ಕಣ್ಣು ಕಾಣದ ನೋಟ / ನಿಜವಾಗಿ ಕಳ್ಳರು ಯಾರು? – ಸುಶೀಲಾ ಚಿಂತಾಮಣಿ

ಅತ್ಯುತ್ಸಾಹದಿಂದ ಬೇರೆಯವರ ತಪ್ಪುಗಳನ್ನು ಕಂಡುಹಿಡಿಯುವ ಮುನ್ನ ಹಾಗೆ ಮಾಡುವುದು ಕೂಡ ನಮ್ಮ ಕೆಲಸ ಬಿಟ್ಟು ಬೇರೇನೋ ಮಾಡಿದಂತಾಗುತ್ತದೆಯೇ ಎಂಬ ಅನುಮಾನ ಸುಳಿಯುತ್ತದೆ. ನಾವು ಮಾಡಬೇಕಾದ್ದು ಏನು, ಬೇರೆಯವರು ಮಾಡಬಾರದ್ದು ಏನು ಎಂಬುದನ್ನು ವ್ಯಾಖ್ಯಾನ ಮಾಡುವುದು ತುಂಬಾ ಬಿಕ್ಕಟ್ಟು ತರುತ್ತದೆ.

ನಾನು ಬಹಳ ಹಿಂದೆ ಕೆಲಸ ಮಾಡುತ್ತಿದ್ದ ಶಾಲೆಯ ಆಯಾ ಒಬ್ಬ ಕಳ್ಳಿ ಎಂದು ಅವರಿವರು ಹೇಳುತ್ತಿದ್ದರು. ಆ ಗಟ್ಟಿ ಆಯಾಳ ಬಾಯಿ ಬಹಳ ಜೋರು. ಅವಳನ್ನು ಯಾರೂ ಕೇಳುವ ಧೈರ್ಯವಿರಲಿಲ್ಲ. ಮಧ್ಯಾಹ್ನ ಊಟ ತಂದು ಕೊಡುತ್ತಿದ್ದ ತಾಯಂದಿರು ಎರಡುಮೂರು ದಿನ ಬಿಟ್ಟು ‘ನನ್ನ ಮಕ್ಕಳು ಡಬ್ಬದ ಮುಚ್ಚಳ ತಂದಿಲ್ಲ’ ಎಂದೋ ಅಥವಾ ‘ಮುಚ್ಚಳ ತಂದಿದ್ದಾರೆ ಡಬ್ಬಿ ತಂದಿಲ್ಲ’ ಎಂದೋ ಸದಾ ಕಂಪ್ಲೇಂಟು ಮಾಡುತ್ತಿದ್ದರು. ಮಕ್ಕಳ ಚಪ್ಪಲಿಗಳ ಮತ್ತು ಬೂಟುಗಳ ಕಥೆಯೂ ಹೀಗೇ ಇರುತ್ತಿತ್ತು . ಆಯಾ ಡಬ್ಬಗಳಲ್ಲಿ ಒಂದೋ ಎರಡಕ್ಕೋ ಮುಚ್ಚಳ ಬೇರೆ ಮಾಡಿ, ಒಂದೋ ಎರಡಕ್ಕೋ ಡಬ್ಬ ಬೇರೆ ಮಾಡಿ ಬಚ್ಚಿಡುತ್ತಾಳೆ. ಮತ್ತೆ ಬಂದು ಅವರು ಕೇಳಿದಾಗ ಇನ್ನೊಂದು ತಂದುಕೊಡಿ, ಗುರ್ತಿಸಿ ಕೊಡುತ್ತೇನೆ ಎನ್ನುತ್ತಾಳೆ, ತಂದು ಕೊಟ್ಟರೆ ತಂದು ಕೊಟ್ಟ ನಾಲ್ವರಲ್ಲಿ ಒಬ್ಬರಿಗೆ ಸಿಕ್ಕಿತು ಎಂದು ಇಲ್ಲದವರಿಗೆ ಇಲ್ಲ ಎಂದು ಹೇಳಿ ಅವರು ಬಿಟ್ಟು ಹೋದ ಒಂಟಿ ಚಪ್ಪಲಿ, ಒಂಟಿ ಮುಚ್ಚಳ, ಒಂಟಿ ಡಬ್ಬಿಯನ್ನು ತಾನು ಬಚ್ಚಿಟ್ಟಿದ್ದ ಮತ್ತೊಂದು ಒಂಟಿ ಚಪ್ಪಲಿ, ಒಂಟಿ ಮುಚ್ಚಳ, ಒಂಟಿ ಡಬ್ಬಿಯೊಂದಿಗೆ ಜೊತೆ ಮಾಡಿ ಮಾರುತ್ತಾಳೆ ಎಂದು ನನಗೆ ಅವರಿವರಿಂದ ಕೇಳಿ ತಿಳಿಯಿತು.

ಅದು ನಿಜವೋ ಸುಳ್ಳೋ ನಾನು ತನಿಖೆ ಮಾಡಲಿಲ್ಲ. ಹಾಗೂ ಹೀಗೂ ಕೂಡಿಟ್ಟಿದ್ದ ಬೂಟು ಮತ್ತು ಚಪ್ಪಲಿಗಳ ಹಾಗೂ ಟಿಫನ್ ಡಬ್ಬಿಗಳನ್ನೆಲ್ಲ ಆಯಾ ಶಾಲೆಯ ಮೂಲೆಯಲ್ಲಿನ ಕತ್ತಲು ಕೋಣೆಯಲ್ಲಿ ಬಚ್ಚಿಟ್ಟಿರುವ ವಿಷಯವನ್ನು ಪತ್ತೆ ಹಚ್ಚಿ ಶೆರ್ಲಾಕ್ ಹೋಂನಂತೆ ಖುಷಿಪಟ್ಟು ಹೆಡ್ಮಾಸ್ಟರ್‌ಗೆ ಹೋಗಿ ಹೇಳಿ ಅವರನ್ನು ಕರೆದುಕೊಂಡು ಹೋಗಿ ತೋರಿಸಿದ್ದೆ. “ಓಹ್!!” ಎಂದು ಹೇಳಿ ಹೊರಟು ಹೋದ ಅವರು ಸಂಜೆ ನನ್ನನ್ನು ಅವರ ಕೋಣೆಗೆ ಕರೆಸಿದರು. ‘ಆ ಆಯಾ ಕಳ್ಳಿಯೋ ಅಲ್ಲವೋ ನನಗೆ ಗೊತ್ತಿಲ್ಲ. ಶಾಲೆಯ ಮಕ್ಕಳಿಗೆ ಪಾಠ ಮಾಡಬೇಕಾಗಿದ್ದ ಸಮಯದಲ್ಲಿ ನೀನು ಈ ಸಿ.ಐ.ಡಿ. ಕೆಲಸ ಮಾಡಿದ್ದೀ. ಒಂದು ವೇಳೆ ಆ ಆಯಾ ಕಳ್ಳಿಯೇ ಆಗಿದ್ದರೂ ನನ್ನ ದೃಷ್ಟಿಯಲ್ಲಿ ನಿನಗೂ ಆ ಆಯಾಳಿಗೂ ಯಾವುದೇ ವ್ಯತ್ಯಾಸವಿಲ್ಲ’ ಎಂದು ಹೇಳಿ ಅಲ್ಲಿಂದ ಹೊರಟುಹೋದರು. ನಾನು ಕುಸಿದಿದ್ದೆ.

ಈಗ ಹಿಂತಿರುಗಿ ನೋಡಿದಾಗ ನಾನೆಷ್ಟು ಕಳ್ಳತನ ಮಾಡಿದ್ದೇನೆಂದು ಪಟ್ಟಿ ಮಾಡಲು ಹೆದರಿಕೆ ಆಗುತ್ತದೆ. ಮಾಡಬೇಕಾದ ಸ್ಥಳದಲ್ಲಿ ಮಾಡಬೇಕಾದ ಕೆಲಸ ಬಿಟ್ಟು ಬೇರೇನೋ ಮಾಡಿದರೆ, ಅದು ಕಳ್ಳತನವೋ ಅಲ್ಲವೋ ಎನ್ನುವುದರ ತರ್ಕಕ್ಕೆ ಇಳಿದರೆ ಬೇರೆಯ ಉತ್ತರವೇ ಸಿಗಬಹುದು. ಆದರೆ, ನಾವು ಮಾಡಬೇಕಾದದ್ದೇನು ಎನ್ನುವುದರ ಬಗ್ಗೆ ಯೋಚಿಸುವ ಬದಲು ನಾವು ಮಾಡಬೇಕಾದುದನ್ನು ಮಾಡುತ್ತಾ ಹೋಗುವುದರ ಬದಲು, ಬೇರೆಯವರು ಮಾಡಬಾರದ್ದು ಏನು, ಬೇರೆಯವರು ಮಾಡಬೇಕಾದದ್ದು ಏನು, ಎಂಬ ಬಗ್ಗೆ ನಾವು ಯೋಚಿಸುವುದು ಅದೆಷ್ಟು ತಪ್ಪು ಎಂದು ತಿಳಿಯುವುದರಲ್ಲಿ ಸುಸ್ತಾಗಿದೆ.

ಇನ್ನಾದರೂ ನಾನು ಮಾಡಬೇಕಾಗಿರುವುದರ ಬಗ್ಗೆ ಚಿಂತಿಸಬೇಕು. ಬೇರೆಯವರು ಏನು ಮಾಡಬಾರದೆಂಬುದನ್ನು ಹೇಳುವ ಕೆಲಸ ನನ್ನದಾದಾಗ ಮಾತ್ರ ನಾನು ಅದನ್ನು ಮಾಡಬೇಕು. ನನಗೆ ನಾನೇ  ಕಾವಲು ನಾಯಿಯಾಗಬೇಕಿದೆ ಎಂದು ತಿಳಿಯಿತು. ನನ್ನ ಕಣ್ಣಿಗೆ ಕಾಣದ ನನ್ನ ಚೌರ್ಯದ ತಪ್ಪು ಬೇರೆಯವರ ಕಣ್ಣಿಗೂ ಬೀಳದೆಯೇ ಇರುವುದಿಲ್ಲ ಎನ್ನುವುದನ್ನು ನಾನು ತಿಳಿಯಬೇಕು.

ನಮ್ಮ ಕಣ್ಣಿಗೆ ಕಾಣದ ನಮ್ಮದೇ ಆದ ಎಷ್ಟೋ ತಪ್ಪುಗಳನ್ನು ನಾವು ಹುಡುಕಿ ನೋಡಬೇಕಿದೆ. ನಮ್ಮನ್ನು ನಾವು ತಿದ್ದಿಕೊಳ್ಳಬೇಕಿದೆ ಎಂಬ ಪಾಠ ನನ್ನದಾಯಿತು.

ಎಸ್. ಸುಶೀಲ ಚಿಂತಾಮಣಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *