ಕಣ್ಣು ಕಾಣದ ನೋಟ/ ನಕ್ಕು ನಡೆದಳು ಅವಳು – ಎಸ್. ಸುಶೀಲಾ ಚಿಂತಾಮಣಿ

ಸರೋಜಿಯ ಮದುವೆಯಾಗಿ ನಲವತ್ತು ವರ್ಷಗಳೆ ಆಗಿರಬೇಕು. ದೊಡ್ಡ ಕುಟುಂಬದ ಒಬ್ಬಳೇ ಸೊಸೆಯಾಗಿ ಅವಳು ಮದುವೆಯಾಗಿ ಹೋದಾಗ ಎಲ್ಲರೂ ಅವಳ ಅದೃಷ್ಟವನ್ನು ಅದೆಷ್ಟು ಹೊಗಳಿರಬೇಕು. ದೊಡ್ಡಮನೆಯ ಸೊಸೆ ಅಗುವುದೇನೂ ಅದೃಷ್ಟವಿಲ್ಲದೇ ಆಗುವಂತದ್ದಲ್ಲವಲ್ಲಾ ಎನ್ನುವುದು ಆಗಿನ ಎಲ್ಲರ ಬಾಯಿಮಾತು. ಸರೋಜಿಗೆ ಎಲ್ಲವೂ ಇತ್ತು. ಯಾವುದನ್ನೂ ಅನುಭವಿಸಲಾಗಲಿಲ್ಲ. ಅವಳಿಗೆ ಬೇಕಾದ ಏಕಾಂತ ಅವಳಿಗೆ ಸಿಗುತ್ತಿರಲಿಲ್ಲ. ಅವಳದೇ ಎನ್ನುವ ಬದುಕಿನ ಕೆಲವು ಕ್ಷಣಗಳೂ ಅವಳಿಗೆ ಸಿಗುತ್ತಿರಲಿಲ್ಲ.

ಮನೆಯ ಒಳಗೆ ಹೊರಗೆ ಗಾಣದ ಎತ್ತಿನಂತೆ ದುಡಿಯುತ್ತಾ ನಡೆದ ಅವಳು ತನಗೂ ತನ್ನ ಗಂಡನಿಗೂ ಒಟ್ಟಾಗಿ ಬರುವ ರಜೆಯ ದಿನಗಳಿಗಾಗಿ ಕನಸು ಕಾಣುತ್ತಾ ಕಾಯುತ್ತಿದ್ದಳು. ರಜೆ ಎಂದು ಘೋಷಣೆ ಆಗುವ ಮುಂಚೆಯೇ ಅವಳ ನಾದಿನಿ ತನ್ನ ಮಕ್ಕಳೊಂದಿಗೆ ತವರಿಗೆ ಹಾಜರು. ಬೇಸಿಗೆ ರಜೆಯ ಉದ್ದಕ್ಕೂ ಆ ಮಕ್ಕಳು ಸರೋಜಿಯ ಗಂಡನಿಗೆ ಅಂಟಿಕೊಂಡೇ ಇರುತ್ತಿದ್ದರು. ಸರೋಜಿಗೇನೂ ಅವಳ ನಾದಿನಿ ಮತ್ತು ನಾದಿನಿಯ ಮಕ್ಕಳ ಮೇಲೆ ಪ್ರೀತಿ ಇಲ್ಲ ಎಂದಲ್ಲ. ಆದರೆ ಅವಳಿಗೆ ತನ್ನ ಗಂಡ ತನಗೂ ಸ್ವಲ್ಪ ಸಮಯ ಕೊಡಲಿ ಎನ್ನುವ ಆಸೆ ಇತ್ತು ಅಷ್ಟೇ. ಅವಳಿಗೆಂದೇ ಬೇಕಾದ ಸಮಯ ಸಿಕ್ಕದೆಯೇ ಸರೋಜಿಯೂ ಅರವತ್ತಕ್ಕೆ ಹತ್ತಿದಳು.

ಇತ್ತೀಚೆಗೆ ಸರೋಜಿಯ ನಾದಿನಿಯ ಮಗಳಿಗೆ ಮದುವೆ ಆಯಿತು. ವರ್ಷವೂ ಆಗಲಿಲ್ಲ. ಒಂದು ದಿನ ಸರೋಜಿಯ ನಾದಿನಿ ಸರೋಜಿಯ ಹತ್ತಿರ ಹೇಳಿದ್ದು ಇದು “ ಅಲ್ಲಾ ಅತ್ತಿಗೇ , ನಮ್ಮ ಪುಟ್ಟಿಯ ನಾದಿನಿಗೆ ಕಾಮನ್ ಸೆನ್ಸ್ ಬೇಡವೇ?. ಪ್ರತಿ ಶನಿವಾರ ಭಾನುವಾರ ನನ್ನ ತಮ್ಮನ ಮನೇ , ತಮ್ಮನ ಮನೇ ಅಂತ ಮಕ್ಕಳು ಮರೀ ಹಾಕ್ಕೊಂಡು ಬಂದು ಕೂತರೇ , ಹೊಸದಾಗಿ ಮದುವೆ ಆದ ನನ್ನ ಮಗಳಿಗೆ ಪ್ರೈವೇಟ್ ಟೈಮೇ ಬೇಡವೇ? ಅವರವರ ಮನೇಲ್ಲಿ ಅವರವರು ಇರಬೇಕು ಯಾವಾಗಲೋ ಹಬ್ಬ ಹುಣ್ಣಿಮೇ ಅಂದ್ರ ಹೋಗಬೇಕೂ ಅನ್ನೋದು ಇವರಿಗೆ ತಿಳಿಯೋದು ಯಾವಾಗ? ಥೂ ಸ್ವಲ್ಪವೂ ಅರ್ಥಮಾಡಿಕೊಳ್ಳೋದಿಲ್ಲಪ್ಪ. ನೀವೇನು ಹೇಳ್ತೀರಾ ಅತ್ತಿಗೇ? “ ಸರೋಜಿ ಏನೂ ಹೇಳಲಿಲ್ಲ. ತನ್ನ ನಾದಿನಿಯನ್ನು ದೀರ್ಘವಾಗಿ ಒಂದು ನಿಮಿಷ ನೋಡಿ ನಸು ನಗೆ ನಕ್ಕು ತನ್ನ ಕೆಲಸ ಮಾಡಲು ಮುಂದೆ ನಡೆದಳು.

ಸರೋಜಿನಿಯ ಆ ಒಂದು ನಿಮಿಷದ ನೋಟದಲ್ಲಿ ಅದೆಷ್ಟು ಮಾತುಗಳು ಇದ್ದವು. ಅವು ಬರಿಯ ಕಣ್ಣು ಗ್ರಹಿಸುವಂತದ್ದಲ್ಲ. “ನನಗೆ ನೀವು ಚಿವುಟಿದಾಗ ಬಂದದ್ದು ನೀರು ಅಷ್ಟೇ? ನಿಮ್ಮ ಮಗಳಿಗೆ ಅವಳ ನಾದಿನಿ ಚಿವುಟದಾಗ ಬಂದದ್ದು ರಕ್ತವೇ? ಅಂತ ಹೇಳುತ್ತಿದ್ದೀರಾ ಎಂದು ಅವಳ ಆ ನೋಟ ಅವಳ ನಾದಿನಿಯನ್ನು ಕೇಳಿತೋ ಏನೋ ಎನ್ನುವುದನ್ನು ಗುರ್ತಿಸುವವರಾದರೂ ಯಾರು? ನೋಟದ ಭಾಷೆಯ ಆಳವಾದ ಅಧ್ಯಯನ ಅರಿತವರು ಎಷ್ಟು ಮಂದಿ ಸಿಗಲು ಸಾಧ್ಯ?


ಎಸ್. ಸುಶೀಲ ಚಿಂತಾಮಣಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *