Latestಅಂಕಣ

ಕಣ್ಣು ಕಾಣದ ನೋಟ/ ಕಾಲ ತಂದ ಬದಲಾವಣೆ- ಎಸ್. ಸುಶೀಲ ಚಿಂತಾಮಣಿ

ನನ್ನ ಅಪ್ಪ ಅಮ್ಮ ಮದ್ರಾಸಿನ ಅಯ್ಯಂಗಾರಿಗಳು. ನನ್ನ ಗಂಡನ ಅಪ್ಪ ಅಮ್ಮ ಮುಲಕನಾಡು ತೆಲುಗು ಸ್ಮಾರ್ಥ ಬ್ರಾಹ್ಮಣ ಪಂಗಡದವರು. , ಹಲವು ದಶಕಗಳ ಹಿಂದೆ ನನ್ನ ಮದುವೆಯಾದಾಗ ಅಂತರ್ಪಂಗಡದ ಮದುವೆ ಅಂತರ್ಜಾತೀಯ ಮದುವೆಯಷ್ಟೇ ಸುದ್ದಿ ಮಾಡುತ್ತಿತ್ತು. ಇಂತಹ ಮದುವೆಗಳು ವಿರಳವಾಗಿತ್ತು. ಮದುವೆಯಾದ ಹೊಸತರಲ್ಲಿ ಅತ್ತೆ ಮನೆಗೆ ಬಂದವರು ಯಾರಾದರೂ ಈ ಹುಡುಗಿ ಯಾರ ಮನೆಯವಳು ಎಂದು ತೆಲುಗಿನಲ್ಲಿ ಕೇಳಿದರೆ, “ಅವರು ಬ್ರಾಂಬರಲ್ಲ…ಅಯ್ಯಂಗಾರಿಗಳು” ಎಂದು ಅತ್ತೆ ಮನೆಯಲ್ಲಿದ್ದ ಒಂದು ದೊಡ್ಡಜ್ಜಿ ನನ್ನ ಕಡೆ ಕೈ ಮಾಡಿ ನನಗೂ ಕೇಳುವಂತೆ ಹೇಳುತ್ತಿತ್ತು. ನಾನು ಮಾಡಿದ ಅಡುಗೆಯನ್ನು ಅಜ್ಜಿಯರಾರೂ ತಿನ್ನುತ್ತಿರಲಿಲ್ಲ. ಅವರ ಮಡಿವಂತಿಕೆ ಅವರನ್ನು ತಡೆಯುತ್ತಿತ್ತು.

ನಾನು ನನ್ನ ಗಂಡ ಮದುವೆಯಾದ 5-6 ವರ್ಷಕ್ಕೆ ಮದ್ರಾಸಿಗೆ ಹೋದಾಗ – ಅಲ್ಲಿ “ನಿನ್ನ ಗಂಡನ ಮನೆಯವರೆಲ್ಲಾ ವಿಭೂತಿ ಇಟ್ಟುಕೊಳ್ಳುತ್ತಾರಲ್ಲ ಯಾಕೆ? ವಿಭೂತಿ ಇಟ್ಟುಕೊಳ್ಳುವವರು ಬ್ರಾಹ್ಮಣರಾ?” ಎಂದು ನನ್ನ ಸೋದರಮಾವ ಗೊಗ್ಗರು ಗಂಟಲಲ್ಲಿ ಕೇಳಿದಾಗ ನನ್ನ ಗಂಡನಿಗೆ ಗೊಂದಲವಾದರೂ ಆ ವಯಸ್ಸಿನಲ್ಲಿ ನನಗೆ ಅದೊಂದು ವಿಚಿತ್ರ ರೀತಿಯಲ್ಲಿ ಸಮಾಧಾನವಾಗಿತ್ತು. ‘ನನ್ನ ಗಂಡನ ಕಡೆಯವರ ದೃಷ್ಟಿಯಲ್ಲಿ ನಾನು ಬ್ರಾಹ್ಮಣಳಲ್ಲ. ನನ್ನ ತವರಿನ ಕಡೆಯವರ ದೃಷ್ಟಿಯಲ್ಲಿ ನನ್ನ ಗಂಡ ಬ್ರಾಹ್ಮಣನಲ್ಲ. ಸರಿಯಾಯ್ತು!!’ ಎಂದು ಸಮಾಧಾನ ಪಟ್ಟಿದ್ದೆ.

ಈ ವಿಷಯ ನಮ್ಮ ನಡುವೆ ಎಂದೂ ಸಮಸ್ಯೆಯನ್ನು ಹುಟ್ಟುಹಾಕಲೇ ಇಲ್ಲ . ಕಾಲ ಉರುಳುತ್ತಾ ಉರುಳುತ್ತಾ ಬಂದಂತೆಲ್ಲಾ ಯಾರು ಯಾರೋ-ಯಾರು ಯಾರನ್ನೋ ಮದುವೆ ಆಗುತ್ತಾ ಬಂದಂತೆಲ್ಲಾ…… ನನ್ನ ಮದುವೆಯ ಒಂದಾನೊಂದು ಕಾಲದ ಮಹತ್ವದ ಪಟ್ಟಿ ಸಪ್ಪೆಯಾಗ ತೊಡಗಿತು. ಮುಲಕನಾಡಿನ ‘ಅಷ್ಟ್ಲ ಇಷ್ಟ್ಲ’ ತೆಲುಗು ಮಾತನಾಡುವ ನಾನು ಅತ್ತೆ ಮನೆ ಕಡೆಯ ಮೆಚ್ಚಿನ ಸೊಸೆಯಾಗಿ ಮೆರೆದಿದ್ದಾಯ್ತು. ಮದರಾಸಿನ ಪಕ್ಕಾ ತಮಿಳನ್ನು ಮಾತನಾಡುವ ನನ್ನ ಮಕ್ಕಳು ನನ್ನ ತವರಿನ ಕಡೆಯ ಎಲ್ಲಾ ಹಿರಿಯರಿಗೂ ಅಚ್ಚು ಮೆಚ್ಚು. ಈಗ ನನ್ನನಾಗಲೀ ನನ್ನ ಗಂಡನನ್ನಾಗಲೀ ನಮ್ಮ ಮಕ್ಕಳನ್ನಾಗಲೀ ಜಾತಿಯ ಒಳಪಂಗಡದ ವಿಚಾರವಾಗಿ ಕೆಣಕಿ ಮೇಲೆ ಕೆಳಗೆ ನೋಡುವವರು ಯಾರೂ ಇಲ್ಲ ನಿಜ! ಕ್ರಮೇಣ ಎಷ್ಟೋ ವರ್ಷಗಳ ನಂತರ ನನ್ನನ್ನು ಎಲ್ಲರೂ ಒಪ್ಪಿಕೊಂಡರಾದರೂ ಹಿಂತಿರುಗಿ ನೋಡಿದಾಗ ಅವರು ಒಪ್ಪಿಕೊಂಡದ್ದೇಕೆ ಎಂಬುದು ಕಾಡುತ್ತದೆ. ಹಿಂದೊಮ್ಮೆ ಅಸಹಜ ಎನಿಸಿದ್ದು ಈಗ ಸಹಜವಾದದ್ದರಿಂದಲೇ? ಕಾಲ ಕಳೆದಂತೆ ಅಂತರ್ಜಾತೀಯ ವಿವಾಹ ಬಹಳ ಸಹಜವಾಗಿರುವುದರಿಂದಲೇ ನನ್ನನ್ನು ಎಲ್ಲರೂ ಒಪ್ಪಿಕೊಂಡರೇ ಎನ್ನುವ ಪ್ರಶ್ನೆ ಕಾಡದೇ ಉಳಿದಿಲ್ಲ.

ವ್ಯಕ್ತಿಗೆ ಬೆಲೆ ಕೊಡುವುದು ಬೇರೆ ವ್ಯಕ್ತಿಗಳ ವರ್ತನೆಯ ಜೊತೆ ತೂಗು ಹಾಕಿ ಮಾತ್ರವೇ? ವ್ಯಕ್ತಿಯೊಬ್ಬ ಭಿನ್ನವಾದ ನಿರ್ಧಾರ ತೆಗೆದುಕೊಂಡಾಗ , ಅದೇ ರೀತಿಯ ನಿರ್ಧಾರಗಳನ್ನು ನಂತರ ಹಲವಾರು ಜನ ತೆಗೆದುಕೊಂಡಾಗ ಮೊದಲಿಗೆ ನಿರ್ಧಾರ ತೆಗೆದುಕೊಂಡವರ ನಿರ್ಧಾರವನ್ನು ಒಪ್ಪಿಕೊಳ್ಳುವುದು ಎಷ್ಟು ಸರಿ? ನಿರ್ಧಾರಗಳಿಗೆ ಬೆಲೆ ಸಿಗುವುದು ಆ ನಿರ್ಧಾರಗಳನ್ನು ಎಷ್ಟು ಜನ ಒಪ್ಪಿಕೊಳ್ಳುತ್ತಾರೆ ಎನ್ನುವುದರ ಮೇಲೆ ಎನ್ನುವುದಾದರೆ ಸಂಖ್ಯೆಗೆ ಬೆಲೆ ಬರುತ್ತದೆಯೇ ವಿನ: ತೆಗದುಕೊಂಡ ಸರಿಯಾದ ನಿರ್ಧಾರಕ್ಕೆ ಬೆಲೆ ಬರುವುದಿಲ್ಲ.  ನಮ್ಮ ಜಾತಿಗೆ ನಾವು ಕಾರಣರಲ್ಲ. ನಮ್ಮ ಹುಟ್ಟಿನ ಆಯ್ಕೆ ನಮ್ಮ ಕೈಯಲ್ಲಿಲ್ಲ” ಎನ್ನುವುದು ಅರ್ಥವಾದಾಗ ಮಾತ್ರ ಜಾತಿಯ ಹಿನ್ನೆಲೆಯಿಲ್ಲದೆ ವ್ಯಕ್ತಿಗೆ ಬೆಲೆ ಕೊಡಬಹುದೋ ಏನೋ?

ಜಾತಿಯ ವಿಷಯವಷ್ಟೇ ಅಲ್ಲ. ಸಹಬಾಳ್ವೆಯ ಅಥವಾ ವಿಚ್ಛೇದನದ ವಿಷಯವೂ ಅಷ್ಟೇ. “ಈ ಗಂಡನೊಂದಿಗೆ ಬಾಳಲು ಸಾಧ್ಯವೇ ಇಲ್ಲ” ಎನ್ನುವ ನಿರ್ಧಾರವನ್ನು ತೆಗೆದುಕೊಂಡು ವಿಚ್ಛೇದನಕ್ಕೆ ಮುಂದಾದಾಗ ಮಗಳಿಗೆ ಆಗುತ್ತಿರುವ ನೋವಿನಿಂದ ಅವಳನ್ನು ಉಳಿಸುವ ಬಗ್ಗೆ , ಅವಳನ್ನು ಹೊರತರುವುದರ ಬಗ್ಗೆ ಆಲೋಚಿಸುವ ಬದಲಿಗೆ “ನಮ್ಮ ವಂಶದಲ್ಲೇ ಇದುವರೆಗೆ ಯಾರಿಗೂ ವಿಚ್ಛೇದನ ಆಗಿಲ್ಲ. ಆದ್ದರಿಂದ ನೀನೂ ವಿಚ್ಛೇದನ ತೆಗೆದುಕೊಳ್ಳಬೇಡ” ಎಂದು ಹೇಳುವ ಅಪ್ಪ ಅಮ್ಮಂದಿರೂ ಇದ್ದಾರೆ. ಮಗಳು ವಿಚ್ಛೇದನ ಪಡೆಯಲು ಅಡ್ಡಗಾಲು ಹಾಕುತ್ತಾ ಬಂದ ಅಪ್ಪ ಅಮ್ಮಂದಿರು ಹಲವಾರು ವರ್ಷಗಳ ನಂತರ ಬಂದು , ‘ಈಗ ಬೇರೆ ಮಾಡಿಸಿಬಿಡಿ’ ಎನ್ನುವುದೂ ಇದೆ. ಅವರ ನಿರ್ಧಾರ ಬದಲಾಗಲು ಕಾರಣ ಕೇಳಿದರೆ, ‘ಈಗೆಲ್ಲಾ ಡೈವೋರ್ಸ ನಮ್ಮ ಕಡೆ ಕಾಮನ್ ಆಗಿಬಿಟ್ಟಿದೆ ನೋಡೀ. ಯಾರೂ ನಮ್ಮನ್ನು ಮಾತ್ರ ಈಗ ಕೈ ಮಾಡಿ ತೋರಿಸೋಕ್ಕೆ ಆಗಲ್ಲ ನೋಡೀ. ಅದಕ್ಕೇ… ನೀವು ಬೇಗ ಮುಗಿಸಿಕೊಡಿ” ಎನ್ನುವವರೂ ಇದ್ದಾರೆ.

ಹಲವರ ನಿರ್ಧಾರಗಳ ವೈಖರಿಯನ್ನು ಹಿಂತಿರುಗಿ ನೋಡುತ್ತಾ ಬಂದಾಗ ಕೆಲವು ಪ್ರಶ್ನೆಗಳು ಏಳುತ್ತವೆ. ‘ನಮ್ಮ ಜೀವನದ ನಿರ್ಧಾರ ನಮ್ಮದು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳುವಷ್ಟು ಬೆಳೆಯುವುದು ಯಾವಾಗ? ಬೇರೆಯವರ ಜೀವನದ ಬಗ್ಗೆ ಅವರು ತಮ್ಮದೇ ನಿರ್ಧಾರ ತೆಗೆದುಕೊಳ್ಳದೇ ಇರುವಂತೆ ತಡೆಯಲು ನಮಗೆ ಯಾವ ಹಕ್ಕೂ ಇಲ್ಲ ಎನ್ನುವುದನ್ನು ನಾವು ತಿಳಿದುಕೊಳ್ಳುವುದು ಯಾವಾಗ? ಕಣ್ಣಿಗ ಕಾಣದ್ದು ಬಹಳಷ್ಟಿದೆ.

ಎಸ್. ಸುಶೀಲ ಚಿಂತಾಮಣಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *