ಕಣ್ಣು ಕಾಣದ ನೋಟ/ಅಪ್ಪನ ಅವ್ಯಕ್ತ ಪ್ರೀತಿ – ಸುಶೀಲಾ ಚಿಂತಾಮಣಿ

ಮೂರು ಹೆಣ್ಣುಮಕ್ಕಳ ಅಪ್ಪ 83 ನೇ ವಯಸ್ಸಿನಲ್ಲಿ ಸತ್ತಾಗ ಅಳು ಬಂದರೂ ..ನಾನು ಅಪ್ಪನ ಪ್ರೀತಿಯನ್ನು ಕಳೆದುಕೊಂಡೆ ಎಂದು ನನಗೇನು ಅನಿಸಲೇ ಇಲ್ಲ.

ಅಪ್ಪ ಒಳ್ಳೆಯ ಲೆಕ್ಚರರ್ ,  ಒಳ್ಳೆಯ ಟ್ರೈನರ್, ಡ್ರಾಯಿಂಗ್‍ ಮಾಸ್ಟರ್, ಶಿಸ್ತಿನ ಸಿಪಾಯಿ, ಯಾರಿಗೂ ಯಾವುದಕ್ಕೂ ಹೆದರಿದವರಲ್ಲ. ಅವರನ್ನು ಗೌರವಿಸದವರು ನಮ್ಮೂರಿನಲ್ಲಿ ಬಹಳ ಕಡಿಮೆ ಜನ. ಅವರ ಈ ಮೇಲಿನ ಎಲ್ಲಾ ಗುಣಗಳೊಂದಿಗೆ, ಅವರ ವಿಪರೀತ ಬುದ್ಧಿವಂತಿಗೆ, ವಾಕ್ಚಾತುರ್ಯ, ಪ್ರಾಮಾಣಿಕತೆ, ಬಿಚ್ಚು ಮನಸ್ಸು, ಬಿಚ್ಚುಮಾತು, ಎಲ್ಲವನ್ನೂ ನಾನೂ ಮೆಚ್ಚಿದ್ದು ನಿಜ.

ಆದರೆ, ನನಗೆ ಅವರು ’ಮಗಳು’ ಎಂದು ನನಗೆ ತಂದೆ ಕೊಡಬೇಕಾದ ಯಾವ ಪ್ರೀತಿಯನ್ನೂ ಕೊಡಲಿಲ್ಲ ಎಂಬುದು ಯಾಕೋ ಏನೋ ಆಳವಾಗಿ ಊರಿತ್ತು.   ಮಕ್ಕಳ ಬಗ್ಗೆ ತಮ್ಮ ಪ್ರೀತಿಯನ್ನು  ಹೊರಹಾಕುವ ಅವರ ವಿಭಿನ್ನ ರೀತಿ ನನಗೆ ಅರ್ಥವಾಗಲು ಅರ್ಧ ಆಯುಷ್ಯವೇ ಬೇಕಾಯಿತು. 7ನೇ  ಕ್ಲಾಸಿಗೇ ನಾನು ಟ್ಯೂಷನ್ ಮಾಡಿ ಸಂಪಾದಿಸಲು ಹೇಳಿದರು. 8ನೇ ಕ್ಲಾಸಿನಿಂದ ಮುಂದೆ ಅವರು ನನಗೆ ಎಂದಿಗೂ ಒಂದು ಜೊತೆ ಬಟ್ಟೆ ಕೊಡಿಸಿದವರೂ ಅಲ್ಲ. ಕೈಯಲ್ಲಿ ಹಿಡಿಯಲೂ ಕಷ್ಟವಾಗುವವರೆಗೆ ಪೆನ್ಸಿಲ್ ಉಪಯೋಗಿಸುತ್ತಿದ್ದ ನೆನಪು  ನನಗಿನ್ನೂ ಇದೆ. ಅವರ ಸ್ಕೇಲ್‍ನ್ನು ತೆಗೆದು ಉಪಯೋಗಿಸಿ, ಮತ್ತೆ ಅದೇ ಜಾಗದಲ್ಲಿ ಇಡದೇ ಹೋದದಕ್ಕಾಗಿ 2ನೇ ಡಿಗ್ರಿ ಓದುತ್ತಿದ್ದಾಗ, ನನ್ನ ಸ್ನೇಹಿತರ ಮುಂದೆ ಅವರು ಹುಡುಕಿ ತಂದ ಅದೇ ಸ್ಕೇಲಿನಿಂದ ಅವರು ಬಾರಿಸಿದ್ದಾಗ ನನಗಾದ ನೋವಿನ ನೆನಪಿದೆ. ನನಗೆ ಅಪ್ಪನ ಬಗ್ಗೆ ಮೆಚ್ಚಿಗೆ ಇತ್ತು.  ಪ್ರೀತಿ ಇರಲಿಲ್ಲ, ಪ್ರೀತಿ ಬರಲು  ಸಾಧ್ಯವೇ ಇಲ್ಲ ಎಂಬ ಗಟ್ಟಿ ತೀರ್ಮಾನಕ್ಕೆ  ನಾನು ಬಂದು ಅದೆಷ್ಟೋ ವರ್ಷಗಳಾಗಿತ್ತು.

ಹೀಗೊಮ್ಮೆ  ನಾನು ಯಾವುದೋ ಒಂದು ಟ್ರೈನಿಂಗ್ ಮಾಡಲು ಬೇರೆ ಊರಿಗೆ ಹೋಗಬೇಕಿತ್ತು. ನನ್ನ ಜೊತೆಗೆ ಹೊಸದಾಗಿ  ಟ್ರೈನಿಂಗ್ ಮಾಡಲು ಹೊರಟಿದ್ದ ನನಗಿಂತ ಹಿರಿಯರಾದ ಮೀನಕ್ಕ ಬಂದಿದ್ದರು. ಟ್ರೈನಿಂಗ್ ಹೇಗೆ ಮಾಡುವುದೆಂದು ಅವರಿಗೆ ಹಂತ ಹಂತವಾಗಿ ಹೇಳುತ್ತಾ ಹೋದಂತೆಲ್ಲಾ, ನನ್ನ ಇತರ ಸ್ನೇಹಿತರನ್ನು ನಾನು ತಯಾರು ಮಾಡಿದ್ದ ಬಗ್ಗೆ ತಿಳಿದ ಅವರು ಇದೆಲ್ಲಾ ನಿನಗೆಲ್ಲಿಂದ ಬಂತು ಎಂದರು? “ನಾನು ತುಂಬಾ ಓದಿದ್ದೇನೆ…ತುಂಬಾ ಕೃಷಿ ಮಾಡಿದ್ದೇನೆ..ಆಳವಾಗಿ ಸಾಧನೆ ಮಾಡಿದ್ದೇನೆ”…  ಹೇಳುತ್ತಾ ಹೋದೆ. ‘ಉಹೂಂ’! ಅವೆಲ್ಲಾ ನಾನೂ ಮಾಡಿದ್ದೇನೆ. ಬೇರೆಯವರೂ ಮಾಡಿದ್ದಾರೆ. ಆದರೆ ನೀನು ಪಾಠ ಮಾಡುವಂತೆ ನೀನು ಟ್ರೈನಿಂಗ್ ಕೊಟ್ಟಂತೆ ಯಾರೂ ಕೊಡಲಿಕ್ಕೆ ಆಗುತ್ತಿಲ್ಲ. ನಿನ್ನಲ್ಲಿ ಬೇರೆ ಏನೋ ಇದೆ. ಅದನ್ನು ನಿನಗೆ ಯಾರು ಕೊಟ್ಟಿದ್ದಾರೆ? ಮೀನಕ್ಕ ನನಗೆ ದೊಡ್ಡ ಆಘಾತವನ್ನೇ ಮಾಡಿದ್ದರು. ತಟ್ಟನೆ ಹಿಂತಿರುಗಿ ನೋಡಿದೆ. ಹೌದಲ್ಲ..ನನಗೆ ಇದನ್ನು ಯಾರು ಕೊಟ್ಟರು? ನನ್ನ ಅಪ್ಪನಲ್ಲವೇ? ಒಂದು ಮೂಗುಬೊಟ್ಟನ್ನೂ ನನ್ನ ಅಪ್ಪ ನನಗೆ ಕೊಡಿಸಲಿಲ್ಲ ಎಂದು 50 ವರ್ಷಗಳ ಕಾಲ ಹೇಳುತ್ತಾ ಬಂದ ನನಗೆ ಅಪ್ಪ ನನಗೆ ಕೊಟ್ಟಿದ್ದೇನು? ಎಂದು ಅರ್ಥವಾಗಲು 50 ವರ್ಷಗಳಾಯಿತಲ್ಲಾ…ಎನಿಸಿತ್ತು. ಬದುಕಿದ್ದಾಗ ನಾನು ಪ್ರೀತಿಸದ ಅಪ್ಪನನ್ನು ಸತ್ತಮೇಲಾದರೂ ಪ್ರೀತಿಸುವಂತೆ ಮೀನಕ್ಕ ತನ್ನ ಒಂದೇ ಒಂದು ಪ್ರಶ್ನೆಯಲ್ಲಿ ಮಾಡಿದಳಲ್ಲಾ ಅನಿಸಿತು.

‘ಅಪ್ಪ ‘ಎಂದರೆ ಏನಾದರೂ ಕೊಡಬೇಕು…ಕೊಡಿಸಬೇಕು..ಆಗಷ್ಟೇ ಅಪ್ಪ..ಏನೂ ಕೊಡದ …ಕೊಡಿಸದ…ಪ್ರೀತಿಯ ಮಾತುಗಳನ್ನು ಹೊರಹಾಕದ ಅಪ್ಪನನ್ನು ಏಕೆ ಪ್ರೀತಿಸಬೇಕು? ಎಂಬ ನನ್ನಂತಹ ಹುಚ್ಚು ಮಕ್ಕಳ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ. ಆದರೆ ‘ಅಪ್ಪ ಏನು ಕೊಟ್ಟ’ ಎಂಬುದು ತಿಳಿಯದೇ ಅಪ್ಪನ ಬಗ್ಗೆ ಆಪಾದನೆ ಮಾಡುವ ನನ್ನಂತಹ ಮಕ್ಕಳ ಪ್ರಶ್ನೆಗೆ, ಪ್ರಶ್ನೆಯಿಂದಲೇ ಉತ್ತರ ಹೇಳಲು ಮತ್ತೆ ಅಪ್ಪನನ್ನು ಪ್ರೀತಿಸುವಂತೆ ಮಾಡುವ ‘ಮೀನಕ್ಕರಾಗಿ’ ನಾವೆಲ್ಲಾ ಬೆಳೆಯಬೇಕು.

ಅಪ್ಪ ಕೊಡಿಸಿದ್ದರೆ ಆ ಮೂಗುಬೊಟ್ಟು ಕಳೆದು ಹೋಗುತ್ತಿತ್ತು. ಅಥವಾ ಆ ಮೂಗುಬೊಟ್ಟು  ನಾನು ಬೆಳೆದಂತೆಲ್ಲಾ ತನ್ನ ಬೆಲೆಯನ್ನು ಕಳೆದುಕೊಳ್ಳಬಹುದಿತ್ತು. ಆದರೆ ಅಪ್ಪನಿಂದ ನನಗೆ ನನ್ನ ಹುಟ್ಟಿನಿಂದಲೇ ಬಂದಿದ್ದ ‘ಪಾಠ ಮಾಡುವ ಟ್ರೈನಿಂಗ್  ಕೊಡುವ ಸ್ಕಿಲ್ ‘ ಎಂದೆಂದಿಗೂ ನನ್ನಲ್ಲೇ ಉಳಿದಿದೆ. ಅದರ ಬೆಲೆ ಬೆಳೆಯುತ್ತಾ ಇದೆ. ಅದು ಕಳೆದುಹೋಗುವುದಿಲ್ಲ. ಯಾರೂ ಅದನ್ನು ಕಿತ್ತುಕೊಳ್ಳುವುದಿಲ್ಲ. ಅಪ್ಪ ನನಗೆ  ಕೊಟ್ಟಿದ್ದು ಇನ್ನೂ ಏನೇನೋ ಇದೆ. ನನಗೆ ಒಂದೊಂದಾಗಿ ತಿಳಿಯುತ್ತಿದೆ. ನಾನು ಅಪ್ಪನ ಋಣ ತೀರಿಸಲು ಏಳೇಳು ಜನ್ಮಕ್ಕೂ ಸಾಧ್ಯವಿಲ್ಲ .

ಯಾವುದನ್ನೋ ನೋಡುವ ಬದಲಿಗೆ ಮತ್ಯಾವುದನ್ನೋ ನೋಡುವ, ನೋಡಬೇಕಾದದ್ದನ್ನು ನೋಡದೇ ನಿರ್ಲಕ್ಷ್ಯ ಮಾಡುವ ನನ್ನಂತಹವರ ಮನೋಭಾವ ಬದಲಾಗಬೇಕಿದೆ.

ಎಸ್.ಸುಶೀಲ ಚಿಂತಾಮಣಿ

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *