ಕಥಾ ಕ್ಷಿತಿಜ / ತೆರೆದ ಬಾಗಿಲು – ಕಾವ್ಯಶ್ರೀ ಮಹಾಗಾಂವಕರ
ಬದುಕಿನಲ್ಲಿ ಬಯಸಿ ತಾನೇ ಹೆಣೆದುಕೊಂಡು ಸಂಕೋಲೆ ಚಿನ್ನದ್ದೇ ಆಗಿರಲಿ, ಅದರಿಂದ ಬಿಡಿಸಿಕೊಳ್ಳುವುದು ಎಷ್ಟು ಕಷ್ಟ! ಆದರೆ ಬಿಡಿಸಿಕೊಳ್ಳಲು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಹಾಗೆ ನಿರ್ಧರಿಸಿದರೆ ಅದಕ್ಕೆ ವಯಸ್ಸಿನ ಹಂಗಿಲ್ಲ. ಬಾಗಿಲು ತೆರೆದುಕೊಳ್ಳುವುದು ದೂಡಿದರೆ ಮಾತ್ರ.
ಶ್ರಾವಣಿ ಕೈಯಲ್ಲಿದ್ದ ಪತ್ರ ಕೆಳಗಿಟ್ಟು, ಕನ್ನಡಿಯೊಳಗೆ ಕಾಣುವ ತನ್ನನ್ನು ದಿಟ್ಟಿಸಿದಳು. ಕನ್ನಡಕದ ಹಿಂದಿರುವ ಕಣ್ಣುಗಳಲ್ಲಿ ಪ್ರಬುದ್ಧ ಮನಸು, ಆಲೋಚನೆ ಎದ್ದು ಕಾಣುತ್ತಿತ್ತು. ಆ ನೋಟ ತೀಕ್ಷ್ಣವಾಗಿಯೂ ಇತ್ತು. ಐದಾರು ವರ್ಷಗಳಿಂದ ಅವಳ ಮುಖದ ಮೇಲೆ ಒಂದೊಂದಾಗಿ ಗೆರೆ ಮೂಡಲಾರಂಭಿಸಿತ್ತು. ಅವು ಚರ್ಮ ಸುಕ್ಕುಗಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಅಲ್ಲೊಂದು ಇಲ್ಲೊಂದು ನೆರೆಗೂದಲು ಮಿಂಚಿ ಹಿರಿತನ ಬಿಂಬಿಸುತ್ತಿತ್ತು.
ಅವಳಿಗೆ ಇಷ್ಟು ದಿನ ಇಲ್ಲದ್ದು ಈಗ ವೃತ್ತಿಗೆ ಸೇರಬೇಕೆಂಬ ಹಟ ಗಟ್ಟಿಗೊಂಡಿತ್ತು. ಮನೆಯ ಆರ್ಥಿಕ ಸ್ಥಿತಿ ಸುಧಾರಣೆಗಾಗಿ, ಒಂದಿಷ್ಟು ಹಣ ಸಂಪಾದನೆ ಮಾಡಬೇಕೆಂದು ಕೆಲಸಕ್ಕೆ ಅರ್ಜಿ ಹಾಕಿದ್ದಳು. ಆದರೆ ಈಗ ಸ್ವತಂತ್ರವಾಗಿ ಜೀವನ ನಡೆಸುವ ಆಲೋಚನೆ ಮನದಲ್ಲಿ ಬೇರು ಬಿಟ್ಟಿತ್ತು.
ಟೇಬಲ್ ಮೇಲಿದ್ದ ಆರ್ಡರ್ ಕಾಪಿ ಬಿಡಿಸಿ ಇನ್ನೊಮ್ಮೆ ಓದಿದಳು. ಒಳ್ಳೆಯ ಕೆಲಸ ಎನಿಸಿತು. ತನ್ನ ವಯಸ್ಸಿಗೆ ತಕ್ಕ ಜಾಬ್ ಸಿಕ್ಕಿದ್ದು ಅದೃಷ್ಟವೇ ಸರಿ. ಸರಳವಾಗಿ ಜೀವನ ಸಾಗಿಸಲು ಎಷ್ಟು ಹಣ ಬೇಕೊ ಅಷ್ಟು ಲಭಿಸುತ್ತಿತ್ತು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. `ಬದುಕಲು… ಜೀವಂತವಾಗಿರಲು… ಎಷ್ಟು ಬೇಕು?… ಇಷ್ಟು ಸಾಕು’ ಅವಳ ಮನ ತೃಪ್ತಿಯಿಂದ ಉಸುರಿತು.
ಅಂತರಂಗದ ಮೂಲೆಯಲೆಲ್ಲೋ ಕಿಚ್ಚಿಲ್ಲದೆ ಸುಡುತಿರುವ ಭಾವನೆಗಳು ಭದ್ರವಾಗಿ ಅಡಗಿ ಕುಳಿತಿದ್ದವು. ಸಿಟ್ಟು ಬೂದಿ ಮುಚ್ಚಿದ ಕೆಡದಂತೆ ಒಳಗೊಳಗೇ ಬುಸುಗುಡುತ್ತಿತ್ತು. ಕೆಲಸದ ಆರ್ಡರ್ ಬಂದುದರಿಂದ ಹಾರುವ ಹಕ್ಕಿಯ ಸಂಭ್ರಮದಲ್ಲಿ ತೇಲಾಡಿದಳು. ಮತ್ತೆ ತನ್ನನ್ನು ನೋಡಿಕೊಂಡಳು. ಕನ್ನಡಿಯೊಳಗೆ ಕಾಣುತ್ತಿರುವ ತನ್ನ ಪ್ರತಿಬಿಂಬದಲ್ಲಿ ಗೆಲುವಿನ ಕಿರುನಗೆ ಇರುವುದನ್ನು ಗಮನಿಸಿದಳು.
ಹಳೆಯ ನೆನಪು ಕಾಡಿ ಮನಸು ಹಿಂದಕ್ಕೋಡಿತು…
ಸಾಗರನ ಕೈಹಿಡಿದು ಶ್ರಾವಣಿ ಬಂದಿದ್ದಳು. ಆಗ ಅತ್ತೆ, ಮಾವ ಎಲ್ಲಾ ಬದುಕಿದ್ದ ಕಾಲ. ಅವರನ್ನು ಮಗುವಿನಂತೆ ಆರೈಕೆ ಮಾಡಿದ್ದಳು. ಹೊತ್ತು ಹೊತ್ತಿಗೆ ಊಟ, ತಿಂಡಿ, ಮಾತ್ರೆಯ ವ್ಯವಸ್ಥೆ ಮಾಡುವವಳು ಅವಳೆ. ಅವರಿಬ್ಬರೂ ಬದುಕಿದಷ್ಟು ಕಾಲ ಕಾಳಜಿ, ಮುತುವರ್ಜಿಯಿಂದ ನೋಡಿಕೊಂಡಳು. ಅವರ ಕೊನೆಯುಸಿರಿನವರೆಗೂ ನಿರಂತರ, ನಿಸ್ವಾರ್ಥ ಸೇವೆ ಮಾಡುತ್ತಲೇ ಬಂದಳು.
ಸಾಗರನಿಗೆ ಅವಳ ಕೈ ಅಡಿಗೆ ರುಚಿ ಬಿಟ್ಟರೆ, ಬೇರೆ ಯಾವುದೂ ರುಚಿಸುತ್ತಿರಲಿಲ್ಲ. ಒಂದು ಕಪ್ ಚಹಾ ಆದರೂ ಅವಳು ಮಾಡಿದ್ದೇ ಬೇಕು. ಕೇವಲ ಮನೆಗೆಲಸ ಅಷ್ಟೇ ಅಲ್ಲ ಶ್ರಾವಣಿ ಅವನ ವ್ಯವಹಾರದಲ್ಲೂ ಸಮಸಮವಾಗಿ ಶ್ರಮಿಸುತ್ತಿದ್ದಳು. ದಿನನಿತ್ಯದ ಲೆಟರ್ ಡ್ರಾಫ್ಟಿಂಗ್, ಬ್ಯಾಂಕ್ ಅಕೌಂಟ್ ಅಪ್ ಡೇಟ್ಸ್ ಎಲ್ಲಾ ನೋಡಿಕೊಳ್ಳುವುದು ಅವಳ ಜವಾಬ್ದಾರಿಯಾಗಿತ್ತು.
ಇದ್ದ ಒಬ್ಬ ಮಗ ಶಶಾಂಕನನ್ನು ಮುದ್ದಿನಿಂದ ಬೆಳೆಸಿ ತಲೆಯ ಮೇಲೆ ಕೂರಿಸಿಕೊಂಡಿದ್ದಳು. ಇಪ್ಪತ್ತೊಂದು ವರ್ಷದವನಾದರೂ ಕೈ ತುತ್ತು ಬಿಟ್ಟಿರಲಿಲ್ಲ. ಅವನ ಬೆನ್ನ ಹಿಂದೆ ಯಾರೂ ಇಲ್ಲದ್ದರಿಂದ ಅವನಿಗೇ ತಾಯಿ ಪ್ರೀತಿಯ ಮಹಾ ಪಾಲು.
ಹೆಣ್ಣಿಗೆ ತನ್ನದೇ ಆದ ಮನೆ, ಪತಿ, ಮಕ್ಕಳು ಸಿಕ್ಕಿಬಿಟ್ಟರೆ ಸಾಕು, ಅವಳು ತನ್ನನ್ನು ತಾನು ಮರೆತು ಬಿಡುತ್ತಾಳೆ. ಯಾವುದೇ ತನ್ನ ತೀರಾ ಖಾಸಗಿ ಆಸೆ, ಆಕಾಂಕ್ಷೆಗಳಿದ್ದರೂ ನಗಣ್ಯವಾಗಿ ಕುಟುಂಬ ಮೊದಲ ಆದ್ಯತೆಯಾಗುವುದು ಸಹಜ. ತನ್ನೆಲ್ಲಾ ತಾಯ್ತನದ ಪ್ರೀತಿಯ ಜಲಧಾರೆ ಎರೆದು ಖಾಲಿಯಾದಷ್ಟು, ಮತ್ತೆ ಮತ್ತೆ ಮೈದುಂಬಿ ಹರಿಯುತ್ತಾಳೆ. ಶ್ರಾವಣಿ ತನ್ನ ತಾಯಿಯನ್ನು ನೆನೆದು ಆಲೋಚಿಸುವಳು. ಹೌದಲ್ಲವೆ? ಅವ್ವ ಹೀಗೆ ತ್ಯಾಗಮಯಿ. ಅವಳ ಅವ್ವ ತನ್ನ ಅಜ್ಜಿ. ಅವಳೂ ಹೀಗೆ. ಅವಳವ್ವ ಮುತ್ತಜ್ಜಿ, ಅವಳೂ ಹೀಗೆಯೇ… ಹೆಣ್ತನಕ್ಕೆ ಬಳುವಳಿಯಾಗಿ ಬರುವ ಜವಾಬ್ದಾರಿಗಳು…
ಶ್ರಾವಣಿ ಮತ್ತು ಸಾಗರ ಇದೀಗ ದಾಂಪತ್ಯಕ್ಕೆ ಕಾಲಿರಿಸಿ ಇಪ್ಪತ್ತೈದು ವಸಂತಗಳು ಕಳೆದ ಸಂಭ್ರಮ. ಮಗ ಅವಳಿಗಿಂತ ಎತ್ತರ ಬೆಳೆದು ನಿಂತಿದ್ದ . ಈ ಮನೆಗೆ ಬಂದು ಅಷ್ಟೊಂದು ವರುಷಗಳೇ ಕಳೆದು ಹೋಗಿದ್ದವು. ನೆನ್ನೆ ಮೊನ್ನೆ ಮದುವೆಯಾದಂತೆ, ಹೊಟ್ಟೆಯೊಳಗಿದ್ದ ಶಶಾಂಕ ಮೃದುವಾಗಿ ಒದ್ದಂತೆ, ಅವನನ್ನು ಎತ್ತಿಕೊಂಡು ಓಡಾಡಿದಂತೆ, ಪುಟ್ಟ ಮಗು ಅಂಬೆಗಾಲಿಡುತ್ತ ಮನೆಯೆಲ್ಲಾ ಹರಿದಾಡಿದಂತೆ, ಶಾಲೆಗೆ ಹೋಗಿ ಮೊಣಕಾಲಿಗೆ ಗಾಯ ಮಾಡಿಕೊಂಡಂತೆ, ಅವನು ಅಳುತ್ತ ಬಂದಂತೆ, ತಾನು ರಮಿಸಿದಂತೆ… ಇನ್ನೂ ಏನೇನೆಲ್ಲಾ ನೆನಪು ಬಂದು ಮುತ್ತಿಕೊಂಡವು.
ಪತಿ ಎನಿಸಿಕೊಂಡ ಸಾಗರ ವಿಪರೀತ ಸಿಡುಕು ಸ್ವಭಾವದವನು. ಇಂತಹ ಮುಂಗೋಪಿಯನ್ನು ಜಾಣತನದಿಂದ ಸಂಭಾಳಿಸುವ ಅನಿವಾರ್ಯತೆ ಅವಳಿಗಿತ್ತು. ಅದೆಷ್ಟೇ ವೈರುಧ್ಯಗಳಿದ್ದರೂ ದಾಂಪತ್ಯದ ಕೊಂಡಿ ಸಡಿಲವಾಗಬಾರದೆಂಬ ಸಾತ್ವಿಕತೆ ಅವಳಲ್ಲಿತ್ತು. ತನ್ನ ಸಂಸಾರವನ್ನು ಜತನದಿಂದ ಕಾಯ್ದುಕೊಳ್ಳುವ ಗಟ್ಟಿ ನಿರ್ಧಾರ ಮಾಡಿದ್ದಳು.
ಹೆಣ್ಣಿನ ಮನಸು ಹುಚ್ಚು ಭ್ರಮೆಗಳಿಗೆ ಬಲಿಯಾಗಿ ಕನಸು ಕಟ್ಟಿಕೊಳ್ಳುತ್ತದೆ. ಅತ್ತೆ, ಮಾವ, ಗಂಡ, ಮಗ, ಎಲ್ಲರನ್ನೂ ಓಲೈಸುವ ಶತಪ್ರಯತ್ನದಲ್ಲಿ ಆಯುಷ್ಯ ಕರಗಿ, ಕಳೆದು ಹೋಗುತ್ತಿರುವುದು ಅವಳಿಗೆ ತಿಳಿಯುವುದೇ ಇಲ್ಲ. ಅಂತಃಶಕ್ತಿ ಇದ್ದರೂ… ಆತ್ಮಗೌರವಕ್ಕೆ ಧಕ್ಕೆಯಾದರೂ… ತನ್ನದೇ ಆದ ವೈಯಕ್ತಿಕ ಬದುಕೊಂದು ಇರುತ್ತದೆ ಎನ್ನುವುದನ್ನು ಮರೆತು ಬಿಡುತ್ತಾಳೆ. ತಾನೇ ಕಟ್ಟಿದ ಬೇಲಿಯಲ್ಲಿ ತಾನೇ ಬಂಧಿಯಾಗುತ್ತಾಳೆ. ತನ್ನ ಮನದ ಆಸೆ, ಆಕಾಂಕ್ಷೆ , ಸಾಧನೆ, ಎಲ್ಲವೂ ಗೌಣವಾಗಿ ಹೋದರೂ ಲೆಕ್ಕಿಸದ ಮನಸ್ಥಿತಿ ತಂದುಕೊಳ್ಳುತ್ತಾಳೆ. ಒಟ್ಟಾರೆ ಪರಿವಾರದವರನ್ನು ಓಲೈಸುತ್ತಲೇ ಆಯಸ್ಸು ಕಳೆಯುತ್ತಿರುತ್ತಾಳೆ.
ಮಧ್ಯಮ ವರ್ಗದ ಸುಶಿಕ್ಷಿತ ಕುಟುಂಬದಲ್ಲಿ ಬೆಳೆದ ಶ್ರಾವಣಿಯು ಅಚ್ಚುಕಟ್ಟಾಗಿ ಜೀವನ ನಡೆಸುವವಳು. ಉನ್ನತ ವಿದ್ಯಾಭ್ಯಾಸ ಜೊತೆಗೆ ಸರಳತೆಯೇ ಅವಳ ವ್ಯಕ್ತಿತ್ವ. ಅವಳ ಹೊಂದಿಕೊಂಡು ಹೋಗುವ ಸ್ವಭಾವಕ್ಕೆ ಜೀವನದ ಸುದೀರ್ಘ ದಾರಿ ಎಡವದೆ ಸಾಗಿತ್ತು. ಈ ಬದುಕೇ ಹೊಂದಾಣಿಕೆಯೊ? ಅಥವಾ ಹೊಂದಾಣಿಕೆಯೇ ಬದುಕೊ? ಎನಿಸುವಷ್ಟು ಅದರಲ್ಲೇ ಕಳೆದು ಹೋಗಿದ್ದಳು.
ಅವಳಿಗೆ ಇನ್ನೂ ನೆನಪಿದೆ… ಮೊದಲ ಬಾರಿ ಸಾಗರ ಹೆಣ್ಣು ನೋಡಲು ಬಂದಿದ್ದ ದಿನ. ಒಮ್ಮೆ ನೋಡಿದವನೆ ನಿಶ್ಚಯಿಸಿಯೇಬಿಟ್ಟಿದ್ದ. ಆದರೆ ಅವಳನ್ನೇ ಮದುವೆ ಆಗುವುದಾಗಿ ಹಟ ಹಿಡಿದ ಶ್ರೀಮಂತ ಮನೆತನದ ಹುಡುಗ. ಮೊದಲ ನೋಟದ ಪ್ರೀತಿಯೋ… ಪ್ರೇಮವೋ… ಯೌವನದ ಆಕರ್ಷಣೆಯೋ… ಹಿರಿಯರ ಆಣತಿಯೋ… ಶ್ರಾವಣಿಗೆ ಒಂದೂ ಅರ್ಥವಾಗಲಿಲ್ಲ. ನೆಂಟರೆಲ್ಲ ಹೆಣ್ಣು ಒಪ್ಪಿಗೆಯಾದ ಕೂಡಲೆ ಮಾತುಕತೆಗೆ ಮುಂದಾದರು. ಹುಡುಗನ ಮನೆಯಲ್ಲಿ ಎರಡೂ ಕಡೆಯವರು ಸೇರಿದರು. ವರದಕ್ಷಿಣೆ ವಿಷಯ ಬಂದಾಗ ಮಾತು ಬಿರುಸಾಗಿ ಸಾಗಿತು. `ಹೆಣ್ಣೂ ಕೊಡ ಬೇಕು, ಹಣನೂ ಕೊಡಬೇಕು. ಇದು ಯಾವ ನ್ಯಾಯ!?’ ಶ್ರಾವಣಿಯ ತಂದೆಯ ವಾದ.
ಶ್ರೀಮಂತ ಕುಟುಂಬದವರ ಬೇಡಿಕೆ ಮುಗಿಲು ಮುಟ್ಟಿತ್ತು. ಹಿರಿಯ ಮಗನಾದ ಸಾಗರ ನಾಲ್ಕು ಗಂಡು ಮಕ್ಕಳಲ್ಲಿ ಒಬ್ಬ. ಇಬ್ಬರು ಹೆಣ್ಣುಮಕ್ಕಳು ಕೊಟ್ಟ ಮನೆಗೆ ಹೋಗಿದ್ದರು. ಸುಟ್ಟರೆ ಸುಡಲಾಗದಷ್ಟು ಆಸ್ತಿ ಮನೆಯಲ್ಲಿತ್ತು. ಆದರೂ ಇನ್ನೂ ಬೇಕೆನ್ನುವ ಹಪಾಹಪಿ. ಅದಕ್ಕೆ ಕಾರಣವೂ ಇತ್ತು. ಅವರ ಮನೆತನದ ಅಂತಸ್ತಿಗೆ ತಕ್ಕಂತೆ ವರದಕ್ಷಿಣೆ ಕೊಟ್ಟರೆ ಮರ್ಯಾದೆ ಎನ್ನುವ ದುರಭಿಮಾನ ಅವರಲ್ಲಿತ್ತು.
ಹುಡುಗನ ಸೋದರಮಾವನ ನಿಷ್ಠುರ ಮಾತುಗಳಿಂದ ಇಡೀ ವಾತಾವರಣ ಕಲುಷಿತಗೊಂಡಿತ್ತು. ಇಪ್ಪತ್ತೈದು ತೊಲೆ ಬಂಗಾರ, ಒಂದು ಕಿಲೊ ಬೆಳ್ಳಿಯ ಬೇಡಿಕೆ ಇಟ್ಟರು. ಅವರ ವರದಕ್ಷಿಣೆಯ ಬೇಡಿಕೆಯ ಎದುರು ಶ್ರಾವಣಿಯ ರೂಪ, ಗುಣ, ವಿದ್ಯೆ ಎಲ್ಲಾ ಕವಡೆ ಕಿಮ್ಮತ್ತಿಲ್ಲದಂತಾಯಿತು. ಹೆಣ್ಣಿನ ತಂದೆ ತಾಯಿಗೆ ಇದು ಸರಿ ಕಾಣಲಿಲ್ಲ. ಉಟ್ಟ ಸೀರೆಯಲ್ಲಿ ಉಡಿಯಕ್ಕಿ ತುಂಬಿಸಿ, ಕೈಯಲ್ಲಿ ತೆಂಗಿನಕಾಯಿ ಕೊಟ್ಟರು ಸಾಕು, ನಾವು ಮದುವೆ ಮಾಡಿಕೊಂಡು ಹೋಗುತ್ತೇವೆ ಎಂದು ಹೇಳುವವರು ಸಾಕಷ್ಟಿದ್ದರು. ಆದರೆ ‘ಈ ಶ್ರೀಮಂತರು ಎನಿಸಿಕೊಂಡವರು ಭಿಕ್ಷೆ ಬೇಡುತ್ತಾರಲ್ಲ!’ ಎಂದು ಶ್ರಾವಣಿಯ ಅಪ್ಪ ಗೊಣಗದೆ ಬಿಡಲಿಲ್ಲ.
ವರದಕ್ಷಿಣೆ ವಿಷಯವಾಗಿ ನಿಶ್ಚಿತಾರ್ಥ ನಿಂತೇ ಹೋಯಿತು. ಇದೇನಿದು? ಮದುವೆ ಎನ್ನುವ ಹೆಸರಿನಲ್ಲಿ, ಎರಡು ಜೀವಗಳ ನಡುವೆ, ನಿರ್ಜೀವ ವಸ್ತುಗಳು ಜೀವಂತಿಕೆ ಪಡೆದುಕೊಂಡವಲ್ಲ ಎಂದು ಶ್ರಾವಣಿಗೆ ಖೇದವೆನಿಸಿತು. ಇಷ್ಟೆಲ್ಲ ಮುಂದುವರಿದರೂ ವಧುವಿನ ಮನದಲ್ಲಿ ಏನಿದೆಯೆಂದು ತಿಳಿಯುವ ಪ್ರಯತ್ನ ಯಾರೂ ಮಾಡಲಿಲ್ಲ . ಅವಳ ಇಷ್ಟ, ಆಯ್ಕೆ ಯಾವುದೂ ಮಹತ್ವದ್ದೆನಿಸಲಿಲ್ಲ. ಹೆತ್ತವರಿಗೂ ಒಂದು ಸ್ವಾರ್ಥ ಇದ್ದೇ ಇತ್ತು. ‘ಮೇವು ಇರುವ ಗೋದಲಿಗೆ ಹಸುವನ್ನು ಕಟ್ಟಬೇಕು’ ಎನ್ನುವ ಮಾತಿನಲ್ಲಿದ್ದ ನಂಬಿಕೆಯಂತೆ ಮುಂದುವರಿದರು. ವರದಕ್ಷಿಣೆ ಹೊಂದಿಸುವ ಪ್ರಯತ್ನದಲ್ಲಿದ್ದರು. ಗಂಡು ವಸ್ತುವಾಗಿ ಮಾರುಕಟ್ಟೆಯಲ್ಲಿ ನಿಂತೇ ಇದ್ದ…
ಉದ್ಯೋಗದಲ್ಲಿರುವ ಅವ್ವ ಅಪ್ಪ ಎಷ್ಟೇ ಲೆಕ್ಕಚಾರ ಹಾಕಿದರೂ ಆ ಖರ್ಚಿನ ಮಟ್ಟಕೇರಲು ಸಾದ್ಯವಾಗಲಿಲ್ಲ. ಅವರಿಗೆ ಒಮ್ಮೆ ಮದುವೆಯಾಗಿ ಬಿಟ್ಟರೆ ಸಾಕು ಮಗಳು ಸುಖವಾಗಿರುತ್ತಾಳೆನ್ನುವ ಭ್ರಮೆ. ಶ್ರಾವಣಿಗೆ ಯಾವ ರೀತಿ ಪ್ರತಿಭಟಿಸುವುದು? ಹೇಗೆ ಪ್ರತಿರೋಧ ವ್ಯಕ್ತಪಡಿಸುವುದು? ಒಂದೂ ತೋಚಲಿಲ್ಲ. ಅವ್ವ ಅಪ್ಪನ ಪರದಾಟ ಸಹಿಸದಾದಳು. ಸಾಗರ ಮನೆಗೆ ಬಂದಾಗ ತನ್ನನ್ನು ನೋಡಿದ ನೆನಪಾಯಿತು. ಅವನ ದೃಷ್ಟಿ ಎದುರಿಸಲಾಗದೆ ನೋಟ ನೆಲದ ಕಡೆಗೆ ಹರಿದಿತ್ತು. ಆ ಕೋಲ್ಮಿಂಚು ಮೂಡಿದ ಕ್ಷಣ ನೆನೆದು ಮತ್ತೆ ಪುಳಕಿತಳಾದಳು. ಅವನು ತನ್ನನ್ನು ನಿಜವಾಗಿಯೂ ಇಷ್ಟಪಟ್ಟಿದ್ದರೆ, ಖಂಡಿತ ವಸ್ತು ಆಮಿಷ ಇರಬಾರದಿತ್ತೆಂದುಕೊಂಡಳು.
ಕೆಲ ದಿನಗಳ ಮಟ್ಟಿಗೆ ಎರಡೂ ಮನೆಯವರು ಮೌನ ವಹಿಸಿದರು. ಶ್ರಾವಣಿಗೆ ಅದೇನೊ ಸಮಾಧಾನ ಆವರಿಸಿತು. ಸಾಗರನ ನೋಟದ ನೆನಪು ಕಾಡುತ್ತಿದ್ದರೂ, ಬೇಡವೆನಿಸಿತು. ಹೆತ್ತವರ ಹಣವನ್ನೆಲ್ಲ ಕಬಳಿಸಿ ಮದುವೆಯಾಗುವುದು ತನಗಿಷ್ಟವಿಲ್ಲವೆಂದು ಹೇಳಿಬಿಟ್ಟಳು. ಈ ರೀತಿಯ ವಿವಾಹ ಪದ್ದತಿಯೂ ಸರಿಯಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದಳು. ಅಪ್ಪ ಹೇಳಿದಂತೆ… ಉಟ್ಟ ಬಟ್ಟೆಯಲ್ಲಿ ಉಡಿ ತುಂಬಿಸಿಕೊಂಡು ಕೈ ಹಿಡಿಯುವವನು ಇದ್ದೇ ಇದ್ದಾನು ಎನ್ನುವ ಭರವಸೆಯ ಕನಸು ಕಟ್ಟಿಕೊಂಡಳು.
ಹೀಗೇ ಕೆಲವು ದಿನಗಳು ಸದ್ದಿಲ್ಲದೆ ಸರಿದವು. ಮುಂದೊಂದು ದಿನ… ಸಾಗರನ ಫೋನ್ ಬಂತು. ಹಣ, ಆಭರಣ ಎಲ್ಲಾ ತಾನೇ ನೋಡಿಕೊಳ್ಳುವುದಾಗಿ ಹೇಳಿದ. ಮದುವೆಯಾದರೆ ಶ್ರಾವಣಿಯನ್ನೇ ಎನ್ನುವ ಹಟ ಅವನಲ್ಲಿತ್ತು. ಅಬ್ಬಾ! ಕನಸಿನ ಕುವರ ವಾಸ್ತವದಲ್ಲಿ ಸಿಕ್ಕೇ ಬಿಟ್ಟ ಎಂದುಕೊಂಡಳು. ಆಗ ಅದೇ ಕಪ್ಪು ಡಬ್ಬಿಯಂತಹ ಫೋನ್. ಟ್ರಣ್… ಟ್ರಣ್… ಭಯ ಹುಟ್ಟಿಸುವಂತಹ ಕೂಗು. ಮನೆಯ ಹೃದಯ ಭಾಗದಲ್ಲಿ ನಿಂತು ಸಾಗರನೊಂದಿಗೆ ಮಾತು. ಅವನು ಹೇಳೇ ಹೇಳುತ್ತಿದ್ದ. ಇವಳು ಕೇಳೇ ಕೇಳುತ್ತಿದ್ದಳು. ಹೂಂ… ಇಲ್ಲ… ಉಹೂಂ… ಗೊತ್ತಿಲ್ಲ… ಇಷ್ಟರಲ್ಲೇ ಮಾತುಕತೆಯ ಮುಕ್ತಾಯ. ಅವಳಿಗೆ ಇದೆಲ್ಲ ಅನಿರೀಕ್ಷಿತ. ಏನಿದು ನಡೆಯುತ್ತಿರುವುದು? ತನ್ನ ಭ್ರಮೆ ಇರಬಹುದೆ? ಅನುಮಾನ ಕಾಡದಿರಲಿಲ್ಲ. ಸಾಗರನ ನೆನೆದಷ್ಟೂ ಪುಳಕವಾಗುತ್ತಿತ್ತು.
ಶ್ರಾವಣಿ ಮತ್ತು ಸಾಗರ ಹೊಸ ಜೀವನ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಜೀವನದ ದಾರಿಯಲ್ಲಿ ಅದೆಷ್ಟೋ ಏಳು ಬೀಳುಗಳು, ಹುಣ್ಣಿಮೆ ಅಮಾವಾಸ್ಯೆಗಳು, ಆಗಾಗ ವಸಂತನ ಅಪ್ಯಾಯತೆ, ಹರಿದಂತೆಲ್ಲ ಜೀವನವೇ… ಹಾಗೆ ಹೀಗೆ ಬಂದಂತೆ ಸಾಗುತ್ತಲೇ ಇದ್ದರು. ಕಾಲಾಂತರದಲ್ಲಿ… ಇಡೀ ಮನೆ ಛಿದ್ರ ಛಿದ್ರಗೊಂಡಿತು. ಹಿರಿಯ ಜೀವಿಗಳು ಕಣ್ಮರೆಯಾದವು. ಮನೆಯ ಒಲೆ ಬೇರೆಯಾಗಿ, ಒಂದರ ಬದಲಿಗೆ ನಾಲ್ಕು ಆದವು. ಒಡಹುಟ್ಟಿದವರು ದೂರಾದರು. ಸಾಗರನ ವ್ಯಾಪಾರ ಕುಸಿಯಿತು. ಹಿಡಿದ ಕೆಲಸವೆಲ್ಲ ಕೈ ಕೊಟ್ಟಿತು. ‘ಕಿಸ್ಮತ್ ಗಾಂಡು ಹೈ ತೊ ಪಾಂಡು ಕ್ಯಾ ಕರೆಗಾ?’ ಎನ್ನುವಂತೆ ಸಾಗರ ಅಸಹಾಯಕನಾದ. ಹತ್ತು ವರ್ಷಗಳಲ್ಲಿ ಅವನ ಹಣೆಬರಹವೇ ಬದಲಿಯಾಯಿತು. ಕೆಲವು ತಪ್ಪು ನಿರ್ಧಾರಗಳಿಂದಾಗಿ ನಷ್ಟ ಅನುಭವಿಸಬೇಕಾಯಿತು.
ಶಶಾಂಕನ ವಿದ್ಯಾಭ್ಯಾಸ ದುಬಾರಿಯಾದ ಕಾರಣ ಮನೆ ನಡೆಸುವುದೂ ಅಸಾಧ್ಯ ಎನಿಸುವಷ್ಟು ಪರಿಸ್ಥಿತಿ ಮಿತಿ ಮೀರಿ ಹೋಯಿತು. ಪಾಲಿಗೆ ಬಂದ ಆಸ್ತಿಪಾಸ್ತಿ ಕ್ರಮೇಣ ಕರಗ ಲಾರಂಭಿಸಿತು. ಶ್ರಾವಣಿಗೆ ಕೆಲಸಕ್ಕೆ ಸೇರಬೇಕೆಂಬ ಹಂಬಲವಿದ್ದರೂ ಸಾಗರನ ಒಪ್ಪಿಗೆ ಇರಲಿಲ್ಲ. ಗುಟ್ಟಾಗಿ ಅರ್ಜಿ ಹಾಕಿದ್ದಳು.
ಒಂದೇ ಒಂದು ಚಿಕ್ಕ ಮನೆ ಇಟ್ಟುಕೊಂಡು, ಉಳಿದದ್ದೆಲ್ಲ ಮಾರಿದರು. ಇಷ್ಟಾದರೂ ಸಾಲ ತೀರಲಿಲ್ಲ. ಮೋಸಗೊಳಿಸಿದವರು ತತ್ತರಿಸುವಂತೆ ಮಾಡಿದರು. ಬದುಕು ಸಂಘರ್ಷಮಯವಾಯಿತು. ಸಾಗರ ಕುಗ್ಗಿ ಹೋದ. ಮೇಲಿಂದ ಕೆಳಗಿಳಿದು ಜರ್ಜರಿತನಾದ. ಶ್ರಾವಣಿಯ ಮೈಮೇಲೆ ಒಂದು ಗುಂಜಿ ಬಂಗಾರ ಇಲ್ಲದಂತಾಯಿತು. ಆದರೂ ಶ್ರಾವಣಿ ಗಂಡನಿಗೆ ನೋವಾಗದಂತೆ ಎಚ್ಚರಿಕೆ ವಹಿಸುತ್ತಿದ್ದಳು. ಮನುಷ್ಯನಿಗೆ ಸಿರಿತನ ರೋಗವಾಗಿ ಅಂಟಿಕೊಳುವ ಅಪಾಯವಿರುತ್ತದೆ. ಸಾಗರ ದಿನೇ ದಿನೇ ಖಿನ್ನತೆಯ ಆಳದಲ್ಲಿ ಸಿಲುಕಿ ನಲುಗಿದ. ಅವನ ವರ್ತನೆಯಲ್ಲಿ ತುಂಬ ಬದಲಾವಣೆ ಕಂಡು ಬಂತು. ಯಾರು ಮಾತನಾಡಿದರೂ ತನ್ನ ಬಗ್ಗೆಯೇ ಎಂದು ಭ್ರಮಿಸಲಾರಂಭಿಸಿದ್ದ.
ಒಂದು ದಿನ ಇಬ್ಬರೂ ಶಶಾಂಕನೊಂದಿಗೆ ಊಟ ಮಾಡುತಿದ್ದರು. ಶ್ರಾವಣಿ ಮಗನೊಂದಿಗೆ ಬೇರೆ ಊರಿಗೆ ಹೋಗುವ ಪ್ರಸ್ತಾಪ ಮಾಡಿದಳು. ಶಶಾಂಕನಿಗೆ ಮೆರಿಟ್ ಸೀಟ್ ಸಿಕ್ಕಿತ್ತು. ಮನೆಯ ವಾತಾವರಣದಲ್ಲಿ ಸಾಲಗಾರರ ಕಾಟ ವಿಪರೀತವಾಗಿತ್ತು. ಮಗನನ್ನು ಜೊತೆ ಮಾಡಿಕೊಂಡು ದೂರಾಗುವ ಯತ್ನ ಅವಳಲ್ಲಿತ್ತು. ಎರಡೇ ಎರಡು ವರ್ಷ ಎನ್ನುವ ವಿವರಣೆ ಕೊಟ್ಟಳು.
ಸಾಗರನಿಗೆ ಮನಸು ಸರಿಯಿಲ್ಲದೆ ಬಹಳ ದಿನಗಳಾಗಿದ್ದವು. ಎಲ್ಲರೊಂದಿಗಿದ್ದರೂ ಒಂಟಿತನದ ಬಾಧೆ ತೀವ್ರವಾಗಿ ಕಾಡುತ್ತಿತ್ತು. ಅಭದ್ರತೆಯಿಂದ ತತ್ತರಿಸಿ ಹೋಗಿದ್ದ. ಇದ್ದಕ್ಕಿದ್ದಂತೆ ದುಡುಕಿದ. ‘ನೀವೆಲ್ಲ ಬಿಟ್ಟು ಹೋದರೆ ನಾನು ಬದುಕಲ್ಲ ಅಂದುಕೊಂಡ್ರಾ? ಸಾಯುವುದಿಲ್ಲ ಬದುಕೇ ಬದುಕ್ತೀನಿ. ಇನ್ನೊಂದು ಮದುವೆ ಮಾಡಿಕೊಂಡು ಜೀವನ ಮಾಡಿ ತೋರಿಸ್ತೀನಿ.’
ಶ್ರಾವಣಿ ಮತ್ತು ಶಶಾಂಕ ಒಂದು ಕ್ಷಣ ಗರ ಬಡಿದವರಂತೆ ನೋಡುತ್ತ ಕುಳಿತರು. ಇನ್ನೊಂದು ಕ್ಷಣದಲ್ಲಿ ತಮಾಷೆ ಎನಿಸಿ, ಗೊಳ್ಳೆಂದು ಜೋರಾಗಿ ನಕ್ಕು ಬಿಟ್ಟರು. ಗೇಲಿ ಮಾಡಿದಂತಾಗಿ ಸಾಗರನ ಒಡಲಲ್ಲಿ ಬೆಂಕಿ ಇಟ್ಟಂತಾಯಿತು. ಶ್ರಾವಣಿಯಿಂದ ಗೊತ್ತಿಲ್ಲದೆ ಆ ನಗು ಜಾರಿ ಹೋಗಿತ್ತು. ಈ ವಯಸ್ಸಿನಲ್ಲಿ ಮದುವೆ ಎಂದಾಗ ಶಶಾಂಕನಿಗೂ ನಗು ತಡೆಯಲಾಗದೆ ಹೊರಹಾಕಿದ್ದ. ಮೊದಲೇ ಕುಗ್ಗಿ ಹೋದ ಸಾಗರ ಇನ್ನೊಂದಿಷ್ಟು ವ್ಯಗ್ರನಾದ. ಇತ್ತೀಚೆಗೆ ಅವನ ಮಾನಸಿಕ ಸ್ಥಿತಿ ಸ್ಥಿಮಿತದಲ್ಲಿರಲಿಲ್ಲ. ಅವನ ಬದುಕಿನಿಂದ ನಗು, ಹಾಸ್ಯ, ವಿನೋದ, ತಮಾಷೆ… ಎಲ್ಲಾ ಅಳಿದು ಹೋಗಿತ್ತು. ಯಾರು ಏನೇ ಮಾತಾಡಿಕೊಂಡರೂ ತನ್ನ ಬಗ್ಗೆಯೇ ಎನ್ನುವ ಭ್ರಮೆಗೊಳಗಾಗಿದ್ದ.
ಪರಿಸ್ಥಿತಿ ಕೈ ಮೀರಿದ್ದು ನೋಡಿ ಶಶಾಂಕ ಎದ್ದು ಹೊರ ನಡೆದ … ಸಾಗರ ಗುಡುಗಿದ. ‘ಆಸ್ತಿ, ಐಶ್ವರ್ಯ ಎಲ್ಲಾ ಇದ್ದಾಗ ನಿನ್ನನ್ನು ನೋಡಿಕೊಳ್ಳಲಿಲ್ಲವೆ? ನೀನು ಮದುವೆ ಮಾಡಿಕೊಂಡು ಬರುವಾಗ ಏನೂ ತರಲಿಲ್ಲ. ನಿಮ್ಮ ಅಪ್ಪ ವರದಕ್ಷಿಣೆ ಕೊಡಲಿಲ್ಲ. ನಾನೇ ವಧು ದಕ್ಷಿಣೆ ಕೊಟ್ಟು ಕರೆದುಕೊಂಡು ಬಂದೆ. ಅದೆಲ್ಲಾ ಮರೆತು ಹೋಯಿತು ನಿನಗೆ. ಈಗ ನಗ್ತೀಯಾ?’
‘ಆವತ್ತು ನೀನು ಹಾಕಿಕೊಂಡ ಒಡವೆಗಳು, ಸುರಗಿಯಲ್ಲಿ ಇಟ್ಟ ಬೆಳ್ಳಿ ಪಾತ್ರೆಗಳು, ಯಾರಿಗೂ ತಿಳಿಯದಂತೆ ಕೊಟ್ಟಿದ್ದು ನಾನೇ! ಮರೆತು ಬಿಟ್ಟೆ ನೀನು… ನಿನ್ನ ತವರು ಮನೆ ಆಸ್ತಿ ತಂದಿದ್ದರೆ, ಮಾತಾಡಬೇಕು… ನಗಬೇಕು… ತಮಾಷೆ ಮಾಡಬೇಕು.’
‘ನನ್ನ ಆಸ್ತಿ … ನಾನು ದುಡಿದದ್ದು… ನಾನೇ ಮಾರಿದೆ… ಅಷ್ಟೆ. ನಿನ್ನದೇನು ಹೇಳು? ಮಗನಿಗೆ ತಲೆ ತುಂಬಿ ಇಬ್ಬರೂ ಸೇರಿ ಆಡಿಕೊಳ್ಳುತ್ತೀರಿ. ಈಗಿರುವುದನ್ನೆಲ್ಲಾ ಮಾರಿ, ತಾಯಿ ಮಗ ಇಬ್ಬರನ್ನೂ ರಸ್ತೆ ಮಧ್ಯೆ ನಿಲ್ಲಿಸುವೆ. ಅವನು ಕೂಲಿ ಮಾಡಲಿ, ನೀನು ಮುಸುರೆ ತಿಕ್ಕು.’
‘ಎಲ್ಲರಿಗೂ ಸೊಕ್ಕು. ಪ್ರಪಂಚದಲ್ಲಿ ನಾನೇ ಸಾಲ ಮಾಡಿರೋನು ಅಂತಾರೆ ಮೂರ್ಖರು.’
ಅವನ ಕಿರುಚಾಟಕ್ಕೆ ಶ್ರಾವಣಿ ನಡುಗಿ ಹೋದಳು. ಅವನ ದೇಹ, ಮನಸು ಸಮತೋಲನ ಕಳೆದುಕೊಂಡಿತ್ತು. ತನ್ನದೇ ಆದ ಕೀಳರಿಮೆಯಿಂದ ನಲುಗಿ ಹೋಗಿದ್ದ. ವ್ಯವಧಾನ ಕಳೆದುಕೊಂಡು ವ್ಯಗ್ರನಾಗಿದ್ದ. ವಾದ ಮಾಡುವ ಸ್ಥಿತಿಯಲ್ಲಿ ಅವನಿರಲಿಲ್ಲ. ಶ್ರಾವಣಿ ಮೌನವಾದಳು. ಇತ್ತೀಚೆಗೆ ಸಾಗರನ ಸ್ವಬಾವ ಕಿರಿಕಿರಿ ಎನಿಸತೊಡಗಿತ್ತು. ಯಾವುದೇ ಮಾತಿರಲಿ ಹೆಂಡತಿಯನ್ನು ನೋಯಿಸಿ ಗಾಸಿಗೊಳಿಸುತ್ತಿದ್ದ. ಅವಳ ತಾಳ್ಮೆ ಕಟ್ಟೆಯೊಡೆದಿತ್ತು. ಅಣೆಕಟ್ಟಿನ ಬಾಗಿಲು ತೆರೆದುಕೊಂಡ ತೀವ್ರತೆ ಅದಕ್ಕಿತ್ತು. ಆ ರಭಸಕ್ಕೆ ಏನೆಲ್ಲ ಕೊಚ್ಚಿಕೊಂಡು ಹೋಗುವ ಶಕ್ತಿ. ತಾಳ್ಮೆ, ಸಹನೆ ಹೆಣ್ಣಿಗಷ್ಟೇ ಕಟ್ಟಿಟ್ಟ ಬುತ್ತಿಯೆ?
ಇಂದೇಕೊ ಅವಳ ಮನ ಪ್ರತಿರೋಧದಿಂದ ಕುದಿಯಿತು. ಸೆಟೆದು ನಿಂತಿತು. ಅವನ ಕಷ್ಟದಲ್ಲಿ ಜೊತೆಯಾಗಿ, ಪ್ರತಿ ಹೆಜ್ಜೆಗೂ ಮೌನವಾಗಿ ಸಹಕರಿದಳು. ಅವನ ಸ್ವಾರ್ಥ ಮನೋಭಾವವನ್ನು ತಿದ್ದಲೆತ್ನಿಸಿದಳು. ಎಲ್ಲಾ ವ್ಯರ್ಥವಾಯಿತು. ಮನುಷ್ಯ ಬೆಳೆದಂತೆಲ್ಲ ತನ್ನ ವ್ಯಕ್ತಿತ್ವ ತಾನೇ ರೂಪಿಸಿಕೊಳ್ಳುತ್ತಾನೆ. ಯಾರು ಯಾರನ್ನೂ ಬದಲಿಸಲು ಸಾದ್ಯವಿಲ್ಲ. ಆ ಸತ್ಯ ಶ್ರಾವಣಿಯ ರೋಸಿ ಹೋದ ಮನಕ್ಕೆ ತಿಳಿಯಿತು. ಈ ಘಟನೆಯ ನಂತರ ಅವಳ ಮನ ಕ್ಷೋಭೆಗೊಳಗಾಯಿತು.. ಬದುಕಿನಲ್ಲಿ ಸಹನೆಗೆ ಬೆಲೆಯೇ ಇಲ್ಲವೆನಿಸಿತು. ಒಬ್ಬ ವ್ಯಕ್ತಿಯನ್ನು ಇಷ್ಟೊಂದು ಸಹಿಸಿಕೊಳ್ಳುವುದೇ? ಅವ್ವ, ಅಪ್ಪ, ಅತ್ತೆ, ಮಾವ ಎಲ್ಲರೂ ಈ ಪ್ಪಪಂಚ ಬಿಟ್ಟು ಹೋಗಿದ್ದರು. ಮೈದುನರೆಲ್ಲ ಬೇರೆಯಾಗಿದ್ದರು. ನಾದಿನಿಯರು ವಿದೇಶ ಸೇರಿದ್ದರು.
ಹೆಂಡತಿ, ಮಗ ಬಿಟ್ಟರೆ ಸಾಗರನಿಗೆ ಯಾರಿದ್ದಾರೆ? ಅವನಿಗೆ ಬಂಗಾರವೇ ದೊಡ್ಡದಾಯಿತೆ? ಯಾವತ್ತೂ ಹೊಂದಾಣಿಕೆ ಮಾಡಿಕೊಳ್ಳುವ ಶ್ರಾವಣಿ, ಇಂದು ಅವನಾಡಿದ ಮಾತುಗಳಿಂದ ಘಾಸಿಗೊಳಗಾದಳು. ಮನೆಯಲ್ಲಿ ನೀರವತೆ ಆವರಿಸಿತ್ತು. ಗಾಯಗೊಂಡ ಮನಸುಗಳು ತಡವಿದ ಹಾವಿನಂತಾಗಿದ್ದವು. ಇಂತಹ ಸಂದರ್ಭದಲ್ಲಿ ನೌಕರಿಗೆ ಆರ್ಡರ್ ಬಂದಿತ್ತು. ಮಗ ಹೆಚ್ಚಿನ ವಿದ್ಯಾಬ್ಯಾಸಕ್ಕೆ ತೆರಳಿದ. ಅವನೊಂದಿಗೆ ತಾನೂ ಹೊರಟಳು.
ಒಂದು ಕೈಯಲ್ಲಿ ಪತ್ರ, ಇನ್ನೊಂದು ಕೈಯಲ್ಲಿ ಸೂಟ್ ಕೇಸ್ ಹಿಡಿದು, ಸಾಗರನೆದುರಿಗೆ ನಿಂತಳು. ಅವನು ಕಕ್ಕಾಬಿಕ್ಕಿಯಾದ. ‘ನನಗೆ ಕೆಲಸ ಸಿಕ್ಕಿದೆ. ಇನ್ನೊಬ್ಬರ ಮನೆ ಮುಸುರೆ ತಿಕ್ಕದೆ, ನನ್ನ ಬದುಕು ನಾನೇ ಕಟ್ಟಿಕೊಳ್ಳಬಲ್ಲೆ. ನಿಮಗೆ ಭಾರವಾಗಲಾರೆ…’
ಕೊರಳ ಮಾಂಗಲ್ಯಕ್ಕೆ ಕೈ ಹಾಕಿದಳು. ಅವಳ ದೇಹ ಕಂಪಿಸಿತು. ಆದರೂ ಗಟ್ಟಿಯಾಗಿ ನಿಂತಳು. ಎರಡೂ ತಾಳಿಗಳನ್ನು ಹಿಡಿದು ಎಳೆದಳು. ಮುಷ್ಠಿಯಲ್ಲಿ ಬಂಗಾರದ ತಾಳಿಗಳು ಸೇರಿದವು. ಕರಿಮಣಿ ಮನೆ ತುಂಬಾ ಹರಡಿತು. ಒಂದಿಷ್ಟು ಕರಿಮಣಿ ಅಲ್ಲೇ ದಾರದಲ್ಲಿ ನೇತಾಡಿತು.
ಸಾಗರನ ಬೆರಳುಗಳನ್ನು ಬಿಡಿಸಿ ಅಂಗೈಯಲ್ಲಿ ತಾಳಿಯನಿಟ್ಟು ಮತ್ತೆ ಮುಚ್ಚಿದಳು.
ವಾಸ್ತವ ಕಣ್ಣೆದುರು ನಿಂತಿತ್ತು. ಈ ಬದುಕು ಮಹತ್ವದ್ದೆನಿಸಿತು. ಅವಳ ಸ್ವಾಭಿಮಾನ ಹೂವಂತೆ ಅರಳಿತು. ಸಹನೆಗೆ ಅರ್ಥವೇ ಇಲ್ಲ ಎನಿಸಿದ ಕ್ಷಣ! ಆಗಲೇ ಎಚ್ಚೆತ್ತಿದ್ದಳು. ಇಷ್ಟು ದಿನ ಇರುತ್ತಿದ್ದ ಭಾವಕೋಶದಿಂದ ಹೊರಬಂದಾಗ ಸಹಜತೆ ಅವಳನ್ನು ಆವರಿಸಿತು. ಅದು ಬರುವುದೀಗ ಅನಿವಾರ‌್ಯವೂ ಇತ್ತು. ಕಣ್ಣು ಮುಚ್ಚಿ ಧೇನಿಸಿ ಒಮ್ಮೆ ಸುದೀರ್ಘ ಉಸಿರು ತೆಗೆದುಕೊಂಡು ಬಿಡುವುದರೊಳಗೆ ಏನೋ ಹೊಳೆಯಿತು…
‘ಮಾರಿಬಿಡು’ ಎಂದು ಹೇಳುತ್ತ, ಶ್ರಾವಣಿ ಸೂಟ್ ಕೇಸ್ ಎತ್ತಿಕೊಂಡು ವೇಗದಿಂದ ಬಾಗಿಲಿನತ್ತ ನಡೆದಳು. ದಢಾರನೆ ತೆರೆದು ಹೊರ ಹೆಜ್ಜೆ ಹಾಕಿದಳು… ಅವನಿಂದ ‘ಶ್ರಾವಣಿ…’ ಎನ್ನುವ ಕೂಗನ್ನು ಅವಳು ನಿರೀಕ್ಷಿಸಲಿಲ್ಲ. ಅವನೂ ಕರೆಯಲಿಲ್ಲ.
ಕಾವ್ಯಶ್ರೀ ಮಹಾಗಾಂವಕರ (ಸಿಕಾ)
ಕಲಬುರಗಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.