣಿ. ಭಾರ ಹೊರುವುದು ಒಳ್ಳೆಯದಲ್ಲ’ ಎಂದ ಸಲೀಂ.
ವೆನ್ನೆಲ ಕೋಪದಿಂದ ‘ಯಾರು ನೀವು..’ ಜೋರಾಗಿ ಕೂಗಿದಳು.
ಅವನು ಅವಳತ್ತ ಪ್ರೀತಿಯಿಂದ ನೋಡಿ ಸಲುಗೆಯಿಂದ ಎರಡು ಹೆಜ್ಜೆ ಮುಂದೆ ಹಾಕಿದ. ಅವಳು ಗಾಬರಿಯಿಂದ ಹಿಂದೆ ಸರಿದಳು.
ಜೆಸ್ಸಿ ಹೇಳಿರಲಾರಳು, ಹೇಳಿದ್ದರೂ ನಾನೇ ಎಂಬುದು ಗೊತ್ತಿರುವುದಿಲ್ಲ ಎಂದು ಯೋಚಿಸಿ ‘ನಾನು ನಿಮ್ಮ ಗರ್ಭದಲ್ಲಿರುವ ಮಗುವಿಗೆ ತಂದೆ’ ಹೇಳಿದ ಸಲೀಂ.
ವೆನ್ನೆಲಳಿಗೆ ಮೈ ಬೆವರತೊಡಗಿ ಭಯದಿಂದ ಸುತ್ತಲೂ ನೋಡಿದಳು. ಯಾರೂ ಕಾಣಿಸಲಿಲ್ಲ. ಅಬ್ಬಾ! ಸದ್ಯ ಯಾರೂ ಇಲ್ಲ ಎಂದುಕೊಂಡಳು. ಏನೋ ಸಂಕಟವಾಗಿ ಹೊಟ್ಟೆ ತೊಳೆಸಿದಂತಾಗುತ್ತಿದೆ. ಸ್ವಲ್ಪಹೊತ್ತು ನಿಂತು ಮನೆಯೊಳಗೆ ನಡೆದಳು. ಅವಳ ಹಿಂದೆಯೇ ಸಲೀಂ ಹೆಜ್ಜೆ ಹಾಕಿದ.
ಎರಡು ಕೋಣೆಗಳ ಚಿಕ್ಕ ಮನೆ. ನಿರ್ಮಾಣ ಹಂತದಲ್ಲಿರುವ ಕಟ್ಟಡ. ಇಟ್ಟಿಗೆಯ ಗೋಡೆಗಳಿಗಿನ್ನೂ ಸಿಮೆಂಟ್ ಪ್ಲಾಸ್ಟರಿಂಗ್ ಕೂಡ ಆಗಿಲ್ಲ. ಕೆಳಗೆ ಒರಟಾದ ಸಿಮೆಂಟ್ ನೆಲ. ಕಿಟಕಿಗಳಿಗೆ ಇನ್ನೂ ಸರಳು ಹಾಕಿಲ್ಲ. ಅಲ್ಲಲ್ಲಿ ಹಲ್ಲಿಯ ಗೂಡು, ಜೇಡರ ಬಲೆ.
ಮನೆ ನೋಡಿ ಸಲೀಂಗೆ ಸಂಕಟವಾಯಿತು. ಮನಸಿನ ಭಾವನೆ ಕಾಣಗೊಡದೆ ‘ನಮ್ಮೂರು ಇಲ್ಲೇ.. ಸಿರಿಸಿಲ್ಲಕ್ಕೆ ಹತ್ತಿರ. ನಾನು ಸೌದಿಗೆ ಹೋಗಿ ಬಹಳ ವರ್ಷಗಳಾದವು. ಜೆಸ್ಸಿ ಅಲ್ಲೇ ಪರಿಚಯವಾದಳು’ ಹೇಳಿದ.
ಅವನನ್ನು ದಾಟಿ ಒಳಗಿನ ಕೋಣೆಗೆ ಹೋದಳು. ಸಲೀಂ ಅಲ್ಲೇ ನಿಂತ. ಬಾಗಿಲ ಸ್ಥಾನವನ್ನು ಅಲಂಕರಿಸಿದ್ದ ಕರ್ಟನ್ ಗಾಳಿಗೆ ಅತ್ತಿತ್ತ ಹಾರುತ್ತಿದೆ.
ಅವಳು ಹೊರಗೆ ಬಂದು ತನ್ನನ್ನು ಕುಳಿತುಕೊಳ್ಳುವಂತೆ ಹೇಳುತ್ತಾಳೇನೋ ಎಂದು ಕಾಯುತ್ತಿದ್ದ ಸಲೀಂ. ಅವಳು ಹೊರಗೆ ಬರಲಿಲ್ಲ. ಅಡ್ರೆಸ್ ಹುಡುಕಿಕೊಂಡು ಬರಲು ಎರಡುಮೂರು ಗಂಟೆ ಅಲೆದಾಡಿದ ಅವನಿಗೆ ಕಾಲು ಸೋತುಹೋಗುತ್ತಿದೆ. ಸ್ವಲ್ಪ ಹೊತ್ತು ಮೌನವಾಗಿದ್ದು ‘ಮನೆಯಲ್ಲಿ ಯಾರೂ ಇದ್ದಂತಿಲ್ಲ. ಒಬ್ಬರೇ ಹೇಗಿದ್ದೀರಿ. ಈ ಸಮಯದಲ್ಲಿ ಹಾಸ್ಪಿಟಲ್‍ನಲ್ಲಿ ಇದ್ದಿದ್ದರೂ ಚೆನ್ನಾಗಿತ್ತು’ ಎಂದ ಸಲೀಂ.
ವೆನ್ನೆಲಳಿಗೆ ಅವನ ಮಾತು ಕೇಳಿ ಒಳಗೊಳಗೇ ಕಸಿವಿಸಿಯಾಗುತ್ತಿದೆ. ಇಷ್ಟು ದಿನ ಜೆಸ್ಸಿ ಎಂಬ ಹೆಣ್ಣನ್ನು ಮಾತ್ರ ನೋಡಿದ್ದಳು. ಆಕೆಯ ಮಗುವನ್ನೇ ಗರ್ಭದಲ್ಲಿ ಹೊರುತ್ತಿದ್ದೇನೆಂದುಕೊಂಡಿದ್ದಳು. ಈಗ ಸಲೀಂನನ್ನು ನೋಡಿದ ಮೇಲೆ ಒಬ್ಬ ಪುರುಷನ ಮಗುವನ್ನು ಹೊರುತ್ತಿದ್ದೇನೆಂಬ ಭಾವನೆ ಅವಳಲ್ಲಿ ಅಸಹ್ಯ ಮೂಡಿಸುತ್ತಿದೆ. ಊಹಿಸದ ವಿಚಿತ್ರ ಆಲೋಚನೆಗಳು ಸುಳಿದಾಡುತ್ತಿವೆ. ಕೌನ್ಸೆಲಿಂಗ್ ಮಾಡಿದಾಗ ಡಾಕ್ಟರ್ ಹೇಳಿದ ಮಾತುಗಳು, ನೀಡಿದ ಮಾಹಿತಿ ನೆನಪಿಗೆ ಬಂದರೂ ಮನಸ್ಸಿಗೆ ಸಮಾಧಾನವಾಗುತ್ತಿಲ್ಲ.
ಪಾಯಸ ತಿನ್ನಬೇಕೆಂಬ ಬಯಕೆಯಾಗಿ ಹಾಲು ತಂದುಕೊಂಡಿದ್ದಳು. ಅದು ಪಾತ್ರೆಯಲ್ಲಿ ಹಾಗೇ ಇದೆ. ಗೋಡೆಯ ಮೇಲೆ ಬಲೆಯಿಂದ ತಪ್ಪಿಸಿಕೊಂಡ ನೊಣವೊಂದು ಆಯ ತಪ್ಪಿ ಹಾಲಿನ ಬಟ್ಟಲಿಗೆ ಬಿದ್ದು ಪಟಪಟ ಹೊಡೆದುಕೊಳ್ಳುತ್ತಿದೆ. ಮಂಚದ ಕೆಳಗೆ ಬೆಕ್ಕು, ಗೋಡೆಯ ಮೇಲೆ ಹಲ್ಲಿ ತಮ್ಮ ಆಹಾರ ಅನ್ವೇಷಣೆಗೆ ಹೊಂಚು ಹಾಕುತ್ತಿವೆ.
ಸಲೀಂ ಉತ್ತರಕ್ಕಾಗಿ ಕಾದರೂ ಯಾವುದೇ ಉತ್ತರವಿಲ್ಲ. ಧೈರ್ಯ ಮಾಡಿ ಕರ್ಟನ್ ಪಕ್ಕಕ್ಕೆ ಸರಿಸಿ ನೋಡಿದ.
ಮೂಲೆಯಲ್ಲಿ ಒಂದು ಸೀಮೆಎಣ್ಣೆ ಸ್ಟವ್. ಸಲ್ಪ ಅಡುಗೆ ಸಾಮಗ್ರಿಗಳು. ಅದರ ಪಕ್ಕದಲ್ಲೇ ಹಗ್ಗದ ಮಂಚ. ಎರಡು ಹಳೆಯ ಹೊದಿಕೆಗಳು, ಒಂದು ಹರಿದ ಬಂತೆ, ಹತ್ತಿ ಹೊರಗೆ ಕಾಣುತ್ತಿರುವ ಎರಡು ದಿಂಬುಗಳು. ಗೋಡೆಗೆ ಕಟ್ಟಿರುವ ಹಗ್ಗದ ಮೇಲಿದ್ದ ಹಳೆಯ ಸೀರೆ, ಕುಪ್ಪಸಗಳನ್ನು ನೋಡಿ ಆ ಮನೆಯಲ್ಲಿ ಇನ್ನೊಬ್ಬ ಮಹಿಳೆಯಿರುವುದನ್ನು ಊಹಿಸಿ ಆಕೆಯ ತಾಯಿ ಇರಬಹುದು ಎಂದುಕೊಂಡ ಸಲೀಂ. ಜೆಸ್ಸಿ ಹೇಳಿದ ವಿವರಗಳ ಪ್ರಕಾರ ಆಕೆಗೆ ಗಂಡ, ಇಬ್ಬರು ಹೆಣ್ಣುಮಕ್ಕಳು, ಚಿಕ್ಕ ಮನೆಯಿರಬೇಕಿತ್ತು.
ಅವರನ್ನು ಹುಡುಕುತ್ತ ಕೋಣೆಯೊಳಗೆ ಹೆಜ್ಜೆಯಿಟ್ಟ. ಗಾಳಿಗೆ ಹಾರಾಡುತ್ತ ಮುಖಕ್ಕೆ ಬಡಿದ ಕರ್ಟನ್ ಪಕ್ಕಕ್ಕೆ ಸರಿದು ದಾರಿ ನೀಡಿತು. ವೆನ್ನೆಲ ಸ್ಟೌವ್ ಮತ್ತು ಮಂಚದ ನಡುವೆ ನಿಂತಿದ್ದಾಳೆ. ಹೆಜ್ಜೆಯ ಸದ್ದಿಗೆ ಹಿಂತಿರುಗಿ ನೋಡಿದಳು. ಈಗ ಒಬ್ಬರನ್ನೊಬ್ಬರು ಹತ್ತಿರದಿಂದ ನೋಡಿಕೊಂಡರು. ಅವನು ಅಕ್ಕರೆಯಿಂದ ನೋಡತೊಡಗಿದ. ಅವಳ ಕಣ್ಣು ಕೆಂಡದುಂಡೆಗಳಂತಾಗಿ, ದುರುಗುಟ್ಟಿಕೊಂಡು ನೋಡುತ್ತಿದ್ದಾಳೆ.
ಅವಳ ಗರ್ಭದಲ್ಲಿರುವ ತನ್ನ ಮಗುವನ್ನು ನೆನೆದು ಪುಳಕಿತನಾಗಿ ‘ಜೆಸ್ಸೀ’ಸ್ ಸೆಲೆಕ್ಷನ್ ಈಸ್ ಗುಡ್, ಸುಂದರ ಹೆಣ್ಣು ಎಂದು ಅವಳು ಹೇಳಿದಾಗ ಸುಳ್ಳೆಂದುಕೊಂಡೆ. ಎಷ್ಟೇ ಬಾಡಿಗೆ ತಾಯಿ ಅಂದರೂ ಕೆಲವು ಗುಣಗಳು ಬರುತ್ತವೆಂದು ಡಾಕ್ಟರ್ ಹೇಳಿದ್ದರು. ಈಕೆಯ ರೂಪವೇ ಬಂದರೆ ಚೆನ್ನಾಗಿರುತ್ತದೆ’ ಎಂದು ಸಲೀಂ ಮನಸಿನಲ್ಲಿ ಅಂದುಕೊಳ್ಳುತ್ತಿರುವಾಗಲೇ,
ವೆನ್ನೆಲ ಜೋರಾಗಿ ‘ಏಕೆ ಬಂದಿರಿ… ಹೊರಟುಹೋಗಿ..’ ಎಂದು ಕೂಗಾಡಿದಳು.
ಅವಳ ಕೋಪ ಶಮನ ಮಾಡಲು ನಿಧಾನವಾಗಿ ‘ಯಾವಾಗಲೂ ಜೆಸ್ಸಿ ಬರುತ್ತಿದ್ದಳಲ್ಲವಾ.. ಈ ಬಾರಿ ನಾನು ಬಂದಿದ್ದೇನೆ ಅಷ್ಟೇ!’ ಎಂದ.
ಅವನ ಮಾತು ಕೇಳಿಸಿಕೊಳ್ಳದೆ ‘ಹೊರಟುಹೋಗಿ.. ನೀವು ಇಲ್ಲಿ ಒಂದು ಕ್ಷಣ ಕೂಡ ಇರಕೂಡದು. ನೀವು ಬರುವ ಅಗತ್ಯವೇನಿತ್ತು..? ಏನಾದರೂ ಇದ್ದರೆ ಡಾಕ್ಟರ್ ಬಳಿ ಮಾತನಾಡಿ’ ನಿರ್ದಾಕ್ಷಿಣ್ಯವಾಗಿ ಹೇಳಿದಳು.
ಸಲೀಂ ‘ಪ್ಲೀಸ್.. ನನ್ನನ್ನು ಅರ್ಥ ಮಾಡಿಕೊಳ್ಳಿ. ನಾನು ನಿಮಗೆ ತೊಂದರೆ ಕೊಡಲು ಬರಲಿಲ್ಲ. ನೀವು ಪ್ರಶಾಂತವಾಗಿರಿ..’ ಎಂದ.
ವೆನ್ನೆಲಳ ಕೋಪ ದುಃಖಕ್ಕೆ ತಿರುಗಿ, ಕಣ್ಣೀರು ಸುರಿಸುತ್ತ ‘ನೀವ್ಯಾರೋ ನನಗೆ ಗೊತ್ತಿಲ್ಲ. ಮೊದಲು ಹೊರಗೆ ನಡೆಯಿರಿ’ ಕಿರುಚಿದಳು.
ಸಲೀಂ ‘ಮಾನಸಿಕವಾಗಿ ನಿಮ್ಮನ್ನು, ನಿಮ್ಮ ಕುಟುಂಬದವರನ್ನು ತಯಾರು ಮಾಡಿದ್ದೇನೆಂದು ಜೆಸ್ಸಿ ಹೇಳಿದಳು. ಆ ಧೈರ್ಯದಿಂದಲೇ ಬಂದೆ..’ ಹೇಳಿದ.
ಆದರೆ ‘ನೀವು ನಮ್ಮ ಮನೆಗೆ ಬರುವುದು ನಮ್ಮ ಅಗ್ರಿಮೆಂಟ್‍ನಲ್ಲಿಲ್ಲ’ ಬಿರುಸಾಗಿ ಹೇಳಿದಳು.
“ನೀವೀಗ ಸಂತೋಷವಾಗಿದ್ದರೆ ಮಾತ್ರ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ”
“ನಾನೀಗ ಸಂತೋಷವಾಗಿಯೇ ಇದ್ದೇನೆ”
“ಆದರೂ ಹತ್ತಿರವಿದ್ದು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಏನಾದರೂ ಆದರೆ ನಷ್ಟ ನಮಗೇ ಅಲ್ಲವಾ!..”
ಪೆಟ್ಟುತಿಂದವಳಂತೆ ನೋಡಿದಳು ವೆನ್ನೆಲ. ಜನ್ಮ ನೀಡುವುದರಲ್ಲಿ ಲಾಭನಷ್ಟಗಳನ್ನು, ಹೆರಿಗೆನೋವಿನಲ್ಲಿ ಪರಕೀಯತೆಯನ್ನು ಈಗ ಅರ್ಥಮಾಡಿಕೊಳ್ಳುತ್ತಿದ್ದಾಳೆ. ಒಪ್ಪಿಕೊಂಡಾಗ ಹೊರಗಿನ ಸಮಸ್ಯೆಗಳನ್ನು ಮಾತ್ರ ನೋಡಿದ್ದಳು. ಈಗ ಮನದಾಳದ ಆಲೋಚನೆಗಳು ಭಾರವಾಗುತ್ತಿದೆ. ಇದ್ದಕ್ಕಿದ್ದಂತೆ ಮನಸ್ಸು ಗಟ್ಟಿ ಮಾಡಿಕೊಂಡು ಅವನನ್ನು ವ್ಯಾಪಾರ ದೃಷ್ಟಿಯಿಂದಲೇ ‘ಆದರೂ ನೀವು ಬರಬಾರದಿತ್ತು..’ ಎಂದಳು.
‘ಹೌದು. ಆದರೆ ಬರಲೇಬೇಕಾಯಿತು. ಜೆಸ್ಸಿ ಒಂದು ಜವಾಬ್ದಾರಿಯನ್ನು ನನ್ನ ಮೇಲೆ ಬಿಟ್ಟುಹೋಗಿದ್ದಾಳೆ’ ಸಲೀಂ ಕಣ್ಣೀರು ಸುರಿಸುತ್ತ ಹೇಳಿದ.
ಜೆಸ್ಸಿಗೇನಾಯಿತು ಎಂಬಂತೆ ಒಮ್ಮೆಗೇ ಗಾಬರಿಯಿಂದ ನೋಡಿದಳು ವೆನ್ನೆಲ.
ಸಲೀಂ, ಜೆಸ್ಸಿ ಹೇಗೆ ಕನಸು ಕಂಡಿದ್ದಳು, ಹೇಗೆ ದೂರವಾದಳು ಎಂದೆಲ್ಲ ದುಃಖದಿಂದ ವಿವರಿಸಿದ.
ತನ್ನ ನಗುಮುಖ, ಮೃದುಮಾತು, ವರ್ತನೆಯಿಂದ ಬಹಳ ಆಪ್ತಳಾಗಿದ್ದ ಜೆಸ್ಸಿಯ ಸಾವಿನ ಸುದ್ದಿ ಕೇಳಿ ವೆನ್ನೆಲಳಿಗೆ ಬಹಳ ಸಂಕಟವಾಯಿತು. ಆದರೂ ತನ್ನಷ್ಟಕ್ಕೆ ಸಮಾಧಾನ ಮಾಡಿಕೊಂಡ ಅವಳು ಸಾಕಷ್ಟು ಎಚ್ಚರಿಕೆಯಿಂದ ‘ಹೋಗಿ. ಏನಾದರೂ ಹೇಳುವುದಿದ್ದರೆ ಡಾಕ್ಟರಿಗೆ ಹೇಳಿ. ಎಷ್ಟೋ ಸುಳ್ಳು ಹೇಳಿ ಬೇರೆಯವರ ಸಹಾನುಭೂತಿಯಿಂದ ಇಲ್ಲಿ ಬದುಕುತ್ತಿದ್ದೇನೆ. ಅದಕ್ಕೂ ಅಡ್ಡಗಲ್ಲಾದರೆ ಈಗಿರುವಷ್ಟು ಸಮಾಧಾನದಿಂದ ಕೂಡ ಇರಲಾರೆ’ ದೃಢವಾಗಿ ಹೇಳುತ್ತ ಹೊರಗಿನ ಕೋಣೆಗೆ ಬಂದಳು.
ಅವಳ ಹಿಂದೆಯೇ ಬಂದ ಸಲೀಂ ‘ವೆನ್ನೆಲ ಅವರೇ ನಾನು ನಿಮಗೆ ಹೆಚ್ಚು ತೊಂದರೆ ಕೊಡುವುದಿಲ್ಲ. ಜೆಸ್ಸಿ ಇದ್ದಿದ್ದರೆ ಹೀಗೆ ದೋಷಿಯಾಗಿ ನಿಮ್ಮ ಮುಂದೆ ನಿಲ್ಲುವ ಪರಿಸ್ಥಿತಿ ಬರುತ್ತಿರಲಿಲ್ಲ. ಅವಳ ಪ್ರತಿರೂಪವನ್ನಾದರೂ ಕ್ಷೇಮವಾಗಿ ನೋಡಿಕೊಳ್ಳಬೇಕೆಂಬುದೇ ನನ್ನ ಆಸೆ. ಅದಕ್ಕೆ ನಿಮ್ಮ ಸಹಕಾರ ಬೇಕು. ಈ ಸಮಯದಲ್ಲಿ ದಿನ ಬಿಟ್ಟು ದಿನ ಚೆಕಪ್ ಬಹಳ ಅಗತ್ಯ. ಡಾಕ್ಟರನ್ನು ಕೇಳಿದರೆ ನೀವು ಬರುತ್ತಿಲ್ಲವೆಂದೂ, ವಿಳಾಸ ಬದಲಾಯಿಸಿದ್ದೀರೆಂದೂ ಹೇಳಿದರು’ ಎಂದ.
ಅವಳು ನಿರ್ಲಿಪ್ತವಾಗಿ ‘ಸರಿ! ಇವತ್ತೇ ಹೋಗುತ್ತೇನೆ. ಮೊದಲು ನೀವು ಹೋಗಿ’ ಎಂದಳು.
ಸಲೀಂಗೆ ಮಾತು ಬೆಳೆಸಲು ಕಾರಣ ಸಿಗುತ್ತಿಲ್ಲ.
ವೆನ್ನೆಲ ಹೊಟ್ಟೆ ಒತ್ತಿಕೊಂಡು, ನೋವಿನಿಂದ ಎರಡು ಸೆಕೆಂಡು ಕಣ್ಣುಮುಚ್ಚಿ ಕುಳಿತಳು. ಕೂಡಲೇ ಆಯಾಸದಿಂದ ಎದ್ದು ಅತ್ತಿಂದಿತ್ತ ಓಡಾಡಿದಳು.
ಸಲೀಂಗೀಗ ಒಂದು ಚಿಕ್ಕ ಆಧಾರ ಸಿಕ್ಕಂತಾಗಿ ‘ನೋವಾಗುತ್ತಿದೆಯಾ..?’ ಗಾಬರಿಯಿಂದ ಕೇಳಿದ.
‘ಹೊಟ್ಟೆಯಲ್ಲಲ್ಲ. ಎದೆಯಲ್ಲಿ.. ಬಹಳ ದಿನಗಳಿಂದ’ ವ್ಯಂಗ್ಯವಾಗಿ ಹೇಳಿದಳು.
ಅದನ್ನವನು ಗಮನಿಸಿದಂತಿಲ್ಲ, ಆತಂಕದಿಂದ ‘ಅಯ್ಯೋ.. ಡಾಕ್ಟರಿಗೆ ಹೇಳಲಿಲ್ಲವಾ.. ನಿಮ್ಮ ಕೇಸ್‍ಷೀಟ್‍ನಲ್ಲಿ ಈ ಕಾಂಪ್ಲಿಕೇಷನ್ ಇಲ್ಲ. ಜೆಸ್ಟೇಷನಲ್ ಡಯಾಬಿಟೀಸ್, ಬಿ.ಪಿ. ಮಾತ್ರವೇ ಇದೆ. ಟ್ರೀಟ್‍ಮೆಂಟ್ ಹೆಸರಿನಲ್ಲಿ ನನ್ನ ಬಳಿ ಲಕ್ಷಾಂತರ ವಸೂಲು ಮಾಡುತ್ತಿದ್ದಾರೆ’ ಎಂದ.
ವೆನ್ನೆಲ ಅವನ ಮಾತನ್ನು ಪೂರ್ತಿ ಕೇಳಿಸಿಕೊಳ್ಳಲಿಲ್ಲ. ಕೇಳಿಸಿಕೊಳ್ಳುವ ಅಗತ್ಯವೂ ಇಲ್ಲವೆಂದುಕೊಂಡಳು. ಗಂಟಲು ಸರಿಪಡಿಸಿಕೊಳ್ಳುತ್ತ ಯಾರಿಗೋ ಹೇಳಿದಂತೆ ‘ಹೇಳಿದರೂ ಯಾರಿಗೂ ಅರ್ಥವಾಗುವುದಿಲ್ಲ’ ಎಂದಳು.
ಅವಳ ಮಾತಿನ ಒಳಮರ್ಮ ಸಲೀಂಗೆ ಅರ್ಥವಾಯಿತು. ಏನೋ ಹೇಳಹೋದನು, ಅಷ್ಟರಲ್ಲಿ ಬಾಗಿಲ ಬಳಿ ಯಾರೋ ಬಂದ ಶಬ್ದ. ಇಬ್ಬರೂ ಅತ್ತ ನೋಡಿದರು.
‘ಎನ್ನೀಲಾ.. ಇದ್ದೀಯಾ! ಶಬ್ದವೇ ಇಲ್ಲ. ನಿಮ್ಮ ಅಮ್ಮ ಇಲ್ಲವಾ..’ ಯಾರೋ ಹೆಂಗಸು ಬಂದಳು.
‘ಇಲ್ಲ ದೊಡ್ಡಮ್ಮಾ.. ಬೆಳಗ್ಗೆ ಫಂಕ್ಷನ್ ಹಾಲ್‍ನಲ್ಲಿ ಕೆಲಸಕ್ಕೆ ಹೋದಳು. ರಾತ್ರಿ ಬರುವುದಿಲ್ಲವೆಂದಳು’ ಹೇಳಿದಳು ವೆನ್ನೆಲ. ಬಂದಾಕೆ ಸಲೀಂನನ್ನು ದಿಟ್ಟಿಸಿ ನೋಡಿ ‘ಯಾರು..?’ ಎಂದಳು.
ವೆನ್ನೆಲ ತಡಬಡಾಯಿಸಿ ‘ನಮ್ಮ ದೊಡ್ಡಮ್ಮನ ಮಗ. ದೆಹಲಿಯಲ್ಲಿ ಇದ್ದಾನೆಂದು ಹೇಳಿದೆನಲ್ಲವಾ.. ಇವನೇ’ ಎಂದಳು.
ಅವಳು ವ್ಯಂಗ್ಯವಾಗಿ ‘ಏನಪ್ಪಾ.. ನಿಮ್ಮ ಭಾವ ನೋಡಿದೆಯಾ. ಈ ಕಡೆ ಮುಖ ಹಾಕಿಲ್ಲ. ಮಗ ಹುಟ್ಟಿದರೇನೇ ಬರುತ್ತಾನಂತೆ.. ಈ ಹೆರಿಗೆಗೆ ಅಲ್ಲೇ ಇಟ್ಟುಕೊಂಡಿದ್ದರೆ ಏನಾಗುತ್ತಿತ್ತು. ಪಾಪ.. ಅಮ್ಮ ಮಗಳು ಇಬ್ಬರೇ ಪರದಾಡುತ್ತಿದ್ದಾರೆ.. ಹೆಣ್ಣು ತನ್ನ ಗರ್ಭದಲ್ಲಿ ಮಗುವನ್ನು ಹೊರುತ್ತಾಳೇ ಹೊರತು ಗಂಡು, ಹೆಣ್ಣು ರೂಪಗಳನ್ನು ತಯಾರು ಮಾಡುವುದಕ್ಕಾಗುತ್ತದೆಯಾ… ನೀನಾದರೂ ಸ್ವಲ್ಪ ನಿಮ್ಮ ಭಾವನಿಗೆ ಬುದ್ಧಿ ಹೇಳು’ ಎಂದಳು.
ಬಾಯಿಬಿಟ್ಟರೆ ಏನು ತಲೆಗೆ ಬರುತ್ತದೋ ಎಂದು ಮೌನವಾಗಿದ್ದಾನೆ ಸಲೀಂ. ಸ್ವಲ್ಪ ಹೊತ್ತು ಇದ್ದ ಆಕೆ ‘ಮನೆಯಲ್ಲೇ ಇರುತ್ತೇನೆ, ಏನಾದರೂ ಬೇಕಾದರೆ ಹೇಳು. ತಕ್ಷಣ ಬರುತ್ತೇನೆ’ ಎಂದು ಹೇಳಿಹೋದಳು. ಹೋಗುತ್ತ ‘ಅಯ್ಯೋ.. ನೀರ ಕೊಡ ಬಾಗಿಲಲ್ಲೇ ಇಟ್ಟಿದ್ದೀಯ’ ಎಂದಳು.
ಕೂಡಲೇ ಕೊಡವನ್ನು ತಂದು ಒಳಗಿಟ್ಟ ಸಲೀಂ.
‘ಊರೆಲ್ಲರ ಸಮಾಚಾರ ಇವಳಿಗೆ ಬೇಕು. ಯಾರು ಏನಾದರೆ ಇವಳಿಗೇನು..’ ಎಂದು ಗೊಣಗಿಕೊಂಡಳು ವೆನ್ನೆಲ.
ಒದ್ದೆಯಾಗಿದ್ದ ಕೈ ಒರೆಸಿಕೊಳ್ಳುತ್ತ ‘ಏನಾಯಿತು. ನಿಮ್ಮ ಗಂಡ..’ ಕೆದಕಿದ ಸಲೀಂ.
“ನಿಮಗೆ ಹೇಳಬೇಕಾ..? ಈಗಲೇ ಇನ್ನೊಂದು ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡಿದ್ದೇನೆ” ಎಂದಳು ಕೋಪದಿಂದ ವೆನ್ನೆಲ.
“ಸರಿ.. ನಿಮಗಿಷ್ಟವಿಲ್ಲದಿದ್ದರೆ ಬೇಡ ಬಿಡಿ..”
“ಇನ್ನು ನೀವು ಹೊರಡುತ್ತೀರಾ..?”
“ಇದನ್ನು ಕೊಟ್ಟು ಹೋಗುತ್ತೇನೆ” ಎನ್ನುತ್ತ ಬ್ಯಾಗಿನಿಂದ ಸ್ವಲ್ಪ ಬಟ್ಟೆಗಳು, ಟಾನಿಕ್‍ಗಳು ಹೊರಗೆ ತೆಗೆದ.
ಅವನನ್ನು ಯಾಂತ್ರಿಕವಾಗಿ ನೋಡಿದಳು ವೆನ್ನೆಲ.
ಕವರಿನಿಂದ ಹೊಸ ನೋಟುಗಳನ್ನು ತೆಗೆದು ಆಕೆಗೆ ಕೊಡುತ್ತ ‘ಆಗಾಗ ವಿವರ ತಿಳಿದುಕೊಳ್ಳುತ್ತಿದ್ದೇನೆ. ಇತ್ತೀಚೆಗೆ ಪೇಪರ್‍ನಲ್ಲಿ ಓದಿದೆ. ಇಲ್ಲಿ ಇದೊಂದು ವ್ಯಾಪಾರವಾಗಿದೆಯಂತಲ್ಲವಾ.. ದಲ್ಲಾಳಿಗಳಿಂದಾಗಿ ನಿಮಗೆ ಸೇರಬೇಕಾದ್ದು ಸಿಗದಿರಬಹುದೆಂದು ಊಹಿಸಿದೆ. ಅದಕ್ಕೇ ರಹಸ್ಯವಾಗಿ ಈ ಹಣ ಕೊಡಬೇಕೆಂದು ಬಂದೆ..’ ಎಂದ ಸಲೀಂ.
ಅಷ್ಟು ಹೊತ್ತು ಅದುಮಿಟ್ಟುಕೊಂಡಿದ್ದ ಅಗ್ನಿಜ್ವಾಲೆ ಭುಗಿಲೆದ್ದು ಅವನು ಕೊಟ್ಟ ನೋಟುಗಳನ್ನು ಎಸೆಯುತ್ತ ‘ಇದೇ.. ಈ ನೋಟುಗಳೇ ನನ್ನ ಬಾಯಿಗೆ ಮಣ್ಣು ಹಾಕಿದ್ದು. ತುಂಬು ಸಂಸಾರದಲ್ಲಿ ಕಿಚ್ಚು ಹಚ್ಚಿದ್ದು. ನೀವೆಲ್ಲ ಚೆನ್ನಾಗೇ ಇದ್ದೀರ. ನಾನೇ.. ನಾನೇ ಕೆಟ್ಟುಹೋದೆ..’ ಬಿಕ್ಕಿ ಬಿಕ್ಕಿ ಅಳತೊಡಗಿದಳು ವೆನ್ನೆಲ.
ಸಲೀಂ ಅದುರಿಹೋದ. ನೋಟುಗಳನ್ನು ಆರಿಸುತ್ತ “ಜೆಸ್ಸಿ ಹೇಳಿದಳು. ನಿಮ್ಮ ಗಂಡನೇ ನಿಮ್ಮನ್ನು ಬಲವಂತವಾಗಿ ಒಪ್ಪಿಸಿದರಂತಲ್ಲವಾ! ಆಮೇಲೇನಾಯಿತು.. ಎನಿ ಪ್ರಾಬ್ಲಂ?” ಕೇಳಿದ.
‘ಏನಾಗುತ್ತದೆ.. ಅವನು ಮಾಡಿದ ಸಾಲ ತೀರಿತು. ಮನೆಗೆ ಅಂದುಕೊಂಡ ವಸ್ತುಗಳು ಬಂದವು. ಕಷ್ಟಗಳು ಕಳೆದವು. ಆಗ ಯೋಚಿಸಿದರೆ ನಾನು ಕೆಟ್ಟುಹೋದವಳಾದೆ’ ಅಳುತ್ತಲೇ, ‘ಆ ಹಣ ನೀವೇ ಇಟ್ಟುಕೊಳ್ಳಿ. ನನಗೆ ಆದ ಅನ್ಯಾಯವನ್ನು ಎಂದಿಗೂ ಅದು ಸರಿಪಡಿಸಲಾರದು’ ಎಂದು ಗೋಳಾಡಿದಳು.
“ಹಣ ಕೊಟ್ಟರೆ ಸಂತೋಷವಾಗಿರುತ್ತೀ ಕೊಂಡೆ.”
“ನಿಮಗೇನೂ ಭಯವಿಲ್ಲ. ಮುದ್ದಾದ ಮಗುವನ್ನು ಹೆತ್ತುಕೊಡುತ್ತೇನೆ.”
‘ಮಕ್ಕಳೆಂದರೆ ನನಗೆ ತುಂಬಾ ಇಷ್ಟ. ಒಂದು ಡಜನ್ ಮಕ್ಕಳನ್ನು ಹೆತ್ತುಕೊಡುವಂತೆ ಜೆಸ್ಸಿಯನ್ನು ಕೇಳುತ್ತಿದ್ದೆ. ನಿಮಗೊಂದು ವಿಷಯ ಹೇಳಬೇಕು. ಇಲ್ಲಿ ಭ್ರೂಣ ನಿಮ್ಮ ಹೊಟ್ಟೆಯಲ್ಲಿ ಬಿದ್ದಾಗಿನಿಂದ ಅಲ್ಲಿ ಜೆಸ್ಸಿಯಲ್ಲಿ ಈ ಅನುಭೂತಿ ನೋಡಿ ಸಂತೋಷಪಟ್ಟೆ. ಜೆಸ್ಸಿ ನನಗೋಸ್ಕರ ಗರ್ಭವತಿಯಂತೆ ನಟಿಸುತ್ತಿದ್ದಳು. ಏರ್ ಬಲೂನ್‍ನಿಂದ ಪ್ರತಿ ತಿಂಗಳು ಹೊಟ್ಟೆ ತುಂಬಿಕೊಳ್ಳುತ್ತಿದ್ದಳು. ಮಗು ಇಲ್ಲಿ ಬೆಳೆಯುತ್ತಿದ್ದೆಯೆಂಬ ವಿಷಯವನ್ನೇ ಮರೆತುಹೋದೆ. ಮೂರು ತಿಂಗಳಿಗೆ ಬಯಕೆ ಎಂದಳು. ಐದು ತಿಂಗಳಿಗೆ ಸೀಮಂತ ಮಾಡಿಕೊಂಡಳು. ಸೀಮಂತ ಆಗುವವರೆಗೂ ಹೊಸ ಸೀರೆ ಉಟ್ಟುಕೊಳ್ಳಲಿಲ್ಲ. ಹೊಸ ಬಳೆ ಹಾಕಿಕೊಳ್ಳಲಿಲ್ಲ. ನಮ್ಮ ಸಂಪ್ರದಾಯಗಳನ್ನು ಪಾಲಿಸುತ್ತ ನಟಿಸಿದಳು..’
ವೆನ್ನೆಲ ಅವನನ್ನು ವಿಚಿತ್ರವಾಗಿ ನೋಡಿದಳು. ನಿಧಾನವಾಗಿ ಬಂದು ಕುರ್ಚಿಯಲ್ಲಿ ಒರಗಿ ಕುಳಿತಳು.
ಸಲೀಂ ಹೇಳುತ್ತಲೇ ಇದ್ದಾನೆ. ‘ಎಲ್ಲ ನನಗಾಗಿಯೇ.. ನನ್ನ ಆಸೆ ಪೂರೈಸುವುದಕ್ಕೇ. ಪುರುಡು ಮನೆಯಂತೆ ಸಿದ್ಧಪಡಿಸಲು ಎಲ್ಲ ಸ್ಪ್ರೇ ತಂದುಕೊಂಡಿದ್ದಳು. ಇದ್ದಕ್ಕಿದ್ದಂತೆ ಒಂದು ದಿನ ಆಯಾಸದಿಂದ ಕಾಲು ಪಟ ಪಟ ಹೊಡೆಯುತ್ತ ಒದ್ದಾಡತೊಡಗಿದಳು. ಅಷ್ಟೊಂದು ನಟನೆ ಮಾಡುವ ಅಗತ್ಯವಿಲ್ಲಮ್ಮಾ ಎಂದು ಮುದ್ದುಗೆರೆದೆ. ಏನೋ ಸನ್ನೆ ಮಾಡಿದಳು. ಅರ್ಥವಾಗಲಿಲ್ಲ. ಅರ್ಥವಾಗುವ ವೇಳೆಗೆ ಅವಳಿಲ್ಲ…’ ಅವನ ಕಣ್ಣಲ್ಲಿ ನೀರು ತುಂಬಿಕೊಂಡಿತು.
ಅದೆಲ್ಲ ಕೇಳಿ ವೆನ್ನೆಲಳಿಗೆ ಆಶ್ಚರ್ಯವಾಗುತ್ತಿದೆ.
ಅವನು ಕಣ್ಣೊರೆಸಿಕೊಂಡು ಎದ್ದು ಬ್ಯಾಗ್ ಕೈಲಿಟ್ಟುಕೊಂಡು ‘ಹೊರಡುತ್ತೇನೆ..’ ಎಂದ.
ವಿನಾಕಾರಣ ಅವನನ್ನು ದ್ವೇಷಿಸಿದೆನಾ ಎನಿಸಿ ಅವಳು ‘ನಿಮ್ಮ ಆಸೆ ವಿಚಿತ್ರ ಎನಿಸಿದರೂ ನನಗೆ ಪಾಪವೆನಿಸುತ್ತಿದೆ. ತಾಯಿಯಾಗುತ್ತಿರುವ ಹೆಣ್ಣಿಗೆ ಪತಿ ಹತ್ತಿರವಿರಬೇಕೆಂದೆನಿಸಿದಂತೆ ತಂದೆಯಾಗುತ್ತಿರುವ ಪುರುಷನಿಗೂ ಕೆಲವು ಬಯಕೆಗಳಿರುತ್ತವೆಂದು ಈಗಲೇ ತಿಳಿದುಕೊಂಡೆ…’ ಅನುಕಂಪದಿಂದ ಹೇಳಿದಳು.
ಅವಳ ಮಾತಿನಿಂದ ಖುಷಿಯಾದ ಸಲೀಂ ‘ತುಂಬು ಗರ್ಭಿಣಿಯಾದ ನಿಮ್ಮನ್ನು ಕಣ್ತುಂಬ ನೋಡಬೇಕೆಂದು ಬಹಳ ಆಸೆಯಿತ್ತು. ಮೊದಲಿಗೆ ಹುಟ್ಟುವ ಮಗು ಜೆಸ್ಸಿಯಂತಿ ರಬೇಕೆಂದುಕೊಂಡಿದ್ದೆ. ಈಗ ಆ ಆತಂಕವಿಲ್ಲ. ನಿಮ್ಮಂತಿದ್ದರೆ ತುಂಬಾ ಸಂತೋಷ’ ಎಂದ.
ವೆನ್ನೆಲ ನಿಶ್ಚಲ ಸಮುದ್ರದಂತೆ ಮೌನವಾಗಿ ಕೇಳುತ್ತಿದ್ದಾಳೆ.
ಸಲೀಂ ಹೊರಡುತ್ತಿದ್ದಾನೆ. ಅವಳಿಗೀಗ ಅವನು ಬಂದಾಗ ಇದ್ದ ಭಯ, ಕೋಪವಿಲ್ಲ. ತಂಗಾಳಿ ಕೆನ್ನೆಗೆ ತಾಕಿದ ಅನುಭವ. ಹೊರಡುತ್ತ ಬಾಗಿಲ ಬಳಿ ನಿಂತು ಒಮ್ಮೆ ಹಿಂದೆ ತಿರುಗಿ ನೋಡಿದ ಸಲೀಂ. ಆ ನೋಟ ಎಲ್ಲ ಮಿತಿಗಳನ್ನು ದಾಟಿ ಅವಳ ಹೃದಯ ತಾಕಿತು.
ನಿಂತು.. ನಾಲ್ಕು ಹೆಜ್ಜೆ ಹಿಂದೆ ಬಂದ ಸಲೀಂ. ಏನು ಎಂಬಂತೆ ನೋಡಿದಳು ವೆನ್ನೆಲ. ‘ಒಮ್ಮೆ ನನ್ನ ಮಗುವಿನ ಹೃದಯಬಡಿತ ಕೇಳಬಹುದಾ..?’ ಕೇಳಿದ ಸಲೀಂ.
ವೆನ್ನೆಲಳಿಗೆ ಒಮ್ಮೆಗೇ ಶಾಕ್ ಹೊಡೆದಂತಾಗಿ ಎದೆ ಜೋರಾಗಿ ಬಡಿದುಕೊಳ್ಳುತ್ತಿದೆ. ಅವಳಿಗೆ ‘ನಾನು ಕೆಟ್ಟುಹೋಗಿದ್ದೇನಾ..?’ ಎಂದೂ ಬಾರದ ಪ್ರಶ್ನೆ ಎದುರಾಯಿತು. ‘ಗರ್ಭವನ್ನು ಬಾಡಿಗೆಗೆ ಕೊಡುವುದು ಔದಾರ್ಯವಾದಾಗ ಸ್ಪರ್ಶವನ್ನು ಕೂಡ ಬಾಡಿಗೆಗೆ ಕೊಡುವುದರಲ್ಲಿ ತಪ್ಪೇನು..?’ ಮನಸಿನಲ್ಲಿ ಗೊಂದಲ. ‘ಹೊರಟುಹೋಗುತ್ತಿದ್ದೀರಲ್ಲವಾ..?’ ಎಂದು ಮೆಲುದನಿಯಲ್ಲಿ ಕೇಳಿದಳು.
‘ಹೌದು, ಆದರೆ.. ಪ್ಲೀಸ್ ಎಂದು ವರ ಕೇಳಿಕೊಳ್ಳುವಂತೆ ಬೇಡುತ್ತಿದ್ದಾನೆ.
ಅವಳು ಒಳಗಿನ ಕೋಣೆಗೆ ಹೋದಳು. ಅವನು ಹಿಂಬಾಲಿಸಿದ. ಅವನ ಸ್ಪರ್ಶದಿಂದ ತಣ್ಣಗಿನ ವಸ್ತು ತಾಕಿದ ಅನುಭವವಾಗಿ ಝಲ್ಲೆಂದಿತು ವೆನ್ನೆಲಳಿಗೆ.
‘ಇದೇನು.. ಇವನ ಸ್ಪರ್ಶ ನಾನು ಕೂಡ ಬಯಸುತ್ತಿದ್ದೇನಾ..? ಅಯ್ಯೋ ದೇವರೇ.. ಇದೇನಿದು’ ಎಲ್ಲಿ ಅವನಿಗೆ ಸಲುಗೆಯಾಗಿಬಿಡುವೆನೋ ಎಂದುಕೊಂಡು ‘ನಿಮ್ಮ ನೋವನ್ನು ನೋಡಲಾರದೆ ಒಪ್ಪಿಕೊಂಡೆ’ ಎಂದಳು.
‘ತುಂಬಾ ಥ್ಯಾಂಕ್ಸ್’ ಸಂತೋಷದಿಂದ ಹೇಳಿದ ಸಲೀಂ.
‘ನನಗೆ ನನ್ನ ಕುಟುಂಬ ಮುಖ್ಯ. ನನ್ನ ಗಂಡ ಅಬಾರ್ಷನ್ ಮಾಡಿಸುವಂತೆ ಪೀಡಿಸಿದ, ಆದರೆ ಮಗುವನ್ನು ಸಾಯಿಸುವ ಮನಸ್ಸಾಗದೆ ಅವನ ಮಾತು ನಾನು ಕೇಳಲಿಲ್ಲ. ಅದಕ್ಕವನು ಆ ಮಗುವನ್ನು ತೊಲಗಿಸಿಕೊಂಡ ಮೇಲೆಯೇ ನನ್ನ ಮನೆಗೆ ಕಾಲಿಡು ಎಂದು ಕಟುವಾಗಿ ಹೇಳಿ ನನ್ನನ್ನು ಹೊರಹಾಕಿದ. ಇಲ್ಲಿ ಬಂದ ಮೇಲೆಯೇ ಅಮ್ಮನಿಗೆ ವಿಷಯ ಗೊತ್ತಾದದ್ದು. ಪ್ಲೀಸ್ ಈ ಜನ್ಮಕ್ಕೆ ಈ ಶಿಕ್ಷೆ ಸಾಕು. ಹುಟ್ಟುತ್ತಲೇ ನಿಮ್ಮ ಮಗುವನ್ನು ನೀವು ತೆಗೆದುಕೊಂಡು ಹೋಗಿ…’ ಎಂದಳು ವೆನ್ನಲ.
‘ನನಗೂ ಅದೇ ಬೇಕಿರುವುದು’ ಸಲೀಂ ಹೇಳಿದ.
ವೆನ್ನೆಲ ಬೆವರುತ್ತಿರುವುದನ್ನು ನೋಡಿ ಅವಳ ಭಯ ಅರ್ಥಮಾಡಿಕೊಂಡು ‘ಇಟ್ಸ್ ಅನ್ ಅನ್‍ಫಾರ್ಚುನೇಟ್ ಅಂಡ್ ಆಕ್ಸಿಡೆಂಟಲ್ ಥಿಂಗ್. ನಾವು ಒಬ್ಬರನ್ನೊಬ್ಬರು ಗುರ್ತಿಸಿಕೊಳ್ಳುವುದಿಲ್ಲ, ಮತ್ತೆ ಎಂದಿಗೂ ಭೇಟಿಯಾಗುವುದಿಲ್ಲ. ನಮ್ಮ ನಡುವೆ ಸಾವಿರಾರು ಮೈಲಿ ದೂರವಿದೆ. ಹೆದರಬೇಡಿ’ ಎಂದು ಧೈರ್ಯ ಹೇಳಿ ಹೊರಟ.
“ಮರೆಯಬೇಡಿ.. ಇತ್ತೀಚೆಗೆ ಜೆಸ್ಸಿ ಬರದಿದ್ದರಿಂದ ಬಹಳ ಭಯವಾಗಿತ್ತು. ಡೇಟ್ ಜನವರಿ ಹದಿನಾಲ್ಕು..” ಹೇಳಿದಳು ವೆನ್ನೆಲ.
‘ಅಲ್ಲ.. ಹದಿಮೂರೇ… ಡಾಕ್ಟರಿಗೆ ಹೇಳಿದ್ದೇನೆ. ಅವತ್ತು ಜೆರ್ಸಿ ಬರ್ತ್‍ಡೇ’ ಎನ್ನುತ್ತ ಹೊರಟ ಸಲೀಂ.
ವೆನ್ನೆಲ ‘ಈ ಗರ್ಭ ನನ್ನದಲ್ಲ. ಅದಕ್ಕೆ ನನ್ನ ಅಂಗೀಕಾರದ ಅಗತ್ಯವೇನಿದೆ’ ಎಂದು ನೊಂದುಕೊಂಡಳು.
ವೆನ್ನೆಲ ಎರಡು ವಾರಗಳ ನಂತರ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದಳು. ಸಲೀಂ ಹತ್ತಿರವಿದ್ದು ಎಲ್ಲವನ್ನೂ ನೋಡಿಕೊಂಡ.
ಕರುಳಿನ ಕುಡಿಯಿಂದ ಬಿಡಿಸಿಕೊಳ್ಳಲು ವೆನ್ನೆಲ ಮಾನಸಿಕವಾಗಿ ಸಿದ್ಧಳಾಗುತ್ತಿದ್ದಾಳೆ. ಆದರೂ ಮಗು ಮನಸನ್ನು ಕಟ್ಟಿಹಾಕುತ್ತಿದೆ.
ಆದರೆ.. ಆಘಾತಕಾರಿ ಸುದ್ದಿ. ಮಗು ಹುಟ್ಟುಕುರುಡಿ.
‘ಯಾರೂ ಏನೂ ಮಾಡಲಾಗುವುದಿಲ್ಲ. ಹಾರ್ಮೊನಲ್ ಇಂಬ್ಯಾಲೆನ್ಸ್ . ರೇರ್ ಕೇಸ್. ಬ್ಯಾಡ್‍ಲಕ್.. ಅಷ್ಟೇ!’ ಹೇಳಿ ಡಾಕ್ಟರ್ ಕೈಚೆಲ್ಲಿದಳು.
ಸಲೀಂ ಪರಾರಿಯಾದ.
ಇದಾವುದೂ ತಿಳಿಯದ ವೆನ್ನೆಲ ತಮ್ಮ ಬಾಂಧವ್ಯ ಗಟ್ಟಿಯಾಗುವ ಮೊದಲೇ ಮಗುವನ್ನು ದೂರ ಮಾಡುವಂತೆ ಡಾಕ್ಟರನ್ನು ಅಂಗಲಾಚುತ್ತಿದ್ದಾಳೆ.
ಎಂ.ಜಿ. ಶುಭಮಂಗಳ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.