ಕಣ್ಣು ಕಾಣದ ನೋಟ/ಮೊಸರಜ್ಜಿಯ ಅಸ್ಮಿತೆ – ಸುಶೀಲಾ ಚಿಂತಾಮಣಿ

ತಲೆಯ ಮೇಲೆ ದೊಡ್ಡ ಬುಟ್ಟಿಯಲ್ಲಿ ಇಪ್ಪತ್ತು ಸೇರು ಮೊಸರು ಎರಡು ಸೇರು ಹಾಲು ಎರಡು-ಮೂರು ಕೆ.ಜಿ. ಬೆಣ್ಣೆ ಇಟ್ಟುಕೊಂಡು, ತನ್ನ ಹಳ್ಳಿಯಿಂದ ನಾಲ್ಕು ಐದು ಮೈಲಿ ದೂರ ನಡೆದು ನಗರಕ್ಕೆ ಬಂದು ಬಡಾವಣೆಯ ಎಲ್ಲ ಮನೆಗೆ ಮೊಸರು ಹಾಕುತ್ತಿದ್ದ 70-75 ವರ್ಷಕ್ಕೇ ನೂರು ವರ್ಷಗಳಂತೆ ಕಾಣುತ್ತಿದ್ದ ಮೊಸರಜ್ಜಿಯನ್ನು ನಮ್ಮೂರಿನವರು ಯಾರೂ ಮರೆಯುವಂತೆಯೇ ಇಲ್ಲ. ಹಾಗೇ ಅವಳ ಹಿಂದೆಯೇ ನಗಾರಿ ಹೊಡೆದರೂ ಕಿವಿ ಕೇಳದ ದಾರಿಯುದ್ದಕ್ಕೂ ಅಜ್ಜಿಯ ಸಹಸ್ರನಾಮ ಕೇಳಿಸಿಕೊಳ್ಳಲು ಪ್ರಯತ್ನ ಪಡುತ್ತಾ ಒಂದು ಕಣ್ಣಿಗೆ ಮಾತ್ರ ಕನ್ನಡಕ ಹಾಕಿಕೊಂಡು ಬರುತ್ತಿದ್ದ ಮೊಸರಜ್ಜಿಯ ಗಂಡ ಮೊಸರಜ್ಜನನ್ನೂ ಯಾರೂ ಮರೆಯುವಂತಿಲ್ಲ

ಅಜ್ಜಿ ಬಂದಳು ಎಂದು ನಾನು ಅಮ್ಮನಿಗೆ ಹೇಳಿದಾಗಲೆಲ್ಲಾ ಅವಳು “ಮೊಸರಜ್ಜಿ ಬಂದ್ಳೂ ಅಂತ ಹೇಳ್ಮಗಾ “ ಅನ್ನುತ್ತಿದ್ದಳು. ಆದರೆ ಅಜ್ಜಿಯ ಜೊತೆಗೆ ಬಂದ ಅಜ್ಜನನ್ನು ನಾನು ಬರೀ “ಅಜ್ಜ” ಎಂದಷ್ಟೇ ಕರೆಯ ಬೇಕು. ಇದು ಮೊಸರಜ್ಜಿ ಪ್ರತಿದಿನ ನನಗೆ ಕೊಡುತ್ತಿದ್ದ ಆರ್ಡರ್. ಮೊಸರಜ್ಜಿಗೆ ಅವಳ ಗಂಡನನ್ನು ಮೊಸರಜ್ಜ ಎಂದು ನಾನು ಕರೆದರೆ ಅದ್ಯಾಕೆ ಅಷ್ಟು ಕೋಪ ಬರುತ್ತಿತ್ತು…ಯಾಕೆ ಬುಸುಗುಟ್ಟುತ್ತಿದ್ದಳು., ಎನ್ನುವುದು ಆ ಪುಟ್ಟ ವಯಸ್ಸಿನಲ್ಲಿ ನನಗೆ ತಿಳಿಯುತ್ತಿರಲಿಲ್ಲ. ಅವಳು ನನ್ನನ್ನು ಗದರಿಸುತ್ತಿದ್ದದ್ದೂ ನನಗೆ ನೆನಪಿದೆ. “.ಯಾಕಾ? ಅವನ್ನ್ಯಾಕ ಮೊಸರಜ್ಜ ಅಂತೀ ನೀನೂ? ಅವನೇನು ಮಾಡವ್ನೇ? ಎಂದು ಅವಳು ಯಾಕೆ ಕೇಳುತ್ತಿದ್ದಳೆಂದು ಆಗ ನನಗೆ ಅರ್ಥವಾಗುತ್ತಿರಲ್ಲ. “ಸಂಪಾದ್ನೇ ಎಲ್ಲಾ ಉಂಡೆ ಮಾಡಿ ಮಕ್ಕಳಿಗೆ ಕೊಟ್ಟಾ..ಹೆಂಡ್ತಿಗೇನಿಟ್ಟಾ? ತಲೆ ಮೇಲೆ ಬುಟ್ಟಿ ಹೊರೆಸಿ ಮೈಲಿ ಮೈಲಿ ನಡಸ್ತಾ ಅವ್ನೆ.. ನಾನು ನಡೆದದ್ದ ಲೆಕ್ಕ ಹಾಕಿದ್ರೆ ಚಂದ್ರಲೋಕಕ್ಕೆ ನಾಲಕ್ಕು ಸಲ ನಡಕೊಂಡು ಹೋಗ್ಬರ್ಬೋದಿತ್ತು “ ಅನ್ನುತ್ತಿದ್ದ ಮೊಸರಜ್ಜಿಯ ಮಾತುಗಳು ಈಗೀಗ ನನಗೆ ನೆನಪಾಗುತ್ತದೆ. ತನ್ನದೆಲ್ಲವನ್ನೂ ಹುಟ್ಟಿಸಿದ ಮಕ್ಕಳಿಗೆ ಕೊಟ್ಟು..ತನ್ನ ಬದುಕಿಗೆ..ತನ್ನ ಹೆಂಡತಿಯ ಬದುಕಿಗೆ ಮುದಿವಯಸ್ಸಿನಲ್ಲಿ ಹೆಂಡತಿಯ ಮೇಲೆಯೇ ಆಧಾರವಾಗಿರುವ ಮುದಿಗಂಡನನ್ನು ತಾನು ಸಾಕುವುದಿಲ್ಲವೆಂದು ಮೊಸರಜ್ಜಿ ಎಂದಿಗೂ ಹೇಳಲಿಲ್ಲ. ಸೊಂಟ ಬಾಗಿದ ಆ ಇಳಿ ವಯಸ್ಸಿನಲ್ಲಿಯೂ ತನ್ನ ಗಂಡನಿಗೆ ಬಿಸಿ ಬಿಸಿ ದೊಡ್ಡ ಮುದ್ದೆ ಜೊತೆಗೆ ಹುಣಿಸೇ ಗೊಜ್ಜು ಬಸ್ಸಾರು ಮಾಡಿ ಬಡಿಸುವುದರಲ್ಲಿ ಮೊಸರಜ್ಜಿಗೆ ಬಾರೀ ಖುಷಿ. ತಿರುಪತಿಯ ಪ್ರಸಾದ ಎಂದು ನಾಲಕ್ಕು ಕಾಳು ಲಾಡು ನಮ್ಮ ಅಮ್ಮ ಮೊಸರಜ್ಜಿಗೆ ಕೊಟ್ಟರೆ ಅದರಲ್ಲಿ ಮೂರು ಕಾಳನ್ನು ಸೆರಗಿನಲ್ಲಿ ಸುತ್ತಿ ಅಜ್ಜನಿಗೆ ಇಡುತ್ತಿದ್ದವಳು ಮೊಸರಜ್ಜಿ. ಅಜ್ಜನ ಒಂದು ಕಣ್ಣಿನ ಕನ್ನಡಕದ ಪವರ್ ಬದಲಾಯಿಸಲು ಅಜ್ಜಿಯೇ ನನಗೆ ದುಡ್ಡು ಕೊಟ್ಟು, “ಅಜ್ಜನಿಗೆ ನಾನು ದುಡ್ಡು ಕೊಟ್ಟೆ ಎಂದು ಹೇಳಬೇಡ. ಫ್ರೀಯಾಗಿ ಅಸ್ಪತ್ರೆಯಲ್ಲಿ ನೀನೇ ಕೊಡಿಸಿದ್ದೀಯಾ” ಎಂದು ಹೇಳು ಅಂದದ್ದು ಇಂದಿಗೂ ನೆನಪಿದೆ.

ಆದರೆ ಮೊಸರಜ್ಜಿಯ ತಕರಾರೆಲ್ಲಾ ಜನ ಅಜ್ಜನನ್ನು ‘ಮೊಸರಜ್ಜ’ ಎಂದು ಕರೆಯುವುದರಲ್ಲಿ ಮಾತ್ರ. ಅವಳ ತಕರಾರಿಗೂ ಅರ್ಥವಿದೆ. ಅವಳೇ ಅದಕ್ಕೆ ಸಮಜಾಯಿಷಿ ಸಹ ಕೊಟ್ಟಿದ್ದಳು. ‘ಮೊಸರಜ್ಜ’ ಎಂದು ಕರೆಸಿಕೊಳ್ಳಲು ಅವನಿಗ್ಯಾವ ಯೋಗ್ಯತೆ ಇದೆ . ಅವನೇನು ಹಸು ಮೇಯ್ಸಿದ್ನಾ? ಹುಲ್ಲಾಕ್ದ್ನಾ? ಹಾಲ್ಕರೆದಿದ್ನಾ? ಬೆಣ್ಣೆ ತೆಗೆದಿದ್ನಾ? ಬುಟ್ಟಿ ಹೊತ್ತಿದ್ನಾ? ಮನೆ ಮನೆಗೂ ತಿರುಗಿದ್ನಾ? ನನ್ನ ಹಿಂದೆ ಹೊತ್ತೋಗ್ದೆ ..ಅವನಿಗೆ ಊರಲ್ಲಿ ಕ್ಯಾರೇ ಅನ್ನೋವ್ರು ಇಲ್ಲಾ ಅಂತಾ ಬಂದ್ರೇ ಅವನು ಹೇಗೆ ಮೊಸರಜ್ಜ ಆಗ್ತಾನೆ? ಎಂಬ ಅಜ್ಜಿಯ ಪ್ರಶ್ನೆಯ ಹಿಂದಿನ ಜಿಜ್ಞಾಸೆ ಆಗ ಅರ್ಥವಾಗುತ್ತಿರಲಿಲ್ಲ. ಹೀಗೆಲ್ಲಾ ಅಜ್ಜಿ ಹೇಳಿದ್ದು ನಿಜವಿದ್ದಿರಬಹುದು., ಎಂದು ಯಾರೂ ಒಪ್ಪುತ್ತಿರಲಿಲ್ಲ. ಯಾಕೋ ಗಂಡನ ಮೇಲೆ ರೋಸಿ ಗೊಣಗಿಕೊಂಡದ್ದು ಇರಬಹುದು ಎಂದಷ್ಟೇ ಎಲ್ಲರೂ ಯೋಚಿಸುತ್ತಿದ್ದರು.

ಆದರೆ ನನ್ನ ಈ ಐವತೈದು ದಾಟಿದ ವಯಸ್ಸಿನಲ್ಲಿ ಮೊಸರಜ್ಜಿಯ ಮಾತಿನ ಸುತ್ತಲಿನ ಘಟನೆಗಳನ್ನು ಹಿಂತಿರುಗಿ ನೋಡಿದಾಗ ನನ್ನ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಹಂಚಿಕೊಳ್ಳಬೇಕಾದುದ್ದನ್ನೆಲ್ಲಾ ಹಂಚಿಕೊಳ್ಳಲು ಸಿದ್ಧವಿದ್ದ ಮೊಸರಜ್ಜಿ ಒಂದನ್ನು ಮಾತ್ರ ಹಂಚಿಕೊಳ್ಳಲು..ತನ್ನ ಗಂಡನೊಂದಿಗೂ ಹಂಚಿಕೊಳ್ಳಲು ಸಿದ್ಧವಿರಲಿಲ್ಲ. ಅದು ಆಕೆಯ “ಐಡೆಂಟಿಟಿ”. ಅದು ಆಕೆಯ ಗುರುತು. ಅದು ಆಕೆಯ ಅಸ್ತಿತ್ವ. ಗಂಡ ತನ್ನ ಆಸರೆಯಲ್ಲಿ ಬದುಕುವುದರ ಬಗ್ಗೆ ಆಕೆಗೆ ಯಾವ ಆಕ್ಷೇಪಣೆಯೂ ಇಲ್ಲ. ತನ್ನ ಆಸರೆಯನ್ನು ಅವಳು ಎಂದಿಗೂ ತನ್ನ ಗಂಡನಿಗೆ ಅಲ್ಲಗೆಳೆಯುವವಳೇ ಅಲ್ಲ. ಆದರೆ, ಯಾವುದೇ ಶ್ರಮ ಪಡದೆ ತಾನು ತನ್ನ ಐವತ್ತೂ ವರ್ಷಗಳಿಗೆ ಮಿಗಿಲಾದ ಶ್ರಮದಿಂದ ಗಳಿಸಿದ “ಐಡೆಂಟಿಟಿ”ಯನ್ನು ತನ್ನದಾಗಿಸಿಕೊಳ್ಳಲು ಗಂಡ ಪ್ರಯತ್ನಿಸಿದಾಗ, ಅಥವಾ ಅದನ್ನು ಬೇರೆ ಯಾರಾದರೂ ಆಕೆಯ ಗಂಡನಿಗೆ ಪುಕ್ಕಟ್ಟೆ ಕೊಟ್ಟಾಗ ಮೊಸರಜ್ಜಿ ತಿರುಗಿ ಬೀಳುತ್ತಿದ್ದುದು ಯಾಕೆ ಎಂದು ಹಿಂತಿರುಗಿ ನೋಡಿದಾಗ ಈಗ ಸ್ವಲ್ಪ ಸ್ವಲ್ಪವಾಗಿ ಅರ್ಥವಾಗುತ್ತಿದೆ. ಒಂಬತ್ತು ವರ್ಷಕ್ಕೆ ಮದುವೆ ಆದ ಮೊಸರಜ್ಜಿ ..ಗಂಡನಿಗೆ..ಆತನ ಮನೆಗೇ, ಆತನಿಂದ ಹುಟ್ಟಿದ ಮಕ್ಕಳಿಗೆ , ಗಂಡನ ಸುತ್ತಲಿನವರಿಗೇ ಜೀವ ತೇಯ್ತಾ ತೇಯ್ತಾ ತನ್ನದೆಲ್ಲವನ್ನೂ ಗಂಡನ ಸಂಸಾರಕ್ಕೆ ಕೊಟ್ಟರೂ ಒಂದನ್ನು ಮಾತ್ರ ತನ್ನದಾಗಿ ಮಾತ್ರ ಉಳಿಸಿಕೊಳ್ಳಲು ಪ್ರಯತ್ನಿಸಿದ್ದರಲ್ಲಿ ಎಷ್ಟು ಅರ್ಥವಿತ್ತು?. ಆ ಒಂದಕ್ಕಾಗಿಯೇ, ಆ ಒಂದನ್ನು ಊಳಿಸಿಕೊಳ್ಳುವುದಕ್ಕಾಗಿಯೇ ಅವಳು 70-80 ವರ್ಷ ಗಂಡನೊಂದಿಗೆ ಕಮಕ್ ಕಿಮಕ್ ಎನ್ನದೇ ಸಂಸಾರ ಮಾಡಿದ್ದಿರಬಹುದೇ? “ಯಾರಿಗೆ ಯಾವುದು ಯಾಕೆ ಮುಖ್ಯವಾಗುತ್ತದೆ ಎಂದು ಯಾರೂ ಹೇಳಲಾಗುವುದಿಲ್ಲ” ಎನ್ನುವುದು ಎಷ್ಟು ಸತ್ಯ.

ಮದುವೆ ಗಂಡ ಮಕ್ಕಳು ಸಂಸಾರ ಎಲ್ಲವೂ ಸರಿ. ಆದರೆ ಇವೆಲ್ಲದರ ಹೊರತಾಗಿ ತನ್ನದು ಎನ್ನುವುದು ಏನು? ತಾನು ಯಾರು? ತನ್ನದೇ ಆದ ಒಂದು ವಿಶಿಷ್ಟತೆ ಏನು? ಎನ್ನುವುದನ್ನು ಕಂಡುಕೊಳ್ಳ ಬಯಸಿದ್ದ , ಅದಕ್ಕೆ ಅಂಟಿಕೊಂಡು ನಿಂತಿದ್ದ, ಅದಕ್ಕೆ ಧಕ್ಕೆ ಬಂದಾಗ ತಿರುಗಿಬೀಳುವ ಗಟ್ಟಿತನ ಇದ್ದ ಮೊಸರಜ್ಜಿ ನಮಗೆಲ್ಲಾ ಏನೋ ಹೇಳುತ್ತಿದ್ದಾಳೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.
‘ಕಬ್ಬಿನ ಜಲ್ಲೆಯಂತೆ ನನ್ನನ್ನು ಹಿಂಡಿ, ರಸ ತೆಗೆಯಿರಿ, ಕುಡಿಯಿರಿ, ಕಟ್ಟ ಕಡೆಯ ತೊಟ್ಟಿನವರೆಗೂ ಹಿಂಡಿ, ನಂತರ ಬೀಸಾಡಿ, ಕಾಲಲ್ಲಿ ಹಾಕಿ ಹೊಸಕಿ ಎಲ್ಲವೂ ಸರಿ. ಆದರೆ ರಸವನ್ನು ಮಾತ್ರ “ಕಬ್ಬಿನ ರಸವೇ” ಎಂದು ಹೇಳಬೇಕು ಎನ್ನುವುದನ್ನು ಮರೆಯಬೇಡಿ.’ ಎಂದು ಅಜ್ಜಿ ಈಗಲೂ ಎಲ್ಲಿಂದಲೋ ಹೇಳುತ್ತಿದ್ದಾಳೆ ಎನ್ನುವಂತೆ ಕಿವಿಯಲ್ಲಿ ದನಿ ಏಳುತ್ತದೆ. ಆ ದನಿಯೇ ಒಂದು ಚೇತನ . ಅದಕ್ಕೆ ನಾನು ಆಭಾರಿ!

 

 

 

 

 

 

ಲೇಖಕರು ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲರು. ಹಿರಿಯ ಮಧ್ಯಸ್ಥಿಕೆಗಾರರು ಮತ್ತು ಹಿರಿಯ ತರಬೇತುದಾರರು

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಕಣ್ಣು ಕಾಣದ ನೋಟ/ಮೊಸರಜ್ಜಿಯ ಅಸ್ಮಿತೆ – ಸುಶೀಲಾ ಚಿಂತಾಮಣಿ

Leave a Reply

Your email address will not be published. Required fields are marked *