ಕಥಾಕ್ಷಿತಿಜ/ ನೀ ನಡೆವ ಹಾದಿಯಲ್ಲಿ… – ಟಿ.ಎಸ್. ಶ್ರವಣ ಕುಮಾರಿ
ಅವನು ಅವಳವನಾಗದ ಮೇಲೆ ಅವನಿಗೆ ಸೇರಿದ ಬೇರೆಯವೆಲ್ಲ ಅವಳದು ಹೇಗಾದೀತು? ಅವಳದಲ್ಲದ ಮಕ್ಕಳೇ ಅವಳಿಗೆ ಕೊಟ್ಟ ಜೀವನದ ಪಾಠಗಳನ್ನು ಅವಳು ಗಟ್ಟಿಯಾಗಿ ನಂಬಿದಳು.
ಪ್ರಶಾಂತ ದೇವಸ್ಥಾನದ ಹೊರಭಾಗದಲ್ಲಿದ್ದ ಪಾರ್ಕಿನ ಕಟ್ಟೆಯ ಮೇಲೆ ಕಾಯುತ್ತಾ ಕುಳಿತಿದ್ದ. ʻಶಾರಿ ಆರೂವರೆಗೆ ಬರುತ್ತೇನೆಂದಿದ್ದಾಳೆ, `ಇನ್ನೂ ಸಾಕಷ್ಟು ಸಮಯವಿದೆʼ ಎಂದುಕೊಳ್ಳುತ್ತಾ ಇನ್ನೊಮ್ಮೆ ವಾಚನ್ನು ನೋಡಿಕೊಂಡ. ಆದರೆ ಅವಳೊಂದಿಗೆ ಹೇಗೆ ಮಾತನ್ನು ಶುರು ಮಾಡಬೇಕೆನ್ನುವುದರ ಬಗ್ಗೆ ಅವನಲ್ಲೇ ಸಾಕಷ್ಟು ಗೊಂದಲವಿತ್ತು. ಏನು ಹೇಳಿದರೆ ಹೇಗೆ ಪ್ರತಿಕ್ರಿಯೆ ನೀಡುತ್ತಾಳೋ ಎಂದುಕೊಂಡರೂ, ʻಮೊದಲಿನಿಂದಲೂ ನನ್ನ ಮೇಲೆ ಆಸೆ ಇಟ್ಟುಕೊಂಡಿದ್ದವಳು. ನನ್ನ ನೆನಪಲ್ಲೇ ಇದುವರೆಗೂ ಮದುವೆಯಾಗದೆ ಹಾಗೇ ಉಳಿದಿದ್ದಾಳೆ ಅಂದಳಲ್ಲ ಅಮ್ಮ. ಈಗ ನಾನಾಗೇ ಕೇಳುವಾಗ ಇಲ್ಲವೆನ್ನಲಾರಳೇನೋ…ʼ ಎನ್ನಿಸಿದರೂ ಒಂದು ರೀತಿಯ ಹಿಂಜರಿಕೆ ಜೊತೆಜೊತೆಗೆ ತಪ್ಪಿತಸ್ಥ ಭಾವವೂ ಅವನನ್ನು ಕಾಡಿತು. ಅವತ್ತು… ಆಗಲೇ ಆರುವರ್ಷಗಳಾಯಿತಲ್ಲವೇ… ನಿರ್ದಾಕ್ಷಿಣ್ಯವಾಗಿ ಅವಳನ್ನು ತಿರಸ್ಕರಿಸಿ ಬಂದು……ಅಂದು ಇದ್ದ ಆತ್ಮವಿಶ್ವಾಸ ಇಂದು ಕುಸಿಯುತ್ತಿದೆ.
ಶಾರಿ ಹುಟ್ಟಿದಾಗಲೇ ಭಾವಮೈದ ವೆಂಕೋಬರಾಯನ ಹತ್ತಿರ ಪ್ರಶಾಂತನ ಅಪ್ಪ ಸುಬ್ಬಣ್ಣನವರು “ಎಷ್ಟು ಮುದ್ದಾಗಿದಾಳಲ್ಲೋ ಇವ್ಳು. ಇವ್ಳೇ ನನ್ನ ಮನೆ ಸೊಸೆ ಕಣಪ್ಪ. ನಮ್ಮ ಪ್ರಶಾಂತನ ಹೆಂಡತಿಯಾಗಿ ಬರ್ಬೇ…ಕು. ನೋಡು ಈಗಲೇ ಇವಳ ಕಾಲಿಗೆ ಗೆಜ್ಜೆ ಹಾಕಿ ಕಟ್ಟಿಹಾಕಿ ಬಿಟ್ಟಿದೀನಿ, ಇನ್ಯಾರ ಮನೆಗೂ ನೀನು ಅವಳನ್ನ ಕೊಡೋಹಾಗಿಲ್ಲ” ಎಂದು ಎರಡುವರ್ಷದ ತಮ್ಮ ಮಗನಿಗೆ ಗೊತ್ತುಮಾಡಿಕೊಂಡಿದ್ದರಂತೆ! ಚಿಕ್ಕಂದಿನಿಂದಲೂ ಎಲ್ಲರೂ ಅವಳನ್ನು ತನ್ನ ಹೆಂಡತಿ ಅಂತ ರೇಗಿಸ್ತಿದ್ರೆ ಪ್ರಶಾಂತನಿಗೂ ಬೇಜಾರೇನೂ ಆಗ್ತಿರಲಿಲ್ಲ. ನೋಡಕ್ಕೆ ತುಂಬಾ ಲಕ್ಷಣವಾಗಿದ್ದಳು. ಒಳ್ಳೆಯಬಣ್ಣ, ನಿಲುವು, ಉದ್ದನೆಯ ಭಾವವಾದ ಕೂದಲು…ಧಾರಾಳವಾಗಿ ಸುಂದರಿಯರ ಸಾಲಿಗೆ ಸೇರಿಹೋಗಿದ್ದಳು. ಆದರೆ ಅದೇಕೋ ಹೆಸರು ಶಾರದೆಯಾದರೂ ಓದಿನಲ್ಲಿ ಹಿಂದೆಬಿದ್ದಳು. ಎಸ್ಸೆಸ್ಸೆಲ್ಸಿ ಮಾಡಿದ್ದೇ ಒಂದು ದೊಡ್ಡವಿಷಯ ಅನ್ನೋ ಹಾಗೆ, ಪಿಯುಸಿಗೆ ಹೋದವಳು ಮುಂದೆ ಓದಲ್ಲ ಎಂದು ತೀರ್ಮಾಂನ ಮಾಡಿಕೊಂಡು ಮನೆಯಲ್ಲೇ ಕುಳಿತುಬಿಟ್ಟಳು. ಅಪ್ಪ ಅಮ್ಮನ ಯಾವ ಜುಲುಮೆಗೂ ಅವಳು ಕಾಲೇಜಿಗೆ ಹೋಗಲು ಸಿದ್ಧಳಾಗಲೇ ಇಲ್ಲ. ಚೆನ್ನಾಗಿ ಅಲಂಕಾರಮಾಡಿಕೊಂಡು, ಟೀವಿ ನೋಡಿಕೊಂಡು, ಅಡುಗೆ ಕೆಲಸ ಮಾಡಿಕೊಂಡು, ಮಾಲ್, ಸಿನಿಮಾ ಎಂದುಕೊಂಡು ಅಲ್ಲಲ್ಲಿ ತಿರುಗುತ್ತಾ ಹಾಯಾಗಿದ್ದು ಬಿಟ್ಟಳು. ʻಹೇಗೂ ಪ್ರಶಾಂತನ ಓದು ಮುಗಿದು ಕೆಲಸ ಸಿಕ್ಕಮೇಲೆ ಮದುವೆ ಮಾಡ್ಕೊಂಡು ಹೋಗೋದು, ಸುಮ್ನೆ ಯಾಕೆ ತಲೆ ಚಚ್ಕೋಬೇಕು, ಓದು ನಂಗೆ ಹೇಳ್ಸಿದ್ದಲ್ಲʼ ಅನ್ನೋ ಥರಾ ನಿರಾಳವಾಗಿದ್ದು ಬಿಟ್ಟಳು. ಅಷ್ಟರ ಮಟ್ಟಿಗೆ ಪ್ರಶಾಂತನೇ ತನ್ನ ಗಂಡನೆಂದು ತನಗೆ ತಾನೇ ಮನದಟ್ಟು ಮಾಡಿಕೊಂಡುಬಿಟ್ಟಿದ್ದಳು.
ಇಂಜಿನಿಯರಿಂಗ್ ಮುಗಿಯುವ ತನಕವೂ ಪ್ರಶಾಂತನೂ ಅವಳ ಬಗ್ಗೆ ಅದೇ ಭಾವನೆಯಲ್ಲೇ ಇದ್ದ. ಸಲುಗೆಯಿಂದ ಅವಳ ಜೊತೆ ಓಡಾಡಿಕೊಂಡು, ಸಿನಿಮಾ ಹೊಟೆಲ್ಲು ಎಂದು ತಿರುಗುತ್ತಿದ್ದದ್ದೂ ಇತ್ತು. ಬಿ.ಇ.ನಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಕ್ಯಾಂಪಸ್ ಇಂಟರ್ವ್ಯೂನಲ್ಲಿ ಕೆಲಸ ಸಿಕ್ಕರೂ, ಮುಂದೆ ಓದುವ ಆಸೆಯಿಂದ ಎಂಎಸ್ ಮಾಡಲು ಅಮೇರಿಕಾಗೆ ಹೋದಮೇಲೆ ಅವನ ಧೋರಣೆಗಳೇ ಬದಲಾದವು. ಅಲ್ಲಿ ಗೆಳೆಯರೊಂದಿಗಿದ್ದ ಅದೇ ಮನೆಯಲ್ಲಿ, ಅದೇ ಕ್ಯಾಂಪಸ್ಸಿನಲ್ಲಿ, ಜೊತೆಯಲ್ಲೇ ಓದುತ್ತಿದ್ದ ಸ್ನೇಹಾ ಅವನಿಗೆ ಸನಿಹಳಾಗತೊಡಗಿದಳು. ಹೇಳಿದ್ದಕ್ಕೆಲ್ಲಾ ಬಸವನ ಹಾಗೆ ತಲೆದೂಗುತ್ತಾ ಒಪ್ಪಿಕೊಂಡುಬಿಡುವ ಶಾರಿಗಿಂತ ಅವನ ವಾದಕ್ಕೆ ಪ್ರತಿವಾದ ಹೂಡುತ್ತಿದ್ದ, ಚರ್ಚಿಸುತ್ತಿದ್ದ ಸ್ನೇಹಳ ಧೋರಣೆ ಇಷ್ಟವಾಗತೊಡಗಿತು. ಬರೀ ಪಿಯುಸಿ ಓದಿರುವ ಶಾರಿ ಶುದ್ಧ ಪೆದ್ದುವಾಗಿ ಕಾಣತೊಡಗಿ, ಅವಳು ಎಂದೂ ಬೌದ್ಧಿಕವಾಗಿ ತನ್ನ ಸಹಚರಿಯಾಗಲಾರಳೇನೋ ಅನ್ನಿಸಿಬಿಟ್ಟಿತು. ಅಂತವಳೊಂದಿಗೆ ಇಡೀ ಜೀವನವನ್ನು ಕಲ್ಪಿಸಿಕೊಳ್ಳಲೂ ಅವನಿಗೀಗ ಭಯವಾಗತೊಡಗಿತು. ಬರೀ ರೂಪೊಂದಿದ್ದರೆ ಸಾಕೆ? ಪರಸ್ಪರ ಹೊಂದಾಣಿಕೆಯಿಲ್ಲದೆ ಇಡೀ ಜೀವನ ಕಳೆಯುವುದು ಸಾಧ್ಯವೇ ಇಲ್ಲ ಎಂದು ತೀರ್ಮಾರನಿಸಿಬಿಟ್ಟ. ನೋಡಲು ಅಂತಹ ಸುಂದರಿಯಲ್ಲದಿದ್ದರೂ ಸ್ನೇಹಳ ಒಡನಾಟ ಹಿತವಾಗತೊಡಗಿತ್ತು. ಅವಳಿಗೂ ಪ್ರಶಾಂತ ಒಳ್ಳೆಯ ಆಯ್ಕೆಯೆಂದೇ ಅನ್ನಿಸಿತ್ತು. ಓದು ಮುಗಿಯುವಷ್ಟರಲ್ಲಿ ಅವರಿಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದಾಗಿತ್ತು. ಅಲ್ಲೇ ಒಂದು ಒಳ್ಳೆಯ ಕಂಪನಿಯಲ್ಲಿ ಇಬ್ಬರಿಗೂ ಕೆಲಸವೂ ಸಿಕ್ಕಿತ್ತು.
ಆ ನಂತರದಲ್ಲಿ ಅವನು ಊರಿಗೆ ಮರಳಿದಾಗ ಅಪ್ಪಅಮ್ಮಂದಿರೊಂದಿಗೆ ತನ್ನ ನಿಶ್ಚಯವನ್ನು ಸ್ಪಷ್ಟವಾಗಿ ಹೇಳಿದ್ದ. ಸುಬ್ಬಣ್ಣ ಮತ್ತು ವಿಮಲಮ್ಮನವರಿಗೆ ಇದನ್ನು ಕೇಳಿ ಆಘಾತವೇ ಆಯಿತು. ಈ ನಿರ್ಧಾರವನ್ನು ಕೈಬಿಡಲು ಪರಿಪರಿಯಾಗಿ ಕೇಳಿಕೊಂಡರು. ʻಕೊಟ್ಟ ಮಾತಿಗೆ ತಪ್ಪಲು ಸಾಧ್ಯವಿಲ್ಲ, ಶಾರದಾ ತಮ್ಮ ಮನೆಯ ಸೊಸೆಯೆಂದು ಎಂದೋ ನಿರ್ಧರಿಸಿಯಾಗಿದೆ. ಜೊತೆಗೆ ಅವಳೂ ಅವನನ್ನು ತುಂಬಾ ಹಚ್ಚಿಕೊಂಡಿರುವುದರಿಂದ ಅವಳನ್ನಾಗಲೀ, ಅವಳಪ್ಪ ಅಮ್ಮನನ್ನಾಗಲೀ ನೋಯಿಸುವುದು ತಮಗಿಷ್ಟವಿಲ್ಲ. ಈ ನಿರ್ಧಾರವನ್ನುವೆಂಕೋಬರಾಯನೊಂದಿಗೆ ಹೇಗೆ ಹೇಳಲು ಸಾಧ್ಯ? ಅಷ್ಟು ಚೆನ್ನಾಗಿರುವ ತಮ್ಮ ಸಂಬಂಧ ಈ ಮಾತಿನಿಂದ ಕೆಡುತ್ತದೆʼಎಂದು ಬಹಳಷ್ಟು ನೊಂದುಕೊಂಡರು. ಆದರೇನು? ಪ್ರಶಾಂತನ ನಿಲುವು ಬದಲಾಗಲಿಲ್ಲ. “ನೀವು ಮಾತುಕೊಡುವಾಗ ನನ್ಕೇಳಿ ಕೊಟ್ಟಿದ್ರಾ. ಅಷ್ಟು ಚಿಕ್ಕವಯಸ್ನಲ್ಲೇ ನನ್ನ ಮದ್ವೆ ಬಗ್ಗೆ ಹೇಗೆ ನಿರ್ಧಾರಮಾಡಿದ್ರಿ. ಇದೇನು ನಿಮ್ಮ ಕಾಲ ಕೆಟ್ಟೋಯ್ತಾ, ಅಪ್ಪಅಮ್ಮ ತೋರಿಸ್ದವ್ರನ್ನೇ ಮದ್ವೆಮಾಡ್ಕೊಳಕ್ಕೆ. ನಾಳೆ ಮದ್ವೆ ಮಾಡ್ಕೊಂಡು ಬಾಳುವೆ ಮಾಡ್ಬೇಕಿರೋದು ನಾನು. ನನ್ನದೇ ಸ್ಟೇಟಸ್ ಇರೋನಾಕ್ ಜನದ್ ಜೊತೆ ಬೆರೀಬೇಕಾಗತ್ತೆ. ಇಂಗ್ಲಿಷ್ನಲ್ಲಿ ಮಾತಾಡಕ್ಕೆ ಗೊತ್ತಿರ್ಬೇಕಕು. ಪ್ರಪಂಚಜ್ಞಾನ ಚೆನ್ನಾಗಿರ್ಬೇ ಕು. ನೋಡಕ್ಕೆ ಚೆನ್ನಾಗಿದಾಳೇಂತ ಏನೂ ಗೊತ್ತಿಲ್ದಿರೋ ಮುಷಂಡೀನ ಕಟ್ಕೊಳಕ್ಕಾಗತ್ತಾ? ಸಾಧ್ಯವೇ ಇಲ್ಲ” ಎಂದು ಖಂಡತುಂಡವಾಗಿ ಹೇಳಿಯೇಬಿಟ್ಟ. “ವೆಂಕೋಬ ಅಷ್ಟೊಂದು ನೆಚ್ಕೊಂಡಿದಾನೆ. ಮದ್ವೇಗೆ ಅಂತ ಎಲ್ಲಾ ಏರ್ಪಾಡನ್ನೂ ಮಾಡ್ಕೊಂಡಿದಾನೆ. ಅಂತಾದ್ರಲ್ಲಿ ಈಗ ಹೇಗೆ ಹೇಳಕ್ಕಾಗತ್ತೋ?” ಎನ್ನುತ್ತಾ ವಿಮಲಮ್ಮ ಅತ್ತಾಗ “ನೀವಿಬ್ರೂ ಹೇಳ್ಬೇಡಿ, ನಾನೇ ಹೇಳ್ತೀನಿ, ನನಗಡ್ಡ ಬರ್ಬೇೇಡಿ” ಎಂದಿದ್ದ.
ತಾನೊಬ್ಬನೇ ವೆಂಕೋಬರಾಯರ ಮನೆಗೆ ಹೋದಾಗ ಭಾವಿ ಅಳಿಯ ಬಂದ ಸಂಭ್ರಮದಿಂದ ಅವರೂ ಬೀಗುತ್ತಾ “ಅಪ್ಪ, ಅಮ್ಮ ಬರ್ಲಿೆಲ್ವೇನಯ್ಯಾ. ಒಬ್ನೇ ಬಂದ್ಯಲ್ಲಾ, ಬಾಬಾ” ಎನ್ನುತ್ತಾ ಸ್ವಾಗತಿಸಿದರು. ಕಾಫಿ, ಕುರುಕಲನ್ನು ತೆಗೆದುಕೊಂಡುಬಂದ ಲಲಿತಮ್ಮ ಮತ್ತು ಶಾರದೆಯರೂ ಮಾತಿಗೆ ಸೇರಿಕೊಂಡರು. ಅವನ ಓದು ಮುಗಿದು ಕೆಲಸ ಸಿಕ್ಕಿದ್ದಕ್ಕೆ ಸಂಭ್ರಮಿಸಿದರು. “ಮದ್ವೆಯಾವಾಗಿಟ್ಕೊಳೋಣಪ್ಪಾ, ಇನ್ನೇನು ಓದು ಕೆಲ್ಸ ಎಲ್ಲಾ ಆಯ್ತಲ್ಲ. ನಾವಂತೂ ತಯಾರಾಗಿ ಕೂತಿದೀವಿ. ಸುಬ್ಬಣ್ಣ ವಿಮಲಾನೂ ಬಂದಿದ್ರೆ ಆ ವಿಷ್ಯ ಮಾತಾಡಿ ಮುಂದುವರಿಸ್ಬೋದಿತ್ತು” ಎಂದರು ವೆಂಕೋಬರಾಯರು ನಗುತ್ತಾ. ಶಾರದೆಯೂ ನಿರೀಕ್ಷೆಯಿಂದ ಅವನ ಮುಖವನ್ನೇ ನೋಡತೊಡಗಿದಳು. “ಅದೇ ವಿಷಯ ಹೇಳಕ್ಕೇ ನಾನು ಬಂದಿದ್ದು ಮಾವ” ಎನ್ನುತ್ತಾ ಪ್ರಶಾಂತ ಪೀಠಿಕೆ ಹಾಕಿ ಈಗ ತಾನು ಈ ಮದುವೆಗೆ ಸಿದ್ಧನಿಲ್ಲವೆಂದೂ, ಶಾರದಾ ತನ್ನ ಹೆಂಡತಿಯಾಗಲು ಸಾಧ್ಯವೇ ಇಲ್ಲವೆಂದೂ, ತಾನಾಗಲೇ ತನ್ನಷ್ಟೇ ಓದಿರುವ, ತನ್ನೊಂದಿಗೆ ಕೆಲಸದಲ್ಲಿರುವ ಹುಡುಗಿಯನ್ನು ಮದುವೆಯಾಗಲು ನಿಶ್ಚಯಿಸಿರುವುದನ್ನೂ ಯಾವುದೇ ಹಿಂಜರಿಕೆಯಿಲ್ಲದೆ ಸ್ಪಷ್ಟವಾಗಿ ಹೇಳಿದ. ಕೇಳುತ್ತಿದ್ದವರ ಮುಖವೆಲ್ಲಾ ಬಣ್ಣಗೆಟ್ಟು ಕಪ್ಪಾಗಿಹೋಯಿತು.
“ಇದೇನಪ್ಪ ಈಗ ಹೀಗಂತೀಯಾ? ಅಷ್ಟೊಂದು ಸಲಿಗೆಯಿಂದ ಅವಳ್ಜೊತೆ ಓಡಾಡ್ಕೊಂಡಿದ್ದೆ. ನಾವು ನಿನ್ನನ್ನ ಎಷ್ಟೊಂದು ನೆಚ್ಕೊಂಡ್ಬಿಟ್ಟಿದ್ವಲ್ಲೋ. ಶಾರದಾ ಅಂತೂ ನಿನ್ನೇ ಗಂಡಾಂತ ಅಂದ್ಕೊಂಡ್ಬಿಟ್ಟಿದಾಳೆ. ನೀನು ಹೀಗೆ ಮಾಡೋದು ಸರೀನಾ?” ಆರ್ತತೆಯಿಂದ ಕೇಳಿದರು ವೆಂಕೋಬರಾಯರು. “ಮಾವಾ ಓಡಾಡ್ತಿದ್ದಿದ್ದು ನಿಜ. ಆದ್ರೆ ನಾನು ಯಾವತ್ತೂ ಅವಳ ಮರ್ಯಾ”ದೆಗೆ ಭಂಗ ಬರುವಂತದೇನನ್ನೂ ಮಾಡಿಲ್ಲ. ಬೇಕಾದ್ರೆ ಅವಳ್ನೇ ಕೇಳಿನೋಡಿ. ನೀವೂ ನನ್ನ ಪರಿಸ್ಥಿತೀನ ಅರ್ಥಮಾಡ್ಕೊಳಿ ಮಾವ, ಇಷ್ಟೊಂದು ಓದಿರೋ ನಾನೂ ಒಂದು ಡಿಗ್ರೀನೂ ಪಾಸ್ ಮಾಡಿಲ್ದಿರೋ ಶಾರದನ ಜೊತೆ ಸಂಸಾರ ಮಾಡಕ್ಕಾಗತ್ತಾ?” ಎಂದು ವಾದಕ್ಕಿಳಿದ. ಈ ಸನ್ನಿವೇಶವನ್ನು ಎದುರಿಸಲು ಸಾಧ್ಯವಾಗದೆ ಶಾರದೆ ಏನೂ ಮಾತನಾಡದೆ ಎದ್ದು ರೂಮಿಗೆ ನಡೆದಳು. ಲಲಿತಮ್ಮನ ಕಣ್ಣುಗಳಲ್ಲಿ ದಳದಳ ನೀರು ಸುರಿಯತೊಡಗಿತು. “ನೋಡಪ್ಪಾ ನಾನು ಆ ಕಾಲಕ್ಕೆ ಇಂಜಿನಿಯರ್ರು, ನಿಮ್ಮತ್ತೆ ನಾಕ್ನೇ ಕ್ಲಾಸೂ ಮುಗ್ಸಿರ್ಲಿನಲ್ಲ; ಇನ್ನು ನಿಮ್ಮಪ್ಪ ಪಿಹೆಚ್ ಡಿ ಮಾಡ್ದೋನು, ನಿಮ್ಮಮ್ನೂ ಅಷ್ಟೇ ಮಿಡ್ಲ್ ಸ್ಕೂಲಿಗೆ ಹೋಗಿದ್ಲೇನೋ ಅಷ್ಟೇ. ನಾವು ಸಂಸಾರಮಾಡಿಲ್ವೇ” ಎಂದರು ಹತಾಶರಾಗಿ ವೆಂಕೋಬರಾಯರು. “ನಿಮ್ಕಾಲಾನೇ ಬೇರೆ, ಈ ಕಾಲಾನೇ ಬೇರೆ ಮಾವ. ಈಗ ಎಲ್ರೂ ದಾಂಪತ್ಯದಲ್ಲಿ ಬೌದ್ಧಿಕ ಸಾಹಚರ್ಯ ಮುಖ್ಯ ಅಂತ ತಿಳ್ಕೊಂಡಿರೋ ಕಾಲ ಇದು. ಇಲ್ದಿದ್ರೆ ನಮ್ಮ ಮಧ್ಯೆ ಕಂಪಾಟಿಬಿಲಿಟಿ ಇರಲ್ಲ. ಇಲ್ಲ ಮಾವ, ನನ್ನಿಂದ ಸಾಧ್ಯ ಇಲ್ಲ. ನಿಮ್ಗೆ ಬೇಜಾರಾಗಿದ್ರೆ ಕ್ಷಮಿಸಿ. ಶಾರದಂಗೆ ಬೇರೆ ಗಂಡು ನೋಡಿ ಮದ್ವೆ ಮಾಡಿ. ಐ ವಿಷ್ ಹರ್ ಅ ವೆರಿ ಹ್ಯಾಪಿ ಮ್ಯಾರೀಡ್ ಲೈಫ್. ಅವಳ್ನ ಮದ್ವೆಯಾಗಿ ಜೀವ್ಮಾನವೆಲ್ಲಾ ಒದ್ದಾಡಕ್ಕೆ ನನ್ನಿಂದ ಸಾಧ್ಯ ಇಲ್ಲ” ಎನ್ನುತ್ತಾ ಮಾತು ಮುಗಿಸುವವನಂತೆ ಮೇಲೆದ್ದ. ಮಾತೂ ಮರೆತವರಂತೆ ಇಬ್ಬರೂ ಅವನನ್ನೇ ನೋಡುತ್ತಿದ್ದರು.
ವರಾಂಡಾದಲ್ಲಿದ್ದ ಕುರ್ಚಿಯ ಮೇಲೆ ಕುಳಿತು ಶೂ ಹಾಕಿಕೊಳ್ಳುವಾಗ ಪಕ್ಕದ ಕೋಣೆಯಲ್ಲೇ ಇದ್ದ ಶಾರದಳಿಗೂ ಒಂದು ಮಾತು ಹೇಳಿ ಹೋಗೋಣವೆನ್ನಿಸಿ ಮುಂದೆ ಹಾಕಿದ್ದ ಬಾಗಿಲನ್ನು ತಳ್ಳುತ್ತಾ ಒಳಗೆ ಹೋದ. ಮೇಜಿನ ಮೇಲೆ ತಲೆಯಿಟ್ಟು ಬಿಕ್ಕಿಬಿಕ್ಕಿ ಅಳುತ್ತಿದ್ದಳು ಶಾರದೆ. ಒಂದು ಕ್ಷಣ ಅಯ್ಯೋ ಎನ್ನಿಸಿ ಬಳಿಗೆ ಹೋಗಿ ತಬ್ಬಿಕೊಂಡು ಸಂತೈಸಲೇ ಅನ್ನಿಸಿತು. ತಕ್ಷಣವೇ ಮನಸ್ಸನ್ನು ಗಟ್ಟಿ ಮಾಡಿಕೊಂಡು ಪಕ್ಕದಲ್ಲೇ ನಿಂತು “ಕ್ಷಮಿಸಿಬಿಡು ಶಾರದಾ. ನಿನಗೆ ಬೇರೊಬ್ಬ ಒಳ್ಳೆಯ ಹುಡುಗ ಸಿಗಲಿ ಅಂತ ಮನಸಾರೆ ಹಾರೈಸ್ತೀನಿ. ನಾನೂ ನನ್ನ ಸ್ನೇಹಿತರಲ್ಲಿ ನಿನಗೆ ಹೊಂದುವಂತವ್ರು ಸಿಕ್ತಾರಾ ಅಂತ ಖಂಡಿತವಾಗಿ ಪ್ರಯತ್ನಪಡ್ತೀನಿ. ಮುಂದಿನ್ಸಲ ಬರುವಾಗ ನಿನ್ನನ್ನ ಜೋಡಿಯಾಗಿ ನೋಡ್ಬೇಕು ಅನ್ನೋದೇ ನನ್ನಾಸೆ. ಬಿಬ್ರೇವ್, ಹೀಗಳ್ಬೇಡ. ನನ್ನ ಕಟ್ಕೊಂಡ್ರೆ ನಿಂಗೂ ಸುಖವಿರಲ್ಲ. ಮುಂದೊಂದಿನ ನೀನೇ ನನ್ನ ನಿರ್ಧಾರ ಸರಿಯಾಗಿತ್ತು ಅಂದ್ಕೋತೀಯ” ಎನ್ನುತ್ತಾ ಸಮಾಧಾನ ಪಡಿಸುವಂತೆ ಅವಳ ಭುಜ ಮುಟ್ಟಿದ.
ತಕ್ಷಣವೇ ಅವನ ಕೈಯನ್ನು ಕಿತ್ತೆಸೆದು “ದಯವಿಟ್ಟು ನನ್ನ ಪಾಡಿಗೆ ನನ್ನ ಬಿಟ್ಟು ಹೊರಟುಬಿಡು ಪ್ರಶಾಂತ. ನಿನ್ನವರ್ತನೆಗೆ ಯಾವುದೇ ಸಮಝಾಯಿಷಿ ಕೊಡ್ಬೇಡ. ನೀನು ಬುದ್ಧಿಯಿಂದ ಯೋಚ್ನೆ ಮಾಡ್ತಿದೀಯ; ನಾನು ಹೃದಯದಿಂದ ಯೋಚಿಸ್ತೀನಿ. ನಿನ್ನಿಂದ ನಂಗ್ಯಾವ ಸಲಹೇನೂ ಬೇಕಿಲ್ಲ. ನಾನೇನ್ಮಾಡ್ಬೇಕು ಅನ್ನೋ ನಿರ್ಧಾರ ನಂಗೆ, ನಮ್ಮಪ್ಪ ಅಮ್ಮಂಗೆ ಸೇರಿದ್ದು. ನೀನು ಅದ್ರಲ್ಲಿ ತಲೆಹಾಕ್ಬೇಡ ಪ್ಲೀಸ್. ಹೇಳ್ಬೇಕಾದ್ದೆಲ್ಲಾ ಹೇಳಿದ್ದಾಯ್ತಲ್ಲ ಹೊರಡಿನ್ನು” ಎನ್ನುತ್ತಾ ಕೈಮುಗಿದು ಬಾಗಿಲ ಕಡೆಗೆ ಕೈತೋರಿದಳು. ಮಾತಿಲ್ಲದೆ ಪ್ರಶಾಂತ ಹೊರನಡೆದ……
ಪ್ರಶಾಂತನಿಗೆ ಯಾವ ತಪ್ಪೂ ಕಾಣದಿದ್ದರೂ, ಸುಬ್ಬಣ್ಣ ಮತ್ತು ವಿಮಲಮ್ಮನವರಿಗೆ, ವೆಂಕೋಬರಾಯರು-ಲಲಿತಮ್ಮನವರಿರಲಿ, ಬೇರೆ ಬಂಧುಬಾಂಧವರನ್ನು ಎದುರಿಸಲೂ ಕಷ್ಟವೆನಿಸಿತ್ತು. ಹಾಗಾಗಿ ಮಗನ ಮದುವೆಯನ್ನು ತಿರುಪತಿಯಲ್ಲಿ ಮುಗಿಸಿ, ಹರಸಿ ಬೀಳ್ಕೊಟ್ಟಿದ್ದರು. ನಿಧಾನವಾಗಿ ಮಗನ ಬಗ್ಗೆ ಇದ್ದ ಕಹಿ ಕಡಿಮೆಯಾದರೂ, ತಪ್ಪಿತಸ್ಥ ಭಾವನೆಯಂತೂ ದೂರವಾಗಲೇ ಇಲ್ಲ. ಹೋಗಿ ಅಣ್ಣಅತ್ತಿಗೆಯನ್ನು ಮಾತನಾಡಿಸುವ ಧೈರ್ಯವೂ ಬರಲಿಲ್ಲ. ಪ್ರತಿವರ್ಷದಂತೆ ಆ ವರ್ಷವೂ ಗೌರಿಹಬ್ಬಕ್ಕೆ ಅರಿಷಿನ ಕುಂಕುಮ ಕೊಡಲೆಂದು ವೆಂಕೋಬರಾಯರು, ಲಲಿತಮ್ಮನೇ ಬಂದಾಗ ಅವರನ್ನು ತಬ್ಬಿಕೊಂಡು ಅತ್ತುಬಿಟ್ಟರು ವಿಮಲಮ್ಮ. “ಇರಲಿ ಬಿಡಮ್ಮ, ನಮಗೇ ಋಣವಿರಲಿಲ್ಲವೇನೋ. ಅವ್ನೇನೋ ಮದುವೆಯಾಗಿ ಹಾರಿಬಿಟ್ಟ. ಇವ್ಳಿಗೂ ಬೇರೆಕಡೆ ಪ್ರಯತ್ನ ಪಡೋಣ ಅಂದ್ರೆ ಆ ಮಾತೇ ಎತ್ಬೇಡಿ ಅಂತ ಜಗಳಕ್ಕೇ ಬರ್ತಿಯದಾಳೆ. ನಮಗಿದೇ ಯೋಚನೆಯಾಗಿಬಿಟ್ಟಿದೆ. ತೀರಾ ಬಲವಂತ ಮಾಡಕ್ಕೆ ಹೋದ್ರೆ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ, ಏನಾದ್ರೂ ಹೆಚ್ಚು ಕಮ್ಮಿ ಮಾಡ್ಕೊಂಡ್ಬಿಟ್ರೆ ಅಂತ ಯೋಚನೆಯಾಗತ್ತೆ. ನೋಡೋಣ, ಒಂದಷ್ಟು ಕಾಲ ಅದ್ರಬಗ್ಗೆ ಏನೂ ಮಾತಾಡ್ದೆ ಅವಳ ಮನಸ್ಸು ತಿಳಿಯಾಗ ಕ್ಕೆಬಿಡೋಣ ಅಂದುಕೊಂಡಿದೀವಿ” ಅಂದರು ವೆಂಕೋಬರಾಯರು. ಲಲಿತಮ್ಮ ಮುಗುಮ್ಮಾಗೇ ಕುಳಿತಿದ್ದರು. ಸಹಜವೇ ಎಂದುಕೊಂಡರು ಇವರಿಬ್ಬರು. ಹಾಗೂಹೀಗೂ ಮೇಲೆಮೇಲೆ ತೇಪೆ ಹಾಕಿಕೊಂಡು ಮಾತನಾಡುವ ಸ್ಥಿತಿಗೆ ಎಲ್ಲರೂ ಬಂದರು. ಗಾಯವಾಸಿಯಾದರೂ ಗುರುತಳಿಯದಂತೆ ನೋವಿನಗೆರೆಯೊಂದು ಎಲ್ಲರ ಹೃದಯದಲ್ಲೂ ಉಳಿದುಹೋಯಿತು.
ಶಾರದೆ ಸುಮಾರು ಒಂದು ವರ್ಷಕಾಲವೇ ತನ್ನದೇ ಲೋಕದಲ್ಲಿದ್ದುಬಿಟ್ಟಿದ್ದಳು. ಮನೆಯಲ್ಲಿದ್ದ ಮೂವರಲ್ಲೂ ಪರಸ್ಪರ ಮಾತೇ ಇಲ್ಲವೇನೋ ಎನ್ನುವಂತಾಗಿ, ಒಬ್ಬೊಬ್ಬರ ನಡುವೆಯೂ ಗೋಡೆ ಎದ್ದಿದೆಯೇನೋ ಅನ್ನುವ ಹಾಗಾಗಿಬಿಟ್ಟಿತ್ತು. ಬೆಳಗಿಂದ ಸಂಜೆಯವರೆಗೆ ಕಿಟಕಿ ಬಾಗಿಲುಗಳಾದರೂ ಮಾತಾಡುವಂತಿದ್ದರೆ ಅನ್ನಿಸುವ ಹಾಗಾಗಿತ್ತು. ಅಂತೂ ಅದೊಂದು ದಿನ ಬೆಳಗ್ಗೆ ಅಪ್ಪನೊಂದಿಗೆ “ನಾನು ಏನಾದ್ರೂ ಕೆಲ್ಸ ಮಾಡೋಣ ಅಂದ್ಕೋತಿದೀನಿ” ಅಂದಳು ಶಾರದಾ. ʻಡಿಗ್ರಿಯೂ ಆಗಿಲ್ಲದವಳಿಗೆ ಯಾವ ಕೆಲಸ ಸಿಕ್ಕತ್ತೆʼ ಅಂದುಕೊಂಡ ವೆಂಕೋಬರಾಯರು ಹಾಗೆಂದರೆ ಅವಳು ನೊಂದುಕೊಂಡಾಳೆಂದು “ಏನು ಕೆಲ್ಸ ಮಾಡ್ಬೇಕೂಂತ ಅಂದ್ಕೊಂಡಿದೀಯ ಪುಟ್ಟ ನೀನು? ಅದ್ರ ಬದ್ಲು ಒಂದು ಒಳ್ಳೇ ಗಂಡು ಹುಡುಕ್ತೀನಿ. ಮದ್ವೆ ಮಾಡ್ಕೋಬೋದಲ್ವಾ” ಎಂದರು. “ಅಪ್ಪ, ದಯವಿಟ್ಟು ನನ್ನ ಮದ್ವೆ ವಿಷಯ ತೆಗೀಬೇಡಿ. ಅವನಿಗನ್ಸಿತ್ತೋ ಇಲ್ವೋ ಗೊತ್ತಿಲ್ಲ, ಆದ್ರೆ ಚಿಕ್ಕಂದ್ನಿಂದ ನಾನು ಅವ್ನನ್ನೇ ಗಂಡ ಅಂದ್ಕೊಂಡು ಬೆಳ್ದೋಳು. ಈಗ ಇನ್ನೊಬ್ರನ್ನ ಆ ಜಾಗದಲ್ಲಿ ನಿಲ್ಸಕ್ಕೆ ಆಗ್ತಿಲ್ಲಪ್ಪ. ಅವ್ನನ್ನ ಮರೆಯೋಕೆ ನಾನು ಏನಾದ್ರೂ ಕೆಲ್ಸ ಮಾಡ್ಬೇಕು” ಎಂದಳು. “ಸರಿ ನಿನ್ನ ಮನಸ್ನಲ್ಲಿ ಏನಿದೆ ಅಂತ ಹೇಳು ಪುಟ್ಟಾ” ಎಂದರು. “ನಂಗೊತ್ತು, ನನ್ನ ಓದಿಗೆ ಹೊರಗೆಲ್ಲೂ ಕೆಲ್ಸ ಸಿಕ್ಕಲ್ಲ. ನಮ್ಮನೆ ಸಾಕಷ್ಟು ದೊಡ್ದಿದೆ. ಒಂದು ಬೇಬಿ ಸಿಟಿಂಗ್ ಶುರು ಮಾಡೋಣ ಅಂದ್ಕೊಳ್ತಿದೀನಿ. ನಿಂಗೇ ಗೊತ್ತು ಮಕ್ಳೂಂದ್ರೆ ನಂಗೆ ತುಂಬಾ ಇಷ್ಟ. ನನ್ನ ಫ್ರೆಂಡ್ಸ್ ಕೆಲವ್ರು ಮುಂದೆ ಓದಿ ಕೆಲ್ಸಕ್ಕೆ ಸೇರ್ಕೊಂೋಡು ಮದ್ವೆ ಮಾಡ್ಕೊಂಡಿದಾರೆ. ಒಬ್ರಿಬ್ರಿಗೆ ಮಕ್ಳೂ ಆಗಿವೆ. ಅವ್ರತ್ರ ಕೇಳಿ ನೋಡ್ತೀನಿ. ಮೊದ್ಲು ಒಂದೋ ಎರ್ಡೋಕ ಮಕ್ಳನ್ನ ತೊಗೊಂಡು ಸುಧಾರ್ಸನಕ್ಕೆ ಆಗತ್ತಾ ಅಂತ ಪ್ರಯತ್ನ ಪಡ್ತೀನಿ” ಎಂದಾಗ ವೆಂಕೋಬರಾಯರಿಗೂ ಒಂದು ವಿಧದಲ್ಲಿ ಸರಿ ಎನ್ನಿಸಿತು. ಮನೆಯಲ್ಲಿ ಯಾವ್ದೋ ಒಂದೆರಡು ಮಕ್ಳು ಓಡಾಡ್ತಾ ಇದ್ರೆ ತಮಗೂ ಒಂದಿಷ್ಟು ಸಂತೋಷವಾಗಿರತ್ತೆ, ಕಾಲಕ್ರಮೇಣ ಅವಳಿಗೂ ಮದುವೆ ಕಡೆ ಮನಸ್ಸು ವಾಲಬಹುದು ಎನ್ನಿಸಿ “ಸರಿ ಪುಟ್ಟಾ, ನೀನೇನಂತಿ ಲಲಿತಾ” ಎಂದು ಹೆಂಡತಿಯನ್ನು ಕೇಳಿದರು. ಇಷ್ಟರವರೆಗೂ ಮೂಕಪ್ರೇಕ್ಷಕರಾಗಿದ್ದ ಲಲಿತಮ್ಮನವರು “ಮಾಡ್ಬೋದೇನೋ, ಮನ್ಲಿ ಮಕ್ಳ ನಗುವೋ, ಅಳುವೋ ಇದ್ರೆ ನಮ್ಗೂ ಒಂದಷ್ಟು ಹೊತ್ತು ಹೋಗತ್ತೆ” ಎಂದು ಹಸಿರು ನಿಶಾನೆ ತೋರಿಸಿದರು.
ಮುಂದಿನ ಒಂದೆರಡು ತಿಂಗಳಲ್ಲೇ ಸ್ನೇಹಿತೆಯರ ಒಂದಿಬ್ಬರು ಮಕ್ಕಳು ಬರಲಾರಂಭಿಸಿದರು. ಅವರಿಗೂ ಗೆಳತಿ, ಮೇಲಾಗಿ ಮನೆಯ ವಾತಾವರಣದಲ್ಲಿ ಮಕ್ಕಳು ಬೆಳೆಯುತ್ತವೆ ಎನ್ನುವ ಸಂತೋಷದಿಂದಲೇ ಮಕ್ಕಳನ್ನು ಕಳಿಸಿದರು. ಮೊದಮೊದಲು ಮಕ್ಕಳು ಅತ್ತಾಗ, ಊಟ ಮಾಡಲು ಕಾಡಿದಾಗ, ಪುರಸೊತ್ತೇ ಕೊಡದೆ ಇಡೀ ದಿನ ಅವಳನ್ನು ತೊಡಗಿಸಿಕೊಂಡಾಗ ʻಇದು ಬೇಡವಿತ್ತೇನೋʼ ಅನ್ನಿಸಿದರೂ ದಿನಗಳೆದಂತೆ ಅಭ್ಯಾಸವಾಗತೊಡಗಿತು. ಹಾಲು ಕುಡಿಸು, ಕಾಗೆಗುಬ್ಬಿ ತೋರಿಸ್ತಾ, ಕತೆಹೇಳ್ತಾ ತಿನ್ನಿಸು, ಅಳುತ್ತಿದ್ದರೆ ಎತ್ತಿಕೊಂಡು ಓಡಾಡು, ಡೈಪರ್ ಬದಲಿಸು, ನಿದ್ರೆ ಬಂದರೆ ಜೋಗುಳ ಹಾಡಿ ತೂಗಿ ಮಲಗಿಸು…. ಹೀಗೆ ಇಡೀ ದಿನ ಮಕ್ಕಳ ಪ್ರಪಂಚದಲ್ಲೇ ಮುಳುಗಿಹೋದಳು. ಸ್ನೇಹಿತೆಯರ ಶಿಫಾರಸ್ಸಿನ ಮೇಲೆ ಇನ್ನೂ ಮೂರ್ನಾಾಲ್ಕು ಮಕ್ಕಳು ಸೇರಿದ ಮೇಲೆ ಆಯಾ ಕೆಲಸಕ್ಕೆ ಒಬ್ಬಳನ್ನಿಟ್ಟುಕೊಂಡಳು. ಮಕ್ಕಳು ಮನೆ ತುಂಬಾ ಓಡಾಡುತ್ತಿರುವುದು ಅಪ್ಪ, ಅಮ್ಮನಿಗೂ ಒಂದು ಸಂಭ್ರಮದ ವಿಷಯವೇ ಆಗಿದ್ದರೂ, ದಿನದ ಕೊನೆಗೆ ಮೂವರಿಗೂ ಸುಸ್ತಾಗಿ ಉಂಡು ಮಲಗಿದರೆ ಸಾಕಪ್ಪಾ ಎನ್ನುವ ಸ್ಥಿತಿಗೆ ಬಂದು, ದಿನಗಳೆಷ್ಟು ಬೇಗ ಓಡುತ್ತಿವೆ ಎಂದು ಎಲ್ಲರಿಗೂ ಒಂದು ರೀತಿ ನಿರಾಳವಾಗಿತ್ತು. ಮೂರ್ನಾಾಲ್ಕು ವರ್ಷಗಳಲ್ಲಿ ಹತ್ತುಹನ್ನೆರಡು ಮಕ್ಕಳಾದಾಗ ಜೊತೆಗೊಬ್ಬ ಸಹಾಯಕಿಯನ್ನೂ ಇಟ್ಟುಕೊಂಡು, ಇಬ್ಬರು ಆಯಾಗಳೊಂದಿಗೆ ತನ್ನ ಬೇಬಿ ಸಿಟಿಂಗನ್ನು ವಿಸ್ತರಿಸಿಕೊಂಡಳು. ಧಾರಾಳವಾಗಿಯೇ ಸಂಪಾದನೆಯೂ ಆಗುತ್ತಿತ್ತು. ಉತ್ತರ ಭಾರತದ ಮಕ್ಕಳ ಸಲುವಾಗಿ ಹಿಂದಿಯಲ್ಲಿ, ಮಕ್ಕಳೊಂದಿಗೆ ಇಂಗ್ಲಿಷ್ನಲ್ಲೇ ಮಾತನಾಡಿಸುವ ಅಪ್ಪ ಅಮ್ಮಂದಿರ ಸಲುವಾಗಿ ಇಂಗ್ಲಿಷ್ನಲ್ಲಿ ಮಾತನಾಡುವುದನ್ನೂ ರೂಢಿಸಿಕೊಂಡಳು. ಒಟ್ಟಿನಲ್ಲಿ ಕೋಶದಿಂದ ಹೊರಬಂದ ಚಿಟ್ಟೆಯಂತೆ ಹೊಸಜೀವನವನ್ನು ಪ್ರಾರಂಭಿಸಿದ್ದಳು. ಏನೇ ಆದರೂ ʻಇವಳ ಮದುವೆಯೊಂದು ಆಗಿದ್ದರೆ ನಮಗೆ ನಿಶ್ಚಿಂತೆಯಾಗಿರುತ್ತಿತ್ತುʼ ಅನ್ನುವ ಅವಳ ಅಪ್ಪಅಮ್ಮಂದಿರ ಕೊರಗಂತೂ ಉಳಿದೇಹೋಯಿತು. ಆ ಮಾತು ತೆಗೆದಾಗೆಲ್ಲಾ ಅವಳು ಸಪ್ಪೆಯಾಗುವುದನ್ನು ನೋಡಿ ಅವರಿಗೂ ಬೇಸರವಾಗಿ ಇನ್ನೆಂದೂ ಅವಳ ಮುಂದೆ ಈ ಮಾತನ್ನು ಆಡಬಾರದು ಎಂದುಕೊಳ್ಳುತ್ತಿದ್ದರು, ಇನ್ನೊಮ್ಮೆ ಅದೇ ಮಾತನಾಡುವವರೆಗೂ…
ಇತ್ತ ಪ್ರಶಾಂತನೂ ಸ್ನೇಹಳೊಂದಿಗೆ ಸುಖವಾಗಿ ಅಮೇರಿಕೆಯಲ್ಲೇ ಸೆಟಲ್ ಆಗಿಬಿಟ್ಟ. ಮಧ್ಯದಲ್ಲಿ ವೀಸಾ ಸ್ಟಾಂಪಿಗಿಗಾಗಿ ಒಂದೇ ಒಂದು ಸಲ ಒಂದುವಾರ ಬಂದಿದ್ದು ಬಿಟ್ಟರೆ ಭಾರತದ ಕಡೆಗೆ ಮುಖಮಾಡಲೇ ಇಲ್ಲ. ಅಪ್ಪಅಮ್ಮಂದಿರೊಂದಿಗೆ ಮಾತುಕತೆಯೇನಿದ್ದರೂ, ವೀಡಿಯೋ ಕಾಲ್ಗಳ ಮುಖಾಂತರ ಮಾತ್ರವೇ ಎನ್ನುವ ಹಾಗಾಗಿಹೋಯಿತು. ಸುಬ್ಬಣ್ಣ ದಂಪತಿಗಳಿಗೆ ಇವನನ್ನು ಮುಂದೆ ಓದಲು ಕಳಿಸಿದ್ದೇ ತಪ್ಪಾಯಿತೇನೋ ಅನ್ನಿಸಿಬಿಟ್ಟಿತು. ಇಲ್ಲೇ ಕೆಲಸಕ್ಕೆ ಸೇರಿದ್ದರೆ ಶಾರದನ್ನ ಮದ್ವೆ ಮಾಡ್ಕೊಂಡು ಕಣ್ಮುಂದೆ ಇರ್ತಿದದ್ದ. ನಾವೂ ಹಾಯಾಗಿ ಒಂದೋ ಎರಡೋ ಮೊಮ್ಮಕ್ಕಳಾಗಿದ್ರೆ ನೋಡ್ಕೊಂಡು, ಆಟವಾಡಿಸ್ಕೊಂಡು ಹಾಯಾಗಿರ್ಬೋದದಿತ್ತು. ಶಾರದನ ಜೀವ್ನಾನೂ ಸುಖವಾಗಿರ್ತಿನತ್ತು ಅಂದುಕೊಳ್ಳುತ್ತಿದ್ದರು. ಆದರೆ ಆದ ಘಟನೆಗಳನ್ನು ತಿರುವುಮುರುವು ಮಾಡಲು ಬರುವುದಿಲ್ಲವಲ್ಲ. ಬರಿಯ ಪೇಚಾಟವೊಂದೇ ಉಳಿಯಿತು. ಕಡೆಗೆ ಅವನಿಗೆ ಒಂದು ಮಗುವಾದರೂ ಆಗಿದ್ದರೆ ಮನಸ್ಸಿಗೆ ಏನಾದರೂ ಒಂದು ಬದಲಾವಣೆಯಾದರೂ ಆಗಿರುತ್ತಿತ್ತೇನೋ ಅನ್ನಿಸಿ ಅದನ್ನು ಮಗನ ಮುಂದೆಯೂ ಆಡಿತೋರಿಸಿದ್ದರು. “ಈಗ್ಲೇ ಏನವಸರ. ಒಂದ್ನಾಲ್ಕು ವರ್ಷ ಆರಾಮಾಗಿ ಸುತ್ತಾಡ್ಕೊಂಡಿರ್ತೀದವಿ, ಆಮೇಲೆ ಇದ್ದೇಇದೆ” ಎನ್ನುತ್ತಿದ್ದ ಪ್ರಶಾಂತ ಅಂತೂ ಐದನೆಯವರ್ಷ ಮುಗಿಯುತ್ತಾ ಬರುವಾಗ ತನ್ನ ಹೆಂಡತಿ ಬಸುರಿಯೆಂದು ಹೇಳಿ ಅಪ್ಪ, ಅಮ್ಮನಿಗೊಂದಿಷ್ಟು ಹರ್ಷ ತಂದಿದ್ದ.
ಅಲ್ಲಿಯವರೆಗೂ ಅಮೇರಿಕೆಗೆ ಬನ್ನಿ ಎಂದು ಒಮ್ಮೆಯೂ ಕರೆಯದಿದ್ದವನು ಈಗ ಡೆಲಿವರಿ ಹೊತ್ತಿಗೆ “ಇಬ್ರೂ ಬನ್ನಿ. ಒಂದಾರು ತಿಂಗ್ಳು ಮೊಮ್ಮಗೂನ ನೋಡ್ಕೊಂಡು ಹೋಗೋವ್ರಂತೆ. ನಿಮ್ಮಿಬ್ರ ಪಾಸ್ಪೋರ್ಟ್, ವೀಸಾಗೆ ಈಗ್ಲೇ ಅಪ್ಲೈ ಮಾಡ್ಬಿಡಿ. ಟಿಕೇಟು ನಾನು ಬುಕ್ ಮಾಡಿಸ್ತೀನಿ” ಎಂದು ಹಾರ್ದಿಕವಾಗಿ ಕರೆದ. ವಿಮಲಮ್ಮನಿಗೆ ಕೋಪವೇ ಬಂದರೂ ಅದನ್ನು ತೋರಗೊಡದೆ “ಅಯ್ಯೋ ನನ್ಕೈಲಾಗಲ್ಲಪ್ಪ–ಮಗು ಬಾಣಂತೀನ ನೋಡ್ಕೋಳೋದು. ನೀನು ನಿಮ್ಮತ್ತೇನೇ ಕರುಸ್ಕೋ. ನಿಂಗಾದಾಗ ಮೊಮ್ಮಗೂನ ಇಲ್ಲಿಗೆ ಕರ್ಕೊಂಿಡುಬಾ. ಅಷ್ಟು ಹೊತ್ತಿಗೆ ಸ್ವಲ್ಪ ದೊಡ್ಡದಾಗಿರತ್ತೆ. ಆವಾಗ ನೋಡ್ತೀವಿ” ಎಂದುಬಿಟ್ಟರು. “ಹಾಗಲ್ಲ, ಅವರಿಬ್ರೂ ಆಗ್ಲೇ ಒಂದೆರಡ್ಸಲ ಬಂದು, ಮೂರ್ನಾರಲ್ಕು ತಿಂಗ್ಳಿದ್ದು ಇಲ್ಲೆಲ್ಲಾ ತಿರುಗಾಡ್ಕೊಂಡು, ನೋಡ್ಕೊಂಡು ಹೋಗಿದಾರೆ. ನೀವಿನ್ನೂ ಬಂದಿಲ್ವಲ್ಲ; ಈ ನೆಪದಲ್ಲಾದ್ರೂ ಬನ್ನೀಂತ ನಿಮ್ಮನ್ನೇ ಕೇಳಿದ್ದು” ಅಂದ. ಮೈಯೆಲ್ಲಾ ಉರಿದುಹೋಯಿತು ವಿಮಲಮ್ಮನಿಗೆ. “ಅವ್ರು ಆಗ್ಲೇ ಬಂದುಹೋಗಿರೋದ್ರಿಂದ ಅವ್ರಿಗೆ ಅಭ್ಯಾಸ ಆಗಿರತ್ತೆ. ಚೊಚ್ಚಲು ಬಾಣಂತನ ಮಾಡೋದು ಅವ್ರ ಜವಾಬ್ದಾರಿ. ಅದೇ ಸರಿಯಾಗಿರತ್ತೆ” ಎಂದು ಫೋನಿಟ್ಟರು. ಕೋಪಗೊಂಡು ಪ್ರಶಾಂತ ಒಂದೆರಡು ತಿಂಗಳು ಮಾತನಾಡಲೇ ಇಲ್ಲ. ಕಡೆಗೆ ತಡೆಯಲಾಗದೆ ತಾವೇ ಫೋನಾಯಿಸಿ “ಹೇಗಿದಾಳೋ ಸ್ನೇಹ? ಏನು ವ್ಯವಸ್ಥೆ ಆಯ್ತು?” ಎಂದು ಕೇಳಿದರು. “ನೀನು ಬರಲ್ಲ ಅಂದ್ಮೇಲೆ ಇನ್ಯಾಕೆ ಬಿಡು. ಅವ್ರಿಗೆ ಆಸ್ಟ್ರೇಲಿಯಾನಲ್ಲಿರೋ ಅವ್ರ ಸೊಸೆಯ ಡೆಲಿವರಿ ಟೈಮಂತೆ. ಆಕೆಗೆ ಅಮ್ಮನಿಲ್ಲವಂತೆ, ಅದಕ್ಕೆ ಅವ್ರೇ ಹೋಗ್ಬೇಕಂತೆ. ನಮ್ಮ ಕರ್ಮ, ನಾವೇನೋ ಮಾಡ್ಕೊಂತೀವಿ. ನಿಂಗ್ಯಾಕೆ ಕಷ್ಟ?” ಅಂದಾಗ ಕರಗಿಹೋದ ವಿಮಲಮ್ಮ “ಸರಿ, ನೀನೇ ಯಾರ ಮುಖಾಂತ್ರಾನಾದ್ರೂ ವ್ಯವಸ್ಥೆಮಾಡ್ಕೊಡು. ಬರ್ತೀೆವಿ” ಎಂದರು ಸೋತು.
ಅಂತೂ ಅಮೇರಿಕಾಗೆ ಹೋಗಿ ಸೊಸೆಯ ಬಾಣಂತನಕ್ಕೆ ನಿಂತರು. ಅಲ್ಲಿಗೆ ಹೋದಮೇಲೇ ಗೊತ್ತಾಗಿದ್ದು ಸೊಸೆಗೆ ಐ.ವಿ.ಎಫ್. ಮೂಲಕ ಗರ್ಭದಾರಣೆಯಾಗಿ ಅವಳಿಜವಳಿ ಗಂಡುಮಕ್ಕಳು ಹುಟ್ಟಲಿವೆ. ಅದಕ್ಕಾಗಿ ಇಬ್ಬರೂ ಸಾಕಷ್ಟು ಖರ್ಚು ಮಾಡಿಕೊಂಡಿದ್ದಾರೆ. ಇನ್ನೊಮ್ಮೆ ಮಗುವಾದರೆ ಸೊಸೆಯ ಪ್ರಾಣಕ್ಕೆ ಅಪಾಯವಿರಬಹುದು…ಎನ್ನುವ ಎಲ್ಲಾ ವಿವರಗಳು. ಹೇಗೋ ಒಟ್ಟಿಗೆ ಎರಡು ಮಕ್ಕಳಾಗುತ್ತಿವೆಯಲ್ಲಾ, ಸಾಕು, ಮತ್ತೆ ಆಗದಿದ್ದರೂ ಪರವಾಗಿಲ್ಲ. ತಮಗಂತೂ ಒಂದೇ ಮಗುವಾಗಿದ್ದು. ಮೊಮ್ಮಕ್ಕಳಾದರೂ ಇಬ್ಬರಿದ್ದಾರಲ್ಲ ಎಂದು ಸುಬ್ಬಣ್ಣ ವಿಮಲಮ್ಮನವರು ಸಮಾಧಾನ ಪಟ್ಟುಕೊಂಡು ಕಾತುರದಿಂದ ಹೆರಿಗೆಯ ದಿನವನ್ನು ನಿರೀಕ್ಷಿಸತೊಡಗಿದರು. ಎರಡೂ ಮಕ್ಕಳು ಆರೋಗ್ಯವಾಗಿ ಹುಟ್ಟಿದವು. ಮಗ, ಸೊಸೆಗೆ ಮಕ್ಕಳನ್ನು ನೋಡಿಕೊಳ್ಳುವ ಅನುಭವವಿಲ್ಲ. ಎರಡು ತಿಂಗಳಾಗುವಾಗಲೇ ಸೊಸೆ ಕೆಲಸಕ್ಕೆ ಹಿಂತಿರುಗಿದಳು. ಎರಡೆರಡು ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಹೈರಾಣಾಗಿಬಿಟ್ಟರು ವಿಮಲಮ್ಮ. ಮಕ್ಕಳನ್ನೆತ್ತಿ ಗೊತ್ತಿಲ್ಲದ ಸುಬ್ಬಣ್ಣನವರೂ ಕೈಜೋಡಿಸಿದರು. ಅಂತೂ ಮಕ್ಕಳಿಗೆ ಐದು ತಿಂಗಳಾದಾಗ ಮಗ ತನ್ನ ಕಾರಿನಲ್ಲೊಂದು ಮಗುವನ್ನು, ಸೊಸೆ ತನ್ನ ಕಾರಿನಲ್ಲೊಂದು ಮಗುವನ್ನು ಕರೆದುಕೊಂಡುಹೋಗಿ ಬೇಬಿಸಿಟಿಂಗಿಗೆ ಬಿಡುವ ವ್ಯವಸ್ಥೆಯಾಯಿತು. ಹೇಗೋ ಅಂತೂ ಒಂದು ವ್ಯವಸ್ಥೆಯಾಯಿತಲ್ಲ ಎಂದುಕೊಂಡು ಬೆಂಗಳೂರಿಗೆ ವಾಪಸ್ಸು ಬಂದು ಉಸ್ಸಪ್ಪ ಎಂದು ಕುಳಿತರು ದಂಪತಿಗಳು…
ಒಂದೆರಡು ತಿಂಗಳಾಗಿತ್ತೇನೋ… ತಡರಾತ್ರಿಯಲ್ಲಿ ಬಂದ ಫೋನ್ ಅವರಿಬ್ಬರನ್ನೂ ದಿಕ್ಕೆಡಿಸಿತ್ತು. ಎಂದಿನಂತೆಯೇ ಮಗುವನ್ನು ಕರೆದುಕೊಂಡು ಹೊರಟಿದ್ದ ಸ್ನೇಹಳ ಕಾರು ಅಪಘಾತಕ್ಕೀಡಾಗಿ ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಳು. ಹಿಂದುಗಡೆ ಸೀಟಿಗೆ ಕಟ್ಟಿದ್ದ ತೊಟ್ಟಿಲಲ್ಲಿದ್ದ ಮಗುವಿಗೆ ಹೆಚ್ಚು ಪೆಟ್ಟಾಗದೆ ಸುರಕ್ಷಿತವಾಗಿತ್ತು… ಪ್ರಶಾಂತ ಹುಚ್ಚನಂತೆ ಅಳುತ್ತಿದ್ದ. ʻಈಗೇನು ಮಾಡಲಿ, ಈಗೇನು ಮಾಡಲಿʼ ಎಂದು ಬಡಬಡಿಸುತ್ತಿದ್ದ. ಅಳುವಿಗೂ ಮೀರಿದ ಸ್ಥಿತಿ ಹಠಾತ್ತನೆ ಬಂದೆರಗಿತ್ತು. ತಾವಿಲ್ಲಿ, ಅವನಲ್ಲಿ ಏನು ಮಾಡಲು ಸಾಧ್ಯ. ಅವರಸ್ನೇಹದಬಳಗದೊಡ್ಡದೇಇದೆನಿಜ, ಹಾಗೆಂದುಅವರಿಂದʻಏನನ್ನುʼʻಎಷ್ಟನ್ನುʼನಿರೀಕ್ಷಿಸಬಹುದು?! ಎಷ್ಟೆಂದು ಫೋನಿನಲ್ಲಿ ಸಮಾಧಾನ ಹೇಳಬಹುದು?! ಫೋನಿನಲ್ಲೆ ಮೊಮ್ಮಕ್ಕಳು ಅಳುತ್ತಿರುವುದನ್ನು ಕೇಳಿ ಕರುಳು ಕಿವಿಚಿದಂತಾಯಿತು. ಯಾರೋ ಎತ್ತಿಕೊಂಡು ಸಂತೈಸುತ್ತಿದ್ದಾರೆ. ಇವನ ಬಳಿಯೂ ಧೈರ್ಯದ ಮಾತನ್ನಾಡುತ್ತಿದ್ದಾರೆ…. ಕಡೆಗೆ ಸುಬ್ಬಣ್ಣನವರು “ಅಪ್ಪಾ ಪ್ರಶಾಂತ, ನಾವಿಲ್ಲಿ, ನೀನಲ್ಲಿ… ಇಲ್ಲಿಂದ ನಾವೇನು ಮಾಡಕ್ಕೂ ಸಾಧ್ಯವಿಲ್ಲ. ಸಧ್ಯಕ್ಕೆ ಏನೂ ತೋಚುತ್ತಿಲ್ಲ. ಈ ವರ್ಷದಲ್ಲಿ ಮತ್ತೊಮ್ಮೆ ನಾವು ಅಲ್ಲಿಗೆ ಬರಕ್ಕೂ ಅವಕಾಶವಿಲ್ಲ. ಅಲ್ಲಿನದೊಂದು ವ್ಯವಸ್ಥೆ ಮಾಡಿ ಹೇಗಾದ್ರೂ ಮಕ್ಕಳನ್ನು ಕರ್ಕೊಂ್ಡುಒಂದಷ್ಟು ದಿನ ರಜೆ ಹಾಕಿ ಇಲ್ಲಿಗೆ ಬಂದ್ಬಿಡು. ಮುಂದೇನು ಮಾಡ್ಬೋದೂಂತ ಒಟ್ಟಿಗೇ ಕೂತು ಯೋಚ್ನೆ ಮಾಡೋಡ. ಆದಷ್ಟು ಬೇಗ ಬಂದ್ಬಿಡು” ಎಂದರು. ವಿಮಲಮ್ಮನವರೂ ಅದಕ್ಕೆ ದನಿಗೂಡಿಸಿದರು. ಇನ್ನೇನೂ ತೋಚದೆ ಮಕ್ಕಳನ್ನು ಕರೆದುಕೊಂಡು ಹೋಗಲು ವಿಶೇಷ ಪರವಾನಗಿ ಪಡೆದುಕೊಂಡು ಪ್ರಶಾಂತನೂ ಎರಡು ಕೂಸುಗಳನ್ನೂ ಎತ್ತಿಕೊಂಡು ಬೆಂಗಳೂರಿನಲ್ಲಿಳಿದ.
ವಿಷಯ ತಿಳಿದ ವೆಂಕೋಬರಾಯರು, ಲಲಿತಮ್ಮನವರಿಗೂ ಸಂಕಟವಾಗಿ ತಕ್ಷಣವೇ ಮಾತನಾಡಿಸಿ, ಸಮಾದಾನ ಹೇಳಿಹೋಗಲು ಸುಬ್ಬಣ್ಣನವರ ಮನೆಗೆ ಹೋದರು. ಫೋನ್ ಬಂದಾಗ ಮನೆಯ ಮುಂದೆ ಮಗುವೊಂದರ ತಾಯಿಯೊಂದಿಗೆ ಮಾತನಾಡುತ್ತಾ ನಿಂತಿದ್ದ ಶಾರದೆಗೆ ವಿಷಯ ತಿಳಿದಿರಲಿಲ್ಲ. “ಇದೇನು ಇಬ್ರೂ ಎಲ್ಲಿಗೆ ಹೊರ್ಟಿ್ದೀರಿ?” ಎಂದವಳಿಗೆ ಆ ತಕ್ಷಣಕ್ಕೆ ಏನೂ ಹೇಳದೆ, “ವಿಮಲ ಫೋನ್ ಮಾಡಿ ಅರ್ಜೆಂಟಾಗಿ ಬರಕ್ಕೆ ಹೇಳಿದಾಳೆ ಹೋಗ್ಬರ್ತೀೋವಿ, ಆದಷ್ಟು ಬೇಗ ಬಂದ್ಬಿಡ್ತೀವಿ” ಎಂದು ಮನೆ ಬಿಟ್ಟಿದ್ದರು. ಸುಬ್ಬಣ್ಣನವರು ತಲೆಯ ಮೇಲೆ ಕೈಹೊತ್ತು ಕುಳಿತಿದ್ದರು. ಪ್ರಶಾಂತ ಒಂದು ಮಗುವನ್ನೆತ್ತಿಕೊಂಡು ಹಾಲು ಕುಡಿಸುತ್ತಿದ್ದ. ವಿಮಲಮ್ಮನವರು ಇನ್ನೊಂದು ಮಗುವನ್ನೆತ್ತಿಕೊಂಡಿದ್ದರು. ಸಧ್ಯಕ್ಕೆ ಮನೆಕೆಲಸದ ನಿಂಗಮ್ಮನ ಮಗಳು ಬೆಳಗಿಂದ ಸಂಜೆಯವರೆಗೂ ಇದ್ದು ನೋಡಿಕೊಳ್ಳಲು ವಿಮಲಮ್ಮನವರ ಜೊತೆಗೆ ಕೈಜೋಡಿಸಿದ್ದಳು. ಇನ್ನೂ ಚಿಕ್ಕಹುಡುಗಿ, ಮಕ್ಕಳನ್ನು ಎತ್ತಿಕೊಂಡು ಓಡಾಡಲುಬಾರದು. ತೊಟ್ಟಿಲಿಗೆ ಹಾಕಿಕೊಟ್ಟರೆ ತೂಗುವುದು, ಹೇಳಿದ್ದನ್ನು ತಂದುಕೊಡುವುದು ಇಂತಹ ಸುತ್ತುಕೆಲಸವನ್ನು ಮಾಡಿಕೊಂಡಿದ್ದಳು. ಅಣ್ಣನನ್ನು ಕಂಡ ವಿಮಲಮ್ಮನ ದುಃಖದಕಟ್ಟೆಯೊಡೆದು ಭುಜಕ್ಕೊರಗಿ ಬಿಕ್ಕಿಬಿಕ್ಕಿ ಅತ್ತರು. ಏನೆಂದು ಸಂತೈಸಲು ಸಾಧ್ಯ, ಏನು ಪರಿಹಾರ ಹೇಳಲು ಸಾಧ್ಯ?! ಲಲಿತಮ್ಮನೂ ಅವರ ಹೊಟ್ಟೆಯಲ್ಲಿದ್ದ ಕಿಸುರನ್ನು ಬದಿಗಿಟ್ಟು ನಾದಿನಿಯನ್ನು ಸಂತೈಸಿದರು. ಪ್ರಪಂಚವೇ ಬೇಡವೆನ್ನುವ ಹಾಗೆ ಕೂತಿದ್ದ ಪ್ರಶಾಂತನಿಗೂ ನಾಲ್ಕು ಸಮಾಧಾನದ ಮಾತುಗಳನ್ನು ಹೇಳಿದರು. ಸಾಕಷ್ಟು ಹೊತ್ತು ಜೊತೆಗಿದ್ದು ಏನಾದರೂ ವ್ಯವಸ್ಥೆಮಾಡುವ ಬಗ್ಗೆ ತಾವೂ ಯೋಚಿಸುತ್ತೇವೆಂದು ತಂಗಿಗೂ, ಭಾವನಿಗೂ ಹೇಳಿಹೊರಟರು.
ಮನೆಗೆ ಬರುವ ವೇಳೆಗೆ ಮಕ್ಕಳನ್ನೆಲ್ಲಾ ಮನೆಗೆ ಕಳಿಸಿ ಆಗಷ್ಟೇ ಮುಖತೊಳೆದು ಬಟ್ಟೆ ಬದಲಾಯಿಸಿಕೊಂಡು ಕಾಫಿಲೋಟವನ್ನು ಹಿಡಿದುಕೊಂಡು ಟೀವಿಯ ಮುಂದೆ ಶಾರದಾ ಕುಳಿತಿದ್ದಳು. ಮಂಕಾಗಿ ಬಂದಿದ್ದ ಇವರನ್ನು ನೋಡಿದ ಕೂಡಲೇ “ಏನದು ಅಷ್ಟು ಅರ್ಜೆಂಟಾಗಿ ಎದ್ನೋ, ಬಿದ್ನೋಂತ ಓಡಿಹೋದ್ರಲ್ಲ ಇಬ್ರೂ. ಯಾಕಿಷ್ಟ ಮಂಕಾಗಿದೀರಿ” ಎಂದಳು. ಕೂತು ಘಳಿಗೆ ಸುಧಾರಿಸಿಕೊಂಡ ವೆಂಕೋಬರಾಯರು ಎಲ್ಲಾವಿಷಯವನ್ನೂ ಮಗಳೊಂದಿಗೆ ಹಂಚಿಕೊಂಡರು. ಲಲಿತಮ್ಮ ಏನೂ ತೋಚದೆ ತಲೆಯ ಮೇಲೆ ಕೈಹೊತ್ತುಕುಳಿತಿದ್ದರು. ವಿಷಯ ತಿಳಿದ ಶಾರದೆಗೂ ಆಘಾತವಾಯಿತು. “ಅಯ್ಯೋ ಪಾಪವೇ, ಇದೆಂತಾ ಘೋರವಾಗೋಯ್ತು. ಮಕ್ಳು ಹೇಗಿವೆ? ಪ್ರಶಾಂತ ಹೇಗಿದಾನೆ? ಅತ್ತೆ, ಮಾವ ಹೇಗೆ ತೊಗೊಂಡಿದಾರೆ ಇದನ್ನ” ಎಂದು ಕಳಕಳಿಯಿಂದ ವಿಚಾರಿಸಿಕೊಂಡು “ಅಯ್ಯೋ, ಹೀಗಾಗ್ಬಾರ್ದಿ ತ್ತು. ಇನ್ನೂ ಎಷ್ಟು ಎಳೆಯಮಕ್ಕಳು. ನೆನಸಿಕೊಂಡರೇ ಸಂಕಟವಾಗತ್ತೆ” ಎನ್ನುವಾಗ ಕಣ್ಣಲ್ಲಿನೀರಾಡಿತು.
ಅವನು ತನಗೆಷ್ಟೇ ನಿರಾಶೆಯನ್ನು ಕೊಟ್ಟಿದ್ದರೂ, ಅವನ ಬಗ್ಗೆ ಕೋಪವಿದ್ದರೂ, ಶಾರದಾ ಎಂತಹ ದುಃಖ, ಹತಾಶೆಯಲ್ಲೂ ಅವನಿಗೆ ಕೇಡಾಗಲೆಂದುಕೊಂಡವಳಲ್ಲ. ಅವನನ್ನು ಮನಸ್ಸಿನಿಂದ ಹೊರಹಾಕಲು ಸಾಧ್ಯವಾಗದೇ ಪರಿತಪಿಸಿದ್ದಳಷ್ಟೇ. ಅಪ್ಪಅಮ್ಮ ಬೇರೆ ಸಂಬಂಧಗಳನ್ನು ನೋಡುವಾಗ, ಅವನನ್ನು ಮರೆಯಲು ಸಾಧ್ಯವಾಗದೆ ಒದ್ದಾಡಿದ್ದಳು. ಮದುವೆಯಾಗಿ ದ್ವಂದ್ವದಲ್ಲಿ ಬದುಕುವ ಬದಲು ಹೀಗಿರುವುದೇ ಮೇಲು ಎಂದುಕೊಂಡಿದ್ದಳು. ಅವನಿಗಾಗಿರುವ ದುರಂತದ ಬಗ್ಗೆಯೇ ಯೋಚಿಸುತ್ತಾ ಅವಳಿಗೆ ರಾತ್ರಿ ಎಷ್ಟೋ ಹೊತ್ತು ನಿದ್ರೆ ಬಾರದೆ ಹೊರಳಾಡಿದಳು. ಮನದಲ್ಲೆಲ್ಲೋ ಅದುಮಿಟ್ಟಿದ್ದ ಅವನ ನೆನಪುಗಳೆಲ್ಲವೂ ಬುಟ್ಟಿ ತೆಗೆದ ತಕ್ಷಣ ಭುಸ್ ಎಂದು ಹೊರಬರುವ ಹಾವಿನಂತೆ ಬಾಲ್ಯದ ದಿನಗಳನ್ನು ಕಣ್ಣೆದುರಿಗೆ ನಿಲ್ಲಿಸಿ ಅವಳನ್ನು ಮೃದುವಾಗಿಸಿದ್ದವು. ಏನಾದರಾಗಲಿ, ಭಾನುವಾರ ಹೋಗಿ ಅವನನ್ನು ಮಾತನಾಡಿಸಿಕೊಂಡು, ಅತ್ತೆ-ಮಾವನನ್ನೂ ಕಂಡು ನಾಲ್ಕು ಸಮಾಧಾನದ ಮಾತುಗಳನ್ನಾಡಿ ಬರಬೇಕೆಂದುಕೊಂಡಳು.
ಆ ಭಾನುವಾರ ಅಮ್ಮಅಪ್ಪರೊಡನೆ ಶಾರದೆಯೂ ಮಾವನ ಮನೆಗೆ ಹೋದಳು. ಆಗಷ್ಟೇ ಒಬ್ಬ ಹಳೆಯ ಸ್ನೇಹಿತ ಬಂದು ಪ್ರಶಾಂತನನ್ನು ಬಲವಂತದಿಂದ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಇಬ್ಬಿಬ್ಬರು ಪುಟ್ಟಮಕ್ಕಳೊಂದಿಗೆ ಏಗುತ್ತಿದ್ದ ಅತ್ತೆಮಾವರನ್ನು ಕಂಡು ಅವಳಿಗೆ ಅಯ್ಯೋ ಎನ್ನಿಸಿತು. ಅಪ್ಪಅಮ್ಮ ಅವರೊಡನೆ ಮಾತನಾಡುತ್ತಿರುವಾಗ ಅವರ ಕೈಲಿದ್ದ ಮಕ್ಕಳನ್ನು ಹೊರಗೆ ಕರೆದೊಯ್ದು ಆಡಿಸಿಕೊಂಡಿದ್ದಳು. ಬೆಣ್ಣೆಯ ಮುದ್ದೆಯಂತಿದ್ದ ಮುದ್ದುಮುದ್ದಾದ ಮಕ್ಕಳು. ಇಷ್ಟುಬೇಗನೇ ಅಮ್ಮನನ್ನು ಕಳೆದುಕೊಂಡವಲ್ಲ ಎನ್ನಿಸಿ ದುಃಖವಾಯಿತು. ಒಳಗಡೆ ಮಾತಾಡುತ್ತಿದ್ದ ವೆಂಕೋಬರಾಯರೊಂದಿಗೆ ವಿಮಲಮ್ಮ ಮಾತಿನ ಮಧ್ಯೆ “ಅಣ್ಣಾ ನಾನು ಹೀಗೆ ಕೇಳ್ತಿದೀನೀಂತ ತಪ್ಪು ತಿಳ್ಕೋಬೇಡ, ಹೀಗೆ ಕೇಳಕ್ಕೆ ನಂಗೂ ತುಂಬಾ ಸಂಕೋಚವಾಗ್ತಿದೆ. ವಿಧಿಯಿಲ್ಲ, ನಿಮ್ಮಿಬ್ರಿಗೂ ಪೂರ್ತಿಯಾಗಿ ಪರ್ವಾಾಗಿಲ್ಲ ಅನ್ಸಿದ್ರೆ ಮಾತ್ರಾ ಈ ಮಾತಿನ ಬಗ್ಗೆ ಯೋಚ್ನೆ ಮಾಡಿ. ಶಾರದಾ ಪ್ರಶಾಂತನನ್ನೆ ಮನಸ್ಸಿನಲ್ಲಿಟ್ಟುಕೊಂಡು ಇನ್ಯಾರನ್ನೂ ಮದುವೆಯಾಗಲು ಒಪ್ತಿಲ್ಲವಲ್ಲ, ಈಗ ಪ್ರಶಾಂತನ್ನ ಮದ್ವೆಮಾಡ್ಕೊಳಕ್ಕೆ ಒಪ್ಕೋತಾಳಾ. ಯೋಚ್ನೆ ಮಾಡಿನೋಡಿ ಇಬ್ರೂ, ನಿಮ್ಗೂ ಮಗಳ ಮದ್ವೆಯಾದ ಸಮಾಧಾನ ಸಿಕ್ಕತ್ತೆ. ನಮ್ಗೂ ಮಗನ ಬಾಳು ನೇರವಾಯ್ತಲ್ಲ ಅಂತ ನಿಶ್ಚಿಂತೆಯಾಗತ್ತೆ. ಬೇರೆ ಯಾರ್ನಾಲದ್ರೂ ನೋಡೋ ಮೊದ್ಲು ಶಾರದನ್ನೇ ಕೇಳೋಣ ಅಂತ ಅಷ್ಟೆ. ಖಂಡಿತಾ ನನ್ನ ಒತ್ತಾಯವಿಲ್ಲ” ಎಂದರು.
ಸ್ವಲ್ಪಹೊತ್ತು ಸುಮ್ಮನಿದ್ದ ವೆಂಕೋಬರಾಯರು “ಪ್ರಶಾಂತ ಇದಕ್ಕೊಪ್ಕೋತಾನೇನಮ್ಮ, ಈಗಾಗ್ಲೇ ಒಂದ್ಸಲ ಅವ್ಳಿಗೆ ಈ ವಿಷಯದಲ್ಲಿ ನೋವಾಗಿದೆ. ಮತ್ತೆ ನೋವು ಕೊಡಕ್ಕೆ ನಾವು ಸಿದ್ಧ ಇಲ್ಲ. ಅವ್ನನ್ನ ವಿಚಾರ್ಸಿ ಹೇಳು, ಆಮೇಲೆ ಶಾರ್ದ್ನ ಹತ್ರ ಮಾತಾಡ್ತೀವಿ” ಎಂದವರು ಹೆಂಡತಿಯ ಕಡೆ ತಿರುಗಿ “ಏನಂತೀಯ ಲಲ್ತಾ” ಅಂದರು. “ಅದ್ನಿಜಾ. ಅವ್ಳು ಒಪ್ಕೊಂಡ್ರೆ ಆಗ್ಬೋದೇನೋ. ಆದ್ರೆ ಮೊದ್ಲು ಪ್ರಶಾಂತನ ಮನಸ್ಸನ್ನ ತಿಳ್ಕೊಂಡು ಮುಂದಿನ ಮಾತಾಡೋದು ಮೇಲು” ಎಂದರು. ಅದೂಇದೂ ಮಾತಾಡುತ್ತಾ, ಊಟದ ಹೊತ್ತಾಗುತ್ತಾ ಬಂದರೂ ಇನ್ನೂ ಪ್ರಶಾಂತ ಬಂದಿರಲಿಲ್ಲ. “ಇಲ್ಲೇ ಊಟ ಮಾಡ್ಕೊಂಡುಹೋಗಿ” ಎಂದು ವಿಮಲಮ್ಮ ಒತ್ತಾಯಿಸಿದರೂ, “ಇಲ್ಲ, ಮನೇಲಿ ಮಾಡಿಟ್ಬಂದಿದೀವಿ. ಹೊರಡ್ತೀವಿ” ಎನ್ನುತ್ತಾ ಹೊರಟರು. “ಬರ್ತೀ್ನತ್ತೆ, ಪ್ರಶಾಂತನ ಹತ್ರ ಬಂದಿದ್ದೆ ಅಂತ ಹೇಳ್ಬಿಡಿ. ಯಾವಾಗ್ಲಾದ್ರೂ ಫೋನಲ್ಲಿ ಮಾತಾಡ್ತೀನಿ” ಎನ್ನುತ್ತಾ ಶಾರದೆಯೂ ಹಿಂಬಾಲಿಸಿದಳು.
ಪ್ರಶಾಂತನೊಡನೆ ವಿಮಲಮ್ಮ ಈ ವಿಷಯದ ಪ್ರಸ್ತಾಪ ಮಾಡಿದಾಗ ಅವನು ಅವಾಕ್ಕಾದ. “ಹೇಗಮ್ಮಾ ಸಾಧ್ಯ?! ನಾನು ಇನ್ನೊಂದು ಮದ್ವೆ ಬಗ್ಗೆ ಯೋಚ್ನೇನೇ ಮಾಡಿಲ್ಲ. ಅಷ್ಟಕ್ಕೂ ಅವ್ಳು ಒಪ್ಕೊಂತಾಳಾ?” ಎಂದ ಅಪನಂಬಿಕೆಯಿಂದ. “ಗೊತ್ತಿಲ್ಲ, ನೀನು ಮೊದ್ಲು ಒಪ್ಕೊಂಡ್ರೆ, ಆಮೇಲೆ ಅವ್ಳ ಹತ್ರ ಮಾತಾಡ್ಬೋದು. ಅವ್ಳಪ್ಪಅಮ್ಮನತ್ರ ಕೇಳಿದೀವಿ” ಎಂದರು ವಿಮಲಮ್ಮ. “ಅದು ಹಾಗಲ್ಲ…. ವಿಷಯ ಅಷ್ಟು ಸುಲಭ ಅಲ್ಲ” ಎಂದು ಏನೋ ಹೇಳಲು ಹೊರಟವನು “ಬಿಡು, ಅವಳ ಹತ್ರ ನಾನೇ ಮಾತಾಡ್ತೀನಿ” ಎಂದ. ಎರಡುಮೂರು ದಿನ ಹಾಗೆಯೇ ತಳ್ಳಿದ. ವಿಮಲಮ್ಮ ಮೇಲಿಂದಮೇಲೆ ಕೇಳಿದಮೇಲೆ ಅಂತೂ ಒಂದುದಿನ ಶಾರದನಿಗೆ ಕರೆ ಮಾಡಿ “ನಿನ್ನ ಹತ್ರ ಒಂದು ಇಂಪಾರ್ಟೆಂಟ್ ವಿಷ್ಯ ಮಾತಾಡ್ಬೇಕು. ಮನೇಲಿ ಬೇಡ. ಎಲ್ಲಿ ಸಿಕ್ತೀಯ?” ಎಂದು ಕೇಳಿದ. “ಏನ್ವಿಷಯ. ನಾನು ಇಡೀದಿನ ಬ್ಯುಸಿ ಇರ್ತೀೇನಿ. ಸಾಯಂಕಾಲ ಆರುಗಂಟೆ ಮೇಲೇ ಆಗೋದು” ಎಂದಳು. “ಪರ್ವಾಂಗಿಲ್ಲ. ಆಗ್ಬೋದು, ಎಲ್ಲಿ ಮೀಟ್ ಮಾಡೋಣ?” ಎಂದ. “ಸರಿ, ನಾಳೆ ಪಾರ್ಕಿನ ಗಣಪತಿ ದೇವಸ್ಥಾನದ ಮುಂದೆ ಕೊಳದ ಪಕ್ಕದಲ್ಲಿರೋ ಕಲ್ಲುಬೆಂಚಿನ ಹತ್ರ ಸಂಜೆ ಆರೂವರೆಗೆ ಬರ್ತೀಂನಿ” ಎಂದಳು “ಹಾಗೇ ಆಗ್ಲಿ ನಾನು ಅಲ್ಲೇ ಕಾಯ್ತಿರ್ತೀ“ನಿ” ಎಂದ. ರಾತ್ರಿ ಊಟ ಮಾಡುವಾಗ ಅಪ್ಪಅಮ್ಮನ ಹತ್ತಿರ ಈ ವಿಷಯ ಹೇಳಿ “ಏನು ಮಾತಾಡ್ಬೇಕೋ, ಯಾಕೆ ಕರ್ದಿಿದಾನೋ ಗೊತ್ತಾಗ್ಲಿಲ್ಲ” ಎಂದಳು. ವೆಂಕೋಬರಾಯರು, ಲಲಿತಮ್ಮ ಮುಖಮುಖ ನೋಡಿಕೊಂಡು ಸುಮ್ಮನಾದರು. ಊಟ ಮುಗಿದು, ಟೀವಿ ನೋಡುತ್ತಾ ಕುಳಿತಿರುವಾಗ “ಪುಟ್ಟಾ ಅವತ್ತು ವಿಮಲಾನ ಮನೆಗೆ ಹೋದಾಗ ಹೀಗೇ ಮಾತುಬಂತು…” ಎನ್ನುತ್ತಾ ಅಂದಿನ ಮಾತಿನ ಸಾರಾಂಶವನ್ನು ಹೇಳಿ “ಅದೇ ವಿಷಯ ಮಾತಾಡೋಕೆ ಕರ್ದಿೋರ್ಬೋ ದೇನೋ. ನಿಂಗಿಷ್ಟ ಇದ್ರೆ ಹೋಗು, ವಿಷ್ಯ ನಿಂಗೆ ತಿಳಿದಿರ್ಲಿು ಅಂತ್ಹೇಳ್ದೆ” ಎಂದರು. ಅಪ್ಪನ ಮುಖವನ್ನೇ ನೋಡುತ್ತಿದ್ದವಳು “ಓ…ಹಾಗಾ ವಿಷಯ. ನಿಮ್ಮಿಬ್ರ ಅಭಿಪ್ರಾಯ ಏನು?” ಎಂದಳು. ಲಲಿತಮ್ಮನವರು “ನಮ್ದೇನಿಲ್ಲ ಶಾರಿ, ನೀನು ಮಾಡ್ಕೊಂಡ್ರೇನೋ ನಮ್ಗೂ ಸಮಾಧಾನಾನೇ. ಆದ್ರೆ ಇದ್ರಲ್ಲಿ ಒತ್ತಾಯ ಏನೂ ಇಲ್ಲ. ಮದ್ವೇಗೆ ನೀನು ಒಪ್ಕೊಳೋದಾದ್ರೆ ಬೇಕಾದ್ರೆ ಬೇರೆ ಹೊಸ ಸಂಬಂಧಾನೂ ನೋಡ್ಬೋದು. ಒಟ್ನಲ್ಲಿ ನೀನು ಮದ್ವೆಯಾದ್ರೆ ನಮ್ಗೂ ನೆಮ್ದಿ ಕಣಮ್ಮ” ಎಂದರು. “ಯೋಚ್ನೆ ಮಾಡ್ತೀನಿ” ಎನ್ನುತ್ತಾ ಎದ್ದು ಮಲಗಲು ಹೊರಟಳು.
ರಾತ್ರಿ ಬಹಳ ಹೊತ್ತು ನಿದ್ರೆ ಬರದೆ ಹೊರಳಾಡಿದಳು. ಯಾವುದೇ ಸ್ಪಷ್ಟ ನಿಲುವಿಗೂ ಅವಳಿಂದ ಬರಲಾಗಲಿಲ್ಲ. ಅವನ, ಜೊತೆಗೆ ಅತ್ತೆಮಾವನ ಪರಿಸ್ಥಿತಿಯ ಬಗ್ಗೆ ಅನುಕಂಪವೇನೋಇತ್ತು. ಆಗಬಾರದ್ದೇನೂ ಅಲ್ಲ; ಮಕ್ಕಳು ಮುದ್ದಾಗಿವೆ. ಆದರೆ ಸವತಿಯ ನೆರಳು ತನ್ನನ್ನು ಸದಾ ಕಾಡುತ್ತಿದ್ದರೆ… ಅವನೂ ಅಂದಿನ ಧೋರಣೆಯಲ್ಲೇ ಇದ್ದರೆ…. ಯಾವುದಕ್ಕೂ ನಾಳೆ ಹೋಗಿ ಮಾತನಾಡಿದಮೇಲೆ ತೀರ್ಮಾಿನಿಸಿದರಾಯಿತು ಎಂದು ಸಾಧ್ಯಾಸಾಧ್ಯತೆಗಳ ಬಗ್ಗೆ ಯೋಚಿಸುತ್ತ ನಿದ್ರೆ ಬರುವಾಗ ತಡರಾತ್ರಿಯಾಗಿತ್ತು. ಮರುದಿನ ಬೆಳಗ್ಗೆ “ಹೋಗಿ ಮಾತಾಡಿ ನೋಡ್ತೀನಿ, ಆಮೇಲೆ ನನ್ನ ನಿರ್ಧಾರ ಹೇಳ್ತೀನಿ” ಅಂದಳು. “ಹಾಗೇ ಮಾಡು ಪುಟ್ಟ, ನಿನ್ನ ನಿರ್ಧಾರಾನೇ ನಮ್ದೂ” ಎಂದರು ವೆಂಕೋಬರಾಯರು. ಸಂಜೆ ಆರು ಗಂಟೆಯ ಹೊತ್ತಿಗೆ ಎಲ್ಲಾ ಮಕ್ಕಳೂ ಹೊರಟವು. ಹಿಂದೆಯೇ ರೆಡಿಯಾಗಿ “ಬರ್ತೀಂನಮ್ಮ” ಎಂದು ಶಾರದೆಯೂ ಸಿದ್ಧಳಾದಳು. “ಆಟೋಲಿ ಹೋಗ್ತೀಯ?” ಎಂದು ಕೇಳಿದ ಅಪ್ಪನಿಗೆ “ಇನ್ನೆಷ್ಟು ದೂರ ಮಹಾ, ನಡ್ಕೊಂಡೇ ಹೋಗ್ತೀನಿ” ಎಂದು ಹೊರಟಳು.
ಕಾಯುತ್ತಲೇ ಕುಳಿತಿದ್ದ ಪ್ರಶಾಂತ ಇನ್ನೊಮ್ಮೆ ಮೊಬೈಲನ್ನೊತ್ತಿ ಟೈಮ್ ನೋಡಿಕೊಂಡ. ಇನ್ನೂ ಐದು ನಿಮಿಷವಿದೆ. ಹಾಗೆ ಟಾಕೋಟೀಕಾಗಿ ಗಂಟೆ ಹೊಡೆದಹಾಗೆ ಬರಕ್ಕೆ ಇದೇನು ಅಮೇರಿಕಾನಾ, ಇಲ್ಲಿ ಎಲ್ರಿಗೂ ಅವರವರ್ದೇ ಟೈಮು ಎಂದುಕೊಳ್ಳುತ್ತಾ ಗಣಪತಿಯ ಗುಡಿಯತ್ತ ಕಣ್ಣುಹೊರಳಿಸಿದ. ಮಂಗಳಾರತಿಯಾಗುತ್ತಿತ್ತೇನೋ, ಜೋರಾದ ಘಂಟಾನಾದ ಕೇಳತೊಡಗಿತು. ಅರಿವಿಲ್ಲದೆಯೇ ಕಣ್ಮುಚ್ಚಿಕೊಂಡು ಕೈಮುಗಿದುಕೊಂಡು ಕುಳಿತ. “ಅಬ್ಬಬ್ಬಬ್ಬಾ, ಯಾವತ್ತಿಂದ ನಿಂಗೆ ದೇವ್ರ ಮೇಲೆ ಇಷ್ಟೊಂದು ಭಕ್ತಿ?” ನಗುತ್ತಾ ಪಕ್ಕದಲ್ಲಿ ಕೂತಳು ಶಾರದೆ. ಗಲಿಬಿಲಿಯಿಂದ ಕಣ್ಣುಬಿಟ್ಟು ಅವಳನ್ನೇ ನೋಡಿದ. ಒಂದು ಕ್ಷಣ ಅವನಿಗೆ ಗುರುತೇ ಸಿಗಲಿಲ್ಲ. ಅಂದು ಸೀರೆಯುಟ್ಟು, ಹೆಚ್ಚೆಂದರೆ ಚೂಡಿದಾರ್ ಮೇಲೆ ಪೂರ್ತಿಯಾಗಿ ದುಪ್ಪಟ್ಟಾ ಹೊದ್ದು, ಜಡೆ ಹೆಣೆದು, ಹೂಮುಡಿದು, ಎದ್ದುಕಾಣುವ ಹಾಗೆ ಕುಂಕುಮವನ್ನಿಟ್ಟುಕೊಂಡು ಅಪ್ಪಟ ಭಾರತೀಯನಾರಿಯಂತೆ ಇರುತ್ತಿದ್ದವಳೆಲ್ಲಿ, ಈಗ ಜೀನ್ಸ್ ಪ್ಯಾಂಟ್ ಹಾಕಿ, ಮೇಲೊಂದು ಸ್ಲೀವ್ಲೆಸ್ ಟಾಪ್ ಹಾಕಿಕೊಂಡು ಕತ್ತಿನಲ್ಲಿ ಕಂಡೂಕಾಣದಂತ ತೆಳ್ಳನೆಯ ಸರವನ್ನು ಹಾಕಿಕೊಂಡು, ಕಟ್ ಮಾಡಿಸಿದ ಕೂದಲಿಗೊಂದು ಕ್ಲಿಪ್ ಹಾಕಿ, ಹಣೆಯಮೇಲೆ ಕಂಡೂಕಾಣದಂತೆ ಒಂದು ಚುಕ್ಕೆಯನ್ನಿಟ್ಟುಕೊಂಡಿದ್ದ ಇವಳೆಲ್ಲಿ? ಅವಳನ್ನೇ ಅಪಾದಮಸ್ತಕ ನೋಡಿದ. “ಏ ನಾನೇ ಕಣೋ, ಯಾಕೆ ಗುರ್ತು ಸಿಗ್ಲಿಲ್ವಾ” ಎಂದು ಕಿಲಕಿಲ ನಕ್ಕಳು. “ಏನ್ಬಂತೇ ನಿಂಗೆ, ಇಷ್ಟೊಂದು ಬದಲಾವಣೆ” ಎಂದ ಹಳೆಯ ಸಲುಗೆಯಿಂದ. “ಕಾಲ ಎಲ್ರಲ್ಲೂ ಎಲ್ಲಾ ಬದಲಾವಣೇನೂ ತರತ್ತಲ್ವಾ ಪ್ರಶಾಂತ” ಎಂದಳು ಅವನನ್ನೇ ನೋಡುತ್ತಾ…
ಲೋಕಾಭಿರಾಮವಾಗಿ ಒಂದಷ್ಟು ಮಾತುಕತೆಯಾಯಿತು. ಅಪ್ಪ, ಅಮ್ಮನೊಡನೆ ಹೇಳಿಕೊಳ್ಳಲಾಗದ ದುಗುಡವನ್ನು ಅವಳಲ್ಲಿ ಹೇಳಿಕೊಂಡ. ಅವಳೂ ತನಗೆ ತಿಳಿದಷ್ಟು ಸಮಾಧಾನ ಹೇಳಿದಳು. ಹಾಗೆಯೇ ತನ್ನ ಅಪ್ಪ, ಅಮ್ಮ ಪ್ರಸ್ಥಾಪಿಸಿದ ಮದುವೆಯ ವಿಷಯವನ್ನು ತೆಗೆದ. “ನನ್ನ ಸಧ್ಯದ ಪರಿಸ್ಥಿತಿಯಲ್ಲಿ ಅದೊಂದು ಒಳ್ಳೆಯ ಪರಿಹಾರವೇನೋ ಅನ್ಸತ್ತೆ, ಆದ್ರೆ…” ಎನ್ನುತ್ತಾ ಮಾತು ನಿಲ್ಲಿಸಿದ. “ಏನು ಆದ್ರೆ…?” ಎಂದು ಶಾರದಾ ಕೇಳಿದ್ದಕ್ಕೆ “ನೋಡು ಎರಡ್ಮೂರು ವಿಷಯ ಇದೆ ಇದ್ರಲ್ಲಿ. ಒಂದು ನಾನು ನಿಂಗೆ ತುಂಬಾ ನೋವು ಕೊಟ್ಟಿದೀನಿ. ಈಗ ನಿನ್ನೆದ್ರು ಈ ಪ್ರಸ್ಥಾಪ ಇಡಕ್ಕೇ ನಂಗೆ ನಾಚಿಕೆ ಅನ್ನಿಸತ್ತೆ. ಜೊತೆಗೆ ಇದು ನಿಂಗೆ ಮೊದಲ್ನೇ ಮದ್ವೆ, ನಂಗಾದ್ರೆ ಎರಡನೇದು. ಜೊತೆಗೆ ಎರಡು ಮಕ್ಳೂ ಇವೆ. ಕೇಳೋದು ನ್ಯಾಯಾನಾ ಅಂತ ಯೋಚ್ನೆ ಬರತ್ತೆ…. ಜೊತೆಗೆ…” “ನಮ್ಮಿಬ್ರ ಮಧ್ಯೆ ಕಂಪ್ಯಾಟಿಬಿಲಿಟಿ ಇರತ್ತೋ ಇಲ್ವೋಂತ ನಿಂಗೆ ಯೋಚ್ನೇನಾ” ನಕ್ಕಳು. “ಪ್ಲೀಸ್, ನನ್ನ ಹಂಗಿಸ್ಬೇಡ. ನಾನು ನಿನ್ನ ಅರ್ಥ ಮಾಡ್ಕೊಂಡಿದ್ರಲ್ಲೇ ತಪ್ಪಿತ್ತೇನೋ…ಅದಲ್ಲ ವಿಷ್ಯ….” ಎನ್ನುತ್ತಾ ಮತ್ತೆ ಹಿಂಜರಿದ. ಅವಳೂ ಮಾತಾಡದೆ ಅವನ ಮುಖವನ್ನೇ ನೋಡಿದಳು. “ನೋಡು ಶಾರಿ, ಈ ವಿಷ್ಯ ನಾನು ಅಪ್ಪ, ಅಮ್ಮಂಗೂ ಹೇಳಿಲ್ಲ. ಅದಕ್ಕೇ ಅವ್ರು ಈ ಮದ್ವೆ ವಿಷ್ಯ ಅತ್ತೆಮಾವನತ್ರ ತೆಗ್ದಿದಾರೆ. ವಿಷ್ಯ ಏನೂಂದ್ರೆ…ಮಕ್ಕಳು ಹುಟ್ಟುವಾಗ ಸ್ನೇಹಂಗೆ ತುಂಬಾ ಕಾಂಪ್ಲಿಕೇಶನ್ಸ್ ಇತ್ತು. ಐ.ವಿ.ಎಫ್. ಮುಖಾಂತರ ಪ್ರೆಗ್ನಿನ್ಸಿ ಆಗಿದ್ದು. ಅವಳಿಜವಳಿ ಮಕ್ಕಳು ಬೇರೆ. ಅವಳ ಗರ್ಭಕೋಶ ದುರ್ಬಲವಾಗಿದೆ ಇನ್ನೊಂದು ಮಗುವನ್ನು ನಿರೀಕ್ಷಿಸಬೇಡಿ ಅಂದ್ರು ಡಾಕ್ಟ್ರು. ಒಂದು ವರ್ಷ ಅವ್ಳು ತುಂಬಾ ಕಷ್ಟಪಟ್ಟಿದ್ಲು ಅದಕ್ಕೇ….” ಎನ್ನುತ್ತಾ ಮಾತು ನಿಲ್ಲಿಸಿ ತಲೆಕೆಳಗೆ ಹಾಕಿದ. ಸ್ವಲ್ಪ ಹೊತ್ತಿನ ನಂತರ “ಅದಕ್ಕೇನಾಯ್ತು?” ಕೇಳಿದಳು. “ಅದಕ್ಕೆ, ಹೇಗೂ ಈಗಾಗ್ಲೇ ಇಬ್ರು ಮಕ್ಳಿದಾರಲ್ಲಾ, ಇನ್ಯಾಕೆ ಮಕ್ಳು ಬೇಕೂಂತ ಅಪ್ಪ, ಅಮ್ಮ ಇಲ್ಲಿಗೆ ವಾಪಸ್ ಬಂದ್ಮೇಲೆ, ಮುಂದೆ ಮಕ್ಕಳಾಗದ ಹಾಗೆ ನಾನೇ ಆಪರೇಶನ್ ಮಾಡಿಸ್ಕೊಂಡ್ಬಿಟ್ಟೆ. ಈ ವಿಷಯ ಹೇಳ್ದೆ ಮೋಸ ಮಾಡಕ್ಕೆ ನಂಗಿಷ್ಟ ಇಲ್ಲ. ಇರೋ ವಿಷ್ಯ ಹೇಳಿದೀನಿ. ನಿಜವಾಗ್ಲೂ ನಿನ್ನನ್ನ ಚೆನ್ನಾಗಿ ನೋಡ್ಕೋತೀನಿ. ಯಾವ್ದುಕ್ಕೂ ಕೊರತೆ ಮಾಡಲ್ಲ. ಆದ್ರೆ ನೀನು ಅಮ್ಮ ಆಗಕ್ಕೆ ಸಾಧ್ಯ ಇಲ್ಲ ಅಷ್ಟೇ. ಯೋಚ್ನೆ ಮಾಡಿ ನೋಡು ಶಾರಿ. ನೀನು ಒಪ್ಕೊಂಡ್ರೆ ನಾನು ಪುಣ್ಯವಂತ ಅನ್ಕೋತೀನಿ. ಒಪ್ದಿದ್ರೂ ನಿನ್ನನ್ನ ತಪ್ಪು ತಿಳ್ಕೊಳಲ್ಲ; ಅರ್ಥ ಮಾಡ್ಕೊಳ್ತೀನಿ” ಎನ್ನುತ್ತಾ ಅವಳ ಮುಖವನ್ನೇ ನೋಡಿದ.
ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನೇ ಕುಳಿತರು. ನಿಧಾನವಾಗಿ ತಲೆಯೆತ್ತಿ ಶಾರದ “ಇರೋ ವಿಷ್ಯ ಮುಚ್ಚಿಡ್ದೇ ಹೇಳಿದ್ದಕ್ಕೆ ನಂಗೆ ನಿನ್ನ ಬಗ್ಗೆ ಖುಷಿಯಾಗ್ತಿದೆ. ನನ್ನ ವಿಷಯಾನೂ ಹೇಳ್ತೀನಿ ಕೇಳು. ನಿನ್ನ ಬಿಟ್ರೆ ಇನ್ಯಾರನ್ನೂ ನನ್ನ ಗಂಡನ ಜಾಗದಲ್ಲಿ ಇರಿಸೋಕೆ ಸಾಧ್ಯವಾಗ್ದೆ ನಾನು ಸಧ್ಯಕ್ಕೆ ನನ್ನ ಮದುವೆ ಮಾತೆತ್ಬೇಡಿ ಅಂದಿದ್ದೆ ನಮ್ಮಪ್ಪ ಅಮ್ಮನತ್ರ. ಮನೆಯೆಲ್ಲಾ ಮೌನದ ಗೂಡಾಗಿ ಒಂದು ಮೂಗುಬ್ಬಸ ಮನೇಲಿ. ಅದ್ರಿಂದ ಹೊರಬರಕ್ಕೇಂತ ಒಂದು ಬೇಬಿಸಿಟಿಂಗ್ ಶುರು ಮಾಡ್ದೆ. ನಿಧಾನವಾಗಿ ಅದ್ರಲ್ಲಿ ತೊಡಗಿಸಿಕೊಂಡು, ಈಗ ಅದು ಚೆನ್ನಾಗಿ ಸ್ಟೆಬಿಲೈಸ್ ಆಗಿದೆ. ನನ್ನ ಕೈಯಲ್ಲೂ ಸಾಕಷ್ಟು ದುಡ್ಡು ಓಡಾಡ್ತಿದೆ. ಆರ್ಥಿಕವಾಗಿ ಯಾರನ್ನೂ ಅವಲಂಬಿಸಿಲ್ಲ. ಮೂರುಜನಕ್ಕೆ ನಾನೇ ಸಂಬಳ ಕೊಡ್ತಿದೀನಿ. ಹಾಗಾಗಿ ಆರ್ಥಿಕ ಭದ್ರತೆಗಾಗಿ ನಾನು ಮದುವೆಯಾಗಬೇಕಿಲ್ಲ. ಆದರೆ ಏನು ಗೊತ್ತಾ, ಬೆಳಗ್ಗೆ ಮಕ್ಕಳು ಅಮ್ಮನ ತೋಳಿನಿಂದ ನನ್ನ ತೋಳಿಗೆ ಬರುವಾಗ ಒತ್ತಾಯಕ್ಕೆಂಬಂತೆ ಬರುತ್ವೆ.. ಆಮೇಲೆ ಇಡೀ ದಿನ ನನ್ನೊಂದಿಗೇ ಇದ್ದು ಆಡುತ್ತವೆ, ಊಟ ಮಾಡುತ್ತವೆ, ಕುಣಿಯುತ್ತವೆ. ನನ್ನ ಹಿಂದೆಮುಂದೆಯೇ ಓಡಾಡುತ್ತಿರುತ್ತವೆ. ಯಾವಮಕ್ಕಳೂ ನನ್ನನ್ನು ಅಮ್ಮಾ ಅಂತ ಕರ್ಯ ಲ್ಲ. ಅವರ ಅಪ್ಪಅಮ್ಮಂದ್ರೂ ಆಂಟಿ ಅಂತಾನೇ ಹೇಳ್ಕೊಡ್ತಾರೆ. ಸಂಜೆ ಅವರಮ್ಮನೋ, ಅಪ್ಪನೋ ಬಂದ ತಕ್ಷಣ ನನ್ನ ತೋಳಿನಿಂದ ಹಾರಿಕೊಂಡು ಅವರ ತೋಳೊಳಗೆ ಸೇರಿಕೊಳ್ಳುತ್ವೆ. ʻಆಂಟಿಗೆ ಟಾಟಾ ಹೇಳುʼಎಂದಾಗ ಬಲವಂತದಿಂದ ಎನ್ನುವ ಹಾಗೆ ತಿರುಗಿ ಟಾಟಾ ಮಾಡುತ್ವೆ. ಆಗ ಮನಸ್ಸಿಗೆ ಚುಳ್ ಅನ್ನಿಸತ್ತೆ. ಎಷ್ಟು ಮಾಡಿದ್ರೂ ಕಂಡವರ ಮಕ್ಕಳು ಕಂಡವರ ಮಕ್ಕಳೇ, ನಾನೇ ಬೇಕು ಅನ್ನಿಸೋದು ಹೆತ್ತಮಕ್ಕಳಿಗಷ್ಟೇನೋ ಏನೋ ಅಂತ. ಹಾಗಾಗಿ ಎಷ್ಟೋಸಲ ಒಂದು ಮಗುವಿಗೋಸ್ಕರವಾಗಿಯಾದರೂ ಮದುವೆಯಾಗಬೇಕು ಅನ್ನಿಸಿದ್ದಿದೆ. ಆದರೆ ಬೇರೆಯವರನ್ನು ನನ್ನ ಗಂಡ ಅಂತ ಮನಸ್ಸು ಒಪ್ಪುತ್ತಿಲ್ಲ…” ಎಂದವಳು ಏನೋ ಯೋಚನೆಗೆ ಬಿದ್ದವಳಂತೆ ಓಡಾಡುವ ಜನರನ್ನೇ ನೋಡುತ್ತಾ ಕುಳಿತಳು.
ಒಂದಷ್ಟು ಹೊತ್ತು ಸುಮ್ಮನೆ ಕುಳಿತ ಪ್ರಶಾಂತ “ನಿಧಾನವಾಗಿ ಯೋಚನೆ ಮಾಡಿ ನಿನ್ನ ನಿರ್ಧಾರ ತಿಳ್ಸು ಶಾರದಾ. ನೀನು ಏನೇ ನಿರ್ಧಾರ ತೊಗೊಂಡ್ರೂ ನಾನು ಗೌರವಿಸ್ತೀನಿ. ನಿಜ ಹೇಳ್ಬೇಕಂದ್ರೆ ಈಗ ನಿನ್ನನ್ನ ನೋಡೋವಾಗ ನಂಗೆ ಸಂತೋಷವಾಗ್ತಿದೆ. ನೀನು ಚೆನ್ನಾಗಿ ನಿನ್ನ ಜೀವನಾನ ರೂಪಿಸ್ಕೊಂಡಿದೀಯ. ಐ ರಿಯಲಿ ಅಡ್ಮೈರ್ ಯು” ಎಂದ. ಅವನೆಡೆಗೆ ತಿರುಗಿದವಳು “ಪ್ರಶಾಂತ, ನಂಗೀಗ ಮದುವೆಯ ಬಗ್ಗೆ ಅಂದಿನ ರೀತಿಯ ಪ್ರೀತಿಯ ಹುಚ್ಚುಕನಸುಗಳಿಲ್ಲ. ನನ್ನದಾಗಿ ಒಂದು ಮಗು ಬೇಕು ಅನ್ನಿಸ್ತಿತ್ತು ಅಷ್ಟೇ. ನಿನ್ನಿಬ್ರು ಮಕ್ಕಳನ್ನು ನಾನು ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಅವು ನನ್ನ ಮಕ್ಕಳಲ್ಲ ಅನ್ನೋದು ನಂಗೇ ತಿಳಿದಿರೋ ಸತ್ಯ. ಈ ಐದಾರುವರ್ಷಗಳಲ್ಲಿ ಅದನ್ನು ಚೆನ್ನಾಗಿ ಕಂಡುಕೊಂಡಿದ್ದೇನೆ. ನಿನ್ನ ಮಕ್ಕಳನ್ನ ಅತ್ತೆ, ಮಾವನ ಹತ್ರ ಬಿಟ್ಟುಹೋದ್ರೆ, ಬೇಕಾದ್ರೆ ನನ್ನ ಬೇಬಿಸಿಟಿಂಗಿನಲ್ಲಿ ಬೆಳಗಿಂದ ಸಂಜೆಯವರೆಗೆ ಅವುಗಳನ್ನ ಚೆನ್ನಾಗಿ ಜೋಪಾನಮಾಡಿ ನೋಡ್ಕೋತೀನಿ. ನಿನ್ನನ್ನ ಮದುವೆಯಾಗಿ ಅಮೇರಿಕಾಗೆ ಬಂದು ಅಲ್ಲಿ ನಿನ್ನಿಬ್ಬರು ಮಕ್ಕಳಿಗೆ ಮಾತ್ರಾ ದಾದಿಯಾಗಿ ನನ್ನ ಸ್ವಾತಂತ್ರ್ಯಾನ ಕಳ್ಕೊಳ್ಳೋದಕ್ಕಿಂತ ಇಲ್ಲಿ ಹತ್ತಾರು ಮಕ್ಕಳಿಗೆ ದಾದಿಯಾಗಿ ಸ್ವತಂತ್ರವಾಗಿರೋದೇ ಒಳ್ಳೇದೇನೋ ಅನ್ನಿಸ್ತಿದೆ. ನನ್ನ ಅಭಿಪ್ರಾಯ ನಿಂಗೆ ಸಮ್ಮತವಾದ್ರೆ ಹಾಗೆ ಮಾಡು. ನಂಕೈಲಿ ಅಷ್ಟೇ ಮಾಡಕ್ಕಾಗೋದು. ನೀನೂ ಯೋಚ್ನೆ ಮಾಡು. ಕತ್ತಲಾಗ್ತಿದೆ. ಇನ್ನು ಹೊರಡೋಣ್ವಾ” ಎನ್ನುತ್ತಾ ಎದ್ದಳು. ನಿಧಾನವಾಗಿ ಅವನೂ ಎದ್ದು ಹೊರಟ. ಪಾರ್ಕಿನ ಗೇಟಿನ ಬಳಿ ʻಬೈ…ʼ ಎನ್ನುತ್ತಾ ಅವಳು ಮನೆಯ ದಾರಿ ಹಿಡಿದಳು. ಒಂದಷ್ಟು ಹೊತ್ತು ಅವಳನ್ನೇ ನೋಡುತ್ತಾ ನಿಂತಿದ್ದ ಪ್ರಶಾಂತ ತನ್ನ ಮನೆಯ ದಾರಿ ಹಿಡಿದ.
ಟಿ. ಎಸ್. ಶ್ರವಣಕುಮಾರಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ಪ್ರಕಟಿಸಿದ್ದಕ್ಕೆ ಧನ್ಯವಾದಗಳು ಪೂರ್ಣಿಮಾ🙏😊
ಕೊನೆಯ ತನಕವೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮದುವೆಗೆ ಒಪ್ಪಿಕೊಳ್ಳುತ್ತಾಳೋ ಅಂತ ಅನಿಸಿತ್ತು. ಆದರೆ ಅನಿರೀಕ್ಷಿತ ತಿರುವು. ಉಸಿರು ಬಿಗಿಹಿಡಿದು ಓದಿಸಿತು.
ಚೆನ್ನಾಗಿದೆ.
ಮೊದಲಬಾರಿಗೆ ನಿರಾಕರಿಸಿ ಎರಡನೆಯ ಬಾರಿ ಪ್ರಸ್ತಾಪ ಮಾಡಿದ ಪ್ರಶಾಂತ ನಲ್ಲಿ ಇರುವ ಸ್ವಾರ್ಥ ಮತ್ತು ಪ್ರಾಮಾಣಿಕತೆ ಗಿಂತ ಶಾರದೆಗೆ ತಾಯ್ತನ ಮತ್ತು ಅಸ್ಮಿತೆ ಮುಖ್ಯವಾಗಿದ್ದು ಅವಳ ನಿರ್ಧಾರ ಕಥೆಯ ಯಶಸ್ಸಿನ ತಿರುವು. ಸಂವೇದನಾ ಶೀಲ ಕಥೆ ಕತೆಗಾರ್ತಿ ಶ್ರೀಮತಿ ಶ್ರವಣಕಮಾರಿಯವರು ಅಭಿನಂದನಾರ್ಹರು.
ಕಥೆ ಬಹಳ ಚನ್ನಾಗಿದೆ. ಶಾರದಾಳ ವ್ಯಕ್ತಿತ್ವ ಬಹಳ ಚನ್ನಾಗಿ ಮೂಡಿಬಂದಿದೆ. ಅವಳ ನಿರ್ಧಾರ ಸರಿಯಾದದ್ದೇ. ಸ್ವಂತ ಮಗುವನ್ನು ಪಡೆಯಲಾಗದಿದ್ದ ಮೇಲೆ ಕಾಣದ ದೂರದ ದೇಶದಲ್ಲಿ , ಹೊಸದಾಗಿ ಬದುಕು ಪ್ರಾರಂಭಿಸುಉದಕ್ಕಿಂತ, ಇದ್ದ ಊರಿನಲ್ಲಿ ಅಭ್ಯಾಸವಾದ ಕೆಲಸ ಮಾಡಿಕೊಂಡಿರುವುದೇ ಲೇಸು.
ನಿಮ್ಮ ಲೇಖನಿಯಿಂದ ಹೀಗೆ ಉತ್ತಮ ಕಥೆಗಳು ಬರುತ್ತಿರಲಿ.
ಕುಸುಮಾ, ತುಮಕೂರು