ಕಥಾ ಕ್ಷಿತಿಜ / ಕವರ್ ಪಿಕ್ – ಕನ್ನಡಕ್ಕೆ: ಎಂ.ಜಿ. ಶುಭಮಂಗಳ

ಹೆಂಡತಿ, ಮೂರು ಮಕ್ಕಳ ಸಂಸಾರವನ್ನು ಬಿಟ್ಟು ಹೋದಾಗ ಅವನಿಗೆ ಏನೂ ನೋವಾಗಲಿಲ್ಲ. ಆದರೆ ಈಗ ಫೇಸ್‍ಬುಕ್‍ನಲ್ಲಿ ಬಂದ ಸಂಸಾರದ ಹಳೇ ಭಾವಚಿತ್ರ ಇನ್ನಿಲ್ಲದ ನೋವುಂಟು ಮಾಡುತ್ತಿದೆಯಲ್ಲ? ಹೊಸಬರಿಗೆ ಏನು ಗೊತ್ತು- ಹ್ಯಾಪಿ ಫ್ಯಾಮಿಲಿ ಎಂದು ಇದಕ್ಕೂ ಲೈಕ್ಸ್ ಬರುತ್ತಿದೆಯಲ್ಲ! – ತೆಲುಗು ಕಥೆಗಾರ್ತಿ ಕುಪ್ಪಿಲಿ ಪದ್ಮ ಅವರ `ಕವರ್ ಪಿಕ್’ ಕಥೆಯ  ಅನುವಾದ ಇಲ್ಲಿದೆ.

ಸುರಿಯುತ್ತಿರುವ ಹಿಮರಾಶಿಗೆ ಮೈಯೊಡ್ಡಿ ಸೌಂದರ್ಯವನ್ನು ಆಸ್ವಾದಿಸುತ್ತಿರುವ ಉಷಾದೇವಿಗೆ ಇದು ಮೊದಲ ಅನುಭವ. ತನ್ನ ಮೊಬೈಲಿನಲ್ಲಿ ವಾಟ್ಸ್ ಆ್ಯಪ್ ಕರೆ ಪದೇಪದೇ ಮೊಳಗುತ್ತಿದ್ದರೂ ಫೋನ್ ರಿಸೀವ್ ಮಾಡಲಿಲ್ಲ. ಬಿಡದೆ ಒಂದೇ ಸಮನೆ ಮೊಳಗುತ್ತಿದ್ದುದರಿಂದ ಅಚ್ಚ ಬಿಳಿಯ ಹೂವಿನಂಥ ಹಿಮರಾಶಿಯಿಂದ ಕಣ್ತೆಗೆಯದೆ ಮೊಬೈಲ್ ಸ್ಕ್ರೀನ್ ಅನ್ನು ಬೆರಳ ತುದಿಯಿಂದ ಎಳೆದು `ಹಲೋ’ ಎಂದಳು.
“ನಿನಗೇನು ಹುಚ್ಚು ಹಿಡಿದಿದೆಯಾ… ಏನು ಅಂಥಾ ಕೆಲಸ ಮಾಡಿಬಿಟ್ಟೆ” ಎಂದು ಹೆಚ್ಚುಕಡಿಮೆ ಜೋರಾಗಿ ಅರಚುತ್ತಿರುವ ಗಂಡು ಧ್ವನಿ.
“ಯಾರದು, ನಿಮಗೆ ಯಾರು ಬೇಕು?” ಮೆಲ್ಲನೆ ಕೇಳಿದಳು.
“ಅಬ್ಬಾ! ಮಾಡುವುದನ್ನೆಲ್ಲ ಮಾಡಿಸಿ ಏನೂ ತಿಳಿಯದಂತೆ ಮಾತನಾಡುತ್ತಿದ್ದೀಯಲ್ಲ”
“ರಾಂಗ್ ನಂಬರ್” ಎಂದು ಕರೆ ಡಿಸ್‍ಕನೆಕ್ಟ್ ಮಾಡಿದಳು.
ಕೂಡಲೇ ಮತ್ತೆ ವಾಟ್ಸ್ ಆ್ಯಪ್ ಕಾಲ್. ನೋಡಿದಳು. ಕಾಂಟಾಕ್ಟ್ ಲಿಸ್ಟ್‍ನಲ್ಲಿ ಇಲ್ಲದ ಸಂಖ್ಯೆ. ಡಿ.ಪಿ. ಕೂಡ ಇಲ್ಲ.
“ಯಾಕೆ ಡಿಸ್‍ಕನೆಕ್ಟ್ ಮಾಡಿದೆ…. ಉಷಾ, ಮೊದಲು ಆ ಫೋಟೋ ತೆಗೆಸಿಬಿಡು”
ಆಕೆಗೆ ಗಾಬರಿಯಾಯಿತು. ಈತನಿಗೆ ನನ್ನ ಹೆಸರು ತಿಳಿದಿದೆ. ರಾಂಗ್ ಕಾಲ್ ಅಲ್ಲ. ಆದರೆ ಯಾರು ಈ ಅಪರಿಚಿತ…
“ನೀವು ಯಾರು, ಯಾರು ಬೇಕಿತ್ತು”
“ಗುರುತು ಹಿಡಿಯದವರಂತೆ ನಾಟಕ ಆಡಬೇಡ… ಆ ಫೋಟೋ ನೀನೇ ಪೋಸ್ಟ್ ಮಾಡಿಸಿದ್ದೀಯ… ಕೂಡಲೇ ಡಿಲಿಟ್ ಮಾಡಿಸು” ಎಂದು ಫೋನ್ ಕಟ್ ಮಾಡಿದನಾತ.
ಉಷಾದೇವಿ ಲಿವಿಂಗ್ ರೂಮಿಗೆ ಬಂದಳು. ಲ್ಯಾಪ್ ಟಾಪ್ ನಲ್ಲಿ `ವರ್ಕ್ ಫ್ರಂ ಹೋಂ’ ಮಾಡುತ್ತಿದ್ದ ಸಮೀರಾ “ಹಿಮದೊಂದಿಗೆ ಸೆಲ್ಫಿ ತೆಗೆದುಕೊಂಡೆಯಾ… ಕೊಟ್ಟರೆ ಎಫ್‍ಬಿಗೆ ಪೋಸ್ಟ್   ಮಾಡ್ತೀನಿ” ಎಂದು ಅಮ್ಮನನ್ನು ಕೇಳಿದಳು.
ಮತ್ತೆ ಕರೆ.
ಉಷಾದೇವಿ ತೆಗೆಯಲಿಲ್ಲ. ಏಕೋ ಆಕೆಗೆ ಭಯವಾಗುತ್ತಿದೆ. ಒಳಗೊಳಗೇ ಪರಿಚಿತ ಅಧಿಕಾರಯುತ ಧ್ವನಿಯೊಂದು ಆಕೆಯ ಮನಸ್ಸನ್ನು ಕದಡುತ್ತಿದೆ.
ಸಮೀರಾ ತಲೆಯೆತ್ತಿ ಅಮ್ಮನತ್ತ ನೋಡಿ “ಅಮ್ಮಾ, ಫೋನ್” ಎಂದಳು.
“ಯಾರೋ ಹೇಳುತ್ತಿಲ್ಲ. ಫೋಟೋ ತೆಗೆಸಿಬಿಡು ಎನ್ನುತ್ತಿದ್ದಾರೆ… ರಾಂಗ್ ಕಾಲ್ ಇರಬಹುದು” ಎಂದಳು ಉಷಾದೇವಿ.
ಸಮೀರಾ ತಕ್ಷಣ ತಲೆಯೆತ್ತಿ “ಫೋಟೋ ತೆಗೆಸಲು ಹೇಳಿದರಾ… ಗುಡ್… ಗುಡ್… ರಾಂಗ್ ಕಾಲ್ ಅಲ್ಲ. ರೈಟ್ ಕಾಲ್” ಎಂದಳು.
ಸ್ನೋ ಫಾಲ್‍ನೊಂದಿಗೆ ತೆಗೆದ ತನ್ನ ಫೋಟೋಗಳನ್ನು ಎಫ್‍ಬಿಯಲ್ಲಿ  ಪೋಸ್ಟ್   ಮಾಡುತ್ತಿರುವ ನಿಶಾಂತ್, ಅಮೆರಿಕಾಗೆ ಶಾರ್ಟ್ ಟ್ರಿಪ್‍ಗೆ ಬಂದಾಗಿನಿಂದಲೂ ತಾನು ನೋಡಿದ ಸ್ಥಳಗಳು, ಅನುಭವಗಳು ಹಾಗೂ ತನ್ನ ಪುಟ್ಟ ಸೋದರಸೊಸೆಯ ಮುದ್ದಾದ ನಗುವಿನ ಫೋಟೋಗಳು ಹಾಕುತ್ತ, ಫೋನಿನಲ್ಲಿ ಫ್ರೆಂಡ್ ಜೊತೆ ಚಾಟ್ ಮಾಡುತ್ತಿರುವ ಪ್ರಶಾಂತ್, ಉಷಾದೇವಿ ಎಲ್ಲರೂ ಆಸಕ್ತಿಯಿಂದ ಸಮೀರಾಳತ್ತ ನೋಡುತ್ತಿದ್ದಾರೆ.
ಸಮೀರಾ ಕುರ್ಚಿಯಿಂದ ಎದ್ದುಬಂದು ಅಮ್ಮನ ಹಿಂದೆ ನಿಂತು ಭುಜದ ಮೇಲೆ ತನ್ನ ಗಲ್ಲವನ್ನು ಆನಿಸಿ ಒತ್ತಿಕೊಂಡು ಫೋನ್ ಕಡೆಗೊಮ್ಮೆ ನೋಡಿ “ಮಾತನಾಡು” ಎಂದು ಅಮ್ಮನ ಫೋನ್ ಸ್ಪೀಕರ್ ಆನ್ ಮಾಡಿ, ನಗುತ್ತಾ ತಮ್ಮಂದಿರತ್ತ ನೋಡಿದಳು.
ಉಷಾದೇವಿ ಫೋನ್ ಆನ್ ಮಾಡುತ್ತಲೇ “ಯಾಕೆ ಇನ್ನೂ ಫೋಟೋ ತೆಗೆಸಲಿಲ್ಲ” ಎಂದನಾತ.
“ಇಷ್ಟಕ್ಕೂ ನೀವ್ಯಾರು… ಯಾವ ಫೋಟೋ”
“ನಾನೇ… ಭಾಸ್ಕರ್”
“ಯಾವ ಭಾಸ್ಕ…” ಎನ್ನುತ್ತಿದ್ದಂತೆ ಉಷಾದೇವಿಯ ಬಾಯಲ್ಲಿ ‘ರ್’ ನಿಂತುಹೋಯಿತು.
ಆಕೆಗಾದ ಆಘಾತ ಬಹಳ ಆತಂಕದಲ್ಲಿದ್ದ ಭಾಸ್ಕರ್‍ಗೆ ತಿಳಿಯದಿದ್ದರೂ, ಮಕ್ಕಳಿಗೆ ಸ್ಪಷ್ಟವಾಗಿ ಅರ್ಥವಾಯಿತು.
“ಲೈನಿನಲ್ಲಿಯೇ ಇರುತ್ತೇನೆ. ಆ ಫೋಟೋ ತೆಗೆಸಿಬಿಡು”
ಇಷ್ಟು ವರ್ಷಗಳ ನಂತರ ಈತ ಫೋನ್ ಮಾಡುವುದೆಂದರೇನು… ಏನು ಫೋಟೋ… ಎಂದು ಅಯೋಮಯಗೊಂಡಿದ್ದ ಅಮ್ಮನೆದುರು ಸಮೀರಾ ತನ್ನ ಮೊಬೈಲಿನಲ್ಲಿದ್ದ ಫೇಸ್‍ಬುಕ್ ಓಪನ್ ಮಾಡಿ ಅಮ್ಮನಿಗೆ ತೋರಿಸಿದಳು.
`ಹ್ಯಾಪಿ ಫ್ಯಾಮಿಲಿ’ ಎಂದು ಭಾಸ್ಕರ್, ಉಷಾದೇವಿ, ನಿಶಾಂತ್, ಪ್ರಶಾಂತ್, ಸಮೀರಾ ಇದ್ದ ಫೋಟೋನೇ ಕವರ್ ಪಿಕ್. ಅಲ್ಲಿಗೆ ಬಂದ ನಿಶಾಂತ್ ಅದನ್ನು ನೋಡಿ ಬಿದ್ದು ಬಿದ್ದು ನಕ್ಕನು. ಉಷಾದೇವಿಗೆ ಆತಂಕ ಮಾಯವಾಗಿ ನಗುಬರುತ್ತಿದೆ.
“ಅರ್ಜೆಂಟಾಗಿ ಫೋಟೋ ತೆಗೆಸು” ಎಂದು ಆದೇಶಿಸಿ ಭಾಸ್ಕರ್ ಕರೆ ಕಡಿತಗೊಳಿಸಿದ.
“ಓ ಇದನ್ನು ನೋಡಿದ ಕೂಡಲೇ ಭಯವಾಗಿಬಿಟ್ಟಿದೆಯಾ… ಸಕತ್…” ಎಂದನು ನಿಶಾಂತ್.
“ಅವರು ನಿನ್ನನ್ನು ಫಾಲೋ ಮಾಡುತ್ತಿದ್ದಾರಾ ಅಥವಾ ಫ್ರೆಂಡ್ಸ್ ಲಿಸ್ಟ್‍ನಲ್ಲಿದ್ದಾರಾ” ಕೇಳಿದಳು ಉಷಾದೇವಿ.
“ಇಲ್ಲ. ಬೇರೆ ಹೆಸರಿನಲ್ಲಿದ್ದಾರೇನೋ ಗೊತ್ತಿಲ್ಲ. ಇಲ್ಲವೇ ಅವರಿಗೂ ನಮಗೂ ತಿಳಿದಿರುವ ಸ್ನೇಹಿತರು ಯಾರಾದರೂ ಹೇಳಿರುತ್ತಾರೆ. ಪಬ್ಲಿಕ್ ಪೋಸ್ಟ್  ಆಗದಿದ್ದರೂ ಆತನಿಗೆ ನನ್ನ ಪೋಸ್ಟ್  ತಿಳಿಯುತ್ತಿವೆ. ಹೇಗೆ ತಿಳಿಯುತ್ತಿದೆ ಎಂಬುದು ನನ್ನ ಸ್ಪೆಕ್ಯುಲೇಷನ್. ಏನೂ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ” ಎಂದಳು ಸಮೀರಾ.
“ಏಕೆ ಪೋಸ್ಟ್  ಮಾಡಿದೆ ಅಕ್ಕಾ” ಕುತೂಹಲಭರಿತನಾಗಿ ಕೇಳಿದನು ನಿಶಾಂತ್.
“ನಮ್ಮನ್ನು ಬೇಡವೆಂದುಕೊಂಡ ವ್ಯಕ್ತಿ ಅಲ್ಲವಾ” ಎಂದನು ಪ್ರಶಾಂತ್.
“ಹಗೆ” ನಗುತ್ತಾ ಹೇಳಿದಳು ಸಮೀರಾ. ಆ ನಗುವಿನ ಹಿಂದಿನ ಬಿಟ್ಟರ್‍ನೆಸ್ ಆ ಲಿವಿಂಗ್ ರೂಮಿನಲ್ಲಿದ್ದ ಎಲ್ಲರ ಮನಸನ್ನು ತಾಕಿತು.
“ಆತನಿಗೆ ಅದೇಕೆ ಅಷ್ಟು ಭಯ” ಎಂದ ನಿಶಾಂತ್.
“ಅವರು ಪಬ್ಲಿಕ್‍ನಲ್ಲಿ ಹ್ಯಾಪಿ ಫ್ಯಾಮಿಲಿ ಪಿಕ್‍ಗಳನ್ನು ಹೆಚ್ಚು ಪೋಸ್ಟ್  ಮಾಡುತ್ತಿರುತ್ತಾರೆ. ಅವಕ್ಕೆ ಸಾಕಷ್ಟು ಲೈಕ್‍ಗಳು, ಕಮೆಂಟ್‍ಗಳು ಬರುತ್ತಿರುತ್ತವೆ. ಅದಕ್ಕೀಗ ಅವರಿಗೆ ಮರ್ಯಾದೆಯ ಭಯ. ಇನ್ನೊಂದು ಮದುವೆಗಾಗಿ ಆತ ನಮ್ಮನ್ನು ನಿರ್ದಾಕ್ಷಿಣ್ಯವಾಗಿ ಗಾಳಿಗೆ ತೂರಿ ಹೊರಟುಬಿಟ್ಟಾಗ ಫೇಸ್ ಬುಕ್ ಇರಲಿಲ್ಲವಲ್ಲಾ. ಕ್ಲೋಸ್ ಸರ್ಕಲ್‍ಗೆ ಬಿಟ್ಟರೆ ಈ ವಿಚಾರ ಇನ್ನಾರಿಗೂ ಗೊತ್ತಿಲ್ಲ. ತಿಳಿದಿರುವವರು ಅದೆಲ್ಲ ಆತನ ಪರ್ಸನಲ್ ಎನ್ನುತ್ತಾರಲ್ಲವಾ. ಆತನ ಸುತ್ತಲೂ ಹಿಂದಿನ ಜೀವನ ತಿಳಿಯದ ಹೊಸ ಪ್ರಪಂಚವೊಂದಿದೆ. ಅದು ಭಯ. ನಿಜಕ್ಕೆ ಅವರು ಇದಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆತ ಪೋಸ್ಟ್  ಮಾಡುವ ಹ್ಯಾಪಿ ಫ್ಯಾಮಿಲಿಗೆ ಲೈಕ್ ಹೊಡೆಯುತ್ತಾರೆ. ಅಕ್ಕ ಪೋಸ್ಟ್  ಮಾಡಿದ ಪಿಕ್ಚರ್‍ಗೂ ಲೈಕ್ ಹೊಡೆಯುತ್ತಾರೆ. ನಿಜ ಜೀವನದಲ್ಲಿ ಅಗತ್ಯ ಬಿದ್ದಾಗ ಬಲವಾದ ನಿರ್ಣಯ ತೆಗೆದುಕೊಳ್ಳಲಾರದ ಮನುಷ್ಯರು ಈ ವರ್ಚುವಲ್ ವಲ್ರ್ಡ್‍ನಲ್ಲಿ ತೆಗೆದುಕೊಳ್ಳುತ್ತಾರಾ” ಎಂದ ಪ್ರಶಾಂತ್.
ಇವರ ಮಾತು ಕೇಳುತ್ತಿದ್ದ ಉಷಾದೇವಿಯ ಮನಸ್ಸು ಎತ್ತೆತ್ತಲೋ ಹರಿಯುತ್ತಿದೆ. ಫೋನನ್ನು ಸೈಲೆಂಟ್‍ಗೆ ಹಾಕಿದಳು.
“ಯಾವಾಗಿನ ಫೋಟೋ… ಆಗ ಅಕ್ಕನಿಗೆ ಎಷ್ಟು ವರ್ಷ” ಕೇಳಿದನು ನಿಶಾಂತ್.
“ಅಕ್ಕನಿಗೆ ಹನ್ನೊಂದು. ನಿಮ್ಮಬ್ಬರಿಗೆ ಎಂಟುವರ್ಷ. ಅದು ನಿಮ್ಮ ಚಿಕ್ಕ ಅತ್ತೆಯ ಮದುವೆಯಲ್ಲಿ ತೆಗೆದ ಫೋಟೋ. ಆ ಮದುವೆಯಾದ ತಿಂಗಳಿಗೆಲ್ಲ ಡೈವೋರ್ಸ್ ಗಲಾಟೆ ಶುರುವಾಯಿತು. ಅತ್ತೆಯ ಮದುವೆಯ ವೇಳೆಗೇ ನಮ್ಮಿಂದ ದೂರವಾಗಬೇಕೆಂದು ಅವರು ನಿರ್ಧರಿಸಿದ್ದರಂತೆ. ಹಾಗಾದರೆ ಮಗಳ ಮದುವೆ ಮಾಡುವುದು ಕಷ್ಟವಾಗುವುದೆಂದು ನಿಮ್ಮ ಅಜ್ಜಿ ಮದುವೆ ಮುಗಿಯುವವರೆಗೂ ಒಟ್ಟಿಗೇ ಇರಬೇಕೆಂದು ಕೇಳಿದ್ದರಂತೆ. ಇದನ್ನು ನಿಮ್ಮ ಚಿಕ್ಕಮ್ಮ ಸುಗುಣ ನಮ್ಮ ಡೈವೋರ್ಸ್ ಸಮಯದಲ್ಲಿ ಹೇಳಿದಳು” ಎಂದಳು ಉಷಾದೇವಿ.
ಮಕ್ಕಳು ಮೂವರೂ ಅಮ್ಮ ಹೇಳುತ್ತಿರುವ ವಿಚಾರಗಳನ್ನು ನಿಶ್ಶಬ್ದವಾಗಿ ಕೇಳುತ್ತಿದ್ದಾರೆ.
“ಚಿಕ್ಕಮ್ಮ ಒಳ್ಳೆಯವರು” ಎಂದನು ಪ್ರಶಾಂತ್.
“ಸುಗುಣ ನಮ್ಮ ಚಿಕ್ಕಮ್ಮನ ಮಗಳೇ ಅಲ್ಲವಾ. ಚಿಕ್ಕಂದಿನಿಂದಲೂ ಇಬ್ಬರೂ ಆತ್ಮೀಯವಾಗಿಯೇ ಇರುತ್ತಿದ್ದೆವು. ಡೈವೋರ್ಸ್ ಆದಮೇಲೂ ನಿಮ್ಮ ಅಜ್ಜಿ, ತಾತ, ಚಿಕ್ಕಪ್ಪ, ಸುಗುಣ ಚಿಕ್ಕಮ್ಮ, ಅವರ ಮಕ್ಕಳು ನಮ್ಮೊಂದಿಗೆ ಆತ್ಮೀಯವಾಗಿಯೇ ಇದ್ದಾರೆ. ನನ್ನನ್ನು ಎಂದಿಗೂ ಆ ಮನೆಗೆ ಬರುವಂತೆ ಕರೆಯಲಿಲ್ಲ. ಆದರೆ ‘ಮಕ್ಕಳನ್ನು ಕಳಿಸಮ್ಮಾ’ ಎಂದು ನಿಮ್ಮ ತಾತ ಹೇಳಿ ಕಳುಹಿಸುತ್ತಿದ್ದರು. ಆತನ ನಿರ್ಧಾರದಿಂದ ಅಜ್ಜಿಯವರಿಗೂ ನಿಮಗೂ ನಡುವೆ ಅನುಬಂಧವನ್ನು ಅಳಿಸಬೇಕೆಂಬ ಆಲೋಚನೆ ನನಗೆಂದೂ ಬರಲಿಲ್ಲ. ಅವರೂ ಸಂಬಂಧವನ್ನು ಕಡಿದುಕೊಳ್ಳಬೇಕು ಅಂದುಕೊಳ್ಳಲಿಲ್ಲ. ನಿಮ್ಮನ್ನು ಅಲ್ಲಿಗೆ ಕಳುಹಿಸುತ್ತಿದ್ದೆ. ಅದು ಕೂಡಾ ಆತ ಮತ್ತೆ ಮದುವೆ ಮಾಡಿಕೊಂಡು ಅಮೆರಿಕಾಗೆ ಹೋದಮೇಲೇ ಅವರು ಕರೆದರೆಂದು ನನಗೆ ಆಮೇಲೆ ಅರ್ಥವಾಯಿತು” ಎಂದಳು ಉಷಾದೇವಿ.
“ಅಷ್ಟಕ್ಕೂ ನಮ್ಮನ್ನು ಏಕೆ ಬೇಡವೆಂದುಕೊಂಡರೋ ಆತ. ಆಶ್ಚರ್ಯ, ಇಷ್ಟು ವರ್ಷದಲ್ಲಿ ನಮ್ಮನ್ನು ಕೂಡ ಯಾವತ್ತೂ ಮಾತನಾಡಿಸಲಿಲ್ಲ” ಎಂದನು ನಿಶಾಂತ್.
“ನಿಜಕ್ಕೆ ಆತ ಮತ್ತು ನನ್ನ ನಡುವೆ ಯಾವುದೇ ಗಲಾಟೆಯೂ ಇಲ್ಲ. ಅಮೆರಿಕಾಗೆ ಒಂದು ಮೀಟಿಂಗ್‍ಗೆ ಹೋದ ಆತ ಅಲ್ಲಿ ಪರಿಚಯವಾದ ನಮ್ಮ ತೆಲುಗು ಹುಡುಗಿಯನ್ನು ಮದುವೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿಕೊಂಡೇ ಬಂದರು. ನಮ್ಮೊಂದಿಗಿನ ವೈಯಕ್ತಿಕ ಬಾಂಧವ್ಯ ಕಳಚಿಕೊಳ್ಳಬೇಕು ಅಂದುಕೊಂಡಮೇಲೆ ಆತನನ್ನು ಯಾವ ರಕ್ತಸಂಬಂಧವೂ ತಡೆಯಲಿಲ್ಲ. ಆರಂಭದಲ್ಲಿ ನನಗೆ ಆತನ ಮೇಲೆ ಬಹಳ ಕೋಪವಿತ್ತು, ಬಹಳ ನೋವಾಗುತ್ತಿತ್ತು. ಆದರೆ ನಿಮ್ಮ ಮೇಲಿನ ಪ್ರೀತಿ, ಜವಾಬ್ದಾರಿ ನನ್ನನ್ನು ಮುನ್ನಡೆಸಿತು. ಅಮೂರ್ತವಾದ ಶೂನ್ಯ ಹೇಗೋ ಹಾಗೇ ಅವರು ಅಮೂರ್ತವಾಗಿ ಯಾವ ಕ್ಷಣದಲ್ಲಿ ನನ್ನ ಮನಸ್ಸಿನಿಂದ ಹೊರಟುಹೋದರೋ ಅದು ಕೂಡ ಗೊತ್ತಿಲ್ಲ” ಎಂದಳು ಉಷಾದೇವಿ.
ಅಮ್ಮ ಯಾವಾಗಲೂ ಹೀಗೆ ಮಾತನಾಡಿದ್ದನ್ನು ಕೇಳಿರದ ಮಕ್ಕಳು ಶ್ರದ್ಧೆಯಿಂದ ಆಲಿಸುತ್ತಿದ್ದಾರೆ.
“ಆತ ಅಮೆರಿಕಾದಲ್ಲಿ ಇರುವುದರಿಂದ ನಾವು ಅಜ್ಜಿ ಮನೆಗೆ ಹೋದಾಗ ಆತನ ಕುಟುಂಬ ನಮಗೆ ಎದುರಾಗಲಿಲ್ಲ” ಎಂದನು ಪ್ರಶಾಂತ್.
“ಹೂಂ” ಅಂದಳು ಉಷಾದೇವಿ.
ಆಕೆ ಮಾತನಾಡುತ್ತಿದ್ದರೂ ಈಗ ಸಮೀರಾ ಈ ಫೋಟೋ ಏಕೆ ಪೋಸ್ಟ್  ಮಾಡಿದಳಪ್ಪಾ ಎಂದು ಯೋಚಿಸುತ್ತಿದ್ದಾಳೆ. ತನ್ನ ಫೋನಿನಲ್ಲಿ ಮಿಸ್ಡ್ ಕಾಲ್ಸ್ ನೋಡಿ “ಬಹಳ ಪ್ಯಾನಿಕ್ ಆಗಿ ಕಾಲ್ಸ್ ಮಾಡುತ್ತಿದ್ದಾರೆ” ಎಂದಳು.
ಸಮೀರಾ ನಗುತ್ತಾ “ಗುಡ್ ಗುಡ್…” ಎಂದಳು.
ಉಷಾದೇವಿ ಟೈಂ ನೋಡಿ ಮೊಮ್ಮಗಳು ನಿದ್ದೆಯಿಂದ ಏಳುವ ಸಮಯವಾಯಿತೆಂದು ಮಗುವಿನ ಕೋಣೆಗೆ ಹೋದರು.

ಆ ರಾತ್ರಿ ಸಮೀರಾ “ಆತ ಫೋಟೋ ತೆಗೆಸುವಂತೆ ಅಮ್ಮನಿಗೆ ಬಹಳ ಸಲ ಕಾಲ್ಸ್ ಮಾಡುತ್ತಿದ್ದಾರೆ” ಎಂದು ಹೇಳಿದಳು ವಿನಯ್‍ನಿಗೆ.
ಮಗಳೊಂದಿಗೆ ಆಟವಾಡುತ್ತಿದ್ದ ವಿನಯ್ ನಗುತ್ತ “ನೀನು ಊಹಿಸಿದಂತೆಯೇ ಕಾಲ್ ಮಾಡಿದರು ಎಂದಾಯಿತು. ನಿಮ್ಮ ಅಮ್ಮ ಮುಜುಗರಪಟ್ಟರಾ” ಎಂದು ಕೇಳಿದನು.
“ಎದುರಿಗೆ ಹಾಗೇನು ಕಾಣಲಿಲ್ಲ… ಒಳಗೆ ಏನಂದುಕೊಂಡಳೋ ಗೊತ್ತಿಲ್ಲ” ಎಂದಳು ಸಮೀರಾ.
“ಆಂಟಿಯನ್ನು ಹೆಚ್ಚು ಮುಜುಗರಪಡಿಸಬೇಡ” ಎಂದ ವಿನಯ್.

ವೀಕೆಂಡ್.
ಮನೆಯಲ್ಲಿಯೇ ಎಲ್ಲರೂ ಸ್ನೋ ಫಾಲ್ ಎಂಜಾಯ್ ಮಾಡುತ್ತ ಉಷಾದೇವಿ ಬಿಸಿಬಿಸಿಯಾಗಿ ಮಾಡುತ್ತಿದ್ದ ಬಜ್ಜಿಗಳನ್ನು ಸವಿಯುತ್ತ, ಮಗುವಿನೊಂದಿಗೆ ಆಡಿಕೊಳ್ಳುತ್ತ, ವಿನಯ್ ಮಾಡುವ ಮೆಕ್ಸಿಕನ್ ರೆಸಿಪಿಗಳನ್ನು ಮೆಚ್ಚಿಕೊಳ್ಳುತ್ತ ಇದ್ದರು. ನಿಶಾಂತ್ ಭಾವನಿಗೆ ಹೆಲ್ಪ್ ಮಾಡುತ್ತಿರುವಾಗಲೇ ಭಾಸ್ಕರ್ ಉಷಾದೇವಿಗೆ ಫೋನ್ ಮಾಡಿದನು. ಆಕೆ ಫೋನ್ ತೆಗೆಯಲಿಲ್ಲ. ಕೂಡಲೇ ಅವರನ್ನು ಭೇಟಿಯಾಗಲು ಬಂದಿರುವುದಾಗಿ ಮೆಸೇಜ್. ಸಮೀರಾ ನಗುತ್ತ ವಿನಯ್ ಕಡೆ ನೋಡಿದಳು. ವಿನಯ್ ಹೋಗಿ ಆತನನ್ನು ಕರೆದುಕೊಂಡು ಬರುವ ವೇಳೆಗೆ ಉಷಾದೇವಿ ಒಳಕ್ಕೆ ಹೋದಳು. ಅತಿಥಿ ಮರ್ಯಾದೆ ಮಾಡಿದ ವಿನಯ್ ಮಗುವಿನ ಕೋಣೆಗೆ ಹೋದನು. ಒಳಗೆ ಹೋಗಲಿದ್ದ ತಮ್ಮಂದಿರನ್ನು ಅಲ್ಲೇ ಇರುವಂತೆ ಸೂಚಿಸಿದಳು ಸಮೀರಾ.
ಭಾಸ್ಕರ್ ಹೆಚ್ಚಿನ ಸಮಯ ತೆಗೆದುಕೊಳ್ಳದೆ “ಆ ಪಿಕ್ಕರ್‍ನಿಂದ ನನಗಿಂತಲೂ ನಮ್ಮ ಮಕ್ಕಳಿಗೆ ಹೆಚ್ಚು ಕಷ್ಟ. ಡಿಲಿಟ್ ಮಾಡಿಬಿಡು, ಇಲ್ಲದಿದ್ದರೆ ಲೀಗಲ್ ಆಗಿ ಪೆÇ್ರ್ರಸೀಡ್ ಆಗಬೇಕಾಗುತ್ತದೆ…” ಎಂದನು.
“ಲೀಗಲ್ ಆಗಿ… ನೈಸ್… ನೀವು ಲೀಗಲ್ ಆಗಿ ಡೈವೊರ್ಸ್ ನೀಡಿದಾಗ ಮಕ್ಕಳನ್ನು ಬೆಳೆಸಲು ಅಮ್ಮನಿಗೆ ಬೇಕಾದ ಹಣ ನೀಡದೆ ಇರಲು ನೀವು ಕಾರಣ ತಿಳಿಸಿದ ರೀತಿ ಕೆಲ ವರ್ಷಗಳ ಹಿಂದೆ ನನಗೆ ತಿಳಿದಾಗ ನಿಮ್ಮ ಬುದ್ಧಿವಂತಿಕೆಗೆ ಆಶ್ಚರ್ಯಪಟ್ಟೆನು. ಆದರೆ ಅದೇನು ಈಗ ಲೀಗಲ್ ವಿಷಯಗಳೆಂದು ಅಜ್ಞಾನದಿಂದ ಮಾತನಾಡುತ್ತಿದ್ದೀರಿ. ಆ ಪಿಕ್ ನಿಜವೇ ತಾನೆ. ನಾನೇನು ಸೃಷ್ಟಿಸಿದ್ದಲ್ಲವಲ್ಲ. ಅಷ್ಟಕ್ಕೂ ಏಕೆ ಡಿಲಿಟ್ ಮಾಡಬೇಕು” ಎಂದು ಕೇಳಿದಳು ಸಮೀರಾ.
“ಸ್ವೀಟ್ ಫ್ಯಾಮಿಲಿ ಆಗಿದ್ದರೆ ಪೋಸ್ಟ್  ಮಾಡಬಹುದು… ಇದನ್ನು ಹೇಗೆ ಪೋಸ್ಟ್  ಮಾಡುತ್ತೀಯ” ಎಂದನು ಭಾಸ್ಕರ್.
“ಬಿಟ್ಟರ್ ವೈಫ್ ಇರಬಹುದು… ಮಕ್ಕಳು ಹೇಗೆ ಬಿಟ್ಟರ್ ಆಗುತ್ತಾರೆ… ಅಷ್ಟಕ್ಕೂ ಆ ಪಿಕ್ ತೆಗೆದಾಗ ಆ ಫ್ಯಾಮಿಲಿ ಸ್ವೀಟಾಗಿಯೇ ಇತ್ತಲ್ವಾ” ಗಂಭೀರವಾಗಿ ಹೇಳಿದಳು ಸಮೀರಾ.
“ಪ್ರೈವಸಿ ಮುಖ್ಯ ಅಲ್ಲವಾ…”
“ಯಾರಿಗೆ, ಹಾಗಾಗಿಯೂ ನಮ್ಮ ಆಧಾರ್, ಪಾಸ್‍ ಪೋ ರ್ಟ್‍ಗಳಲ್ಲಿ ತಂದೆಯಾಗಿ ನಿಮ್ಮ ಹೆಸರೇ ಇದೆ. ಆಧಾರ್ ಲಿಂಕ್ ಮಾಡುವಂತೆ ದಿನಾಗಲೂ ಬ್ಯಾಂಕಿನವರು, ಸೆಲ್‍ಫೋನ್ ಕಂಪನಿಯವರು ಹೀಗೆ ಅಲ್ಲಿ ಬಹಳ ಮಂದಿ ಕೇಳುತ್ತಿದ್ದಾರಂತಲ್ವಾ. ಎಲ್ಲ ಕಡೆ ನಿಮ್ಮ ಹೆಸರೇ. ಇನ್ನೆಲ್ಲಿಯ ಪ್ರೈವಸಿ” ನಗುತ್ತ ಹೇಳಿದಳು ಸಮೀರಾ.
“ಆದರೆ ಪಬ್ಲಿಕ್‍ನಲ್ಲಿ ಏಕೆ?”
“ಏಕೆ ಬೇಡ… ಎಲ್ಲ ನಮ್ಮ ವೈಯಕ್ತಿಕ ವಿಚಾರವೇ ಅಂದುಕೊಳ್ಳುತ್ತಾರೆ. ನೀವು ನಿಮ್ಮ ಫ್ಯಾಮಿಲಿ ಪಿಕ್ಚರ್ ಫೋಟೋ ಪೋಸ್ಟ್  ಮಾಡಿದರೆ ಹೇಗೆ ಲೈಕ್ ಒತ್ತಿ ಲವ್ ಲೀ… ಬ್ಯೂಟಿಫುಲ್ ಹ್ಯಾಪಿ ಫ್ಯಾಮಿಲಿ ಎನ್ನುತ್ತಾರೋ ನಾನು ಹಾಕಿದ ಪಿಕ್‍ಗೂ ಹಾಗೇ ಹೇಳುತ್ತಿದ್ದಾರೆ. ಒಳಗೆ ಏನಂದುಕೊಳ್ಳುತ್ತಾರೋ ಗೊತ್ತಿಲ್ಲ, ಆದರೆ ಪಬ್ಲಿಕ್‍ನಲ್ಲಿ ಎಲ್ಲ ಮರ್ಯಾದೆಯಿಂದಲೇ ನಡೆದುಕೊಳ್ಳುತ್ತಾರೆ. ಬೇಸಿಕಲಿ ಮನುಷ್ಯರು ಎದುರಿನ ವ್ಯಕ್ತಿಗಳನ್ನು ಮುಜುಗರಪಡಿಸುವುದಿಲ್ಲ. ಹಾಗೆಯೇ ಎಲ್ಲೋ ನಡೆದ ಅನ್ಯಾಯವನ್ನು ಪ್ರಶ್ನಿಸುತ್ತಾರೆ, ಆದರೆ ತಮ್ಮ ಪಕ್ಕದಲ್ಲಿಯೇ ತಿಳಿದವರು ಮಾಡುವ ಅನ್ಯಾಯವನ್ನು ಪ್ರಶ್ನಿಸುವುದಿಲ್ಲ. ಸೋ ನಿಮ್ಮ ಹ್ಯಾಪಿ ಫ್ಯಾಮಿಲಿಗೆ ಬರುವ ಲೈಕ್ಸ್‍ಗೆ ಯಾವುದೇ ಅಡ್ಡಿಯಾಗುವುದಿಲ್ಲ” ಎಂದಳು ಸಮೀರಾ.
“ಅದೆಲ್ಲ ಅಲ್ಲ… ತೆಗೆದುಹಾಕು… ಅಷ್ಟಕ್ಕೂ ಇದೆಲ್ಲ ನನ್ನನ್ನು ಹಿಂಸಿಸಲು ನಿಮ್ಮ ಅಮ್ಮನೇ ಮಾಡಿಸುತ್ತಿದ್ದಾಳೆಂದು ಗೊತ್ತು”
“ನಮ್ಮ ಅಮ್ಮ ನಿಮಗೆ ಅರ್ಥವಾಗಬೇಕಿದ್ದ ಸಮಯದಲ್ಲಿಯೇ ಅರ್ಥವಾಗಲಿಲ್ಲ. ಸರಿ… ನಿಮಗೆ ತೊಂದರೆಯಾಗುತ್ತಿದೆಯಾ” ಎಂದಳು ಸಮೀರಾ.
ಮೌನ.
“ನಿಜವಾಗಲೂ, ನೋವಾಗುತ್ತಿದೆ, ನನ್ನ ಮಕ್ಕಳು ಮುಜುಗರ ಪಡುತ್ತಾರಲ್ಲವಾ. ಆದರೂ ಪಬ್ಲಿಕ್‍ನಲ್ಲಿ ಯಾಕೆ ಈ ಜಗಳ” ಎಂದ ಭಾಸ್ಕರ್.
“ಗುಡ್… ನೀವೊಂದು ನಿರ್ಧಾರ ತೆಗೆದುಕೊಂಡು ಹೊರಟುಹೋದಾಗ ಆ ಊರಿನಲ್ಲಿ ನಮ್ಮ ಅಮ್ಮನಿಗೆ ಉದ್ಯೋಗವಿರಲಿಲ್ಲ. ಅಲ್ಲಿಯವರೆಗೆ ಲಿಟರಲ್ ಆಗಿ ಅಪ್ಪ, ಗಂಡ ಹೀಗೆ ಗಂಡಸರ ನೆರಳಿನಲ್ಲಿಯೇ ಬದುಕಿದ ನಮ್ಮ ಅಮ್ಮ ಆಗಿಂದಾಗ್ಗೆ ಯಾವ ಕೆಲಸಕ್ಕೆ ಸೇರುತ್ತಾಳೆ? ಹದಿನೆಂಟು ವರ್ಷದ ಹಿಂದೆ ಮಹಿಳೆಯರಿಗೆ ಈಗಿರುವಷ್ಟು ಅವಕಾಶಗಳು ಕೂಡ ಇರಲಿಲ್ಲ. ಇಬ್ಬರ ಕಡೆಯವರೂ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳುವಷ್ಟು ಸ್ಥಿತಿವಂತರೂ ಆಗಿರಲಿಲ್ಲ. ಅಮ್ಮ ಅಡುಗೆ ಕೆಲಸ ಮಾಡಿ ನಮ್ಮನ್ನು ಬೆಳೆಸಿದಳು. ಹೆತ್ತ ಮಕ್ಕಳನ್ನು ಬಿಟ್ಟು ಹೋದದ್ದು, ನೆಂಟರು, ಸ್ನೇಹಿತರು ಇದಾವುದೂ ನಿಮಗೆ ನೋವುಂಟುಮಾಡಲಿಲ್ಲ. ಆದರೆ ಈ ವರ್ಚುವಲ್ ವಲ್ರ್ಡ್ ನಿಮ್ಮನ್ನು ಬಾಧೆಪಡಿಸುತ್ತಿದೆ… ಗುಡ್…” ನಿಧಾನವಾಗಿ ಹೇಳಿದಳು ಸಮೀರಾ.
ತಾನು ಇಲ್ಲಿ ಬಂದು ಫೋಟೋ ತೆಗೆಸಲು ಹೇಳಿದ ತಕ್ಷಣ ಕೆಲಸ ಸುಲಭವಾಗಿ ಆಗಿಬಿಡಬಹುದು ಅಥವಾ ಅವರು ಹಣಕ್ಕೆ ಬೇಡಿಕೆ ಇಡಬಹುದು. ಯಾವುದೋ ಒಂದು ಇತ್ಯರ್ಥ ಮಾಡಿಕೊಂಡು ಆ ಫೋಟೋ ತೆಗೆಸಬೇಕೆಂದು ಬಂದಿದ್ದನು ಭಾಸ್ಕರ್. ದಿಕ್ಕು ತೋಚದಂತಾದ ಅವನ ನೋಟ ಸುತ್ತಲಿನ ಗೋಡೆಗಳತ್ತ ಹರಿಯುತ್ತಿದೆ. ಒಂದು ಗೋಡೆಯ ಮೇಲೆ ಸಮೀರಾ-ವಿನಯ್ ಮದುವೆ ಫೋಟೋ. ತನ್ನ ಅಪ್ಪ-ಅಮ್ಮ, ತಮ್ಮ, ನಾದಿನಿ, ಅವರ ಮಕ್ಕಳು, ತನ್ನ ತಂಗಿ, ಭಾಮೈದ, ಅವರ ಮಕ್ಕಳು. ಉಷಾದೇವಿ ಕುಟುಂಬದ ಸದಸ್ಯರು, ವಿನಯ್ ಮನೆಯವರು ಎಲ್ಲರೂ ಇದ್ದಾರೆ ಆ ಫೋಟೋದಲ್ಲಿ, ತಾನು ಬಿಟ್ಟು, ಅಂದುಕೊಂಡನು ಭಾಸ್ಕರ್.
‘ನಿಜ ಹೇಳು ನಿಮ್ಮ ಅಮ್ಮ ಏಕೆ ಇದೆಲ್ಲ ಮಾಡಿಸುತ್ತಿದ್ದಾಳೆ” ಮತ್ತೆ ಕೇಳಿದನು.
“ನಿಮಗೆ ನಮ್ಮ ಅಮ್ಮನ ಕುರಿತು ಗೊತ್ತಿಲ್ಲ ಎಂದು ಹೇಳಿದೆನಲ್ಲವಾ. ಒಂದು ಕೆಲಸ ಮಾಡುತ್ತೇನೆ. ನಮ್ಮ ಅಮ್ಮ ನಮ್ಮನ್ನು ಎಷ್ಟು ಮುದ್ದಾಗಿ, ಪ್ರೀತಿಯಿಂದ, ಡೆಮಾಕ್ರಟಿಕ್ ಆಗಿ ಬೆಳೆಸಿದಳೋ ಬರೆದು ಪೋಸ್ಟ್  ಮಾಡುತ್ತೇನೆ. ಆಗಲಾದರೂ ನಿಮಗೆ ಅಮ್ಮನಾಗಿ ಉಷಾದೇವಿಯವರು ಸ್ವಲ್ಪವಾದರೂ ಅರ್ಥವಾಗುತ್ತಾರೆ” ಬಹಳ ಗಂಭೀರವಾಗಿ ಹೇಳಿದಳು ಸಮೀರಾ.
ಭಾಸ್ಕರ್ ಕ್ಷಣಮಾತ್ರದಲ್ಲಿ ತಬ್ಬಿಬ್ಬಾದನು. ತನ್ನ ಕೂಗಾಟದಿಂದ ಮನೆಯವರ ಬಾಯಿ ಮುಚ್ಚಿಸಿದಂತೆ ಸಮೀರಾಳನ್ನು ತಾನು ಕಂಟ್ರೋಲ್ ಮಾಡಲಾರೆನೆಂದು ಆತನಿಗೆ ಅರ್ಥವಾಯಿತು. ಅದಕ್ಕೆ ಸ್ವಲ್ಪ ತಗ್ಗಿ ಧ್ವನಿ ತಗ್ಗಿಸಿ “ಇಷ್ಟಕ್ಕೂ ಇದೆಲ್ಲ ಈಗೇಕೆ… ನೀವೆಲ್ಲ ಚೆನ್ನಾಗಿ ಜೀವನದಲ್ಲಿ ವೆಲ್ ಸೆಟಲ್ಡ್ ಆಗಿದ್ದೀರಲ್ಲ. ಈಗ ಈ ಹಗೆ, ಸಾಧನೆ ಏಕೆ” ಕೇಳಿದನು.
“ಹಗೆಯಂತಿದೆಯಾ ನಿಮಗೆ… ನಾನೇನು ಮಾಡಿದೆ… ನಮಗಿರುವ ಫ್ಯಾಮಿಲಿ ಪಿಕ್ ಕವರ್ ಆಗಿ ಪೋಸ್ಟ್  ಮಾಡಿದೆ. ಇಷ್ಟದಿಂದ ಅಲ್ಲವೇ ಅಲ್ಲ ಕಿರಿಕಿರಿಯೆನಿಸಿ…” ಎಂದಳು.
“ನಿನ್ನಲ್ಲಿ ಇಷ್ಟು ಕೋಪವಿದೆಯಾ” ಆಶ್ಚರ್ಯದಿಂದ ಕೇಳಿದನು ಭಾಸ್ಕರ್.
“ಇದೆಯೆಂದು ನನಗೂ ಗೊತ್ತಿರಲಿಲ್ಲ. ಇತ್ತೀಚೆಗೆ ಕೆಲವು ವಿಷಯಗಳು ತಿಳಿಯುವವರೆಗೂ” ಎಂದಳು ಸಮೀರಾ.
“ಯಾವ ವಿಷಯಗಳು” ಕೇಳಿದನು ಭಾಸ್ಕರ್.
ತಮ್ಮಂದಿರಿಬ್ಬರೂ ಸಮೀರಾ ಇದೆಲ್ಲ ಏಕೆ ಮಾಡಿದಳಪ್ಪಾ ಎಂದು ಕುತೂಹಲದಿಂದ ನೋಡುತ್ತಿದ್ದಾರೆ.
“ಓಕೆ… ವಿಷಯ ಹೇಳುತ್ತೇನೆ… ಸುಗುಣ ಚಿಕ್ಕಮ್ಮನ ಮಗಳು ನಮ್ಮೆಲ್ಲರ ಪ್ರೀತಿಯ ತಂಗಿ ತ್ರಿಷಾಳ ಮದುವೆಗೆ ನಾವ್ಯಾರೂ ಬರಬಾರದೆಂದು ನೀವು ತಾತನಿಗೆ ಫೋನ್ ಮಾಡಿ ಹೇಳಿದಿರಾ? ಅವರು ಬಂದರೆ ನೀವ್ಯಾರೂ ಮದುವೆಗೆ ಬರುವುದಿಲ್ಲವೆಂದು ಕೂಡ ಹೇಳಿದಿರಾ? ನಮ್ಮನ್ನು ಮದುವೆಗೆ ಕರೆಯಲೇಬಾರದೆಂದು ಆರ್ಡರ್ ಮಾಡಿದಿರಾ? ಅಷ್ಟೇ ಅಲ್ಲ ನನ್ನ ಮದುವೆಗೆ ಬಂದದ್ದಕ್ಕೆ ಆಗ ತಾತನ ಕೂಡ ಜಗಳ ಮಾಡಿದಿರಂತೆ …ಏಕೆ” ಎಂದು ಕೇಳಿದಳು ಸಮೀರಾ.
ಭಾಸ್ಕರ್ ತಬ್ಬಿಬ್ಬಾಗಿ “ಯಾರು ಹೇಳಿದರು” ಎಂದು ಕೇಳಿದನು.
“ಯಾರಾದರೆ ನಿಮಗೇಕೆ. ಇದೆಲ್ಲ ನಿಜವಾ ಅಲ್ಲವಾ?”
“ಹೌದು ಯಾವಾಗಲೋ ಡೈವೊರ್ಸ್ ಆಗಿಹೋಗಿದೆಯಲ್ಲ. ಏಕೆ ಕಾಂಟ್ಯಾಕ್ಟ್‍ನಲ್ಲಿರಬೇಕು. ನಮ್ಮ ಮಕ್ಕಳಿಗೆ ಕೂಡ ಎಂಬರಾಸಿಂಗ್ ಅಲ್ಲವಾ. ಈ ಹೋಗಿಬರುವುದರಿಂದ ನಿಮಗೆ ತಾನೆ ಏನು ಲಾಭ” ಎಂದು ಕೇಳಿದನು.
“ನೀವು ಜೀವನವನ್ನು ಲಾಭನಷ್ಟಗಳ ಪಟ್ಟಿಯಲ್ಲಿ ತೂಗುತ್ತೀರಿ. ನಾವು ಜೀವನವನ್ನು ಪ್ರೀತಿ ಆದರಣೆಗಳಿಂದ ತೂಗುತ್ತೀವಿ… ಬೇಸಿಕಲಿ ನಮಗೂ ನಿಮಗೂ ಇರುವ ವ್ಯತ್ಯಾಸ ಇದೇ” ಎಂದಳು ಸಮೀರಾ.
ತಾನೆಷ್ಟೋ ತಾಳ್ಮೆ ಸಹನೆಯಿಂದ ಮಾತನಾಡುತ್ತೇನೆಂದು ಪ್ರಸಿದ್ಧಿ… ಆದರೆ ತನಗೆ ಈ ಪಾಠಗಳೇನು? ಮರ್ಯಾದೆ ಒಂದು ಮಿತ್. ಹೋದರೆ ಹೋಯಿತು. ಇದ್ದರೆ ಇರುತ್ತೆ ಆ ಪಿಕ್, ಯಾರು ತಲೆಕೆಡಿಸಿಕೊಳ್ಳುತ್ತಾರೆ? ನಾನೇನು ತಪ್ಪು ಮಾಡಿದ್ದೀನಿ? ಈ ಮನೆ ಹುಡುಕಿಕೊಂಡು ಬರುವುದೆಂದರೇನು? ಇವರೆಲ್ಲ ನನ್ನತ್ತ ಒಂದು ಸಿನಿಮಾ ನೋಡಿದಂತೆ ನೋಡುತ್ತಿರುವುದೇನು, ತಾನೆಂದರೇನು? ಈ ಮಾತುಗಳೆಲ್ಲ ವಿನಯ್ ಎದುರಿಗೆ ನಡೆಯದಿದ್ದರೂ ಅವನಿಗೆ ಇದೆಲ್ಲ ಹೇಳುತ್ತಾರಲ್ಲವಾ! ಭಾಸ್ಕರ್‍ಗೆ ತನ್ನ ಮೇಲೆ ತನಗೆ ಕಿರಿಕಿರಿಯಾಯಿತು.
“ಹೌದು. ಡೈವೊರ್ಸ್ ನೀಡಿದಿರಿ. ಅಮ್ಮನಿಗೆ, ತಾತ-ಅಜ್ಜಿಗೆ ಇಷ್ಟವಾದರೆ ಅವರು ಬಂದು ಹೋಗುವುದನ್ನು ಕಂಟಿನ್ಯೂ ಮಾಡಿದರೆ ಮಾಡುತ್ತಿದ್ದರು. ಅದು ಅವರ ಇಷ್ಟ. ಆದರೆ ನಿಮ್ಮ ಮೂಲಕ ಬಂದ ಬಂಧುತ್ವ, ಬಂಧಗಳು ಎಲ್ಲವನ್ನು ಡಿಲಿಟ್ ಮಾಡಬೇಕೆಂಬ ನಿಮ್ಮ ಪ್ರಯತ್ನಗಳು ಡಿಸ್‍ಗಸ್ಟಿಂಗ್… ನೀವು ನಿಮ್ಮ ಮಿತಿ ಮೀರಿ ನಮ್ಮ ಬಂಧುತ್ವ, ಬಾಂಧವ್ಯಗಳನ್ನು ಕಂಟ್ರೋಲ್ ಮಾಡಬೇಕೆಂದುಕೊಳ್ಳುತ್ತಿದ್ದೀರಿ. ಇಷ್ಟವಾಗಲಿಲ್ಲ. ಅದಕ್ಕೇ ಪೋಸ್ಟ್  ಮಾಡಿದೆ…” ಎಂದಳು ಸಮೀರಾ.
“ನಿನಗೆ ಈ ವಿಷಯಗಳನ್ನೆಲ್ಲ ಸುಗುಣಾ ಹೇಳುತ್ತಿದ್ದಾಳಾ” ಎಂದು ಅನುಮಾನದಿಂದ ಕೇಳಿದನು ಭಾಸ್ಕರ್.
ಸಮೀರಾ ನಕ್ಕು “ಯಾರು ಹೇಳಿದರೆನ್ನುವುದನ್ನು ಬಿಟ್ಟು ನೀವು ಹಾಗೆ ಮಾಡಿದ್ದು ಸರಿಯೇ ತಪ್ಪೇ ಎಂದು ಆಲೋಚಿಸಿಕೊಳ್ಳಿ” ಎಂದಳು. “ಅವರು ಬಂದುಹೋಗುವುದನ್ನು ಎನ್‍ಕರೇಜ್ ಮಾಡಿದರೆ ನಾಳೆ ಈ ಹಿರಿಯರು ಆಸ್ತಿಯಲ್ಲಿ ಕೂಡ ಪಾಲು ಕೊಡುತ್ತೇವೆ ಎನ್ನುತ್ತಾರೆ. ಇಲ್ಲ ಆಕೆಯೇ ಕೇಳಬಹುದು. ನಾವು ದೂರದಲ್ಲಿದ್ದೇವೆ. ನೀವು ಮನೆಯಲ್ಲೇ ಇರುತ್ತೀರಲ್ಲವಾ… ಒಂದು ಕಣ್ಣಿಟ್ಟಿರಿ. ಅವರು ಬಂದುಹೋಗುವುದು ಇಷ್ಟವಿಲ್ಲವೆಂದು ಮನೆಯಲ್ಲಿ ಹೇಳಿರಿ. ನಮ್ಮ ಮಕ್ಕಳಿಗೆ ಬರುವ ಆಸ್ತಿಯಲ್ಲಿ ಪಾಲು ಕಡಿಮೆಯಾಗಬಾರದೆಂದರೆ ನಾವು ಒಂದಾಗಿರಬೇಕು” ಎಂದು ತಮ್ಮನಿಗೆ, ನಾದಿನಿಗೆ ತಾವಿಬ್ಬರೂ ಸೇರಿ ಮಾಡಿದ ಬೋಧನೆ ನೆನಪಿಗೆ ಬಂದು “ಮೊದಲು ನನಗೆ ಈ ವಿಷಯ ಸ್ಪಷ್ಟವಾಗಬೇಕು. ಯಾರು ಹೇಳಿದರು?” ರೆಸ್ಟ್‍ಲೆಸ್ ಆಗಿ ಕೇಳಿದನು ಭಾಸ್ಕರ್.
ತಕ್ಷಣ ಪ್ರಶಾಂತ್‍ಗೆ ಸುಗುಣ ಚಿಕ್ಕಮ್ಮನ ಮೇಲೆ ಕೂಗಾಡುತ್ತಾರೇನೋ ಎಂದು ಭಯವಾಯಿತು.
ಪ್ರತಿವಾರ ಫೋನ್ ಮಾಡಿ ಅಲ್ಲಿನ ವಿಷಯಗಳನ್ನು ತಾವಿಬ್ಬರೂ ಕೇಳುತ್ತಲೇ ಇದ್ದಾರೆ. “ಸಮೀರಾ ಅಮೆರಿಕದಲ್ಲಿದ್ದಾಳೆ. ನಿಶಾಂತ್, ಪ್ರಶಾಂತ್ ಆಗಾಗ ಬರದಂತೆ ನೋಡಿಕೊಳ್ಳಿ” ಎಂದು ಪದೇಪದೇ ಹೇಳಿದಾಗ “ಸಮೀರಾ ಕೂಡ ಅಲ್ಲಿ ಹೆಚ್ಚು ದಿನ ಇರುವುದಿಲ್ಲ ಅಂದಳು. ಇಂಡಿಯಾಗೆ ಬಂದುಬಿಡುತ್ತಾರಂತೆ ಅವರು” ಎಂದು ಸುಗುಣ ಹೇಳಿದ್ದು ನೆನಪಿಗೆ ಬಂದಿತು ಭಾಸ್ಕರ್‍ಗೆ. ಸುಗುಣ ತಮ್ಮ ಕಡೆಯೇ ಇದ್ದಾಳೆ ಎನಿಸಿತ್ತು ತಮ್ಮಿಬ್ಬರಿಗೂ.
“ನನ್ನ ಮದುವೆಗೆ ತಾತಾ ಅವರೆಲ್ಲ ಬಂದರೆಂದು ನೀವು ಬಹಳ ಸಲ ಗಲಾಟೆ ಮಾಡಿದಿರಂತೆ. ಯಾಕೆ ಹಾಗೆ” ಕೇಳಿದಳು ಸಮೀರಾ.
“ಅಂದರೆ ನಾವು ಯಾವಾಗಲೋ ತೆಗೆದುಕೊಂಡ ಡೈವೊರ್ಸ್ ವಿಚಾರಕ್ಕೆ ಈಗ ಹಗೆ ಸಾಧಿಸುತ್ತಿದ್ದೀಯಾ” ಭಾಸ್ಕರ್ ನಿಧಾನವಾಗಿ ಕೇಳಿದನು.
“ನಾನೇನು ಹೇಳುತ್ತಿದ್ದೇನೆಂದು ನಿಮಗೆ ಅರ್ಥವಾಗುತ್ತಿಲ್ಲವಾ! ಡೈವೊರ್ಸ್ ತೆಗೆದುಕೊಳ್ಳುವುದು ಸಂವಿಧಾನ ಸ್ತ್ರೀ ಪುರುಷರಿಬ್ಬರಿಗೂ ಕಲ್ಪಿಸಿರುವ ಸಮಾನ ಹಕ್ಕು ಎಂದು ನಮಗೆಲ್ಲರಿಗೂ ಗೊತ್ತು. ಬಿಟ್ಟುಹೋಗುವುದಕ್ಕೆ ನಿಮಗೆ ನೂರು ಕಾರಣಗಳಿರಬಹುದು. ನಿಮ್ಮ ನಿರ್ಧಾರದ ಕುರಿತು ನಮ್ಮದೇನು ಕಂಪ್ಲೇಂಟ್ ಇಲ್ಲ. ಮತ್ತೆ ಮದುವೆ ಮಾಡಿಕೊಳ್ಳುವುದು ಅವರವರ ಛಾಯ್ಸ್. ಆದರೆ ಮಕ್ಕಳಿಗೆ ಪೇರೆಂಟ್ಸ್ ಛಾಯ್ಸ್ ಅಲ್ಲವಲ್ಲಾ. ನೀವು ಮಕ್ಕಳೊಂದಿಗೆ ಬಾಂಧವ್ಯ ಏಕೆ ಬೇಡವೆಂದುಕೊಂಡಿರೋ ನಿಮಗೇ ತಿಳಿಯಬೇಕು. ನಾನು ಅದನ್ನೂ ಕೇಳುವುದಿಲ್ಲ. ಹಾಗೆಯೇ ನಮ್ಮೊಂದಿಗೆ ಆತ್ಮೀಯವಾಗಿರುವ ಅಜ್ಜಿ, ತಾತ, ಚಿಕ್ಕಮ್ಮ, ಚಿಕ್ಕಪ್ಪ, ಅವರ ಮಕ್ಕಳ ನಡುವಿನ ಬಾಂಡಿಂಗ್ ಅನ್ನು ಏಕೆ ದೂರ ಮಾಡಬೇಕೆಂದುಕೊಳ್ಳುತ್ತಿರುವಿರೋ ತಿಳಿದುಕೊಳ್ಳಬೇಕೆಂಬ ಆಸಕ್ತಿಯೂ ನನಗಿಲ್ಲ. ಅದರಲ್ಲಿ ಕೆಲವು ಕಾರಣಗಳು ನನಗೆ ಗೊತ್ತು. ನೀವು ಅರ್ಥ ಮಾಡಿಕೊಳ್ಳಬೇಕಾದ್ದು ಜೀವನದಲ್ಲಿ ಸಾಕಷ್ಟಿದೆ ಅಂದುಕೊಳ್ಳುತ್ತೇನೆ. ಎಲ್ಲರೂ ನಿಮ್ಮಂತೆಯೇ ಹಣದ ಮೋಹದಲ್ಲಿರುತ್ತಾರೆ ಅಂದುಕೊಂಡು ನೀವು ನಮ್ಮೆಲ್ಲರ ಕುರಿತು ಕೆಟ್ಟದಾಗಿ ಯೋಚಿಸುವುದರಿಂದ ಸ್ವಲ್ಪ ಹೊರಗೆ ಬನ್ನಿ” ಎಂದಳು ಸಮೀರಾ.
ಭಾಸ್ಕರ್‍ಗೆ ಇವರನ್ನು ನೋಡಿದರೆ ತನ್ನ ನಾದಿನಿಗೆ ಮಾತ್ರವಲ್ಲ ತನ್ನ ತಂದೆ ತಾಯಿಯರಿಗೆ, ತಮ್ಮ ಎಲ್ಲರಿಗೂ ಪ್ರೀತ್ಯಾದರಗಳಿವೆ, ಅವರೆಲ್ಲರೂ ಇವರೊಂದಿಗೆ ಮುಚ್ಚುಮರೆಯಿಲ್ಲದೆ ಎಲ್ಲ ವಿಷಯ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟವಾಗಿ ತಿಳಿದ ಮೇಲೆ, ಸ್ವಲ್ಪಹೊತ್ತು ತನ್ನಲ್ಲಿ ತಾನೇ ಯೋಚಿಸಿದನು. “ಆದರೆ ಇವರು ಆ ಮನೆಗೆ ಬಂದರೆ ತನ್ನ ಹೆಂಡತಿಯೊಂದಿಗೆ ಜಗಳ ಎದುರಿಸಬೇಕಾಗುತ್ತದೆ. ತನ್ನ ಹಿಂದಿನ ಜೀವನದ ಕುರಿತು ಹೆಚ್ಚಿಗೆ ಯಾರಿಗೂ ತಿಳಿದಿಲ್ಲ. ಡೈವೊರ್ಸ್‍ಗಳು ಮಾಮೂಲಿ. ತನ್ನನ್ನು ಲುಕ್‍ಡೌನ್ ಮಾಡುತ್ತಿರುವುದು ಅದಲ್ಲ. ಮಕ್ಕಳೊಂದಿಗೆ ತಾನು ನ್ಯಾಯವಾಗಿ ನಡೆದುಕೊಂಡಿಲ್ಲ. ಹೊರಗೆ ತಾನು ಎಷ್ಟಾದರೂ ಮಾತನಾಡಬಹುದು. ಆದರೆ ಇಷ್ಟು ದಿನಗಳಲ್ಲಿ ತಾನು ಎಂದೂ ತನ್ನ ಪ್ರವರ್ತನೆಯನ್ನು ಅಳೆದು ನೋಡಲಿಲ್ಲ, ನೋಡಿಕೊಳ್ಳುವ ಅಗತ್ಯವೂ ಎದುರಾಗಲಿಲ್ಲ. ಆದರೆ ಪಬ್ಲಿಕ್‍ನಲ್ಲಿ ಕವರ್ ಪಿಕ್ ಆಗಿ ಸಮೀರಾ ಪೋಸ್ಟ್  ಮಾಡುತ್ತಿದ್ದಂತೆ ತಾವಿಬ್ಬರೂ ಬೆಚ್ಚಿಬಿದ್ದರು.
“ತಪ್ಪುವುದಿಲ್ಲ, ತಾನು ಇವರ ಯಾವ ಬಾಂಧವ್ಯಗಳ ನಡುವೆ ಮೂಗುತೂರಿಸದಿದ್ದರೆ ಮಾತ್ರ ನನಗೆ ಪಬ್ಲಿಕ್‍ನಲ್ಲಿ ಮರ್ಯಾದೆ, ಗೌರವ. ಆದರೆ ಆಕೆಯೊಂದಿಗೆ ಜಗಳ… ಈ ಪಬ್ಲಿಕ್ ನ್ಯೂಸೆನ್ಸ್‍ಗಿಂತಲೂ ಆಕೆಯೊಂದಿಗೆ ಆ ನಾಲ್ಕು ಗೋಡೆಗಳ ನಡುವೆ ಜಗಳವೇ ಬೆಟರ್ ಅಲ್ಲವಾ” ಎಂದುಕೊಂಡು ಕೂಡಲೇ ಸಮೀರಾಳೊಂದಿಗೆ ಮಾತನಾಡಲಾರದೆ ನಿಶಾಂತ್, ಪ್ರಶಾಂತ್‍ರ ಕಡೆಗೆ ನೋಡಿದನು. ಅವರಿಬ್ಬರೂ ಫೋನ್ ನೋಡುತ್ತಿದ್ದಾರೆ.
ಅವಳಿ ಮಕ್ಕಳಲ್ಲವಾ, ಚಿಕ್ಕಂದಿನಲ್ಲಿ ಒಂದೇ ರೀತಿಯಿದ್ದ ಅವರಲ್ಲಿ ಯಾರು ನಿಶಾಂತ್, ಯಾರು ಪ್ರಶಾಂತ್ ಎಂದು ಗುರುತು ಹಿಡಿಯದಿದ್ದಂತೆ ಈಗ, ಅವರಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಯಾರು ಯಾರೆಂದು ತಿಳಿಯುತ್ತಿಲ್ಲ ತನಗೆ. ಕೇಳಲು ಸಂಕೋಚವಾಯಿತು. ನಿಧಾನವಾಗಿ ಸಮೀರಾಳತ್ತ ನೋಡಿದನು.
ಸಮೀರಾ ಇದೆಲ್ಲ ಮಾಡುತ್ತಿರುವುದು ಆಸ್ತಿಗೋಸ್ಕರವಲ್ಲ, ಆಕೆ ಇದೆಲ್ಲ ತನಗೆ, ತಮ್ಮಂದಿರಿಗೆ, ತಮ್ಮ ಮಕ್ಕಳಿಗೆ ಈ ಫ್ಯಾಮಿಲಿಯೊಂದಿಗೆ ಅನುರಾಗಭರಿತವಾದ ಬಾಂಧವ್ಯಗಳಿರಬೇಕು ಎಂದು, ಅವು ಕಂಟಿನ್ಯೂ ಆಗಬೇಕೆಂದೇ ಹೀಗೆ ಮಾಡಿದಳೇನೋ ಎಂದು ಒಳಮನಸ್ಸು ಹೇಳುತ್ತಿದ್ದರೂ, “ನಾನು ಬೇಡವೆಂದೆನೆಂದು ಅವರು ನಿಮ್ಮನ್ನು ಕರೆಯದೆ ಇರುತ್ತಾರಾ! ನಿಮ್ಮ ಬಂದುಹೋಗುವಿಕೆ ನಿಂತುಹೋಗುತ್ತದೆಯಾ” ಬಿಂಕದಿಂದ ನುಡಿದನು ಭಾಸ್ಕರ್.
ಸಮೀರಾ ಸ್ವಲ್ಪಹೊತ್ತು ಮೌನವಾಗಿ ಆತನನ್ನು ನೋಡಿದಳು.
ಆತನಿಗೆ ಇವಳು ತನ್ನ ಒಳ ಆಲೋಚನೆಯನ್ನು ಕಂಡುಹಿಡಿಯುತ್ತಾಳೇನೋ ಎಂದೆನಿಸಿ ಮತ್ತೆ ನಿಶಾಂತ್, ಪ್ರಶಾಂತ್‍ರತ್ತ ನೋಡಿದನು. ಅವರ ನೋಟ ಫೋನ್ ಮೇಲೆಯೇ ಇತ್ತು.
“ನಿಲ್ಲುವುದಿಲ್ಲ. ಆದರೆ ನಿಮ್ಮಿಂದ ಅವರೇಕೆ ಕಿರಿಕಿರಿ ಅನುಭವಿಸಬೇಕು. ಕೆಲವು ಸಂದರ್ಭಗಳಲ್ಲಿ ಮನುಷ್ಯರು ಬೇರೆಯಾಗುವುದು ಹೇಗೆ ಸಹಜವೋ, ಕೆಲವು ಬಾಂಧವ್ಯಗಳು ಮುಂದುವರಿಯುವುದು ಕೂಡ ಅಷ್ಟೇ ಸಹಜ ಎಂದು ನಿಮಗೆ ಅರ್ಥವಾದರೆ, ತಾತನಿಗೆ ಅವರು ಬಂದರೆ ನಾವು ಬರುವುದಿಲ್ಲ ಎಂದು ಎಮೋಷನಲ್ ಬ್ಲಾಕ್ ಮೇಲ್ ಮಾಡದಿರುವ ಪ್ರಯತ್ನ ಮಾಡುವಿರೇನೋ. ಹಾಗೆಯೇ ಈ ವಿಷಯಗಳನ್ನು ಕೂಡ ಯಾರು ಹೇಳಿದರೆಂದು ಕೂಗಾಡದೆ ನಮ್ಮೆಲ್ಲರ ನಡುವೆ ಇರುವ ಬಾಂಡಿಂಗ್ ಅನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಯಾರ ಜೀವನದ ನಿರ್ಧಾರಗಳಾದರೂ ಅವರು ತೆಗೆದುಕೊಂಡಾಗ ಸುತ್ತಮುತ್ತಲಿನವರು ಅರ್ಥ ಮಾಡಿಕೊಳ್ಳಬೇಕು, ಗೌರವಿಸಬೇಕು, ಒಪ್ಪಿಕೊಳ್ಳಬೇಕೆಂದು ನೀವು ಅಂದುಕೊಂಡಹಾಗೆಯೇ ಇನ್ನೊಬ್ಬರ ವಿಚಾರದಲ್ಲಿ ನೀವೂ ಹಾಗೇ ಇದ್ದರೆ ನಿಮ್ಮ ಮೇಲೆ ಗೌರವ ಇರುತ್ತದೇನೋ” ಮೆಲು ಧ್ವನಿಯಲ್ಲಿ ಹೇಳಿದಳು ಸಮೀರಾ.
ಭಾಸ್ಕರ್ ಸ್ವಲ್ಪ ಹೊತ್ತು ಮೌನವಾಗಿದ್ದು “ನಾನು ಹೊರಡುತ್ತೇನೆ” ಎಂದನು.
ಸಮೀರಾ ತಲೆಯಾಡಿಸಿದಳು.
ಭಾಸ್ಕರ್‍ಗೆ ಹೊರಡುತ್ತಿದ್ದಂತೆ ಸಮೀರಾಳ ಮಗಳನ್ನು ನೋಡಬೇಕೆನಿಸಿತು. ಕೇಳಲು ಸಂಕೋಚವಾಗಿ ತಡಬಡಿಸುತ್ತ “ತ್ರಿಷಾಳ ಮದುವೆಯಲ್ಲಿ ಭೇಟಿಯಾಗೋಣ” ಎಂದು ಪಿಸು ಧ್ವನಿಯಲ್ಲಿ ಹೇಳಿದನು.
ಸುರಿದ ಮಂಜನ್ನು ಕ್ಲೀನ್ ಮಾಡಿಕೊಳ್ಳುತ್ತಿದ್ದ ಅಕ್ಕಪಕ್ಕದವರನ್ನು ನೋಡುತ್ತ ಸಮೀರಾ “ನಾವು ಕೂಡ ಸ್ವಲ್ಪ ಕ್ಲೀನ್ ಮಾಡಿಕೊಳ್ಳೋಣವಾ” ಎಂದು ತಮ್ಮಂದಿರನ್ನು ಕೇಳಿದಳು.

ತೆಲುಗು ಮೂಲ : ಕುಪ್ಪಿಲಿ ಪದ್ಮ


ಕನ್ನಡಕ್ಕೆ : ಎಂ.ಜಿ. ಶುಭಮಂಗಳ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಕಥಾ ಕ್ಷಿತಿಜ / ಕವರ್ ಪಿಕ್ – ಕನ್ನಡಕ್ಕೆ: ಎಂ.ಜಿ. ಶುಭಮಂಗಳ

  • June 3, 2019 at 7:18 am
    Permalink

    ಕಥೆ ಸಮಕಾಲೀನವಾಗಿದ್ದುದು ಖುಷಿಯಾಯಿತು. ಹೊಸ ಸಮಸ್ಯೆಗಳು ಇವು. ಚೆನ್ನಾಗಿ ನಿರ್ವಹಿಸಿದ್ದಾರೆ. ಅನುವಾದವೂ ಚೆನ್ನಾಗಿದೆ.

    Reply

Leave a Reply

Your email address will not be published. Required fields are marked *