ಕಣ್ಣು ಕಾಣದ ನೋಟ/ಪೂರ್ತಿ ಬಿಸ್ಕತ್ತು ಪ್ಯಾಕೆಟ್ಟು – ಎಸ್.ಸುಶೀಲ ಚಿಂತಾಮಣಿ
ಹೆಂಡತಿ ಮಕ್ಕಳನ್ನು ಸಾಕಲು ಯೋಗ್ಯತೆ ಇಲ್ಲದವರು ಮದುವೆಯಾಗಬಾರದೆಂದು ಕಾನೂನು ತರಬಾರದೇಕೆ?
ಗೀತಮ್ಮ (ಹೆಸರು ಬದಲಿಸಿದೆ) ತನ್ನ ಎರಡು ಗಂಡು ಮಕ್ಕಳ ಪರವಾಗಿ ಜೀವನಾಂಶ ಕೇಸು ನನಗೆ ಕೊಟ್ಟು ಅದೆಷ್ಟೋ ವರ್ಷಗಳಾಯಿತು. ಆ ಕೇಸು ಮುಗಿದೂ ಎಷ್ಟೋ ವರ್ಷಗಳಾಯಿತು. ಆದರೆ ಆಗ ನಡೆದ ಘಟನೆಗಳು ಇನ್ನೂ ಮನದಾಳದಲ್ಲಿ ಗಟ್ಟಿಯಾಗಿ ನಿಂತುಬಿಟ್ಟಿವೆ. ಜಿದ್ದಾ ಜಿದ್ದಿಯಾಗಿ ಹೆಂಡತಿ ತನಗೂ ಮಕ್ಕಳಿಗೂ ಜೀವನಾಂಶಕ್ಕಾಗಿ ತನ್ನ ವಿರುದ್ಧ ಹಾಕಿದ ಕೇಸು ನಡೆಸಿದ ಗಂಡ, ಕೇಸು ಅವಳ ಕಡೆ ಆಗಿ , ಅವಳು ಹಣ ವಸೂಲಿಗಾಗಿ ಕೇಸು ಹಾಕಿದಾಗ ,ಅವಳು ‘ಶತಸಾಹಸ’ ಮಾಡಿದಾಗ ಆಗೊಮ್ಮೆ ಈಗೊಮ್ಮೆ ಕೋರ್ಟಿಗೆ ಬಂದು ಐನೂರೋ ಸಾವಿರವೋ ಕೊಟ್ಟು ಮತ್ತೆ ತಲೆ ತಪ್ಪಿಸಿಕೊಳ್ಳುತ್ತಾ ಬರುತ್ತಿದ್ದ. ಒಮ್ಮೆ ಗೀತಮ್ಮ ಬಂದಿದ್ದಳು. ಮೇಡಂ ಈ ತಿಂಗಳಾದರೂ ದುಡ್ಡು ಕೊಡಿಸ್ತೀರಾ. ನನ್ನ ದೊಡ್ಡ ಮಗ, ಚಿಕ್ಕ ಮಗ ಇಬ್ಬರೂ ವರಲಕ್ಷ್ಮಿ ಹಬ್ಬದ ದಿನವೇ ಹುಟ್ಟಿದ್ದು. ಅವರ ಹುಟ್ಟಿದ ಹಬ್ಬಕ್ಕೆ ನಾನು ಒಂದು ಬಿಸ್ಕತ್ತು ಪ್ಯಾಕೆಟ್ ತೆಗೆದುಕೊಂಡು ಇಬ್ಬರಿಗೂ ಅರ್ಧ ಅರ್ಧ ಪ್ಯಾಕೇಟ್ ಕೊಡುತ್ತೇನೆ. ಆದರೆ ಈ ಸಲ ಹಬ್ಬಕ್ಕೆ ಇಬ್ಬರೂ ನಮಗೆ ಬೇರೆ ಬೇರೆ ಪ್ಯಾಕೆಟ್ ಬೇಕೇ ಬೇಕು ಎಂದು ಕೇಳುತ್ತಿದ್ದಾರೆ ಎಂದಾಗ ತಲೆ ತಿರುಗಿ ಬಂದಿತ್ತು. ಬ್ರಿಟಾನಿಯ ಗ್ಲೂಕೋಸ್ ಬಿಸ್ಕತ್ತಿನ ಪ್ಯಾಕೇಟ್ ಬೆಲೆ ಮೂರು ರೂಪಾಯಿ ….ತಲಾ ಒಂದೂವರೆ ರೂಪಾಯಿ! ಆ ತಾಯಿ ಆ ಮಕ್ಕಳಿಗೆ ಹುಟ್ಟಿದ ಹಬ್ಬಕ್ಕೆ ಮೀಸಲಿಡುತ್ತಿದ್ದುದು ಅಷ್ಟೇ. ತಲಾ ಮೂರು ರೂಪಾಯಿ ಆ ಮಕ್ಕಳು ಕೇಳುತ್ತಿರುವುದು. ನಮ್ಮ ಮಕ್ಕಳನ್ನು ಅವರ ಹುಟ್ಟು ಹಬ್ಬದ ಕನಸನ್ನು ಅವರ ಬೇಡಿಕೆಯನ್ನು ನೆನಪಿಸಿಕೊಂಡೆ! ದಿಗ್ಬ್ರಮೆಯಾಯಿತು. “ಈ ಬಾರಿ ನಿಮ್ಮ ಮಕ್ಕಳ ಹುಟ್ಟು ಹಬ್ಬವನ್ನು ನಾನೇ ಗ್ರಾಂಡ್ ಆಗಿ ಮಾಡುತ್ತೇನೆ ಬಿಡು ಎಂದು ಹೇಳಿದ್ದೆ.” “ಇಲ್ಲಮ್ಮಾ ….. ನೀವು ನನ್ನ ಗಂಡನಲ್ಲ. ಆ ಮಕ್ಕಳ ಹುಟ್ಟಿದ ಹಬ್ಬ ಆ ಮಕ್ಕಳ ತಂದೆಯ ಹಣದಿಂದಲೇ ಮಾಡಬೇಕು. ಹಣ ಕೋರ್ಟಿನಿಂದ ಬೇಗ ಕೊಡಿಸಿ ಸಾಕು” ಎಂದಿದ್ದಳು.
ಅವಳ ಮಾತು, ಅವಳ ತೂತಾದ ಸೀರೆ, ಆ ಎರಡು 3 ಮತ್ತು 4ನೇ ಕ್ಲಾಸು ಓದುತ್ತಿರುವ ಹರಿದ ಚಡ್ಡಿ ಹಾಕಿಕೊಂಡು ಗ್ಲೂಕೋಸ್ ಬಿಸ್ಕತ್ತಿನ ಪೂರಾ ಪ್ಯಾಕೆಟ್ನ ಕನಸು ಕಾಣುತ್ತಿರುವ ಮಕ್ಕಳು ಎಲ್ಲಾ ಒಟ್ಟಾಗಿ ‘ನಾನೆಷ್ಟು ಸಣ್ಣವಳು’ ಎಂದು ತಿಳಿಸುವಂತಿತ್ತು. ಒಂದು ಮದುವೆಗೆ..ಭಾಂಧವ್ಯಕ್ಕೆ..ಸಂಸಾರಕ್ಕೆ.. ಹುಟ್ಟಿಸಿದ ಮಕ್ಕಳಿಗೆ..ಬೆಲೆಯೇ ಇಲ್ಲವೆ? ಎಂದು ಅವಳು ಕೇಳಿದಂತಿತ್ತು. ಅವಳಿಗೆ ಬೇಕಾದ ಜೀವನಾಂಶ ಅವಳ ಗಂಡನಿಂದ.. ಅವಳ ಮಕ್ಕಳ ತಂದೆಯಿಂದ.. ಹಣವಿರುವ ನನ್ನಿಂದಲ್ಲ. ನನ್ನ ಹಣಕ್ಕೆ ಅವಳಲ್ಲಿ ಯಾವ ಬೆಲೆಯೂ ಇಲ್ಲ. ಅವಳಿಗೆ ಗೊತ್ತಾಗಿದ್ದು ನನಗೆ ಗೊತ್ತಾಗಲಿಲ್ಲವೇಕೆ ? ಕೋರ್ಟು -ಕಛೇರಿ-ಕೇಸು-ಗೆಲುವು- ಹಣ ಕೊಡುವಂತೆ ಗಂಡನ ಮೇಲೆ ಅವಳು ಜರುಗಿಸುತ್ತಿರುವ ಎಲ್ಲ ಕ್ರಮಗಳಿಂದ ಅವಳ ಗಂಡನಿಗೆ ಅವನ ಕರ್ತವ್ಯ ಗೊತ್ತಾಗಲಿ., ಹೆಂಡತಿಗೆ ಮತ್ತು ಮಕ್ಕಳಿಗೆ ಇರುವ ಹಕ್ಕು ಗೊತ್ತಾಗಲಿ ಎಂದು ಗೀತಮ್ಮ ಒದ್ದಾಡುತ್ತಿದ್ದಾಳೆ ಎನ್ನುವುದು ಯಾರಿಗೆ ಅರ್ಥವಾಗಬೇಕು? ನ್ಯಾಯಾಲಯದ ಮೇಲಿನ ಅವಳ ನಂಬಿಕೆ ಇನ್ನೂ ಹಾಗೇ ಉಳಿದಿತ್ತು. ಅದೊಂದೇ ಮೆಚ್ಚೆಬೇಕಾದದ್ದು.
ನ್ಯಾಯಲಯದ ತೀರ್ಪು- ಕೋರ್ಟಿನ ಪೇಪರಿನ ಮೇಲೆ ಮಾತ್ರ ಕಾಣಿಸಿಕೊಳ್ಳುವ , ದಿನೇ ದಿನೇ ಹೆಚ್ಚುತ್ತಿರುವ ಸಾವಿರಾರು ರೂಪಾಯಿಗಳ ಜೀವನಾಂಶದಿಂದ ಅವಳ ಮಕ್ಕಳ ಹುಟ್ಟಿದ ಹಬ್ಬ ನಡೆಯುತ್ತಿಲ್ಲ. ಹಣ ಬರಬೇಕೆಂದು ಅಮಲ್ಜಾರಿಗೆ ಕ್ರಮ ತಗೆದು ಕೊಂಡಾಗ ವೀರಪ್ಪನನ್ನು ಹುಡಕಲಾಗದಂತೆ ‘ನಾಟ್ ಫೌಂಡ್’ ಎಂದು ಪ್ರತಿ ಬಾರಿಗೆ ಸಮನ್ಸ್ ವಾಪಸ್ಸು ತರುವ ಪೋಲೀಸರು..ಕೋರ್ಟಿನ ಪ್ರೋಸಸ್ ಸಿಬ್ಬಂದಿ..ಇವರುಗಳ ಷರಾದಿಂದ ಅವಳು ಬೇಸತ್ತಿರಲಿಲ್ಲ.
ಜೀವನಾಂಶಕ್ಕೆ ನ್ಯಾಯಾಲಯದಿಂದ ತೀರ್ಪು ಆದ ಮೇಲೂ ಅಮಲ್ಜಾರಿಯಿಂದ ಕೈಗೆ ಬಂದದ್ದು ಬಾಯಿಗೆ ಸುಲಭವಾಗಿ ಸಿಗುವಂತೆ ಆಗುವುದು ಯಾವಾಗ? ಹೆಂಡತಿ ಮಕ್ಕಳನ್ನು ಸಾಕಲು ಯೋಗ್ಯತೆ ಇಲ್ಲದವರು ಮದುವೆಯಾಗಬಾರದೆಂದು ಕಾನೂನು ತರಬಾರದೇಕೆ? ಎಂದು ಹೊಸದಾಗಿ ಲಾ ಕಾಲೇಜಿಗೆ ಸೇರಿದ ಮಗಳು ಕೇಳಿದಾಗ ಉತ್ತರ ಏನು ಕೊಡಬೇಕೆಂದು ನನಗೆ ತಿಳಿದಿರಲಿಲ್ಲ.
ಯಾವುದು ಏನೇ ಇರಲಿ. ಗಂಡ ಸಾಕಲಿಲ್ಲ ಎಂದು ಕೋರ್ಟಿನಲ್ಲಿ ಗಂಡನ ವಿರುದ್ಧ ಜೀವನಾಂಶಕ್ಕೆ ಕೇಸು ಹಾಕಿದ ಯಾವ ತಾಯಿಯೂ ತನ್ನ ಮಕ್ಕಳನ್ನು ಬೀದಿಗೆ ಎಸೆದದ್ದನ್ನು ನಾನು ನೋಡಲಿಲ್ಲ. ತಾನು ಉಟ್ಟರೂ ಬಿಟ್ಟರೂ, ಉಂಡರೂ ಬಿಟ್ಟರೂ ಮಕ್ಕಳನ್ನು ಉಡದೇ ಉಣ್ಣದೇ ಇರಲು ಬಿಡದೇ ಸಾಕುವ ಆ ತಾಯಂದಿರ ಆ ಧೈರ್ಯ, ಆ ಗುರಿ, ಬರಿಯ ಕಣ್ಣಿಗೆ ಕಾಣದ್ದು. ಆ ತಾಯಿಗೆ ಕಾಣುವುದು ಒಂದೇ. ತಾನು ಹುಟ್ಟಿಸಿದ ಮಕ್ಕಳು. ಅವರನ್ನು ಸಾಕುವುದು ತನ್ನ ಕರ್ತವ್ಯ ಎನ್ನುವುದು, ಆಕೆಯ ಆ ಕರ್ತವ್ಯ ಪ್ರಜ್ಞೆ ಯಾರ ಕಣ್ಣಿಗೆ ಕಾಣುತ್ತದೆ. ಮುಂದೊಮ್ಮೆ ಬೆಳೆದು ನಿಂತ ಮಕ್ಕಳಿಗಾದರೂ ಕಾಣುತ್ತದೋ ಅಥವಾ ಅವರನ್ನು ಹುಟ್ಟಿಸಿದ ತಂದೆಗೆ ಕಾಣದಂತೆ ಇವರ ಕಣ್ಣಿಗೂ ಕಾಣದೆಯೂ ಉಳಿದುಬಿಡುತ್ತದೋ ಯಾರಿಗೆ ಗೊತ್ತು?

ಎಸ್.ಸುಶೀಲ ಚಿಂತಾಮಣಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.