ಕಣ್ಣು ಕಾಣದ ನೋಟ / ನಾನೇಕೆ ಗಾಣದೆತ್ತಾದೆ? – ಸುಶೀಲ ಚಿಂತಾಮಣಿ


ಇವಳು ಮನುಷ್ಯಳೇ ರೋಬೋಟೇ ಎಂದು ಯಾರಾದರೂ ಕೇಳಬಹುದು – ಹಾಗಿತ್ತು ಅವಳ ಜೀವನ ಶೈಲಿ. ತನಗಾಗಿ ಯೋಚಿಸಲಿಲ್ಲ. ತನಗಾಗಿ ಬದುಕುವ ಪ್ರಯತ್ನ ಮಾಡಲಿಲ್ಲ. ಆದರೆ … ಕೆಲಸದ ಕಮಲಮ್ಮನ ಕಣ್ಣಿಗೆ ಕಂಡಿದ್ದು ಅವಳ ಕಣ್ಣಿಗೆ ಮೊದಲೇ ಯಾಕೆ ಕಾಣಲಿಲ್ಲ? ಬದುಕನ್ನು ಸರಿಯಾಗಿ ಕಾಣಲು ಮೇಲ್ಗಣ್ಣಿಗೆ ಕಾಣದ ಕಾಣದ ಮತ್ತೊಂದು ನೋಟವೂ ಬೇಕು.

ನಾನು ಅವಳನ್ನು ಎಲ್ಲೆಲ್ಲೂ ನೋಡಿದ್ದೇನೆ. ಮದುವೆಗೆ ಮುಂಚೆ ಚುಟುಂ ಎಂದು ಚಟ ಪಟ – ಚಟ ಪಟ ಓಡಾಡುತ್ತಿದ್ದಳು. ಮನೆಯಲ್ಲಿ ಅವಳು ಹೇಳಿದ್ದೇ ಮಾತು. ಅವಳಿಗೆ “ಇಲ್ಲ –ಆಗಲ್ಲ -ಸುಮ್ಮನಿರು” ಎನ್ನುವವರೇ ಇರಲಿಲ್ಲ. ಯಾವ ಸಣ್ಣ ಕೆಲಸವನ್ನೂ ಇವಳು ಮಾಡುತ್ತಿರಲಿಲ್ಲ. ಎಲ್ಲವೂ ಇವಳ ಮೂಗಿನ ನೇರಕ್ಕೆ ಆಗಬೇಕು. ಇವಳು ಮದುವೆ ಆದರೆ ಹೇಗಿರುತ್ತಾಳೋ ಏನೋ ಎನ್ನುವುದು ಎಲ್ಲರ ಪ್ರಶ್ನೆಯೂ ಆಗಿತ್ತು .

ಮದುವೆ ಆದದ್ದೇ ತಡ ಎಲ್ಲ ತಲೆಕೆಳಗೆ. ಎಲ್ಲರ ಕೆಲಸವನ್ನೂ ಇವಳೇ ಮಾಡುತ್ತಿದ್ದಳು, ಎಲ್ಲರೂ ಇವಳಿಗೆ “ಇಲ್ಲ –ಆಗಲ್ಲ -ಸುಮ್ಮನಿರು” ಎಂದವರೇ. ಅಂಗಡಿಗೆ ಹೋಗಿ ಸಾಮಾನು ತರುವುದು. ಗ್ಯಾಸ್ ಆದರೆ ದೂರ ನಡೆದುಕೊಂಡು ಹೋಗಿ, ಗ್ಯಾಸ್ ಸಿಲಿಂಡರನ್ನು ಆಟೋದಲ್ಲಿ ಹಾಕಿ ತರುವುದು, ಕರೆಂಟ್ ಬಿಲ್ ಕಟ್ಟುವುದು, ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದು ಕರೆದುಕೊಂಡು ಬರುವುದು, ಅವರ ಯೂನಿಫಾರಂ ಹೊಲಿಸುವುದು ಎಲ್ಲ ಅವಳದ್ದೇ.

ಅವಳ ಗಂಡ ಮಕ್ಕಳ ಒಂದೇ ಒಂದು ಹುಟ್ಟಿದ ಹಬ್ಬಕ್ಕೂ ಹಾಜರಿರುತ್ತಿರಲಿಲ್ಲ. ಅವನ ಮುಖವನ್ನು ಶಾಲೆಯವರು ನೋಡಲೇ ಇಲ್ಲ. ಅವನ ಮುಖ ನೋಡದೆಯೇ ಡಾಕ್ಟರು ಅವನಿಗೆ ಕೊಡಬೇಕಾದ ಔಷಧಿಯನ್ನು ಅವಳ ಕೈಗೆ ಕೊಟ್ಟು ಕಳಿಸುತ್ತಿದ್ದರು. ಇದೆಲ್ಲದರ ಮಧ್ಯೆ ಅವಳ ಆಫೀಸಿನ ಕೆಲಸ. ಹಬ್ಬ ಹರಿದಿನದ ದಿನವೇ ಆಫೀಸಿನಲ್ಲೂ ಆಡಿಟರ್ ಬರುತ್ತಾರೆ, ಅದೂ ಇದೂ ಒತ್ತಡ. ಇವಳು ಮನುಷ್ಯಳೇ ರೋಬೋಟೇ ಎಂದು ಯಾರಾದರೂ ಕೇಳಬಹುದು ಹಾಗಿತ್ತು ಅವಳ ಜೀವನ ಶೈಲಿ. ತನಗಾಗಿ ಯೋಚಿಸಲಿಲ್ಲ. ತನಗಾಗಿ ಬದುಕುವ ಪ್ರಯತ್ನ ಮಾಡಲಿಲ್ಲ. ಮತ್ತೊಬ್ಬರಿಗೆ ಏನಾಗಬೇಕಿದೆ ಎನ್ನುವುದನ್ನೇ ತನ್ನ ಬದುಕನ್ನಾಗಿಸಿಕೊಂಡಿದ್ದಳು ಅವಳು.

ವಯಸ್ಸು ಹೆಚ್ಚಾದಂತೆ ಓಡುವುದನ್ನು ಕಡಿಮೆ ಮಾಡಬೇಕು ಎನ್ನುವುದು ಅವಳಿಗೆ ತಿಳಿಯಲಿಲ್ಲ ಎಂದು ಹೇಳಲಾಗುವುದಿಲ್ಲ. ಓಡದೇ ಇದ್ದರೆ ಸಂಸಾರ ನಡೆಯುವುದು ಹೇಗೇ ಎನ್ನುವುದು ಅವಳನ್ನು ಓಡಿಸುತ್ತಿತ್ತು. ಆತುರದಲ್ಲಿ ತರಕಾರಿ ತರಲು ಹೋದವಳು ಮುಗ್ಗರಿಸಿಕೊಂಡು ಬಿದ್ದಳು. ಬೆನ್ನು ಮೂಳೆ ಫ್ರಾಕ್ಚರ್ ಎಂದು ಮಲಗಿದವಳು ವರ್ಷಗಟ್ಟಲೆ ಮಲಗೇ ಇದ್ದಳು. “ ಡಾಕ್ಟರೇ ನಾನು ಮೂಲೆಯಲ್ಲಿ ಮಲಗಿದರೆ ನನ್ನ ಇಡೀ ಸಂಸಾರವೇ ಬಿದ್ದು ಹೋಗುತ್ತೆ. ನನಗೆ ಬೇಗ ವಾಸಿ ಮಾಡಿ” ಎಂದು ಪ್ರತಿದಿನ ಬೇಡಿಕೊಂಡಳು. ದೇವರಲ್ಲೂ ಪ್ರತಿಕ್ಷಣ ಅದೇ ಬೇಡಿಕೆಯೇ. ಆದರೆ ಅವಳಿಗೆ ಬೇಗ ವಾಸಿ ಆಗಲಿಲ್ಲ.

ಅವಳು ಅಂದುಕೊಂಡಿದ್ದಂತೆ ಅವಳ ಸಂಸಾರ ಬಿದ್ದು ಹೋಗಲಿಲ್ಲ. ಅದು ನಡೆಯುತ್ತಲೇ ಇತ್ತು. ಅವರವರಿಗೆ ಬೇಕಿದ್ದನ್ನು ಅವರವರು ಅವರದೇ ಆದ ರೀತಿಯಲ್ಲಿ ಸಾಧಿಸಿಕೊಳ್ಳುತ್ತಿದ್ದರು. ಸಂದರ್ಭಗಳೊಂದಿಗೆ ಸನ್ನಿವೇಶಗಳೊಂದಿಗೆ ಆಗಾಗ ರಾಜಿಯನ್ನೂ ಮಾಡಿಕೊಳ್ಳುತ್ತಿದ್ದರು. ತವರಿನವರನ್ನು ತಾನು ಬುಗರಿಯಂತೆ ತನ್ನ ಸುತ್ತಾಡಿಸುತ್ತಿದ್ದದ್ದು ನೆನಪಿಗೆ ಬಂತು. ತವರಿನವರು ಅವಳ ಸುತ್ತ ಸುತ್ತಲು ತಯಾರಿದ್ದರು. ಆದರೆ ಇಲ್ಲಿ? ಅವಳ ಮಕ್ಕಳೂ “ಎಷ್ಟೋ ಅಷ್ಟು” ಎನ್ನುವಂತೆ ಇದ್ದರು. ಆಗೊಮ್ಮೆ ಈಗೊಮ್ಮೆ ಅವಳ ಮಕ್ಕಳು ಬಂದು ‘ಸ್ವೀಟ್ ಮಮ್ಮೀ’ ಎಂದು ಮುತ್ತಿಟ್ಟು ‘ಟೇಕ್ ಕೇರ್’ ಎಂದು ಹೇಳಿ ಹೋಗುತ್ತಿದ್ದರು. ಅವಳ ಗಂಡನೂ ತನ್ನ ಚಡ್ಡಿ ಬನಿಯನ್ ತಾನೇ ಯಾವ ಟೆನ್ಷನ್ನೂ ಇಲ್ಲದೇ ಎತ್ತಿಟ್ಟುಕೊಳ್ಳುತ್ತಿದ್ದ. ಮನೆಗೆ ಆಗಾಗ ಪಿಜ್ಜಾ – ಅದೂ ಇದೂ ಬರುತ್ತಿತ್ತು. ಇವಳಿಗೂ ಕೊಡುತ್ತಿದ್ದರು. ಇವಳಂದುಕೊಂಡಿದ್ದಂತೆ ಅವಳ ಸುತ್ತಲಿನ ಯಾರ ಬದುಕೂ ನಿಲ್ಲಲಿಲ್ಲ. ಅವಳು ಮಾತ್ರ ಮೂಲೆಯಲ್ಲಿ ಮಲಗಿದ್ದಳು. ಅವಳ ಬದುಕು ನಿಂತಿತ್ತು .

ವಿಷಯ ತಿಳಿದ ಅವಳ ತಾಯಿಯ ಮನೆಯ ಕೆಲಸದ ಕಮಲಕ್ಕ ಅವಳನ್ನು ನೋಡಲು ಬಂದಳು.“ಅಮ್ಮಾ ಇಷ್ಟು ವರ್ಷಾ ಮನೇವ್ರನ್ನೆಲ್ಲಾ ಮೂಲೆಗೆ ಹಾಕಿ ಸಂಸಾರ ಮಾಡ್ದೆ . ಈಗ ನೀನೇ ಮೂಲೆಗೆ ಬಿದ್ದೋದ್ಯಾ? ನಿನಗೆ ಕೈಲಾಗೋಲ್ಲಾಂತ ನೀನೇ ತೀರ್ಮಾನ ಮಾಡಿ ಮೂಲೆಗೇ ಅಂಟುಕೋಬೇಡ. ನಿನಗೇನು ಮಾಡ್ಕೋ ಬೇಕೋ ಅದನ್ನ ಮಾಡ್ಕೋ ” ಅಂತ ಅತ್ತು ಹೋದಳು.

ಕಮಲಕ್ಕ ಹೇಳಿದ ಮಾತು ಅವಳನ್ನು ಚುಚ್ಚಿತು. ತಾನೀವರೆಗೆ ಮಾಡಿದ್ದಾದರೂ ಏನು? ಎಂದು ಕೇಳಿಕೊಂಡಳು. ತನ್ನವರಿಗೆ ಮಾಡಿದ್ದರಲ್ಲಿ ತಪ್ಪಿಲ್ಲ. ಆದರೆ ಅವರೇ ಮಾಡಿಕೊಳ್ಳಬಹುದಾದ್ದನ್ನು, ತಾನು ಮಾಡಬೇಕಾದ ಅವಶ್ಯಕತೆಯೇ ಇಲ್ಲದ್ದನ್ನು ತಾನೇ ತಾನಾಗಿ ಅವರಿಗಾಗಿ ಮಾಡಿದ್ಯಾಕೆ? ತನ್ನ ಸುತ್ತಲಿನವರೆಲ್ಲರ ಪರವಾಗಿ ಅವರು ಯೋಚಿಸದೇ ಇದ್ದದ್ದನ್ನು ತಾನು ಯೋಚಿಸಿದ್ದು ಯಾಕೆ ? ಒಂದು ಕ್ಷಣ ಅವಳ ಮನಸ್ಸಿನಲ್ಲಿ ಅವಳ ಮನೆಯವರ ಮತ್ತು ಅವಳ ಸುತ್ತಲಿನವರ ಚಿತ್ರ ಬಂತು. ಎಲ್ಲರೂ ಅವಳನ್ನು ಹೇಗೆ ಸ್ವೀಕರಿಸಬೇಕೋ ಹಾಗೆಯೇ ಸರಿಯಾಗಿಯೇ ಸ್ವೀಕರಿಸಿದ್ದಾರೆ ಅನ್ನಿಸಿತು. ಅವಳು ಮೂಲೆಗೆ ಬಿದ್ದಳು ಎಂದು ಅವರೆಲ್ಲ ತಮ್ಮ ಜೀವನ ಶೈಲಿಯಲ್ಲಿ ಕೆಲವು ಮಾರ್ಪಾಟುಗಳನ್ನು ತಂದುಕೊಂಡಿದ್ದರು. ಆದರೆ, ತಮ್ಮ ವೈಯಕ್ತಿಕ ಹಿತವನ್ನು ಬಲಿಕೊಟ್ಟವರು ಯಾರೂ ಅವಳಿಗೆ ಕಾಣಲಿಲ್ಲ. ತಮಗೆ ಬೇಕಾದದ್ದನ್ನು ತಾವು ಮಾಡಿಕೊಳ್ಳುತ್ತಿದ್ದರು. ಅವಳಿಗೆ ಬೇಕಾದದ್ದನ್ನು ಅವಳು ಕೇಳಿದಾಗ ಮಾಡುತ್ತಿದ್ದರು.

ಕೆಲಸದ ಕಮಲಕ್ಕನ ಪ್ರಶ್ನೆ “ಅಮ್ಮಾ ಇಷ್ಟು ವರ್ಷಾ ಮನೇವ್ರನ್ನೆಲ್ಲಾ ಮೂಲೆಗೆ ಹಾಕಿ ಸಂಸಾರ ಮಾಡ್ದೆ . ಈಗ ನೀನೇ ಮೂಲೆಗೆ ಬಿದ್ದೋದ್ಯಾ?” ಎನ್ನುವುದರಲ್ಲಿ ಅವಳಿಗೆ ತನ್ನ ಇಡೀ ಜೀವನದ ಅರ್ಥವೇ ಕಾಣತೊಡಗಿತು. ಅವಳು ದಿನೇ ದಿನೇ ಚೇತರಿಸಿಕೊಂಡಳು. ಈಗ ಆರಾಮಾಗಿದ್ದಾಳೆ. ಓಡುತ್ತಾ ಏದುಸಿರುಬಿಡುತ್ತಾ ಜೀವನ ಮಾಡುತ್ತಿಲ್ಲ. ನಿಲ್ಲುತ್ತಾಳೆ ಕೂಡುತ್ತಾಳೆ ನಡೆಯುತ್ತಾಳೆ. ತೀರಾ ಅವಶ್ಯಕತೆ ಬಂದಾಗ ಓಡುತ್ತಾಳೆ. ಕೆಲಸದ ಕಮಲಮ್ಮ ಹೇಳಿದಂತೆ “ತನಗೇನು ಬೇಕೋ ಅದನ್ನು ತಾನೇ ಮಾಡಿಕೊಳ್ಳಬೇಕು” ಎನ್ನುವ ಪ್ರಜ್ಞೆ ಅವಳಿಗೆ ಬಂದಿದೆ.

ಅವಳು ಎಡವಿದ್ದು ಎಲ್ಲಿ? ಅವಳಿಗೆ ಪ್ರಾಕ್ಚರ್ ಆದದ್ದು ಎಲ್ಲಿ ಎನ್ನುವುದು ಅವಳಿಗೆ ತಿಳಿದಿದೆ. ಕೆಲಸದ ಕಮಲಮ್ಮನ ಕಣ್ಣಿಗೆ ಕಂಡಿದ್ದು ಅವಳ ಕಣ್ಣಿಗೆ ಮೊದಲೇ ಯಾಕೆ ಕಾಣಲಿಲ್ಲ? ಬದುಕನ್ನು ಸರಿಯಾಗಿ ಕಾಣಲು ಮೇಲ್ಗಣ್ಣಿಗೆ ಕಾಣದ ಕಾಣದ ಮತ್ತೊಂದು ನೋಟವೂ ಬೇಕು. ಅದು ಎಲ್ಲರಿಗೂ ಕಾಣುವ ನೋಟವಲ್ಲ.

ಎಸ್. ಸುಶೀಲ ಚಿಂತಾಮಣಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *