ಕಥಾಕ್ಷಿತಿಜ/ ಶನಿವಾರದ ಸ್ವರ್ಣಾಂಬ- ಕೆ. ಸತ್ಯನಾರಾಯಣ

ನಿವಾರ ನೀವು ಸ್ವರ್ಣಾಂಬನನ್ನು ನೋಡಬೇಕು, ಬೆಳಿಗ್ಗೆ ಎದ್ದು ತಲೆಗೆ ಸ್ನಾನಮಾಡಿ, ಒದ್ದೆ ಕೂದಲನ್ನು ಸಡಿಲವಾಗಿ ಗಂಟುಹಾಕಿಕೊಂಡು, ಕೆನ್ನೆ ತುಂಬಾ ಅರಿಷಿನ ಹಚ್ಚಿಕೊಂಡು, ಕನಕಾಂಬರ ಬಾರ್ಡರ್‌ ಸೀರೆ ಉಟ್ಟಿಕೊಂಡು ರೆಡಿ ಆಗಿಬಿಡುವಳು. ಸಂಜೆ ಇನ್ನೂ ನಾಲ್ಕು ಘಂಟೆಗೇ ಸ್ವರ್ಣಾಂಬ ರೆಡಿಯಾಗಿ, ಮನೆಗೆ ಇದ್ದ ಆರೇ ಆರು ಮೆಟ್ಟಿಲುಗಳನ್ನು ಒಂದು ಇಪ್ಪತ್ತು ಸಲ, ಇಲ್ಲ, ಮೂವತ್ತು ಸಲ, ಇಲ್ಲ ನಲವತ್ತು ಸಲ ಹತ್ತಿ ಇಳಿದು, ಕತ್ತು, ಎದೆ, ಹಣೆಯ ಭಾಗದಲ್ಲಿ ಸಂಜೆ ಹೊತ್ತು ಕೂಡ ಬೆವರು ಮೂಡುತ್ತದೆ.

       ಸ್ವರ್ಣಾಂಬ ಎಂಬುದು ಆಕೆಯ ಮಾತಾಪಿತರು ಇಟ್ಟ ಪ್ರೀತಿಯ ಹೆಸರಾಗಿದ್ದರೂ, ಯಾರೂ ಹಾಗೆಂದು ಹೆಸರು ಹಿಡಿದು ಕರೆಯುತ್ತಿರಲಿಲ್ಲ. ಪಾಪಾ, ಪಾಪಚ್ಚಿ ಎನ್ನುವರು. ಸ್ವರ್ಣಾಂಬ ಎಂದು ಯಾರಾದರೂ ಕರೆದರೆ ಅದು ವ್ಯಂಗ್ಯಕ್ಕೇ, ಶನಿವಾರದ ಸ್ವರ್ಣಾಂಬ ಎಂದು ಕರೆದರಂತೂ ವ್ಯಂಗ್ಯಕ್ಕೆ ಮಾತ್ರವಲ್ಲ, ಲೇವಡಿ ಮಾಡುವುದಕ್ಕೆ ಮತ್ತು ಅವಹೇಳನ ಮಾಡುವುದಕ್ಕೆ ಅಂತಲೇ ಗ್ಯಾರಂಟಿ.

       ಒಂದು ರೀತಿಯಲ್ಲಿ ಈ ವ್ಯಂಗ್ಯ, ಲೇವಡಿ ಎಲ್ಲವೂ ಅನ್ವಯಾರ್ಥದ ಮಟ್ಟದಲ್ಲಿ ಸರಿಹೋಗುತ್ತಿತ್ತು. ಯಾರ ಮನೆಯವಳು ಅವಳು? ಊರಿಗೆಲ್ಲ ಬೆರಣಿ ತಟ್ಟಿಕೊಡುವ ಮನೆಯವಳು. ಅವರ ಮನೆ ಮತ್ತು ಮನೆಯ ಸುತ್ತಮುತ್ತವೆಲ್ಲ ಯಾವಾಗಲೂ ಸಗಣಿ, ಭತ್ತದ ಜೊಳ್ಳು, ಹೊಟ್ಟು, ಇದೇ. ಗೋಡೆಗಳಿಗಂತೂ ಸುಣ್ಣವೂ ಇಲ್ಲ, ಬಣ್ಣವೂ ಇಲ್ಲ. ಲಿಂಗಾಯಿತರಾಗಿದ್ದರೇನಂತೆ ಮಹಾ. ಉಳಿದ ಲಿಂಗಾಯಿತರ ಮನೆ ಮಧ್ಯೆ ಇವರ ಮನೆ ಇರಲಿಲ್ಲ. ಅವರೆಲ್ಲ ದಿನಸಿ ಅಂಗಡಿ ಇಟ್ಟುಕೊಂಡವರು, ಚಿನ್ನಬೆಳ್ಳಿ ವ್ಯಾಪಾರ ಮಾಡುವವರು, ಬಡ್ಡಿಗೆಂದೇ ಹಣಕೊಡುವವರು. ಒಂದಿಬ್ಬರು ತಮ್ಮಡಿಗಳು. ಅವರೆಲ್ಲರದೇ ಬೇರೆ ಒಂದು ಬೀಡಿ. ಈ ಬೆರಣಿ ತಟ್ಟುವವರಮನೆ ಒಂದು ಮಾತ್ರ ಪ್ರತ್ಯೇಕ.

      ಶನಿವಾರದ ಸ್ವರ್ಣಾಂಬ ಎಂಬ ಬಿರುದು ಬರುವುದಕ್ಕೆ ಕಾರಣ ಶಾಲಾಬಾಲಕರವರೆಗೆ ಎಲ್ಲರಿಗೂಗೊತ್ತಿತ್ತು. ಸ್ವರ್ಣಾಂಬಳನ್ನು ಚಾಮರಾಜನಗರದ ಹತ್ತಿರವಿರುವ ಕುದೇರಿಗೆ ಕೊಟ್ಟು ಲಗ್ನ ಮಾಡಲಾಗಿತ್ತು. ಗಂಡ ಶಿವಬಸಪ್ಪ ಫಾರೆಸ್ಟ್‌ ಡಿಪಾರ್ಟ್‌ಮೆಂಟಿನಲ್ಲಿ ಗಾರ್ಡ್‌ ಅಂತಲೇ ಹೆಣ್ಣುಕೊಟ್ಟಿದ್ದು. ಇದು ಮದುವೆಗೆ ಮುಂಚೆ. ಅವರ ಮದುವೆ ಆದಮೇಲೆ ಗೊತ್ತಾದದ್ದು ಅವನು ಫಾರಸ್ಟ್‌ ಗಾರ್ಡ್‌ ಅಲ್ಲ. ಫಾರೆಸ್ಟ್‌ ಗಾರ್ಡ್‌ ಆಫೀಸಿನಲ್ಲಿ ಜವಾನ ಅಂತ. ಅಷ್ಟಕ್ಕೂ ಗಂಡನನ್ನು ಬಿಡುವುದಕ್ಕೆ ಆಗುತ್ತದೆಯೇ? ಗಂಡ ಹೆಂಡತಿಯನ್ನು ಬಿಡುವುದು ಒಂದು ಪದ್ಧತಿಯಾಗಿತ್ತೇ ಹೊರತು, ಹೆಂಡತಿ ಗಂಡನನ್ನು ಬಿಡುವುದು ರೂಢಿಗೆ ಬಂದಿರಲಿಲ್ಲ.

       ಗೌರಿ ಹಬ್ಬಕ್ಕೆ ಬಂದವಳು ಸ್ವರ್ಣಾಂಬ. ಹಸಿರು ರೇಷ್ಮೆ ಸೀರೆ ಉಟ್ಟುಕೊಂಡೇ ಗೌರಿಪೂಜೆ ಮಾಡಿದ್ದು. ಬಸಪ್ಪ ಆಸಾಮಿ ಹಬ್ಬಕ್ಕೆ ಬರಲೇ ಇಲ್ಲ. ಬರ್ತಾನೆ, ಬರ್ತಾನೆ ಅಂತ ಹೇಳಿ ದೀವಳಿಗೆ ತನಕ ಸುಳ್ಳು ಹೇಳಿ ಎಳೆದರು. ಇನ್ನೂ ಆಸಾಮಿ ಬರಲೇಇಲ್ಲ. ಜನ ಮುಗಿಬಿದ್ದರು. ಊರಿಗೇ ಬಂದು ಬೆರಣಿ ತಟ್ಟುತಾ ಕೂತವ್ಳೆ. ಇಷ್ಟಾದಮೇಲೂ ಗುಟ್ಟು ಮುಚ್ಚಿಡಬೇಕಾ? ಸರಿ ಬಿಟ್ಟಿರುವುದಕ್ಕೆ ಕಾರಣಗಳೇನಿರಬಹುದು.

       ಎರಡನೇ ಕಂತು ವರದಕ್ಷಿಣೆ ಕೊಟ್ಟಿಲ್ಲ. ಕೊಟ್ಟರೆ ಸಾಕು ಮಾರನೇ ದಿನವೇ ಬಂದು ರಾಜನ ತರ ಕರೆದುಕೊಂಡು ಹೋಗ್ತಾನೆ. ಇಲ್ಲ, ಇಲ್ಲ, ಹಾಗಲ್ಲ. ಮದುವೇಲಿ ಕೊಟ್ಟಿರೋ ಚಿನ್ನದ ಲೆಕ್ಕದಲ್ಲೇ ಏನೋ ತಪ್ಪಿದೆ. ತೂಕ ಹೆಚ್ಚುಕಡಿಮೆ ಆಗಿದೆ. ನಿಜವಾದ ಗುಟ್ಟು ಅಂದರೆ ಸ್ವರ್ಣನಿಗೆ ಮಕ್ಕಳಾಗಲಿಲ್ಲವಂತೆ. ಎಲ್ಲ ನಂಜನಗೂಡು ಪಂಡಿತರಿಗೂ ತೋರಿಸಿಯಾಯಿತಂತೆ. ಎಲ್ಲ ದೇವರುಗಳಿಗೂ ಹರಕೆ, ಮುಡಿಪುಗಳಾದವಂತೆ. ಜೋಯಿಸರು ಕೂಡ ಈ ದಂಪತಿಗೆ ಇನ್ನು ಹದಿನೈದು-ಇಪ್ಪತ್ತು ವರ್ಷ ಸಂತಾನಯೋಗವಿಲ್ಲ, ಹಾಗೆಂದು ಕಾಯುವುದುಬೇಡ, ಬಸಪ್ಪ ಬೇರೆ ಪ್ರಯತ್ನಗಳನ್ನು ಮಾಡಲಿ ಎಂದು ಸಲಹೆ ಕೊಟ್ಟರಂತೆ. ಇದೆಲ್ಲಾ ಸ್ವರ್ಣಾಂಬ ತಾಯಿ-ತಂದೆಯರಾದ ಸಂಗನಬಸಪ್ಪ- ಪಾರ್ವತಮ್ಮನಿಗೂ ಗೊತ್ತಂತೆ. ಊರಿನಲ್ಲಿ ಯಾರಿಗೂ ಗೊತ್ತಾಗಬಾರದು ಅಂತ ಮುಚ್ಚಿಟ್ಟದ್ದಾರಂತೆ. ಅಲ್ಲದೆ ಸ್ವರ್ಣಾಂಬನ ಅಕ್ಕ ಜ್ಞಾನಾಂಬನ್ನ ಗರ್ಗೇಶ್ವರಿಗೆ ಕೊಟ್ಟಿದೆಯಲ್ಲ. ಅವಳಿಗೂ ಮದುವೆ ಆಗಿ ಎಂಟು ಹತ್ತು ವರ್ಷವಾಗಲಿಲ್ಲವಾ. ಅವಳಿಗೂ ಮಕ್ಕಳಾಗಿಲ್ಲ ಅಂದಮೇಲೆ, ಇನ್ನು ಅವಳ ತಂಗಿ ಸ್ವರ್ಣಾಂಬಳಿಗೆ ಮಕ್ಕಳು ಆಗುವುದು ಉಂಟಾ?

       ಇಲ್ಲ, ಇಲ್ಲ, ಇದೆಲ್ಲ ಸುಳ್ಳು. ಮುಂದಿನ ಶನಿವಾರ ಸಂಜೆ ಕೊನೆಬಸ್‌ಗೆ ಶಿವಬಸಪ್ಪ ಬರ್ತಾನೆ. ಮಾರನೇದಿನ ಬೆಳಿಗ್ಗೆ ಅರ್ಕೇಶ್ವರಸ್ವಾಮಿ ದೇವಸ್ಥಾನದಲ್ಲಿ ಪಂಚಾಮೃತದ ಅಭಿಷೇಕ. ಮಧ್ಯಾಹ್ನ ಹಬ್ಬದಡಿಗೆ. ಸಂಜೆ ಹೊತ್ತಿಗೆ ಸ್ವರ್ಣಾಂಬನನ್ನು ಕರೆದುಕೊಂಡು ಕಿಸಾನ್‌ ಮೋಟರ್‌ ಸರ್ವೀಸಿನಲ್ಲಿ ರಾಜ-ರಾಣಿ ತರ ಇಬ್ಬರೂ ಹೊರಟೇಹೋಗ್ತಾರೆ. ಬಸಪ್ಪನಿಗೆ ಕೊಡಬೇಕಾದ ಪಂಚೆ, ಶಲ್ಯ, ಸ್ವರ್ಣಾಂಬಳಿಗೆ ಕೊಡಬೇಕಾದ ಸೀರೆಯನ್ನು ಈಗಾಗಲೇ ಸಂಗನಬಸಪ್ಪ ತಂದು ಮನೆಯಲ್ಲಿ ಇಟ್ಟುಕೊಂಡಿದ್ದಾರೆ.

       ಈ ವಾರ್ತಾಪ್ರಸಾರಕ್ಕೆ ಅನುಗುಣವಾಗಿ ಸ್ವರ್ಣಾಂಬ ಗುರುವಾರ- ಶುಕ್ರವಾರದ ತನಕವೂ ಉಳಿದವರ ಜೊತೆ ಸೇರಿಕೊಂಡು ಬೆರಣಿ ತಟ್ಟುವ, ಚೀಲಕ್ಕೆ ತುಂಬುವ, ಹೊಲೆಯುವ ಕೆಲಸದಲ್ಲೇ ನಿರತಳಾಗಿರುತ್ತಿದ್ದಳು. ಯಾವಾಗಲೂ ಕೆದರಿದ ತಲೆ, ಜಗುಲಿ ಮೇಲೆ ಸಗಣಿರಾಶಿ ಮಧ್ಯೆ ಊಟ, ಸೀರೆಯನ್ನು ಕೂಡ ಅರ್ಧಭಾಗ ಎತ್ತಿ ಕಟ್ಟಿರುತ್ತಿದ್ದಳು. ಪೂರ್ತಿ ಹರಡಿಕೊಂಡರೆ ಬೆರಣಿ ತಟ್ಟುವಾಗ ಕುಕ್ಕರುಗಾಲಿನಲ್ಲಿ ಕುಳಿತುಕೊಳ್ಳಲು ಆಗಬೇಕಲ್ಲ.

       ಶುಕ್ರವಾರದ ಹೊತ್ತಿಗೆ ಬಟ್ಟೆಬರೆ ಎಲ್ಲವೂ ಸ್ವಲ್ಪ ಶುಭ್ರವಾಗುವುದು. ಶನಿವಾರ ನೀವು ಸ್ವರ್ಣಾಂಬನನ್ನು ನೋಡಬೇಕು, ಬೆಳಿಗ್ಗೆ ಎದ್ದು ತಲೆಗೆ ಸ್ನಾನಮಾಡಿ, ಒದ್ದೆ ಕೂದಲನ್ನು ಸಡಿಲವಾಗಿ ಗಂಟುಹಾಕಿಕೊಂಡು, ಕೆನ್ನೆ ತುಂಬಾ ಅರಿಷಿನ ಹಚ್ಚಿಕೊಂಡು, ಕನಕಾಂಬರ ಬಾರ್ಡರ್‌ ಸೀರೆ ಉಟ್ಟಿಕೊಂಡು ರೆಡಿ ಆಗಿಬಿಡುವಳು. ಸಂಜೆ ಇನ್ನೂ ನಾಲ್ಕು ಘಂಟೆ ಆಗೇ ಇರ್ತಿರ್ಲಿಲ್ಲ. ಶಿವಬಸಪ್ಪ ಈಗಾಗಲೇ ಮಂಡ್ಯದ ಬಸ್‌ ಸ್ಟ್ಯಾಂಡ್‌ನಲ್ಲಿ ಇಳಿದೇ ಬಿಟ್ಟಿದ್ದಾನೆ, ದೇವರಾಜ ಮಾರ್ಕೆಟ್‌ನಲ್ಲಿ ತಗೊಂಡ ಹೂವುಹಣ್ಣಿನ ಚೀಲವನ್ನು ಎಡಗೈಲಿ ಹಿಡಕೊಂಡು ಪ್ರೀತಿಯ ಹೆಂಡತಿಯನ್ನು ನೋಡುವ ಕಾತುರದಿಂದ ದಾಪುಗಾಲು ಹಾಕುತ್ತಾ ಓಡೋಡಿ ಬರ್ತಿದ್ದಾನೆ. ಅದನ್ನೆಲ್ಲ ಸ್ವರ್ಣಾಂಬ ಒಳಗಣ್ಣಿನಿಂದಲೇ ನೋಡಿ, ಸಂಭ್ರಮದಿಂದ ಪುಳಕಿತಳಾಗಿ, ರಂಗೇರಿದ ಕೆನ್ನೆಯನ್ನು ಯಾರಿಗೂ ಗೊತ್ತಾಗದ ಹಾಗೆ ಸವರಿಕೊಂಡು, ಇನ್ನೊಮ್ಮೆ ಕೂದಲನ್ನು ಒಪ್ಪಮಾಡಿಕೊಂಡು, ಸಡಿಲವಾದ ಜಡೆಯ ಟೇಪಿನ ಗಂಟನ್ನು ಮತ್ತೊಮ್ಮೆ ಸರಿಯಾಗಿ ಕಟ್ಟಿಕೂರಿಸಿ, ತಗೋಳಪ್ಪ ಅಂತ ಸ್ವರ್ಣಾಂಬ ರೆಡಿಯಾಗಿ, ಮನೆಗೆ ಇದ್ದ ಆರೇ ಆರು ಮೆಟ್ಟಿಲುಗಳನ್ನು ಒಂದು ಇಪ್ಪತ್ತು ಸಲ, ಇಲ್ಲ, ಮೂವತ್ತು ಸಲ, ಇಲ್ಲ ನಲವತ್ತು ಸಲ ಹತ್ತಿ ಇಳಿದು, ಕತ್ತು, ಎದೆ, ಹಣೆಯ ಭಾಗದಲ್ಲಿ ಸಂಜೆ ಹೊತ್ತು ಕೂಡ ಬೆವರು ಮೂಡುತ್ತದೆ. ಹಾಳು ಬಸಪ್ಪ ಬರಲಿಲ್ಲ. ಬರಲಿಲ್ಲ ಅಲ್ಲ, ಇನ್ನೂ ಕುದೇರುವಿನಿಂದ ಹೊರಟೇ ಇಲ್ಲ.

       ಬೇಗಬೇಗ ಸ್ವರ್ಣಾಂಬನ ಮನೆಯಲ್ಲಿ ದೀಪ ಆರಿಸಿಬಿಡುತ್ತಾರೆ. ಬಾಗಿಲು ಹಾಕಿಬಿಡುತ್ತಾರೆ. ಭಾನುವಾರ ಬೆಳಿಗ್ಗೆ ಕೂಡ ಮನೆಬಾಗಿಲು ಬೇಗ ತೆಗೆಯುವುದಿಲ್ಲ. ಹೋಗಿಬರುವವರೆಲ್ಲ ಕುತೂಹಲದಿಂದ, ಸುಳ್ಳು ಅನುಕಂಪದಿಂದ, ಕೆಟ್ಟ ಸಂತೋಷದಿಂದ ಸಂಗನಬಸಪ್ಪನ ಮನೆಬಾಗಿಲ ಕಡೆ ನೋಡುತ್ತಲೇ ಇರುತ್ತಾರೆ. ಹು, ಹು, ಬಾಗಿಲು ತೆರೆಯುವುದೇ ಇಲ್ಲ. ಮಧ್ಯಾಹ್ನ ಊಟದ ಹೊತ್ತಾದಮೇಲೆ ಒಂದರ್ಧ ಬಾಗಿಲು ತೆಗೆಯುತ್ತೆ. ಆಮೇಲೆ ಸ್ವಲ್ಪಸ್ವಲ್ಪವಾಗಿ, ಸಂಜೆ ಹೊತ್ತಿಗೆ ಪೂರ್ತಿ ತೆಗೆದುಕೊಳ್ಳುತ್ತೆ. ಸ್ವರ್ಣಾಂಬನ ಮುಖ ಕಾಣಿಸುತ್ತೆ. ಆದರೆ ಅವಳು ಮನೆಯಿಂದ ಹೊರಗೆ ಬರುವುದಿರಲಿ, ಜಗುಲಿ ಮೇಲೆ ಕೂಡ ಸರಿಯಾಗಿ ಕಾಣಿಸಿಕೊಳ್ಳುವುದಿಲ್ಲ. ಬೆರಣಿಗಳಿಗೆ, ಗೋಡೆಗಳಿಗೆ, ಗೋಣಿಚೀಲಗಳಿಗೆ, ದಾರ, ದಬ್ಬಳಗಳಿಗೆ ಎಲದಕ್ಕೂ ಅಘೋಷಿತ ರಜ.

       ಭಾನುವಾರ ಎಷ್ಟು ಹೊತ್ತು ಅಂತ ಇರೋಕೆ ಸಾಧ್ಯ? ಮುಗಿದೇ ಹೋಗುತ್ತೆ. ಸೋಮವಾರ ಬೆಳಿಗ್ಗೆ ಎಲ್ಲವೂ ಮಾಮೂಲು. ಬೆಳಿಗ್ಗೆಬೆಳಿಗ್ಗೇನೇ ಎದ್ದು ಸ್ವರ್ಣಾಂಬ ಕೆದರಿದ ತಲೆಕೂದಲು, ಎತ್ತಿಕಟ್ಟಿದ ಸೀರೆಯಲ್ಲಿ ಬೆರಣಿ ತಟ್ಟಲು ಪ್ರಾರಂಭಿಸುತ್ತಾಳೆ. ಹತ್ತುಹನ್ನೊಂದರ ಹೊತ್ತಿಗೆ ಬೆರಣಿ ಕೊಳ್ಳುವವರು, ಕಾಲೋನಿ, ಪೇಟೆಬೀದಿಯೆಂದಲ್ಲ ಬಂದೇಬಿಡ್ತಾರೆ.

       ಮತ್ತೆ ಮನೆ ಗರಿಗೆದರುವುದು, ಸಂಭ್ರಮಕ್ಕೆ, ಪ್ರತೀಕ್ಷೆಗೆ ಹೊರಳಿಕೊಳ್ಳುವುದು ಶುಕ್ರವಾರ-ಶನಿವಾರ ಹತ್ತಿರ ಬಂದಾಗಲೇ. ಇಂತಹ ಶುಕ್ರವಾರ-ಶನಿವಾರಗಳು ನೂರಾರು, ಸಾವಿರಾರು ಬಂದುಹೋಗಿವೆಯಂತೆ. ಶಿವಬಸಪ್ಪ ಬರಲೇ ಇಲ್ಲವಂತೆ.

       ಇದೆಲ್ಲ ಹಿಂದಿನ ತಲೆಮಾರಿನ ಕತೆಯಾಗಿ ನಮಗೆ ತಿಳಿಯುವ ಹೊತ್ತಿಗೆ ಸಂಗನಬಸಪ್ಪ- ಪಾರ್ವತಮ್ಮ ಇಬ್ಬರೂ ತೀರಿಹೋಗಿದ್ದರು. ಊರಿನಲ್ಲೆಲ್ಲ ಪಾಪಚ್ಚಿ ಶನಿವಾರದ ಸ್ವರ್ಣಾಂಬ ಎಂದೇ ಪ್ರತೀತಿಯಾಗಿದ್ದಳು. ನಾವು ಸ್ಕೂಲು ಹುಡುಗರು ಅವಳ ಮನೆ ಎದುರು ಹಾದುಹೋಗಬೇಕಾದರೆ, ಇಲ್ಲ ಹೋದರೆ, ಅವಳು ಅಂಗಡಿಬೀದಿಯ ಹತ್ತಿರ ಸಿಕ್ಕಿದರೆ, ಸ್ವರ್ಣಾಂಬ, ಸ್ವರ್ಣಾಂಬ, ಶನಿವಾರದ ಸ್ವರ್ಣಾಂಬ, ಶನಿವಾರದ ಸ್ವರ್ಣಾಂಬ, ಬಂದನೇನಮ್ಮ ಬಸಪ್ಪ, ಬಂದನೇನಮ್ಮ ಸರದಾರ ಅಂತ ರಾಗಮಯವಾಗಿ ಕಿರುಚಿ, ಕಿಚಾಯಿಸಿ, ಓಡಿಹೋಗುತ್ತಿದ್ದೆವು. ನಮ್ಮ ಕಿಚಾಯಿಸುವಿಕೆ ಕೂಡ ದಣಿಯಿತು. ಕ್ರಮೇಣ ನಿಂತುಹೋಯಿತು.

       ಆದರೆ ಹಾಳು ಶನಿವಾರ ಬಂದೇಬರುತ್ತದಲ್ಲ. ಬಂದರೆ ಬರಲಿ, ಈಗೇನು ಸ್ವರ್ಣಾಂಬ ಕ್ಯಾರೇ ಅನ್ನುವುದಿಲ್ಲ. ಸ್ನಾನಮಾಡಿ, ಕೆನ್ನೆಗೆ ಅರಿಷಿಣ ಬಳಕೊಂಡು, ನೀಟಾಗಿ ಜಡೆ ಹೆಣೆದುಕೊಳ್ಳುವುದಿಲ್ಲ. ಬೆರಣಿ ತಟ್ಟುವುದನ್ನು ನಿಲ್ಲಿಸುವುದೂ ಇಲ್ಲ. ಬಂದರೆ ಬರಲಿ, ಶನಿವಾರ ಬರುತ್ತೆ, ಬರುತ್ತೆ, ಹೋಗುತ್ತೆ ಅಂತಾ.

ಕೆ. ಸತ್ಯನಾರಾಯಣ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಕಥಾಕ್ಷಿತಿಜ/ ಶನಿವಾರದ ಸ್ವರ್ಣಾಂಬ- ಕೆ. ಸತ್ಯನಾರಾಯಣ

  • July 11, 2021 at 4:31 pm
    Permalink

    ಮನಮುಟ್ಟುವ ಕತೆ

    Reply

Leave a Reply

Your email address will not be published. Required fields are marked *