ಕಣ್ಣು ಕಾಣದ ನೋಟ/ಬದುಕಿಯೂ ಸತ್ತಂತೆ ಇರುವುದು – ಎಸ್. ಸುಶೀಲಾ ಚಿಂತಾಮಣಿ
ನಮ್ಮ ದೃಷ್ಟಿಯಲ್ಲಿ ಸತ್ತವರನ್ನು ನಮ್ಮ ಮಕ್ಕಳ ದೃಷ್ಟಿಯಲ್ಲಿಯೂ ಸಾಯುವಂತೆ ಮಾಡುವುದು ಅದೆಷ್ಟು ನ್ಯಾಯ? ಬದುಕಿರುವ ಎಲ್ಲರನ್ನೂ ಬದುಕಿರುವಂತೆಯೇ, ಪರಿಗಣಿಸಲು ಕಲಿಯಬೇಕಾದ ಸಮಯ ಬಂದಿದೆ. ಬದುಕಿಯೂ ಸತ್ತಂತೆ ಇರುವ ಅನುಭವ, ಗಂಡಸಿಗೆ ಒಂದು ಬಗೆ, ಹೆಂಗಸಿನ ಪಾಲಿಗೆ ಇನ್ನೊಂದು ಬಗೆ ಇರಬಹುದು.
ನನ್ನ ವಕೀಲ ಸ್ನೇಹಿತೆಯೊಬ್ಬರ ಆಫೀಸಿನಲ್ಲಿ ಕೆಂಪಣ್ಣನದೊಂದು ಹಳೆಯ ಕೇಸು ಇತ್ತು. ಒಂದು ದಿನ ಇದ್ದಕಿದ್ದಂತೆ ಕೆಂಪಣ್ಣ ಮತ್ತೊಂದು ಕೇಸಿನ ನೋಟೀಸು ಹಿಡಿದು ಬಂದನಂತೆ. ಅದು ಆತನ ಹೆಂಡತಿ ಜೀವನಾಂಶಕ್ಕೆ ಹಾಕಿದ ಕೇಸು. ವಕಾಲತ್ತು ಹಚ್ಚಿ ತಕರಾರು ಹಾಕುವ ಕಾಲಕ್ಕೆ “ನಿನ್ನ ಹೆಂಡತಿಯ ವಿಚಾರ ಎಲ್ಲಾ ಹೇಳು” ಎಂದಾಗ ಕೆಂಪಣ್ಣ ಹೇಳಿದ್ದು ಒಂದೇ ಮಾತು – “ಅವಳು ಸತ್ತು ಮೂವತ್ತು ವರ್ಷ ಆತು.. ಈಗೆಲ್ಲಿ ಬಂದಾಳು” ಅಂತ. ಹೌದೇನು? ಎಲ್ಲ ವಕೀಲರಿಗೂ ಗಾಬರಿ. “ಹೌದ್ರೀ ಸ್ವಾಮಿ, ಅವಳು ಸತ್ತು ಮೂವತ್ತು ವರ್ಷಾ ಆಯ್ತು” ಖಂಡಿತವಾಗಿ ಹೇಳಿದ ಕೆಂಪಣ್ಣ. “ ಹಾಗೇ ಬರೀಲೇನು?” ವಕೀಲರು ಕೇಳಿದರು. “ಬರೀರೀ ಹೇಳಿದ್ದೀನಲ್ಲಾ.” ಗ್ಯಾರಂಟೀ ಮಾಡಿದ ಕೆಂಪಣ್ಣ. ಹಾಗೇ ಬರೆಯಲು ಅಸ್ತು ಎಂದ.
ಸರಿ ಕೇಸು ಹಾಕಿದ ಬೀರಮ್ಮನಿಗೂ ಕೆಂಪಣ್ಣನಿಗೂ ಯಾವುದೇ ಸಂಬಂಧ ಇಲ್ಲ. ಕೆಂಪಣ್ಣನ ಹೆಂಡತಿ ಸತ್ತು ಮೂವತ್ತು ವರ್ಷ ಆಗಿದೆ ಎಂದು ತಕರಾರು ಹಾಕಲಾಯಿತು. ಕೂಲಿ ಮಾಡಿ ಬದುಕುತ್ತಿದ್ದ ಕೆಂಪಣ್ಣ ಡೇಟು ಡೇಟಿಗೆ ಕೋರ್ಟಿಗೆ ಬರುವುದಕ್ಕೆ ಸೀನಿಯರ್ ವಿನಾಯಿತಿ ಕೊಟ್ಟಿದ್ದರು. ಬೀರಮ್ಮನ ಪಾಟಿಸವಾಲೂ ಆಯಿತು. ಆಕೆ ಕೆಂಪಣ್ಣನ ಹೆಂಡತಿಯೇ ಅಲ್ಲ ಎಂದು ಸಲಹೆಯೂ ಆಯಿತು. ನಂತರ ಕೆಂಪಣ್ಣನ ವಿಚಾರಣೆ. ಬೀರಮ್ಮನ ವಕೀಲರು ಬೀರಮ್ಮನನ್ನು ಕೆಂಪಣ್ಣನಿಗೆ ತೋರಿಸಿ “ಇವಳು ಯಾರು” ಎಂದರು.
“ನನ್ನ ಹೆಂಡತಿ” ಎಂದ ಕೆಂಪಣ್ಣ. “ಯಾವಾಗ ಮದುವೆ ಆಯಿತು?” “ಸುಮಾರು ನಲವತ್ತು ವರ್ಷ ಹಿಂದೆ…”. ನನ್ನ ಸ್ನೇಹಿತೆಯ ಆಫೀಸಿನವರು ಕಂಗಾಲು. ಜಡ್ಜ್‍ಗೆ ಮನವಿ ಮಾಡಿಕೊಂಡು ವಾಯ್ದೆ ಪಡೆದು ಕೆಂಪಣ್ಣನನ್ನು ಆಫೀಸಿಗೆ ಕರೆಸಿದರು. “ನಿನ್ನ ಹೆಂಡತಿ ಬದುಕಿದ್ದರೂ ಸತ್ತಿದ್ದಾಳೆ ಎಂದು ಸುಳ್ಳು ಯಾಕೆ ಹೇಳಿದೆ?” ಎಂದು ಗದರಿಸಿದಾಗ ಮುಗ್ಧ ಕೆಂಪಣ್ಣ ಹೇಳಿದ್ದು ಒಂದೇ ಮಾತು- “ಹೌದು ಸತ್ತಿದ್ದಾಳೆ… ಯಾವತ್ತು ಅವಳು ನನ್ನ ಗಂಡ ಅಂತ ತಿರುಗಿ ನೋಡ್ದೆ ನನ್ನ ಬಿಟ್ಟು ಹೋದ್ಲೋ.. ಆವತ್ತೇ ಅವಳು ನನ್ನ ಪಾಲಿಗೆ ಸತ್ಲು. ಅದ್ಕೇ ನಾನು ಹಾಗೆ ಹೇಳಿದ್ದು!”
ಮುಂದೇನಾಯಿತು ಎನ್ನುವುದು ನಮಗೀಗ ಮುಖ್ಯವಲ್ಲ. ಆದರೆ ಬದುಕಿದವರು ಕೆಲವರ ಪಾಲಿಗೆ ಅವರ ಜೀವ ಇರುವಾಗಲೇ ಸತ್ತವರಂತಾಗುವುದೇಕೆ ಎಂಬುದನ್ನು ಯೋಚಿಸಲೇ ಬೇಕು. ನಾವು ಎಷ್ಟು ಜನರ ಪಾಲಿಗೆ ಸತ್ತಿದ್ದೇವೆ? ಎಷ್ಟು ವರ್ಷಗಳಿಂದ ಸತ್ತಿದ್ದೇವೆ? ನಮ್ಮ ಪಾಲಿಗೆ ಎಷ್ಟು ಜನ ಎಷ್ಟು ವರ್ಷಗಳ ಹಿಂದೆಯೇ ಸತ್ತಿದ್ದಾರೆ ಎಂದು ಲೆಕ್ಕ ಹಾಕಬೇಕೆನಿಸಿತು. ನಮ್ಮವರ ದೃಷ್ಟಿಯಲ್ಲಿ ನಾವು ಬದುಕಿಯೂ ಸತ್ತಂತೆ ಆಗುವ ಮುನ್ನ ಅವರಿಗಾಗಿ ತುಡಿಯಲೇ ಬೇಕು ಎನಿಸಿತು.
ವೃದ್ಧಾಶ್ರಮದಲ್ಲಿರುವ, ಪೇಯಿಂಗ್ ಗೆಸ್ಟ್ ಹೌಸಿನಲ್ಲಿರುವ ಎಷ್ಟೊಂದು ವೃದ್ಧ ದಂಪತಿಗಳ ಎಷ್ಟೋ ಹಣವಂತ, ಬುದ್ಧಿವಂತ ಮಕ್ಕಳು, ಅಮೆರಿಕದಲ್ಲಿ ದೊಡ್ಡ ದೊಡ್ಡ ಕೆಲಸದಲ್ಲಿದ್ದರೂ, ಇಲ್ಲಿ ಅವರ ತಂದೆ ತಾಯಿಯರ ದೃಷ್ಟಿಕೋನದಲ್ಲಿ ಬದುಕಿದ್ದಾರೆಯೇ ಎಂದು ಕೇಳಿಕೊಂಡಾಗ ಎದೆ ಝುಂ ಎಂದಿತು.
ಗಂಡ ಹೆಂಡತಿಯರ ಜಗಳದಲ್ಲಿ, ಪರಸ್ಪರರ ಮೇಲಿನ ದ್ವೇಷದಿಂದ ಮಗನನ್ನೋ ಮಗಳನ್ನೋ, ಅಪ್ಪನನ್ನೋ ಅಮ್ಮನನ್ನೋ ದೂರವಾಗಿಸುವ, ಬದುಕಿರುವಾಗಲೇ ಮಕ್ಕಳ ಪಾಲಿಗೆ ತಂದೆಯನ್ನೋ ತಾಯಿಯನ್ನೋ ಸಾಯಿಸುವವರ ಬಗೆ ನೆನೆದು ತಲೆ ತಿರುಗಿತು. ಬೇರೆಯವರ ದೃಷ್ಟಿಯಲ್ಲಿ ನಾವು ಸಾಯದಂತೆ,ಸತ್ತಿರದಂತೆ, ಜೀವದಿಂದ ಇರುವಂತೆ ಬದುಕುವುದು ನಮ್ಮ ಕೈಯಲ್ಲಿದೆ. ಬೇರೆಯವರನ್ನು ನಮ್ಮ ದೃಷ್ಟಿಯಲ್ಲಿ ಸಾಯಿಸುವುದು ನಮ್ಮ ಕೈಯಲ್ಲಿರಬಹುದು. ಆದರೆ ನಮ್ಮ ದೃಷ್ಟಿಯಲ್ಲಿ ಸತ್ತವರನ್ನು ನಮ್ಮ ಮಕ್ಕಳ ದೃಷ್ಟಿಯಲ್ಲಿಯೂ ಸಾಯುವಂತೆ ಮಾಡುವುದು ಅದೆಷ್ಟು ನ್ಯಾಯ? ಬದುಕಿರುವ ಎಲ್ಲರನ್ನೂ ಬದುಕಿರುವಂತೆಯೇ, ಪರಿಗಣಿಸಲು ಕಲಿಯಬೇಕಾದ ಸಮಯ ಬಂದಿದೆ. ಹಾಗೆ ಕಣ್ಣಿಗೆ ಕಾಣದ ನೋಟಗಳು ಅವೆಷ್ಟು ಇದೆ?
ಬಹಳ ಮುಖ್ಯವಾಗಿ ಬೀರಮ್ಮನ ಪಾಲಿಗೆ ಗಂಡ, ಕೆಂಪಣ್ಣನ ಪಾಲಿಗೆ ಹೆಂಡತಿ ಅದುವರೆಗೆ ಏಕೆ ಬದುಕಿರಲಿಲ್ಲ? ಅವರು ಸತ್ತಿದ್ದಾರೆ ಎಂದೇ ಅಂದುಕೊಂಡು ಅಷ್ಟು ವರ್ಷಗಳ ಕಾಲ ಹೇಗೆ ಇವರು ಬದುಕಿದ್ದರು? ಈ ಅನುಭವ ಗಂಡಸಿಗೆ ಒಂದು ಬಗೆ, ಹೆಂಗಸಿನ ಪಾಲಿಗೆ ಇನ್ನೊಂದು ಬಗೆ ಇರಬಹುದು. ಆದರೆ “ಇವಳನ್ನು ಗಂಡ ಬಿಟ್ಟುಬಿಟ್ಟಿದ್ದಾನೆ” ಅಥವಾ “ಇವಳು ಗಂಡನ್ನ ಬಿಟ್ಟವಳು” ಎಂದು ಅನ್ನಿಸಿಕೊಳ್ಳುವುದು ಹೆಂಗಸಿನ ಪಾಲಿಗೆ ಬೇರೊಂದು ಬಗೆ.
ಎಸ್. ಸುಶೀಲಾ ಚಿಂತಾಮಣಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.