ಕಣ್ಣುಕಾಣದ ನೋಟ/ ಇದ್ಯಾವ ನ್ಯಾಯ? – ಎಸ್. ಸುಶೀಲಾ ಚಿಂತಾಮಣಿ
ದಾಂಪತ್ಯದಲ್ಲಿ ಹೆಣ್ಣು ಬಯಸುವುದು ಪತಿಯ ನಿಷ್ಠೆಯೇ ಹೊರತು ಸಿರಿವಂತಿಕೆಯಲ್ಲ. ತನ್ನ ಬಿಟ್ಟು ಇತರ ಹೆಣ್ಣುಗಳೊಂದಿಗೆ ಸಂಬಂಧವಿರಿಸಿಕೊಂಡಿದ್ದ ಪತಿಗೆ ವಿಚ್ಛೇದನ ಕೊಡಲು ಮುಂದಾಗಿದ್ದ ಹಳ್ಳಿಗಾಡಿನ ಹೆಣ್ಣುಮಗಳೊಬ್ಬಳು ಹೇಳಿದ ಮಾತುಗಳು ಎಲ್ಲ ಹೆಣ್ಣುಮಕ್ಕಳ ಭಾವನೆಗೆ ಕನ್ನಡಿ ಹಿಡಿದಂತಿದೆ
ಸುಮಾರು ಇಪ್ಪತ್ತೈದು ವರ್ಷಗಳಿಗೂ ಹಿಂದಿನ ಕಥೆ. ನಾನು ವಕೀಲಳಾಗಿದ್ದ ಹೊಸತರಲ್ಲಿ ಜೀವನಾಂಶಕ್ಕಾಗಿ ರಾಮಕ್ಕನ (ಹೆಸರು ಬದಲಿಸಿದೆ) ಕೇಸು ಹಾಕಿದ್ದೆ. ಗಂಡನದೂ ಒಂದೇ ಮಾತು. “ಅವಳಾಗಿಯೇ ಬಿಟ್ಟು ಹೋಗಿದ್ದಾಳೆ. ಅವಳು ಬಂದರೆ ವೈಭೋಗದಿಂದ ಸಾಕುತ್ತೇನೆ” ಎನ್ನುವುದು. ‘ಗಂಡ ಚೆನ್ನಪ್ಪನಿಗೆ (ಹೆಸರು ಬದಲಿಸಿದೆ) ನನ್ನ ಮದುವೆ ಆದ ಮೇಲೆ ಇನ್ನೊಂದು ಮದುವೆಯಾಗಿದೆ. ಅವನಿಗೆ ಇನ್ನೂ ಒಬ್ಬಳು ಇದ್ದಾಳೆ. ನಾನು ಹೋಗುವುದಿಲ್ಲ’ , ಎನ್ನುವುದು ರಾಮಕ್ಕನ ವಾದ.
‘ಹೊರಗೆ ಇಬ್ಬರು ಪಕ್ಷಗಾರರೂ ಅವರ ಹಿರಿಯರೂ ಹಿತೈóಷಿಗಳೂ ಎರಡೂ ಕಡೆಯ ವಕೀಲರೂ ಕೂತು ಮಾತಾಡಿ ಏನಾದರೂ ರಾಜೀ ಸೂತ್ರಕ್ಕೆ ಬರಬಹುದೇನೋ ನೋಡಿ’ ಎಂದು ನ್ಯಾಯಾಧೀಶರು ಹೇಳಿದ್ದರು.
ಎಲ್ಲರೂ ಕೂತಾಯಿತು. ಗಂಟೆಗಟ್ಟಲೆ ಮಾತಾಡಿದ್ದಾಯಿತು, ಊರಿನ ಹಿರಿಯರೆಲ್ಲ ಒಮ್ಮತವಾಗಿ ರಾಮಕ್ಕನಿಗೆ ಹೇಳಿದರು. “ ಚೆನ್ನಪ್ಪ ಸಾಹುಕಾರ. ಇನ್ನೂ ಹತ್ತು ಜನರನ್ನು ಸಾಕುವ ತಾಕತ್ತು ಇದೆ. ನೀನು ಹೋಗು . ನಿನ್ನನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾನೆ.” ರಾಮಕ್ಕ ಕೊನೆಗೂ ಗಂಡನ ಜೊತೆ ಹೋಗಲು ಒಪ್ಪಿದಳು. ಅವಳು ಒಂದೇ ಒಂದು ಸಣ್ಣ ಕಂಡೀಷನ್ ಹಾಕಿದಳು. “ ನನ್ನ ಗಂಡ ಚೆನ್ನಪ್ಪ ಯಾವಾಗೆಲ್ಲ ಆ ಎರಡನೇ ಹೆಂಡತಿಯ ಹತ್ತಿರ ಅಥವಾ ಇನ್ಯಾರೋ ಹೆಣ್ಣಿನ ಹತ್ತಿರ ಮಲಗುತ್ತಾನೋ ಆಗೆಲ್ಲ ನಾನೂ ಬೇರೆ ಗಂಡಸಿನ ಜೊತೆ ಮಲಗಲು ತಕರಾರು ಮಾಡಬಾರದು”. ಎಲ್ಲರ ಬಾಯಿಗೂ ಬೀಗ ಬಿತ್ತು. ಎಲ್ಲರೂ ಮಾತಾಡದೇ ಜಾಗ ಖಾಲಿ ಮಾಡಿದರು.
ಗಂಡಸು ಎರಡು ಮೂರು ಹೆಂಡತಿಯರನ್ನು ಪಡೆಯುವುದು, ಹೆಂಡತಿಯಲ್ಲದೇ ಇರುವವರ ಜೊತೆಗೂ ಸಂಬಂಧ ಇಟ್ಟುಕೊಳ್ಳುವುದು ಇವೆಲ್ಲಕ್ಕೂ ಒಂದು ತೂಕ ಒಂದು ಅಳತೆ. ಇದೇ ಹೆಣ್ಣಿನ ವಿಷಯಕ್ಕೆ ಬಂದಾಗ? ಯಾರಿಗೂ ಊಹಿಸಲೂ ಆಗುವುದಿಲ್ಲ. ಒಪ್ಪಿಕೊಳ್ಳುವ ವಿಷಯ ಬೇರೆ ಬಿಡಿ. ರಾಮಕ್ಕನ ಪ್ರಶ್ನೆ ಎಷ್ಟು ಮೂಲಭೂತವಾದ ಪ್ರಶ್ನೆ? ಎತ್ತಿಗೊಂದು ಕಾನೂನು, ಸಿಂಹಕ್ಕೊಂದು ಕಾನೂನು ಎನ್ನುವುದು ದಬ್ಬಾಳಿಕೆಯ ಮತ್ತೊಂದು ಹೆಸರು ಎನ್ನುವದನ್ನು ಎಲ್ಲೋ ಓದಿದ್ದು ನೆನಪಾಯಿತು.
ಮಲ್ಲನೆ ರಾಮಕ್ಕನನ್ನು ಕೇಳಿದೆ. “ಒಂದು ವೇಳೆ ನಿನ್ನ ಗಂಡ ನಿನ್ನ ಷರತ್ತಿಗೆ ಒಪ್ಪಿದರೆ ನೀನು ಅವನ ಜೊತೆಗೆ ಹೋಗ್ತೀಯಾ?” ಆ ದಿನ ರಾಮಕ್ಕ ಹೇಳಿದ್ದು ಈವತ್ತಿಗೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ. “ ಇಲ್ಲ ಮೇಡಂ. ಖಂಡಿತಾ ಹೋಗಲ್ಲ. ಆದರೆ ಅವನೇನಾದರೂ, ನಾನು ಎಲ್ಲ ಕೆಟ್ಟ ವ್ಯವಹಾರ ಬಿಟ್ಟು ಬಿಡ್ತೀನಿ, ನೀನೂ ಕೆಟ್ಟ ದಾರಿ ಹಿಡೀಬೇಡ. ಒಂದಾಗಿರೋಣ ಅಂದ್ರೆ ಒಪ್ಕೊಂತೀನಿ.”. ರಾಮಕ್ಕನಿಗೆ ಅವಳ ದಾಂಪತ್ಯದಲ್ಲಿ ಬೇಕಿದ್ದದ್ದು ಪತಿ ನಿಷ್ಠೆ.
ಗಂಡ ಎರಡು ಮೂರು ವಿವಾಹೇತರ ಸಂಬಂಧ ಮಾಡಿಕೊಂಡಿದ್ದಾನೆ ಅಂತ ಹೆಂಡತಿಯೂ ತಾನೂ ಹಾಗೇ ಮಾಡಹೊರಡುವುದರಲ್ಲಿ ತಪ್ಪೇನೂ ಇಲ್ಲ ಎಂದು ಯಾರೂ ಹೇಳಲಾಗುವುದಿಲ್ಲ. ನಾನೂ ತಪ್ಪು ಮಾಡುತ್ತೇನೆ. ನೀನೂ ತಪ್ಪು ಮಾಡು ಎಂದು ಹೇಳಿದ ಮಾತ್ರಕ್ಕೆ ಅವರಿಬ್ಬರ ಪರಸ್ಪರ ಒಪ್ಪಿಗೆಯ ತಪ್ಪು ಕೆಲಸ, ಅವರಿಬ್ಬರೂ ಬೇರೆಯವರ ಜೊತೆ ಹೊಂದುವ ಅನೈತಿಕ ವ್ಯವಹಾರ ಸರಿಯೂ ನೈತಿಕವೂ ಆಗುವುದಿಲ್ಲ. ಗಂಡನಿಂದ ದೂರ ಉಳಿದು ಗಂಡನ ವಿರುದ್ಧ ಕೇಸು ನಡೆಸುವ ರಾಮಕ್ಕನಂತಹ ಹಲವಾರು ಮಹಿಳೆಯರು ವರ್ಷಾನುಗಟ್ಟಲೆ ಕೋರ್ಟುಗಳಿಗೆ ಅಲೆಯುವುದು ಎಲ್ಲರ ಕಣ್ಣಿಗೂ ಕಾಣುತ್ತದೆ. ಆದರೆ ನೈತಿಕತೆಯ ನೆಲೆಯ ಮೇಲೆ ದಾಂಪತ್ಯವಿರಬೇಕು ಎನ್ನುವ ಹಠದಿಂದ ಅವರು ಹೋರಾಡುತ್ತಿದ್ದಾರೆ ಎನ್ನುವುದು ಎಷ್ಟು ಜನರ ಕಣ್ಣಿಗೆ ಕಂಡೀತು?

ಎಸ್. ಸುಶೀಲಾ ಚಿಂತಾಮಣಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.