Uncategorizedಕಥಾ ಕ್ಷಿತಿಜಸಾಹಿತ್ಯ ಸಂಪದ

ಕಥಾ ಕ್ಷಿತಿಜ/ ಕಿಟಕಿಯಲ್ಲಿ ಕಂಡ ಚಿತ್ರಗಳು – ಮಾಲತಿ ಪಟ್ಟಣಶೆಟ್ಟಿ

ಅದೇಕೋ ಏನೋ ನನ್ನ ಮನೆಯ ಈ ಕಿಟಕಿಯಲ್ಲಿ ನೋಡುವುದಾಗಲಿ, ಹತ್ತಿರ ಕುಳಿತು ಓದುವುದಾಗಲಿ ನನಗೆ ಬಹಳ ಪ್ರೀತಿ! ಗುಬ್ಬಿ, ಕಾಗೆ, ಗೊರವಂಕ, ಇಣಚಿಗಳ ಬಗೆಬಗೆಯ ಇಂಚರಗಳು, ಅವುಗಳ ಗತಿಶೀಲ ಬದುಕು ನನ್ನ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನು ಉಂಟುಮಾಡುತ್ತವೆ. ರಾತ್ರಿಗಳಲ್ಲಿ ಈ ಕಿಟಕಿ ತೋರುವ ದೃಶ್ಯಗಳು ತದ್ವಿರುದ್ಧವಾಗಿ ನೋವು ತಳಮಳಗಳನ್ನು ಕೊಡುತ್ತವೆ.


ಬದಲಾಗುವ ಆಕಾಶದ ಬಣ್ಣಗಳನ್ನು ನೋಡುತ್ತೇನೆ. ಪಶ್ಚಿಮ ರಂಗಭೂಮಿಯಲ್ಲಿ ಕ್ಷಣ ಕ್ಷಣಕ್ಕೆ ಬದಲಾಗುವ ನಟ ಸೂರ್ಯನ ಮುಖ ಚರ್ಯೆಯನ್ನು ನೋಡುತ್ತಾ ತಾಸುಗಟ್ಟಲೆ ನಿಲ್ಲುತ್ತೇನೆ. ಅಂದಹಾಗೆ ಈ ಕಿಟಕಿಯ ಅರ್ಧ ಭಾಗವನ್ನು ಆವರಿಸಿದ ಒಂದು ಅರಳಿ ಮರವಿದೆ. ಅದರ ಶಾಖೆಗಳು ಎಲ್ಲ ದಿಕ್ಕುಗಳಲ್ಲೂ ಚಾಚಿಕೊಂಡಿವೆ. ಈ ವೃಕ್ಷದ ತುಂಬಾ ಸದಾ ವಾಸವಾಗಿದ್ದ ಗುಬ್ಬಿ, ಕಾಗೆ, ಗೊರವಂಕ ಮತ್ತು ಇಣಚಿಗಳ ಬಗೆಬಗೆಯ ಇಂಚರಗಳು ಮತ್ತು ಅವುಗಳ ಗತಿಶೀಲ ಬದುಕು ನನ್ನ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನು ಉಂಟುಮಾಡುತ್ತವೆ. ದಿನ ಬೆಳಗೂ ಈ ಪಕ್ಷಿ ಸಂಕುಲದ ಒಂದು ಜೀವಂತ ಚಲನ ಚಿತ್ರವೂ ಕಣ್ಣ ಮುಂದೆ ನಡೆದು ನನ್ನ ಹೊಸ ಬೆಳಗಿಗೆ ಉತ್ಸಾಹ, ಜೀವನ ಪ್ರೀತಿ ತುಂಬುತ್ತದೆ. ಎಷ್ಟೋ ಸಲ ನನಗರಿವಿಲ್ಲದೆ ಪಾದಗಳು ನರ್ತಿಸತೊಡಗುತ್ತವೆ. ಯಾವುದೇ ನೋವು ನಿರಾಸೆಗಳ ಸಂದರ್ಭಗಳಲ್ಲಿ ನಾನು ಆಶ್ರಯಿಸುವುದು ಸದಾ ತೆರೆದಿಟ್ಟ ನನ್ನ ಈ ಕಿಟಕಿಯನ್ನು ಹಾಗು ಅದರಾಚೆ ಕಾಣುವ ಅರಳಿ ಮರವನ್ನು!
ಈ ಕಿಟಕಿ ಹಗಲು ತೋರುವ ಬದುಕು ಒಂದು ಬಗೆಯ ಗಾಢವಾದ ಖುಷಿಯನ್ನು ಕೊಟ್ಟರೆ ರಾತ್ರಿಗಳಲ್ಲಿ ಈ ಕಿಟಕಿ ತೋರುವ ದೃಶ್ಯಗಳು ತದ್ವಿರುದ್ಧವಾಗಿ ನೋವು ತಳಮಳಗಳನ್ನು ಕೊಡುತ್ತವೆ. ರಾತ್ರಿಗಳಲ್ಲಿ ಆ ಎದುರುಗಿನ ಕಿಟಕಿಯಲ್ಲಿ ಕಾಣುವ ಹೊಡೆದಾಟ, ಕೇಳುವ ಕಿರಿಚಾಟ, ರೋದನ ನರಳುವಿಕೆಗಳು ನನ್ನಲ್ಲಿ ಖಿನ್ನತೆಯನ್ನುಂಟು ಮಾಡುತ್ತವೆ. ಈ ದೃಶ್ಯಗಳು ಹೇಗಿದ್ದರೂ ನಾನು ಮಾತ್ರ ನನ್ನ ಕಿಟಕಿಯನ್ನು ಮುಚ್ಚುವುದಿಲ್ಲ.
ಸಂಜೆಯಾಯಿತೆಂದರೆ ತೀರಿತು, ಎದುರಿಗೆ ಕಾಣುವ ಕಿಟಕಿಯಲ್ಲಿ ಒಬ್ಬ ನಡುವಯಸ್ಸಿನ ಹೆಣ್ಣು ಮಗಳ ಮುದುಡಿದ ಮುಖ ಕಾಣಿಸುತ್ತದೆ. ಆಕೆ ಯಾರ್ಯಾರಿಗೋ ಫೋನು ಮಾಡುತ್ತ ತನ್ನ ನೋವು ತೋಡಿಕೊಳ್ಳುತ್ತಾಳೆ. ಅನೇಕ ಸಲ ಬೈಯುತ್ತಲೂ ಇದ್ದು ಇದೀಗ ನನ್ನ ಕಿವಿಗೆ ಬಿದ್ದ ಮಾತುಗಳು ಇವು.
” ಹಿಂಗ ದಿನಾನೂ ನೀವು ಹೊರಗ ಊಟ ಮಾಡುದಿದ್ರ ನಾನು ರವಿಗೆ ಹೇಳಿ ಬಿಡ್ತೀನಿ, ನೀನು ಹೊರಗ ಉಂಡ ಬಾ ಪಾ… ನಾ ಅಡಗಿ ಮಾಡುದು ಬಿಟ್ಟ ಬಿಡತೀನಿ. ಮಾಡಿ ಮಾಡಿ ಕೆಡಸಿ ಚೆಲ್ಲಲಿಕ್ಕೆ ಮನಸ್ಸು ಆಗುದಿಲ್ಲ. ಅಪ್ಪ, ಮಗ ಇವರಿಬ್ರು ಒಂದs ನಮೂನಿ. ಇಲ್ಲೊಬ್ಬ ಹೆಂಡ್ತಿ, ತಾಯಿ ತಮಗಾಗಿ ಕಾಯ್ತಿರತಾಳ ಅನ್ನೋ ಸಂಕಟನs ಇಲ್ಲ.” ಇಂತಹ ಮಾತುಗಳು ಕಿವಿಗೆ ಬಿದ್ದಾಗ ನನಗೂ ಒಂಟಿತನದ ಸಂಕಟವು ಕಾಡುತ್ತದೆ. ಆಗ ಸಂಜೆಯ ಮುಗಿಲಲ್ಲಿ ತೆರೆದಿಟ್ಟುಕೊಂಡ ಅರಳಿ ಮರದ ಟೊಂಗೆಗಳಲ್ಲಿ ಎಲ್ಲೆಲ್ಲೋ ದೂರದಿಂದ ಹಾರಿ ಬರುವ ಪಕ್ಷಿಗಳು ತಮ್ಮ ತಮ್ಮ ಗೂಡುಗಳಿಗೆ ಮರಳುತ್ತವೆ, ಮಕ್ಕಳಿಗೆ ಗುಟುಕು ಕೊಡುತ್ತವೆ ಸುಖದ ನಿದ್ರೆ ಮಾಡುತ್ತವೆ. ಇದನ್ನು ಪಕ್ಷಿಗಳ ಬದುಕು ಈ ಬಗೆಯಾಗಿದ್ದರೆ ಹೆಸರಿಗೆ ಕೂಡಿದ್ದ ಗಂಡ, ಹೆಂಡತಿ, ಮಗ ಇವರ ಬದುಕು ಚೆಲ್ಲಾಪಿಲ್ಲಿ!
ಒಂದು ದಿನ ರಾತ್ರಿ 10 ಗಂಟೆಯ ಸುಮಾರಿಗೆ ಏನಾಯ್ತೋ ಏನೋ ಆ ಕಿಟಕಿಯಿಂದ ಚೀರುವ ಹೆಣ್ಣು ಧ್ವನಿ!…… ಮಲಗಿದವಳು ದಿಗ್ಗನೆ ಎದ್ದು ನನ್ನ ಕಿಟಕಿಯತ್ತ ಹೋಗಿ ನೋಡಿದರೆ ಚಿತ್ರವೂ ಸ್ಪಷ್ಟವಾಗಿ ಕಾಣುತ್ತಿತ್ತು. ಆ ಗಂಡಸು ಹೆಂಡತಿಯನ್ನು ಥಳಿಸುತ್ತಿದ್ದಾನೆ….
“ನಾನು ಏನರೆ ಮಾಡ್ತೀನಿ ನಿಂಗ್ಯಾಕ ಬೇಕು? ನನಗ ಬೇಕಾದ ಹೆಣ್ಣಿನೊಂದಿಗೆ ಇರತೇನಿ ನಿನ್ನ ರಂಪಾಟಕ್ಕ ಅಂಜುವುದಿಲ್ಲ ಅಕಿ ಹೆಸರ ತಗದ್ರ ನೀ ಹಾರಿ ನನ್ನ ಮೈಮೇಲೆ ಬರ್ತಿಯಲ್ಲ? ನಿನ್ನ ಮನ್ಯಾಗ ಅಕಿ ಪಾಲು ಕೇಳಲಿಕ್ಕೆ ಬರತಾಳ ಏನು?” ಮತ್ತೆರೆಡು ಏಟು ಹಾಕುತ್ತಾನೆ.
“ಅಂಥ ಬಿಡಾಡಿ ಹೆಣ್ಣಿನ ಜೋಡಿ ಇರ್ತೀಯಲ್ಲ ನಾಚಿಕೆ ಬರುದಿಲ್ಲ? ನಾಳೆ ಮನಿಗೆ ಸೊಸಿ ಬಂದಾಗ ಹೆಂಗ ಮುಖ ತೋರಿಸ್ತಿ? “
“ಬಂದ್ರ ಬರಲಿ, ಸೊಸಿ ಏನಾದ್ರು ಅಂದ್ರ ನಾನು ಒಂದ ಕೈ ತೋರಿಸ್ತೀನಿ”ಈ ಮಾತುಗಳನ್ನು ಕೇಳಿಸಿಕೊಳ್ಳಲಾಗದೆ ಬೆಡ್ರೂಮ್ ಸೇರಿಕೊಂಡೆ. ಆಧುನಿಕ ಜಗತ್ತಿನಲ್ಲಿ ಹೊರಗೆ ಹೆಣ್ಣಿಟ್ಟುಕೊಳ್ಳುವುದು ಒಂದು ಫ್ಯಾಶನ್ನೋ ಏನೋ ಇಂತಹ ಸಂಬಂಧಗಳನ್ನೂ ಬಿಂದಾಸ್ ಆಗಿ ತೋರಿಸುತ್ತಾರೆ, ಮುಚ್ಚಿಡುವುದಿಲ್ಲ. ಈ ವಿಚಾರಗಳನ್ನು ತಲೆ ತುಂಬಾ ತುಂಬಿಸಿಕೊಂಡು ತಾಸು ಒದ್ದಾಡುತ್ತೇನೆ ಆಮೇಲೆ ಹೇಗೋ ನಿದ್ರೆ…

***

ಚೈತ್ರ ಮಾಸವಾದ್ದರಿಂದ ಅರಳಿ ಮರದ ತುಂಬಾ ನಸು ಗುಲಾಬಿ ಎಳೆಯ ಎಲೆಗಳ ಒಂದು ಜಾಲ! ಇದರೊಳಗೆ ತೂರಿಕೊಂಡು ಬರುವ ಸೂರ್ಯನ ಕಿರಣಗಳ ಚಂದವನ್ನು ಹೇಗೆ ಬಣ್ಣಿಸಲಿ! ಬೆಳ್ಳಂಬೆಳಿಗ್ಗೆ ಗೂಡಿನಲ್ಲಿ ಚೀವ್ಚಿವ್ ಗುಡುವ ತಾಯಿ ಮಕ್ಕಳ ಮಮತೆಯ ಸಲ್ಲಾಪ ಒಂದು ಕಡೆಯಾದರೆ ಇನ್ನೊಂದು ಕಡೆಗೆ ಆಹಾರ ಸಂಪಾದನೆಗೆ ಹೊರಟು ನಿಂತ ತಾಯಿ, ಮಕ್ಕಳನ್ನು ರಮಿಸುತ್ತ ಚೀವ್ಚಿವ್ ಗುಡುವ ಇಂಚರ ಕಿವಿಗೆ ಬಿದ್ದು ನನ್ನ ದಗ್ದ ಮನಸ್ಸು ತಂಪನ್ನು ಅನುಭವಿಸುತ್ತದೆ. ಮರುದಿನ ಬಣ್ಣ ಬಣ್ಣದ ಹಕ್ಕಿಯ ಹಿಂಡು ಅರಳಿ ವೃಕ್ಷವನ್ನು ತುಂಬಿಕೊಳ್ಳುತ್ತದೆ. ಅಕ್ಕ ಪಕ್ಕದಲ್ಲಿ ಕುಳಿತ ಜೋಡಿಗಳಲ್ಲಿಯ ಹಕ್ಕಿಗಳು ಚುಂಚಿಗೆ ಚುಂಚನ್ನು ಸಿಕ್ಕಿಸಿ ಮುದ್ದುಗರೆಯುತ್ತವೆ. ಇನ್ನೊಂದು ಕಡೆಗೆ ಕೋಗಿಲೆಯು ಕೂಗಿ ಕೂಗಿ ತನ್ನ ಸಂಗಾತಿಗೆ ತನ್ನ ಸುಳಿವನ್ನು ತಿಳಿಸುತ್ತದೆ. ಆಗ ಎಲ್ಲೊ ದೂರದಲ್ಲಿನ ಕೋಗಿಲೆ ಮನ ಮಿಡಿಯುವಂತೆ ಕುಹೂ ಕುಹೂ ಎನ್ನುತ್ತದೆ. ಇಂತಹ ಸಂಬಂಧಗಳನ್ನು ಜೋಡಿಸುವ ಕೂಗುಗಳು, ದೃಶ್ಯಗಳು ಮನಸ್ಸಿಗೆ ಹಿತ ನೀಡುತ್ತವೆ.
ಮುಂದಿನ ಎರಡು ತಿಂಗಳು ಆ ಕಿಟಕಿಯು ಮುಚ್ಚಿಯೇ ಇದ್ದದ್ದರಿಂದ ನನ್ನ ಮನಸ್ಸು ನಿರಾಳವಾಗಿತ್ತು. ನಾನು ಎರಡು ಬೃಹತ್ ಕಾದಂಬರಿಗಳನ್ನು ಓದಿ ಮುಗಿಸಿದೆ. ಲಿಯೋ ಟಾಲ್ ಸ್ಟಾಯ್ ಅವರ “ವಾರ್ ಅಂಡ್ ಪೀಸ್ ” ಮತ್ತು ರಷಿಯಾದ ಇನ್ನೊಬ್ಬ ಶ್ರೇಷ್ಠ ಕಾದಂಬರಿಕಾರನಾದ ದಾಸ್ತೊವಸ್ಕಿಯ ” ಕ್ರೈಂ ಅಂಡ್ ಪನಿಷಶ್ಮೆಂಟ್. ” ಇವೆರಡು ಕಾದಂಬರಿಗಳು ರಷಿಯಾ ದೇಶದ ರಾಜಕೀಯ ಇತಿಹಾಸದ ಅಲ್ಲೋಲ ಕಲ್ಲೋಲದ ಘಟನೆಗಳನ್ನು ಹಿಡಿದಿಟ್ಟುಕೊಂಡ ಸುದೀರ್ಘವಾದ ಕಾದಂಬರಿಗಳು. ಇವುಗಳ ಓದು ಸಹ ನನಗೇನು ಮನಶಾಂತಿ ಕೊಡಲಿಲ್ಲ. ಬದಲಾಗಿ ನಾಲ್ಕೆಂಟು ದಿನ ಊರು-ಕೇರಿ ಸುತ್ತಿ ಬಂದೆ.
ಆ ದಿನ ರಾತ್ರಿ ಆ ಕಿಟಕಿ ತೆರೆದಿತ್ತು. ಮನೆಯಲ್ಲಿ ಒಬ್ಬ ಹೊಸ ಸದಸ್ಯಳ ಆಗಮನ ಆಗಿತ್ತೆಂದು ಅಂದುಕೊಂಡೆ. ಬಹುಶಃ ಆಕೆ ಸೊಸೆಯೇ ಇರಬೇಕು ಅಷ್ಟರಲ್ಲಿ ಒಂದು ಎತ್ತರ ಧ್ವನಿ ಅಂದಿನ ಗಾಢ ಕತ್ತಲೆಯನ್ನು ಸೀಳಿಕೊಂಡು ಬಂತು.
“ನನಗೊಂದು ಮಾತನ್ನಾದರೂ ತಿಳಿಸದೇ ನಮ್ಮ ಒಪ್ಪಿಗೆಗಾಗಿ ಕಾಯದೇ ಹೇಗೆ ಈ ಹುಡುಗಿಯನ್ನು ಕರೆದುಕೊಂಡು ಬಂದಿ?”
“ಅಪ್ಪ ನೀವು ಒಪ್ಪಿಕೋತಿದ್ದಿಲ್ಲ …. ಈ ಹುಡುಗಿ ಬ್ಯಾರೆ ಜಾತಿಯಾಕಿ. ಹೇಳಿದ್ರೆ ಒಪ್ಪತಿದ್ರೇನು? “
“ನೀನು ಮೊದಲ ಕೇಳರೆ ನೋಡಬೇಕಿತ್ತು ನಮಗೂ ಇಂದಿನ ಹರೆಯದ ಮಕ್ಕಳ ರೀತಿ-ನೀತಿ ಗೊತ್ತವ . ನಾವು ಒಪ್ಪುತ್ತಿದ್ದೇವೋ ಇಲ್ಲವೋ ನೋಡಬಹುದಿತ್ತು. ನಿಂತು ಮದವಿ ಮಾಡತಿದ್ವಿ ಈಗ ಮದವಿ ಇಲ್ಲದ ಈ ಹುಡುಗಿನ ಕರ್ಕೊಂಡ ಬಂದಿ? ಸುತ್ತಲಿನ ಜನ ಏನ ಅಂದಾರು ?”
” ಜನ ಏನ ಅಂತಾರಾ ಬಿಡ್ತಾರಾ ಅನ್ನೋದು ನಂಗ ಮಹತ್ವದ್ದಲ್ಲ. ಇಕಿ ಮನಿಯಾಗ ಸಹ ಅವರ ಅಪ್ಪ ಅವ್ವ ಒಪ್ಪಲಿಲ್ಲ. ಆಕೀನ ನನ್ನ ಹತ್ರ ಬಂದ್ಲು, ಹಂಗ ನಾವು ಇಲ್ಲೇ ಬಂದೆವು “
“ನೀನು ಕರದ ತಂದಿದ್ದಕ್ಕ ನಮ್ಮ ಆಕ್ಷೇಪ ಇಲ್ಲ. ಮದವಿ ಮಾಡೋಣ ಬಿಡು” ಅಂದಳು ತಾಯಿ.
” ಮದವಿ-ಗಿದವಿ ಏನು ಬ್ಯಾಡ ಬೆಂಗಳೂರಾಗ ನೌಕರಿ ಸಿಕ್ಕದ ಮನಿ ಮಾಡಿಟ್ಟ ಬಂದೇನಿ, ನಿಮಗ ಹೇಳಿ ಹೋಗೋಣ ಅಂತ ಬಂದೆ”
” ಪುಣ್ಯ ಕಟ್ಟಕೊಂಡಿಯಪ್ಪ. ಇಲ್ಲೆ ಅವ್ವ ಅಪ್ಪ ಅದಾರ ಅಂತ ತಿಳಿದದ್ದೇ ನಮ್ಮ ಭಾಗ್ಯ”
“ನಾವು ನಾಳೆ ರಾತ್ರಿನ ಹೊಂಟೇವಿ. ಒಂದ ದಿನ ಶಾಂತ ಆಗಿ ಜಗಳ ಇಲ್ದ ಇರುದ ಇದ್ರ ಇರತೇನಿ ಇಲ್ಲದಿದ್ರ ಯಾವರೆ ಬಸ್ ಹಿಡದ ಹೊಂಟ್ವಿ”
” ಏನೋಪಾ ಏನ್ ಮಾತಾಡತಿ ಸೊಸೆನ ಕರ್ಕೊಂಡ ಬಂದಿ, ನಾಲ್ಕ ದಿನ ನಾವು ಕೂಡಿ ಇರಬಹುದಲ್ವಾ?” ಅಳುವ ಧ್ವನಿಯಲ್ಲಿ ಅಂದಳು ತಾಯಿ.
” ಅಲ್ಲಾ ಮತ್ತ ನಿಮ್ಮ ಸುತ್ತಲಿನ ಜನ ಏನಾರ ಅಂದ್ರ ?”
ಇರುವ ಒಬ್ಬನ ಮಗನ ಬಗ್ಗೆ ತಂದೆ-ತಾಯಿ ಕಟ್ಟಿದ ಕನಸು… ಅವರಿಬ್ಬರ ಮುಖದಲ್ಲಿ ಕಣ್ಣೀರು ಸುರಿಯುತ್ತಿತ್ತು. ಅತ್ತ ಗಂಡ ಬೇರೆ ಮನೆಯನ್ನೇ ಮಾಡಿದ್ದಾನೆ. ಗಂಡ ಮತ್ತು ಮಗನ ನಡುವೆ ಪಾಪದ ಜೀವ ಆ ತಾಯಿ ಯಾವ ದಿಕ್ಕಿಗೆ ಮುಖ ಮಾಡಿ ನಿಲ್ಲಬೇಕು? ಆಗ ಮನಸ್ಸಿನಲ್ಲಿ ನಾನು ಅಂದುಕೊಂಡೆ ಜಗಳಾಡಿಕೊಂಡಿದ್ದರೂ ಮೂವರು ಒಂದು ಮನೆಯಲ್ಲಿದ್ದರಲ್ಲ? ಆದರೆ ಈಗೇನಾಯಿತು? ನಾನು ಲೈಟ್ ಆರಿಸಿ ಒಬ್ಬಳೇ ಹಾಸಿಗೆಯಲ್ಲಿ ಕುಳಿತು ಕಣ್ಣೀರು ಸುರಿಸಿದೆ.

***.
ಮುಂದಿನ ಅನೇಕ ರಾತ್ರಿಗಳು ಆ ಕಿಟಕಿಯಲ್ಲಿ ನೀರವವೇ ಇತ್ತು. ಉಸುಕಿನ ನಾಡಲ್ಲಿ ನಿಂತ ಒಬ್ಬಂಟಿ ಗಿಡದಂತೆ ಆ ತಾಯಿ ಎಷ್ಟೋ ಹೊತ್ತು ಸಂಜೆ ಮುಂಜಾನೆ ಆಕಾಶವನ್ನು ನೋಡುತ್ತಲೇ ಇರುತ್ತಿದ್ದಳು.
ಏನಿದ್ದರೂ ಆಕೆ ಎಲ್ಲವನ್ನು ಹೊಟ್ಟೆಯೊಳಗೆ ಹಾಕಿಕೊಂಡಿರಬೇಕು. ಹಾಗೆ ನೋಡಿದರೆ ಜಗತ್ತಿನಲ್ಲಿ ಅದೆಷ್ಟು ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ತಮ್ಮ ಅಗ್ನಿ ಕಾಂಡಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು ನರಳುತ್ತಿರಬೇಕು! ಚಿಂತಿಸುತ್ತ ನನ್ನ ನಿದ್ರೆಯೇ ಹಳ್ಳ ಹಿಡಿದು ಹೋಗಿತ್ತು. ಮರುದಿನ ಬೆಳಿಗ್ಗೆ ಎಚ್ಚರ ಆದಾಗ ಮರದಲ್ಲಿ ಹೊಸ ಇಂಚರ ಮಾಡುತ್ತಿರುವ ಹೊಸ ಹಕ್ಕಿಗಳ ಹಿಂಡು ಮರವನ್ನು ಆಕ್ರಮಿಸಿತ್ತು. ಈಗಾಗಲೇ ಎಷ್ಟೋ ಗೂಡುಗಳನ್ನು ಕಟ್ಟಿ ಕುಳಿತ ಹಕ್ಕಿಗಳು ಮೌನವಾಗಿ ಹೊಸ ಹಕ್ಕಿಗಳ ಹಿಂಡನ್ನು ಸ್ವಾಗತಿಸಿರಬೇಕು. ಆ ಇಡೀ ವಾತಾವರಣದಲ್ಲಿ ಮೌನವಿತ್ತು, ಸ್ವೀಕೃತಿ ಇತ್ತು.
ನನ್ನ ಮನಸ್ಸು ನನಗರಿವಿಲ್ಲದಂತೆ ಅಂದುಕೊಂಡಿತು…
ಆಹಾ ಇಲ್ಲೊಂದು ಪರಿವಾರ ಇದೆ…
ಅಲ್ಲೊಂದು ಪರಿವಾರ ಇತ್ತು …

ಮಾಲತಿ ಪಟ್ಟಣಶೆಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *