ಕಥಾಕ್ಷಿತಿಜ/ ಜೇಡನಬಲೆ – ಟಿ.ಎಸ್. ಶ್ರವಣ ಕುಮಾರಿ

`ಬಲೆ ಕಟ್ಟಕ್‌ ಬಿಡ್ದಂಗ್‌ ಅಲ್ಲಲ್ಲೇ ಝಾಡಿಸ್ಬಿಡ್ಬೇಕ. ಇಲ್ದಿದ್ರೆ ಯಾತ್ರಾಗಾನ ಬಿದ್ರೆ ವಿಸವಾಯ್ತದೆ’ ಅಂದು ಒಂದು ಕಡೇಂದ ಕಸ ಬಳ್ದು ಎತ್ಕೊಂಡೋಗಿ ಆಚೆ ಬಿಸಾಕ್‌ ಕೈತೊಕ್ಕೊಂಡ್‌ ಬಂದು ಓದಕ್ಕಂತ ಪುಸ್ಕ ತೆಕ್ಕೊಂಡು ಕುಂತ್ಳು… ಅದ್ರಾಗಿದ್‌ ಅಕ್ಸರ ಚಂದಾಗಿ ಕಾಣಕ್‌ ಸುರ್ವಾತು.

ತಾನು ಫ್ಯಾಕ್ಟರಿಗೆ ಒಲ್ಡೋ ಟೇಮಿಗಾಗ್ಲೇ ನೀರು ಉಯ್ಕೊಂಡು ಕಾಲೇಜಿಗೆ ಒಂಟಿದ್ದ ರಮ್ಯನ್ನ ನೋಡಿ ಗಂಗಮ್ಮಂಗೆ ಚೋಜಿಗ್ವಾಯ್ತು. ದಿನ್ವೂ ಈ ಟೇಮ್ಗಿನ್ನೂ ಆಸಿಗೇಲೇ ಮುದುರಿಕೊಂಡಿರ್ತಿದ್ದೋಳು ಇಂದೇನು ಇಷ್ಟು ಬ್ಯಾಗ ಅನ್ನಿಸಿ ಮಗ್ಳನ್ನ ಕೇಳಿದ್ಳು “ಅದ್ಯಾಕ ಇವತ್ತು ಇಸ್ಟು ಬೇಗ್ ಒಂಟಿದೀ. ದಿನಾ ಅತ್ತು ಗಂಟ್ಗಲ್ವಾ ನೀನು ಓಗಾದು?” “ಇವತ್ತು ಸ್ಪೆಷಲ್‌ ಕ್ಲಾಸ್‌ ಐತೆ ಕಣಮ್ಮೊ. ಬೇಗೋಗ್ಬೇಕು” ರಮ್ಯ ತಲೆಬಾಚ್ಕೋತ ಅಂದ್ಳು. “ಉಪ್ಪಿಟ್ಟದೆ. ತಿನ್ಕೊಂಡು ಓಗು. ನಾನು ಬತ್ತೀನಿ ಒತ್ತಾಯ್ತು. ಐದ್ನಿಮ್ಷ ತಡವಾದ್ರು ಸೂಪ್ರುವೈಸ್ರು ಒಂದು ಗಂಟೆ ಸಂಬ್ಳ ಮುರ್ಕೋತಾನೆ ಬಡ್ಡಿಮಗ” ಎನ್ನುತ್ತಾ ತನ್ನ ಚೀಲಾನ ತಗೊಂಡು, ಅದ್ರಲ್ಲಿ ಬೀಗದ್ಕೈ ಇದ್ಯಾಂತ ನೋಡ್ಕೊಂಡು ಹೊಂಟ್ಳು ಗಂಗಮ್ಮ. ತಟ್ಟೆಗಾಕ್ಕೊಂಡಿದ್‌ ಉಪ್ಪಿಟ್ಟು ಸೇರ್ನಿಲ್ಲ ರಮ್ಯಂಗೆ. ʻಇವತ್ತು ಎಂಗಾದ್ರೂ ಅವ್ನನ್ನ ತಪ್ಪುಸ್ಕೊಂಡು ಒಂಟೋಗ್ಬೇಕುʼ ಅಂದುಕೊಂಡವ್ಳು ಡಬ್ಬಿಗೆ ತಟ್ಟೇಲಿದ್ದ ಉಪ್ಪಿಟ್ಟನ್‌ ಸುರ್ಕೊಂಡು ಅದನ್ನ, ಮೊಬೈಲ್ನ ತನ್ನ ಚೀಲ್ದಲ್ಲಿ ತುರುಕ್ಕೊಂಡು, ಚಪ್ಲಿ ಮೆಟ್ಕೊಂಡು, ಮನೆ ಬೀಗಹಾಕಿ, ಒಂದ್ಸಲ ಎಳ್ದುನೋಡಿ ಒಂಟ್ಳು. ಮನೇಂದ ಒರಗ್‌ ಬಂದೋಳೆ ಒಮ್ಮೆ ಆಚೀಚೆ ಕಣ್ಣಾಡ್ಸಿ ಮನಸ್ನಲ್ಲೇ ʻಸಧ್ಯʼ ಅಂದ್ಕೋತ ಸರಸರ ಎಜ್ಜೆ ಆಕಿದ್ಳು.

ಇನ್ನೇನ್‌ ಕಾಲೇಜ್ಗೆ ಐದು ನಿಮ್ಷ ಅನ್ಕೊಳೋವಾಗ್ಲೇ ಅವ್ನು… ಆ ದರಿದ್ರ ಪಾಂಡು..ಎದುರಾಗೇ ಬಿಟ್ಟ. “ಏ ರಮ್ಮಿ… ನೀನು ಟೇಮ್‌ ತಪ್ಪಿಸಿಬಂದೆ ಅಂದ್ರೆ ನಾನು ಬಿಟ್ಬಿಟ್ಟೇನಾ. ಎಲ್ಲಿ ನಾ ಕೇಳಿದ್‌ ತಂದ್ಯಾ. ತತ್ತಾ ಇಲ್ಲಿ” ಸೈಕಲ್ನ ಅವಳೆದ್ರೇ ನಿಲ್ಲಿಸ್ಕೊಂಡು ಅಡ್ಡಹಾಕ್ದ. “ಯಾಕೋ ನನ್ನಿಂಗ್‌ ಗೋಳೊಯ್ಕೊಂತಿ. ನನ್ನತ್ರ ಎಲ್ಲಿಂದ ಬಂದಾದು ದುಡ್ಡು. ನಾನೇನು ದುಡೀತೀನಾ” ಅಳೋಮೊಖದಾಗೆ ಕೇಳಿದ್ಳು. “ನೋಡೇ ನಂಗದೆಲ್ಲಾ ಗೊತ್ತಿಲ್ಲ. ನನ್ನತ್ರ ಕತೆ ಏಳ್ಬೇಡ. ನೀನು ಯಂಗಾನ ತಕ್ಕೊಂಬಾ. ಸಾಲ ಮಾಡ್ತೀಯೋ, ಕದೀತೀಯೋ ಏನಾರ ಮಾಡ್ಕ. ನೀನು ತಂಕೊಡ್ನಿಲ್ವಾ… ನಾನ್‌ ಆ ಫೋಟೋ ತೋರ್ಸಿ ದುಡ್ಕೋತೀನಿ.” “ಥೂ ಬೇವರ್ಸಿಮಗ್ನೇ. ಯಾವ ಭೇತಾಳಾನೋ ನೀನು. ಇಂಗ್‌ ಕಾಡ್ತೀಯಲ್ಲ ನನ್ನ” ಎಷ್ಟು ತಡೆದ್ರೂ ಕಣ್ಣಲ್ಲಿ ನೀರ್‌ ಬಂತು ರಮ್ಯಂಗೆ. “ಏನಾರ ಬೈಕೋ.. ಎಷ್ಟಾರ ಅತ್ಕೋ.. ದುಡ್ಡು ತಂದ್‌ ಮಡ್ಗು ಅಷ್ಟೇಯಾ. ಓಗ್ಲಿ… ಅತ್ಸಾವ್ರ ಒಟ್ಗೇ ಕೊಡ್ಬೇಡ. ವಾರಕ್ಕೆ ಸಾವ್ರದಂಗೆ ಕೊಡು. ಒಂದ್ವಾರ ತಪ್ಪಿದ್ರೂ ಮುಂದುಲ್ವಾರ ಬಡ್ಡಿ ಇನ್ನೊಂದ್ಸಾವ್ರ ಕೊಡ್ಬೇಕಾಯ್ತದೆ. ತಿಳೀತಾ. ಈಗೋಗು. ನಾಳೆ ಒಂದ್ಸಾವ್ರ ತಕ್ಕಂಬಾ” ಅಂದು ಸೈಕಲ್‌ ತುಳ್ಕೊಂಡು ಒಂಟೋದ.

ತಡ್ದಿದ್ದ ಅಳು ಬಂದೇ ಬಿಡ್ತು. ಕಾಲೇಜಿಗೋಗೋ ಮನ್ಸಾಗ್ದೆ ರಮ್ಯ ಮನ್ಗೆ ವಾಪಸ್‌ ಒಂಟ್ಳು. ಮನೆ ಬಾಕ್ಲು ತಗೀತಿರ್ವಾಗ್ಲೇ ವಠಾರದ ಪಕ್ಕದ್ಮನೆ ರಂಗಮ್ಮ ಮಾರ್ಕೆಟ್‌ಗೆ ಹೂ ತರಕ್ಕೆ ಒಂಟಿದ್ದೋಳು “ಏನಾ ರಮ್ಯಾ ಕಾಲೇಜಿಲ್ವಾ ಎಲ್ಲಿಂದ ಬರ್‌ತೀದಿ.” ಅಂದ್ಳು. ಅವ್ಳಿಗ್‌ ಮೊಕ ತೋರಿಸ್ದೆ “ಇಲ್ಕಣತ್ತೆ. ಯಾಕಾ ತುಂಬಾ ತಲೆ ನೋಯಿಸ್ತಿತ್ತಾ. ಕುಂತ್ಕಣಕಾಗ್ಲಿಲ್ಲ. ಬಂದ್ಬಿಟ್ಟೆ” ಅಂತ್ಹೇಳ್ತಾ ಒಳೀಕ್ ಓದ್ಳು. “ಸ್ವಲ್ಪ್‌ ಕಾಫೀನಾದ್ರ ಮಾಡ್ಕೊಡ್ಳೇನ್‌ ಮೊಗಾ” ಅಂದ ರಂಗಮ್ಮಂಗೆ “ಬ್ಯಾಡತ್ತೆ. ಮಲಿಕ್ಕೊಂಡೆದ್ರೆ ಸರಿ ಓಯ್ತದೆ” ಅಂತೇಳಿ ಬಾಕ್ಲು ಆಕ್ಕೊಂಡ್ಳು. “ಏನ್‌ ಈಗಿನ್‌ ಮಕ್ಳೋ. ಚಿಕ್ಕಾ ಪುಟ್ಟಾ ವಯಸ್ಗೇ ತಲ್ನೋವು ಅಂತವೆ. ಕಾಲೇಜು, ಓದು ಅಂತ ಏನೇನೋ ಅಚ್ಕೊಂತವೆ. ಇನ್ನೇನಾದೀತು” ಅಂದ್ಕಳ್ತಾ ಬುಟ್ಟಿ ಇಡ್ಕೊಂಡು ರಂಗಮ್ಮ ಮಾರ್ಕೆಟ್ಟಿಗ್ ಒಂಟ್ಳು.

ಬಾಕ್ಲು ಆಕ್ಕೊಂಡೋಳೇ ಉಪ್ಪಿಟ್ಟಿನ್‌ ಡಬ್ಬೀನ್‌ ಅಡ್ಗೆ ಕಟ್ಟೇ ಮೇಲ್ಕುಕ್ಕಿ ಒಂದ್‌ ಚಾಪೆ ಆಸ್ಕೊಂಡು ಅದ್ರ ಮೇಲ್‌ ದಿಂಬನ್ನ್‌ ಎಳ್ದಾಕ್ಕೊಂಡು ಮೊಬೈಲ್‌ ಪಕ್ಕಕ್ಕಿಟ್ಕೊಂಡು ಮಲೀಕ್ಕೊಂಡ್ಳು. ಮೇಲೆ ಜಂತಿಯಿಂದ ಗ್ವಾಡೆತಂಕ ಜೇಡ ಬಲೆ ಕಟ್ಟಿತ್ತು. ಮನೆ ಧೂಳ್‌ ಝಾಡ್ಸಿ ಎಸ್ಟ್‌ ದಿನವಾಯ್ತು. ಅಮ್ಮಂಗೂ ಈಗೊಂದು ತಿಂಗ್ಳಿಂದ ದಸರ ಅಬ್ಬಾಂತ ಸನ್ವಾರ, ಭಾನ್ವಾರಾನೂ ಕೆಲಸ್ವಂತೆ. ಬರಾ ದುಡ್ಡು ಯಾಕ್‌ ಬಿಡ್ಬಕು ಅಂತ ಅವತ್ತೂ ಓಗ್ತಾಳೆ. ನಾನಾರೂ ಝಾಡಿಸ್ಬಕು ಈವಾರ… ಏನೋ ಎದ್ರಿಕೆ, ಸಂಕ್ಟ ಸುರುವಾಯ್ತು. ಪಕ್ದಲ್ಲಿದ್‌ ಮೊಬೈಲ್‌ ಮೆಸೇಜ್ಬಂದ್ಸದ್ದ್ಮಾಡ್ತು. ಮಾಲ ಕೇಳಿದ್ಳು “ಯಾಕೆ ಕಾಲೇಜಿಗ್‌ ಬರ್ಲಿಲ್ಲ?”. “ತಲ್ನೋವು” ಅಂತ ಬರ್ದು ಪಕ್ಕಕ್ಕೆ ತಿರುಕ್ಕೊಂಡ್ಳು ರಮ್ಯ. ʻನಾನೆಂಗೆ ಈ ಪಾಂಡು ಕೈಗೆ ಸಿಕ್ಕಂಡೆ……ʼ ಅಂತ ಬಿಕ್ಕ್ಬಿಕ್ಕಿ ಅತ್ಳು.

***

ಎಸ್ಸೆಲ್ಸೀಲಿ ಎಂಭತ್‌ ಪರ್ಸೆಂಟ್‌ ಬಂದಾಗ ರಾಜ್‌ಶೇಖರಪ್ಪ ಮೇಷ್ಟ್ರು ಏಳಿದ್ದೇನು- “ನೋಡವ್ವಾ ರಮ್ಯಾ.. ನೀನ್‌ ಚೆನ್ನಾಗಿ ಓತ್ತೀದಿ. ಇಲ್ಗೇ ನಿಲ್ಲಿಸ್‌ಬಿಟ್ಟು ಅಮ್ನಂಗೆ ಗಾರ್ಮೆಂಟ್‌ ಫ್ಯಾಕ್ಟ್ರಿ ಸೇರ್ಕೋಬ್ಯಾಡ. ಮುಂದೋದು. ಡಿಗ್ರಿ ಮಾಡ್ಕ. ನಿಮ್ಜನಕ್ಕೆ ಸರ್ಕಾರ್ದೋರು ಬೇಕಾದಷ್ಟು ಸವ್ಲತ್ತು ಕೊಟ್ಟವ್ರೆ. ಎಲ್ಲಾದ್ರೂ ಒಳ್ಳಿ ಕೆಲ್ಸ ಇಡ್ಕೊಂಡು, ನಿಮ್ಮಮ್ಮನ್ನೂ ನೋಡ್ಕಂಡು ಸುಖ್ವಾಗಿರು.” ಅಮ್ಮಂಗೂ ಅಂದಿದ್ರು “ಅವ್ಳುನ್‌ ಈಗ್ಲೇ ದುಡಿಯಕ್‌ ಆಕ್ಬೇಡಾ ತಾಯಿ. ನಿನ್‌ ಮಗ್ಳು ಜಾಣೆ. ಓದೋದ್ರ ಜೊತೀಗೆ ಆಡೋದ್ರಾಗೆ, ಬಾಷ್ಣ ಮಾಡೋದ್ರಾಗೆ, ಡ್ಯಾನ್ಸಾಗೆ ಬೇಕಾದಷ್ಟು ಪ್ರೈಜ್‌ ತೊಗೊಂಡೋಳೆ. ಅವ್ಳು ಮುಂದೋದ್ಲಿ. ಒಳ್ಳೀ ಕೆಲ್ಸ ಇಡ್ದು ನಿನ್ನೂ ಸಾಕ್ತಾಳೆ. ಆಮ್ಯಾಲ್‌ ಮದ್ವೀ ಯೋಶ್ನೆ ಮಾಡೋವಂತೆ” ಅಮ್ಮಂಗೆ ಖುಷ್ಯಾಗಿ “ಅವ್ಳು ಎಷ್ಟು ಓದಿದ್ರೂ ಓದ್ಲಿ ಸ್ವಾಮ್ಯಾರೆ. ನಾನಿಲ್ಲಾನ್ನಲ್ಲ. ಮದೀಗೇನ್‌ ಅವಸ್ರಾ ಏಳಿ. ನೀವೇಳ್ದಂಗೇ ಆಗ್ಲಿ” ಅಂತ್ಹೇಳಿ ಕೈಮುಗ್ದು ಬಂದ್ಳು. ಅಮ್ಮಂಗ್ ಅದೆಸ್ಟ್ ಖುಸೀ ಆಗಿತ್ತು.‌ ಮನೆಗ್‌ ಬಂದೋಳೆ ತಬ್ಕಂಡು “ರಮ್ಮಿ, ನೀನ್ ಎಷ್ಟೊರ್ಸ ಬೇಕಾದ್ರೂ ಓದವ್ವಾ. ನೀನೋದೋಷ್ಟು ಓದಿಸ್ತೀನ್‌ ಕನವ್ವಾ”‌ ಅಂತ ಖುಸ್ಯಾಗಿ ಕಣ್ಣೀರಿಟ್ಟಿದ್ಳು.

ಕಾಲೇಜ್‌ ಸೇರ್ವಾಗ ಅದೆಸ್ಟ್‌ ಖುಸಿ ಇತ್ತು. ನಮ್‌ ನೆಂಟ್ರಿಸ್ಟ್ರ ಪೈಕಿ ಕಾಲೇಜು ಮೆಟ್ಳು ಅತ್ತಿತ್ತು ನಾನೇ ಪಸ್ಟು. ಚೆನ್ನಾಗ್‌ ಓದಿ ಕೆಲ್ಸ ಇಡ್ದು ಅಮ್ಮನ್ನ ಸೆಂದಾಗಿ ನೋಡ್ಕೋಬೇಕು ಅಂತ ಆಸೆ ಪಟ್ಟಿದ್ದೋ. ಇವತ್ತೇನಾಯ್ತು…. ಬಿಕ್ಕಿಬಿಕ್ಕಿ ಅಳು ಬಂತು. ‌ʻಅವತ್ತು ಕಾಲೇಜ್ನ ಪಂಕ್ಸನ್‌ನಲ್ಲಿ ಡ್ಯಾನ್ಸ್‌ ಮಾಡಾದು ನಂಗ್ಬೇಕಿತ್ತಾʼ ಅಂತ ನೂರ್‌ನೇ ಸಲ ಬೈಕೊಂಡ್ಳು. ಚೆಂದಾಗಿ ಮಾಡ್ತಿದ್ದೆ ಅಂತ ಎರ್ಡೆರ್ಡು ಡ್ಯಾನ್ಸ್‌ನಾಗ ಸೇರಿಸ್ಕೊಂಡ್ರು. ಒಂದುಕ್‌ ರೇಸ್ಮೆಸೀರೆ, ಇನ್ನೊಂದುಕ್‌ ಚೂಡೀದಾರ. ಆ ಕ್ಷಣ ನೆಪ್ಪಾಗಿ ಮತ್‌ಮತ್‌ ಅಳು ಬಂತು. ಒಂದು ಡ್ಯಾನ್ಸ್‌ ಚೆನ್ನಾಗಿ ಬಂದಿತ್ತಾ ಚಪ್ಪಾಳೇನೋ ಚಪ್ಪಾಳೆ. ಇನ್ನೊಂದ್‌ ನಾಟ್ಕ ಆದ್ಮೇಲೆ ಮತ್ತೆ ಡ್ಯಾನ್ಸ್.‌ ಆ ಇನ್ನೊಂದ್‌ ಡಾನ್ಸಲ್ಲಿರೋರೆಲ್ಲಾ ಆಗ್ಲೆ ರೆಡಿಯಾಗಿದ್ರಾ… “ನೀನೂ ಬೇಗ ರೆಡಿಯಾಗ್ಬಾರೆ” ಅಂತ ಮಾಲ ಗ್ರೀನ್‌ರೂಮ್ಗೆ ಎಳ್ಕೊಂಡು ಓದ್ಳು. “ಮಕ ತೊಳ್ಕೊಂಡ್‌ ಬಟ್ಟೆ ಬದ್ಲಾಯಿಸ್ಕೊಂಡ್‌ ಕರಿ. ಆಮೇಲೆ ಬೇರೆ ಮೇಕಪ್‌ ಮಾಡಾಣ” ಅಂತ್ಹೇಳಿ ಬಾಕ್ಲೆಳ್ಕೊಂಡ್ಳು. ಉಟ್ಟಿದ್‌ ಸೀರೆಬಿಚ್ಚಿ, ಚೂಡೀದಾರ ಆಕ್ಕೊಳ್ಳೋವಾಗ ತಣ್ಣಗಾದ್‌ ಹಾಗಾಗಿ ತಿರುಗಿ ನೋಡ್ದ್ರೆ, ಕಿಟಕಿ ಬಾಕ್ಲು ಗಾಳಿಗೇನೋ.. ತೆಕ್ಕೊಂಡದೆ. ಆಗೇ ಹೋಗಿ ಬಾಕ್ಲು ಹಾಕೋವಾಗ ಆಚೆಕಡೀಕೆ ಯಾರೋ ನಿಂತಿದ್‌ ಹಾಗನ್ನುಸ್ತು. ಕತ್ಲಲ್ಲಿ ಏನೂ ಸರ್ಯಾಗಿ ಕಾಣ್ನಿಲ್ಲ. ʻಫಳಕ್‌ʼ ಅಂತ ಒಂಚಣ ಬೆಳ್ಕಾಯ್ತು. ಏನೂ ಅರ್ಥವಾಗ್ಲಿಲ್ಲ. “ಇನ್ನೂ ಆಗ್ಲಿಲ್ವೇನೇ” ಹೊರ್ಗಡೆ ಮಾಲಾ ಬಾಕ್ಲು ತಟ್ತಿದ್ಳು. ಸರಸರಾಂತ ಲಾಡಿ ಕಟ್ಟಿ ಸಲ್ವಾರ ತೂರಿಸ್ಕೊಂಡು ಬಾಕ್ಲು ತೆಗ್ದೆ. ವಳೀಕ್‌ ಬಂದೋಳೆ ತಲೆಕೂದ್ಲ ಬಿಡ್ಸಿ ಗಂಟಾಕಿ, ಮಕಕ್ಕೆ ಮೇಕಪ್‌ ಬಳ್ದು ರೆಡಿ ಮಾಡಿ “ನಡಿನಡಿ ಇನ್ನೆರ್ಡೇ ನಿಮ್ಸ, ನಾವು ಸ್ಟೇಜ್ಮೇಲೆ ಇರ್ಬೇಕು” ಅಂತ ಎಳ್ಕೊಂಡೇ ಒಂಟ್ಳು. ಯೋಸ್ನೆ ಮಾಡಕ್ಕೂ ಅವ್ಕಾಸ ಇಲ್ದೆ ಸ್ಟೇಜ್ಮೇಲೆ ಹೋಗಿದ್ದಾಯ್ತು. ಪೂರ್ತಿ ಮನ್ಸಿಟ್ಟು ಮಾಡಕ್ಕಾಗ್ಲಿಲ್ಲ. ಬೇರ್ಯಾರಿಗ್‌ ಅರ್ಥ್ವಾಯ್ತೋ ಇಲ್ವೋ, ಮಾಲ ವಾಪಸ್‌ ಒರಡ್ವಾಗ ಕೇಳಿದ್ಳು “ಏನಾಯ್ತೆ? ಪ್ರಾಕ್ಟೀಸ್‌ ಮಾಡ್ವಾಗ ಅಸ್ಟು ಚೆಂದಾಗಿ ಮಾಡ್ತಿದ್ದೋಳು ಇವತ್ತು ಮಾಡೋವಾಗ ಎಲ್ಡೆಲ್ಡ್ಸಲ ತಪ್ದೆ. ಯಾಕ್ಮಂಕಾಗಿದೀಯ” ಏನ್‌ ಯೋಳಕ್ಕೂ ತೋಚ್ದೆ “ಏನಿಲ್ಲ ಕಣೆ ತಲ್ನೋವು” ಅಂದಿದ್ದಾಯ್ತು.

ಅವತ್‌ ರಾತ್ರಿ ಬಾಳ ಒತ್ತು ನಿದ್ದೆ ಬರ್ನಿಲ್ಲ. ಎಲ್ಲೋ ಮಂಪ್ರು ಬಂದಾಗ ಬೆಳ್ಕು ಒಂಚಣ ʻಫಳಕ್ʼ ಅಂದಂಗಾಗಿ ಎಚ್ಚರಾಗ್ತಿತ್ತು. ಬೆಳ್ಗೆ ಅಮ್ಮ “ಅದೇನೆ ರಾತ್ರಿ ನಿದ್ದೇನಾಗ ಬೆಳ್ಕುಬೆಳ್ಕು ಅಂತಿದ್ದೆ” ಅಂತಂದ್ಳು. “ಯಾನೋ ನಂಗೊತ್ತಿಲ್ಲ” ಅಂತ ಅಮ್ಮನ್‌ ಕಣ್‌ ತಪ್ಸಿ ನೀರು ಉಯ್ಕೊಳಕ್‌ ಓದೆ. ಬೆಳ್ಗೆ ಕಾಲೇಜಿಗೋದ್ಮೇಲೂ ಯಾಕೋ ಖುಸಿಯೇ ಇಲ್ಲ. ಒಂದ್‌ ಪಾಠ್ವೂ ತಲೆಗೋಗ್ನಿಲ್ಲ. “ಉಸಾರಿಲ್ವೇನೇ” ಅಂದ ಮಾಲಂಗೆ “ಇನ್ನೂ ತಲೆ ನೋಯಿಸ್ತಾನೆ ಇದೆ” ಅಂದಿದ್ದಾಯ್ತು. “ಓಗ್ಲಿ ಮನೆಗೋಗಿ ಮಲಿಕ್ಕೋ” ಅಂದ್ಳು. ಇನ್ನೂ ಒಂದ್‌ ಪಿರೀಡ್‌ ಇದೆ ಅನ್ನೋವಾಗ್ಲೇ ಎದ್ದು ಮನೆಗ್‌ ಒಂಟ್ರೆ ಯಾರೋ ಇಂದೆ ಬರ್ತಿರೋ ಆಗನ್ನುಸ್ತು. ಯಾರೂ ಕಾಣ್ನಿಲ್ಲ. ಇನ್ನೊಂದ್‌ ಸ್ವಲೂಪ ಮುಂದೋಗಿ ಪಾರ್ಕ್‌ ಅತ್ರ ಬಂದಾಗ ಯಾರೋ ಕರ್ದಂಗಾಯ್ತು. ತಿರ್ಗಿ ನೋಡ್ದ್ರೆ ಯಾರೋ ಉಡ್ಗ ಸೈಕಲ್‌ ಇಡ್ಕೊಂಡು ನಿಂತಿದ್ದ. “ನಾನೆ ಕರ್ದದ್ದು” ಅಂದ. “ನೀನ್ಯಾರು? ಯಾಕ್ಕರ್ದೆ” ಅಂದ್ರೆ ನಕ್ಕೊಂಡು “ನಾನ್ಯಾರಾ… ಪಾಂಡೂಂತ.. ನಿನ್ನೆ ಕಿಟ್ಕೀ ಆಚೆ ನಿಂತಿದ್ನಲ್ವಾ ಅವ್ನು” ಅಂತ್ಹೇಳಿ ಮೇಲಿಂದ ಕೆಳಗ್‌ ತಂಕ ನೋಡ್ದ. ಭಯ್ದಿಂದ ʻನಾನು ಬಟ್ಟೇನೆ ಆಕ್ಕೊಂಡಿಲ್ವೇನೋʼ ಅನ್ನಿಸ್ಬಿಡ್ತು. ಧೈರ್ಯ ತಂಕೊಂಡು “ಥೂ… ನಾಚಿಕ್ಕೆಟ್ಟೋನೆ. ಅಲ್ನಿಂತು ಏನ್ಮಾಡ್ತಿದ್ಯೋ” ಅಂದ್ರೆ ಮತ್‌ ನಕ್ಕೊಂಡು “ನಿನ್‌ ಫೋಟೋ ತೆಕ್ಕೊಂತಿದ್ದೆ ಕಣೆ” ಅಂದ. “ಯಾಕೆ, ಯಾಕ್‌ ತೆಕ್ಕೊಂಡೆ. ನೀನ್‌ ಯಾರು?” ಸಿಟ್ಟು, ಹೆದ್ರಿಕೆ ಎಲ್ಲಾ ಒಟ್ಟಗ್ಸೇರ್ಸಿ ಕೇಳಿದ್ರೆ “ನಾನ್ಯಾರಾದ್ರೆ ಏನಮ್ಮಿ. ನಿನ್‌ ಫೋಟೋ ನಂಗೆ ಬಂಗಾರದ್‌ ಮೊಟ್ಟೆ ಇಡೋ ಕೋಳಿ. ನೋಡು ಈಗ್‌ ಏಳ್ತೀನಿ. ನೀನ್‌ ನಾಳೆ ನಂಗ್‌ ಒಂದ್ಸಾವರ್‌ ರುಪಾಯಿ ತಂಕೊಡ್ಲಿಲ್ಲಾ ಅಂದ್ರೆ ಆ ಫೋಟೋನ ಇಂಟರ್ನೆಟ್ನಲ್ಲಿ ಬಿಡ್ತೀನಿ. ನಂಗೆ ಬೇಕಾದಷ್ಟು ಕಮಾಯಾಗ್ತದೆ” ಅಂದ್ನಲ್ಲ. ಬೆಪ್ಪು ಇಡಿದಾಗೆ ಅವ್ನನ್ನೇ ನೋಡ್ತಿದ್ರೆ “ಕೇಳಿಸ್ತಾ ಕೋಳಿ. ನಾಳೆ ಒಂದ್ಸಾವ್ರ.. ಇಷ್ಟೊತ್ಗೆ.. ಇದೇ ಜಾಗ್ದಲ್ಲಿ.. ಬರ್ನಿಲ್ವೋ ಇಂಟರ್ನೆಟ್ಟಲ್ಲಿ ನಿನ್‌ ಫೋಟೋ..” ಅಂತ್ಹೇಳಿ ಬೇಗ್‌ ಬೇಗ್‌ ಸೈಕಲ್‌ ತುಳ್ಕೊಂಡುಹೋದ.

ಏನ್ಮಾಡಕ್ಕೂ ತೋಚ್ದೆ ಮನೆಗ್‌ ಬಂದ್ರೆ ಅವತ್ತು ಅಪರೂಪಕ್ಕೆ ಬೇಗ್‌ ಬಂದಿದಿದ್ದ ಅಮ್ಮ “ಅದ್ಯಾಕ್‌ ಅಂಗೆ ಬೆದರ್ಕೊಂಡವ್ಳಂಗಿದೀಯೆ. ಏನಾಯ್ತು?” ಅಂದ್ಳು. “ಏನಿಲ್ಲ ತಲ್ನೋವು ಇನ್ನೂ ಬಿಟ್ಟಿಲ್ಲ.‌ ಸ್ವಲ್ಪೊತ್ತು ಮಲ್ಕತೀನಿ” ಅಂದು ಚಾಪೆ ಬಿಡ್ಸಿದ್ರೆ “ಯಾಕೋ ನೆನ್ನೀಂದ ಮಂಕಾಗಿದೀಯೆ. ಡ್ಯಾನ್ಸು ಪಾನ್ಸು ಅಂತ ಕುಣ್ದಾಗ ಯಾರ ಕಣ್ತಗುಲ್ತೋ. ನೀವಾಳಿಸ್ತೀನ್‌ ತಡಿ” ಅಂದು ಮೂರ್ಸಂಜೆ ಒತ್ತಲ್ಲಿ ಉಪ್ಪು ಮೆಣ್ಸಿನ್ಕಾಯಿ ನೀವಾಳ್ಸಿ ಎಸ್ದು “ಎಲ್ಲ ಸರಿ ಓಯ್ತದೆ” ಅಂದ್ಳು. “ಸರಿ ಓಗೋದು ಎಂಗೆ. ನಾಳೀಕೆ ಸಾವಿರ್ರುಪಾಯಿ ಎಲ್ಲಿಂದ ತರ್ಲಿ” ಅನ್ನೋ ಚಿಂತೇಲೆ ಊಟ್ವೂ ಸೇರ್ನಿಲ್ಲ; ನಿದ್ಯೂ ಬರ್ನಿಲ್ಲ. ಬೆಳಿಗ್ಗೆ ಏಳ್ವಾಗ ಒಂದುಪಾಯ ಒಳೀತು. “ಅಮ್ಮಾ ಮೊನ್ನೆ ಡ್ಯಾನ್ಸ್‌ ಮಾಡಿದ್ನೇ. ಅದ್ರಲ್ ಒಂದೊಂದು ಡ್ಯಾನ್ಸಿಗೂ ಆಕ್ಕೊಂಡ್‌ ಡ್ರೆಸ್ಗೂ, ಮೇಕಪ್ಗೂ ಐನೂರು ಐನೂರು ರೂಪಾಯಿ ಕೊಡ್ಬೇಕಂತೆ. ನಿನ್ನೇನಾಗ ಏಳಕ್ಕೆ ಮರ್ತೋದ್ನಿ. ದುಡ್ಕೊಡು. ಇವತ್ಕೊಡ್ಬೇಕು” ಅಂದ್ರೆ ಅಮ್ಮ “ಡ್ಯಾನ್ಸಿಗ್‌ ಸೇರ್ಕೊಳೊ ಮುಂದ್‌ ನೀನು ಅಂಗಂತ ಏಳ್ಳಿಲ್ಲ. ಅಂಗಂದಿದ್ರೆ ನಾನು ಬ್ಯಾಡಾಂತಿದ್ದೆ” ಅಂದ್ಳು. “ನಂಗೇನ್ಗೊತ್ತು. ನಿನ್ನೆ ಕೇಳ್ದಾಗ್ಲೇ ಗೊತ್ತಾದ್ದು. ಇವತ್ತೆಲ್ರೂ ತಂದಿರ್ತಾರೆ. ನಾನೊಬ್ಳು ಕೊಡ್ದಿದ್ರೆ ಮರ್ವಾದೆ ಓಗತ್ತೆ” ಅಂದಿದ್ದಕ್ಕೆ “ನೋಡು ರಮ್ಮಿಇದೇ ಮೊದ್ಲು, ಇದೇ ಕಡೇ. ದುಡ್‌ ಕೊಟ್ಟು ಮಾಡೋದೆಲ್ಲಾ ನಮ್ಮಂತವ್ರಿಗಲ್ಲ. ದೇವ್ರು ಹುಂಡ್ಯಾಗಿನ್‌ ದುಡ್‌ ತೆಕ್ಕೊಟ್ಟಿರ್ತಿನಿ. ಬಡ್ಡೀ ಸಮೇತ ಸಂಬ್ಳ ಬಂದ್ಮೇಲೆ ವಾಪಸ್ಸಾಕ್ಬೇಕು. ಇನ್ಮುಂದೆ ಇಂತವಕ್ಸೇರ್ಕೋಬ್ಯಾಡ” ಅಂತ್ಹೇಳಿ ದೇವ್ರ ದುಡ್ಡು ತೆಕ್ಕೊಟ್ಳು. ʻಜೀವನ್ದಲ್ಲಿ ಇನ್ನೊಂದಪಾ ನಾನು ಎಂದಾದ್ರೂ ಮಾಡೇನಾ…!ʼ ರಮ್ಯಾ ಮನಸ್ನಲ್ಲನ್ಕಂಡ್ಳು.

***

“ಇದು ಜಾಣ ಕೋಳಿ ಥರಾ..” ಅಂತ ನಗ್ತಾ ದುಡ್ಡಿಸ್ಕೊಂಡು ಓದೋನು ಮೂರ್ನಾಲ್ಕು ಜಿನ ಕಾಣ್ನಿಲ್ಲ. ಸಧ್ಯ! ತೊಲುಗ್ತು ಪಿಶಾಚಿ ಅಂದ್ಕೊಂಡು ಅದನ್ನ ಮರೀತಿರ್ವಾಗ್ಲೇ ಮತ್ತೆ ಎದುರಿಗ್ಬಂದೋನು “ಕೋಳಿ ಮರಿ ನಾಳೇಕ್‌ ಒಂದ್ಸಾವ್ರ ತತ್ತಾ” ಅಂದ. ಮೈಯೆಲ್ಲ ಉರ್ದು “ನಾನೇನ್‌ ದುಡ್ಡಿನ್‌ ಗಿಡ ಆಕಿದ್ದೇನಾ ನೀ ಕೇಳ್ದಾಗೆಲ್ಲ ತಂದ್ಕೊಡಾಕೆ? ಓಗತ್ತಾ..” ಅಂತ ರೇಗಿದ್ರೆ “ನಾನು ಕೇಳ್ದಾಗೆಲ್ಲಾ ತಂದ್ಕೊಡ್ತಿರ್ಬೇಕಮ್ಮೀ.. ಇಲ್ಲಾಂದ್ರೆ ಗೊತ್ತೈತಲ್ಲಾ… ನಿನ್‌ ಬೆತ್ಲೆ ಮೈಯಾ ಇಡೀ ಜಗತ್ತೇ ನೋಡ್ತದೆ.. ಬೇಕಾ ನಿಂಗದು?” ಕೇಡಿ ಥರ ನಕ್ಕ. ಏನೂ ಮಾತಾಡ್ದೆ ಮುಂದೋಗ್ತಿದ್ರೆ ನಾಳೆ ಇದೇ ಜಾಗ… ಕಾಯ್ತಿರ್ತೀನಿ… ಅಂತ ಕೂಕ್ಕೊಂಡು ಪಕ್ಕದಿಂದ್ಲೇ ಮೈಮೇಲೆ ಬೀಳೋನಂಗೆ ಸೈಕಲ್‌ ತುಳ್ಕೊಂಡು ಅಷ್ಟು ದೂರ ಓಗಿ ಹಿಂತಿರ್ಗಿ “ನೆಪ್ಪಾಗಿಟ್ಕೋ ಕೋಳಿ.. ನಾಳಿಕೆ ಸಾವಿರ್ರೂಪಾಯಿ..” ಅಂತ ಕೇಡಿ ತರ ನಕ್ಕೊಂಡು ಒಂಟೋದ. ನಿಂತಿದ್ ಜಾಗ್ದಲ್ಲೇ ಬಿದ್ದೋಗೋಂಗಾದೋಳು ಎಲ್ಡು ನಿಮ್ಸ ನಿಂತು ದಾರಿ ಪಕ್ದಲ್ಲಿರೋ ಅನುಮಪ್ಪನ್‌ ಗುಡೀಗ್‌ ಓಗಿ ಕಟ್ಟೆ ಮ್ಯಾಲೆ ಕುಸ್ದೆ. ಏನ್ಮಾಡಾಕೂ ತೋಚ್ವಲ್ದು. ಒಂದಟ್ಟೋತು ಅಲ್ಲೇ ಕುಂತಿದ್ದು ʻಅನುಮಪ್ಪ ನೀನೇ ದಾರಿ ತೋರ್ಸುʼ ಅಂತ ಬೇಡ್ಕೊಂಡು  ಆಮ್ಯಾಕೆ ಮನೆಕಡೆ ಒಂಟೆ. ಆಟೋತ್ಕಾಗ್ಲೇ ಬಂದಿದ್‌ ಅಮ್ಮ “ಯಾಕ್ಕಣಮ್ಮಿ ಇವತ್‌ ಲೇಟು” ಅಂದೋಳು ನನ್ನ ಮೊಕ ನೋಡ್ದವ್ಳೇ ಬೆಚ್ಬಿದ್ಳು. “ಏನಾಯ್ತಾ ನಿಂಗೆ, ಮೊಕ್ವೆಲ್ಲಾ ದದ್ದರ್ಸಿಕೊಂಡಂಗದೆ” ಎಂದೋಳೆ ಅತ್ರ ಬಂದು ಅಣೆ ಮ್ಯಾಲ್‌ ಕೈಯಿಕ್ಕಿ, “ಅಣೇ ಎಲ್ಲಾ ಕಾದ್ಕಾವಲಿ ಅಂಗಾಗದಲ್ಲ ರಮ್ಮಿ. ಸೆಟ್ಟಿ ದಾಕ್ಟ್ರತ್ರ ಓಗ್ಬರಾಣ ಬಾರವ್ವಾ” ಅಂದ್ಳು. “ಇಲ್ಲವ್ವಾ ಮಾಲ ಯಾವ್ದೋ ಮಾತ್ರೆ ಕೊಟ್ಟವ್ಳೆ. ತಗೊಂಡೀವ್ನಿ. ನಾಳಿಕ್‌ ನೋಡಾನ. ಬಿಡ್ನಿಲ್ಲಾದ್ರೆ ಬೆಳಿಗ್ಗೆ ನಾನೇ ಓಯ್ತೀನಿ” ಅಂತೇಳಿ ಮಕ ತೊಳ್ಕೊಂಡು ಬಂದು ವೋದೋ ತರ ಪುಸ್ಕ ಇಡ್ಕೊಂಡ್ರೆ ಒಂದಕ್ಸರಾನಾದ್ರೂ ತಲೆಗೋಗ್ಬೇಕಲ್ಲ.. ನಾಳೀಕೆ ಒಂದ್ಸಾವ್ರ ಎಲ್ಲಿಂದ ತರಾದು.. ತಲ್ಕೆಟ್‌ ಓಯ್ತು. “ಜ್ವರ ಬಂದದೆ ಅಂತ ಬಿಸಿ ಮೆಣ್ಸಿನ್‌ ಸಾರು ಮಾಡಿದೀನ್‌ ಕಣ್ಮಗಾ. ಉಣ್ಣಾಕಿಕ್ತೀನಿ ಬಾ” ಅಂತ ಅಮ್ಮ ಕರ್ದ ತಕ್ಸ್ನ ಓಗಿ ಸೇರ್ದಷ್ಟು ಉಂಡ್ಬುಟ್ಟು ಮಲೀಕಂಡಿದ್ದಾಯ್ತು. ರಾತ್ರೀನೆಲ್ಲಾ ನಿದ್ದಿಲ್ಲ. ಬೆಳ್ಗಾಗೋ ಒತ್ಗೆ ದಿಟ್ವಾಗ್ಲೂ ಜ್ವರ ಬಂದಿತ್ತು. ಅಮ್ಮ ತಾನೇ ಓಗಿ ಮೆಡಿಕಲ್‌ ಸಾಪಿಂದ ಮಾತ್ರೆ ತಂದ್ಕೊಟ್ಟು. “ಈಗ ತಿಂಡಿ ತಿಂದು ಇದ ತಗಂಡಿರು. ಮದ್ದಿನಕ್ಕೆ ಊಟ್ವಾದ್ಮೇಲ್‌ ಇನ್ನೊಂದು ತಗಾ. ಕಾಲೇಜ್ಗೆ ಓಗ್ಬೇಡ. ವಾಸಿಯಾಗ್ದಿದ್ರೆ ಚಂಜೇಗೆ ಸೆಟ್ಟಿ ಡಾಕ್ಟ್ರ ತಾವ ಓಗೋಣ” ಅಂತೇಳಿ ಫಾಕ್ಟ್ರಿಗೆ ಓದ್ಲು. ʻದೇವ್ರು ಉಂಡೀನಿಂದ ಇನ್ನೊಂದ್ಸಾವ್ರ ತಕ್ಕೊಂಡ್ರೆ ಎಂಗೆ… ಸ್ಕಾಲರ್ಸಿಪ್ಪು ಬಂದಾಗ ಅದ್ರೊಳೀಕೆ ಆಕಿದ್ರಾಯ್ತು…ʼ ಅಂತ ಏಚ್ನೆ ಬಂದಿದ್ದೆ ಎದ್ದು ʻತಪ್ಪನ್ನ ಕ್ಷಮ್ಸಪ್ಪʼ ಅಂತ ದೇವ್ರಿಗ್‌ ಮುಕ್ಕಿ ಡಬ್ಬದಿಂದ ಸಾವ್ರ ರೂಪಾಯಿ ತೆಗ್ದಿಟ್ಕೊಂಡ್ನಾ. ಚಂಜೇ ಒತ್ಗೆ ಜ್ವರ ಇಳ್ದಿತ್ತು. ಮಾರ್ನೆ ದಿನ ಕಾಲೇಜಿಗೋಗಿದ್ದಾಯ್ತು. ಬೆಳ್‌ಬೆಳ್ಗೇನೆ ಎದ್ರುಗ್‌ ಸಿಕ್ಬೇಕಾ ಸನಿ. “ಯಾಕ್‌ ಬಂದಿರ್ನಿಲ್ಲ ನಿನ್ನೆ ಕಾಲೇಜ್ಗೆ. ತಂದಿದ್ಯಾ ತಾನೆ. ತತ್ತಾ ಇಲ್ಲಿ” ಮೊಕದ್‌ ಮುಂದೇ ಕೈಯೊಡ್ದ. ನೋಟುಗಳ್ನ ಒರಕ್‌ ತೆಗೀತಿದ್ದಂಗೆ ಕಸ್ಕೊಂಡು “ಇನ್ಮ್ಯಾಕೆ ಕೇಳಿದ್ದಿನ ತಂದ್ಕೊಡ್ಬೇಕು ತಿಳೀತಾ. ಇಲ್ಲಾಂದ್ರೆ ಗೊತ್ತಿದ್ಯಲ್ಲಾ.. ಕೇಡಿ ಅಂಗೆ ನಗ್ತಾ ಕೆನ್ನೆ ತಟ್ಟಿ ಸೈಕಲ್‌ ಜೋರಾಗಿ ಬಿಟ್ಕಂಡು ಓದ. ಗಸಗಸ ಕೆನ್ನೆ ಉಜ್ಕಂಡು ʻಇದು ಇನ್ನೂ ಮುಗೀನಿಲ್ವಾ…ʼ ಭಯ್ವಾಯ್ತು. ಕಾಲೇಜಲ್ಲಿ ಯಾವ ಪಾಠ್ವೂ ಕಿವೀಗ್‌ ಬೀಳ್ನಿಲ್ಲ. ಮುಂದಿನ್ವಾರ್ವೆ ಸಾಲ ಕೊಟ್ಟೋನಾಗೆ ಎದ್ರುಗ್‌ ಬಂದ. “ಈ ಸಲ ಎಲ್ಡು ಸಾವ್ರ ರೂಪಾಯಿ ಬೇಕ್ಕಣಮ್ಮಿ. ಏನು ಕೇಳ್ತಾ… ನಾಳೆ ಸಾಯಂಕಾಲ್ಕೆ ಸಿಕ್ತೀನಿ” ಅಂದ. ಬೆಪ್ಪಾಗಿ ಅವನ್ನೇ ನೋಡ್ದ್ರೆ “ಜಾಣ ಮರಿ… ಮುದ್ದು ಕೋಳಿ… ನಾಳೆ ತಗಂಬಾ” ಅಂತ ಕೆನ್ನೆ ತಟ್ಟಿ ಒಂಟ.

***

ʻಅಯ್ಯೋ ಗ್ರಾಚಾರ್ವೆ. ಎಲ್ಲಿಂದ ತರ್ಲಿʼ ಯಾರೋ ಅಟ್ಟಿಸ್ಕಂಡು ಬಂದವ್ರಂಗೆ ಧಡಧಡ ಮನೆಗೋದ್ರೆ ಬಾಕ್ಲು ಮುಂದೆ ಅಪ್ಪ ಬಂದು ಬೀಡಿ ಸೇದ್ಕೋತ ಕೂತಿದ್ದ. “ಏನಮ್ಮಿ ಈಗ್ಬಂದ್ಯಾ. ಒಂದ್ಲೋಟ ಟೀ ಕಾಸು” ಅಂದ. ಏನೂ ಮಾತಾಡ್ದೆ ಬಾಕ್ಲು ತೆಗ್ದು ಬಚ್ಚಲ್‌ ಮನಗೋಗಿ ಮಕ ಕೈಕಾಲು ತೊಕ್ಕೊಳೋವಾಗ “ಇನ್‌ ಈವತ್ತು ರಾತ್ರಿಗ ರಾಮಾಣ್ಯ ಕಾದಿದೆ” ಅಂದ್ಕೊಂಡು ಒರಗ್ಬಂದು ಟೀಗೆ ನೀರಿಟ್ಟೆ. ಆಟೊತ್ಗೆ ಪ್ಯಾಕ್ಟ್ರೀಂದ ಅಮ್ನೂ ಬಂದ್ಲು. ಅಪ್ಪನ್‌ ನೋಡ್ದೋಳೇ ಮಕ ಗಂಟಾಕ್ಕೊಂಡ್‌ “ಯಾತಕ್‌ ಬಂದೆ” ಅಂದ್ಲು. “ಇದೇನಿವತ್‌ ಲೇಟು. ಎಲ್ಲಿ ಸುತ್ತಕ್‌ ಓಗಿದ್ದಿ” ಅಂದ. “ನಾನೇನ್‌ ನಿನ್ನಂಗೆ ಕ್ಯಾಮಿಲ್ದೆ ಊರೆಲ್ಲ ಸುತ್ತಕ್ಕೋಗ್ತೀನಿ ಅಂದ್ಕಂಡ್ಯಾ. ಬಂದಿದ್ಯಾಕೆ ಮೊದ್ಲು ಬೊಗ್ಳು” ಅಂದ್ಲು. ಇಬ್ರ ಕೈಗೂ ಟೀ ಲೋಟ ಕೊಟ್‌ ʻನನ್‌ ಯೋಶ್ನೇನೆ ನಂಗಾಗದೆʼ ಅಂದ್ಕಂಡು ಒರಗ್‌ ಮೆಟ್ಲ್‌ ಮ್ಯಾಲೆ ಕುಂತ್ಕಂಡೆ. “ಅಲ್ಲಿ ಅವ್ಳಿಗ ಉಸಾರಿಲ್ಲ. ದಾಕಟ್ರು ಏನೇನೋ ಬರ್ಕೊಟ್ಟವ್ರೆ. ಎಲ್ಲಾ ಪರೀಕ್ಸೆ ಮಾಡಿಸ್ಕಂಡು ಓಗ್ಬೇಕು. ಒಂದೈದ್ಸಾವ್ರ ಕೊಟ್ಟಿರು. ನಿಧಾನಕ್ಕೆ ತಂದ್ಕೊಡ್ತೀನಂತೆ” ಅಂದ. ಅಮ್ಮಂಗೂ ಅದೇನ್‌ ರೇಗ್ತೋ “ನಿನ್‌ ಸೂಳೆ ಮ್ಯಾಲೆ ನಾನ್ಯಾಕೆ ದುಡ್ಡಾಕ್ಲಿ. ಮೊದ್ಲು ಒಲ್ಡು ಇಲ್ಲಿಂದ” ಅಂತ ರೇಗಿದ್ಳು. “ಕಟ್ಕಂಡ ಗಂಡಾಂತ ನಿಂಗ್‌ ರವಷ್ಟಾದ್ರೂ ಇದ್ಯಾ. ಮನೆ ಬಾಕ್ಲಿಗ್‌ ಬಂದ್‌ ದುಡ್ಡು ಕೇಳಿದ್ರೆ ಇಲ್ಲಾಂತೀಯಾ” ಅಂದ. ಮಾತಿಗ್‌ ಮಾತ್‌ ಅತ್ಕಂತು. ಅಮ್ಮ ಚಪ್ಲಿ ಮೆಟ್ಕಂಡವ್ಳೆ “ನಿನ್ನತ್ರ ನಂಗ್‌ ಮಾತ್ಬೇಡ. ಯಾವತ್‌ ಆ ಮುಂಡೇ ಇಂದೋದ್ಯೋ ಅವತ್ತೇ ನನ್ ಗಂಡ ಸತ್ತೋದ ಅಂದ್ಕಂಡಿದೀನಿ. ಅವತ್ನಿಂದ ಎಂದಾದ್ರೂ ನೀನು ಒಂದ್ಕಾಸಿನ್‌ ಸಾಮಾನಾದ್ರೂ ಇಲ್ಲಿಗ್‌ ತಂದಾಕಿದೀಯ? ದುಡ್‌ ಬೇಕಾದಾಗೆಲ್ಲಾ ಬಂದ್‌ ಕುಂತ್ಕತೀಯಲ್ಲ. ನಿಂಗೆ ಮರ್ವಾದೆ ಇದ್ದದಾ. ಇವತ್‌ ಮಂಗಳ್ವಾರ. ಅನುಮಪ್ಪನ್‌ ಗುಡೀಗೋಗಿ ಬತ್ತಿನಿ. ನಾ ಬರೋಷ್ಟ್ರಲ್ಲಿ ನೀನು ಒಂಟಿದ್ಯಾ ಬದಿಕ್ಕಂಡೆ. ಇಲ್ಲಾಂದ್ರೆ ನೋಡ್ಕ ಏನ್ಮಾಡ್ತೀನಂತ” ಅಂದು ಒರಗ್ಬಂದೋಳೆ ನನ್ನನ್ನೋಡಿ “ರಮ್ಮಿ, ಅದೋದ್ಮ್ಯಾಕೆ ಬಾಕ್ಲಾಕೊಂಡ್‌ ಒಳೀಗ್‌ ಕುಂತಿರು. ನಾ ಬತ್ತಿನಿ” ಅಂದ್ಕಂಡು ಬಿರ್ಬಿರ್ನೆ ಒಂಟ್ಳು. ಅತ್ತು ಅದ್ನೈದು ನಿಮ್ಸ ಬಿಟ್ಟು ಅವ್ನೂ ಒಂಟ. ಒಳ್ಗೋದ್ರೆ ಬೀರು ಬಾಕ್ಲು ತೆಗ್ದಿತ್ತು. ಎಲ್ಲಾ ಜಾಲಾಡಿದ್ದ. “ಆಳಾದೋವ್ನು ಯಾಕಾದ್ರೂ ಬಂದ್ಬಂದ್‌ ಕಾಡ್ತಾನೋ” ಅಂದ್ಕೊಳ್ತಾ ಒಂದೊಂದೇ ತೆಗ್ದು ಒಳಗಿಡೋಕೆ ಓದ್ರೆ ಸೀರೆ ಮಡ್ಕಿಂದ ಓದ್ವರ್ಸ ಮಾಡ್ಸಿದ್‌ ಓಲೆ ಡಬ್ಬಿ ಕೆಳೀಕ್‌ ಬಿತ್ತು. ಏನೋ ಯೋಸ್ನೆ ಬಂದು ತಗ್ದೆ. ʻಒಂದೈದಾರ್ಸಾವರ್ವಾದ್ರೂ ಬಾಳ್ಬೋದಲ್ವಾʼ ಅನ್ಸಿ ಅದ್ನೆತ್ತಿ ಕಾಲೇಜಿನ್‌ ಬ್ಯಾಗ್ನಾಗಿಕ್ಕೊಂಡು ಉಳ್ದವನ್ನೆಲ್ಲ ಎತ್ತಿಡೋದ್ರಾಗೆ ಅಮ್ಮ ಒಳಿಗ್‌ ಬಂದ್ಲು. “ಮುಂಡೆಮಗ ಬೀರೂನೆಲ್ಲಾ ಜಾಲಾಡಿದ್ನ. ಅವ್ನ ಕೈ ಸೇದೋಗ. ಒಟ್ಟೆ ಉರ್ಸೋಕೇ ಬತ್ತಾನೆ” ಅಂತ ಬೈಕೊಂಡು “ಎಲ್ಲಾ ಇಟ್ಟಿದ್ದಾಯ್ತ ಮಗ. ನೀನಿನ್‌ ಓದ್ತಾ ಕುಂತ್ಕ. ಬೆಳ್ಗಿನ್‌ ಸಾರೇ ಅದೆ. ಒಂದಿಸ್ಟು ಅನ್ನಕ್ಕಿಕ್ತೀನಿ” ಅಂತ ಒಳಗೋದ್ಳು. ಎಸ್ಟೋ ಒತ್ತು ಅಪ್ಪನ್ನ ಬೈಕಂತಾನೇ ಒಳ್ಗೆ ಕೆಲ್ಸ ಮಾಡ್ತಿದ್ಲು. ಒಳ್ಗೊಳ್ಗೇ ಭಯ್ವಾಯ್ತು. ಊಟ ಮಾಡ್ವಾಗೂ ಅಮ್ಮಂಗೆ ಮಕ ತೋರ್ಸಕ್ಕಾಗ್ನಿಲ್ಲ. “ನೀನು ಇವ್ನೆಲ್ಲಾ ಮನ್ಸಿಗ್‌ ತಂದ್ಕೋಬ್ಯಾಡ ರಮ್ಮಿ. ಮನ್ಸಿಟ್ಟು ಓದೋದ್ನೋಡು” ಅಂತ ಮೇಲೆದ್ಳು. ಯೇನ್ಮಾತಾಡಕ್ಕೂ ತೋಚ್ದೆ, ತಲ್ಯಾಡ್ಸಿ ಬಂದು ಮಲಿಕ್ಕೊಂಡೆ. ಒಳೀಕೆ ಅಮ್ನ ಬೈಗ್ಳ ಇನ್ನೂ ನಿಂತಿರ್ನಿಲ್ಲ. “ಸನಿ ಮುಂಡೇಮಗ. ದುಡ್ಬೇಕಾದಾಗ ಈ ಎಡ್ತಿ ಗೆಪ್ತಿಗ್‌ ಬರ್ತಳೆ. ಇನ್ನೊಂದಪ ಬರ್ಲಿ. ಬರ್ಲು ತಕಂತಿನಿ…” ವಟವಟಾಂತನೆ ಬಂದು ಮಲಿಕ್ಕಂಡ್ಳು. ನಾನೂ ಗ್ವಾಡೆ ಕಡೀಕೆ ಮಕ ಮಾಡ್ಕಂಡು ನಿದ್ದೆ ಮಾಡ್ತಿರೋಳ್ತರ ಸುಮ್ನೆ ಮಲಿಕ್ಕಂಡೆ. ನಿದ್ದೆ ಎಲ್ಲಿಂದ ಬರ್ಬಕು?! ಅಮ್ಮಂಗೆ ಇಂಗೆ ಮೋಸ ಮಾಡ್ತಿದೀನಲ್ಲ ಅನ್ಸಿ ತುಂಬಾ ಅಳು ಬಂತು. ಅಮ್ಮನ್‌ ಗೊರ್ಕೆ ಕೇಳಕ್‌ ಸುರುವಾದ್ಮ್ಯಾಕೆ ಬಿಕ್ಕಿ ಬಿಕ್ಕಿ ಅತ್ತೆ.

ಮಾರ್ನೆ ಜಿನ ಕಾಲೇಜ್ಗೋಕೋಕ್ಮುಂಚೆ ಪ್ಯಾಟೇಲಿರೋ ಚಿನ್ದಂಗ್ಡೀಗೆ ಓಗಿ. “ಕಾಲೇಜು ಫೀಸ್ಕಟ್ಟಕ್‌ ಬೇಕು” ಅಂತೇಳಿ ಮಾರ್ದೆ. ಅಂಗ್ಡೀಯೋನು ಒಳ್ಳಿ ಮನ್ಸ. “ಅಂಗಾರೆ ಇನ್ನೊಂದೈನೂರು ಜಾಸ್ತೀನೇ ತಕೋವ್ವ” ಅಂತ ಎಂಟ್ಸಾವರ್ರೂಪಾಯಿ ಕೊಟ್ಟ. ಅಷ್ಟು ದುಡ್ಡು ಅತ್ರ ಇಟ್ಕಳಕ್ಕೆ ಭಯ್ವಾಗಿ ಮಾಲನತ್ರ ನಾಕ್ಸಾವಿರ್ರೂಪಾಯಿ ಕೊಟ್ಟು. “ನಿನ್ನತ್ರ ಇರ್ಲಿ. ಬೇಕೂಂದಾಗ ಕೇಳ್ತಿನಿ” ಅಂದೆ. “ಎಲ್ಲೀದಿಷ್ಟೊಂದುಡ್ಡು?” ಅಂದ್ಳು. “ನಿನ್ನೆ ನಮ್ಮಪ್ಪ ಬಂದಿದ್ರು. ʼನಿಂತಾವಿರ್ಲಿʼ ಅಂತ ಕೊಟ್ಟೋರೆ. ಅಮ್ಮಂಗೆ ಅವರ ತಾವಿಸ್ಕಳಾದು ಇಸ್ಟ್ವಾಗಲ್ಲ. ನನ್ನತ್ರಿದ್ರೆ ಅವ್ಳಿಗೆ ತಿಳೀತದೆ. ಅದ್ಕೆ ನಿಂತಾವಿರ್ಲಿ. ಬೇಕಾದಾಗ ಇಸ್ಕಂತಿನಿ” ಅಂದೆ. ಸರೀಂತ ತನ್‌ ಪರ್ಸ್ನಾಗೆ ಮಡಿಕ್ಕಂಡ್ಳು. ಆಗೂ ಈಗೂ ಎಲ್ಡು ತಿಂಗ್ಳು ಅವ್ನ ಬಾಯಿಗ್‌ ಬಡ್ದಿದ್ದಾಯ್ತು.

ಇಸ್ಟ್ರ ಮಧ್ಯ ಅಮ್ಮ ಯಾವ್ದೋ ಮದೀಗೋಗ್ಬೇಕೂಂತ ಆಕ್ಕೊಳಕ್ಕೆ ಆ ವಾಲೇನ ಉಡ್ಕಿದ್ಳು. ಅದೆಲ್ಲಿ ಸಿಕ್ತದೆ! ಅಪ್ಪ ಆವತ್ತು ಬೀರು ಜಾಲಾಡಿ ತಗಂಡೋಗಿದಾನೆ ಅಂದ್ಕಂಡು ಅವ್ನ ಕುಲಾ ಎಲ್ಲಾ ಜಾಲಾಡಿದ್ಲು. ಇನ್ನೊಂದ್‌ ಕಿತ ಅವ್ನು ಬಂದಾಗ ತಗಂಡಿಲ್ಲ ಅಂತ ಅಂದ್ರೂ ಅಮ್ಮ ನಂಬಲ್ವೆ! ಏಗೋ ಅಂತೂ ಒಂದ್ಕಸ್ಟದಿಂದ ತಪ್ಪುಸ್ಕಂಡೆ ಅಂತ ಒಳ್ಗೊಳ್ಗೇ ಸಮಾಧಾನ್ವಾಯ್ತು. ಮತ್ತೆ ಸುರುವಾಯ್ತು ಅವನ್ಕಾಟ. ಇನ್ನೆಲ್ಲಿಂದ ತರ್ಲಿ. ತಲೆ ಕೆಟ್ಟೋಯ್ತು. ಅವತ್‌ ಬೆಳಿಗ್ಗೆ ಕಾಲೇಜ್ಗೋಗ್ತಾ ದಿನಸಿ ಅಂಗ್ಡಿ ಸೀನನ ಅತ್ರ “ಇವತ್ತು ಕಾಲೇಜು ಫೀಸು ಕಟ್ಟಕ್ಕೆ ಕಡೇ ದಿನ. ಅಮ್ಮ ಕೊಟ್ಟಿದ್ದು ನಿನ್ನೆ ಕಾಲೇಜಲ್ಲಿ ಕಳ್ಕಂಬಿಟ್ಟೆ. ಮತ್ತೆ ಕೇಳಿದ್ರೆ ಬೈತಾಳೆ. ನನ್‌ ಸ್ಕಾಲರ್ಸಿಪ್ಪು ಮುಂದಿನ್‌ ತಿಂಗ್ಳು ಬತ್ತದೆ. ಆಗ ಕೊಡ್ತೀನಿ. ಎರಡ್ಸಾವ್ರ ಕೊಟ್ಟಿರಣ್ಣ” ಅಂದೆ. “ಅಸ್ಟೇ ತಾನೆ ತಗಾ ರಮ್ಯ. ಆಮೇಲ್ಕೊಡೋವಂತೆ” ಅಂತ ಕೊಟ್ಟ. ಅದನ್ನೂ ಅವ್ನ ಮಕಕ್ಕೆ ಬಡ್ದಿದ್ದಾಯ್ತು.

***

ಅವತ್ತೇ ಕಾಲೇಜಿಗೆ ಕಡೇ ದಿನ. ದಸರಾ ಅಂತ ಎರಡ್ವಾರ ರಜ ಕೊಟ್ಟಿದ್ರು. ಮಾಲ ಇಂಗೇ ಮಾತಿಗಂದ್ಲು. “ಭವಾನಿ ಕಲ್ಯಾಣ ಮಂಟಪ್ದಾಗೆ ಅದ್ನೈದು ದಿನ ಸೀರೆ ಎಗ್ಜಿಬಿಷನ್‌ ಆಕವ್ರೆ. ಬೆಳಿಗ್ಗೆ ಅತ್ತು ಗಂಟೇಂದ ಎರ್ಡು ಗಂಟೇವರ್ಗೆ ಮತ್ತೆ ಮದ್ದೀನ ಮೂರು ಗಂಟೇಂದ ಏಳು ಗಂಟೇವರ್ಗೆ ಅಲ್ಲಿ ಕೆಲ್ಸ ಮಾಡ್ದ್ರೆ ದಿನಕ್ಕೆ ಐನೂರು ರೂಪಾಯಿ ಕೊಡ್ತಾರಂತೆ. ನಾನು ಓಗೋಣ ಅನ್ಕಂಡಿದೀನಿ. ನೀನು ಬತ್ತೀಯ” ಅಂದ್ಳು. ʻಯಾಕ್ಮಾಡ್ಬಾರ್ದುʼ ಅನ್ನಿಸ್ತು. ʻರಜ್ದಾಗೆ ದಿನಾ ಮಾಲನ್ಮನೇಗೆ ಬೆಳಿಗ್ಗೆ ಓದ್ಕಳಕ್ಕೆ ಓಗ್ತೀನಿ. ಚಂಜೇಗೆ ಮನೆಗ್‌ ಬತ್ತೀನಿʼ ಅಂತ ಅಮ್ಮನತ್ರ ಸುಳ್ಳೇಳಿ ದುಡ್ದಿದ್‌ ಆ ದುಡ್ಡುನ್ನೂ ಆ ಮುಂಡೇಮಗ್ನ ಬಾಯಿಗ್‌ ಆಕಿದ್ದಾಯ್ತು. ಈಗ ಮತ್ತೆ ತಾ ತಾ ಅಂದ್ರೆ ಎಲ್ಲಿಂದ ತಂದೇನು ಅಂತ ಮತ್ತೆ ಮಗ್ಲು ಬದ್ಲಾಯ್ಸಿದ್ಲು. ʻಕಾಲೇಜ್ಗೋಗೋದೇ ಬಿಟ್ಬಿಟ್ರೆ ಎಂಗೆʼ ಅಂತ ಯೋಶ್ನೆ ಬಂತು. ʻಅಮ್ಮ ಅದೆಷ್ಟು ಆಸೆ ಇಟ್ಕಂಡವ್ಳೆ ನನ್ಮ್ಯಾಕೆ. ಅವ್ಳಿಗೇನೇಳೋದು, ಎಂಗೇಳೋದುʼ ಅನ್ಸಿಸ್ತು. ʻನಾನಿಂಗೇ ಅಂತೇಳಿದ್ರೆ ಅವ್ಳೇನ್‌ ಮಾಡ್ಬೈದು? ಕೆಲ್ಸ ಬಿಟ್ಟು ದಿನ್ವೂ ಕಾಲೇಜ್ಗೆ ಓಗ್ವಾಗ, ಬರ್ವಾಗ ನಂಜೊತೆ ಬರಾಕಾಯ್ತದ?ʼ ಏನೂ ತೋಚ್ನಿಲ್ಲ. ʻಅತ್ಸಾವ್ರ ಕೊಡು ಅಂತಾನಲ್ಲ ಬಡ್ಡಿ ಮಗ, ಇವ್ನೇನಾದ್ರೂ ನಂಗೆ ಸಾಲ ಕೊಟ್ಟಿದ್ನ. ಪೋಲೀಸ್‌ ಸ್ಟೇಸನ್ನಿಗೋಗಿ ಅವ್ನ ಮ್ಯಾಲೆ ಕಂಪ್ಲೇಂಟು ಕೊಟ್ರೆ ಎಂಗೆ…. ನಂಗೊಬ್ಳಿಗೆ ಓಗಕ್ಕೆ ಗೊತ್ತಾಯ್ತದ… ಇದ್ವರ್ಗೂ ಮಾಲಂಗೂ ಏಳಿಲ್ಲ. ಆಮ್ಯಾಕೆ ಅದೇ ದೊಡ್ವಿಸ್ಯವಾಗಿ ಅಮ್ಮಂತಂಕ ಬಂದ್ರೆ. ʻಏನ್ಮಾಡಾದು… ಏನ್ಮಾಡಾದು… ಏನ್ಮಾಡಾದು…ʼ ರಮ್ಯ ತಲೆ ಚಚ್ಕಂಡ್ಳು.

ʻಅಜ್ಜಿ ಊರ್ಗೆ ಒಂದು ಅದ್ನೈದು ಜಿನ ಓದ್ರೆ ಎಂಗೆ… ಅಮ್ಮ ಬೈತಾಳೆ. ದಸ್ರ ರಜೀಕೋಗು ಅಂದಾಗ ʻಓದ್ಕಳಾದಿದೆ. ನಾನೋಗಲ್ಲʼ ಅಂದಿದ್ದೆ. ಈಗ ಕಾಲೇಜಿಗೆ ರಜಾ ಹಾಕಿ ಓಗ್ತೀನಿ ಅಂದ್ರೆ ಸುಮ್ಕಿರ್ತಾಳಾ.. ಅಂಗೂ ಓದ್ರೂ ಮತ್‌ ಬಂದ್ಮ್ಯಾಕೆ ಈ ಶನಿ ಇಂದ್ಬೀಳಲ್ಲಾ ಅಂತ ಏನು ಗ್ಯಾರಂಟಿ. ನಿನ್ನೆ ಪಸ್ಟ್‌ ಟರ್ಮ್‌ ಎಕ್ಜಾಂ ಮಾಕ್ಸ್‌ಕಾರ್ಡ್‌ ಬ್ಯಾರೆ ಕೊಟ್ಟವ್ರೆ. ಮೂರ್ರಲ್ಲಿ ಫೇಲು. ಅಮ್ಮಂಗೆ ತೋರ್ಸಿ ಸೈನಾಕಿಸ್ಕಳೋದು ಏಗೆ… ʻಯಾಕಾ ಫೇಲುʼ ಅಂತ ಅಮ್ಮ ಕೇಳಿದ್ರೆ ಏನೇಳಾಕಾಯ್ತದೆ. ನಾಳೆ ಕೊಡ್ಬೇಕು… ಏನ್ಮಾಡಾದು.. ʻಆ ಪದ್ಮ ಮಾಡ್ದಂಗೆ ಮಾಡ್ದ್ರೆ… ಅವ್ಳು ಕೊಟ್ಟಿದ್‌ ಮಾರ್ನೆ ದಿನ್ವೆ ತಾನೇ ಎಡಗೈನಲ್ಲಿ ಅವ್ರಪ್ಪನ್‌ ತರ ಎಸ್ರು ಬರ್ದು ಕೊಟ್ಲಲ್ಲ…ʼ ಈ ಸಲ್ಕೆ ಅಂಗೇ ಮಾಡಿ ಕೊಟ್ಬಿಡೋದು. ಆ ಸನಿಕಾಟ ತಪ್ಪಿದ್ರೆ ಮುಂದಿನ್ಸಲ ಚೆನ್ನಾಗೋದಿ ಫೈನಲ್‌ ಎಗ್ಜಾಮಲ್ಲಿ ಪಾಸಾಗೋದು… ಆದ್ರೆ ಈ ಬೇವರ್ಸಿ ಕಾಟ ತಪ್ಪೋದಾದ್ರೂ ಏಗೆ…ʼ ಯಾವ್ದೂ ಬಗೆ ಅರೀನಿಲ್ಲ. ಮಲ್ಗೋಕೂ ಆಗ್ದೆ ಎದ್ದು ಕೂತ್ಲು. ಆ ಉಪ್ಪಿಟ್ನೇ ತಿನ್ಕಳಣ ಅಂತ ತಟ್ಟೆಗಾಕ್ಕಂಡು ತಿಂದದ್ದಾಯ್ತು. ಓಗ್ಲಿ ಸ್ವಲೂಪ ಒತ್ತು ಓದ್ಕಳಾಣ ಅಂತ ಪುಸ್ಕ ತೆಗ್ದ್ರೆ ಅವ್ನಾಡಿದ್‌ ಮಾತೇ ಗೆಪ್ತಿಗ್‌ ಬರಾದ…! ಕಷ್ಟ ಪಟ್ಟು ಓದಕ್‌ ಸುರೂ ಮಾಡಿದ್‌ ಅರ್ಧ ಗಂಟೇಲಿ ಕಣ್ಣೆಳ್ಕೊಂಡು ಬಂದು ಮಲಗ್ದವ್ಳು ಅಮ್ಮ ಬಂದು ಬಾಕ್ಲು ಬಡ್ದಾಗ್ಲೆ ಎದ್ದಿದ್ದು. “ಯಾಕಾ ಉಸಾರಿಲ್ವ. ಕಾಲೇಜ್ಗೋದೋಳು ಅಂಗೇ ವಾಪ್ಸು ತಲ್ನೋವೂಂತ ಬಂದ್ಬಿಟ್ಯಂತೆ. ರಂಗಮ್ಮ ಅಂಗಂದ್ಳು” ಗಂಗಮ್ಮ ಒಳೀಕ್ಬರ್ತಾ ಕೇಳಿದ್ಳು. “ಊನವ್ವಾ, ತುಂಬಾ ತಲೆ ನೋಯಿಸ್ತಿತ್ತಾ ಬಂದು ಮಲಿಕ್ಕಂಡಿ. ಈಗ ಸೂರು ವಾಸಿ” ಅಂದು ಎದ್ದು ಮಕ ತೊಳ್ಕಣಕ್ಕೆ ಬಚ್ಚ್ಲಿಗೆ ಓದ್ಲು. “ಯಾಕೋ ಈಚ್ಗೆ ಸಲ್‌ಸಲಕ್ಕೂ ತಲ್ನೋವು ಅಂತೀಯಲ್ಲಮ್ಮಿ. ದಾಕುಟ್ರತ್ರಾನಾರೂ ಓಗ್ಬರಾನ. ಒಂಜಿನ ರಜ ಕೇಳ್ತೀನಿ ಮುಂದಿನ್ವಾರ್ದಾಗೆ” ಅಂದ್ಲು ಗಂಗಮ್ಮ. ಏನೂ ಮಾತಾಡ್ದೆ ಅಮ್ಮ ಕೊಟ್ಟ ಟೀ ಗ್ಲಾಸನ್ನಿಡ್ಕೊಂಡು ಬಂದು ಪುಸ್ಕ ತೆಕ್ಕೊಂಡು ಓದ್ತಿರೋವ್ಳಂಗೆ ಕುಂತ್ಕಂಡ್ಳು.

***

ಮಾರ್ಣೆ ದಿನ ಬೆಳಿಗ್‌ಬೆಳಿಗೇನೆ ರಮ್ಯಂಗೆ ಒಟ್ನೋವು ಸುರ್ವಾಯ್ತು. ತಡಕಣಕ್ಕಾಗ್ದೆ ಬಿದ್ದು ಒಲ್ಡಾಡಿ ಓದ್ಲು. ತಿಂಗ್ಳು ತಿಂಗ್ಳು ಬರಾದೇಯ. ಈ ಪಟ ಯಾಕೋ ಜಾಸ್ತಿ ಆಗದೆ ಅಂದ್ಕೊಂಡು ಫ್ಯಾಕ್ಟ್ರೀಗೋಗಕ್ಮುಂಚೆ ಬೀದೀ ಕೊನೇಲಿದ್‌ ಮೆಡಿಕಲ್‌ ಸಾಪಾಗೆ ಒಟ್ನೋವಿನ ಮಾತ್ರೆ ಈಸ್ಕೊಂಡು ಬಂದು ಮಗ್ಳಿಗ್‌ ಕೊಟ್ಳು. “ಚಿಲ್ರಿಲ್ಲ ಅಂತ ಪೂರಾ ಸೀಟೇ ಕೊಟ್ಟವ್ನೆ. ಈಗ ಇಡ್ಲಿ ತಿಂದು ಒಂದು ತಗೋಮ್ಮಿ. ವಾಸಿಯಾದ್ರೆ ಮದ್ದಿನಕ್ಕೆ ಕಾಲೇಜ್ಗೋಗು. ಇಲ್ಲಾದ್ರೆ ಇನ್ನೊಂದು ಮಾತ್ರೆ ಮದ್ದಿನ ಊಟ್ವಾದ್‌ ಮ್ಯಾಲ್‌ ತಗಾ. ಚಂಜೇ ಒತ್ಗೆ ಸರಿ ಓಯ್ತದೆ” ಅಂತೇಳಿ ಮಗ್ಳ ಪಕ್ಕ ಮಾತ್ರೆ ಇಟ್ಟು ಒರ್ಗೋದಾಗ ಎದ್ರುಗೇ ಸಿಕ್ ರಂಗಮ್ಮಂಗೆ “ರಮ್ಯ ಒಟ್ನೋವು ಅಂತ ಮಲ್ಗವ್ಳೆ. ಮಾತ್ರೆ ಈಸ್ಕೊಂಡು ಬಂದು ಕೊಟ್ಟಿವ್ನಿ. ಮದ್ದಿನಕ್ಕೆ ಒಂಚೂರು ನಿಗಾ ನೋಡು ರಂಗಮ್ಮ” ಅಂದ್ಳು. “ಆಯ್ತೇಳು. ಈಗೇನಾರಾ ತಿಂದಿದ್ದಾಳಾ” ಅಂತ ಕೇಳ್ದವಳ್ಗೆ “ಇಡ್ಲಿ ಕೊಟ್ಟಿವ್ನಿ. ಮದ್ದಿನಕ್ಕೆ ಬೇಯ್ಸಿಕ್ಕಿದೀನಿ. ಉಸಾರಾದ್ರೆ ಕಾಲೇಜ್ಗೋಗು ಅಂದಿವ್ನಿ. ಸ್ವಲ್ಪ ನಿಗಾ ನೋಡು” ಅಂದವ್ಳೆ “ಫ್ಯಾಕ್ಟ್ರಿಗೆ ಒತ್ತಾಯ್ತದೆ” ಅಂತ ಒಂಟ್ಳು.

ರಂಗಮ್ಮ ಕಿಟ್ಕಿ ಅತ್ರ ನಿಂತ್ಕಂಡು ಒಳಿಕ್‌ ನೋಡ್ತಾ “ರಮ್ಯಾ ಮಲ್ಗಿದೀಯಾವ್ವಾ. ಮಾತ್ರೆ ನುಂಗ್ದಾ” ಅಂತ ಕೇಳಿದ್ಳು. ಮುಲುಗ್ತಾನೇ “ಊ ಕಣತ್ತೆ. ಈಗ್‌ ತಿಂದು ತಗಂತೀನಿ” ಅಂದ್ಲು ರಮ್ಯ. ಎಂದೂ ಇಸ್ಟು ಒಟ್ನೋವು ಬಂದಿರ್ನಿಲ್ಲ. ವಿಲವಿಲಾನ್ನೋಂಗಾಯ್ತು. “ಸರಿ ಕನವ್ವ, ಏನಾದ್ರೂ ಬೇಕಿದ್ರೆ ನನ್ಕರಿ” ಅಂದು ರಂಗಮ್ಮ ತನ್ ಮನ್ಗೆ ಓದ್ಲು. ಕಷ್ಟಪಟ್ಕೊಂಡು ಎದ್ದ ರಮ್ಯ ಅಮ್ಮ ಪಕ್ಕದಲ್ಲೇ ಇಟ್ಟಿದ್ದ ಇಡ್ಲಿ ತಿನ್ನಕ್‌ ಓದ್ರೆ ಅರ್ದ ಇಡ್ಲೀ ಮೇಲ್‌ ಸೇರ್ನಿಲ್ಲ. ತಟ್ಟೆ ಪಕ್ಕಕ್ ನೂಕಿ ಮಾತ್ರೆ ಚೀಟಿ ತಗಂಡ್ಳು. ಒಟ್ಟು ಅತ್ತು ಮಾತ್ರೆ ಇದ್ವು. ʻಇವಿಸ್ಟುನ್ನೂ ಒಟ್ಗೆ ನುಂಗ್ಬಿಟ್ರೆ ಏಗೆʼ ಅಂತ ಒಂದೇಸ್ನೆ ತಲೇಗ್‌ ಬಂತು. ʻಒಟ್ಗೆ ನುಂಗಿ ನಾನ್‌ ಸತ್ತೋದ್ರೆ ವಾಸಿ. ಆ ದರಿದ್ರ ಸನಿ ಕಾಟ ಎಂದೆದ್ಗೂ ತಪ್ಪೋಯ್ತದೆʼ ಅನ್ಸಿದ್ದೆ ಒಂದಾದ್‌ ಮ್ಯಾಲ್‌ ಒಂದ್ಮಾತ್ರೆ ನುಂಗೇ ಬಿಟ್ಳು…. ಒಂದ್ಸೊಲ್ಪತ್ತಾಗ್ತಿದ್ದಂಗೆ ಒಟ್ಗೆಲ್ಲಾ ಬೆಂಕಿ ಆಕ್ದಂಗಾಯ್ತು. ಸಂಕ್ಟ ತಡೀನಾರ್ದೆ ʻಅಮ್ಮಮ್ಮೋʼ ಅಂತ ಕಿರ್ಚಾಡ್ತ ಪತರ್‌ಗುಟ್ಟೋದ್ಳು. ಮನೆ ಮುಂದ್ಕೆ ಕುಂತ್ಕಂಡು ಎಲಡ್ಕೆ ಆಕ್ಕಂತಿದ್ದ ರಂಗಮ್ಮಂಗೆ ಅನುಮಾನ್ವಾಗಿ ಕಿಟ್ಕೀಲಿ ಇಣ್ಕಿ ಇವ್ಳ ಅವಸ್ಥೆ ನೋಡ್ದೋಳೆ “ಬಾಕ್ಲು ತೆಗೀ ರಮ್ಯಾ.. ಬಾಕ್ಲು ತೆಗೀ…” ಅಂತ ಬಾಕ್ಲು ಕುಟ್ಟಕ್ಕೆ ಸುರು ಮಾಡಿದ್ಲು. ರಮ್ಯಂಗೆ ಕಣ್ಬಿಡೋಕು ಆಗ್ತಿಲ್ಲ. ಮನೆಗೋಡೋಗಿ ಒಂದು ಕೋಲ್ತಂದು ಕಿಟ್ಕೀನಿಂದ ತೂರ್ಸಿ ಬಾಕ್ಲ ಅಗ್ಳಿ ತೆಕ್ಕೊಂಡು ಒಳೀಕೆ ಬಂದ್ಳು. “ಏನಾಯ್ತಾ… ಏನಾಯ್ತಾ ರಮ್ಯಾ..” ಅಂತ ಅವ್ಳ ಮೈ ಅಳ್ಳಾಡ್ಸಿ ಕೇಳಿದ್ಳು. ರಮ್ಯನ್‌ ಬಾಯಿಂದ ಮಾತೇ ಒರಡ್ತಿಲ್ಲ. ಕಣ್ಣುಗ್ಳು ಮೇಲ್ಗಣ್‌ ತೇಲ್ಗಣ್‌ ಆಗ್ತಾ ಅವೆ. ಎದ್ರಿಕೆಯಾಗಿ ಪಕ್ಕಕ್ ನೋಡಿದ್ರೆ ಸುಲ್ದಿಟ್‌ ಮಾತ್ರೆ ಚೀಟಿಗ್ಳು ಕಂಡ್ವು. “ಓ.. ಇಂಗೇ ಆಗಿರ್ಬೇಕು ಅನ್ಕಂಡವ್ಳೆ, ಪಕ್ಕದ್‌ ವಟಾರದ ಸೀನಪ್ಪನ್ನ ಕರ್ದು “ಒಂದಾಟೋ ತಗಂಬಾ ಇಂಗಾಗದೆ” ಅಂದವ್ಳೆ ಮತ್‌ ರಮ್ಯನತ್ರ ಓಡ್ಬಂದ್ಳು. ಉಸ್ರಿನ್ನೂ ಆಡ್ತಾ ಅದೆ. ಎಂಗೋ ಮಗಾ ಬದ್ಕಿದ್ರೆ ಸಾಕೂಂತ ಅನ್ಕೊಳೋ ಒತ್ಗೆ ಸೀನಪ್ಪ ಆಟೋ ತಂದಿದ್ದ. ಇಬ್ರೂ ಸೇರಿ ಅವ್ಳನ್‌ ಯತ್ಕೊಂಡು ಆಟೋನಾಗೆ ಕೂರಿಸ್ಕಂಡು ಧಡಭಡಾಂತ ಆಸ್ಪತ್ರೇಗ್‌ ಕರ್ಕೊಂಡು ಓದ್ರು.

ಪುಣ್ಯಕ್ಕೆ ದಾಕುಟ್ರು ಬೇಗ್ನೇ ಸಿಕ್ಕಿದ್ರು. ರಂಗಮ್ಮ ಎಲ್ಲ ವಿಸ್ಯಾವ ಏಳಿ ಮಾತ್ರೆ ಚೀಟಿಗೋಳ ಕೊಟ್ಳು. ತಕ್ಸನಾನೆ ದಾಕಟ್ರು ಒಳೀಕೆ ಕರ್ಕಂಡೋಗಿ ವಾಂತಿ ಮಾಡ್ಸಿ,ಒಟ್ಟೆಯೆಲ್ಲಾ ತೊಳ್ದು, ಡ್ರಿಪ್‌ ಆಕಿ ಮಲಗ್ಸಿದ್ರು. “ಜೀವಕ್ಕೇನೂ ಅಪಾಯ್ವಿಲ್ಲ. ಅವ್ರಮ್ಮನ್ನ ಕರ್ಸಿ” ಅಂದ್ರು. ಸೀನಪ್ಪ ಪೋನ್‌ ಮಾಡಿ ಇಂಗಂದಿದ್ದೇ ಗಂಗಮ್ಮ ಅರ್ಧ ಗಂಟೇಲೇ “ಅಯ್ಯೋ ಸಿವ್ನೆ. ನನ್ಮಗ್ಳಿಗ್‌ ಯಾನಾಯ್ತೋ….” ಅಂತ ʻಓಂತʼ ಅತ್ಕೊಂತ್ಲೇ ಬಂದ್ಳು. ದಾಕುಟ್ರು “ಏನಮ್ಮ ಅವ್ಳಿಗೆ ಸಾಯೋ ಅಂತ ಕಾರಣ್ವೇನಾದ್ರೂ ಇತ್ತೆ?” ಅಂತ ಕೇಳಿದ್ರು. “ಸ್ವಾಮಿ. ಬಂಗಾರ್ದಂತ ಮಗಾ ಅದು. ಚೆಂದಾಗಿ ಓತ್ತದೆ. ಕಾಲೇಜ್ಗೆ ಓಗ್ತಾ ಅವ್ಳೆ. ಅವ್ಳಿಗ್‌ ತಿಂಗ್ತಿಂಗ್ಳೂ ಮುಟ್ಟಿನ್‌ ಒಟ್ಟೆನೋವು ಬತ್ತದೆ. ಮೆಡಿಕಲ್‌ ಸಾಪಿಂದ ಎಲ್ಡು ಮಾತ್ರೆ ಈಸ್ಕೊಡ್ತೀನಿ. ಚಂಜೇಗೆ ಸರಿ ಓಯ್ತಾಳೆ. ಈ ಸಲ ಜಾಸ್ತಿ ನೋವಿತ್ತೇನೋ, ತಿಳೀದೆ ತಂದಿದ್‌ ಅಸ್ಟೂ ಮಾತ್ರೇನೂ ನುಂಗವ್ಳಷ್ಟೆ….” ಅಂತ ಅಳಕ್ಕೆ ಸುರು ಮಾಡಿದ್ಳು. “ಸರಿ, ಈಗೆಚ್ರ ಬಂದಿದೆ. ಇವತ್ತೊಂದಿನ ಇಲ್ಲಿರ್ಲಿ. ನಾಳೆ ಬೆಳಿಗ್ಗೆ ಕರ್ಕಂಡೋಗಮ್ಮ” ಅಂತೇಳಿ ಓದ್ರು. “ಯಾಕಾ ರಮ್ಮಿ ಇಂಗ್ಮಾಡ್ದೆ. ಓದ್ದೋಳು ನಿಂಗ್‌ ಗೊತ್ತಾಗ್ಲಿಲ್ಲೇನ್‌ ಮಗಾ ಅಸ್ಟು ಮಾತ್ರೆ ಒಟ್ಟಿಗ್‌ ತಗಾಬಾರ್ದು ಅಂತ… ಮಾತಾಡಾ….” ಮತ್‌ ಮತ್‌ ಕೇಳಿದ್ಲು. ರಂಗಮ್ಮ “ಅಪಾಯ್ದಿಂದ ಪಾರಾಯ್ತಲ್ಲ ಮಗಾ. ಈಗ್‌ ಸುಮ್ಕಿರು. ಸುಸ್ತಾಗವ್ಳೆ. ಮಾತಾಡಾ ಸಕ್ತಿ ಇಲ್ಲ. ಮನೆಗೋದ್ಮೇಲೆ ಅಮ್ಮ ಮಗ್ಳು ಇಬ್ರೂ ದಿನ್ವಿಡೀ ಮಾತಾಡಾರಂತೆ. ನಾನು ಮನ್ಗೋಗಿ ನಿಂಗೂಟ, ಅವ್ಳಿಗ್‌ ಗಂಜಿ ತರ್ತೀನಿ. ನೀನು ವಸಿ ಸುದಾರಿಸ್ಕ” ಅಂತೇಳಿ ಮನೆಗ್‌ ಒಂಟ್ಳು. ಅಂತೂ ಈಗೆ ರಮ್ಯ ಬದ್ಕುಳುಕೊಂಡ್ಳು.

***

ಒಂದ್‌ ಅದ್ನೈದು ಜಿನ ಕಾಲೇಜಿಗೋಗ್ನಿಲ್ಲ. ಮಾಲ ಮನೆಗ್‌ ಬಂದು ಅವತ್ತಾವತ್ ಮಾಡಿದ್‌ ಪಾಠದ ನೋಟ್ಸೆಲ್ಲ ತಂಕೊಟ್ಳು. ತಾನ್‌ ನಿಜ್ವಾಗಿ ಸತ್ತೇ ಓಗಿದ್ದಿದ್ರೆ ಅಮ್ಮನ್‌ ಗತಿ ಏನಾಗ್‌ಬೇಕಿತ್ತು. ಎಂಥಾ ತಪ್ಪು ಮಾಡ್ಬಿಡ್ತಿದ್ದೆ ಅನ್ಸಕ್ಕೆ ಸುರ್ವಾಯ್ತು. ಆದ್ರೆ ಮತ್‌ ಅವ್ನು ಎದ್ರುಗ್‌ ಸಿಕ್ರೆ ಏನ್ಮಾಡ್ಬೇಕೋ ಅವ್ಳಿಗ್‌ ತಿಳೀತಿಲ್ಲ. ಅಂತೂ ಉಸಾರಾಗಿದೀನಿ ಅನ್ಸಿದ್ಮ್ಯಾಕೆ ಕಾಲೇಜಿಗೆ ಒಂಟ್ಳು. ಬೆಳಿಗ್ಗೆ ಅವ್ನೆಲ್ಲೂ ಸಿಗ್ನಿಲ್ಲ. ಅಬ್ಭ. ಪಿಶಾಚಿ ತೊಲುಗ್ತು ಅಂದ್ಕಂಡು ನಿರಮ್ಮಳ್ವಾಗಿ ಕುಂತು ಪಾಠ ಕೇಳಿಸ್ಕಂಡ್ಳು. ಸಂಜೆ ಬರೋವಾಗ ಧುತ್ತಂತ ಎದ್ರಿಗೆ ಬರೋದೆ. “ಏನೇ.. ಎಲ್ಲೋಗಿದ್ದೆ ಇಸ್ದಿನ. ಎಲ್ಲಿ ನನ್‌ ಅತ್ಸಾವ್ರ. ತತ್ತಾ ಇಲ್ಲಿ ಬೇಗ” ಸೈಕಲ್ನ ಮೇಲೆ ಒಂದ್ಕಾಲ ಪೆಡ್ಲ್‌ ಮ್ಯಾಕೆ ಇನ್ನೊಂದ ನೆಲದ್‌ ಮ್ಯಾಕೆ ಅವ್ಳ ಪಕ್ಕಕ್ಕೆ ನಿಲ್ಲಿಸ್ಕಂಡು ಮಖದತ್ರ ಮಖ ತಂದು ಕೇಳ್ದ. ಧಿಗ್ಭ್ರಮೆಯಾಗಿ ನಿಂತಿದ್ದೋಳ ಕಂಡು ನಕ್ಕಂಡು “ಓಗ್ಲಿ ದುಡ್ಡು ಕೊಡ್ಬ್ಯಾಡ. ಒಂದು ಕೆಲ್ಸ ಮಾಡೀಯಾ” ಅಂದ. ʻಏನುʼ ಅನ್ನವ್ಳಂಗೆ ಅವ್ನ ಮಖ ನೋಡಿದ್ಲು. “ಈ ಭಾನ್ವಾರ್ಕೆ ನಂಜತೆ ನಂದಿಬೆಟ್ಟಕ್‌ ಬತ್ತೀಯಾ. ಇಬ್ರೆ ಓಗಿ ಮಜಾ ಮಾಡ್ಕಂಡು ಬರಾನು” ಅವ್ನು ಮಾತು ಮುಗ್ಸಿದ್ದೇ ರಮ್ಯಂಗೆ ಆ ಕ್ಸನಕ್ಕೆ ಏನ್ಮಾಡ್ತಿದೀನಿ ಅನ್ನೋದೂ ತಿಳೀದೇ ಓಯ್ತು. ಬಗ್ಗಿ ಕಾಲಾಗಿನ್‌ ಮೆಟ್‌ ತಗಂಡು ಅವ್ನ ಕೆನ್ನೆಗೆ ರಪರಪ ಪುರ್ಸೊತ್ತು ಕೊಡ್ದಂಗೆ ಬಾರ್ಸಿದ್ಳು. “ದುಡ್ಡು ಕೊಡ್ಬೇಕಾ ನಿಂಗೆ… ಇಲ್ದಿದ್ರೆ ನಿಂಜೊತ್ಗೆ ನಂದಿಬೆಟ್ಟಕ್ಕೆ ಬರ್ಬೆಕಾ… ನಾನ್ಯಾವ್‌ ದುಡ್ಡೂ ಕೊಡಲ್ಲ… ನಿಂಜತಿಗೂ ಬರಲ್ಲ… ಫೋಟೋ ಆಕ್ತೀಯಾ… ಆಕ್ಕೋ ಓಗು… ನಾನೇನು ಐಸ್ವರ್ಯಾರೈಯಾ.. ಎಲ್ರೂ ಬಾಯ್ಕಳ್ಕಂಡು ನೋಡಾಕೆ. ಅದೇನ್ಮಾಡ್ತೀಯೇ ನೋಡೇ ಬಿಡ್ತಿನಿ… ಒಡೀತಾ ಒಡೀತಾನೇ ಅವ್ನ ಸೈಕಲ್ನ ತಳ್ಳಿದ್ಲು. ಇಂಗಾಗ್ಬೋದು ಅಂತ ಕನ್ಸಲ್ಲೂ ಕಾಣ್ದಿದ್ದೋನು ಕಂಗಾಲಾಗಿ ಕೆಳಕ್‌ ಬಿದ್ದ. ಜೇಬಲ್ಲಿದ್‌ ಮೊಬೈಲು ರಸ್ತೆ ಮ್ಯಾಗೆ ಬಿತ್ತು. ಅದನ್ನೋಡ್ದವ್ಳೇ ಚಂಡಿ ಅಂಗೆ “ಇದಿದ್ರೆ ತಾನೆ ನೀನು ನನ್ನೆದ್ರುಸೋದು” ಅಂದು ಮೊಬೈಲ್ನ ತುಳ್ದು ತುಳ್ದು ಚೂರು ಚೂರು ಮಾಡಿ, ಏಳಕ್ಕೋಗ್ತಿದ್ದವ್ನ ಎದೆಗೆ, ಮಕಕ್ಕೆ ಕಾಲಿಂದ ಒದ್ದು “ಇನ್ಮೇಲೆ ನನ್‌ ತಂಟೀಗ್‌ ಬಂದೀಯೆ… ಉಸಾರ್.‌ ಇನ್ನೇನಾದ್ರೂ ಕ್ಯಾತೆ ತೆಗಿದ್ಯೋ ಕಂಬೀ ಎಣ್ಸಕ್ಕೆ ಕಾಯ್ತಿರು” ಎಂದು ಇನ್ನೊಂದ್ಸಲ ಒದ್ದು ಒಂದ್ಸಲ ಕ್ಯಾಕರ್ಸಿ ಉಗ್ದು “ಸನಿ ತೊಲುಗ್ತು” ಅಂದ್ಕಂಡು ತಿರ್ಗೂ ನೋಡ್ದೆ ಮನೆ ಕಡೆ ಎಜ್ಜೆ ಆಕಿದ್ಳು.

ಮನೆಗೋದವ್ಳೆ ಮಕ ತೊಕ್ಕೊಂಡು ಟವಲ್ನಾಗೆ ಒರಸ್ಕೋತ ತಲೆ ಎತ್ತಿದ್ರೆ ಮನೆ ತುಂಬೆಲ್ಲಾ ಜೇಡನ ಬಲೆಗ್ಳೇ ಕಂಡ್ವು. ಒಂದ್ಕೋಲಿಗ್‌ ಪೊರ್ಕೆ ಕಟ್ಕೊಂಡು ಒಂದ್ಕಡೇನಿಂದ ಒಡೀತಾ ಬಂದ್ಳು. ಅಷ್ಟೊತ್ತಿಗ್‌ ಮನೆಗ್ಬಂದ ಗಂಗಮ್ಮ. “ಇದೇನ್ಮಾಡ್ತಿದೀ ರಮ್ಮಿ ಚಂಜೇ ಒತ್ನಾಗ. ಈಸ್ಟೊತ್ನಾಗ ಕಸ ಬಳೀಬಾರ್ದು. ಈ ಭಾನ್ವಾರ್ದಿಂದ ವೋಟಿ ಕೆಲಸ್ವಿಲ್ಲ. ನಾನೇ ಒಡೀತಿದ್ದೆ” ಅಂದ್ಳು. ನಾನೂ ಎಲ್ಡು ತಿಂಗ್ಳಿಂದ್ಲೂ ಅಂಗೇ ಅನ್ಕೊಂತಿದ್ದಿ. ಬಿಟ್ಟಿದ್ದಕ್‌ ನೋಡು ಮನೆ ಪೂರಾ ಬಲೆ ಕಟ್ಕಂಡದೆ. ಆಗ, ಈಗ ಅನ್ಕಂಡ್ರೆ ಆಗದೇ ಇಲ್ಲ. ಬಲೆ ಕಟ್ಟಕ್‌ ಬಿಡ್ದಂಗ್‌ ಅಲ್ಲಲ್ಲೇ ಝಾಡಿಸ್ಬಿಡ್ಬೇಕ. ಇಲ್ದಿದ್ರೆ ಯಾತ್ರಾಗಾನ ಬಿದ್ರೆ ವಿಸವಾಯ್ತದೆ” ಅಂದು ಒಂದು ಕಡೇಂದ ಕಸ ಬಳ್ದು ಎತ್ಕೊಂಡೋಗಿ ಆಚೆ ಬಿಸಾಕ್‌ ಕೈತೊಕ್ಕೊಂಡ್‌ ಬಂದು ಓದಕ್ಕಂತ ಪುಸ್ಕ ತೆಕ್ಕೊಂಡು ಕುಂತ್ಳು. ಅದ್ರಾಗಿದ್‌ ಅಕ್ಸರ ಚಂದಾಗಿ ಕಾಣಕ್‌ ಸುರ್ವಾತು.

  • ಟಿ.ಎಸ್. ಶ್ರವಣ ಕುಮಾರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *