ಕಣ್ಣು ಕಾಣದ ನೋಟ/ ನಿರ್ಲಿಪ್ತತೆಯ ಹಿಂದಿನ ಬೇಗುದಿ – ಎಸ್. ಸುಶೀಲಾ ಚಿಂತಾಮಣಿ

ನನ್ನ ಆಪ್ತ ಗೆಳತಿಯ 30 ವರ್ಷದ ಮಗ ಅಪಘಾತದಲ್ಲಿ ಸತ್ತ. ಇನ್ನು ಇವಳ ಕಥೆ ಮುಗಿಯಿತು, ಇವಳು ಇನ್ನು ಮೇಲೆ ಏಳುವುದಿಲ್ಲ, ಮತ್ತೆ ಕೆಲಸಕ್ಕೆ ಕೈಹಚ್ಚುವುದಿಲ್ಲ, ಎಂದು ಅಂದು ಕೊಂಡವರು ಬಹಳಷ್ಟು ಜನ. ಆಶ್ಚರ್ಯವೆಂದರೆ, ಮಗ ಸತ್ತ ಹದಿನೈದು ದಿನಕ್ಕೆ ಎಂದಿನಂತೆ ಪೌಡರ್, ಲಿಪ್‍ಸ್ಟಿಕ್ ಹಚ್ಚಿ ಕನ್ನಡಕ ಏರಿಸಿ, ಟ್ರಿಂ ಆಗಿ ಆಕೆ ಎಂದಿನಂತೆ ಕೆಲಸ ಪ್ರಾರಂಭಿಸಿದ್ದು.
ಹಾಗೆಯೆ ನನ್ನ ಮತ್ತೊಬ್ಬ ಸ್ನೇಹಿತೆಯ ಗಂಡನಿಗೆ ಇನ್ನೂ ಅರವತ್ತಾಗಿರಲಿಲ್ಲ. ಅವರೂ ಧಡಕ್ಕನೆ ಹೃದಯಘಾತದಿಂದ ಸತ್ತರು. ಅವರ ಇಚ್ಛೆಯಂತೆ ದೇಹವನ್ನು ಹೆಂಡತಿ ಆಸ್ಪತ್ರೆಗೆ ಕೊಟ್ಟು ಖಾಲೀ ಕೈಯಲ್ಲಿ ಮನೆಗೆ ಬಂದರು. ಇದ್ದ ಒಬ್ಬಳೇ ಮಗಳು ಹೊರದೇಶದಿಂದ ಬರುವವರೆಗೆ ಹೆಣವನ್ನು ನೋಡಲೂ ಇರಿಸಲಿಲ್ಲ. ಮಾತನಾಡಿಸಿಕೊಂಡು ಬರಲು ಅಳುಕು ಮನಸ್ಸಿನಿಂದ ಹೋದಾಗ ನನಗೆ ಅವರನ್ನು ನೋಡಿ ದಿಗ್ಬ್ರಮೆ ಆಯಿತು.

ನಾನು ಅಂದುಕೊಂಡಂತೆ ಅವರು ಮುಖ ತೊಳೆಯದೆ, ಸ್ನಾನ ಮಾಡದೆ, ಅನ್ನ ನೀರು ಬಿಟ್ಟು, ಅತ್ತು ಅತ್ತು ಕಣ್ಣು ಊದಿಸಿಕೊಂಡು ಮೂಲೆಯಲ್ಲಿ ಮಲಗಿರಲಿಲ್ಲ. ಬಂದವರನ್ನು ತಬ್ಬಿ ಹಿಡಿದು ಗೊಳೋ ಎಂದು ಅಳಲಿಲ್ಲ. ನನ್ನ ಹಾಗೆ ಬಂದವರ ಕಣ್ಣಲ್ಲಿ ನೀರು ಬಂದರೂ ಆಕೆಯ ಕಣ್ಣಲ್ಲಿ ನೀರು ಬರಲಿಲ್ಲ. ಆಕೆಯೂ ಲಕ್ಷಣವಾಗಿ ಪೌಡರ್ ಹಾಕಿಕೊಂಡು ಫ್ರೆಷ್ ಆಗಿ ಕೂತಿದ್ದು, ಬಂದವರ ಹತ್ತಿರ ತನ್ನ ಗಂಡನ ಬಾಂಧವ್ಯದ ಬಗ್ಗೆ, ಥಟ್ಟನೆ ಆದ ಸಾವಿನ ಬಗ್ಗೆ, ಅಗಲಿಕೆಯ ಬಗ್ಗೆ… ಯಾರದೋ ಕಥೆ ಹೇಳುವಂತೆ ಹೇಳುತ್ತಿದ್ದರು.

ಈ ಇಬ್ಬರಿಗೂ ಅಗಲಿದ ತಮ್ಮವರ ಬಗ್ಗೆ ಪ್ರೀತಿ ಇರಲಿಲ್ಲ, ಬಾಂಧವ್ಯ ಇರಲಿಲ್ಲ ಎನ್ನುವುದು ಸುಳ್ಳು. ಇವರಿಬ್ಬರೂ ಕಟುಕ ಹೃದಯದವರು ಎನ್ನುವುದೂ ಸುಳ್ಳು. ನಾನು ಈ ಇಬ್ಬರನ್ನೂ ಬಹಳ ಹತ್ತಿರದಿಂದ ನೋಡಿದ್ದೇನೆ. ಅಷ್ಟೇ ಅಲ್ಲ ಅವರಿಬ್ಬರೂ ಅವರ-ಮಗನ ಅವರ-ಗಂಡನ ಜೊತೆ ಹೊಂದಿದ್ದ ಸಹೃದಯ ಸುಂದರ ಗಟ್ಟಿ ಸಂಬಂಧದ ಬಗ್ಗೆ… ಅಮೂಲ್ಯವೆನಿಸುವ ಭಾಂಧವ್ಯದ ಬಗ್ಗೆಯೂ ನನಗೆ ಗೊತ್ತಿದೆ. ಆದರೆ ಆಶ್ಚರ್ಯವೆನಿಸಿದ್ದು ನಾನು ಮತ್ತು ನನ್ನಂತಹ ಹಲವರು ಒಪ್ಪಿಕೊಳ್ಳದ್ದು ಒಂದೇ! ಅವರಿಬ್ಬರೂ ಅಳಲಿಲ್ಲವೇಕೆ? ಗೋಳಾಡಲಿಲ್ಲ ಏಕೆ?… ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹುಡುಕುತ್ತಾ ಹೋದ ಹಲವರ ದೃಷ್ಟಿಯಲ್ಲಿ ಈ ಇಬ್ಬರು ಬೆಲೆ ಕಳೆದುಕೊಂಡಿದ್ದಂತೂ ನಿಜ. ಅವರು ಬೆಲೆ ಕಳೆದುಕೊಡದ್ದಾದರೂ ಏಕೆ? ‘ತಮಗೆ ಆಪ್ತರಾಗಿದ್ದವರ ಸಾವನ್ನು ಸ್ವೀಕರಿಸಿದ ಅವರ ರೀತಿ ಬೇರೆಯಾಗಿದ್ದರಿಂದಲೇ….ನಮ್ಮವರು ತಮ್ಮವರು ಸತ್ತಾಗ ಆಗುವ ದು:ಖವನ್ನು ಹೀಗೇ ಹೊರಹಾಕಬೇಕು, ಎನ್ನುವ ಸುತ್ತಲಿನವರ ನಿರೀಕ್ಷೆಗೆ ವಿರುದ್ಧವಾಗಿ ನಡೆದುಕೊಂಡದ್ದರಿಂದಲೇ? ಈವರೆಗೆ ಸರ್ವೇ ಸಾಮಾನ್ಯವಾಗಿ ಎಲ್ಲರೂ ಹೊರ ಹಾಕುತ್ತಿದ್ದ ರೀತಿಗಿಂತ ಭಿನ್ನವಾಗಿ ಇವರು ಇರುವುದರಿಂದಲೇ?’

ನಾವು ಬಯಸಿದಂತೆ ಬೇರೆಯವರು ವರ್ತಿಸದೇ ಇದ್ದಾಗ.. ನಮ್ಮ ದೃಷ್ಟಿಯಲ್ಲಿ ಅವರ ಬೆಲೆ ಕಡಿಮೆ ಆಗುವುದು ನ್ಯಾಯವೇ? ಬೆಳೆದ ಮಗನನ್ನು ಕಳೆದುಕೊಂಡು ಗೋಳಾಡಿದ ನರಳಾಡಿದ ಎಷ್ಟೋ ಹೆಂಗಸರನ್ನು ನಾನು ನೋಡಿದ್ದೇನೆ. ಗಂಡ ಸತ್ತಾಗ ತನಗೆ ಇನ್ನೂ ಬದುಕೇ ಇಲ್ಲ ಎಂದು ವರ್ಷಾನುಗಟ್ಟಲೇ ಶೂನ್ಯ ದೃಷ್ಟಿಯಲ್ಲಿ ಬದುಕಿದ ವಿಧವೆಯರನ್ನು ನೋಡಿದ್ದೇನೆ. ಆದರೆ, ಈ ಇಬ್ಬರು ಇವರೆಲ್ಲರಿಗಿಂತ ಭಿನ್ನವಾದಾಗ ಇವರಿಬ್ಬರೂ ಬೆಳೆದಿದ್ದಾರೆ ಎಂದು ಪ್ರಶಂಸಿಸಬೇಕೇ? ಸಾವನ್ನು ಸ್ವೀಕರಿಸುವಷ್ಟು ಪಕ್ವವಾಗಿದ್ದಾರೆ ಎಂದು ಸಂತೋಷ ಪಡಬೇಕೇ? ಅಥವಾ ಸಾವನ್ನು ಹಾಗೇ ಸುಲಭವಾಗಿ ಒಪ್ಪುವಂತಿಲ್ಲ. ತಕರಾರು ಮಾಡಿ, ಗೋಳಾಡಿ, ಹೊರಳಾಡಿ, ಮಾತ್ರ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ನಿಮಗೆ ಬೆಲೆ ಇಲ್ಲ ಎಂದು ಅವರಿಗೆ ತಿಳಿಸಬೇಕೇ? ತಿಳಿಯುತ್ತಿಲ್ಲ. ಹಿಂದೆ ತಿರುಗಿ ಮುಂದೆ ತಿರುಗಿದಾಗ ಎಲ್ಲ ಬದಲಾದಂತೆ ಸಾವನ್ನು ಸ್ವೀಕರಿಸುವ, ಸಾವನ್ನು ಎದುರಿಸುವ ನಮ್ಮ ರೀತಿಗಳೂ ಬದಲಾಗುತ್ತಿವೆ ಎಂಬುದು ನಮಗೇಕೆ ತಿಳಿಯುತ್ತಿಲ್ಲ?

ಕಣ್ಣಿಗೆ ಕಂಡದ್ದು ಅವರಿಬ್ಬರ ಫ್ರೆಷ್ ಮುಖ ಮತ್ತು ಕಾಜಲ್ ಹಚ್ಚಿದ್ದ ಕಣ್ಣೀರು ಬರದ ಕಣ್ಣುಗಳು. ಕಣ್ಣಿಗೆ ಕಾಣದ್ದು ಅವರ ಎದೆಯೊಳಗಿನ ಬೇಗುದಿ, ನೋಟದ ಹಿಂದಿನ ಶೂನ್ಯತೆ, ಸಾವಿನ ಕ್ರೂರತೆಯಿಂದಾದ ತಲ್ಲಣಿಕೆ, ಸಾವನ್ನು ಸ್ವೀಕರಿಸಲೇಬೇಕಾದ ಅನಿವಾರ್ಯತೆಯನ್ನು ಎದೆಗೂಡಿಸಿಕೊಳ್ಳುವ ಕಡೆ ಅವರ ನಿರಂತರ ಪ್ರಯತ್ನ. ನೋಡಬೇಕಾದದ್ದು ಜೀವನದಲ್ಲಿ ಬಹಳಷ್ಟು ಇವೆ.

 

ಎಸ್. ಸುಶೀಲಾ ಚಿಂತಾಮಣಿ

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *