ಕಣ್ಣು ಕಾಣದ ನೋಟ/ ಯಾವುದು ಅನ್ಯಾಯ?- ಎಸ್.ಸುಶೀಲ ಚಿಂತಾಮಣಿ
ಅವಳ ಕಥೆ ಮೈ ಜುಂ ಎನ್ನುವಂತಹದ್ದು. ಹದಿನಾರರ ಹರೆಯದಲ್ಲಿ ಅವಳ ಅಪ್ಪ ತೀರಿಕೊಂಡಾಗ ಅಕ್ಕ ಮತ್ತು ತಂಗಿಯರ ನಡುವೆ ಇದ್ದ ಹೆಣ್ಣು ಏನನ್ನು ತಾನೇ ಯೋಚಿಸಿಯಾಳು. ಅವಳ ವಿಧವೆ ತಾಯಿ ಅವರಿವರ ಕಾಲು ಹಿಡಿದು ಸಾಲ ಸೋಲ ಮಾಡಿ ದೊಡ್ಡ ಮಗಳಿಗೆ ತನ್ನ ಅಣ್ಣನ ಮಗನಿಗೇ ಕೊಟ್ಟು ಮದುವೆ ಮಾಡಿದಾಗ ಗೆದ್ದೆ ಎಂದು ಕೊಂಡಿದ್ದಳು.
ಮನೆಯ ಗಂಡಸು ಎಂದು ಅಳಿಯನಿಗೆ ತಗ್ಗಿ ಬಗ್ಗಿ ನಡೆಯುತ್ತಲೇ ಇರುವಾಗಲೇ ಎರಡನೇ ಮಗಳನ್ನು ಅಳಿಯನ ಸಂಬಂಧಿಗೇ ಕೊಟ್ಟು ಮದುವೆ ಮಾಡಿದಳು. ಹತ್ತರವರೆಗೂ ಓದಿರದ ಅವಳು ಮದುವೆ ಆಗುವುದೇ ಜೀವನದ ಸಾರ್ಥಕತೆಯ ಒಂದು ಸಂಕೇತ ಎಂದು ನಂಬಿ ಮದುವೆ ಆಗಿದ್ದಳು. “ಮದುವೆಯ ಅರ್ಥ ಇಷ್ಟೇ ಆಗಿತ್ತೇ?” ಎನ್ನುವುದು ಅವಳಿಗೆ ಮದುವೆಯಾದ ವಾರಕ್ಕೇ ತಿಳಿಯಿತು. ನಿಂತರೆ ಕೂತರೆ ತಪ್ಪು ಕಂಡುಹಿಡಿಯುವ , ಕುಡಿಯುವ ಬಡಿಯುವ ಮನುಷ್ಯ ಎಂದು ಕರೆಯಲಾಗದ ಗುಂಪಿಗೆ ಸೇರಿದ ಗಂಡನ ಜೊತೆಗೆ ಹೊಂದಿಕೊಳ್ಳುತ್ತಲೇ ಸಣ್ಣ ಕೆಲಸ ಮಾಡುತ್ತಲೇ ಸಂಸಾರ ತೂಗಿಸುತ್ತಿದ್ದವಳೂ ಅವಳೇ. ಕೂಡಿಟ್ಟ ಹಣದಿಂದ ಪ್ರಾರಂಭಿಸಿದ ಅವಳ ಕೈಗಾರಿಕೆ ಮೇಲೆದ್ದಾಗ ಸಾವಿರಾರು ಜನರಿಗೆ ಆಶ್ರಯವಾದಾಗ ಎಲ್ಲೋ ಒಂದು ಕಡೆ ಅವಳಿಗೆ ಸಮಾಧಾನವಾಗುತ್ತಿತ್ತು. ಮನೆಯ ಹೊರಗಿನ ಸಮಾಧಾನ ಮನೆಯ ಒಳಗೆ ಸಿಗದೇಹೋದಾಗ ಆಗುವ ತುಮುಲ ಕಣ್ಣಿಗೆ ಕಾಣುವಂತದ್ದಲ್ಲ. ಕೀಳರಿಮೆಯಿಂದ ಬಳಲುತ್ತಿರುವ ಗಂಡ ತನ್ನಲ್ಲಿಲ್ಲದ್ದನ್ನು ಇದೆ ಎಂದು ತೋರಿಸಿಕೊಳ್ಳುತ್ತಾ, ತನ್ನ ಹೆಂಡತಿಯ ಯಶಸ್ಸಿಗೇ ತಾನೇ ಕಾರಣ ಎನ್ನುವಂತೆ ಎಲ್ಲರ ಮುಂದೆ ಕೊಚ್ಚಿಕೊಳ್ಳುವುದು, ಹೆಂಡತಿಯನ್ನು ಕೆಲಸಕ್ಕೆ ಬಾರದ ವಸ್ತು ಎನ್ನುವಂತೆ ಹೀಯಾಳಿಸುವುದು ಒಂದು ಕಡೆ.
‘ಅಳಿಯನಿಗೆ ಎದುರಾಡ ಬೇಡ. ತಗ್ಗಿ ಬಗ್ಗಿ ನಡೆ’ ಎಂದು ಅಳಿಯನಿಗೆ ತಾನೂ ಹೆದರಿ, ಮಗಳೂ ಹೆದರಿಕೆಯಲ್ಲೇ ಬದುಕುವಂತೆ ಮಾಡುವ ತಾಯಿ ಒಂದು ಕಡೆ. ಇಬ್ಬರ ಕೈಯಲ್ಲೂ ನಲುಗಿ ಅವಳು ಒಳಗೊಳಗೇ ಸಾಯುತ್ತಿದ್ದಳು.
ಒಬ್ಬ ಹೆಣ್ಣಿನ ಆಂತರಿಕ ಶಕ್ತಿಯನ್ನು ಯಾರೆಲ್ಲ ಹೇಗೆಲ್ಲ ಕುಗ್ಗಿಸಬಲ್ಲರು ಎನ್ನುವುದನ್ನು ಬರಿಯ ಕಣ್ಣಿನಿಂದ ಕಾಣಲಾಗುವುದಿಲ್ಲ. “ಪತಿಯ ದಬ್ಬಾಳಿಕೆಯನ್ನು, ಅಮಾನವೀಯತೆಯನ್ನು, ರಾಕ್ಷಸೀಯ ಪ್ರವೃತ್ತಿಯನ್ನು ಸಹಿಸಿಕೊಂಡು ಬದುಕಿರಬೇಕು, ಇದೇ ಹೆಂಡತಿಯಾದವಳ ನಿಜವಾದ ಧರ್ಮ. ಇದಕ್ಕೆ ವಿರುದ್ಧವಾಗಿ ದನಿ ಎತ್ತಿದರೆ ಸಮಾಜದಿಂದ ನೀನು ಹೊರಗಾಗುತ್ತೀ. ನಿನಗೆ ಒಬ್ಬ ಹೆಣ್ಣಿಗೆ ಸಮಾಜದಲ್ಲಿ ಸಿಗುವ ಗೌರವ ಸ್ಥಾನಮಾನಗಳು ಸಿಗುವುದಿಲ್ಲ” ಎನ್ನುವುದನ್ನು ವಿವಾಹಿತ ಹೆಣ್ಣಿನ ಮನಸ್ಸಿನಲ್ಲಿ, ಸ್ವತಃ ತಾಯಿಯಾದವಳೇ ಹುಟ್ಟು ಹಾಕಿ, ನೆಲೆಗೂಡಿಸುತ್ತಾ ಬಂದರೆ ತನಗಾಗಿರುವ ಅನ್ಯಾಯದ ವಿರುದ್ಧ ಹೋರಾಡುವುದಿರಲಿ, ಅದರ ಬಗ್ಗೆ ದನಿ ಎತ್ತಲೂ ಹಿಂಜರಿಯುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚುತ್ತಾ ಹೋಗುವುದಿಲ್ಲವೇ?
‘ಅನ್ಯಾಯವನ್ನು ಸಹಿಸಿಕೊಳ್ಳುತ್ತಾ ಬದುಕಬೇಕು’ ಎಂದು ಬೋಧಿಸುವ ಹೆಂಗಸರ ಸಂಖ್ಯೆಯ ಜೊತೆಗೆ, ಅವರ ಮಾತನ್ನು ತಳ್ಳಿಹಾಕಲು ಧೈರ್ಯವಿಲ್ಲದೇ ಅನ್ಯಾಯವನ್ನು ಸಹಿಸಿಕೊಳ್ಳುತ್ತಾ ಹೋಗುವವರ ಸಂಖ್ಯೆ ಹೆಚ್ಚುತ್ತಾ ಹೋದಾಗ, ಅನ್ಯಾಯ ಮಾಡುವವರ ಸಂಖ್ಯೆ ಇಳಿಯುವುದಾದರೂ ಯಾವಾಗ?
ನಾನು ಪುರುಷ ಎನ್ನುವುದೇ ಒಂದು ಸ್ಥಾನವೇ? ದಬ್ಬಾಳಿಕೆಯ ಅಧಿಕಾರ ಆ ಸ್ಥಾನದೊಂದಿಗೆ ಬರುವಂತದ್ದೇ? “ನಾನು ನಿನ್ನನ್ನು ಮದುವೆ ಆಗಿ ನಿನ್ನ ಜೀವನದಲ್ಲಿ ನಿನಗೆ ಯಾರೂ ಮಾಡಲು ಸಾಧ್ಯವಿರದ ದೊಡ್ಡ ಪರೋಪಕಾರವನ್ನು ಮಾಡಿದ್ದೇನೆ. ನೀನು ನಾನು ಹೆಕ್ಕಿ ತಂದಿಟ್ಟ ವಸ್ತು . ನಿನ್ನನ್ನು ನಾನು ಹೇಗೆ ಬೇಕಾದರೂ ಉಪಯೋಗಿಸಬಲ್ಲೆ. ನಿನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇಲ್ಲ” ಎನ್ನುವಂತೆ ನಡೆದುಕೊಳ್ಳುವ ಪುರುಷರು ಈಗಲೂ ಇದ್ದಾರೆ. ಇಂತಹ ಪುರುಷರು ಕಣ್ಣಿಗೆ ಕಾಣದಂತೆ ಆಗಬೇಕಾದರೆ, “ಅನ್ಯಾಯದ ವಿರುದ್ಧ ದನಿ ಎತ್ತದಿರಿ, ಅನ್ಯಾವನ್ನು ಸಹಿಸಿಕೊಳ್ಳುತ್ತಾ ಹೋಗಿ, ನಿಮ್ಮ ತಾಳ್ಮೆಯನ್ನು ಈ ವಿಷಯದಲ್ಲಿ ಬೆಳೆಸಿಕೊಳ್ಳುತ್ತಾ ಹೋಗಿ” ಎಂದು ವಿವಾಹಿತ ಹೆಣ್ಣು ಮಕ್ಕಳಿಗೆ ಬೋಧಿಸುವ ತಾಯಂದಿರ, ಪೋಷಕರ ಸಂಖ್ಯೆ ಕಡಿಮೆ ಆಗಲೇಬೇಕಿದೆ. ಅನ್ಯಾಯದ ದಾರಿಯಲ್ಲಿ ನಡೆಯುತ್ತಿರುವವರನ್ನು ಆಗಾಗ ನಾವು ಕಾಣಬಹುದು. ಆದರೆ, ಬೇರೆಯವರ ಅನ್ಯಾಯವನ್ನು ಸಹಿಸಿಕೊಂಡು ಬದುಕಿ ಎನ್ನುವವರು ನಮ್ಮ ಕಣ್ಣಿಗೆ ಅಷ್ಟು ಸುಲಭವಾಗಿ ಕಾಣುವುದಿಲ್ಲ. ನಮ್ಮ ದನಿ ಈ ಎರಡನೇ ವರ್ಗದವರ ವಿರುದ್ಧವೂ ಏಳಬೇಕಿದೆ. ನಾವು ಕಾಣಬೇಕಾದದ್ದು ಬಹಳಷ್ಟು ಇದೆ.
ಎಸ್.ಸುಶೀಲ ಚಿಂತಾಮಣಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.