ಕಣ್ಣು ಕಾಣದ ನೋಟ/ ಬದಲಾದವಳು – ಸುಶೀಲಾ ಚಿಂತಾಮಣಿ

ಗಂಡನಿಗೆ ಲಕ್ವಾ ಹೊಡೆದದ್ದೇ ಇವಳು ಬೀದಿ ಬಸವಿಯಾದಳು ಎಂದವರೂ ಇದ್ದಾರೆ. ಅವರಿಗೆ ಏನು ಕಾಣಬೇಕಿತ್ತೋ ಅದು ಕಾಣುತ್ತಿಲ್ಲ. ಗಂಡ ನೆಟ್ಟಗಿದ್ದಾಗ  ಮುಷ್ಟಿಯಲ್ಲಿ ಜೀವನವನ್ನು  ಅದುಮಿ ಇಟ್ಟುಕೊಂಡಿದ್ದಾಗ   ಹಿಂಸೆ ಪಡುತ್ತಿದ್ದ  ಅವಳ ಜೀವ ಈಗ ಹೊರಗೆ ಬಂದಿದೆ. ಅವಳಿಗೆ ತನ್ನ ಜೀವದ ಬೆಲೆ ಗೊತ್ತಾಗಿದೆ. ತನ್ನ ಜೀವವನ್ನು ತಾನೇ ರಕ್ಷಿಸಬೇಕು ಎನ್ನುವುದು ಅವಳಿಗೆ ಈಗಷ್ಟೇ ಗೊತ್ತಾಗಿದೆ ಎನ್ನುವುದು ಎಲ್ಲರ ಕಣ್ಣಿಗೂ ಕಾಣುವಂತದ್ದಲ್ಲ.

         ಎಷ್ಟೋ ವರ್ಷಗಳ ನಂತರ ಅವಳನ್ನು ನೋಡಿ ದಂಗಾದೆ. ದೇವಸ್ಥಾನಕ್ಕೆ ಹೋಗಿ ಪ್ರಾಕಾರದ ಪ್ರದಕ್ಷಿಣೆ ಹಾಕುತ್ತಿದ್ದಾಗ ಪಕ್ಕದಲ್ಲೇ ಎಲ್ಲೋ ಸುಶ್ರಾವ್ಯ ದನಿಯಲ್ಲಿ ದಾಸರ ಪದ ಕೇಳಿಬಂತು. ಎಲ್ಲೋ ಕೇಳಿದ ದನಿಯಂತಿದೆಯಲ್ಲಾ ಎಂದುಕೊಂಡು ದನಿಯನ್ನೆ ಅನುಸರಿಸಿ ಕೊಂಡು ಹೋದೆ. ದೇವಸ್ಥಾನದ ಪಕ್ಕದ ಹಾಲಿನಲ್ಲಿ ಕಛೇರಿ. ಸರಳವಾದ ರೇಷ್ಮೆ ಸೀರೆ ಉಟ್ಟು ಹಣೆಗೆ ದೊಡ್ಡ ಕುಂಕುಮ ಇಟ್ಟುಕೊಂಡು, ಒಂದು ಜಡೆ ಹಾಕಿಕೊಂಡು ಲಕ್ಷಣವಾಗಿ ಕೂತಿದ್ದ ಅವಳು ಹಾಡುತ್ತಿದ್ದಳು. ಅವಳನ್ನು ಗುರ್ತಿಸುವುದು ನನಗೆ ಒಂದು ಕ್ಷಣ ಕಷ್ಟವೇ ಆಯಿತು.

ಎರಡು ವರ್ಷಕ್ಕೆ ಹಿಂದೆ ನೋಡಿದಾಗ ಸೋತು ಸುಣ್ಣವಾಗಿದ್ದಳು. ಬಡಕಲಾಗಿ ಕರ್ರಗೂ ಕಾಣುತ್ತಿದ್ದಳು. ಮುಖದಲ್ಲಿ ಜೀವನೋತ್ಸಾಹವೇ ಇರಲಿಲ್ಲ. ಯಾವುದೋ ಸೀರೆಗೆ ಯಾವುದೋ ಕುಪ್ಪಸ. ಮೇಲೆ ಮೇಲೆ ಹೋಗುತ್ತಿದ್ದ, ನೆರಿಗೆ ಸರಿಯಾಗಿ ಹಿಡಿಯದ ಸೀರೆ.ಕಣ್ಣ ಸುತ್ತಲೂ ಕರಿಯ ವೃತ್ತಗಳು. ನಾನಾಗಿಯೇ ಮಾತಾಡಿಸಿದಾಗ ಮಾತಾಡಿಸಿದಳಾದರೂ ಅವಳು ಮಾತಾಡುವಾಗ ನನ್ನ ಕಣ್ಣು ತಪ್ಪಿಸುತ್ತಿದ್ದದ್ದು ನನಗೆ ತಿಳಿಯದೇ ಇರಲಿಲ್ಲ. ಅವಳಲ್ಲಿ ಏನೋ ಕೀಳರಿಮೆ ಕಾಡುತ್ತಿದೆ ಎನ್ನುವುದು ಎದ್ದೆದ್ದು ಕಾಣುತ್ತಿತ್ತು. ಮೂರು ನಿಮಿಷ ಮಾತಾಡಿ ತುರ್ತು ಕೆಲಸವಿದೆ ಎಂದು ಹೇಳಿ ಮನೆಗೆ ಓಡಿದ್ದಳು. ಅವಳು ಸುಳ್ಳು ಹೇಳುವವಳೇ ಅಲ್ಲ ಎನ್ನುವುದು ನನಗೆ ಗೊತ್ತಿತ್ತು. ಆದರೆ ಈಗ? ಅದೆಂತಹ ಬದಲಾವಣೆ. ಅವಳು ಇವಳೇ ಎನ್ನುವಂತೆ ಆಯಿತು.

ಅವರಿವರಿಂದ ಅವಳ ಬಗ್ಗೆ ಮಾಹಿತಿ ಹಚ್ಚಿದೆ. ಸಂಬಂಧದಲ್ಲಿಯೇ ಮದುವೆಯಾದ ಅವಳು ಅವಳ ಗಂಡನಿಗೆ ಮತ್ತು ಅತ್ತೆಗೆ ಮನೆ ಕೆಲಸಕ್ಕೆ ಒಬ್ಬಳು ಆಳು ಅಷ್ಟೇ. ಮುಂಗೋಪಿ ಗಂಡನಿಗೆ ಸಮಾಧಾನ ಎನ್ನುವುದೇ ಇಲ್ಲ. ಹೆಂಗಸರು ಎಂದರೆ ಅಷ್ಟಕ್ಕಷ್ಟೇ, ಇನ್ನು ಹೆಂಡತಿ ಎಂದರೆ ಆತನ ಪರಿಭಾಷೆಯೇ ಬೇರೆ. ಮದುವೆಯಾದ ಮರುಕ್ಷಣದಿಂದಲೇ ಹೆಂಡತಿ ತನ್ನ ವಸ್ತು ಎನ್ನುವ ಧೋರಣೆ. ಅವಳನ್ನು ಒಂದು ವಸ್ತುವನ್ನಾಗಿ ಕಾಣುವ ಬಗ್ಗೆ ಅವಳಿಗೆ ಕಿಂಚಿತ್ತೂ ಬೇಸರ ಇರಲಿಲ್ಲ. ಆದರೆ ತಾನು “ಯಾವುದೇ ಉಪಯೋಗಕ್ಕೆ ಬಾರದ ವಸ್ತು” ಎಂದು ತನ್ನ ಗಂಡ ಮತ್ತು ತನ್ನ ಅತ್ತೆ ತನ್ನನ್ನು ಕಾಣುವುದು, ಅವರಿವರ ಮುಂದೆ ಬಾಯಿ ಬಿಟ್ಟು ಹೀಯಾಳಿಸುವುದು ಅವಳಿಗೆ ಮರ್ಮಾಘಾತವನ್ನು ಮಾಡಿತ್ತು. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎನ್ನುವ ತಂದೆ ತಾಯಿಯರಿಗೆ ಅವಳ ಕಷ್ಟ ತಿಳಿಯುತ್ತಿರಲಿಲ್ಲ. ನೂರು ವರ್ಷಕ್ಕೆ ಸಮೀಪ ಬದುಕಿದ್ದ ಅತ್ತೆಗೆ ಅವಳು ಮದುವೆಯಾದ ಮೂವತ್ತು ವರ್ಷಗಳಲ್ಲಿ ಮಾಡದ ಚಾಕರಿ ಇಲ್ಲ. ಆಕೆಯಿಂದ ಬೈಸಿಕೊಳ್ಳದ ಕ್ಷಣವಿರಲಿಲ್ಲ. ಗಂಡನನ್ನು ಹೀಗಾದರೂ ತೃಪ್ತಿ ಪಡಿಸಲು ಸಾಧ್ಯವೇನೋ ಎನ್ನುವ ಪ್ರಯತ್ನದಲ್ಲಿ ಹುಟ್ಟಿಸಿಕೊಂಡ ಎರಡು ಮಕ್ಕಳನ್ನು ಗುರಿಯಾಗಿಸಿಕೊಂಡು ಸಾಯದೇ ಬದುಕಿದ್ದಳು. ಬೆಳೆದ ಮಕ್ಕಳು ಮದುವೆಯಾಗಿ ದೂರವಾದಾಗ ಅವಳಿಗೆ ಬದುಕಿಗೂ ಸಾವಿಗೂ ವ್ಯತ್ಯಾಸವೇ ಇಲ್ಲದಂತಾಯಿತು. ಆದರೂ ಅತ್ತೆಯ ಮತ್ತು ಗಂಡನ ಚಾಕರಿ ಮಾಡುತ್ತಲೇ ಇದ್ದಳು. ಏನಾದರೂ ಆಗಲಿ, ಎಷ್ಟೇ ಕೆಲಸ ಮಾಡಲಿ ಹೆಂಗಸು ಮನೆಯಲ್ಲೇ ಇದ್ದರೆ ಕಾಲಾಣೆ ಮರ್ಯಾದೆಗೂ ಕಷ್ಟ ಎಂದು ಪಕ್ಕದಮನೆಯವರ ಹತ್ತಿರ ಹೇಳಿದ್ದಳೆನ್ನುವುದು ಸುದ್ದಿ. ಅತ್ತೆ ಸತ್ತ ಮೇಲಾದರೂ ಗಂಡ ಬದಲಾಗುತ್ತಾನೆಂದರೆ ಹಾಗೂ ಆಗಲಿಲ್ಲ. ಅವನ ಕಿರಿಕ್ ಹೆಚ್ಚುತ್ತಲೇ ಇತ್ತು. ಸಕ್ಕರೆ ಖಾಯಿಲೆಯನ್ನು ಪರಿಗಣಿಸದೇ , ಅವಳ ಎಚ್ಚರಿಕೆಯನ್ನು ಧಿಕ್ಕರಿಸಿ ಬಯಸಿದ್ದನ್ನೆಲ್ಲ ಅವಳ ಕೈಯ್ಯಲ್ಲಿ ಮಾಡಿಸಿಕೊಂಡು ಸಿಕ್ಕಾ ಪಟ್ಟೆ ತಿಂದು ಇಲ್ಲದ ಖಾಯಿಲೆ ತರಿಸಿಕೊಂಡ. ಒಂದು ದಿನ ಲಕ್ವಾ ಸಹ ಹೊಡೆಯಿತು. ಮಾತೂ ತೊದಲಾಯಿತು. ದನಿಯೂ ಹೋಯಿತು. ಮೂಲೆಗೆ ಬಿದ್ದ ಅವನು” ಇನ್ನು ಬದುಕಿರುವವರೆಗೆ ಅಷ್ಟೇ” ಎಂದು ಡಾಕ್ಟರು ಹೇಳಿದರು. ಮನೆಗೆ ಕರೆತಂದ ಅವನಿಗೆ ಹಾಸಿಗೆಯಲ್ಲೇ ಎಲ್ಲವನ್ನೂ ಮಾಡಿದ ಅವಳು ಆ ದಿನ ಮೊದಲಿಗೆ ಅಡಿಗೆ ಮಾಡುವಾಗ ಏಕೋ ಹಾಡಬೇಕೆನ್ನಿಸಿತು. ಹಾಡುತ್ತಲೇ ಅಡಿಗೆ ಮಾಡಿದಳು. ಅವನು ಮೆದು ದನಿಯಲ್ಲಿ ಕಷ್ಟ ಪಟ್ಟು ಕೂಗುತ್ತಲೇ ಇದ್ದ. ಅವನಿಗೆ ಕೋಪ ಬಂದಿದೆ ಎನ್ನುವುದು ಇವಳಿಗೆ ತಿಳಿಯಿತು, ಆದರೆ ಹಾಡುವುದನ್ನು ನಿಲ್ಲಿಸಲಿಲ್ಲ. ಅವನು ಹೊಡೆಯಲಾರ, ಕಿರುಚಲಾರ ಬಯ್ಯಲಾರ ಎನ್ನುವುದು ಅವಳಿಗೆ ಗ್ಯಾರಂಟಿ ಆಯಿತು. ಅದೇ ದಿನ ಸಂಜೆಯ ಹೊತ್ತಿಗೆ ಮೊದಲ ಬಾರಿಗೆ ಮುಖ ತೊಳೆದುಕೊಂಡಳು. ಕನ್ನಡಿಯ ಮುಂದೆ ಐದು ನಿಮಿಷ ನಿಂತಳು. ತನ್ನನ್ನು ತಾನು ನೋಡಿಕೊಂಡು ಅದೆಷ್ಟೋ ವರ್ಷಗಳಾಗಿತ್ತು. ಮೆಲು ನಗೆ ನಕ್ಕು ಬೇರೆ ಸೀರೆ ಉಟ್ಟು ಬಾಗಿಲೆಳೆದು ಕೊಂಡು ಪಕ್ಕದ ಬೀದಿಯಲ್ಲೇ ಇದ್ದ ದೇವಸ್ಥಾನಕ್ಕೆ ಹೋದಳು. ಮೆಲ್ಲಗೆ ಅವಳ ದಿನಚರಿ ಬದಲಾಯಿತು. ಕಲಿತು ಬಿಟ್ಟಿದ್ದ ಸಂಗೀತವನ್ನು ಕೈಹಿಡಿದಳು. ಈಗ ಅವಳು ವಿದುಷಿ.ಅಲ್ಲಲ್ಲಿ ಕಛೇರಿ ಮಾಡುತ್ತಾಳೆ. ಸಂಗೀತ ಪಾಠ ನಡೆಸುತ್ತಾಳೆ. ಅವರಿವರಿಗೆ ವಿಷ್ಣು ಸಹಸ್ರನಾಮ ಲಲಿತಾ ಸಹಸ್ರನಾಮ ಹೇಳಿಕೊಡುತ್ತಾಳೆ. ಅಷ್ಟೋ ಇಷ್ಟೋ ಕಾಸು .ಸರಳ ಜೀವನ . ಗಂಡನ ಆರೈಕೆ ಮಾಡುವುದನ್ನೇನೂ ಬಿಟ್ಟಿಲ್ಲ. ಆದರೆ ಅವನ ಇಷ್ಟದಂತೆ ಮನೆಯ ಮೂಲೆಯಲ್ಲೇ ಕೂತಿಲ್ಲ. ಮದುವೆಗೆ ಮುಂಚಿನಂತೆ ಈಗ ಮತ್ತೆ ಗುಂಡಾಗಿರುವ ಅವಳ ಮುಖದಲ್ಲಿ ನೆಮ್ಮದಿಯ ನಗುವಿದೆ. ಅವಳು ಹಾಡುತ್ತಿದ್ದರೆ ಬೇರೆಯೇ ಲೋಕದಲ್ಲಿ ಹಾಡುತ್ತಿರುವಂತಹ ತಾದಾತ್ಯ್ಮತೆ. ಇವೆಲ್ಲ ಎಲ್ಲರ ಕಣ್ಣಿಗೂ ಕಾಣುವುದಿಲ್ಲ. ಗಂಡನಿಗೆ ಲಕ್ವಾ ಹೊಡೆದದ್ದೇ ಇವಳು ಬೀದಿ ಬಸವಿಯಾದಳು ಎಂದವರೂ ಇದ್ದಾರೆ. ಅವರಿಗೆ ಏನು ಕಾಣಬೇಕಿತ್ತೋ ಅದು ಕಾಣುತ್ತಿಲ್ಲ. ಗಂಡ ನೆಟ್ಟಗಿದ್ದಾಗ  ಮುಷ್ಟಿಯಲ್ಲಿ ಅವಳು ಜೀವನವನ್ನು  ಅದುಮಿ ಇಟ್ಟುಕೊಂಡಿದ್ದಾಗ   ಹಿಂಸೆ ಪಡುತ್ತಿದ್ದ  ಅವಳ ಜೀವ ಈಗ ಹೊರಗೆ ಬಂದಿದೆ. ಅವಳಿಗೆ ತನ್ನ ಜೀವದ ಬೆಲೆ ಗೊತ್ತಾಗಿದೆ. ತನ್ನ ಜೀವವನ್ನು ತಾನೇ ರಕ್ಷಿಸಬೇಕು ಎನ್ನುವುದು ಅವಳಿಗೆ ಈಗಷ್ಟೇ ಗೊತ್ತಾಗಿದೆ ಎನ್ನುವುದು ಎಲ್ಲರ ಕಣ್ಣಿಗೂ ಕಾಣುವಂತದ್ದಲ್ಲ.


ಎಸ್.ಸುಶೀಲ ಚಿಂತಾಮಣಿ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *