ಕಣ್ಣು ಕಾಣದ ನೋಟ/ಚೆಲ್ಲಿ ಹೋಯಿತಾ ಹಾಲು? – ಎಸ್ . ಸುಶೀಲ ಚಿಂತಾಮಣಿ    

ಅದೆಷ್ಟು ವ್ಯತ್ಯಾಸ ಪದಗಳ ಪ್ರಯೋಗದಲ್ಲಿ ! ಸಾವಿಯ ಅತ್ತೆ ಹೇಳಿದ “ಹಾಲು ಚೆಲ್ಲಿ ಬಿಟ್ಟೆಯಾ?” ಮತ್ತು ಸಾವಿ ಹೇಳಿದ “ಹಾಲು ಚೆಲ್ಲಿ ಹೋಯಿತಾ?” ಬರಿಯ  ಪದಗಳಲ್ಲ. ಅವು ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯುವ ಮಾಪನಗಳು.   ರುಡ್ಯಾರ್ಡ್ ಕಿಪ್ಲಿಂಗ್‍ರ  ಮಾತು ನೆನಪಿಗೆ ಬಂತು. “ ವರ್ಡ್‍ಸ್ ಆರ್, ಅಫಕೋರ್ಸ, ದಿ ಮೋಸ್ಟ್ ಪವರ್ಫುಲ್ ಡ್ರಗ್ ಯೂಸ್ಡ್  ಬೈ ಮ್ಯಾನ್ ಕೈಂಡ್”.  ಮಾನವಕುಲ ಉಪಯೋಗಿಸುವ ಅತ್ಯಂತ ಪ್ರಬಲ ಹಾಗೂ ಅಧಿಕ ಶಕ್ತಿಯುಳ್ಳ ಔಷಧ “ಪದಗಳು”.

ಸಾವಿತ್ರಿ ಎಲ್ಲರ ಬಾಯಲ್ಲೂ ಸಾವಿಯೇ.  ಎಲ್ಲರೂ ಸಾವಿ  “ಒಂದಾ  ದೆವ್ವ ಇಲ್ಲವಾ ದೇವತೆ” ಆಗಿರಬೇಕು ಎನ್ನುತ್ತಿದ್ದರು. ಇವಳಂತೂ  ಮನುಷ್ಯಳಲ್ಲ ಎನ್ನುವುದು ಅವಳ ಎಲ್ಲ ಸ್ನೇಹಿತರ, ಬಳಗದವರ ತೀರ್ಮಾನ ಆಗಿತ್ತು. ಯಾವ ಹೆಣ್ಣಿಗೂ ಇರಲು ಸಾಧ್ಯವಿರದ ಆ ತಾಳ್ಮೆ, ಎಂಥ ಸಂದರ್ಭದಲ್ಲೂ ನೆಲ ಕಚ್ಚಿ ನಿಲ್ಲುವ ಅವಳ  ಗಟ್ಟಿತನ, ಯಾರಿಗೂ ಎದುರಾಡದೇ ತನ್ನ ಮಾತೇನಿದೆ ಎನ್ನುವುದನ್ನು ಹೇಳದೆಯೇ ಸಂಸಾರದಲ್ಲಿ ನಲವತ್ತು ವರ್ಷ ಉಳಿದ ಅವಳ ಕೆಚ್ಚೆದೆ  ಮನುಷ್ಯ ಮಾತ್ರರಿಗೆ ಸಾಧ್ಯವಾಗದ್ದು ಎಂದು ಅವರಿವರು ಹೇಳಿದರೆ ಒಪ್ಪಬೇಕಾದದ್ದೇ.  ಈ ತೀರ್ಮಾನಕ್ಕೆ ಯಾರಾದರೂ ಬಂದರೆ ಅದು ಕೇವಲ ಸಾವಿಯನ್ನು ಮಾತ್ರ ನೋಡಿ ಅಲ್ಲ. ಅವಳ ಜೊತೆಗೆ ಅವಳ ಗಂಡನನ್ನು ನೋಡಿ ಹೇಳಿದವರ  ತೀರ್ಮಾನವದು.

ತಂದೆ ಮತ್ತು ಅಣ್ಣನ ಮುಂದೆಯೂ ಸ್ವರ ಎತ್ತಿ ಎಂದೂ ಮಾತಾಡಿರದ ಸಾವಿ ಹತ್ತೊಂಬತ್ತು ವಯಸ್ಸಿಗೇ ಮದುವೆಯಾಗಿ ಗಂಡನ ಮನೆಗೆ ಬಂದಾಗ ಅವಳು ನಿಂತದ್ದು ಕೂತದ್ದು ಎಲ್ಲವೂ ಅವಳ ಗಂಡನ , ಅತ್ತೆಯ ಲೆಕ್ಕದಲ್ಲಿ ತಪ್ಪೇ.  ಅವಳ ತಪ್ಪಿನ ಬಗ್ಗೆ ಅವಳನ್ನು ಯಾರಾದರೂ ಹೇಗಾದರೂ ಬಯ್ಯಲಿ ಅವಳಿಗೆ ನೋವಾಗುತ್ತಿರಲಿಲ್ಲ.  ತಾನು ತಪ್ಪು ಮಾಡಿದ್ದೇನೆ. ಮುಂದೆ ಹೀಗಾಗಬಾರದು ಎಂದು ಎಚ್ಚರ ವಹಿಸುವಂತಹ ಪ್ರೌಢಿಮೆ ಸಾವಿಯಲ್ಲಿತ್ತು.   ಆದರೆ ಯಾವುದನ್ನು ತಪ್ಪು ಎಂದು ಯಾವ ಕೋನದಿಂದಲೂ ಯಾರೂ ಹೇಳಲಾಗುವುದಿಲ್ಲವೋ ಅದನ್ನು  ಸಾವಿ ಮಾಡಿದ ತಪ್ಪು  ಎಂದು ಅವಳ ಮೇಲೆ  ಅವಳ ಗಂಡ ಅತ್ತೆ ಹೊರಿಸಿ  ಅವಳನ್ನು ಹೀಯಾಳಿಸಿದಾಗ ಅವಳಿಗೆ ಕಸಿವಿಸಿ ಆಗುತ್ತಿತ್ತು.  ಜೊತೆಗೆ ಅವರ ದೃಷ್ಟಿಯಲ್ಲಿ ತಪ್ಪಾಗಿ ಕಂಡದ್ದರ ಬಗ್ಗೆ ಅವಳ ಮೇಲೆ ಸಹಸ್ರನಾಮ ತೆಗೆಯುವುದರ ಜೊತೆಗೆ ಸಾವಿಯ ತಂದೆ ತಾಯಿಯನ್ನೂ ಸೇರಿಸಿ  ಶತ ಸಹಸ್ರನಾಮ ತೆಗೆದಾಗ  ಅವಳಿಗೆ ದುಃಖ ತಡೆಯಲಾಗುತ್ತಿರಲಿಲ್ಲ. ಸಾವಿಯ ವೀಕ್ನೆಸ್ ಎಂದರೆ ಅವಳ ತಂದೆ ತಾಯಿಯೇ ಎನ್ನುವುದು ಅವಳ ಗಂಡ ಮತ್ತು ಅತ್ತೆಗೆ ಚೆನ್ನಾಗಿ ಗೊತ್ತಾಗಿತ್ತು.  ಮದುವೆಯಾದ ಮಗಳು  ಗಂಡನನ್ನು ಬಿಟ್ಟು ತವರು ಸೇರಿಕೊಂಡಳು ಎಂದು ತನ್ನ ತಂದೆ ತಾಯಿಯ ಗೌರವಕ್ಕೆ ಕುಂದು ಬರದಿರಲಿ ಎಂದೇ ಸಾವಿ ತನ್ನ ಗಂಡನ ಮನೆಯಲ್ಲಿ ನೆಲೆ ನಿಂತದ್ದು ಎನ್ನುವುದೂ ಕೆಲವರ ತರ್ಕ.   ದೊಡ್ಡ ಕೆಲಸದಲ್ಲಿರುವ ಗಂಡ ಇಸ್ತ್ರೀ ಮಾಡದ  ಷರಟು  ಹಾಕಿಕೊಂಡು ಹೋಗುವುದು ಸಾವಿಗೆ ಸರಿ ಎನ್ನಿಸಲಿಲ್ಲ.  ತಾನೇ ಖುದ್ದಾಗಿ ಕೂತು ಅವನ  ಇಪ್ಪತ್ತು ಜೊತೆ ಬಟ್ಟೆಗಳನ್ನು ಇಸ್ತ್ರೀ ಮಾಡಿ ಕಪಾಟಿನಲ್ಲಿ ಜೋಡಿಸಿಟ್ಟಳು.  ಅದನ್ನು ನೋಡಿ ಆಫೀಸಿಗೆ ಹೊರಟಿದ್ದ ಅವಳ ಗಂಡ ಮಾಡಿದ ರಂಪಾಟ ಕೂಗಿದ ಕೂಗಾಟ ಅಷ್ಟಿಷ್ಟಲ್ಲ. ಎಲ್ಲ ಬಟ್ಟೆಗಳನ್ನೂ ಹೊರಗೆ ಎಳೆದು ಕಾಲಿನಲ್ಲಿ ಹೊಸಕಿ ಮತ್ತೆ ಮುದುರಾಗಿಸಿ ಕಪಾಟಿನಲ್ಲಿಟ್ಟ. ಒಂದು ಷರಟನ್ನು ಎಳೆದು ನೆಲೆದಲ್ಲಿ ಕಾಲಿಂದ ಒರೆಸಿ ಹಾಕಿಕೊಂಡು ಆಫೀಸಿಗೆ ಟೈಮಾಯಿತೆಂದು ಓಡಿದ. ಆಗ ಸಾವಿಯ ಅತ್ತೆ ವಿಜಯದ ನಗೆ ಬೀರಿದ್ದು ಸಾವಿ ಮರೆತಿಲ್ಲ.  “ನಿನ್ನ ಗಂಡನನ್ನು ನೆಟ್ಟಗೆ ಮಾಡಕ್ಕೆ ಹೋಗ ಬೇಡ. ನೀನು ನೆಟ್ಟಗಾಗು ಸಾಕು . ನಿನ್ನ ಅಪ್ಪ ಅಮ್ಮ ನಿನ್ನಲ್ಲಿ ಅದೆಷ್ಟು ಡೊಂಕು ಇಟ್ಟಿದ್ದಾರೆ ಅಂತ  ಮುಟ್ಟಿ ಮುಟ್ಟಿ ನೋಡಿಕೋ. “ ಅತ್ತೆಯ ಸಹಸ್ರನಾಮ ಬೆಳೆಯುವ ಮುಂಚೆ ಜಾಗ ಖಾಲಿ ಮಾಡಲಿಕ್ಕೆಂದು ಸಾವಿ ರೂಮಿನಿಂದ ಆಚೆ ಬಂದು ಅಡಿಗೆ ಮನೆಯ ಬಾಗಿಲು ತಳ್ಳಿದಳು.  ಅವಳ ಗ್ರಹಚಾರಕ್ಕೆ ಬಾಗಿಲ ಹಿಂದೆ ಯಾರಿಗೂ ಕಾಣದಂತೆ ಇಟ್ಟಿದ್ದ ಹಾಲಿನ ಪಾತ್ರೆಗೆ ಬಾಗಿಲು ಬಡಿದು ಹಾಲೆಲ್ಲ ಚೆಲ್ಲಿ ಹೋಯಿತು. ಹಿಂದೆಯೇ ಬಂದ ಸಾವಿಯ ಅತ್ತೆ “ಅಯ್ಯೋ ಪಾಪಿ ಹಾಲನ್ನೂ ಚೆಲ್ಲಿ ಬಿಟ್ಟೆಯಾ?. ನಿನಗೇನು ಬಂದಿತ್ತು? ನಿನ್ನ ಅಪ್ಪ ಅಮ್ಮ ನಿನ್ನನ್ನೂ ಒಂದು ಹೆಣ್ಣು ಅಂತ ನನ್ನ ಮಗನಿಗೆ ಹೇಗೆ ಕಟ್ಟಿದರೋ ಬ್ರಹ್ಮದೇವರಿಗೇ ಗೊತ್ತು” ಎಂದಾಗ ಸಾವಿ ಸಾಯದೇ ಉಳಿದದ್ದೇ ಹೆಚ್ಚು. ನಂತರದ ನಲವತ್ತು ವರ್ಷಗಳೂ ಇಂತಹವೇ ಮಾತುಗಳ ನಡುವೆ ಅವಳು ಬದುಕಿ ಉಳಿದದ್ದೇ  ಒಂದು ಪವಾಡ.

ಸಾವಿಯ  ಅತ್ತೆಗೆ ತೊಂಬತ್ತರ ಕೊನೆಯ ವಯಸ್ಸು. ಕೈಕಾಲು ಮುದುರಿ ಮಂಚಕ್ಕೆ ಅಂಟಿಕೊಂಡು ಮಾತಾಡಲಾಗದೇ ಮಲಗಿದ್ದಾರೆ. ಅವರ  ಎಲ್ಲ ರೀತಿಯ ಸೇವೆ ಸಾವಿತ್ರಿಯದ್ದೇ. ಆ ಸೇವೆಯಲ್ಲಿ ತಪ್ಪು ಕಂಡು ಹಿಡಿಯುವ ಸೇವೆ ಅವಳ ಗಂಡನದ್ದು.  ಈ ಮಧ್ಯೆ ಸಾವಿಯ ಮಗನಿಗೆ ಮದುವೆ ಆಗಿ ಆರು ತಿಂಗಳಾಗಿತ್ತು. ಸಾವಿಯ ಒಡನಾಡಿ , ಜೀವದ ಗೆಳತಿ ಆ  ಮದುವೆಗೆ ಹೋಗಿರಲಿಲ್ಲ.  ಮಾತಾಡಿಸಿಕೊಂಡು ಬರಲು ಸಾವಿಯ ಮನೆಗೆ ಹೋಗಿದ್ದಳು.  ಸಾವಿ ಒಂದು ಲೋಟ ಬಿಸಿ ಹಾಲು ಕೊಟ್ಟದ್ದನ್ನು , ಬಿಸಿ ಹೆಚ್ಚು ಎಂದು ಕೆಳಗೆ ಇಟ್ಟಿದ್ದಳು. ಎಲ್ಲಿಂದಲೋ   ಬಂದ ಸಾವಿಯ ಸೊಸೆ ಮೊಬೈಲ್ನಲ್ಲಿ ಯಾರಿಗೋ ಮೇಸೇಜ್ ಕಳಿಸುತ್ತಾ ಕಳಿಸುತ್ತಾ  ಮುಂದೇನಿದೆ ಎತ್ತ ಎನ್ನುವುದರ ಪರಿವೆಯೇ ಇಲ್ಲದೆ  ಧಡಧಡನೇ ನಡೆಯುತ್ತಾ ಬಂದು ಕೆಳಗೆ ಇಟ್ಟಿದ್ದ ಹಾಲಿನ ಲೋಟಕ್ಕೆ ಮುಗ್ಗುರಿಸಿದಳು. ಹಾಲೆಲ್ಲ ಚೆಲ್ಲಿಹೋಯಿತು. ಗಾಬರಿಯಿಂದ ಅತ್ತೆಯ ಕಡೆ ನೋಡಿದಾಗ ಸಾವಿ ಹೇಳಿದ್ದು ಇಷ್ಟು.” ಹಾಲು ಚೆಲ್ಲಿ ಹೋಯ್ತಾ ? ಬಿಡು. ನಾನು ಒರೆಸ್ತೇನೆ . ನೀನು ನಿನ್ನ ಕೆಲಸ ನೋಡಿಕೋಮ್ಮ”.

ಅದೆಷ್ಟು ವ್ಯತ್ಯಾಸ ಪದಗಳ ಪ್ರಯೋಗದಲ್ಲಿ ! ಸಾವಿಯ ಅತ್ತೆ ಹೇಳಿದ “ಹಾಲು ಚೆಲ್ಲಿ ಬಿಟ್ಟೆಯಾ?” ಮತ್ತು ಸಾವಿ ಹೇಳಿದ “ಹಾಲು ಚೆಲ್ಲಿ ಹೋಯಿತಾ?” ಬರಿಯ  ಪದಗಳಲ್ಲ. ಅವು ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯುವ ಮಾಪನಗಳು.   ರುಡ್ಯಾರ್ಡ್ ಕಿಪ್ಲಿಂಗ್‍ರ  ಮಾತು ನೆನಪಿಗೆ ಬಂತು. “ ವರ್ಡ್‍ಸ್ ಆರ್, ಅಫಕೋರ್ಸ, ದಿ ಮೋಸ್ಟ್ ಪವರ್ಫುಲ್ ಡ್ರಗ್ ಯೂಸ್ಡ್  ಬೈ ಮ್ಯಾನ್ ಕೈಂಡ್”.  ಮಾನವಕುಲ ಉಪಯೋಗಿಸುವ ಅತ್ಯಂತ ಪ್ರಬಲ ಹಾಗೂ ಅಧಿಕ ಶಕ್ತಿಯುಳ್ಳ ಔಷಧ “ಪದಗಳು”.

ಪದಗಳ ಬಳಕೆಯ ಪರಿಣಾಮ ಎಲ್ಲರಿಗೂ ತಿಳಿದಿರುವುದಿಲ್ಲ.  ತಮ್ಮ ಜೀವನಾನುಭವದಿಂದ ಪಕ್ವವಾದವರ ಬಾಯಿಂದ ಹೊರ ಬಂದ ಪದಗಳ ಪಕ್ವತೆ ಕಣ್ಣಿಗೆ ಕಾಣಲಾಗದ್ದು. ಅದರ ತೂಕ ಕಣ್ಣಳತೆಗೆ  ಸಿಗುವಂತದ್ದಲ್ಲ. ಕಣ್ಣಿಗೆ ಕಾಣದ ನೋಟ ಆಗೊಮ್ಮೆ ಈಗೊಮ್ಮೆ ಕಾಣುವುದು ಯಾರಿಗೋ?

ಎಸ್.ಸುಶೀಲ ಚಿಂತಾಮಣಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *