ಕಣ್ಣು ಕಾಣದ ನೋಟ/ ಅವನ ಸಾವು ತಂದ ದುಃಖ- ಎಸ್. ಸುಶೀಲ ಚಿಂತಾಮಣಿ

ಮನೆಯ ಕೆಲಸದಾಳು ಸತ್ತರೆ ಅಷ್ಟು ಗೋಳಾಡುವುದೇ ಎಂದು ಎಲ್ಲರೂ ಸಿಡಿಮಿಡಿ ಮಾಡಿದರು. ಆದರೆ ಅವಳ ಬದುಕಿನ ಪ್ರತಿಯೊಂದು ದುರ್ಭರ ಕ್ಷಣದಲ್ಲೂ ಅವನ ಅಂತಃಕರಣ ಅವಳ ನೆರವಿಗೆ ಬರುತ್ತಿತ್ತು. ಮಕ್ಕಳನ್ನು ಸಾಕುವಾಗ ಅವನ ಬೆಂಬಲ ಸಿಗುತ್ತಿತ್ತು. ಸಂಸಾರದ ದುಃಖವನ್ನು ಮರೆಮಾಡುವ ಮನಸ್ಸಿನ ಆ ಕರುಣಾಳು ಇಲ್ಲದ ಮನೆಯೇ ಅವಳಿಗೆ ಬೇಡವೆನ್ನಿಸಿತು.

ಅವಳಿಗೇಕೋ ದುಃಖ ತಡೆಯಲಾಗಲಿಲ್ಲ. ಬಿಕ್ಕಿ ಬಿಕ್ಕಿ ಅತ್ತಳು. ನೆಲದ ಮೇಲೆ ಹೊರಳಾಡಿದಳು. ಗೋಳಾಡಿದಳು. ಎದ್ದೆದ್ದು ಹೋಗಿ ಗೋಡೆಗೆ ತಲೆ ಬಡಿದುಕೊಂಡಳು. ಅವನು ಸತ್ತಿದ್ದನ್ನು ಅವಳು ತಡೆದುಕೊಳ್ಳಲು ಅವಳಿಗೆ ಆಗಲೇ ಇಲ್ಲ. ಮನೆಯವರಿಗೆಲ್ಲ ಅವಳ ವರ್ತನೆ ವಿಚಿತ್ರ ಅನ್ನಿಸಿತು. ಕೆಲವರು ಇದು ಏಕೋ ವಿಪರೀತಕ್ಕೆ ಹೋಗುತ್ತಿದೆ ಎಂದರು. ನಿನ್ನದು “ಅತೀ” ಆಯಿತು ಎಂದು ಅವಳ ಗಂಡನೇ ಹೇಳಿದ. ಅವಳೇನೂ ಹೇಳಲಿಲ್ಲ. ಆ ಕ್ಷಣಕ್ಕೆ ಅವಳು ಅಳುವುದನ್ನು ನಿಲ್ಲಿಸಿದಳು. ಅವನನ್ನು ನೋಡಿ ಗಹಗಹಿಸಿ ನಕ್ಕಳು. “ಏನಾಯಿತು ನಗಲು? ನೀನು ಹುಚ್ಚಿ ಆಗಿದ್ದೀಯ” ಎಂದು ಗುರಾಯಿಸಿದ. ಆ ಕ್ಷಣಕ್ಕೆ ಅವಳು ಅವನನ್ನು ಒಂದು ಕ್ಷಣ ಸುಡುವಂತೆ ದಿಟ್ಟಿಸಿ ನೋಡಿ ದಡದಡನೇ ಉಟ್ಟ ಬಟ್ಟೆಯಲ್ಲೇ ಹೊರಗೆ ನಡೆದಳು. ಯಾರೆಲ್ಲಾ ತಡೆದರೂ ಕೇಳಲಿಲ್ಲ. ಯಾರೆಲ್ಲಾ ಹೇಳಿದರೂ ಮನೆಗೆ ವಾಪಸ್ಸಾಗಲೇ ಇಲ್ಲ. ಅವಳು ಎಲ್ಲೋ ಆಶ್ರಮದಲ್ಲಿ ಇದ್ದಾಳೆ ಎನ್ನುವುದು ಸುದ್ದಿ.

ಶ್ರೀಮಂತ ಗಂಡ, ಬೆಳೆದ ಮದುವೆಯಾದ ಗಂಡು ಮಕ್ಕಳು , ದೊಡ್ಡ ಮನೆಯ ಸೊಸೆ ಆದ ಅವಳು ಹಾಗೆ ಮಾಡಿದ್ದೇಕೆ ಎನ್ನುವುದು ಎಲ್ಲರ ಕಾಣಿಗೂ ಕಾಣುವಂತದ್ದಲ್ಲ. ಅವಳು ಮನೆಬಿಟ್ಟು ಹೊರಗೋಡಿದ್ದು ಮಾತ್ರ ಎಲ್ಲರ ಕಣ್ಣಿಗೂ ಬಿದ್ದಿತ್ತು. ಇಪ್ಪತ್ತರ ಹರೆಯದಲ್ಲಿ ಆ ಶ್ರೀಮಂತರ ಮನೆಯ ಸೊಸೆಯಾಗಿ ಬಂದಾಗಲಿಂದ ಅವರ ಮನೆಯ ಕೆಲಸದಾಳನ್ನು ಅವಳು ನೋಡಿದ್ದಳು. ಅವನು ಆರು ವರ್ಷ ವಯಸ್ಸಿನವನಿದ್ದಾಗಲಿನಿಂದ ಅವರ ಮನೆಗೆ , ಅವರ ಅಂಗಡಿಗೆ ದುಡಿಯುತ್ತಿದ್ದಾನೆ ಎನ್ನುವುದು ಊರವರಿಗೆಲ್ಲಾ ತಿಳಿದ ವಿಷಯ. ಅವಳ ಮಾವನವರಿಗೆ ಇಪ್ಪತ್ತೈದು ವರ್ಷ ವಯಸ್ಸಿನವನಿದ್ದಾಗ ಅವರ ಮನೆಗೆ ಅಂಗಡಿಗೆ ಬಂದವನು ಅವನು. ಅವಳ ಮತ್ತು ಅವಳ ಮಕ್ಕಳ ಮದುವೆಗೆ ಓಡಾಡಿದ್ದ. ಅವಳಿಗೆ, ಮಕ್ಕಳಿಗೆ ಖಾಯಿಲೆ ಕಸಾಲೆ ಆದಾಗ ಅವನೇ ಇವರ ಜೊತೆ ಆಸ್ಪತ್ರೆಗೆ ಬರುತ್ತಿದ್ದ. ಸಾಮಾನು ಕೊಂಡು ಹೋಗಲು ಇದ್ದ ತನ್ನ ಮುರುಕಲು ಸೈಕಲ್ಲಿನ ಹಿಂದಿನ ಕಬ್ಬಿಣದ ಬುಟ್ಟಿಯಲ್ಲಿ ಅವಳ ಮಕ್ಕಳನ್ನು ಕೂರಿಸಿಕೊಂಡು ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಿದ್ದ. ಒಮ್ಮೆ ಅವಳ ಮಗಳು ‘ಚುಚ್ಚುತ್ತದೆ ನಾನು ಕೂತು ಕೊಳ್ಳುವುದಿಲ್ಲ’ ಎಂದು ರಂಪಾಟ ಮಾಡಿದ್ದಾಗ, ತನ್ನ ಷರಟು ಮತ್ತು ಬನಿಯನ್ ಬಿಚ್ಚಿ ಆ ಕಬ್ಬಿಣದ ಬುಟ್ಟಿಯಲ್ಲಿ ಮೆತ್ತಗೆ ಹಾಸಿ ಅದರ ಮೇಲೆ ಕೂರಿಸಿ ಕೊಂಡು ಕರೆದುಕೊಂಡು ಬಂದಿದ್ದ.

ಅವನಿಗೆ ಸುಡುವ ಜ್ವರ ಇದ್ದಾಗಲೂ ಮಕ್ಕಳಿಗೆ ಅವಳು ಕಟ್ಟಿ ಕೊಡುತ್ತಿದ್ದ ತಿಂಡಿ ಕೊಟ್ಟು ಬರುವುದನ್ನು ತಪ್ಪಿಸುತ್ತಿರಲಿಲ್ಲ. ಅವಳ ಗಂಡ ಅವಳ ಬಗ್ಗೆ ತೋರುತ್ತಿದ್ದ ಅಸಡ್ಡೆ , ಅವಳನ್ನು ಒಪ್ಪಿಕೊಳ್ಳದ ಒಲ್ಲದ ಅತ್ತೆಯ ಚೂಪು ನೋಟ , ಆಗೆಲ್ಲ ಅವಳ ಕಣ್ಣಿಂದ ಜಿನುಗುವ ಕಣ್ಣೀರು ಎಲ್ಲ ಅವನ ಕಣ್ಣಿಗೂ ಬೀಳುತ್ತಿತ್ತು. ಆದರೆ ಅವನೂ ಅವಳಷ್ಟೇ ನಿಸ್ಸಹಾಯಕ. ಯಾರೂ ನೋಡದಿದ್ದಾಗ ಆಕಾಶದ ಕಡೆ ಕೈ ತೋರಿಸಿ “ದೇವರಿದ್ದಾನೆ” ಎನ್ನುವಂತೆ ಕೈಮುಗಿಯುತ್ತಿದ್ದ ಅವಳ ನಿಟ್ಟುಸಿರು ಕೇಳಿಸಿಕೊಂಡವರು ಯಾರಾದರೂ ಇದ್ದರೆ ಅವನು ಮಾತ್ರ.

ಅವಳೆಂದಿಗೂ ಅವನ ಹತ್ತಿರ ಮಾತನಾಡುತ್ತಿರಲಿಲ್ಲ. ಒಂದೋ ಎರಡೋ ಮಾತು ಅಪರೂಪಕ್ಕೆ ಅಷ್ಟೇ. ಮಗ ಬಿದ್ದು ದೊಡ್ಡ ಘಾಯ ಮಾಡಿಕೊಂಡಿದ್ದಾನೆ ಎಂದು ಗಂಡನಿಗೆ ತಿಳಿಸಿದಾಗ “ಅದಕ್ಕೆ ನಾನೇನು ಮಾಡಲಿ?” ಎಂದಿದ್ದ. ಅದೇ ಆ ಕೆಲಸದಾಳು ಮಗನ ರಕ್ತ ಕಾರುತ್ತಿದ್ದ ಕಾಲಿಗೆ ತನ್ನ ಷರಟನ್ನು ಸುತ್ತಿ ಮನೆಗೆ ಕರೆದು ತಂದವನು ತಾನೇ ಆಸ್ಪತ್ರೆಗೂ ಆಟೋದಲ್ಲಿ ಕೂರಿಸಿಕೊಂಡು ಅವಳ ಜೊತೆ ಹೋಗಿ ಮತ್ತೆ ಅವರನ್ನು ಮನೆಗೆ ತಲುಪಿಸಿ ಆ ನಡುರಾತ್ರಿಯಲ್ಲಿ ಮನೆಗೆ ಕಾಲೆಳೆಯುತ್ತಾ ಹೋಗಿದ್ದ.

ಅವನು ಏನೆಲ್ಲ ಮಾಡಿದ್ದನೋ ಅವಳಿಗೆ ನೆನಪಿಗೆ ಬಂದು ಅವಳು ಅತ್ತು ಗೋಳಾಡಿದ್ದು ನಿಜ. ತನಗೆ ತನ್ನ ಮಕ್ಕಳಿಗೆ ಮಾಡಬೇಕೆನ್ನುವ ಯಾವ ಬದ್ಧತೆಯೂ ಇಲ್ಲದ ಅವನು ಅವಳಿಗೆ ಅವಳ ಮಕ್ಕಳಿಗೆ ಎಲ್ಲವನ್ನೂ ಮಾಡಿದ್ದೇಕೆ ಎನ್ನುವುದು ಅವಳಿಗೆ ತಿಳಿಯಲಿಲ್ಲ. ಆದರೆ ಅವನು ಮಾಡಬೇಕಾದದ್ದನ್ನು ಮಾಡಬೇಕಾದ ಸಮಯದಲ್ಲಿ ತನ್ನಿಂದಾದ ರೀತಿಯಲ್ಲಿ ಮಾಡಿದ್ದು , ಅವನು ಅವಳ ಜೊತೆ ನಡೆದುಕೊಂಡದ್ದು ಎಲ್ಲವೂ ಅವಳಿಗೆ ನೆನಪಿಗೆ ಅಲೆ ಅಲೆಯಾಗಿ ಬಂದದ್ದು ಅವಳನ್ನು ಕಂಗೆಡಿಸಿತ್ತು. ಅವಳಿಗೆ ದು:ಖ ತಡೆಯಲಾಗಲಿಲ್ಲ. ಅವನಿಗಾಗಿ ಅವಳು ಹಾಕಿದ್ದಾದರೆ ಒಂದಷ್ಟು ಕಣ್ಣೀರು. ಅದಕ್ಕೂ ಅವಳ ಗಂಡ ಮತ್ತು ಅವಳ ಗಂಡನ ಮನೆಯವರು ಅಪಹಾಸ್ಯ ಮಾಡಿದಾಗ , ಅವಳಿಗೆ ಎಲ್ಲವೂ ನೆನಪಾಗತೊಡಗಿತು.

ತನ್ನ ಗಂಡ ಅವಳ ಮನೆಯವರು ತನ್ನೊಂದಿಗೆ ಹೇಗೆಲ್ಲ ನಡೆದುಕೊಂಡರು? ತಾನೂ ಒಬ್ಬಳು ಮನುಷ್ಯಳು ತನಗೂ ಒಂದು ಬೆಲೆಯಿದೆ ಎನ್ನುವುದನ್ನು ಹೇಗೆಲ್ಲ ಮರೆತಿದ್ದರು ? ಎನ್ನುವುದೆಲ್ಲ ಅವಳಿಗೆ ನೆನಪಾಗತೊಡಗಿತು. “ದುಃಖಿಗೆ ದುಃಖಿ” ಎಂದು ಎಲ್ಲೋ ಓದಿದ್ದು ನೆನಪಾಯಿತು. ಅನುಭವಿಸಿದವರು, ಅನುಭವಿಸುತ್ತಿರುವವರು ಸ್ಪಂದಿಸುವಂತೆ ಬೇರೆಯವರು ಸ್ಪಂದಿಸಲು ಸಾಧ್ಯವೇ? ಎನ್ನುವುದು ಅವಳಿಗೆ ಅರ್ಥವಾಯಿತು. ಆ ಕೆಲಸದಾಳು ತನ್ನನ್ನು ಅರ್ಥ ಮಾಡಿಕೊಂಡದ್ದು ಯಾಕೆ ಎನ್ನುವುದು ಅವಳಿಗೆ ತಿಳಿಯುತ್ತಾ ಬಂತು. ಇನ್ನು ಎಷ್ಟು ವರ್ಷಗಳು ಇವರ ಜೊತೆಗಿದ್ದರೂ ನಾನು ನನ್ನ ಗಂಡನ ಮನೆಯವರಿಗೆ ಒಂದು ವಸ್ತುವಾಗಿಯೋ ಅಥವಾ ಅವರು ನಿರ್ಧರಿಸಿರುವಂತೆ ಅವರೆಲ್ಲ ಅರ್ಥಮಾಡಿಕೊಳ್ಳುವ ಅವಶ್ಯಕತೆಯೇ ಇಲ್ಲದ ಜೀತದಾಳಾಗಿಯೋ ಇರಬಹುದು ಅಷ್ಟೇ ಎನ್ನುವುದು ಅವಳಿಗೆ ತಿಳಿಯುತ್ತಾ ಬಂತು.

ಆ ಕೆಲಸದಾಳಿನ ಸಾವು , ಅವಳ ಬಿಕ್ಕಳಿಕೆ, ಅವಳ ಗಂಡನ ಆ ದುರು ದುರು ನೋಟ ಅವಳಿಗೆ ಯಾವ ಧೈರ್ಯವನ್ನು ಕೊಟ್ಟಿತು ಎನ್ನುವುದು ಬರಿಯ ಕಣ್ಣಿಗೆ ಕಾಣುವಂತದ್ದಲ್ಲ. ಬರಿಕಣ್ಣಿನಿಂದ ನೋಡಲಾಗದ ನೋವುಗಳು ಜೀವನದಲ್ಲಿ ಅವೆಷ್ಟೋ?


ಎಸ್. ಸುಶೀಲ ಚಿಂತಾಮಣಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *