Uncategorizedಅಂಕಣ

ಕಣ್ಣು ಕಾಣದ ನೋಟ/ ಒಂದು ದೀಪ, ಹಲವು ಹಣತೆಗಳು – ಸುಶೀಲ ಚಿಂತಾಮಣಿ

ಮಕ್ಕಳು ಬೆಳೆಯುವ ಹಂತದಲ್ಲಿ ಶಾಲೆಯಲ್ಲಿ ಶಿಕ್ಷಕನೆಂಬ ಒಬ್ಬ ಮಾರ್ಗದರ್ಶಿ ಸಿಕ್ಕರೆ ಜೀವನವನ್ನು ಗ್ರಹಿಸುವ ರೀತಿಯೇ ಬದಲಾಗುತ್ತದೆ. ಎತ್ತರಕ್ಕೆ ಹತ್ತುವಾಗ ಏದುಸಿರು ಬಂದೇ ಬರುತ್ತದೆ ಎಂಬ ಎಚ್ಚರಿಕೆ, ಸಿದ್ಧತೆಯತ್ತ ಗಮನ ಕೊಡುವ ಶಿಸ್ತು ಕಲಿಸುತ್ತದೆ.

ನಮ್ಮ ಊರಿನಲ್ಲೊಂದು ಮೊದಲ ಆಂಗ್ಲಮಾಧ್ಯಮದ ಶಾಲೆ. ಅದಕ್ಕೊಬ್ಬ ಹೊರ ಊರಿನಿಂದ ಬಂದ ಮುಖ್ಯೋಪಾಧ್ಯಾಯರು. ಆ ರಮಣನ್ ಮಾಸ್ತರರ ಬಗ್ಗೆ ಎಲ್ಲರೂ ಮಾತಾಡುವವರೇ. ನೋಡಲಿಕ್ಕೆ ಚಂದ. ಸರಳವಾದ ಶಿಸ್ತಿನ ವೇಷಭೂಷಣ. ಪೋಷಕರೊಡನೆ ಒಂದೋ ಎರಡೋ ಮಾತು. ಮಕ್ಕಳ ಸುತ್ತಲೇ ಬೆಳಗ್ಗಿಂದ ಸಂಜೆಯವರೆಗೆ ಸುತ್ತಾಟ. ಇತರ ಶಿಕ್ಷಕ ಶಿಕ್ಷಕಿಯರೊಂದಿಗೆ “ದಸ್ ಫಾರ್ ನೋ ಫರ್ದರ್” / ಇಲ್ಲಿಯವರೆಗೂ ಸರಿ ..ಇನ್ನು ಮುಂದಿಲ್ಲ” ಎನ್ನುವಂತೆ ವ್ಯವಹಾರ. “ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಯಾವುದನ್ನೂ ಉದಾಸೀನ ಮಾಡುವುದಿಲ್ಲ” ಅದೆಂತಹ ಜೀವನ ಸಿದ್ಧಾಂತ!

ನಮ್ಮೂರಿನಲ್ಲಿ ಹಳ್ಳಿಯ ಮಕ್ಕಳೂ ಇಂಗ್ಲೀಷಿನಲ್ಲಿ ಮಾತಾಡಬಹುದು. ಕನ್ನಡ ಮಾಧ್ಯಮದಲ್ಲಿ ಓದಿದ ನನ್ನಂತಹವರೂ ಶಿಕ್ಷಕರಾದ ಮೇಲೂ ಇಂಗ್ಲೀಷಿನಲ್ಲಿ ಸುಲಲಿತವಾಗಿ ಮಾತಾಡುವುದನ್ನು
ಕಲಿಯಬಹುದು. ಒಂದು ಶಾಲೆ ವಿದ್ಯಾಭ್ಯಾಸದ ಬಗ್ಗೆ ಜ್ಞಾನಾರ್ಜನೆಯ ಬಗ್ಗೆ ಇಡೀ ತಾಲ್ಲೂಕಿನವರ ನೋಟವನ್ನು ಹೇಗೆಲ್ಲ ಪರಿವರ್ತಿಸಬಹುದು? ಯಾವುದೇ ವೃತ್ತಿಯಲ್ಲಿ ಒಬ್ಬ ವ್ಯಕ್ತಿ ಒಂದಾಗಿ ನಡೆದಾಗ ಆ ವೃತ್ತಿ ಆ ವ್ಯಕ್ತಿಯನ್ನು ಅದೆಷ್ಟು ಮೇಲೆತ್ತುತ್ತದೆ? ಎನ್ನುವುದನ್ನೆಲ್ಲ ತಿಳಿಸಿಕೊಡುವುದಕ್ಕೆ ಅವರಿಗೆ ಅವರೇ ಸಾಟಿ. ಕೇವಲ ಇಂಗ್ಲೀಷ್ ಶಾಲೆಯೊಂದರಲ್ಲಿ ಓದಿ ಅವರ ಶಿಷ್ಯರು ಅವರ ಜೊತೆಗೆ ಕೆಲಸಮಾಡಿದವರು ಮೇಲೆ ಬರಲಿಲ್ಲ. ಅವರು ಜೀವನದ ಪರಿಯನ್ನು ಅವರೊಂದಿಗೆ ಒಡನಾಟಕ್ಕೆ ಬಂದವರಲ್ಲಿ ಅರೆದಿದ್ದರು. “ಎತ್ತರಕ್ಕೆ ಹತ್ತುವಾಗ ಏದುಸಿರು ಬಂದೇ ಬರುತ್ತದೆ. ಆರೋಗ್ಯವನ್ನು ಸಿದ್ಧ ಪಡಿಸಿಕೊಂಡು ಹತ್ತಲು ಪ್ರಾರಂಭಿಸಬೇಕು” ಎನ್ನುತ್ತಿದ್ದರು.

ಶಾಲೆಯಲ್ಲಿ ಕೆಲಸ ಮಾಡಲು ಅದೆಷ್ಟು ಜನ ಹೆಣ್ಣುಮಕ್ಕಳು ಬರುತ್ತಿದ್ದರೋ. ಅವರ ಜೊತೆ ಕೆಲಸ ಮಾಡಿದವರಲ್ಲಿ ಅವರಿಗೇ ತಿಳಿಯದಂತಹ ಒಂದು ಮಾರ್ಪು ಬರುತ್ತಿತ್ತು. ಟೀಚರ್ ಒಬ್ಬರು ತನ್ನ ಮನೆಯ ಸಮಸ್ಯೆಯ ಕಾರಣದಿಂದ ಮಕ್ಕಳ ಹೋಂವರ್ಕ್ ತಿದ್ದಲಾಗಿರಲಿಲ್ಲ. ಆಗ ಆ ಮಾಸ್ತರರು ಹೇಳಿದ್ದು ಇಷ್ಟೇ “ಯಾವುದೇ ವೃತ್ತಿ ನಿನ್ನ ವೈಯಕ್ತಿಕ ಜೀವನದ ಸಮಸ್ಯೆಯನ್ನು ಮರೆತು ನಿಲ್ಲಲು ನಿನಗಿರುವ ಒಂದು ಅವಕಾಶ. ಆ ಸಮಸ್ಯೆಯನ್ನು ವೃತ್ತಿಯಲ್ಲಿಯೂ ತರುವುದಾದರೆ ನೀನು ಸಮಸ್ಯೆ ಇರುವಕಡೆ ಉಳಿಯುವುದೇ ಒಳ್ಳೆಯದಲ್ಲವೇ? ಒಂದು ಸಬ್ಜೆಕ್ಟಿನ ನೋಟುಪುಸ್ತಕದಲ್ಲಿ ಮತ್ತೊಂದು ಸಬ್ಜೆಕ್ಟನ್ನು ಬರೆಯಬಾರದು”. ಆಕೆ ಇದನ್ನು ನಮಗೆಲ್ಲ ಹೇಳಿದ್ದರು.

ಅದೇ ಕೊನೆ. ನಮಗೆಲ್ಲ ನಮ್ಮದೇ ಆದ ನೋವು ಕಷ್ಟ ಕೀಳರಿಮೆ ಸಂಕಟ ಸಂಕೋಚಗಳು ಇದ್ದವು. ಅವೆಲ್ಲವನ್ನೂ ಮೀರಿ ಬದುಕುವಷ್ಟು ನಾವೆಲ್ಲ ಬದಲಾದೆವು. ಅವರೊಂದಿಗೆ ಬೆಳೆದ ಶಿಷ್ಯರಾಗಲೀ ಸಹೋದ್ಯೋಗಿಗಳಾಗಲೀ “ಅವನು ಹಾಗೆ ಅವಳು ಹೀಗೆ- ಅದು ಹೀಗಿರಬಾರದಿತ್ತು ಇದು ಹೀಗಿರಬೇಕಿತ್ತು” ಎಂದು ಕರುಬುವುದನ್ನು ಬಿಡುವುದನ್ನು ಕಲಿತದ್ದು ಅವರಿಂದಲೇ. ಮೂವತ್ತು ಮೈಲು ದೂರದ ಹಳ್ಳಿಯಿಂದ ಆ ಶಾಲೆಗೆ ಮಕ್ಕಳನ್ನು ತಂದು ಬಿಡುತ್ತಿದ್ದ ಒಬ್ಬ ಹೆಂಗಸು “ನನ್ನ ಮೊಮ್ಮಕ್ಕಳು ಇಂಗೀಸ್ನಲ್ಲಿ ಮಾತಾಡೋಕ್ಕೆ ಎಸ್ಟು ಟೇಮಾಗುತ್ತೆ ಸೋಮೀ” ಎಂದಾಗ “ಮಗು ನಿಮ್ಮ ಭಾಷೆಯನ್ನೂ ಇಂಗೀಷನ್ನೂ ಕಲಿಯುತ್ತಮ್ಮಾ ತಾಳಿಕೊಳ್ಳಿ” ಎಂದಿದ್ದರು.

ಇಂಗೀಷಿನಲ್ಲೇ ಮಾತಾಡಬೇಕು ಎಂದು ಒಬ್ಬ ಶಿಕ್ಷಕರು ನಿಯಮವನ್ನು ಹಾಕಿದ್ದಾಗ ಒಬ್ಬ ಹುಡುಗ ಮತ್ತೊಬ್ಬ ಹುಡುಗನ ಗೊಣ್ಣೆ ಸುರಿಯುತ್ತಿದ್ದ ಮೂಗನ್ನು ತೋರಿಸಿ “ಪ್ರಶಾಂತ್ ನೋಸ್ ಚೀಮಡಿ ಕಮಿಂಗ್ ಮಿಸ್” ಎಂದಿದ್ದ. ಚೀಮಡಿ ಎನ್ನುವುದು ಗೊಣ್ಣೆ ಪದದ ತೆಲುಗು ಪದ. ಆ ದಿನ ನಾವೆಲ್ಲ ಚೀಮಡಿ ಎನ್ನುವುದಕ್ಕೆ ಇಂಗೀಷಿನಲ್ಲಿ ಏನು ಹೇಳುತ್ತಾರೆ ಎಂದು ಹುಡುಕಿ ಸೋತಿದ್ದೆವು. ಕೆಲವು ಪದಗಳು ಕೆಲವು ಭಾವನೆಗಳು ಮಾತೃಭಾಷೆಯಲ್ಲೇ ಹೊರಬರಬೇಕು ಎನ್ನುತ್ತಿದ್ದ ರಮಣನ್ ಮಾಸ್ತರರು ಕನ್ನಡವನ್ನು ಎಂದೂ ಕಡೆಗಣಿಸಲಿಲ್ಲ. ಕನ್ನಡ ಕಲಿಸಲು ಪ್ರವೀಣರನ್ನೇ ನೇಮಿಸಿದ್ದರು. “ಯಾವುದೋ ಒಂದಕ್ಕೆ ಆದ್ಯತೆ ಕೊಟ್ಟು ಬದುಕಿಗೆ ಬೇಕಾದ ಇತರ ವಿಷಯಗಳಿಗೆ ಆದ್ಯತೆ ಕೊಡದೇ ಬಿಟ್ಟರೆ ಏನು ಪ್ರಯೋಜನ? ಬ್ಯಾಲೆನ್ಸಿಂಗ್/ಸಮತೋಲನ ಜೀವನದ ಅವಶ್ಯಕತೆ” ಎನ್ನುತ್ತಿದ್ದರು. “ಇಂಗ್ಲೀಷ್ ಕಲಿತರೇ ಬದುಕು ಎಂದು ನಾನು ಹೇಳುವುದಿಲ್ಲ. ಆದರೆ ಇಂಗ್ಲೀಷ್ ಸರಿಯಾಗಿ ಕಲಿತಿದ್ದರೆ ನನ್ನ ಬದುಕು ಇನ್ನೂ ಚೆನ್ನಾಗಿರುತ್ತಿತ್ತು ಎಂದು ಯಾರಾದರೂ ಮುಂದೆ ನೊಂದುಕೊಳ್ಳುವುದಕ್ಕೆ ಬದಲಾಗಿ ಅದನ್ನೂ ಕಲಿತರೆ ತಪ್ಪೇನು” ಎನ್ನುತ್ತಿದ್ದರು.

ಶಿಕ್ಷಕಿಯೊಬ್ಬರು ಪ್ರತಿದಿನ ಲೇಟಾಗಿ ಶಾಲೆಗೆ ಬರುತ್ತಿದ್ದುದನ್ನು ಗಮನಿಸಿದ ಅವರು “ನಾಳೆಯಿಂದ ಆಯಾಗೆ ಹದಿನೈದು ನಿಮಿಷ ಲೇಟಾಗಿ ಬೆಲ್ ಹೊಡೆಯಲು ಹೇಳಲೇ?” ಎಂದಿದ್ದರು. ಅದೇ ಕೊನೆ ಆಕೆ ಎಂದೂ ಸಮಯವನ್ನು ತಪ್ಪಿಸಲೇ ಇಲ್ಲ. ಏಕಾಏಕಿ ಎಲ್ಲ ಕಡೆಯೂ ಶಿಸ್ತಾಗಿಬಿಟ್ಟಿದ್ದರು. ಆಕೆಯ ತಂದೆ ಒಮ್ಮೆ ಮಾಸ್ತರರನ್ನು ಭೇಟಿಯಾದಾಗ “ಸಾರ್ ಶಾಲೆಯ ಮಕ್ಕಳಿಗೆ ಶಿಸ್ತು ಕಲಿಸಿದ್ದೀರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಟೀಚರುಗಳಿಗೆ ಪಕ್ಕಾ ಶಿಸ್ತು ಕಲಿಸಿದ್ದೀರಿ” ಎಂದಿದ್ದರು. ಒಬ್ಬ ಟೀಚರ್ ಬಗ್ಗೆ ಮತ್ತೊಬ್ಬ ಟೀಚರ್ ಏನಾದರೂ ಹೇಳಲು ಹೋದಾಗ “ನಾವು ಏನು ಮಾಡಬೇಕು ಎನ್ನುವುದನ್ನು ಯೋಚಿಸೋಣವೇ?” ಎನ್ನುತ್ತಿದ್ದರು “ಬೇರೆಯವರ ಬಗ್ಗೆ ಹೇಳಬೇಡಿ” ಎನ್ನುತ್ತಿರಲಿಲ್ಲ.

ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಅವರನ್ನು ನೋಡಿ “ಒಬ್ಬ ವ್ಯಕ್ತಿಗೆ ಅತಿ ಹೆಚ್ಚಿನ ಗೌರವ ಸಿಗಬೇಕಾದರೆ ಏನು ಮಾಡಬೇಕು?” ಎಂದು ಕೇಳಿದ್ದೆ. “ನಿನ್ನ ಸರಿಯಾದ ಬೆಲೆಯನ್ನು ನೀನು ತಿಳಿದುಕೊಳ್ಳಬೇಕು. ನಿನ್ನ ಬೆಲೆ ತಿಳಿಯದವರಿಂದ ದೂರವಿರಬೇಕು” ಎಂದಿದ್ದರು. ಪ್ರತಿ ದಿನ ಬೆಳಿಗ್ಗೆ ಪ್ರಾರ್ಥನೆಗೆ ಮುಂಚೆ ಎಲ್ಲ ಮಕ್ಕಳನ್ನೂ ಕರೆದುಕೊಂಡು ಶಾಲೆಯ ಸುತ್ತ ತಿರುಗುತ್ತಾ “ಬಿಟ್ ಆಫ್ ಪೇಪರ್ ಲೆಯಿಂಗ್ ಆನ್ ದಿ ಗ್ರೌಂಡ್, ಮೇಕ್ಸ್ ದಿ ಪ್ಲೇಸ್ ಅನ್ಟೈಡೀ ಪಿಕ್ ದೆಂ ಅಪ್” ಎಂದು ರಾಗವಾಗಿ ಹಾಡುತ್ತಾ ಕಸವನ್ನೆಲ್ಲಾ ಮಕ್ಕಳ ಜೊತೆಗೆ ತಾನೂ ತೆಗೆದು ಕಸದ ಬುಟ್ಟಿಗೆ ಹಾಕುತ್ತಿದ್ದರು. ಸ್ವಚ್ಛ ಭಾರತ್ ಅಭಿಯಾನ ಮೂವತ್ತೈದು ವರ್ಷಕ್ಕೆ ಹಿಂದೆಯೇ ಅವರು ಆರಂಭಿಸಿದ್ದರು. “ನಿಮಗೆ ಇದು ತುಂಬಾ ಇಷ್ಟ ಅಲ್ವಾ ಯಾಕೆ?” ಅಂತ ನಾನು ಕೇಳಿದಾಗ “ಜೀವನದಲ್ಲಿ
ಕಸವನ್ನು ತೆಗೆಯುವುದು ನಿರಂತರವಾಗಿರಬೇಕು. ಮೇಲಿನ ಕಸ (ತಲೆಯನ್ನು ಮುಟ್ಟಿ ತೋರಿಸಿದ್ದರು) ಕೆಳಗಿನ ಕಸ (ನೆಲದ ಕಡೆ ಕೈ ಮಾಡಿ ತೋರಿಸಿದ್ದರು)”.

ರಮಣನ್ ಮಾಸ್ತರರ ನೆರಳಲ್ಲಿ ಬೆಳೆದ ಮಕ್ಕಳು, ಅವರ ಸಹೋದ್ಯೋಗಿಗಳು ಕಸ ತೆಗೆಯುತ್ತಲೇ ಇದ್ದಾರೆ, ಬೆಳೆಯುತ್ತಲೇ ಇದ್ದಾರೆ. ಕೆಲವರು ಕಸ ಹಾಕುವವರ ಸುತ್ತ ಇದ್ದೂ ತಾವು ಸ್ವಚ್ಛವಾಗಿಯೇ ಇದ್ದಾರೆ. ಕಸದೊಂದಿಗೆ ಸೇರಿಲ್ಲ. ಮಹಿಳೆಯರು ಜೀವನಪ್ರೀತಿ ಬೆಳೆಸಿಕೊಂಡಿದ್ದಾರೆ. ರಮಣನ್ ಮಾಸ್ತರರು ಈಗ ಇಲ್ಲ. ಮೊನ್ನೆ ಸೆಪ್ಟೆಂಬರ್ 9 ರಂದು ತೀರಿಕೊಂಡರು. “ನಿಮಗೆ ಸ್ಫೂರ್ತಿ ಯಾರು” ಎಂದಾಗ “ಪ್ರತಿ ಹೆಣ್ಣು ಮಗುವೂ ನನಗೆ ಸ್ಫ್ಪೂರ್ತಿಯೇ. ಅದೆಷ್ಟು ತಾಳ್ಮೆ, ಅದೆಷ್ಟು ಚಿಂತನೆ, ಅದೆಷ್ಟು ವಿವೇಕ. ಎಲ್ಲವನ್ನೂ ನಿಭಾಯಿಸುವ ಶಕ್ತಿ. ಎಲ್ಲರನ್ನೂ ಸೇರಿಸಿಕೊಂಡು ನಡೆಯುವ ಉತ್ಸಾಹ. ಹೆಣ್ಣು ಭಗವಂತನ ಅದ್ಭುತ ಸೃಷ್ಟಿ” ಎನ್ನುತ್ತಿದ್ದರು. ಹೆಣ್ಣುಮಕ್ಕಳ ಬಗ್ಗೆ ಗೌರವವನ್ನು ತೋರಿಸುತ್ತಿದ್ದ ಅವರು, ಅವರಿಗೆ ಗೌರವ ಕೊಡುತ್ತಲೇ ಅವರ ಆಲೋಚನೆಯ ದಿಕ್ಕನ್ನೇ ಬದಲಾಯಿಸಿದರು. ನಮ್ಮಲ್ಲಿ ಏನೆಲ್ಲ ಇರಬೇಕು ಏನೆಲ್ಲ ಕಡಿಮೆ ಇದೆ. ಏನನ್ನೆಲ್ಲ ಗಳಿಸಬೇಕು ಎನ್ನುವುದನ್ನು ನಾವು ಕಲಿತದ್ದು ಅವರಿಂದ.

ಎಷ್ಟೋ ಹೆಣ್ಣು ಮಕ್ಕಳು ತಮ್ಮ ವೈಯಕ್ತಿಕ ಜೀವನದ ಏರು ಪೇರುಗಳಿಂದ ಕುಸಿದು ಮೇಲೇಳಲಾಗದೇ ಹೆಣಗುತ್ತಿರುವುದನ್ನು ನೋಡಿದಾಗ ಇವರಿಗೆಲ್ಲ ಒಬ್ಬ ರಮಣನ್ ಮಾಸ್ತರರು ಸಿಕ್ಕಿದ್ದರೇ… ಎಂದುಕೊಳ್ಳುತ್ತೇನೆ. ರಮಣನ್ ಎಂಬ ದೀಪ ಇಂದು ನಂದಿದೆ. ಆ ದೀಪ ಇನ್ನು ನಮ್ಮ ಬರಿಯ ಕಣ್ಣಿಗೆ ಕಾಣುವುದಿಲ್ಲ. ಅವರು ಹಚ್ಚಿದ ಸಾವಿರಾರು ಹಣತೆಗಳು ಅಲ್ಲಲ್ಲಿ ಇರುವ ಕತ್ತಲೆಯನ್ನು ದೂರಮಾಡಬೇಕಾಗಿದೆ.

(ಇಲ್ಲಿ ಬಳಕೆಯಾಗಿರುವುದು ಸಾಂಕೇತಿಕ ಚಿತ್ರ)

-ಎಸ್. ಸುಶೀಲ ಚಿಂತಾಮಣಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *