ಕಥಾ ಕ್ಷಿತಿಜ/ ನಂಜಮ್ಮ ಕೊಟ್ಟ ನೆರಳು… – ಕೆ. ಸತ್ಯನಾರಾಯಣ

ನಮ್ಮೂರ ಜಮೀನ್ದಾರನ ಮಗಳು ನಂಜಮ್ಮ ತನ್ನ ಬದುಕನ್ನು ಸಾವರಿಸಿಕೊಳ್ಳಲು ಅಂಥ ನಿರ್ಧಾರ ಕೈಗೊಂಡ ಮೇಲೆ, ಗಂಡನ ಮನೆಯಲ್ಲಿ ನೊಂದ ಹೆಣ್ಣುಮಕ್ಕಳಿಗೆಲ್ಲ ಅವಳ ಮನೆಯೇ ಸಾಂತ್ವನ ನೀಡುವ ತಂಪು ನೆರಳಾಯಿತು. ನಂಜಮ್ಮ ಯಾರಿಗಾದರೂ ಸೆರಗು ಹಾಸಿರಲಿ, ಅಳುತ್ತಾ ಊರಿಗೆ ಬರುವ ಹುಡುಗಿಯರೆಲ್ಲ ಅವಳ ಸೆರಗಿನಲ್ಲಿ ಕಣ್ಣೊರಸಿಕೊಂಡರು.

ನಮ್ಮೂರಿನ ಸತ್ಕುಲಪ್ರಸೂತ ಕುಟುಂಬದ ಹೆಣ್ಣುಮಕ್ಕಳಿಗೆಲ್ಲ ಕೌನ್ಸೆಲರ್ ಆಗಿದ್ದವಳು ಗಂಡನನ್ನು ಬಿಟ್ಟು ಬಂದಿದ್ದ ನಂಜಮ್ಮ. ಹೀಗೆ ಹೇಳಿದಾಗ, ಏನಪ್ಪಾ ಇದು ಇನ್ನೊಂದು ಅಸಂಗತ ಮಾತಲ್ಲವೆ ಎಂದು ಮೂಗುಮುರಿಯಬೇಡಿ. ಅಸಂಗತವೆಂದು ಕಾಣುತ್ತದೆ, ಆದರೆ ನಿಜವಾದ ಸಂಗತಿ.

ನಂಜಮ್ಮ ಅಂತ ಆಕೆಯ ಹೆಸರು. ಆಕೆ ಕೂಡ ಬಹುಹಿಂದೆ ಜಮೀನ್ದಾರನ ಮಗಳೇ. ಮದುವೆ ಮಾಡಿಕೊಟ್ಟದ್ದು ಕೂಡ ಇನ್ನೂ ದೊಡ್ಡ ಊರಿನ ದೊಡ್ಡ ಜಮೀನ್ದಾರೀ ಕುಟುಂಬಕ್ಕೇ. ಈಗಲೂ ಆ ಮದುವೆಯನ್ನು ಜನ ನೆನಪಿಸಿಕೊಳ್ಳುತ್ತಾರೆ. ಮೂರು ದಿನದ ಕನಸಿನ ಲೋಕವಂತೆ ಅದು. ಬಾಣ ಬಿರುಸು, ಕೀಲುಗೊಂಬೆ ನೃತ್ಯ, ಊರಿನ ಉದ್ದಗಲಕ್ಕೂ ಎಲೆ ಹಾಕಿ ಬಡಿಸಿದರೂ ಬಂದಿದ್ದ ಅತಿಥಿಗಳನ್ನು ಸಾವರಿಸುವುದಕ್ಕೆ ಜಾಗ ಸಾಕಾಗಲಿಲ್ಲವಂತೆ. ಮದುವೆ ಏನೋ ನ ಭೂತೋ, ನ ಭವಿಷ್ಯತಿ. ಆದರೆ ನಂಜಮ್ಮನಿಗೆ ಭವಿಷ್ಯವೆಂಬುದು ಇರಲಿಲ್ಲ.

ಆಕೆಯ ಗಂಡನಿಗೆ ಮದುವೆಗೆ ಮುಂಚೆಯೇ ನಾನಾ ಸಂಬಂಧಗಳಿದ್ದವಂತೆ. ಹೆಣ್ಣಿನ ಸುಖಕ್ಕಾಗಿ ಮೈಸೂರಿರಲಿ, ಅಲ್ಲಿಂದಾಚೆಗೆ ಗುಂಡ್ಲುಪೇಟೆ, ಚಾಮರಾಜನಗರದ ತನಕವೂ ಹುಡುಕಿಕೊಂಡು ಹೋದವನಂತೆ. ಚಿಲಕವಾಡಿಯಲ್ಲಿ ಇನ್ನೊಂದು ಸಂಸಾರವಂತೆ. ಹೋಗಲಿಬಿಡಿ. ನಂಜಮ್ಮ ಕೇಳಿಕೊಂಡು ಬಂದ ಅದೃಷ್ಟ ಅದು ಅಂತ ಒಪ್ಪಿಕೊಂಡರೂ ಗಂಡ ದಿನವೂ ಹೊಡೆದು ಬಡಿದು ಮಾಡುವುದರ ಜೊತೆಗೆ, ಇವಳಿಗೂ ರೋಗ ಅಂಟಿಸಿದನಂತೆ. ನಂಜಮ್ಮನ ತಂದೆ ಮಾನ, ಮರ್ಯಾದೆ, ಗತ್ತು ಗೈರತ್ತು ಇದ್ದೋರು. ಒಂದು ನಾಲ್ಕು ಸಲ ಹೋಗಿ ಬುದ್ಧಿ ಮಾತು ಹೇಳಿದರು, ಹೇಳಿಸಿದರು. ಯಾವುದಕ್ಕೂ ಜಗ್ಗದಿದ್ದಾಗ ಮುಖಕ್ಕೆ ಉಗಿದು, ಮಗಳನ್ನು ಕರೆದುಕೊಂಡು ಬಂದರು ಮಾತ್ರವಲ್ಲ, ಅಳಿಯನಾಗಿದ್ದವನು ಒಂದು ಸಲ ಮಂಡ್ಯದ ಸಂತೆಗೆ ಬಂದು ವಾಪಸ್ ಆಗುತ್ತಿದ್ದಾಗ ಚಿಕ್ಕಮಂಡ್ಯದ ಹತ್ತಿರ ಮರಕ್ಕೆ ಕಟ್ಟಿಸಿ ಹಣ್ಣುಗಾಯಿ ನೀರುಗಾಯಿ ಕೂಡ ಮಾಡಿಸಿದರು. ಅದೇ ಕೊರಗಲ್ಲಿ ಬಹುಬೇಗ ತೀರಿಹೋದರೂ ಕೂಡ.

ಅತ್ತಿಗೆ-ನಾದಿನಿಯರ ಜೊತೆ ನಂಜಮ್ಮನಿಗೆ ಏಗುವುದು, ಮರ್ಯಾದೆಯಾಗಿ ಬದುಕುವುದು ಕಷ್ಟವಾಯಿತು. ತಾಯಿಯ ಬೆಂಬಲ ಚೆನ್ನಾಗಿತ್ತು. ಆದರೆ ಅಷ್ಟಕ್ಕೇ ಬದುಕು ನಡೆಯಬೇಕಲ್ಲ. ಊರ ಮೇಲುಗಡೆ ಹೋಗಿ ಒಂದು ಚಿಕ್ಕಮನೆ ಮಾಡಿಕೊಂಡು, ಪೆಟ್ಟಿ ಅಂಗಡಿ ಇಟ್ಟಳು. ಜೊತೆಗೆ ಬಂದವರಿಗೆಲ್ಲ ಅಲ್ಲೇ ಟೀ, ಕಾಫಿ ಕಾಯಿಸಿಕೊಡುತ್ತಿದ್ದಳು. ಕಾಲಕ್ರಮೇಣ ಅದು ಒಂದು ತಂಗುವ ಜಾಗವಾಯಿತು. ಅವಳು ತಂಪು ಕೊಡುವ ನಂಜಮ್ಮ ಅಂತ ಆದಳು. ಗುಡಿಸಲಿದ್ದ ಕಡೆ ದೊಡ್ಡಮನೆ ಬಂತು. ಅವರಿವರಿರಲಿ, ಪೇಟೆಯ ಸೇಠ್ಗಳು ಕೂಡ ನಂಜಮ್ಮನ ತಂಪನ್ನು ಹುಡುಕಿಕೊಂಡು ಬರುತ್ತಿದ್ದರಂತೆ.

ನಂಜಮ್ಮನ ಸ್ಥಿತಿನೋಡಿದ ಆಕೆಯ ಜೊತೆಗಾತಿ ಹೆಣ್ಣುಮಕ್ಕಳೆಲ್ಲ ನಾವು ಮದುವೇನೇ ಮಾಡಿಕೊಳ್ಳೋಲ್ಲ, ಕೂಲಿನಾಲಿ ಮಾಡಿಕೊಂಡಾದರೂ ಬದುಕುತ್ತೇವೆ ಅಂತ ಹಠ ಹಿಡಿದು, ನಮ್ಮೂರಿನ ಹೆಣ್ಣುಮಕ್ಕಳಿಗೆ ಒಂದು ಕಾಲಕ್ಕೆ ಮದುವೆ ಆಗುವುದೇ ವರ್ಷಾನುಗಟ್ಟಲೆ ನಿಂತುಹೋಗಿತ್ತಂತೆ. ಯಾರಾದರೂ ಹೆಣ್ಣು ನೋಡುವ ಶಾಸ್ತ್ರ ಮಾಡುವುದಕ್ಕೆ ಬರ್ತಾರೆ ಅಂತ ಗೊತ್ತಾದರೆ ಸಾಕು, ಹುಡುಗೀರೆಲ್ಲ ಹೋಗಿ ನಂಜಮ್ಮನ ಮನೆಯಲ್ಲಿ ಅವಿತುಕೊಂಡು ಬಿಡುತ್ತಿದ್ದರಂತೆ. ನಂಜಮ್ಮನಿಗೆ ಇದೇನು ಇಷ್ಟವಿರಲಿಲ್ಲ. ಆದರೆ ಹೆಣ್ಣುಮಕ್ಕಳು ಮದುವೆ ಆಗಲೇಬೇಕು ಅಂತ ಒತ್ತಾಯ ಮಾಡುವುದಕ್ಕೆ ಮನಸ್ಸು ಬರುತ್ತಿರಲಿಲ್ಲ.

ನಂಜಮ್ಮನ ಪಾಯಿಂಟು ಸರಿ. ಹೆಣ್ಣುಮಕ್ಕಳ ಭಯ, ಆಂತಕವೂ ಸರಿಯೇ. ಹಾಗಂತ ಊರಲ್ಲಿ ಸಾಲುಸಾಲಾಗಿ ಹೆಣ್ಣುಮಕ್ಕಳು ಮದುವೆ ಆಗದೆ ನಿಂತರೆ, ಹಾಗೆ ನಿಂತುಕೊಂಡರೆ, ಊರಿನ ಗಂಡುಮಕ್ಕಳ ಮದುವೆ ಯಾವಾಗ? ಯಾರು ನಮ್ಮ ಗಂಡುಮಕ್ಕಳಿಗೆ ಹೆಣ್ಣು ಕೊಡುತ್ತಾರೆ? ಇದು ನ್ಯಾಯವೇ? ಅಂತಹೇಳಿ ಊರವರು ನಂಜಮ್ಮನಿಗೆ ನ್ಯಾಯ ಒಪ್ಪಿಸಿದರು. ಆವಾಗಲೇ ನಂಜಮ್ಮನ ಕೌನ್ಸಿಲರ್ ಕೆಲಸದ ದಿನಗಳು ಪ್ರಾರಂಭವಾದದ್ದು.

ಹುಡುಗಿ ಹೋಗಿ ನಂಜಮ್ಮನ ಹತ್ತಿರ ಹುಡುಗನ ಬಗ್ಗೆ ಹೇಳಿಕೊಳ್ಳೋಳು. ನೋಡಿದರೆ ಇಷ್ಟವೇನೋ ಆಗುತ್ತೆ. ಒಳಗಡೆ ಹೇಗಿರುತ್ತಾನೋ, ಹಾಸಿಗೇಲಿ ಏನೇನು ಕೇಳುತ್ತಾನೋ, ಏನೇನು ಮಾಡು ಅಂತಾನೋ ಅನ್ನುವ ಭಯ ಎಂದು ಗೋಗರೆಯುವರು. ಆಯ್ತು ಹುಡುಗರ ಹತ್ತಿರ ನಾನೇ ಮಾತಾಡ್ತೀನಿ. ಮನಸ್ಸಿನ ಮರ್ಮ ತಿಳೀತೀನಿ ಅಂತ ನಂಜಮ್ಮನೇನೋ ಮುಂದೆ ಬರುವಳು. ಹುಡುಗನ ಕಡೆಯವರು ಒಪ್ಪಬೇಕಲ್ಲ. ಹೀಗೇ ಜಟಾಪಟಿ. ಕೊನೆಗೆ ನಂಜಮ್ಮನೇ ಒಂದು ಸೂತ್ರವನ್ನು ಜಾರಿಗೆ ತಂದಳು. ವರದಕ್ಷಿಣೆ ಬಾಬ್ತು, ಚಿನ್ನ, ಬೆಳ್ಳಿ ಇಷ್ಟು ಅಂತ ನಿಗದಿಯಾಗಲಿ. ನಿಗದಿ ಪ್ರಕಾರವೇ ಎಲ್ಲವನ್ನೂ ಕೊಡಬೇಕಾದ್ದು ಕೂಡ ಸರಿಯೇ. ಆದರೆ ಲಗ್ನದ ಸಮಯದಲ್ಲೇ ಎಲ್ಲವನ್ನೂ ಒಂದೇ ಸಲ ಧಾರೆಗೆ ಎಂದು ಕೊಡುವುದು ಬೇಡ. ಚಿಕ್ಕಪ್ರಸ್ತದ ಸಮಯದಲ್ಲಿ ಸ್ವಲ್ಪ, ದೊಡ್ಡಪ್ರಸ್ತದ ಸಮಯದಲ್ಲಿ ಸ್ವಲ್ಪ, ಹೆರಿಗೆಗೆ ಬಂದಾಗ ಸ್ವಲ್ಪ, ಬಾಣಂತನ ಮುಗಿದ ಮೇಲೆ ಸ್ವಲ್ಪ ಅಂತೆಲ್ಲ ರೂಲ್ಸು ಮಾಡಿದಳಂತೆ. ಸ್ವಲ್ಪ ದಿನ ಈ ಸೂತ್ರದ ಪ್ರಕಾರ ಬದುಕು ನಡೆದುಕೊಂಡು ಹೋಗುತ್ತಿತ್ತು.

ಕೆಲವು ಹೆಣ್ಣುಮಕ್ಕಳು, ಈವತ್ತು ಮದುವೆ ಆದರೆ ಮುಂದಿನ ಅಮಾವಸ್ಯೆ ಒಳಗೇ ದಿಢೀರ್ ವಾಪಸ್ ಬಂದುಬಿಡುತ್ತಿದ್ದರು. ಹೀಗೆ ಓಡಿ ಬರಲು ನಂಜಮ್ಮನದೇ ಕುಮ್ಮಕ್ಕು, ಅಂಥವಳು ಊರೆಲ್ಲ ಒಳ್ಳೆ ದರಿದ್ರ ಗ್ರಾಮದೇವತೆ ತರ ಕೂತಿರುವುದರಿಂದಲೇ ಹೀಗೆ ಹೆಣ್ಣುಮಕ್ಕಳು ಪಟಪಟ ಅಂತ ಓಡಿಬರುತ್ತವೆ ಎಂದು ಹಿರಿಯರು ತಗಾದೆ ತೆಗೆದರು. ಟ್ರಯಲ್ಗೆ ಸ್ವಲ್ಪವೂ ಸಮಯ ಕೊಡದೆ ಹೀಗೆ ಓಡೋಡಿ ಬಂದು ಕುಳಿತುಕೊಂಡರೆ ಇನ್ನೂ ಮದುವೆ ಸಾಲವೇ ತೀರಿಲ್ಲ, ಮನೆಗೆ ಸೇರಿಸೋಲ್ಲ ಅಂತ ಹಠ ಮಾಡುವರು. ಓಡಿಬಂದ ಹೆಣ್ಣುಮಕ್ಕಳು ನಂಜಮ್ಮನ ಮನೆ ಒಳಗೆ ಹೋಗಿ ಸೇರಿಕೊಳ್ಳುವರು. ಅದಕ್ಕೂ ಕೂಡ ತಂದೆತಾಯಿಗಳು ಒಪ್ಪುತ್ತಿರಲಿಲ್ಲ. ಪ್ರತಿದಿನವೂ ಊರ ತುಂಬಾ ಬೀದಿಬೀದೆಯೆಲ್ಲಾ ಇದೇ ರಾಮಾಯಣ. ಮದುವೆ ಆದ ಹುಡುಗಿಯರೇನೋ ಇನ್ನೂ ಭಯದಲ್ಲೇ ಇರುತ್ತಿದ್ದುದರಿಂದ ತಂದೆತಾಯಿಗಳ ಮನೆ ಸೇರಿಕೊಳ್ಳೋಕೆ ನೋಡೋರು. ಒಂದೆರಡು ಮಕ್ಕಳಾದ ಮೇಲೂ ಗಂಡಂದಿರು ಹೆಂಡತಿಯರನ್ನು ಇದ್ದಕ್ಕಿದ್ದಂತೆ ಬಿಟ್ಟುಬಿಡುತ್ತಿದ್ದರಲ್ಲ, ಅಂತಹ ಹೆಣ್ಣುಮಕ್ಕಳು ಮಾತ್ರ ಯಾರಿಗೂ ಹೆದರುತ್ತಿರಲಿಲ್ಲ. ಓಡಿ ಬಂದು ನೇರವಾಗಿ ನಂಜಮ್ಮನ ಮನೆಗೆ ಸೇರಿಕೊಂಡು ಬಿಡೋರು. ಒಂದೆರಡು ತಿಂಗಳಲ್ಲೇ ನಂಜಮ್ಮ ಕೂಲಿನಾಲಿಯ, ಪೆಟ್ಟಿಅಂಗಡಿಯ ವ್ಯವಸ್ಥೆ ಮಾಡಿಕೊಡೋಳು.

ಎಲ್ಲ ಸಂದರ್ಭಗಳಲ್ಲೂ ನಂಜಮ್ಮ ಹೀಗೇ ಮಾಡುತ್ತಿದ್ದಳು ಅಂತ ತಪ್ಪು ತಿಳೀಬಾರದು. ಕೆಲವು ಕೇಸುಗಳಲ್ಲಿ ಹೆಣ್ಣುಮಕ್ಕಳನ್ನು ಕರೆದುಕೊಂಡು ಗಂಡಂದಿರ ಊರಿಗೆ ಹೋಗುತ್ತಿದ್ದಳು. ನ್ಯಾಯಕ್ಕೆ ಕೂರಿಸುತ್ತಿದ್ದಳು. ಪಾಟೀಸವಾಲು ಮಾಡುತ್ತಿದ್ದಳು. ಕೊನೆಗೆ ಕೇಸು ಗೆದ್ದು ಹುಡುಗಿಯನ್ನು ಅಲ್ಲೇ ಬಿಟ್ಟುಬರುತ್ತಿದ್ದಳು. ಆಮೇಲೆ ಆ ದಂಪತಿಗಳು ತುಂಬಾ ದಿನ ಸುಖವಾಗಿರುತ್ತಿದ್ದರು.

ಇದನ್ನೆಲ್ಲ ನನ್ನ ತಲೆಮಾರಿನವರು ಕತೆಯಾಗಿ ಕೇಳಿದ್ದು. ನಂಜಮ್ಮನಂತವರು ನಮ್ಮ ಊರಿನಲ್ಲೇ ಇದ್ದಾರೆ ಅನ್ನುವುದೇ ಒಂದು ಸೋಜಿಗವಲ್ಲವೇ ಎಂದು ನಮಗೆಲ್ಲ ಅನಿಸಿದರೂ ಅವರನ್ನೂ ನೋಡುವುದು ಕಷ್ಟವಾಗುತ್ತಿತ್ತು. ನಮ್ಮೂರಿನಲ್ಲಿ ವಾಚ್ಮನ್ ಇದ್ದುದು ಒಂದು ರೈಸ್ ಮಿಲ್ ಕಾಳೇಗೌಡರ ಕಾಂಪೋಂಡಿಗೆ, ಇನ್ನೊಂದು ಸಿನೆಮಾ ಥಿಯೇಟರ್ಗೆ. ಮೂರನೆಯ ವಾಚ್ಮನ್ ಇದ್ದುದು ನಂಜಮ್ಮನವರ ಮನೆಗೆ.

ನನಗೆ ತಿಳುವಳಿಕೆ ಬಂದ ಮೇಲೆ ಸುದ್ದಿಯಾದ ಕೆಲವು ಪ್ರಸಂಗಗಳನ್ನು ಪ್ರಸ್ತಾಪಿಸಬಹುದು. ಸಾತನೂರಿನ ಜಯರಾಮನಿಗೆ ಹೆಂಡತಿ ಕಂಡರೆ ಆಸೆ, ಪ್ರೀತಿ ಎಲ್ಲ ಸರಿ. ಆದರೆ ಆತನ ತಾಯಿ ತಾಟಗಿತ್ತಿ. ಮಗು-ಸೊಸೆ ಸುಖವಾಗಿರಲೇ ಬಿಡುತ್ತಿರಲಿಲ್ಲ. ಜಯಲಕ್ಷ್ಮಿ ಓಡಿ ಬಂದು ನಂಜಮ್ಮನ ಮನೆ ಸೇರಿಕೊಂಡಳು. ಜಯರಾಮನೂ ಅವಳ ಹಿಂದೆಯೇ ಓಡಿ ಬಂದ. ಓಡಿ ಬರುತ್ತಲೇ ಇದ್ದ. ನಂಜಮ್ಮನ ಮನೆಯಲ್ಲೇ ಮನೆ ಅಳಿಯನ ತರ ಠಿಕಾಣಿ ಹೂಡಲು ಪ್ರಾರಂಭಿಸಿದ. ಊರಿಗೆ ವಾಪಸ್ ಹೋಗುವ ಧೈರ್ಯವಿಲ್ಲ. ನಂಜಮ್ಮನ ಕುಮ್ಮಕ್ಕಿನ ಮೇಲೆ ಪಾಲು ಕೇಳಿ, ಪಡೆದು ಭೂಮಿಕಾಣಿಯನ್ನೆಲ್ಲ ಮಾರಿ ನಮ್ಮೂರಿನಲ್ಲೇ ಭೂಮಿ ತಗೊಂಡು ಇಲ್ಲಿಯ ನಾಗರಿಕನಾದ. ಕೆಲವು ವರ್ಷಗಳ ನಂತರ ನಂಜಮ್ಮನ ಮನೆ ಬೀದಿಯಲ್ಲೇ ಚಿಕ್ಕ ಮನೆ ಕಟ್ಟಿಕೊಂಡ. ಮನೆ ಚಿಕ್ಕದಾಗಿದ್ದರೂ ಜಗುಲಿ ದೊಡ್ಡದಾಗಿತ್ತು. ನಂಜಮ್ಮ-ಜಯರಾಮ ಇಬ್ಬರೂ ಸೇರಿ ಒಟ್ಟಾಗಿ ಮಾಡುತ್ತಿದ್ದ ರೇಷ್ಮೆ ವ್ಯಾಪಾರದ ಚಂದ್ರಿಕೆ, ಹುಳ ಬಿಡುವ ತಟ್ಟೆ, ಎಲ್ಲ ಈ ಜಗುಲಿಯ ಮೇಲೆಯೇ.

ಸ್ವರ್ಣಾಂಬನ್ನ ಕ್ಲೋಸ್ಪೇಟೆಯ ಬಸವರಾಜನಿಗೆ ಕೊಟ್ಟಿತ್ತು. ಅವನಿಗೂ ಆಗಾಗ್ಗೆ ಹೆಂಡತಿ ಬಿಡುವ ರೋಗ. ಜೊತೆಗೆ ಅವನ ತಮ್ಮ ಕೂಡ ಸ್ವರ್ಣಾಂಬನ್ನ ಹೊಡೆಯುತ್ತಿದ್ದ. ದರಿದ್ರದವರು ಕಾನ್ಸ್ಟೇಬಲ್ಸ್ ಬೇರೆ. ಪೋಲೀಸ್ ಬೂಟಿನಲ್ಲೇ ಸ್ವರ್ಣಾಂಬನನ್ನು ಒದ್ದು, ಎದೆ, ಕತ್ತು ಭಾಗದಲ್ಲೆಲ್ಲ ಗಾಯದ ಗುರುತಾಗಿತ್ತು. ಇಬ್ಬರೂ ಸಹೋದರರು ಯತ್ತಗದಹಳ್ಳಿಗೆ ಎತ್ತಿನ ವ್ಯಾಪಾರಕ್ಕೆ ಬಂದಿದ್ದರು. ನಂಜಮ್ಮ ಸ್ವರ್ಣಾಂಬನ ಜೊತೆ ಅಲ್ಲಿಗೇ ಹೋದಳು. ಗಾಳಿ ಬೀಸಿದರೆ ಬಿದ್ದು ಹೋಗುವಂತೆ ಇರುವ ಸ್ವರ್ಣಾಂಬನ ಮೇಲೆ ಕೈಮಾಡುವ ಮನೆತನದವರಿಗೆ ಎತ್ತು ಮಾರಬಾರದೆಂದು ಹಠ ಹಿಡಿದುಕೂತಳು. ಇಬ್ಬರೂ ಸಹೋದರರು ಇವಳನ್ನು ಕೆಕ್ಕರಿಸುವಂತೆ ನೋಡಿದರೂ, ನಂಜಮ್ಮನ ಜೋರು ಬಾಯಿಗೆ ಬೆದರಿ ಕ್ಲೋಸ್ಪೇಟೆಗೆ ವಾಪಸ್ ಆದರು.

ಪಕ್ಕದೂರಿನ ಹೆಡ್ಮಾಸ್ಟರ್ ಕಾಶೀಪತಯ್ಯ ನಮ್ಮೂರಲ್ಲೇ ಬಾಡಿಗೆ ಮನೆ ಮಾಡಿಕೊಂಡಿದ್ದರು. ಅವರ ಮಗಳು ಲೀಲಾವತಿಯನ್ನು ಆ ಕಾಲಕ್ಕೇ ಬಾಂಬೆಗೆ ಮದುವೆ ಮಾಡಿಕೊಡಲಾಗಿತ್ತು. ಲೀಲಾವತಿ ಬಾಂಬೆಗೆ ಹೋದಮೇಲೆ ಚೆನ್ನಾಗಿ ಓದಿ ಅಲ್ಲೇ ಕಾಲೇಜಿನಲ್ಲಿ ಲೆಕ್ಚರರ್ ಆದಳು. ಆದರೇನಂತೆ, ಅವಳ ಅದೃಷ್ಟ ಕೂಡ ಜಯಲಕ್ಷ್ಮಿ ಸ್ವರ್ಣಾಂಬರಿಗಿಂತ ಬೇರೆಯಾಗಿರಲಿಲ್ಲ. ಪತಿರಾಯರನ್ನು, ಕೆಲಸವನ್ನು ಬಿಟ್ಟು ಊರಿಗೆ ವಾಪಸ್ ಬಂದಳು. ಕಾಶೀಪತಯ್ಯ ಇದನ್ನೆಲ್ಲ ನೋಡಬೇಕಾದಷ್ಟು ದುರಾದೃಷ್ಟವಂತರಾಗಿರಲಿಲ್ಲ. ಪರಮಾತ್ಮನ ಸನ್ನಿಧಿ ಸೇರಿದ್ದರು. ಸಾವಿತ್ರಮ್ಮ ಇನ್ನೂ ಬದುಕಿದ್ದರು.

ಲೀಲಾವತಿ ಹೆಸರಿಗೆ ತಾಯಿ ಜೊತೆ ಇದ್ದಳು ಅನ್ನುವುದನ್ನು ಬಿಟ್ಟರೆ, ಯಾವಾಗಲೂ ನಂಜಮ್ಮನ ಮನೆಯಲ್ಲೇ ಇರೋಳು. ಅವಳನ್ನು ನೋಡಲು ವಿಲ್ಸನ್ ಎನ್ನುವ ಒಬ್ಬ ಬಾಂಬೆ ಮನುಷ್ಯ ತಿಂಗಳಿಗೋ, ಒಂದೂವರೆ ತಿಂಗಳಿಗೋ ನಮ್ಮೂರಿಗೇ ಬರುತ್ತಿದ್ದ. ಬಂದಾಗಲೆಲ್ಲ ಒಂದು ಎಂಟು-ಹತ್ತು ದಿನ ನಂಜಮ್ಮನ ಮನೆಯಲ್ಲೇ ಅಳಿಯತನ. ವಿಲ್ಸನ್ -ಲೀಲಾವತಿ ಊರೊಳಗೇನು ಬರುತ್ತಿರಲಿಲ್ಲ. ಸಿಟಿ ಕಡೆಗೆ ಹೋಗುವ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದರು. ಸಿನೆಮಾ ನೋಡಿಕೊಂಡು ರಾತ್ರಿ ಹೊತ್ತು ಕತ್ತಲಿನಲ್ಲಿ ಇಬ್ಬರೂ ಯಾವ ಭಯವೂ ಇಲ್ಲದೆ ನಡೆದುಕೊಂಡು ಬರುತ್ತಿದ್ದರು. ವಿಲ್ಸನ್ಗೂ ಲೀಲಾವತಿಗೂ ಫ್ಯಾಕ್ಟರಿ ಸರ್ಕಲ್ ಹತ್ತಿರವಿರುವ ಹಳೆ ಚರ್ಚಿನಲ್ಲಿ ಉಂಗುರ ಬದಲಾಯಿಸಿ ಮದುವೆ ಆದಾಗ ನಂಜಮ್ಮ-ಸಾವಿತ್ರಮ್ಮ ಇಬ್ಬರೂ ಸಿಲ್ಕು ಸೀರೆ ಉಟ್ಟುಕೊಂಡು ಹೋದರು ಅಂತ ಊರಲ್ಲೆಲ್ಲ ಮಾತಾಡಿಕೊಳ್ಳುತ್ತಿದ್ದರು.

ಮದುವೆ ಆದ ಮೇಲೆ ವಿಲ್ಸನ್ ಲೀಲಾವತಿ ಇಬ್ಬರೂ ಮುಂಬೈಗೆ ಹೋದರು ಅನ್ನುವುದು ಅಷ್ಟು ಮುಖ್ಯವಲ್ಲ. ನಾನು ಎರಡನೇ ಬಿಎ ಓದುತ್ತಿದ್ದಾಗ ಲೀಲಾವತಿ ಬಾಂಬೆಯಿಂದ ಯಾರು ಯಾರನ್ನೋ ಕರಕೊಂಡು ಬಂದು ನಂಜಮ್ಮನ್ನ ಮೂರುನಾಲ್ಕು ದಿನ ಬಾಯಿತುಂಬಾ ಮಾತನಾಡಿಸಿ, ಅವಳು ಮಾತನಾಡಿದ್ದನ್ನೆಲ್ಲಾ ಬರೆದುಕೊಂಡು ಹೋದರು. ಒಂದೆರಡು ತಿಂಗಳಾದಮೇಲೆ ಲೀಲಾವತಿ ಜೊತೆ ಫಿಲಂನವರು ಬಂದು ನಂಜಮ್ಮನ ಮೇಲೇ ಒಂದು ಸಿನೆಮಾ ಶೂಟ್ ಮಾಡಿದರು. ನಂಜಮ್ಮನ ದೆಸೆಯಿಂದಾಗಿ ಊರಿನ ಪ್ರತಿಯೊಬ್ಬರೂ ನಮ್ಮೂರಿನಲ್ಲೇ ಸಿನೆಮಾ ಶೂಟಿಂಗ್ ನೋಡುವಂತಾಯಿತು. ಶೂಟಿಂಗ್ ನಂಜಮ್ಮನ ಮನೆ ಹೊರಗಡೆ, ಊರೊಳಗೆ ಅವಳು ಹುಟ್ಟಿದಮನೆ, ಬಾಲ್ಯದಲ್ಲಿ ಅವಳು ಕುಂಟೋಬಿಲ್ಲೆ ಆಡುತ್ತಿದ್ದ ಅರಳಿಕಟ್ಟೆ ಮೈದಾನ, ಎಲ್ಲ ಕಡೇನೂ ನಡೀತು.

ನಂಜಮ್ಮನ್ನ ನಾನು ಕಣ್ಣು ತುಂಬಾ, ಮನಸ್ಸು ತುಂಬಾ ನೋಡಿದ್ದು, ಆ ನಾಲ್ಕಾರು ದಿನಗಳಲ್ಲೇ…

ಕೆ. ಸತ್ಯನಾರಾಯಣ


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

2 thoughts on “ಕಥಾ ಕ್ಷಿತಿಜ/ ನಂಜಮ್ಮ ಕೊಟ್ಟ ನೆರಳು… – ಕೆ. ಸತ್ಯನಾರಾಯಣ

 • May 10, 2021 at 9:45 pm
  Permalink

  ಈ ಕಥೆಯನ್ನು, ಕಾದಂಬರಿ ರೂಪಕ್ಕೆ ಹಿಗ್ಗಿಸಿ ಸಾರ್.
  ಪ್ಲಾಟ್ ಚೆನ್ನಾಗಿದೆ.

  Reply
 • May 12, 2021 at 5:50 am
  Permalink

  ಕಥೆ ಚೆನ್ನಾಗಿದೆ, ಆದರೆ ಒಮ್ಮೆಲೇ ಜೋರಾಗಿ ಬ್ರೆಕ್ ಹಾಕಿದ ಅನುಭವ. ಕಥೆಗೆ ಒಂದು ತಾರ್ಕಿಕ ಅಂತ್ಯ ಕೊಟ್ಟಿದ್ದರೆ ಇನ್ನೂ ಚೆನ್ನಾಗಿತ್ತು.

  Reply

Leave a Reply

Your email address will not be published. Required fields are marked *