FEATUREDಅಂಕಣ

ಕಣ್ಣು ಕಾಣದ ನೋಟ/ ಅವನ ಮದುವೆಗೆ ಅವಳ ಉಡುಗೊರೆ- ಸುಶೀಲಾ ಚಿಂತಾಮಣಿ

ಹಿಂಸಿಸಲಿಕ್ಕಾಗಿಯೇ ಮೂದಲಿಸಲಿಕ್ಕಾಗಿಯೇ ಒಬ್ಬರು ಬೇಕು ಎಂದು ಮದುವೆ ಆಗುವವರೂ ಇರುತ್ತಾರೆಯೇ? ನನ್ನ ಹಣದ ಮೇಲೆ ನಿನಗೆ ಅಧಿಕಾರವಿಲ್ಲ. ನಿನ್ನ ಹಣವಾದರೆ ನಾನೂ ಅದರ ಅಧಿಕಾರಿ ಎನ್ನುವ ಧೋರಣೆ ನಿಲ್ಲುವುದು ಯಾವಾಗ? ಇವೆಲ್ಲಾ ಯಾಕೆ ಹೀಗೆ ಎಂದು ಅವಳಿಗೆ ಅರ್ಥವೇ ಆಗಲಿಲ್ಲ.

ಎಂದೂ ರಜೆ ಹಾಕಿರದ ಅವಳು ವಾರ ರಜೆ ಹಾಕಿದಾಗ ಎಲ್ಲರಿಗೂ ಆಶ್ಚರ್ಯ. ಅವಳ ಹೆಸರಿಗೆ ಆಫೀಸು ವಿಳಾಸಕ್ಕೆ ಒಂದೇ ಮದುವೆಯ ನಾಲಕ್ಕು ಲಗ್ನ ಪತ್ರಿಕೆಗಳು ಬಂದಿದ್ದವು. ಅವಳ ಜೊತೆಗೆ ಒಂದೇ ಮನೆಯಲ್ಲಿದ್ದ ಅವಳ ಸ್ನೇಹಿತೆಯ ಪ್ರಕಾರ ಮನೆಗೂ ನಾಲಕ್ಕು ಅವೇ ಲಗ್ನ ಪತ್ರಿಕೆಗಳು ಕೊರಿಯರ್ ಮೂಲಕ, ಪೋಸ್ಟ್ ಮೂಲಕ, ರಿಜಿಸ್ಟರ್ ಪೋಸ್ಟ್ ಮೂಲಕ ಎಲ್ಲಾ ಬಂದಿದ್ದವಂತೆ. ಅವಳದ್ದು ಒಂದೇ ಓಡಾಟ. ಮದುವೆಗೆ ಅವನಿಗೆ ಅದನ್ನು ಓದಿಸಬೇಕು ಇದನ್ನು ಓದಿಸ ಬೇಕು. ಫ್ರಿಡ್ಜು, ವಾಷಿಂಗ್ ಮೆಷಿನ್ನು , ಮಂಚ, ಹಾಸಿಗೆ, ಅಡಿಗೆ ಮನೆ ಸಾಮಾನು, ಕೂಲರ್ ಒಂದು ಸಂಸಾರಕ್ಕೆ ಏನೆಲ್ಲ ಬೇಕೋ ಎಲ್ಲಾ ಹೊಂದಿಸಿದಳು.

ಮದುವೆಗೆ ಶಿಸ್ತಾಗಿ ರೆಡಿಯಾಗಿ ಹೋಗಿ ಅವನ ಮತ್ತು ಅವನ ಹೆಂಡತಿಯ ಕೈಕುಲುಕಿ ಎಲ್ಲಾ ವಸ್ತುಗಳನ್ನು ಬಿಲ್ ಜೊತೆ ಅವನಿಗೆ ಓದಿಸಿದಳು. ಜೊತೆಗೆ ಐದು ಲಕ್ಷ ರೂಪಾಯಿಯ ಚೆಕ್ ಸಹ, ಇನ್ನೇನಾದರೂ ಸಂಸಾರಕ್ಕೆ ಬೇಕಿದ್ದರೆ ತೆಗೆದುಕೊಳ್ಳಿ ಎನ್ನುವ ಸಂದೇಶದ ಜೊತೆ ಅವನ ಕೈ ಸೇರಿತು. ಚೆನ್ನಾಗಿ ನಗು ನಗುತ್ತಾ ಎಲ್ಲರ ಜೊತೆ ಮಾತಾಡಿ ಮದುವೆಯಲ್ಲಿ ಪಗದಸ್ತಾಗಿ ತಿಂದು ಕೆಲಸಕ್ಕೆ ಮತ್ತೆ ಅವಳು ಹಾಜರು. ಕೆಲಸದಲ್ಲಿ ಅದೇ ನಿಷ್ಟೆ, ಅದೇ ಆಸಕ್ತಿ. ಎಂದಿನಂತೆ ನಗುತ್ತಾ ನಗಿಸುತ್ತಾ ಎಲ್ಲರೊಂದಿಗೆ ಬೆರೆಯುತ್ತಾ ಸೆಳೆಯುತ್ತಾ ಹೋಗುವ ಅವಳ ಪರಿ ಅದ್ಭುತ.

ಅವನು ಅವಳಿಗೆ ಯಾರು? ಎನ್ನುವ ಪ್ರಶ್ನೆ ಯಾರಿಗಾದರೂ ಏಳುವುದು ಸಹಜ. ಅವನು ಅವಳ ವಿಚ್ಛೇದಿತ ಪತಿ. ಅವರ ಮದುವೆ ವಿಚ್ಛೇದನ ಆಗಬೇಕೆನ್ನುವುದು ಅವನದೇ ನಿರ್ಧಾರ. ಅದಕ್ಕವಳು ಒಪ್ಪಲೇ ಬೇಕಿತ್ತು. ಒಪ್ಪಿದ್ದಳು. ವಿಚ್ಛೇದನ ಆದ ಮೂರು ವರ್ಷದ ನಂತರ ಈಗ ಅವನು ಬೇರೆಯವಳನ್ನು ಮದುವೆ ಆದಾಗ ಅವಳಿಗೆ ಲಗ್ನ ಪತ್ರಿಕೆ ಕಳಿಸಿದ್ದ. ‘ನಾನು ಜೀವನದಲ್ಲಿ ಮುಂದುವರೆದಿದ್ದೇನೆ , ನೀನು ಅಲ್ಲೇ ಇದ್ದೀಯ’ ಎನ್ನುವುದನ್ನು ಅವಳಿಗೆ ಚುಚ್ಚಿ ತಿಳಿಸಲಿಕ್ಕಾಗಿಯೇ ಅವಳಿಗೆ ಲಗ್ನ ಪತ್ರಿಕೆ ಕಳಿಸಿದ್ದು ಎನ್ನುವದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಅವಳು ಅವನ ಮದುವೆಗೆ ಹೋಗಿ ಅಷ್ಟೆಲ್ಲಾ ಓದಿಸಿದ್ದೇಕೆ ಎನ್ನುವುದು ಮತ್ತೊಂದು ಪ್ರಶ್ನೆ.

ದೊಡ್ಡ ಕೆಲಸದಲ್ಲಿದ್ದ ಅವನನ್ನು ಕೆಳಮಧ್ಯಮ ವರ್ಗದ ಅವಳು ಒಪ್ಪಿ ಮದುವೆಯಾಗಿದ್ದು ಸುಖೀ ಜೀವನದ ಭರವೆಸೆಯಿಂದ ಮಾತ್ರ. ಗುಂಡು ಗುಂಡಾಗಿ ಮುದ್ದಾಗಿದ್ದ ಅವಳು ಓದಿದ್ದಳು. ಒಳ್ಳೆಯ ಕೆಲಸದಲ್ಲಿದ್ದಳು. ಬಡ ಮನೆಯ ಹೆಣ್ಣಾದರೂ ಸರಿ ಕೈತುಂಬಾ ಸಂಪಾದನೆ ಮಾಡಿದರೆ ಸಾಕು ಎಂದು ಅವನು ಅವಳನ್ನು ಒಪ್ಪಿದ್ದನಂತೆ. ಮದುವೆಯಾಗಿ ಗಂಡನ ಮನೆ ಸೇರಿದ ಅವಳಿಗೆ ಅವನ ಮನೆ ನೋಡಿ ಆಶ್ಚರ್ಯ. ಸಣ್ಣ ವಠಾರದ ಓಣಿಯಲ್ಲಿನ ಮೂರನೇ ಮಾಡಿಯ ಮನೆ. ಕಿರಿದಾದ ಎತ್ತರದ ಮೆಟ್ಟಿಲುಗಳ ಸಾಲು.ಮನೆಯಲ್ಲಿ ಮಂಚವಿಲ್ಲ ಹಾಸಿಗೆಯಿಲ್ಲ. ಅಡಿಗೆ ಮನೆಯಲ್ಲಿ ಪಾತ್ರೆಗಳಿಲ್ಲ. “ ನಿನ್ನ ಯೋಗ್ಯತೆಗೆ ಚಾಪೆ ಸಾಲದೇ. ಕವರಿನಲ್ಲಿ ವಸ್ತುಗಳನ್ನಿಟ್ಟುಕೋ. ಒಂದು ಹೊತ್ತು ಮಾಡಿದ್ದನ್ನೇ ನಾಲಕ್ಕು ಹೊತ್ತು ತಿನ್ನೋಣ..” ಹೀಗೇ ಅವನ ಮಾತುಗಳು. ಇವೆಲ್ಲಾ ಯಾಕೆ ಹೀಗೆ ಎಂದು ಅವಳಿಗೆ ಅರ್ಥವೇ ಆಗಲಿಲ್ಲ.

ಮದುವೆಯಾದ ತಿಂಗಳಿಗೇ ಅವನು ವಿದೇಶಕ್ಕೆ ಹೋಗಬೇಕಾಗಿ ಬಂತು. ಇವಳನ್ನೂ ಬಲವಂತ ಮಾಡಿ ಕೆಲಸ ಬಿಡಿಸಿ ಕರೆದುಕೊಂಡು ಹೋದ. ಅಲ್ಲಿಯೂ ಅಷ್ಟೇ. ಅವಶ್ಯಕತೆಗಳಿಗೂ ಕೊಸರಾಟ. ಜಗಳ -ಹಿಂಸೆ. ಅವಳು ಹಣ್ಣು ತಿಂದರೂ ಕಷ್ಟ … ಬ್ರೆಡ್ಡು ತಿಂದರೂ ಅವನಿಗೆ ಸಂಕಟ. ನನ್ನ ದುಡ್ಡಿನಲ್ಲಿ ತಿಂದು ತೇಗುತ್ತಿದ್ದೀಯ ಎನ್ನುವ ಆಪಾದನೆ . ಅವಳ ಪುಷ್ಟವಾದ ಮೈ ನೋಡಿ ಹೊಟ್ಟೆಕಿಚ್ಚು. ವಿದೇಶದಲ್ಲಿ ಕೆಲಸ ಸಿಕ್ಕದೆ ಅವಳು ನಲುಗಿದ್ದೆಷ್ಟು ಎನ್ನುವುದು ಅವಳಿಗೇ ಗೊತ್ತು. ಏನಾದರೂ ಸಣ್ಣ ಪುಟ್ಟ ಬೇಡಿಕೆಗಳನ್ನಿಟ್ಟರೆ, ನಿನಗೆ ಯೋಗ್ಯತೆ ಇಲ್ಲ. ನನ್ನ ದುಡ್ಡಿನಲ್ಲಿ ಮಜಾ ಮಾಡಲು ಬಂದಿದ್ದೀಯಾ. ಇಂಡಿಯಾದಲ್ಲಿ ಇದ್ದಿದ್ದರೆ ಭಿಕ್ಷೆ ಸಹಾ ಸಿಗುತ್ತಿರಲಿಲ್ಲ ನಿನಗೆ ಎನ್ನುವ ಮಾತು. ಎರಡು ದೇಶ ಸುತ್ತಿದರೂ ಅವನು ಬದಲಾಗಲಿಲ್ಲ. ಮತ್ತೆ ಭಾರತಕ್ಕೆ ಬಂದರೂ ಅದೇ ಒಂದೇ ಕೋಣೆಯಲ್ಲೇ ಎಲ್ಲ ಇರುವ ಮನೆ… ಅದೇ ಸಂದಿ ಮನೆ. ಅದೇ ಕೊಸರಾಟದ ಜೀವನ. ನಿಮ್ಮ ಅಪ್ಪನ ಹತ್ತಿರ ತಂದು ಹಾಕು . ಆಗ ನಾನೂ ಮಜಾ ಮಾಡುತ್ತೇನೆ ಎಂದೂ ಹೇಳಿದ್ದ.

ಅವಳಿಗೆ ಅರ್ಥವಾಗದ್ದು ಒಂದೇ. ಇಲ್ಲದವರ ಜೀವನದ ಪರಿ ಬೇರೆ. ಇರುವವರು ಇಲ್ಲದವರಂತೆ ಜಿಪುಣತನ ಮಾಡುವುದು ಯಾಕೆ? ಸರಳ ಜೀವನದ ಅರ್ಥ ಅವಶ್ಯಕತೆಗಳನ್ನೂ ಕಡೆಗಣಿಸಿ ಬದುಕುವುದೇ? ಹಿಂಸಿಸಲಿಕ್ಕಾಗಿಯೇ ಮೂದಲಿಸಲಿಕ್ಕಾಗಿಯೇ ಒಬ್ಬರು ಬೇಕು ಎಂದು ಮದುವೆ ಆಗುವವರೂ ಇರುತ್ತಾರೆಯೇ? ನನ್ನ ಹಣದ ಮೇಲೆ ನಿನಗೆ ಅಧಿಕಾರವಿಲ್ಲ. ನಿನ್ನ ಹಣವಾದರೆ ನಾನೂ ಅದರ ಅಧಿಕಾರಿ ಎನ್ನುವ ಧೋರಣೆ ನಿಲ್ಲುವುದು ಯಾವಾಗ? ಉತ್ತರ ಸಿಗದೆ , ಅವನ ಹಿಂಸೆ ತಾಳದೆ ವಿಚ್ಛೇದನಕ್ಕೆ ಅವಳು ಒಪ್ಪಿದ್ದಳು.

ಮದುವೆಯಿಂದ ಹೊರಬಂದ ಅವಳು ತಿಂದು ಚೆಲ್ಲುವಷ್ಟು ಸಂಪಾದಿಸಿದಳು. ಜೀವನದ ಸೌಂದರ್ಯವನ್ನು ಚೌಕಟ್ಟಿನಲ್ಲೇ ನಿಂತು ಅನುಭವಿಸಿದಳು. ಅವಳಿಗೆ ತೃಪ್ತಿಯಾಯಿತು. ಸಕಾರಣಕ್ಕೆ ದಾನ ಧರ್ಮ ಮಾಡುವುದರಲ್ಲಿ ಅವಳದು ಎತ್ತಿದ ಕೈ ಆಯಿತು. ಅವನಿಗೆ ಅವಳು ಅವನ ಎರಡನೇ ಮದುವೆಯಲ್ಲಿ ಆ ಎಲ್ಲ ವಸ್ತುಗಳನ್ನು ಕೊಟ್ಟಿದ್ದು ಎಲ್ಲರ ಕಣ್ಣಿಗೂ ಕಂಡಿತಾದರೂ ಅದರ ಹಿಂದೆ ಅವನು ಅವಳಿಗೆ ಕೊಟ್ಟಿದ್ದ ನೋವನ್ನು ನೆನಪಿಸಿಕೋ ಎನ್ನುವುದನ್ನು ಅವಳು ಅವನಿಗೆ ತಿಳಿಸಿದ್ದು ಯಾರಿಗೂ ಕಾಣಲಿಲ್ಲ. ನೀನು ಕೊಟ್ಟ ನೋವಿನಿಂದಲೂ ನಾನು ಬೆಳೆಯಬಲ್ಲೆ ಎನ್ನುವ, ಅವಳಂತಹ ಎದೆಗುಂದದ ಹಲವಾರು ಮಹಿಳೆಯರು ನಮ್ಮ ನಿಮ್ಮ ಮಧ್ಯೆ ಇದ್ದಾರೆ. ಅವರು ಎಲ್ಲರ ಕಣ್ಣಿಗೂ ಬೀಳುವುದಿಲ್ಲ.

ಎಸ್. ಸುಶೀಲ ಚಿಂತಾಮಣಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *