FEATUREDಕಥಾ ಕ್ಷಿತಿಜ

ಕಥಾ ಕ್ಷಿತಿಜ / ನೆನಪುಗಳೇ ಹಾಗೆ – ಟಿ.ಎಸ್. ಶ್ರವಣ ಕುಮಾರಿ

ಒಬ್ಬಂಟಿಯಾಗಿರುವಾಗ ನೆನಪುಗಳೇ ಹತ್ತಿರದ ಸ್ನೇಹಿತ ತಾನೇ! ಕರೆದಾಗ ಬರುತ್ತವೆ. ಎಷ್ಟು ಕಾಲ ಬೇಕಾದರೂ ಜೊತೆಯಲ್ಲಿ ಇರುತ್ತವೆ. ಕೆಲವೊಮ್ಮೆ ಸಂತೋಷ ಕೊಡುತ್ತವೆ; ಕೆಲವೊಮ್ಮೆ ಭೂತದ ಹಾಗೆ ಎಷ್ಟು ಹೊತ್ತಾದರೂ ಹೋಗದೆ ಕಾಡುತ್ತವೆ … ಕಡೆಗೆ ನಮ್ಮ ತಲೆಗೆ ನಮ್ಮ ಕೈಯೇ…

ಹಾಸಿಗೆಯ ಮೇಲೆ ಒರಗಿ ಕಣ್ಮುಚ್ಚಿದ್ದವನಿಗೆ ಯಾರೋ ಬಂದರೆನಿಸಿ ಬಾಗಿಲ ಕಡೆಗೆ ಕಣ್ಣು ಹಾಯಿಸಿದ.  ಹಾ! ಹೌದು ಬಂದಿರುವುದು ಅವನೇ.. ಇವನು ಎಷ್ಟೋ ದಿನದಿಂದ ಕಾಯುತ್ತಾ ಇದ್ದವನು – ಬಾಗಿಲಲ್ಲಿ ನಿಂತು ಇವನತ್ತಲೇ ನೋಡುತ್ತಿದ್ದ….  ಮುದುಕ ಕಷ್ಟಪಟ್ಟು ತುಟಿ ಅಲುಗಿಸಿದ. “ಅಲ್ಲೇ ಯಾಕೆ ನಿಂತಿದ್ದೀಯ? ಬಾ ಒಳಗೆ.  ನೀನು ನನ್ನನ್ನು ಮರೆತೇಬಿಟ್ಟಿದ್ದೆಯೇನೋ ಅಂದುಕೊಂಡಿದ್ದೆ” ಅವನ ಧ್ವನಿ ಆಯಾಸದಿಂದ ನಡುಗುತ್ತಿತ್ತು. 

“ನಾನು ಮರೆಯುವುದಾ? ಅದು ಹೇಗೆ ಸಾಧ್ಯ?! ಬಾಗಿಲಲ್ಲಿ ನಿಂತಿದ್ದವನು ನಕ್ಕ. “ಈಗ ಬರುವುದು ಸ್ವಲ್ಪ ತಡವಾಯಿತೇನೋ ಅಷ್ಟೇ”. “ಬಾ ಇಲ್ಲೇ ಕೂತ್ಕೋ. ನಿಂಗೆ ಅವಸರವೇನೂ ಇಲ್ಲವಲ್ಲ” ತನ್ನ ಪಕ್ಕದಲ್ಲಿಯೇ ಹಾಸಿಗೆಯಲ್ಲಿ ಕೂರುವಂತೆ ಸೂಚಿಸಿದ. “ಅಂತಾದ್ದೇನೂ ಇಲ್ಲ. ಹೇಗಿದೀಯ.. ಹೇಗನ್ನಿಸ್ತಿದೆ ಇಲ್ಲಿ?”  “ಹೂಂ ಎಷ್ಟು ದಿನದಿಂದ ಕಾಯ್ತೀದೀನಿ; ನೀನು ಸಿಕ್ಕರೆ ಬಿಡುವಾಗಿ ಮಾತಾಡ್ಬೇಕೂಂತ. ನೀನೋ ಒಂದೆರಡು ಸಲ ಮುಖ ತೋರಿಸ್ದೋನು ಬೆನ್ನು ತಟ್ಟಿ ‘ಸುಧಾರಿಸ್ಕೋ; ಮತ್ತೆ ಬರ್ತೀನಿ’ ಅಂತ ಹೊರಟವನು ಇವತ್ತು ಮುಖ ತೋರಿಸ್ತಿದೀಯೆ” ಅವನನ್ನೇ ನೋಡುತ್ತಾ ಹೇಳಿದ “ಎಲ್ಲಾ ಚೆನ್ನಾಗಿದೆ; ಜೇಬಲ್ಲಿ ದುಡ್ಡಿದ್ಯಲ್ಲಾ.  ಆದ್ರೆ ಹುಡುಕ್ತಿದೀನಿ; ಯಾರ ಕಣ್ಣಲ್ಲೂ ನಾನು ಕಾಣಿಸ್ತಾನೇ ಇಲ್ಲ. ಉಶ್! ಸುಸ್ತಾಗ್ತಿದೆ” ನಿಧಾನವಾಗಿ ಹೇಳಿದ.  ಬಂದವನು ನಸುನಗುತ್ತಾ ಕೈಹಿಡಿದು ಅದುಮಿದ.  “ಪರವಾಗಿಲ್ಲ.  ಸುಧಾರಿಸಿಕೊಂಡೇ ಮಾತಾಡು.  ನಾನಿಲ್ಲೇ ಇದೀನಲ್ಲ”. 

“ಈಗೆಷ್ಟು ಗಂಟೆ?” ಮುದುಕ ಕೇಳಿದ”. ಮುಸ್ಸಂಜೆಯಾಗಿದೆ. ಅರುಗಂಟೆಯಾಗಿರಬೇಕು” ಬಂದಿದ್ದವನು ಹೇಳಿದ.  ಕಣ್ಣು ಮುಚ್ಚಿಕೊಂಡು ಯಾವುದೋ ಯೋಚನೆಯಲ್ಲಿ ಮುಳುಗಿದ್ದವನು ಸ್ವಲ್ಪ ಹೊತ್ತಿನ ನಂತರ “ಎಷ್ಟೋ ವರ್ಷಗಳ ಮೊದಲು ದಿನವೂ ಇಷ್ಟು ಹೊತ್ತಿಗೆ ಇಬ್ಬರು ಮಕ್ಕಳನ್ನೂ ಸಮುದ್ರ ತೀರಕ್ಕೆ ಕರೆದುಕೊಂಡು ಹೋಗುತ್ತಿದ್ದೆ.  ಕಿಟಕಿಯಲ್ಲಿ ನೋಡು. ಅಲ್ಲಿ ದೂರದಲ್ಲಿ ಅಲೆಗಳು ದಡಕ್ಕೆ ಬಡೀತಿರೋದು ಕಾಣಿಸ್ತಿದೆಯೇ. ಸೂರ್ಯ ಮುಳುಗ್ತಿರಬೇಕು. ಆ ಬೆಳಕು ನನ್ನ ಕಣ್ಣು ಚುಚ್ಚುತ್ತಿದೆ. ಕಣ್ಣು ಮುಚ್ಚಿಕೊಂಡೇ ನಿನಗೆ ಕತೆ ಹೇಳ್ತೀನಿ. ಹೇಳ್ಲಾ?” ಆಗಬಹುದೆಂದು ಗೋಣಾಡಿಸಿದ.  “ಅಲ್ಲಿ ಮರಳಲ್ಲಿ ಅಲೆಗಳೆದುರಿಗೆ ದಿನವೂ ಕಪ್ಪೆಗೂಡು ಕಟ್ಟೋದು; ದಡಕ್ಕೆ ಬಡಿದ ನೀರು ಅದನ್ನು ಕೊಚ್ಚಿಕೊಂಡು ಹೋದ ತಕ್ಷಣ ಚಪ್ಪಾಳೆ ತಟ್ಟಿ ನಗೋದು.  ಏನು ಸಂತೋಷಾಂತೀ ಅವರಿಬ್ಬರಿಗೂ.  ಸೂರ್ಯ ಮುಳುಗಿದ ಮೇಲೆ ಬಲವಂತವಾಗಿ ಅಲ್ಲಿಂದ ಕರಕೊಂಡು ಹೋಗಬೇಕು.  ಆ ಆಟ. ಆ ನಗು ಇನ್ನೂ ಕಿವಿಯಲ್ಲಿ ಗುಯಿಗುಡುತ್ತಿದೆ”.

“ಎಷ್ಟೋ ವರ್ಷಗಳ ಹಿಂದಿನ ಕತೆಯನ್ನು ಇಂದು ನಿನ್ನೆದೇನೋ ಅನ್ನೋ ಹಾಗೆ ಹೇಳುತ್ತಿದ್ದೀಯಲ್ಲ” ಬಂದವನು ನಕ್ಕ. “ಒಬ್ಬಂಟಿಯಾಗಿರುವಾಗ ನೆನಪುಗಳೇ ಹತ್ತಿರದ ಸ್ನೇಹಿತ ತಾನೇ. ಕರೆದಾಗ ಬರುತ್ತವೆ. ಎಷ್ಟು ಕಾಲ ಬೇಕಾದರೂ ಜೊತೆಯಲ್ಲಿ ಇರುತ್ತವೆ. ಕೆಲವೊಮ್ಮೆ ಸಂತೋಷ ಕೊಡುತ್ತವೆ; ಕೆಲವೊಮ್ಮೆ ಭೂತದ ಹಾಗೆ ಎಷ್ಟು ಹೊತ್ತಾದರೂ ಹೋಗದೆ ಕಾಡುತ್ತವೆ.” ಸ್ವಲ್ಪ ಹೊತ್ತು ಕಣ್ಮುಚ್ಚಿ ನೆನಪಿಸಿಕೊಳ್ಳತೊಡಗಿದ.

“ದೊಡ್ಡವರಾಗುತ್ತಾ ಆಗುತ್ತಾ ಅದೆಷ್ಟು ಜಾಣರಾದರೂಂತಿ ಇಬ್ಬರೂ… ಪಾಟ, ಆಟ ಎಲ್ಲದರಲ್ಲೂ ಮುಂದೇ… ಮಗ ಬಿ. ಇ. ನಲ್ಲಿ ಐದು ಚಿನ್ನದ ಪದಕ ತೊಗೊಂಡಿದ್ದ. ತುಂಬಾ ಚೆನ್ನಾಗಿ ಚೆಸ್ ಆಡ್ತಿದ್ದ. ಇಂಟರ್ ಕಾಲೇಜು, ಯುನಿವರ್ಸಿಟಿ ಲೆವೆಲ್ನಲ್ಲೆಲ್ಲಾ ಆಡಿ ಬಹುಮಾನ ತೊಗೋತಿದ್ದ. ಮೊದಮೊದಲಿಗೆ ಕಲಿಸಿದ್ದು ನಾನೇ.  ಬರ್ತಾ ಬರ್ತಾ ನನ್ನನ್ನೇ ಕಟ್ಟಿ ಹಾಕೋದ್ರಲ್ಲಿ ಪ್ರವೀಣ ಆಗಿಬಿಟ್ಟಾ”. “ನೀನೂ ಬಹಳ ಆಡುತ್ತಿದ್ದೆ ಅಲ್ವಾ?” “ಹಾಂ! ಒಂದು ಕಾಲದಲ್ಲಿ ನಾನೂ ಪ್ರವೀಣಾನೇ”. ಅಭಿಮಾನದಿಂದ ಹೇಳಿದ “ಆದರೆ ನಮಗಿಂತ ಮಕ್ಕಳು ಮುಂದು ಹೋಗಿದಾರೆ ಅಂದರೆ ಅದರ ಸಂತೋಷಾನೇ ಬೇರೆ ಅಲ್ವಾ. ಮಕ್ಕಳು ಮೇಲೆ ಮೇಲೆ ಹೋಗ್ತಾ ಇರೋವಾಗ ಹೆತ್ತವರ ಆ ಸಂತೋಷ… ಅಭಿಮಾನ… ಹೆಮ್ಮೆ… ಎದೆ ಬೀಗಿ ಬಿರಿದು ಹೋಗುವ ಆ ಭಾವ… “ಹೇಳ್ತಾ ಹೇಳ್ತಾ ಮುದುಕನ ಮುಖದ ಮೇಲೆ ಆ ಭಾವ ಮತ್ತೊಮ್ಮೆ ಸುಳಿದು ಮುಖದ ನೆರಿಗೆಗಳು ಮರೆಯಾಗುವಂತೆ ಬಿರಿಯಿತು. “ವಿಷಾದದ ವಿಷಯವೇನು ಗೊತ್ತಾ, ಹಾಗೆ ಮೇಲೆ ಮೇಲೆ ಹೋಗ್ತಾ ಹೋಗ್ತಾ ಯಾವಾಗ ನಮ್ಮ ಕೈಬಿಟ್ಟು ಹೋಗಿರ್ತಾರೋ ಗೊತ್ತಾಗೋದೇ ಇಲ್ಲ.  ಗೊತ್ತಾಗೋ ಹೊತ್ತಿಗೆ ಕಾಲ ಮಿಂಚಿರತ್ತೆ.  ಸೂತ್ರ ಕಿತ್ತ ಗಾಳಿಪಟದ ಹಾಗೆ ಸ್ವಲ್ಪ ಕಾಲ ನಮ್ಮ ಕಣ್ಣಿಗೆ ಕಾಣ್ತಾ ಇರತ್ತೆ, ಕೈಗೆ ಸಿಗಲ್ಲ; ಇನ್ನೂ ಸ್ವಲ್ಪ ಕಾಲ ಆದ್ಮೇಲೆ ಕಣ್ಣಿಗೂ ಕಾಣಲ್ಲ.  ಎಲ್ಲೋ ಹಾರಾಡ್ತಾ ಇದೆ; ಮೇಲೆ ಮೇಲಕ್ಕೆ ಹೋಗ್ತಾ ಇದೆ ಅಂತ ಅಂದುಕೊಂಡು ಸಮಾಧಾನವಾಗಿರ್ಬೇಕು ಅಷ್ಟೇ”. ಕಣ್ಮುಚ್ಚಿ ನೀಳವಾಗಿ ಉಸಿರೆಳೆದುಕೊಂಡ.

`ನಿನ್ನ ಮಗಳು – ಅವಳೆಲ್ಲಿ?” ಬಂದಾತ ಕೇಳಿದ.  ಮಗಳ ವಿಷಯ ಬಂದ ತಕ್ಷಣ ಮುದುಕನ ಮುಖವನ್ನು ಒಂದು ಪ್ರೀತಿಯ ಭಾವ ಆವರಿಸುತ್ತಾ ಬಂತು. ಆಯಾಸದಿಂದ ತಡೆತಡೆದು ಮಾತಾಡಿದ. “ಅವಳೆಂತಾ ಜಾಣೆ ಅಂತ… ಕಾಲೇಜಿನಲ್ಲಿ ತುಂಬಾ ಒಳ್ಳೆಯ ಹೆಸರಿತ್ತು.  ಓದಿನ ಜೊತೆ ಜೊತೆಗೇ ಹಾಡು, ಡ್ಯಾನ್ಸು, ನಾಟಕ, ಚರ್ಚಾ ಸ್ಪರ್ಧೆ… ಯಾವುದು ಕೇಳ್ತೀಯ ಎಲ್ಲದರಲ್ಲೂ ಮುಂದು. ಮನೇಲೂ, ಕಾಲೇಜಲ್ಲೂ ಎಲ್ಲರ ಕಣ್ಮಣಿ ಅವಳು..”. ಮುದುಕನ ಕಣ್ಣಂಚಿನಲ್ಲಿ ನೀರು ಹರಿಯತೊಡಗಿತು. “ನಾನು ತಪ್ಪು ಮಾಡಿದ್ನಾ? ನೀನೇ ಹೇಳು ನಂಗೆ ಕೋಪ ಬರಲ್ವ. ಹೆಣ್ಮಕ್ಕಳು ಸಹಜವಾಗೇ ಅಪ್ಪನಿಗೆ ಹತ್ತಿರವಾಗಿರ್ತಾರೆ. ಮಗುವಿದ್ದಾಗಿಂದ ನನಗಂಟಿಕೊಂಡೇ ಬೆಳೆದವಳು, ನನ್ನಲ್ಲಿ ಎಲ್ಲಾನೂ ಹಂಚಿಕೊಳ್ಳುತ್ತಿದ್ದವಳು, ಅಷ್ಟೇಕೆ.. ಆಳುವಾಗಲೂ ಅಪ್ಪಾ ಅಂತಾನೇ ಅಳ್ತಾ ಇದ್ದವಳು..

ಇದ್ದಕ್ಕಿದ್ದ ಹಾಗೇ ಒಂದಿನಾ ಬಂದು “ನಮ್ಮ ಲೆಕ್ಚರರ್ ಒಬ್ಬರನ್ನ ಪ್ರೀತಿಸ್ತಾ ಇದೀನಿ. ಅವರನ್ನೇ ಮದುವೆ ಆಗ್ತೀನಿ ಅನ್ನೋದ?” ಮುದುಕನ ಮುಖದಲ್ಲಿ ಕೋಪ ಮೂಡುತ್ತಿತ್ತು. “ನಾನಿನ್ನೂ ಅವಳ ಮದುವೆ ಯೋಚನೇ ಕೂಡಾ ಮಾಡಿರ್ಲಿಲ್ಲ. ಅಂಥಾದ್ರಲ್ಲಿ ಅವಳಿಗೆ ಹೇಗೆ ನನ್ನನ್ನ ಬಿಟ್ಟು ಹೋಗಬೇಕು ಅಂತ ಅನ್ನಿಸ್ತು ಹೇಳು? ಸರೀನಾ?  ಅದೂ… ಅವನು ಅವಳಿಗೆ ಜೋಡಿನೇ ಅಲ್ಲ. ಎಲ್ಲದರಲ್ಲೂ ಸಾಧಾರಣ. “ವಜ್ರಾನಾ ಹಿತ್ತಾಳೇಲಿ ಕಟ್ಟಬಾರದು ಮಗು” ಅಂತ ಎಷ್ಟೋ ಬುದ್ಧಿ ಹೇಳ್ದೆ. ಪ್ರೀತಿಯ ಮಂಕು ಆವರಿಸಿಕೊಂಡಿರೋವಾಗ ಹೆತ್ತೋರ ಮಾತು ರುಚಿಸುತ್ತಾ. ಕಡೇ ಅಸ್ತ್ರಾ ಅಂತ ‘ಇಬ್ಬರಲ್ಲಿ ಒಬ್ಬರನ್ನ ಆರಿಸ್ಕೋ’ ಅಂದೆ.  ಅವನನ್ನೇ ಆರಿಸಿಕೊಂಡಳು”.

ಕೋಪ ದುಃಖಕ್ಕೆ ತಿರುಗಿತು. “ಹೋಗ್ಲಿ ಸುಖ ಪಟ್ಲಾ? ನಾಲ್ಕೇ ವರ್ಷ; ಡೈವೋರ್ಸ್ ತೊಗೊಂಡು ಹೊರಗೆ ಬಂದಳಂತೆ. ಆಗ್ಲಾದ್ರೂ ನಾನು ಹಟ ಬಿಟ್ಟು ಕರೀಬೇಕಿತ್ತು.  ಅವ್ಳು ಬಿದ್ದಿದ್ಲಲ್ವಾ.. ನಾನು ಎತ್ಕೊಂಡು ಕರಕೋಬೇಕಿತ್ತು.  ಯಾರ ಹತ್ರಾನೋ ಹೇಳಿ ಕಳ್ಸಿದೆ. ಹಟದಲ್ಲಿ ನನ್ನ ಮೀರಿಸ್ತಾಳೆ. ಆಗ ಒಂದು ಸಲ ಬಂದು `ಅಪ್ಪಾ’ ಅಂತ ಕರೆದಿದ್ರೂ ನಾನು ಓಡಿ ಹೋಗಿ ತಬ್ಕೊಂಡು ಬಿಡ್ತಿದ್ದೆ.  ಬರ್ಲಿಲ್ಲಾ ಅವ್ಳು.  “ನನ್ನ ಅನ್ನ ನಾನು ಸಂಪಾದಿಸಿಕೊಳ್ತೀನಿ; ಕೆಟ್ಟು ನಿನ್ನ ಹತ್ರ ಬರಲ್ಲ” ಅಂತ ಹೇಳಿ ಕಳಿಸಿ ಕೆಲಸಾ ಹುಡುಕ್ಕೊಂಡು ಎಲ್ಲೋ ಫಾರಿನ್ಗೆ ಹೊರಟು ಹೋದಳು. ಚಿಕ್ಕವಳಿದ್ದಾಗಿನಿಂದ ಅವ್ಳ ಎಷ್ಟು ತಪ್ಪನ್ನು ನಾನು ಕ್ಷಮಿಸಿದ್ದೆ;  ಅವ್ಳು ನನ್ನ ಒಂದೇ ಒಂದು ತಪ್ಪನ್ನ ಕ್ಷಮಿಸಲಿಲ್ವಲ್ಲಾ. ಇದು ಸರೀನಾ ಹೇಳು” ಮುದುಕ ಅಕ್ಷರಶಃ ಬಿಕ್ಕುತ್ತಿದ್ದ. ಪಕ್ಕದಲ್ಲಿದ್ದವನು ಸಮಾಧಾನ ಪಡಿಸುವಂತೆ ಅವನನ್ನು ನೇವರಿಸತೊಡಗಿದ.

“ನಿಂಗೆ ಬೇಜಾರಾಗ್ತಾ ಇದ್ಯಾ?” ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಕೇಳಿದ ”ಹಾಗೇನಿಲ್ಲ; ನೀನು ಕರೀತಾನೇ ಇದ್ದೆ. ನನಗೇ ಬರಕ್ಕಾಗಿರಲಿಲ್ಲ; ಇವತ್ತು ಬಂದಿದೀನಲ್ಲ. ನಿಧಾನವಾಗಿ ನಿನಗೆ ಏನೇನು ಹೇಳಬೇಕೂಂತ ಅನ್ಸುತ್ತೋ ಹೇಳು. ಅಂದ ಹಾಗೆ ಇಷ್ಟು ಹೊತ್ತೂ ನಿನ್ನ ಮಕ್ಕಳ ಬಗ್ಗೇನೇ ಹೇಳಿದ್ಯಲ್ಲ; ನಿನ್ನ ಅಪ್ಪ, ಅಮ್ಮ, ಹೆಂಡತಿ, ತಮ್ಮ, ತಂಗಿ ನೆಂಟರಿಷ್ಟರು…”. “ನಂಗೆ ನನ್ನ ತಮ್ಮ ತಂಗೀಗೆ ಹೆಚ್ಚೇನೂ ವಯಸ್ಸಿನ ಅಂತರ ಇರ್ಲಿಲ್ಲ. ಮನೇಲಿ ಹೊಟ್ಟೆ ಬಟ್ಟೆಗೆ ನೇರವಾಗಿ ಇದ್ವಿ.  ಹಾಗಾಗಿ ನಮ್ಮಮ್ಮನಿಗೆ ಜಾಣತನದಲ್ಲಿ ಸಂಸಾರ ತೂಗಿಸೋದರಲ್ಲಿ ನಮ್ಮ ಬಗ್ಗೆ ಸ್ವಲ್ಪ ಗಮನ ಕಮ್ಮೀನೇ. ತಮ್ಮ, ತಂಗಿ ಬಿಡು, ಓದು, ಮದುವೆ ಆದ್ಮೇಲೆ ಆಗ ಈಗ ಒಂದೊಂದು ಸಲ ಮುಖ ತೋರಿಸ್ತಾ ಇದ್ರೇನೋ. ಅವರವರ ಸಂಸಾರದಲ್ಲೇ ಮುಳುಗಿ ಹೋದ್ರು. ಈಗಂತೂ ಇದಾರೋ ಇಲ್ವೋ ಅದೂ ಗೊತ್ತಿಲ್ಲ..  ಒಂದು ಎಂಟು ಹತ್ತು ವರ್ಷ ಆಗಿರ್ಬೋದೇನೋ ಅವ್ರನ್ನೆಲ್ಲ ನೋಡಿ. ಇನ್ನು ನೆಂಟರಿಷ್ಟರು… ನಾನು ಯಾರನ್ನೂ ಅಷ್ಟಾಗಿ ಹಚ್ಚಿಕೊಂಡವನಲ್ಲ. ಎಲ್ಲೋ ಯಾವುದೋ ಪಂಕ್ಷನ್ಗಳಲ್ಲಿ ನೋಡ್ತಿದ್ದಿದ್ದು ಅಷ್ಟೇ”.

ಸ್ವಲ್ಪ ಹೊತ್ತು ಸುಮ್ಮನಾದವನು ಮತ್ತೆ ಮುಂದುವರಿಸಿದ. “ಅಪ್ಪ ಅಮ್ಮ ಇಬ್ರೂ ಕಡೇ ತಂಕ ನನ್ನ ಜೊತೇನೇ ಇದ್ರು. ಅಮ್ಮ ತೀರಿಕೊಳ್ಳೋವಾಗ ನನ್ನ ಮಗನಿಗೆ ಇನ್ನೂ ಎರಡು ವರ್ಷ.  ಅಷ್ಟು ಸಣ್ಣ ಮಗೂನ ಕಟ್ಕೊಂಡು ಇವ್ಳು ಅದೆಷ್ಟು ಚೆನ್ನಾಗಿ ಅತ್ತೇನ ನೋಡ್ಕೋಂಡ್ಳೂಂತಿ, ಬಂದೋರ ಹತ್ರ ಎಲ್ಲಾ ಅಮ್ಮ ಹೇಳ್ತಿದ್ಳು “ಇವ್ಳು ನನ್ನ ಸೊಸೆ ಅಲ್ಲಾ, ನನ್ನ ಅಮ್ಮಾ” ಅಂತ. ಕ್ಯಾನ್ಸರ್ ಆಗಿತ್ತು. ಬಹಳಾ ಸಂಕಟ ಪಡ್ತಾ ಇದ್ಳು ಕಡೆಗಾಲದಲ್ಲಿ. ಅಪ್ಪ ಮೊದಲಿಂದಲೂ ಒಂದು ತರಹಾ ಮನುಷ್ಯ. ‘ಎಲ್ಲವೂ ಬೇಕು; ಏನೂ ಬೇಡ’ ಅನ್ನೋ ಹಾಗೆ. ಆಸ್ಪತ್ರೆಗೆ ಕರಕೊಂಡು ಹೋಗಿಬಂದ್ರೆ, ದಿನಕ್ಕೊಂದು ಸಲ ಅಮ್ಮನ್ನ ‘ಹೇಗಿದೀಯಾ’ ಅಂತ ಕೇಳಿದ್ರೆ ಅವರ ಡ್ಯೂಟಿ ಆಯ್ತು ಅಂದುಕೊಂಡಿದ್ರು. ಅಮ್ಮನೂ ಇನ್ನೇನೂ ನಿರೀಕ್ಷೆ ಮಾಡಲಿಲ್ಲವೋ ಏನೋ; ಆದ್ರೂ ಅಪ್ಪ ಅಮ್ಮನ್ನ ತುಂಬಾ ಹಚ್ಚಿಕೊಂಡಿದ್ರೂಂತ ಕಾಣತ್ತೆ.  ಅವ್ಳು ಹೋದಮೇಲೆ ತುಂಬಾ ಸಪ್ಪಗಾಗಿ ಬಿ‌ಟ್ರು. ವರ್ಷದೊಳಗೇ ಹೊರಟುಬಿಟ್ರು. ಖಾಯಿಲೆ ಕಸಾಲೆ ಇಲ್ಲಾ. ಒಂದಿನ ಮಲಗ್ದವ್ರು ಬೆಳಗ್ಗೆ ಏಳಲೇ ಇಲ್ಲಾ.. ಅನಾಯಾಸ ಮರಣ.  ಸುಖಪುರುಷರು..”.

“ನನ್ನಾಕೆ ಹೇಗಿದ್ಳು ಗೊತ್ತ?” ಕನಸಿನಲ್ಲಿರುವಂತೆ ಹೇಳತೊಡಗಿದ. ನನ್ನ ಮದುವೆಯಾದಾಗಿನಿಂದ, ಅವ್ಳು ಇರೋವರೆಗೆ ನನಗೆ ಕಷ್ಟ ಅಂದ್ರೆ ಏನೂ ಅಂತ ಗೊತ್ತೇ ಆಗಲಿಲ್ಲ. ಸಂಸಾರ ಪೂರಾ ಒಬ್ಳೇ ನಿಭಾಯಿಸ್ತಾ ಇದ್ಳು. ಮಕ್ಕಳಿಂದ ನಮಗೆ ಅಷ್ಟು ನೋವಾದರೂ, ಯಾರನ್ನೂ ದೂರಲಿಲ್ಲ. “ಮಕ್ಳು ಒಂದು ತಪ್ಪು ಮಾಡಿದ್ರೂಂತ ಅವ್ರು ನಮಗೆ ಕೊಟ್ಟ ಸುಖ, ಸಂತೋಷ ಪ್ರೀತಿ ಎಲ್ಲಾ ಮರೆಯಕ್ಕಾಗುತ್ತಾ. ನಮ್ಮ ಋಣ ಅಷ್ಟೇ ‘ಹಣೆಬರಕ್ಕೆ ಯಾರು ಹೊಣೆ’ ಅಂತಿದ್ಲು. ನನ್ನನ್ನೇ ಮಕ್ಕಳ ಹಾಗೆ ನೋಡ್ಕೋಳೋವ್ಳು. ನನಗೊಂದು ಸಣ್ಣ ತಲೆನೋವು ಬಂದರೂ ಸಾಕು, ಸ್ಟ್ರಾಂಗ್ ಕಾಪಿ ಮಾಡಿಕೊಟ್ಟು, ಎಷ್ಟು ಪ್ರೀತಿಯಿಂದ ತೊಡೆಯ ಮೇಲೆ ಮಕ್ಕಳನ್ನು ಮಲಗಿಸಿಕೊಳ್ಳುವ ಹಾಗೆ ಮಲಗಿಸಿಕೊಂಡು ಅಮೃತಾಂಜನ ಹಚ್ಚಿ, ನೋವು ಕಮ್ಮಿಯಾಗೋವರ್ಗೂ ಹಿತವಾಗೋ ಹಾಗೆ ತಲೆ ಒತ್ತುತ್ತಾ ಇರ್ತಾ ಇದ್ಳು ಅಂದ್ರೆ ಆಗಾಗ ತಲೆನೋವು ಬರ್ತಾ ಇರ್ಲಿ ಅಂತ ಆಸೆ ಪಡೋ ಹಾಗಾಗೋದು.

“ಅವ್ಳಿಗೇನಾಗಿತ್ತು?” ಅವನು ಕೇಳಿದ.  ಈಗಿವನು ಗದ್ಗದಿತನಾದ.  ಏನೂಂತ ಹೇಳ್ಳಿ?  ಮಕ್ಕಳು ದೂರವಾದ ಮೇಲೆ ತುಂಬಾ ಒಂಟಿತನ ಅನುಭವಿಸ್ತಾ ಇದ್ಳೋ ಏನೋ. ನನಗೆ ಏನೇ ನೋವಾದ್ರೂ ಅವ್ಳು ಹಂಚಿಕೊಳ್ಳೋವ್ಳು; ಆದ್ರೆ ಅವ್ಳಿಗೂ ಹಾಗೇ ಯಾವಾಗ್ಲಾದ್ರೂ ನೋವಾಗ್ತಿತ್ತೇನೋ ಅಂತ ಈಗನ್ಸುತ್ತೆ. ನಂಗೆ ಅವ್ಳ ಹಾಗೆ ಅರ್ಥ ಮಾಡ್ಕೊಳ್ಳೋಕೆ ಬರ್ತಿರ್ಲಿಲ್ಲ. ಮಗ್ಳ ಬಗ್ಗೆ ಅಷ್ಟು ಪ್ರೀತಿ ತೋರಿಸ್ತಿದ್ದೋನು ಹೆಂಡತಿ ಬಗ್ಗೆ ವ್ಯಕ್ತಪಡಿಸಕ್ಕೆ ಯಾಕೆ ಹಿಂಜರೀತಿದ್ದೆ – ಈಗ್ಲೂ ಅರ್ಥವಾಗ್ತಿಲ್ಲ. ಅಮ್ಮಂಗೆ ಬಂದ ಖಾಯಿಲೇನೇ ಇವ್ಳುನ್ನೂ ತಿಂದ್ಕೊಂಡುಬಿಡ್ತು.  ನೋಡ್ಕೋಳ್ಳಕ್ಕೆ ಒಬ್ಬ ನರ್ಸನ್ನಿಟ್ಟೆ. ಅಪ್ಪನ ತರಹಾನೇ ಆಸ್ಪತ್ರೇಗೆ ಕರಕೊಂಡು ಹೋಗ್ತಿದ್ದೆ. ಆಗಾಗ ‘ಹೇಗಿದೀಯ’ ಅಂತ ಸ್ವಲ್ಪ ಹೊತ್ತು ಪಕ್ಕದಲ್ಲಿ ಕೂತಿರ್ತಿದ್ದೆ. ನನಗಿನ್ನೇನೂ ತೋಚ್ತಾ ಇರ್ಲಿಲ್ಲ. ಅದೆಷ್ಟು ಸಂಕಟ ಅನುಭವಿಸ್ತಾ ಇದ್ಳೋ ಏನೋ. 

ಒಂದಿನ.. ಮುದುಕ ತಡೆ ತಡೆದು ಕಷ್ಟಪಟ್ಟುಕೊಂಡು ಹೇಳಿದ. “ಐ.ಪಿ.ಎಲ್. ಕ್ರಿಕೆಟ್ ಮ್ಯಾಚು.. ಆರ್.ಸಿ.ಬಿ.ನವರು ಗೆಲ್ಲೋ ಹಂತದಲ್ಲಿದ್ರು. ʻಕರೀತಾ ಇದಾರೆʼ ಅಂತ ನರ್ಸ್ ಬಂದು ಹೇಳಿದ್ಳು.  ಮನಸ್ಸಿಲ್ಲದ ಮನಸ್ಸಿನಿಂದ ಕೋಣೆಯೊಳಗೆ ಹೋದೆ.  ನೋವಿನಿಂದ ಅವಳ ಮುಖ ಹಿಂಡಿ ಹೋಗಿತ್ತು. “ಇಲ್ಲಿ ಕೂತ್ಕೊಳ್ಳಿ ಅಂತ ಸನ್ನೆ ಮಾಡಿದಳು.‘ಏನಾದ್ರೂ ಹೇಳ್ಬೇಕಾ’ ಎಂದೆ.‘ಹೂ’ ಎನ್ನುವಂತೆ ತಲೆಯಾಡಿಸಿದಳು”. ಐದೇ ಐದು ನಿಮಿಷ ಇರು; ಕಡೇ ಎರಡು ಓವರ್ ಇದೆ. ಮುಗಿದ ತಕ್ಷಣ ಬರ್ತೀನಿ” ಎನ್ನುತ್ತಾ ಮತ್ತೆ ಆಟ ನೋಡಲು ಹೋದೆ. ಆಟ ಮುಗೀತು; ಆರ್.ಸಿ.ಬಿ.ಯವರು ಗೆದ್ದಿದ್ರು. ಇನ್ನೈದು ನಿಮಿಷ ಪ್ರೆಸೆಂಟೇಷನ್ ಸೆರ್ಮನಿ ನೋಡಿಕೊಂಡು ಅವಳ ಹತ್ರ ಹೋದೆ. ಆದ್ರೆ ಅಷ್ಟರಲ್ಲಿ ಅವಳ ಆಟ ಮುಗಿದಿತ್ತು…  ನಾನು ಸೋತಿದ್ದೆ..”. ಈಗ ಮುದುಕ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅಳುತಿದ್ದ. “ಅವಳಿಗೆ ಏನು ಹೇಳಲಿಕ್ಕೆ ಇತ್ತೋ ಏನೋ. ಒಂದು ಕ್ಷಣ ನಾನೂ ಅವಳು ಮಾಡಿದ ಹಾಗೆ ಅವಳನ್ನು ನನ್ನ ತೊಡೆಯ ಮೇಲೆ ಮಲಗಿಸಿಕೊಂಡು ಪ್ರೀತಿಯಿಂದ ಅವಳನ್ನು ಕೇಳಬಹುದಿತ್ತೋ ಏನೋ. ನನ್ನ ಇಡೀ ಜೀವನವನ್ನೇ ಕಟ್ಟಿಕೊಟ್ಟ ದೇವತೆಗೆ ನಾನು ಅಷ್ಟೂ ಮಾಡಲಿಲ್ಲ”.

ಕುಳಿತಿದ್ದವನು ಮುದುಕನ ತಲೆಯನ್ನೆತ್ತಿ ತನ್ನ ತೊಡೆಯ ಮೇಲಿರಿಸಿಕೊಂಡು ಕಣ್ಣೀರೊರಸಿದ. ಸಮಾಧಾನವಾಗುವ ತನಕ ಅವನ ತಲೆಯನ್ನು ನೇವರಿಸತೊಡಗಿದ.  “ನಾನು ಮಾಡಿದ ತಪ್ಪಾದರೂ ಏನು?ತುಂಬಾ ಒಳ್ಳೆಯವನಲ್ಲ; ನಿಜ ಆದರೆ ಇಷ್ಟೊಂದು ಪಾಪಿಯೇ? ಈಗ ಇಷ್ಟು ಒಂಟಿಯಾಗಿಬಿಟ್ಟೆನಲ್ಲ? ಎಲ್ಲರನ್ನೂ ಕಳೆದುಕೊಂಡು ಬಿಟ್ಟೆ.  ಮಕ್ಕಳ್ಯಾರಾದ್ರೂ ಬಂದು ಒಂದ್ಸಲ ‘ಅಪ್ಪಾ’ ಎಂದು ಕರೆದಿದ್ದರೆ!” ಬಂದವನ ಕೈಯನ್ನು ತನ್ನ ಎದೆಯ ಮೇಲಿಟ್ಟುಕೊಂಡು ಕೇಳಿದ.

“ಎಲ್ಲೋ ಸುಖವಾಗಿದ್ದಾರೆ ಅಂದುಕೊಂಡು ಬಿಡು. ಅವರವರ ತಾಪತ್ರಯವೇನೋ.   ಇದು ನಿನ್ನೊಬ್ಬನ ಕತೆ ಅಲ್ಲ. ಒಬ್ಬರೇ ಬರ್ತೀವಿ.  ಒಬ್ಬೊಬ್ಬರಾಗಿ ನಮ್ಮ ಜೀವನದಲ್ಲಿ ಬರ್ತಾರೆ.  ನಮ್ಮ ಪ್ರಪಂಚ ಹಿಗ್ಗುತ್ತಾ ಹೋಗತ್ತೆ.  ಯಾವುದೋ ಒಂದು ಸಮಯದ ಬಿಂದು.  ಅಲ್ಲಿಂದ ಒಬ್ಬೊಬ್ಬರೇ ದೂರವಾಗ್ತಾ  ಹೋಗ್ತಾರೆ.  ವಿಧಾನಗಳು ಬೇರೆ ಅಷ್ಟೇ. ಕಡೆಗೆ ನಮ್ಮ ತಲೆಗೆ ನಮ್ಮ ಕೈಯೇ…”  ಬಂದವನು ಮಾತನಾಡುತ್ತಾ ಮುದುಕನನ್ನು ಹಾಗೆಯೇ ಎತ್ತಿಕೊಂಡು ತನ್ನಲ್ಲೇ ಕರಗಿಸಿಕೊಂಡು ಬಿಡುವಂತೆ ಗಟ್ಟಿಯಾಗಿ ತಬ್ಬಿಕೊಂಡ.

***

ರಾತ್ರಿಯ ಗಂಜಿಯನ್ನು ತಂದ ಆಶ್ರಮದ ನರ್ಸ್ ಮುದುಕನನ್ನು ಎಬ್ಬಿಸಲು ತಡವಿದಳು.  ಮೈ ತಣ್ಣಗಾಗಿತ್ತು.  ಮುಚ್ಚಿದ್ದ ಕಣ್ಣನ್ನು ತೆರೆಯಲು ನೋಡಿದಳು. ದೃಷ್ಟಿ ಶೂನ್ಯದಲ್ಲಿ ನೆಟ್ಟಿತ್ತು.  ಮ್ಯಾನೇಜರನ್ನು ಕರೆಯಲು ಓಡಿದಳು…

-ಟಿ.ಎಸ್. ಶ್ರವಣ ಕುಮಾರಿ


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

2 thoughts on “ಕಥಾ ಕ್ಷಿತಿಜ / ನೆನಪುಗಳೇ ಹಾಗೆ – ಟಿ.ಎಸ್. ಶ್ರವಣ ಕುಮಾರಿ

  • ಶ್ರೀನಿವಾಸ್ ಬಿ.ಎಸ್

    ತುಂಬಾ ಹೃದಯಸ್ಪರ್ಶಿ ಕಥೆ.ಸುಲಲಿತವಾದ ಬರವಣಿಗೆಯ ಶೈಲಿ.ಅಭಿನಂದನೆ

    Reply
  • Mohini Kamath

    Abbabba…
    Yenu chennagi bardhiddhare Shravana Kumari avaru. Hats off. Kannanchinalli neeru tharsidru.
    Super kathe.

    Reply

Leave a Reply

Your email address will not be published. Required fields are marked *