ಕಥಾ ಕ್ಷಿತಿಜ/ ಚಿಕ್ಕ ಚಿಕ್ಕ ಕಥೆಗಳು -ಗಾಯತ್ರೀ ರಾಘವೇಂದ್ರ
ಫೋನ್ ಬಂತು
ಮುಸ್ಸಂಜೆ ಹೊತ್ತು… ಅಪ್ಪ ಚಪ್ಪಲಿ ಮೆಟ್ಟಿ ಕೊಂಡು ಹೊರಗಡೆ ಹೊರಟಿದ್ದರು. ನಾನು ತಡೆದೆ. “ಯಾವ ಕಡೆ ಹೊರಟಿದ್ದು?” ಅಪ್ಪ ಹೇಳಿದರು “ನನ್ನ ಆತ್ಮೀಯ ಗೆಳೆಯನೊಬ್ಬನನ್ನು ನೋಡಬೇಕೆಂದು ಬಹಳವಾಗಿ ಅನಿಸುತ್ತಿದೆ. ಹೋಗಿ ಬರುತ್ತೇನೆ.” “ಹೌದಾ ನಾನು ಹೇಗೂ ಹೊರಗಡೆ ಹೋಗುವವನಿದ್ದೇನೆ, ನಾನೇ ಬಿಡುತ್ತೇನೆ ಇರಿ” ಎಂದೆ. ಅವರು ಕುಳಿತರು. ಹೊರಡುವಷ್ಟರಲ್ಲಿ ನನಗೆ ಫೋನ್ ಬಂತು. ಕೆಲಸದ ವಿಚಾರವಾಗಿ ಬಂದ ಫೋನ್.
ತಾಸು ಕಳೆದಿರಬಹುದು. ನೋಡಿದರೆ ಅಪ್ಪ ಅಲ್ಲಿ ಚಡಪಡಿಸುತ್ತ ಕುಳಿತೇ ಇದ್ದರು. “ಅಪ್ಪ ಕ್ಷಮಿಸಿ ಈಗ ತುಂಬ ಹೊತ್ತಾಗಿದೆ. ನಿಮಗೂ ವಯಸ್ಸಾಗಿದೆ ಕತ್ತಲಲ್ಲಿ ಹೋಗುವುದು ಯಾಕೆ? ಬೆಳಿಗ್ಗೆ ನಾನೇ ಆಫೀಸಿಗೆ ಹೋಗುವಾಗ ಬಿಟ್ಟು ಹೋಗ್ತೇನೆ ಅವರ ಮನೆಗೆ” ಅಂದೆ. ಅವರು ಒಲ್ಲದ ಮನಸಿಂದಲೇ ಒಪ್ಪಿದರು.
ನಸುಕಿನ ಹೊತ್ತಿನಲ್ಲಿ ಅಪ್ಪನಿಗೆ ಒಂದು ಫೋನ್ ಬಂತು. ಅತ್ತಲಿಂದ ದನಿ ಕೇಳಿಸ್ತಾ ಇತ್ತು… “ಅಂಕಲ್ ನಿನ್ನೆ ಮಧ್ಯ ರಾತ್ರಿ ಹೊತ್ತಿಗೆ ಅಪ್ಪ ಹೃದಯಾಘಾತವಾಗಿ ಹೋಗಿಬಿಟ್ರು. ಸಂಜೆಯೆಲ್ಲ ನಿಮ್ಮನ್ನ ನೆನಪಿಸಿಕೊಳ್ತಾ ಇದ್ದರು.” ಚಳಿಯಲ್ಲೂ ನಾ ಬೆವೆತು ಹೋದೆ. ಅಪ್ಪ ಬಿಕ್ಕಿದ್ದು ಕೇಳಿತು.
***
ಹಣತೆ
ಕೆಲಸ ಮುಗಿಸಿ ಮನೆಗೆ ಬಂದ ಅವನಿಗೆ ಎಲ್ಲೆಲ್ಲೂ ಕತ್ತಲೇ ಆವರಿಸಿತ್ತು .ಹೆಂಡತಿಯನ್ನು ಕೂಗಿ ಕರೆದರೂ ಉತ್ತರವೇ ಇಲ್ಲ. ಇಲ್ಲೇ ಪಕ್ಕದ ಮನೆಗೆ ಹೋಗಿರಬಹುದು ಎಂದುಕೊಂಡು ನೀರು ಕುಡಿಯಲು ಅಡುಗೆ ಮನೆಗೆ ಹೋಗುತ್ತಿರುವಾಗ ದೇವರ ಮುಂದಿನ ದೀಪ ಈಗಷ್ಟೇ ಆರಿರುವುದು ಅದರ ಹೊಗೆಯಾಡುವಿಕೆಯಿಂದ ತಿಳಿಯಿತು.
ಅವ್ಯಕ್ತ ವ್ಯಾಕುಲತೆಯಿಂದ ಅಡುಗೆಮನೆಗೆ ನಡೆದಾಗ ಅಲ್ಲಿ ಅವಳು ಬಿದ್ದಿದ್ದಳು! ಹೃದಯಾಘಾತ ಆಗಿದೆ ದೇಹದಲ್ಲಿ ಉಸಿರಿಲ್ಲ. ಮನೆ ಬೆಳಗಲು ಬಂದು ಈಗ ಕತ್ತಲಾಗಿಸಿ ನಡೆದೆ ಎಂದು ಕಣ್ಣೀರಾಗುವಷ್ಟರಲ್ಲಿ ಮಗಳು ಬಂದು ಇದೇನು ಕತ್ತಲು ಎಂದುಮನೆಯೆಲ್ಲ ದೀಪ ಹಾಕಿದಳು.
***
ಸಾಧ್ಯತೆ
ಒಂದು ಗಾಳಿ ತುಂಬಿದ ದೊಡ್ಡ ಗಾತ್ರದ ಬಲೂನು ಮನೆಯ ಮೂಲೆಯಲ್ಲಿ ಬಿದ್ದಿತ್ತು. ಅದು ತನ್ನಷ್ಟಕ್ಕೇ ಅಂದುಕೊಳ್ಳುತ್ತಿತ್ತು. ಈ ಮನೆಯ ಪುಟಾಣಿ ಹುಡುಗ ಎಷ್ಟು ಹೊತ್ತಿಗೆ ಬರುತ್ತಾನೆ ನನ್ನ ಆಡಲು? ಅವನು ಬಂದರೆ ಮಾತ್ರ ನಾನು ಆಡಬಲ್ಲೆ, ಅವನ ಕಾಲಿನಿಂದ ಎಗರಿಸಿದಾಗ ಮಾತ್ರ ನಾನು ಆಗಸಕ್ಕೆ ನೆಗೆಯಬಲ್ಲೆ, ಊಫ್ ಎಂದು ಊದಿದಾಗಲೇ ನಾನು ಗಾಳಿಯಲ್ಲಿ ತೇಲಿ ತೇಲಿ ನಲಿಯಬಲ್ಲೆ. ಕೈಯಲ್ಲಿ ಹಿಡಿದು ಎಸೆದಾಗ ನಾನು ಕುಣಿ ಕುಣಿದು ಹಾರಬಲ್ಲೆ ಇಲ್ಲವಾದರೆ ಹೀಗೇ ಮೂಲೆಯಲ್ಲೆ ಇರಬೇಕು. ನನ್ನಿಂದ ಸ್ವತಂತ್ರವಾಗಿ ಹಾರಿ ತೇಲಲು ಸಾಧ್ಯವೆ ಇಲ್ಲ…
ಎಂದೆಲ್ಲ ಅಂದುಕೊಳ್ಳುತ್ತಿರುವಾಗ ತೆರೆದ ಬಾಗಿಲಿನಿಂದ ತಣ್ಣನೆಯ ಗಾಳಿಯೊಂದು ತೇಲಿಬಂದಿತು. ಬಲೂನು ಅದಕ್ಕೆ ತನ್ನ ತಾ ಮೈಯೊಡ್ಡಿಕೊಂಡಾಗ ಅದು ಬಲೂನನ್ನು ಅನಾಯಾಸವಾಗಿ ಎತ್ತಿ ತನ್ನೊಡನೆ ತೇಲಿಸಿಕೊಂಡು ಬಯಲಿಗೆ ಕೊಂಡೊಯ್ದಿತು. ಬಲೂನು ಹಾರತೊಡಗಿತು, ಬಾನೆತ್ತರಕೆ ನೆಗೆಯಿತು, ಕುಣಿದು ನೆಗೆದು ಹಗುರವಾಗಿ ಸಾಗಿತು. ಆಗ ಅದಕ್ಕೆ ಅರಿವಾಯಿತು ತಾನೂ ಹಾರಬಲ್ಲೆ, ತನ್ನೊಳಗೂ ಶಕ್ತಿಯಿದೆ ಎಂದು.
ನಾವೂ ಹಾಗೆಯೇ ಅಲ್ಲವೆ? ನಮ್ಮೊಳಗೂ ಶಕ್ತಿಯಿದೆ, ಪ್ರತಿಭೆಯಿದೆ. ಆದರೆ ಪ್ರಯತ್ನಿಸದೆ ಯಾರದೋ ನೆರವಿನ ಹಸ್ತಕ್ಕಾಗಿ ಕಾಯುತ್ತ ಕುಳಿತಿರುತ್ತೇವೆ. ನಮ್ಮೊಳಗಣ ಚೈತನ್ಯ ಮರೆತಿರುತ್ತೇವೆ.
***
ಪಾಠ
ಒಂದು ದಿನ ನಮ್ಮ ಮನೆಗೆ ಅಪರೂಪದ ಅತಿಥಿಗಳು ಬಂದಿದ್ದರು. ಸೌಖ್ಯ ವಿಚಾರಿಸಿ ಕಾಫಿ ತಿಂಡಿ ಬಗ್ಗೆ ಕೇಳುವುದು ವಾಡಿಕೆ. ಅಂತೆಯೆ “ನೀವು ಏನು ಕುಡಿತೀರಿ? ತಿಂಡಿ ತಿನ್ನಬಹುದು” ಎಂದಾಗ ಅವರೆಲ್ಲ ಸ್ವಲ್ಪ ಸಂಕೋಚದಿಂದ “ಹೇ ಅದೆಲ್ಲ ಏನು ಬೇಡ ಮಾತಾಡಿಕೊಂಡು ಹೊರಡುತ್ತೇವೆ” ಎಂದರು.
ಅಲ್ಲೇ ಏನನ್ನೂ ಕೇಳಿಸಿಕೊಳ್ಳದವಳಂತೆ ತನ್ನಷ್ಟಕ್ಕೆ ತಾ ಆಟವಾಡಿಕೊಂಡಿದ್ದ ಎರಡು ವರ್ಷದ ಮಗಳು ಥಟ್ಟನೆ “ತಿಂಡಿ ಬೇಡ ಗೀಡ ಅಂದ್ರೆ ಗುದ್ಬುಡ್ತೀನಿ … ತಿನ್ನೋದೇ” ಅಂತ ಹೇಳಿಬಿಟ್ಟಳು. ಮಾತಾಡ್ತಾ ಇದ್ದವರೆಲ್ಲ ಒಂದು ಕ್ಷಣ ಶಾಂತವಾಗಿ ಬಿಟ್ಟರು. ತಕ್ಷಣ ನಾನು ಅವಳನ್ನೆತ್ತಿಕೊಂಡು ಒಳಗೆ ನಡೆದೆ. ಮನೆಯವರು ಬೇರೇನೋ ಮಾತಾಡಿ ಆ ವಿಷಯ ಮರೆಸಿದರು.
ಅಂದಿನಿಂದ ಅವಳಿಗೆ ಊಟ, ತಿಂಡಿ ಮಾಡಿಸುವಾಗ ಬೈದು ಬಾಯಿಗೆ ತುರುಕುವುದನ್ನು ನಿಲ್ಲಿಸಿಬಿಟ್ಟೆ!
***
ನಿಗಳ
ಒಂದು ವಿಶಾಲವಾದ ಮಾವಿನಮರ. ಅದರಲ್ಲಿ ನೂರಾರು ಜಾತಿಯ ಪಕ್ಷಿ ಸಂಸಾರ ವಾಸವಾಗಿತ್ತು. ಒಂದು ದಿನ ಅಂತಹ ಪಕ್ಷಿ ಸಂಸಾರಗಳ ಜೊತೆ ಕೋಗಿಲೆಯ ಸಂಸಾರವೂ ಜೊತೆಯಾಯ್ತು. ಎಲ್ಲ ಪಕ್ಷಿಗಳೂ ಬಹಳ ಆನಂದದಿಂದ ವಾಸವಾಗಿದ್ದವು. ಮುಂಜಾನೆ ಹೊತ್ತಿನಲ್ಲಂತೂ ಅವುಗಳ ಚಿಲಿಪಿಲಿಯ ರಾಗದಿಂದ ಇಡೀ ಪರಿಸರವೇ ಸಂಗೀತಶಾಲೆಯಾಗಿ ಬಿಡುತ್ತಿತ್ತು. ಅಂತಹುದರಲ್ಲಿ ಕೋಗಿಲೆ ಮಾತ್ರ ತನ್ನ ಗೂಡಿನಿಂದ ಹೊರಬರದೇ ಕತ್ತು ಮಾತ್ರ ಹೊರಗಿಣುಕಿ ಮತ್ತೆ ಗೂಡಿನೊಳಗೆ ಸೇರಿ ಬಿಡುತ್ತಿತ್ತು.
ಎಲ್ಲ ಪಕ್ಷಿಗಳು ಆಹಾರಕ್ಕಾಗಿ ಹೊರನಡೆದಮೇಲೆ ಮೆಲ್ಲನೆ ಕೊಂಬೆಯ ಮೇಲೆ ಬಂದು ಎಲೆಗಳ ಮರೆಯಲ್ಲಿ ಕುಳಿತು ವಿಷಾದದಿಂದ ಜಗತ್ತನ್ನು ನೋಡುತ್ತಿತ್ತು. ಅದಕ್ಕೆ ತನ್ನ ದೇಹದ ಬಗೆಗೆ ಬೇಸರ, ತನ್ನ ಅಂದದ ಬಗೆಗೆ ದುಃಖ, ತನ್ನ ಆಕಾರದ ಬಗೆಗೆ ನೋವು. ಉಳಿದ ಪಕ್ಷಿಗಳಂತೆ ತಾನು ಇಲ್ಲವಲ್ಲ ಎಂದು ಸದಾ ಚಿಂತಿಸುತ್ತ ತನ್ನನ್ನು ತಾನೇ ಹಳಿದುಕೊಳ್ಳುತ್ತ ಹೊರಗೆ ಹೋಗಲು ಮುಜುಗರ ಪಡುತ್ತ ಗೂಡಿನಲ್ಲಿಯೇ ಉಳಿಯುತ್ತಿತ್ತು.
ಅದೊಂದು ವಸಂತಕಾಲದ ಮಧುರ ಬೆಳಗು… ಚಿಗುರು, ಹೊಸ ಹೂಗಳ ಮಧುಗಂಧ ಗೂಡಿನಿಂದ ಇಣುಕಿದ ಕೋಗಿಲೆಗೆ ಎದೆಯೊಳಗೆ ಅರಿಯದ ಆನಂದ ಭಾವ. ಹೊರಗೆ ಹೆಜ್ಜೆಯಿಟ್ಟು ಪರಿಸರವ ನೋಡುತ್ತ ಅರಿವಿರದೆ ಅದರ ಕಂಠದಿಂದ ಹಾಡು ಉಲಿಯಿತು. ನಿಧಾನವಾಗಿ ಶುರುವಾದ ಗಾನ ತೇಲಿ ತೇಲಿ ಗಾಳಿಯೊಡನೆ ಲೀನವಾಗಿ ಮರ ಗಿಡ ಖಗ ಮೃಗಗಳ ಹೃದಯ ಸೇರಿ ಜಗವ ತನ್ನ ಗಾನದೊಳಗೆ ಮೋಡಿ ಮಾಡಿತು. ಹಾಡುತ್ತ ಹಾಡುತ್ತ ಕೋಗಿಲೆ ತನ್ನ ಎಲ್ಲ ನಿಗಳಗಳ ಕಳಚಿ ಹಾಕಿತು. ಹಾಡುವುದೇ ಅದರ ಬದುಕಾಯಿತು. ಮನುಷ್ಯನೂ ಅಷ್ಟೆ ತನ್ನೆಲ್ಲಾ ಕೀಳರಿಮೆಗಳ ನಿಗಳಗಳ ಕಳಚಿ ಮುನ್ನಡೆದಾಗಲೇ ಗುರಿ ತಲುಪಲು ಸಾಧ್ಯ.
-ಗಾಯತ್ರೀ ರಾಘವೇಂದ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.