ಕಣ್ಣು ಕಾಣದ ನೋಟ / ಗೋಡೆಯ ಮೇಲಿನ ಜೀವ – ಸುಶೀಲ ಚಿಂತಾಮಣಿ
ಅವಳಿಗೂ ಕನಸಿತ್ತು. ಅದೊಂದು ವಿಚಿತ್ರವಾದ ಕನಸು. ತಾನು ಗೋಡೆಯ ಮೇಲಿನ ಜೀವವಾಗಿ ಬದುಕಬೇಕು ಎಂದು. ಅದಕ್ಕಾಗಿ ಸುಳ್ಳು ಹೇಳುವುದನ್ನೇ ಬಿಟ್ಟಳು. ಅದರಿಂದ ಎಲ್ಲವನ್ನೂ ಕಳೆದುಕೊಂಡರೂ ಗೆದ್ದಳು.
ಅವಳನ್ನು ಎಲ್ಲರೂ ನೋಡಿರಲಿಕ್ಕಿಲ್ಲ. ಒಬ್ಬಂಟಿ ಜೀವ. ಹೊಲಿಗೆ ಕೆಲಸ ಮಾಡಿ ಬದುಕುತ್ತಿದ್ದಾಳೆ. ಕೆಲವರಿಗೆ ಗುಂಡಿ ಹಾಕಲು, ಹೆಮ್ಮಿಂಗ್ ಮಾಡಲು ಅಷ್ಟೋ ಇಷ್ಟೋ ಕೊಟ್ಟು ಉಳಿದ ಹಣದಲ್ಲಿ ತನ್ನ ಜೀವನ ಮಾಡುತ್ತಿದ್ದಾಳೆ. ಹೀಗೆ ಮಾಡುತ್ತಾ ಅವಳು ಇಪ್ಪತ್ತು ವರ್ಷಕ್ಕೂ ಮೇಲೇ ಆಗಿದೆ. ಇದರಲ್ಲಿ ಹೆಚ್ಚುಗಾರಿಕೆ ಏನಿದೆ ಎಂದು ಕೇಳಬೇಡಿ. ಅವಳ ಮುಖದಲ್ಲಿರುವ ನೆಮ್ಮದಿಯ ನೆಲೆ ಎಲ್ಲರಲ್ಲೂ ಸಿಗಲಾರದು.
ಅವಳಿಗೂ ಮದುವೆಯಾಗಿತ್ತು. ಗಂಡನಿಗೆ ಕೈತುಂಬಾ ಸಂಬಳ, ಸ್ಥಿತಿವಂತರು ಎಂದು ಹೇಳಿದ್ದರು. ಗಂಡನ ಮನೆಯವರದು ಒಳ್ಳೆಯ ವೈದಿಕ ಕುಟುಂಬ. ಹಳ್ಳಿ ಹುಡುಗಿ, ಮಡಿ ಮುಟ್ಟು ಮೈಲಿಗೆ ಮನೆಕೆಲಸ ಗೊತ್ತಿದ್ದರೆ ಸಾಕು ಎಂದೇ ಅವಳನ್ನು ಸೊಸೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದರು. ಅವಳಿಗೂ ಕನಸಿತ್ತು. ಅದೊಂದು ವಿಚಿತ್ರವಾದ ಕನಸು. ತಾನು ಗೋಡೆಯ ಮೇಲಿನ ಜೀವವಾಗಿ ಬದುಕಬೇಕು ಎಂದು.
ನಮ್ಮ ಹಳ್ಳಿಗಳ ಕಡೆ ಈಗಲೂ ಜನ ಹಲ್ಲಿಯನ್ನು “ಹಲ್ಲಿ” ಎಂದು ಕರೆಯುವುದಿಲ್ಲ. ಅದನ್ನು “ಗೋಡೆಯ ಮೇಲೆ ಹೋಗುವುದು” ಎಂದೇ ಹೇಳುತ್ತಾರೆ. ಸಣ್ಣವಳಿದ್ದಾಗ ಮೊದಲ ಬಾರಿಗೆ ಹಲ್ಲಿಯನ್ನು ನೋಡಿದಾಗ “ಅದು ಏನು?” ಎಂದು ಕೇಳಿದ್ದಳು. ಅದಕ್ಕೆ ಯಾರೋ “ಅದು ಹಲ್ಲಿ ” ಎಂದಿದ್ದರು. ಮುಂದೊಂದು ದಿನ ಮತ್ತೆ ಹಲ್ಲಿ ಕಾಣಿಸಿದಾಗ ಅವಳು ಜೋರಾಗಿ “ಹಲ್ಲಿ ಹಲ್ಲಿ” ಎಂದು ಕೂಗಿದ್ದಳು. ಅಯ್ಯೋ ಅದನ್ನು “ಗೋಡೆಯ ಮೇಲೆ ಹೋಗುವುದು” ಎಂದೇ ಕರೆಯಬೇಕು ಎಂದು ಹಿರಿಯರು ಹೇಳಿದ್ದರು. ಕೆಲವು ದಿನಗಳ ಮೇಲೆ ಅದು ಯಾರೋ ಮಾತಾಡುತ್ತಿದ್ದಾಗ “ಲೊಚ್ ಲೊಚ್” ಎಂದಿತು. “ಅಯ್ಯೋ ಹಾಗಾದರೆ ಅದು ಸತ್ಯವೇ” ಎಂದು ಅವರಿವರು ಮಾತಾಡಿಕೊಂಡರು. ಚಿಕ್ಕ ಹುಡುಗಿ ಕುತೂಹಲದಿಂದ “ಲೊಚ್ ಲೊಚ್ ಎಂದರೆ ಏನು?” ಎಂದು ಕೇಳಿದ್ದಳು. ಹಸುವಿನ ಸೆಗಣಿ ಬಾಚಲು ಅವರ ಮನೆಗೆ ಬರುತ್ತಿದ್ದ ಮುದುಕಿ “ಸತ್ಯ -ಸತ್ಯ’ ಎಂದು ಅರ್ಥ” ಎಂದಿದ್ದಳು.
ಮುಂದೊಂದು ದಿನ ಹಲ್ಲಿ ಕೆಳಗೆ ಬಿತ್ತು. ಅದರ ಬಾಲ ಮುರಿಯಿತು. “ಅಯ್ಯೋ ಸತ್ತು ಹೋಯಿತಾ?” ಎಂದು ಅವಳು ಕೇಳಿದಾಗ, ಅದೇ ಅಜ್ಜಿ ಹೇಳಿದಳು “ಇಲ್ಲ ಅದು ಸಾಯಲ್ಲ. ಅದರ ಬಾಲ ಮತ್ತೆ ಹುಟ್ಟುತ್ತೆ ಯಾಕಂದ್ರೆ ಅದು ಸತ್ಯದ ಜೀವ. ಅದಕ್ಕೇ ಅದು ಅಷ್ಟು ಮೇ….ಲೆ, ಗೋ..ಡೆ ಮೇ…ಲೆ ಇರೋದು”. ತಕ್ಷಣ ಅವಳು ಹೇಳಿದಳು “ಅಜ್ಜೀ ನಾನೂ ಗೋಡೆಯ ಮೇಲಿನದು ಆಗಬೇಕು” ಅಜ್ಜಿ ಹೇಳಿದಳು. “ಅದು ಅಷ್ಟು ಸುಲಭವಲ್ಲ. ನೀನು ಯಾವಾಗಲೂ ಸತ್ಯ ಹೇಳಿದರೆ ಮಾತ್ರ ಆಗಬಹುದು”. ಆವತ್ತೇ ಕಡೆ. ಅವಳು ಸುಳ್ಳು ಹೇಳಲೇ ಇಲ್ಲ.
ಗಂಡನ ಮನೆಯಲ್ಲೂ ಅಷ್ಟೇ, “ನಿನ್ನ ಗಂಡನ ಸಂಬಳ ಎಷು”್ಟ ಎಂದರೆ ಸರಿಯಾಗಿ ಹೇಳುತ್ತಿದ್ದಳು. ಗಂಡ ತನ್ನ ತಮ್ಮನೂ ಮನೆಗೆ ದುಡ್ಡು ಕೊಡಲಿ ಎಂದು ಸುಳ್ಳು ಸಂಬಳ ಹೇಳಿದ್ದನ್ನು ಕೇಳಿಯೂ ನಿಜವಾದ ಸಂಬಳವನ್ನೇ ಹೇಳುತ್ತಿದ್ದಳು. “ನಿಮ್ಮ ಅತ್ತೆ ನಾನು ಊರಿಗೆ ಹೋಗಿದ್ದಾಗ ಎಲ್ಲಿಗೆ ಹೋಗಿದ್ದಳು, ಹೇಗೆ ಹೋಗಿದ್ದಳು” ಎಂದು ಮಾವ ಕೇಳಿದರೆ “ಅಟ್ಟದ ಮೇಲಿಂದ ಎತ್ತರದ ಚಪ್ಪಲಿ ತೆಗೆದು ಹಾಕಿಕೊಂಡು, ಆರು ಗಜದ ನೈಲಾನ್ ಸೀರೆ ಉಟ್ಟು ಕೊಂಡು ಗೌಡರ ಹೋಟೆಲಿನಲ್ಲಿ ಈರುಳ್ಳಿ ದೋಸೆ ಕಟ್ಟಿಸಿಕೊಂಡು ಪಕ್ಕದ ಮನೆ ಅಕ್ಕನ ಜೊತೆ ಸಿನಿಮಾ ನೋಡಿಕೊಂಡು ಬಂದರು” ಎಂದು ಹೇಳಿದಳು. “ನಾನು ತವರಿಗೆ ಹೋಗಿದ್ದಾಗ ನಿಮ್ಮ ಮಾವ ಕೆಲಸದ ನಿಂಗಿಯ ಜೊತೆ ಸರಸವಾಡಿದನೇ” ಎಂದು ಅತ್ತೆ ಕೇಳಿದಾಗ ತಾನು ನೋಡಿದ್ದೆಲ್ಲ ಸವಿಸ್ತಾರವಾಗಿ ಹೇಳಿದಳು.
ಮನೆಯಲ್ಲಿ ಕುಸ ಮುಸ ಶುರುವಾಯಿತು. ಈ ಮನೆಹಾಳಿಯಿಂದ ಮನೆ ಕೆಡುತ್ತಿದೆ. ನಮ್ಮ ನಮ್ಮಲ್ಲೇ ಜಗಳ ಹತ್ತಿಸುತ್ತಾಳೆ ಎಂದು ಎಲ್ಲರೂ ತೀರ್ಮಾನಿಸಿದರು. ಅವಳನ್ನು ಮನೆಯಿಂದ ಹೊರಗೆ ಹಾಕಿದರು. ಊರು ಪಂಚಾಯ್ತಿ ಆಯಿತು. ಆದದ್ದಾಯ್ತು ಇನ್ನಾದರೂ ಮನೆ ಮುರಿಯುವ ಕೆಲಸ ಮಾಡಬೇಡ ಎಂದು ಎಲ್ಲರೂ ಇವಳಿಗೇ ಬುದ್ಧಿ ಹೇಳಿದರು. ತವರಿನವರೂ ನಾವು ಕರೆದುಕೊಳ್ಳುವುದಿಲ್ಲ ಎಂದರು. “ನಾನು ಇಲ್ಲಿ ಇರುವುದಿಲ್ಲ” ಎಂದು ಉಟ್ಟ ಬಟ್ಟೆಯಲ್ಲಿ ಅವಳು ಗಂಡನ ಮನೆಯ ಹೊಸಿಲಾಚೆ ಕಾಲಿಟ್ಟಾಗ ಎಲ್ಲರಿಗೂ ಆಶ್ಚರ್ಯ.
“ಯಾಕೆ?” ಯಾರೋ ಕೇಳಿದರು. “ನಾನು ಗೋಡೆಯ ಮೇಲಿನ ಜೀವ ಆಗ ಬೇಕು. ಸುಳ್ಳಿನ ಜೊತೆ ಬದುಕುವುದಿಲ್ಲ” ಎಂದು ಹೋಗೇ ಬಿಟ್ಟಳು. ಹಲ್ಲಿ “ಲೊಚ್ ಲೊಚ್” ಅಂತು. ಅದೇ ಸೆಗಣಿ ಬಾಚುವ ಅಜ್ಜಿ “ಸತ್ಯ ಸತ್ಯ” ಎಂದು ಕೈಮುಗಿದಳು.
ಅವಳಂತಹವರು ಎಷ್ಟು ಜನ ಇರಲು ಸಾಧ್ಯ? ಗೋಡೆಯ ಮೇಲೆ ಅವಳು ನಮಗೆ ಕಾಣುವುದಿಲ್ಲ. ಅವಳು ಬಹಳ ಎತ್ತರದಲ್ಲಿ ಇದ್ದಾಳೆ. ನಮ್ಮ ಕಣ್ಣಿಗೆ ಕಾಣದಷ್ಟು ಎತ್ತರದಲ್ಲಿದ್ದಾಳೆ.
-ಎಸ್. ಸುಶೀಲ ಚಿಂತಾಮಣಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.